ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆ ಕುರಿತಾಗಿ ಡಾಕ್ಟರೇಟ್ಪದವಿ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿಯವರ ಸಾಧನೆಗಳ ಬಗ್ಗೆ ತಿಳಿಯೋಣವೇ……?

ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು. ಬಹುಭಾಷಾ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿಯರಿಗೆ ಚಲನಚಿತ್ರ ಸಂಗೀತದ ವಿಷಯದಲ್ಲಿ ಪಿ.ಎಚ್‌.ಡಿ ಡಾಕ್ಟರೇಟ್‌ ಪದವಿಯನ್ನು ಕರ್ನಾಟಕದ ರಾಜ್ಯಪಾಲರಾದ ಥಾರ್‌ ಚಂದ್‌ ಗೆಹ್ಲೋಟ್‌, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್‌. ಅಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್‌ ಕುಮಾರ್‌ ಪ್ರದಾನ ಮಾಡಿದರು.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿ ಹಲವಾರು ಭಕ್ತಿಗೀತೆಗಳು, ಪ್ರೈವೇಟ್ ಆಲ್ಬಂಗಳಿಗೂ ಸಹ ತಮ್ಮ ಧ್ವನಿಗೂಡಿಸಿದ್ದಾರೆ. ಪಿ.ಎಚ್‌.ಡಿ ಡಾಕ್ಟರೇಟ್‌ ಪದವಿ ಪಡೆದ ನಂತರ ಪತ್ರಿಕಾ ಸಂದರ್ಶನಕ್ಕೆ ಮಾತನಾಡುತ್ತಾ ಹಲವಾರು ವಿಷಯ ಹಂಚಿಕೊಂಡರು.

ನಿಮ್ಮ ಸಿನಿಮಾ ಪಯಣ ಹಾಗೂ ಗಾಯಕಿಯಾಗಿ ಮೊದಲ ಚಿತ್ರ?

ಸಿಂಗಾಪುರ್‌ ನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ ಸಂದರ್ಭದಲ್ಲಿ ಭಾರದ್ವಾಜ್‌ ಸಂಗೀತ ನಿರ್ದೇಶನದ `ಕಾದಲ್ ಡಾಟ್‌ ಕಾಮ್’ ಎಂಬ ತಮಿಳು ಚಲನಚಿತ್ರದಲ್ಲಿ ಗಾಯಕ ಹರಿಹರನ್‌ ಜೊತೆ ಯುಗಳಗೀತೆ ಹಾಡುವ ಮೂಲಕ ನಾನು ಚಲನ ಚಿತ್ರರಂಗವನ್ನು ಪ್ರವೇಶಿಸಿದೆ. ನಂತರ ಹಲವಾರು ಸಂಗೀತ ದಿಗ್ಗಜರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಚೆಲುವಿನ ಚಿತ್ತಾರ, ಜ್ಯೂಲಿ, ನನ್ನೆದೆಯ ಹಾಡು, ಕುಸ್ತಿ, ನಂದಿ, ಸಿಂಹಬಲುಡು, ಮಾಣಿಕ್ಯಮ್ 420, ಗಿರಿ, ಮುತ್ತಿನ ಮಳೆಯಲಿ, ನಿರುದ್ಯೋಗಿ, ಪ್ರೀತಿಯಿಂದ ರಮೇಶ್‌, ಶ್ರೀ ನಾಗಶಕ್ತಿ, ನಾನ್‌ ದಾನ್‌ ಬಾಲ, ಜಯಹೇ, ಸೀನಾ, ನೇರ್ಮುಗಂ, ಉಪೇಂದ್ರ ಅಭಿನಯದ `ನ್ಯೂಸ್’ ಚಿತ್ರ, ಬಾಲಿವುಡ್‌ ನಲ್ಲಿ ಅಕ್ಷಯ್‌ ಕುಮಾರ್‌ ನಟಿಸಿರುವ `ಗರಂ ಮಸಾಲ’ ಯಶ್‌ ಅಭಿನಯದ `ರಾಕಿ’ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆ ಯುಗಳಗೀತೆ ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ನನ್ನ ಮೊದಲ ಚಿತ್ರ ರಾಜೇಶ್‌ ರಾಮನಾಥ್‌ ಸಂಗೀತ ನಿರ್ದೇಶನದ `ಅಜ್ಜು.’

ಸಂಗೀತದಲ್ಲಿ ನಿಮ್ಮ ಕಲಿಕೆ?

ನಾಲ್ಕನೇ ವಯಸ್ಸಿಗೆ ನಾನು ಗುರು ಶಾರದಾ ಸ್ವಾಮಿನಾಥನ್‌ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದೆ, 9ನೇ ವಯಸ್ಸಿಗೆ ನನ್ನ ಮೊದಲ ಸಂಗೀತ ಕಚೇರಿ ನೀಡಿದೆ. ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್‌ ಚರಣ್‌ ರ ಬಳಿ ಕಲಿತೆ, ಮದ್ರಾಸ್‌ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದೆ, ಪಾಶ್ಚಾತ್ಯ ಸಂಗೀತವನ್ನು ಲಂಡನ್‌ ನ ದಿ ರಾಯಲ್ ಸ್ಕೂಲ್ ‌ಆಫ್‌ ಮ್ಯೂಸಿಕ್‌ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿ.ಎಚ್‌.ಡಿ ಪದವಿ ಮುಗಿಸಿದ್ದೇನೆ.

ಸಂಗೀತ ಸಂಶೋಧನೆ ಮಾಡಬೇಕು ಅನಿಸಿದ್ದು ಏಕೆ? ಅದರ ಉಪಯೋಗ?

ಹಿನ್ನೆಲೆ ಗಾಯಕಿಯಾದ ನಾನು ಭಾರತೀಯ ಚಲನಚಿತ್ರ ಸಂಗೀತ ಬಹು ಆಯಾಮ ಹೊಂದಿದೆ ಎಂದೇ ಭಾವಿಸುತ್ತೇನೆ. ಈವರೆಗೆ ನಾ ಕಂಡಂತೆ ಸಿನಿಮಾ ಬಗ್ಗೆ ಹಲವಾರು  ಪುಸ್ತಕ, ಗ್ರಂಥಗಳು ಲಭ್ಯವಿವೆ. ಆದರೆ ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯಷ್ಟು ಮಾತ್ರ ಮಾಹಿತಿ, ಪುಸ್ತಕಗಳು ಸಿಗುತ್ತವೆ. ಆದುದರಿಂದ ನಾನು ಸಿನಿಮಾರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹಾದಾಸೆಯಿಂದ ಈ ಸಂಶೋಧನಾ ವಿಷಯವನ್ನು ಆಯ್ಕೆ ಮಾಡಿದೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ.

ನಿಮ್ಮ ಸಂಶೋಧನೆ ವಿಷಯ ಹಾಗೂ ಅದನ್ನು ಪೂರ್ಣಗೊಳಿಸಿದ ಬಗೆ?

ನಾನು ಡಾ. ಸಿ.ಎ. ಶ್ರೀಧರ್‌ ರವರ ಮಾರ್ಗದರ್ಶನದಲ್ಲಿ ನನ್ನ ಸಂಶೋಧನಾ ಅಧ್ಯಯನವನ್ನು ನಡೆಸಿದ್ದು, `ಮ್ಯೂಸಿಕ್‌ ಇನ್‌ ಕನ್ನಡ ಅಂಡ್‌ ತಮಿಳ್‌ ಸಿನಿಮಾ ಎ ಸ್ಟಡಿ’ ಎಂಬ ವಿಷಯದಲ್ಲಿ ನಾನು ಸಂಶೋಧನೆ ಮಾಡಿದ್ದೇನೆ. ನನ್ನ ಮಹಾಪ್ರಬಂಧ (1917-2020) ಸರಿಸುಮಾರು 100 ವರ್ಷಗಳ ಕನ್ನಡ ಹಾಗೂ ತಮಿಳು ಸಿನಿಮಾದಲ್ಲಿನ ಸಂಗೀತಕ್ಕೆ ಸಂಬಂಧಪಟ್ಟಿದ್ದು. ಚಿತ್ರಗೀತೆಯೆ ಹುಟ್ಟು, ಮೂಕಿ ಹಾಗೂ ಟಾಕಿ ಚಿತ್ರಗಳಲ್ಲಿನ ಸಂಗೀತ, ಹಿನ್ನೆಲೆ ಗಾಯನ, ಹಿನ್ನೆಲೆ ಸಂಗೀತ, ಆಯ್ದ ಗೀತೆಗಳ ವಿವಿಧ ದೃಷ್ಟಿಕೋನದಲ್ಲಿ ವಿಶ್ಲೇಷಣೆ, ಚಿತ್ರ ಸಂಗೀತದಲ್ಲಿನ ಶಾಸ್ತ್ರೀಯತೆ ಹಾಗೂ ಜಟಿಲತೆಗಳು, ರೆಕಾರ್ಡಿಂಗ್‌ ಮತ್ತು ರೀರೆಕಾರ್ಡಿಂಗ್ ತಂತ್ರಜ್ಞಾನ ಹಾಗೂ ಅನೇಕ ವಿಚಾರಗಳನ್ನು ಒಳಗೊಂಡಿದೆ.

ನಾನು ಸಂಶೋಧನಾ ಅಧ್ಯಯನಕ್ಕಾಗಿ ಅನೇಕ ಸಂಗೀತ ದಿಗ್ಗಜರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಸಂದರ್ಶನ ಮಾಡಿದ್ದೇನೆ. ಎ.ಆರ್‌. ರೆಹಮಾನ್‌, ಎಸ್‌. ಜಾನಕಿ, ಇಳಯರಾಜ, ಎಂ. ಬಾಲಮುರಳಿ ಕೃಷ್ಣ, ವಾಣಿ ಜಯರಾಮ್, ರಾಮಕುಮಾರ್‌ ಗಣೇಶನ್‌, ಧೀನ, ರಾಜನ್‌ (ರಾಜನ್‌ ನಾಗೇಂದ್ರ), ಪಿ. ಸುಶೀಲಾ, ಎಸ್‌.ಪಿ. ಬಾಲಸುಬ್ರಹ್ಮಣ್ಯಂ, ಕೆ.ಎಸ್‌. ಚಿತ್ರಾ, ಆರ್‌. ರತ್ನಾ, ಬಿ.ಕೆ. ಸುಮಿತ್ರಾ, ಕಸ್ತೂರಿ ಶಂಕರ್‌, ವಿ. ಮನೋಹರ್‌, ಭಾರದ್ವಾಜ್‌ ಇನ್ನಿತರರು ತಮ್ಮ ಅಮೂಲ್ಯವಾದ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡರು.

ಸುಮಾರು 150ಕ್ಕೂ ಹೆಚ್ಚು ವೈಯಕ್ತಿಕ ಸಂದರ್ಶನಗಳ ಒಂದು ದೊಡ್ಡ ಪಟ್ಟಿಯೇ ಇದೆ. ಇದಲ್ಲದೆ ನಾನು ನನ್ನ ಹಲವಾರು ಸಂಗೀತ ಕಾರ್ಯಕ್ರಮಗಳು, ಶೋಗಳು, ಹಾಡುಗಳ ರೆಕಾರ್ಡಿಂಗ್‌ ನ ಬಿಡುವು ಸಮಯವನ್ನು ನನ್ನ ಸಂಶೋಧನೆಗೂ ಸಹ ಬಳಸಿಕೊಳ್ಳುತ್ತಿದ್ದೆ. ಅಲ್ಲಿಗೆ ಬರುತ್ತಿದ್ದ ಸಂಗೀತ ನಿರ್ದೇಶಕರು, ಸಹಗಾಯಕರು, ಸಂಗೀತಗಾರರು, ಸಾಹಿತಿಗಳು, ಸೌಂಡ್ ಎಂಜಿನಿಯರ್‌ ಗಳು, ತಂತ್ರಜ್ಞರೊಂದಿಗೆ ನನ್ನ ಅಧ್ಯಯನಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತಾ ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೆ.

ಡಾಕ್ಟರೇಟ್ ನಂತರ ಮುಂದಿನ ಯೋಜನೆಗಳು ಏನು?

ಹಿನ್ನೆಲೆ ಗಾಯನ ಮುಂದುವರಿಸುವ ಜೊತೆ ಜೊತೆಗೆ ನನ್ನ ಈ ಮಹಾಪ್ರಬಂಧವನ್ನು ಪುಸ್ತಕವಾಗಿ ಪ್ರಕಟಿಸುವ ಉದ್ದೇಶ ಹೊಂದಿದ್ದೇನೆ. ನಾನು ಇದನ್ನು ಇಂಗ್ಲಿಷ್‌ ನಿಂದ ಇತರ ಭಾಷೆಗಳಿಗೆ ಅನುವಾದಿಸಲು ಸಹ ಯೋಚಿಸಿದ್ದೇನೆ. ಇದು ಚಲನಚಿತ್ರ ಸಂಗೀತದಲ್ಲಿ 1080 ಪುಟಗಳ ಸುದೀರ್ಘವಾದ ಪ್ರಬಂಧವಾದ್ದರಿಂದ ಇದನ್ನು `ಗಿನ್ನಿಸ್‌ ವಿಶ್ವ ದಾಖಲೆ’ ಮತ್ತು `ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್’ಗೆ ಕಳುಹಿಸಲು ಯೋಜಿಸುತ್ತಿದ್ದೇನೆ.

ನಿಮ್ಮ ಮುಂಬರುವ ಚಲನಚಿತ್ರಗಳು ಮತ್ತು ಬಿಡುಗಡೆಗಳು?

ಆ್ಯಂಡ್ರಿಯಾ ನಟಿಸಿರುವ ತಮಿಳು ಚಲನಚಿತ್ರ `ಮಾಳಿಗೈ,’ ರಾಯಲ್ ಲಕ್ಷ್ಮಿ ನಟಿಸಿರುವ ಕನ್ನಡ ಚಲನಚಿತ್ರ `ರನ್ಸಿ ಐಪಿಎಸ್‌,’ ಕಧಿರ್‌, ತಮಸ್‌, ಧರ್ಮ ಕೀರ್ತಿರಾಜ್‌ ಅಭಿನಯದ `ಖಡಕ್‌’ ಚಲನಚಿತ್ರ ಹಾಗೂ ಹಲವಾರು ಪ್ರೈವೇಟ್‌ ಆಲ್ಬಂಗಳು ಬಿಡುಗಡೆಗೆ ಸಿದ್ಧವಾಗಿವೆ.

ಸರಸ್ವತಿ ಜಾಗೀರ್ದಾರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ