ನೂರು ವರ್ಷಗಳ ಚಲನಚಿತ್ರ ಸಂಗೀತ ಸಂಶೋಧನೆ ಕುರಿತಾಗಿ ಡಾಕ್ಟರೇಟ್ ಪದವಿ ಪಡೆದ ಭಾರತದ ಮೊದಲ ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿಯವರ ಸಾಧನೆಗಳ ಬಗ್ಗೆ ತಿಳಿಯೋಣವೇ......?
ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ 101ನೇ ಘಟಿಕೋತ್ಸವ ಬಹಳ ಅದ್ಧೂರಿಯಾಗಿ ನೆರವೇರಿತು. ಬಹುಭಾಷಾ ಹಿನ್ನೆಲೆ ಗಾಯಕಿ ಪ್ರಿಯದರ್ಶಿನಿಯರಿಗೆ ಚಲನಚಿತ್ರ ಸಂಗೀತದ ವಿಷಯದಲ್ಲಿ ಪಿ.ಎಚ್.ಡಿ ಡಾಕ್ಟರೇಟ್ ಪದವಿಯನ್ನು ಕರ್ನಾಟಕದ ರಾಜ್ಯಪಾಲರಾದ ಥಾರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಜಿ. ಹೇಮಂತ್ ಕುಮಾರ್ ಪ್ರದಾನ ಮಾಡಿದರು.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ ಚಲನಚಿತ್ರೋದ್ಯಮದಲ್ಲಿ ಅನೇಕ ಹೆಸರಾಂತ ಸಂಗೀತ ನಿರ್ದೇಶಕರಿಗೆ 130ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಕೆಲಸ ಮಾಡಿರುವ ಪ್ರಿಯದರ್ಶಿನಿ ಹಲವಾರು ಭಕ್ತಿಗೀತೆಗಳು, ಪ್ರೈವೇಟ್ ಆಲ್ಬಂಗಳಿಗೂ ಸಹ ತಮ್ಮ ಧ್ವನಿಗೂಡಿಸಿದ್ದಾರೆ. ಪಿ.ಎಚ್.ಡಿ ಡಾಕ್ಟರೇಟ್ ಪದವಿ ಪಡೆದ ನಂತರ ಪತ್ರಿಕಾ ಸಂದರ್ಶನಕ್ಕೆ ಮಾತನಾಡುತ್ತಾ ಹಲವಾರು ವಿಷಯ ಹಂಚಿಕೊಂಡರು.
ನಿಮ್ಮ ಸಿನಿಮಾ ಪಯಣ ಹಾಗೂ ಗಾಯಕಿಯಾಗಿ ಮೊದಲ ಚಿತ್ರ?
ಸಿಂಗಾಪುರ್ ನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಸಂದರ್ಭದಲ್ಲಿ ಭಾರದ್ವಾಜ್ ಸಂಗೀತ ನಿರ್ದೇಶನದ `ಕಾದಲ್ ಡಾಟ್ ಕಾಮ್' ಎಂಬ ತಮಿಳು ಚಲನಚಿತ್ರದಲ್ಲಿ ಗಾಯಕ ಹರಿಹರನ್ ಜೊತೆ ಯುಗಳಗೀತೆ ಹಾಡುವ ಮೂಲಕ ನಾನು ಚಲನ ಚಿತ್ರರಂಗವನ್ನು ಪ್ರವೇಶಿಸಿದೆ. ನಂತರ ಹಲವಾರು ಸಂಗೀತ ದಿಗ್ಗಜರೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯಿತು. ಚೆಲುವಿನ ಚಿತ್ತಾರ, ಜ್ಯೂಲಿ, ನನ್ನೆದೆಯ ಹಾಡು, ಕುಸ್ತಿ, ನಂದಿ, ಸಿಂಹಬಲುಡು, ಮಾಣಿಕ್ಯಮ್ 420, ಗಿರಿ, ಮುತ್ತಿನ ಮಳೆಯಲಿ, ನಿರುದ್ಯೋಗಿ, ಪ್ರೀತಿಯಿಂದ ರಮೇಶ್, ಶ್ರೀ ನಾಗಶಕ್ತಿ, ನಾನ್ ದಾನ್ ಬಾಲ, ಜಯಹೇ, ಸೀನಾ, ನೇರ್ಮುಗಂ, ಉಪೇಂದ್ರ ಅಭಿನಯದ `ನ್ಯೂಸ್' ಚಿತ್ರ, ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ನಟಿಸಿರುವ `ಗರಂ ಮಸಾಲ' ಯಶ್ ಅಭಿನಯದ `ರಾಕಿ' ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಜೊತೆ ಯುಗಳಗೀತೆ ಮುಂತಾದ ಚಿತ್ರಗಳಲ್ಲಿ ಹಾಡಿದ್ದೇನೆ, ಕನ್ನಡದಲ್ಲಿ ನನ್ನ ಮೊದಲ ಚಿತ್ರ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ `ಅಜ್ಜು.'
ಸಂಗೀತದಲ್ಲಿ ನಿಮ್ಮ ಕಲಿಕೆ?
ನಾಲ್ಕನೇ ವಯಸ್ಸಿಗೆ ನಾನು ಗುರು ಶಾರದಾ ಸ್ವಾಮಿನಾಥನ್ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭ ಮಾಡಿದೆ, 9ನೇ ವಯಸ್ಸಿಗೆ ನನ್ನ ಮೊದಲ ಸಂಗೀತ ಕಚೇರಿ ನೀಡಿದೆ. ನಂತರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ಗಝಲ್ ಪಂಡಿತ್ ಚರಣ್ ರ ಬಳಿ ಕಲಿತೆ, ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪಡೆದೆ, ಪಾಶ್ಚಾತ್ಯ ಸಂಗೀತವನ್ನು ಲಂಡನ್ ನ ದಿ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್ ನಲ್ಲಿ ಕಲಿತು ಈಗ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿನಿಮಾ ಸಂಗೀತದಲ್ಲಿ ಪಿ.ಎಚ್.ಡಿ ಪದವಿ ಮುಗಿಸಿದ್ದೇನೆ.
ಸಂಗೀತ ಸಂಶೋಧನೆ ಮಾಡಬೇಕು ಅನಿಸಿದ್ದು ಏಕೆ? ಅದರ ಉಪಯೋಗ?
ಹಿನ್ನೆಲೆ ಗಾಯಕಿಯಾದ ನಾನು ಭಾರತೀಯ ಚಲನಚಿತ್ರ ಸಂಗೀತ ಬಹು ಆಯಾಮ ಹೊಂದಿದೆ ಎಂದೇ ಭಾವಿಸುತ್ತೇನೆ. ಈವರೆಗೆ ನಾ ಕಂಡಂತೆ ಸಿನಿಮಾ ಬಗ್ಗೆ ಹಲವಾರು ಪುಸ್ತಕ, ಗ್ರಂಥಗಳು ಲಭ್ಯವಿವೆ. ಆದರೆ ಸಿನಿಮಾ ಸಂಗೀತದ ಬಗ್ಗೆ ಬೆರಳೆಣಿಕೆಯಷ್ಟು ಮಾತ್ರ ಮಾಹಿತಿ, ಪುಸ್ತಕಗಳು ಸಿಗುತ್ತವೆ. ಆದುದರಿಂದ ನಾನು ಸಿನಿಮಾರಂಗಕ್ಕೆ ಚಲನಚಿತ್ರ ಸಂಗೀತದ ಬಗ್ಗೆ ಒಂದು ಮೂಲ ಗ್ರಂಥವನ್ನು ಕೊಡುಗೆಯಾಗಿ ನೀಡುವ ಮಹಾದಾಸೆಯಿಂದ ಈ ಸಂಶೋಧನಾ ವಿಷಯವನ್ನು ಆಯ್ಕೆ ಮಾಡಿದೆ. ಇದು ಖಂಡಿತವಾಗಿಯೂ ಭವಿಷ್ಯದ ಪೀಳಿಗೆಗೆ, ಸಂಗೀತಗಾರರಿಗೆ, ಗಾಯಕರಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ ಮತ್ತು ಅನೇಕರಿಗೆ ಜ್ಞಾನದ ಮೂಲವಾಗಿದೆ.