ಆಫೀಸಿನ ಸಹೋದ್ಯೋಗಿಗಳೊಂದಿಗೆ ನಿಕಟತೆ ಬೆಳೆಸಿಕೊಳ್ಳಿ. ಆದರೆ ಅವರೊಂದಿಗೆ ನಿಮ್ಮ ಖಾಸಗಿ ವಿಷಯಗಳನ್ನು ಎಷ್ಟರಮಟ್ಟಿಗೆ ಶೇರ್ ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿವೆ ಒಂದಿಷ್ಟು ಸಲಹೆಗಳು……!
ಶಾಲಿನಿ 2 ತಿಂಗಳ ಹಿಂದಷ್ಟೇ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿಕೊಂಡಿದ್ದಳು. ಅದು ಅವಳ ಮೊದಲ ಉದ್ಯೋಗ. ಹೀಗಾಗಿ ಅವಳಿಗೆ ತನ್ನ ಸಹೋದ್ಯೋಗಿಗಳೊಂದಿಗೆ ಎಷ್ಟರಮಟ್ಟಿಗೆ ಸಂಬಂಧ ಕಾಯ್ದುಕೊಂಡು ಹೋಗಬೇಕು, ಏನು ಮಾತನಾಡಬೇಕು ಎಂಬುದು ಗೊತ್ತಿರಲಿಲ್ಲ. ಅವಳು ಸಹೋದ್ಯೋಗಿಗಳೊಂದಿಗೆ ತನ್ನ ಬಗೆಗಿನ ಪ್ರತಿಯೊಂದು ವಿಷಯಗಳನ್ನು ಹೇಳಿಕೊಂಡು ತನ್ನ ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದಳು. ತನ್ನ ಸಂಬಳದ ಪೂರ್ತಿ ಭಾಗವನ್ನು ಅತ್ತೆಯೇ ತೆಗೆದುಕೊಳ್ಳುತ್ತಾರೆ, ಅತ್ತೆ ಹೇಳಿದ ಹಾಗೆಯೇ ಗಂಡ ಕೇಳುತ್ತಾನೆ. ಈ ಎಲ್ಲ ವಿಷಯಗಳು ಬಹುಬೇಗನೇ ಎಲ್ಲರ ಕಿವಿ ತಲುಪಿದವು. ಈಗ ಅವಳು ಇಷ್ಟಪಟ್ಟೂ ಕೂಡ ತನ್ನ ಯಾವುದೇ ಮಾತುಗಳನ್ನು ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳಲು ಆಗುತ್ತಿಲ್ಲ.
ಇನ್ನೊಂದಡೆ ನೀಲಾ ಮದುವೆಯ ಬಳಿಕ ಬಹಳ ಮೌನವಾಗಿ ಇರುತ್ತಿದ್ದಳು. ಅವಳು ತನ್ನ ಮನಸ್ಸಿನಲ್ಲಿ ನಡೆಯುತ್ತಿದ್ದ ಗೊಂದಲಗಳ ಬಗ್ಗೆ ಆತ್ಮೀಯ ಸಹೋದ್ಯೋಗಿ ನಿಹಾರಿಕಾಳ ಮುಂದೆ ತನ್ನೆಲ್ಲ ವಿಷಯಗಳನ್ನು ಹೇಳಿಕೊಂಡಳು. ತನ್ನ ಗಂಡ ಸೆಕ್ಸ್ ಬಗ್ಗೆ ಯಾವುದೇ ಆಸಕ್ತಿ ತೋರಿಸುವುದಿಲ್ಲ ಎನ್ನುವುದು ಅವಳ ಮನದಾಳದ ಮಾತಾಗಿತ್ತು. ಆದರೆ ಈಗ ಪರಿಸ್ಥಿತಿ ಏನಾಗಿಬಿಟ್ಟಿದೆ ಎಂದರೆ, ಅವಳ ರಹಸ್ಯ ಮಾತು, ಗೌಪ್ಯವಾಗಿ ಉಳಿಯದೆ ಪುರುಷ ಸಹೋದ್ಯೋಗಿಗಳ ಕಿವಿಯವರೆಗೂ ತಲುಪಿಬಿಟ್ಟಿದೆ. ಕೆಲವರಂತೂ ಅವಳ ಮುಂದೆ ತಮ್ಮ ಪ್ರಸ್ತಾಪ ಇಡತೊಡಗಿದರು. ಗೆಳತಿಯ ಮೇಲೆ ವಿಶ್ವಾಸವಿಟ್ಟು ತನ್ನ ಮನದಾಳದ ಮಾತು ಹೇಳಿದ್ದಕ್ಕೆ ಈಗ ಅವಳು ಪರಿತಪಿಸುವಂತಾಗಿದೆ.
ನಿಖಿತಾ ಆಫೀಸ್ ಕೆಲಸ ಮುಗಿದ ಬಳಿಕ ಹೆಚ್ಚಿನ ಕೆಲಸಕ್ಕಾಗಿ ಆಫೀಸಿನಲ್ಲಿಯೇ ಉಳಿಯುತ್ತಿದ್ದಳು. ಈ ಕಾರಣಕ್ಕಾಗಿ ಮನೆಯಲ್ಲಿ ಜಗಳ ಆಗುತ್ತಿತ್ತು. ಈ ವಿಷಯವನ್ನು ಅವಳು ತನ್ನ ಸಹೋದ್ಯೋಗಿಗಳ ಮುಂದೆ ಹೇಳಿದಳು. ಈಗ ಪರಿಸ್ಥಿತಿ ಏನಾಗಿಬಿಟ್ಟಿದೆಯೆಂದರೆ, ರಜೆಯ ದಿನಗಳಲ್ಲಿ ಆಫೀಸಿನ ಕೆಲಸದ ಪ್ರಯುಕ್ತ ಹೊರಗೆ ಹೋಗಬೇಕಾದ ಪ್ರಸಂಗ ಬಂದರೆ, ಆಗ ನಿಖಿತಾಳ ಹೆಸರೇ ಪ್ರಸ್ತಾಪವಾಗುತ್ತದೆ. ಅನಳಿಗೆ ಮನೆಯಲ್ಲಿ ಕೆಲಸವಾದರೂ ಏನಿರುತ್ತದೆ? ಅವಳಿಗೆ ಆ ಕೆಲಸ ಮಾಡಲು ಹೇಳಿ ಎನ್ನುವುದು ಎಲ್ಲರ ಸಲಹೆಯಾಗಿರುತ್ತದೆ. ಆ ಕಾರಣದಿಂದಾದರೂ ಅವಳು ಟೆನ್ಷನ್ ನಿಂದ ದೂರ ಇರಲು ಅನುಕೂಲವಾಗುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿರುತ್ತದೆ.
ನಿಖಿತಾಳಿಗೆ ತಾನು ಮನುಷ್ಯಳಲ್ಲ, ಕೆಲಸ ಮಾಡುವ ಯಂತ್ರ ಎಂಬಂತೆ ಭಾಸವಾಗುತ್ತದೆ. ಆದರೆ ಅವಳ ಈ ಸ್ಥಿತಿಗೆ ಸ್ವತಃ ಅವಳೇ ಜವಾಬ್ದಾರಳು.ಇನ್ನೊಂದೆಡೆ ನಿರ್ಮಾಲ ದುರ್ಬಲ ಕ್ಷಣಗಳಲ್ಲಿ ತನ್ನ ಬಾಸ್ ಮುಂದೆ ತನಗೆ ಈ ನೌಕರಿ ಎಷ್ಟು ಮಹತ್ವದ್ದು ಎನ್ನುವುದನ್ನು ಬಾಯಿಬಿಟ್ಟಳು. ಗಂಡನ ಜೊತೆಗಿನ ತನ್ನ ಸಂಬಂಧ ಕಳಚಿ ಹೋಗಲಿದೆ ಎನ್ನುವುದು ಅವಳ ಹೇಳಿಕೆಯಾಗಿತ್ತು. ಬಾಸ್ ಅವಳಿಗೆ ಭಾವನಾತ್ಮಕವಾಗಿ ಸಪೋರ್ಟ್ ಮಾಡುವ ಬದಲು, ಅವಳನ್ನು ಪ್ರತಿಯೊಂದು ರೀತಿಯಲ್ಲಿ ಶೋಷಣೆ ಮಾಡಲು ಶುರು ಮಾಡಿದ. ತಾನ್ಯಾಕೆ ತನ್ನ ವಿಷಯವನ್ನು ಬಾಸ್ ಗೆ ಹೇಳಿದೆ ಎಂದು ಆಕೆ ಈಗ ಪಶ್ಚಾತ್ತಾಪಪಡುತ್ತಿದ್ದಾಳೆ.
ಏನು ಹೇಳಬೇಕು ಏನು ಹೇಳಬಾರದು…?
ಆಫೀಸಿನಲ್ಲಿ ನೀವು ಸಹೋದ್ಯೋಗಿಗಳ ಜೊತೆಗೆ ಎಷ್ಟು ನಿಕಟವಾಗಿರಬೇಕು, ಎಷ್ಟು ದೂರ ಇರಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳಿ.
ಒಂದು ಸಂಗತಿ ನೆನಪಿನಲ್ಲಿಟ್ಟುಕೊಳ್ಳಿ. ಮನೆಯ ಸಂಬಂಧಕ್ಕೂ ಆಫೀಸಿನ ಸಂಬಂಧಕ್ಕೂ ಬಹಳ ವ್ಯತ್ಯಾಸವಿದೆ. ಆಫೀಸಿನಲ್ಲಿ ಸದಾ ಔಪಚಾರಿಕ ದೂರ ಕಾಯ್ದುಕೊಂಡು ಹೋಗಿ. ಸ್ನೇಹದ ವಾತಾವರಣ ಇರಲಿ, ಆದರೆ ಅದರ ಮೇರೆ ಮೀರದಂತೆ ನೋಡಿಕೊಳ್ಳಿ. ಆಫೀಸಿನ ಸಹೋದ್ಯೋಗಿಗಳು ಆಫೀಸಿನ ಕೆಲಸದಲ್ಲಷ್ಟೇ ಸಹಕಾರ ಕೊಡುತ್ತಾರೆ. ನಿಮ್ಮ ಖಾಸಗಿ ವಿಷಯಗಳ ಬಗ್ಗೆ ಅವರಿಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ.
ಆಫೀಸು ನಮಗೆ ಎರಡನೇ ಮನೆಯ ರೀತಿಯಲ್ಲಿ ಇರುತ್ತದೆ, ಆದರೆ ಮನೆಯಲ್ಲ! ನೀವು ಬಹಳ ಕಠಿಣ ಪರಿಸ್ಥಿತಿಯಲ್ಲಿ ಸಾಗುತ್ತಿರಬಹುದು. ಆದರೆ ಅಪ್ಪಿತಪ್ಪಿಯೂ ಕೂಡ ಸಹೋದ್ಯೋಗಿಗಳಿಂದ ಭಾವನಾತ್ಮಕ ಆಸರೆ ಹುಡುಕಬೇಡಿ. ಕೆಲವರು ಇದರ ದುರುಪಯೋಗ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ.
ನಿಮಗಿನ್ನೂ ಮದುವೆಯಾಗಿಲ್ಲ, ಆದರೆ ನೀವು ರಿಲೇಶನ್ ಶಿಪ್ ನಲ್ಲಿ ಇದ್ದರೆ ಅದನ್ನು ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳುವ ಅಗತ್ಯವಿಲ್ಲ. ಬಹಳಷ್ಟು ಹುಡುಗಿಯರು ತಾವೆಷ್ಟು ಆಧುನಿಕರು ಎಂದು ತೋರಿಸಿಕೊಳ್ಳಲು ತಮ್ಮ ಗೌಪ್ಯ ಮಾತುಗಳನ್ನೆಲ್ಲ ಬಹಿರಂಗಗೊಳಿಸಿಬಿಡುತ್ತಾರೆ. ವಿವಾಹಿತ ಸಹೋದ್ಯೋಗಿಗಳು ಕೂಡ ಇಂಥವರ ಸುತ್ತ ಗಿರಕಿ ಹೊಡೆಯುತ್ತಾರೆ.
ನಿಮ್ಮ ಸಹೋದ್ಯೋಗಿ ಎಷ್ಟೇ ವಿಶ್ವಾಸಾರ್ಹವಾಗಿದ್ದರೂ, ನಿಮ್ಮ ಅಥವಾ ಕುಟುಂಬದ ಯಾವುದೇ ರಹಸ್ಯ ಸಂಗತಿಗಳನ್ನು ಅವರ ಮುಂದೆ ಹೇಳಿಕೊಳ್ಳಬೇಡಿ. ಆಫೀಸಿನ ವಿಷಯಗಳ ಬಗೆಗಷ್ಟೇ ಅವರ ಮುಂದೆ ಚರ್ಚಿಸಿ.
ನೀವು ವೈವಾಹಿಕ ಜೀವನದ ಕಠಿಣ ಪರಿಸ್ಥಿತಿಯಲ್ಲಿ ಸಾಗುತ್ತಿದ್ದರೆ, ಗಂಡನ ಜೊತೆಗಿನ ಸಂಬಂಧ ಕಳಚಿ ಹೋಗುವ ಸ್ಥಿತಿಯಲ್ಲಿದ್ದರೆ, ಅದರ ಬಗ್ಗೆ ಸಹೋದ್ಯೋಗಿಗಳ ಮುಂದೆ ಹೇಳಿಕೊಳ್ಳದೆ, ನೀವು ಯಾರಾದರೂ ಮ್ಯಾರೇಜ್ ಕೌನ್ಸೆಲರ್ ಸಹಾಯ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಸಹೋದ್ಯೋಗಿಗಳಾರೂ ಈ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ನೀವು ಆಫೀಸಿನಲ್ಲಿ ನಿಮ್ಮ ಕೆಲಸದ ಗುಣಮಟ್ಟದ ಬಗ್ಗೆ ಗಮನಕೊಡಿ. ಆಗ ನಿಮ್ಮ ಬಗ್ಗೆ ಇತರರ ಗೌರವ ಹೆಚ್ಚುತ್ತದೆ.
ನೀವು ಪ್ರತಿಯೊಂದು ಕೌಟುಂಬಿಕ ವಿಷಯವನ್ನು ಸಹೋದ್ಯೋಗಿಗಳ ಮುಂದೆ ಹೇಳುತ್ತಾ ಹೋದರೆ, ಅವರು ನಿಮ್ಮ ವಿಷಯವನ್ನು ಅವಕಾಶ ಸಿಕ್ಕಾಗ ಬಾಸ್ ಮುಂದೆ ಉಪ್ಪು ಖಾರ ಬೆರೆಸಿ ಹೇಳಬಹುದು. ಇದರಿಂದ ಆಫೀಸಿನಲ್ಲಿ ನಿಮ್ಮ ವರ್ಚಸ್ಸು ಮಣ್ಣು ಪಾಲಾಗುತ್ತದೆ. ಅಷ್ಟೇ ಅಲ್ಲ, ಅವರು ನಿಮ್ಮಿಂದ ರ್ದುಲಾಭ ಪಡೆಯುವ ಸಾಧ್ಯತೆ ಇರುತ್ತದೆ.
ಮನೆಯಲ್ಲಿ ಏನೇ ಸಂಗತಿಗಳು ಘಟಿಸುತ್ತಿದ್ದರೂ ಅದರ ಬಗ್ಗೆ ಆಫೀಸಿನಲ್ಲಿ ಯಾರ ಮುಂದೆಯೂ ಪ್ರಸ್ತಾಪಿಸಲು ಹೋಗಬೇಡಿ. ನೀವು ಹೇಳಿಕೊಂಡ ಮಾತುಗಳು ಯಾವ ರೀತಿ ತಿರುವು ಪಡೆದುಕೊಳ್ಳಬಹುದು ಎಂದು ಹೇಳಲಿಕ್ಕಾಗದು. ಇವಳು ಇರೋದೇ ಹಾಗೆ ಎಂದು ಎಲ್ಲರೂ ನಿಮ್ಮ ಬಗ್ಗೆ ಹಗುರವಾಗಿ ಮಾತನಾಡಿಕೊಳ್ಳಬಹುದು. ಆಗ ನೀವು ಅತ್ತ ಮನೆಯಲ್ಲಿ ಇರಲಾಗದ, ಇತ್ತ ಆಫೀಸಿನಲ್ಲಿ ಇರಲಾಗದ ಸ್ಥಿತಿ ಅನುಭವಿಸಬೇಕಾಗಿ ಬರುತ್ತದೆ.
ಪ್ರತಿಯೊಬ್ಬ ವ್ಯಕ್ತಿ ತನ್ನ ಆರ್ಥಿಕ ಅವಶ್ಯಕತೆಗಳಿಗಾಗಿ ನೌಕರಿ ಮಾಡಬೇಕಾಗಿ ಬರುತ್ತದೆ. ಎಲ್ಲರ ಹೆಗಲಿನ ಮೇಲೂ ಹೋಮ್ ಲೋನ್, ಮಕ್ಕಳ ಶಿಕ್ಷಣ, ಮೆಡಿಕಲ್ ವಿಮೆ ಹಾಗೂ ಇನ್ನೇನೊ ಜವಾಬ್ದಾರಿಗಳು ಇರುತ್ತವೆ. ಅದರ ಬಗ್ಗೆ ಆಫೀಸಿನಲ್ಲಿ ಅಪ್ಪಿತಪ್ಪಿಯೂ ಪ್ರಸ್ತಾಪಿಸಲು ಹೋಗಬೇಡಿ. ಇದರ ಬಗ್ಗೆ ಗೊತ್ತಾದರೆ ನಿಮ್ಮ ಸಹೋದ್ಯೋಗಿ ಹಾಗೂ ಬಾಸ್ ಇದನ್ನರಿತು ನಿಮ್ಮ ರ್ದುರ್ಲಾಭ ಪಡೆಯುವ ಬಗ್ಗೆ ಯೋಚಿಸಬಹುದು.
ನೀವು ವಿವಾಹಿತರಾಗಿದ್ದು, ಬೇರೆಯವರ ಜೊತೆಗೂ ಆತ್ಮೀಯತೆ ಬೆಳೆದಿದ್ದರೆ ಅದರ ಬಗ್ಗೆ ಅಪ್ಪಿತಪ್ಪಿಯೂ ಕೂಡ ಯಾರ ಮುಂದೆಯೂ ಹೇಳಲು ಹೋಗಬೇಡಿ.
ಮನೆಯಲ್ಲಿ ಅತ್ತೆ, ಮಾವ ಹಾಗೂ ಇತರ ಯಾರ ವಿರುದ್ಧವಾದರೂ ಕಾನೂನು ವಿವಾದ ನಡೆಯುತ್ತಿದ್ದರೆ ಅಥವಾ ಮಾನಹಾನಿ ಮೊಕದ್ದಮೆ ನಡೆಯುತ್ತಿದ್ದರೆ ಅದರ ಬಗ್ಗೆ ಸಹೋದ್ಯೋಗಿಗಳ ಮುಂದೆ ಹೇಳಬೇಡಿ.
ಇಷ್ಟೆಲ್ಲ ಹೇಳುವುದರ ತಾತ್ಪರ್ಯ ಇಷ್ಟೇ, ಆಫೀಸಿನಲ್ಲಿ ಸಂಬಂಧಗಳು ಅತ್ಯಂತ ನಾಜೂಕಾಗಿರುತ್ತವೆ. ಹಾಗಾಗಿ ಬಹಳ ಸೂಕ್ಷ್ಮವಾಗಿ ಆ ಸಂಬಂಧಗಳನ್ನು ನಿಭಾಯಿಸಿ. ಸಮತೋಲಿತ ಹಾಗೂ ಯೋಜಿತ ರೀತಿಯಲ್ಲಿ ಮನೆ ಹಾಗೂ ಆಫೀಸಿನಲ್ಲಿ ಸಾಕಷ್ಟು ಅಂತರ ಕಾಪಾಡಿಕೊಳ್ಳಿ. ಸುಖಿ ಸಂಸಾರಕ್ಕೆ ಇದು ಅತ್ಯವಶ್ಯ.
ನಿಮ್ಮ ಅಸ್ತಿತ್ವನ್ನು ನೀವೇ ಸ್ವತಃ ರೂಪಿಸಿಕೊಳ್ಳಬೇಕು. ಸಾಗುವ ದಾರಿಯಲ್ಲಿನ ಅಡೆತಡೆಗಳನ್ನು ನೀವೇ ನಿಭಾಯಿಸಬೇಕು.
– ಶಶಿಕಲಾ