ಕರ್ನಾಟಕದ ಕರಾವಳಿ ಮಂಗಳೂರಿಗೆ ಸರ್ಫಿಂಗ್ ಮರಳಿದೆ. ಆರನೇ ಆವೃತ್ತಿಯ NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಶುಕ್ರವಾರದಿಂದ ತಣ್ಣೀರುಬಾವಿ ಇಕೋ ಬೀಚ್‌ನಲ್ಲಿ ಆರಂಭವಾಗಲಿದೆ.
2025ರ ಮೇ 30 ರಿಂದ ಜೂನ್ 1 ರವರೆಗೆ ಸರ್ಫಿಂಗ್ ನಡೆಯಲಿದೆ. ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿರುವ ಮತ್ತು ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ (SFI) ಆಶ್ರಯದಲ್ಲಿ ಮಂತ್ರ ಸರ್ಫ್ ಕ್ಲಬ್ ಆಯೋಜಿಸಿರುವ ಈ ವರ್ಷದ ಆವೃತ್ತಿಯು ರಾಷ್ಟ್ರೀಯ ಚಾಂಪಿಯನ್‌ಶಿಪ್ ಸರಣಿಯಲ್ಲಿ ಪ್ರಮುಖ ಹಂತವಾಗಿ ಕಾರ್ಯನಿರ್ವಹಿಸಲಿದೆ.ಪುರುಷರ ಓಪನ್, ಮಹಿಳಾ ಓಪನ್, ಗ್ರೋಮ್ಸ್ (U-16) ಬಾಲಕರು ಮತ್ತು ಗ್ರೋಮ್ಸ್ (U-16) ಬಾಲಕಿಯರು ಎಂಬ ನಾಲ್ಕು ವಿಭಾಗಗಳಲ್ಲಿ 50ಕ್ಕೂ ಹೆಚ್ಚು ಸರ್ಫರ್‌ಗಳು ಪಾಲ್ಗೊಳ್ಳಲಿದ್ದಾರೆ. ಈ ಹಂತದ ಪ್ರಮುಖ ಆಕರ್ಷಣೆ ಎಂದರೆ ರಾಷ್ಟ್ರೀಯ ಚಾಂಪಿಯನ್ ಗಳಾದ ರಮೇಶ್ ಬುದಿಹಾಳ್ ಮತ್ತು ಕಿಶೋರ್ ಕುಮಾರ್ ಪುನಃ ಸ್ಪರ್ಧೆಗೆ ಮರಳುತ್ತಿದ್ದಾರೆ. ಜೊತೆಗೆ 2024ರ ಏಷಿಯನ್ ಸರ್ಕ್ಯೂಟ್‌ನಲ್ಲಿ ಗಮನ ಸೆಳೆದ ಹರೀಶ್ ಮುತ್ತು ಕಮಲಿ ಪಿ, ಅಜೀಷ್ ಅಲಿ, ಶ್ರೀಕಾಂತ್ ಡಿ ಮತ್ತು ಸಂಜಯ್ ಸೆಲ್ವಮಣಿ ಕೂಡ ಸರ್ಫಿಂಗ್ ನಲ್ಲಿ ಇರಲಿದ್ದಾರೆ.
ಈ ವರ್ಷದ ಸ್ಪರ್ಧೆಯ ಮತ್ತೊಂದು ವೈಶಿಷ್ಟ್ಯವೆಂದರೆ 10 ರಿಂದ 12 ಅಡಿ ಎತ್ತರದ ಅಲೆಗಳ ಮುನ್ಸೂಚನೆಯಿದ್ದು, ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತ ಚಟುವಟಿಕೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯ ವೇಳಾಪಟ್ಟಿಗೆ ಅಡಚಣೆಯಾಗುವ ಸಾಧ್ಯತೆಯೂ ಇದೆ.
ಸಸಿಹಿತ್ಲು ಬೀಚ್‌ನಲ್ಲಿ ನಡೆಯಬೇಕಿದ್ದ ಈ ಸ್ಪರ್ಧೆ ಈಗ ಹವಾಮಾನ ಮತ್ತು ಅಲೆಗಳ ಕಾರಣದಿಂದಾಗಿ ತಣ್ಣೀರುಬಾವಿ ಏಕೋ ಬೀಚ್‌ಗೆ ಸ್ಥಳಾಂತರಗೊಳಿಸಲಾಗಿದೆ.
ಈ ವರ್ಷವು ಸರ್ಫಿಂಗ್ ಗೆ ಪಾಲುದಾರರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಎರಡನೇ ವರ್ಷದ ಟೈಟಲ್ ಸ್ಪಾನ್ಸರ್ ಆಗಿದ್ದು, ಕರ್ನಾಟಕ ಟೂರಿಸಂ ಆರನೇ ಬಾರಿಯೂ ಕೂಡ ಚಾಂಪಿಯನ್‌ಷಿಪ್‌ಗೆ ಬೆಂಬಲ ನೀಡುತ್ತಿದೆ. ಸೈಕಲ್ ಪ್ಯೂರ್ ಅಗರಬತ್ತಿ ಕೂಡ ಸ್ಪರ್ಧೆಗೆ ತನ್ನ ಬೆಂಬಲ ಸೂಚಿಸಿದೆ.
ಈ ಬಗ್ಗೆ ಮಾತನಾಡಿದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಉಪಾಧ್ಯಕ್ಷ ರಾಮಮೋಹನ್ ಪರಂಜಪೆ "ಮಂಗಳೂರಿನ ಕರಾವಳಿಯಲ್ಲಿ ಆರನೇ ಆವೃತ್ತಿಯ ಎನ್‌ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಅನ್ನು ನಡೆಸಲು ನಾವು ಉತ್ಸುಕರಾಗಿದ್ದೇವೆ. ಈ ಸ್ಪರ್ಧೆಗೆ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ, ಕರ್ನಾಟಕ ಟೂರಿಸಂ ಮತ್ತು ಸೈಕಲ್ ಪ್ಯೂರ್ ಅಗರ್ಬತ್ತೀಸ್ ಅವರ ಅವಿರತ ಬೆಂಬಲ ಸಂತಸ ನೀಡಿದೆ ಎಂದರು.