ನಿಮ್ಮನ್ನು ಇಷ್ಟಪಡುವ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಬೇಡ. ಅದು ನಿಮ್ಮ ಮುಗ್ಧತೆ ಆತ್ಮಗೌರವ ಹಾಗೂ ಪ್ರಾಣಕ್ಕೆ ಕುತ್ತು ತರುವಂತಾಗಬಾರದು…….!
21 ವರ್ಷದ ಪೂರ್ಣಿಮಾ ಕಾಲೇಜೊಂದರ ಪ್ರತಿಭಾವಂತ ವಿದ್ಯಾರ್ಥಿನಿ. ಆಕೆ ಎಂ.ಎಸ್.ಸಿ ಜೊತೆಗೆ ಸ್ಪರ್ಧ್ಮಾತ್ಮಕ ಪರೀಕ್ಷೆಯ ತಯಾರಿಯಲ್ಲೂ ತೊಡಗಿದ್ದಳು. ಶ್ರೀಮಂತ ಕುಟುಂಬದ ಈಕೆ, ಇತರೆ ಹುಡುಗಿಯರು ಈ ವಯಸ್ಸಿನಲ್ಲಿ ಮಾಡುವ ತಪ್ಪನ್ನು ಮಾಡಿಬಿಟ್ಟಳು.
ಪ್ರೀತಿ ಮಾಡುವುದು ತಪ್ಪಲ್ಲ. ಆದರೆ ಪ್ರೀತಿಯಲ್ಲಿ ಬಿದ್ದು ಒಳ್ಳೆಯದು ಕೆಟ್ಟದ್ದರ ಅರಿವು ಇಲ್ಲದೆ ಮಾಡಿದ ತಪ್ಪಿಗೆ ತನ್ನ ಜೀವವನ್ನೇ ಬಲಿಕೊಟ್ಟಳು.
ಪೂರ್ಣಿಮಾಗೆ ತನ್ನದೇ ಊರಿನ ಮೊಬೈಲ್ ಅಂಗಡಿಯ ಹುಡುಗ ಚೇತನ್ ಜೊತೆ ಪ್ರೀತಿ ಆಗಿತ್ತು. ಅದೊಂದು ಸಲ ತನ್ನ ಮೊಬೈಲ್ ಕೆಟ್ಟು ಹೋದಾಗ, ಅದನ್ನು ಚೇತನನ ಅಂಗಡಿಗೆ ತೆಗೆದುಕೊಂಡು ಹೋಗಿದ್ದಳು. ಅವಳ ಮೊಬೈಲ್ ಏನೋ ಸರಿಹೋಯಿತು. ಆದರೆ ಅವಳು ಅವನ ಬಣ್ಣದ ಮಾತಿಗೆ ಮರುಳಾಗಿಬಿಟ್ಟಳು. ಬಳಿಕ ಇಬ್ಬರೂ ವಾಟ್ಸ್ ಆ್ಯಪ್ ನಲ್ಲಿ ಚಾಟಿಂಗ್ ಮಾಡತೊಡಗಿದರು. ಕ್ರಮೇಣ ಅವರು ನಿಕಟವಾಗಿ, ಏಕಾಂತದ ಕ್ಷಣಗಳ ಫೋಟೋ ಬದಲಿಸಿಕೊಂಡರು.
ಪೂರ್ಣಿಮಾ ಆಕಸ್ಮಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಅಂದರೆ, ಘಟನೆ ನಡೆಯುವ ಒಂದು ದಿನ ಮೊದಲು ಚೇತನ್ ಅವಳ ಒಂದು ಫೋಟೋವನ್ನೂ ವೈರಲ್ ಮಾಡುವ ಬೆದರಿಕೆ ಹಾಕಿದನಂತೆ. ಚಾಟಿಂಗ್ ನಲ್ಲಿ ಅವಳು ತನ್ನ ಫೋಟೊವನ್ನು ವೈರಲ್ ಮಾಡಬೇಡ ಎಂದು ಎಷ್ಟೋ ಸಲ ಗೋಗರೆದಿದ್ದಳು. ಇಲ್ಲದಿದ್ದರೆ ನಾನು ಸತ್ತೇ ಹೋಗ್ತೀನಿ ಎಂದು ಹೇಳಿದ್ದಳು, “ನೀನು ನನ್ನನ್ನು ಹೊಡೆದು ಸಾಯಿಸು. ಆದರೆ ಆ ಫೋಟೋವನ್ನು ಮಾತ್ರ ವೈರಲ್ ಮಾಡಬೇಡ,” ಎಂದೂ ವಿನಂತಿಸಿ ಕೊಂಡಿದ್ದಳು. ಆದರೆ ಚೇತನ್ ಅವಳ ಮಾತಿಗೆ ಒಪ್ಪದಿದ್ದಾಗ ತನ್ನ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಳು. ಆ ಬಳಿಕವೇ ಅವಳ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಗೊತ್ತಾಯಿತು. ಚೇತನ್ ಅಷ್ಟರಲ್ಲಾಗಲೇ ಕಾಲು ಕಿತ್ತಿದ್ದ.
ಇಂತಹ ತಪ್ಪು ಮಾಡಬೇಡಿ
ಪೂರ್ಣಿಮಾ ಮಾಡಿದ ತಪ್ಪನ್ನೇ ರಜನಿ ಕೂಡ ಮಾಡಿದಳು. ಅವಳು ಅನಿಲ್ ನನ್ನು ಪ್ರೀತಿಸುತ್ತಿದ್ದಳು. ಆದರೆ ಅವರಿಬ್ಬರ ಪ್ರೀತಿಯ ಜ್ವರ ಅಷ್ಟೇ ಬೇಗನೇ ಇಳಿದುಹೋಯಿತು. ಆದರೆ ರಜನಿಗೆ ಸಂಬಂಧಪಟ್ಟ ಕೆಲವು ವೈಯಕ್ತಿಕ ಫೋಟೋಗಳು ಅವನ ಮೊಬೈಲ್ ನಲ್ಲಿ ಉಳಿದಿದ್ದವು. ಅವೇನಾದರೂ ಜಗತ್ತಿನೆದುರು ಬಂದಿದ್ದರೆ ಅವಳ ಸ್ಥಿತಿ ಅಯೋಮಯವಾಗುತ್ತಿತ್ತು. ಬ್ರೇಕ್ ಅಪ್ ನ ಬಳಿಕ ಅನಿಲ್ ರಜನಿಯನ್ನು ಬ್ಲ್ಯಾಕ್ ಮೇಲ್ ಮಾಡತೊಡಗಿದ. ಅದನ್ನವಳು ಹೇಗೊ ಸಹಿಸಿಕೊಂಡಳು. ಆದರೆ ಅವಳ ಮದುವೆ ನಿಶ್ಚಿತವಾದಾಗ ಅವಳು ಇಕ್ಕಟ್ಟಿಗೆ ಸಿಲುಕಿ ಕೊಂಡಳು. ಅವಳ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುವುದಾಗಿ ಅನಿಲ್ ಬೆದರಿಕೆ ಹಾಕತೊಡಗಿದಾಗ ಅವಳ ಧೈರ್ಯ ಕುಸಿದುಹೋಯಿತು. ಆ ಫೋಟೋಗಳೇನಾದರೂ ವೈರಲ್ ಆಗಿದ್ದಿದ್ದರೆ ಅವಳ ಮದುವೆ ಮುರಿದು ಬೀಳುತ್ತಿತ್ತು. ಅವಳ ಕುಟುಂಬದ ಮಾನ ಹರಾಜಾಗುತ್ತಿತ್ತು. ರಜನಿ ಮೌನದಿಂದಿರುವುದನ್ನು ನೋಡಿ ಅನಿಲ್ ಗೆ ಇನ್ನಷ್ಟು ಧೈರ್ಯ ಬಂತು. ಅವನು ಅವಳ ಫೋಟೋಗಳನ್ನು ಅವಳ ಅಣ್ಣ ಮತ್ತು ಅಪ್ಪನಿಗೆ ಕಳಿಸಿಬಿಟ್ಟ.
ರಜನಿಯ ಮದುವೆ ರದ್ದುಪಡಿಸಬೇಕೆಂಬ ಅನಿಲ್ ನ ದುರುದ್ದೇಶ ಈಡೇರುವ ಮುನ್ನವೇ ಅವಳ ಅಣ್ಣ ಹಾಗೂ ಅಪ್ಪ ಅವನ ವಿರುದ್ಧ ಪೊಲೀಸ್ ಗೆ ದೂರು ಕೊಟ್ಟರು. ಅನಿಲ್ ನನ್ನು ಪೊಲೀಸರು ಬಂಧಿಸಿದರು. ಆ ಮೂಲಕ ರಜನಿಯ ಜೀವನ ಹಾಳಾಗುವುದು ತಪ್ಪಿತ್ತು. ಆದರೆ ಈ ಘಟನೆಯನ್ನು ಅವಳೆಂದೂ ಮರೆಯುವುದಿಲ್ಲ ಹಾಗೂ ಹುಡುಗಿಯರಿಗೆ ಅಪ್ಪಿತಪ್ಪಿಯೂ ಬಾಯ್ ಫ್ರೆಂಡ್ ಅಥವಾ ಪ್ರೇಮಿಯನ್ನು ಇಷ್ಟೊಂದು ನಂಬಬೇಡಿ ಎಂಬ ಸಂದೇಶ ಕೊಡಲಿಕ್ಕೂ ಮರೆಯುವುದಿಲ್ಲ.
ಭಾವನೆಗಳಲ್ಲಿ ಕೊಚ್ಚಿಹೋಗದಿರಿ
ಪ್ರೀತಿ ಒಂದು ಮಧುರ ಅನುಭೂತಿ. ಆದರೆ ಈಚೆಗೆ ಚಾಲ್ತಿಯಲ್ಲಿರುವ ಪ್ರೀತಿಗೆ ಹಳೆಯ ಪ್ರೀತಿಯಲ್ಲಿದ್ದ ತ್ಯಾಗ ಮತ್ತು ಸಮರ್ಪಣೆಯ ಭಾವನೆಗಳಿಗೆ ಯಾವುದೇ ಬೆಲೆಯಿಲ್ಲ. ಅದೀಗ ಕಾಮದ ಹಸಿವನ್ನು ನೀಗಿಸಿಕೊಳ್ಳುವ ಒಂದು ಆಧಾರವಾಗುತ್ತ ಹೊರಟಿದೆ. ಪ್ರೇಮಿಗೆ ಮರುಳಾಗಿ ಹುಡುಗಿಯರು. ಹೇಗೆಂದರೆ ಹಾಗೆ ಫೋಟೋ ತೆಗೆಯಲು ಅವಕಾಶ ಕೊಡುತ್ತಾರೆ. ಸಾಮಾನ್ಯವಾಗಿ ಅರೆನಗ್ನ ಅಥವಾ ಪರಸ್ಪರರ ಬಾಹುಗಳಲ್ಲಿ ಬಂಧಿಗಳಾಗಿ ಕಿಸ್ ಮಾಡುತ್ತಾ ಇರುವ ಫೋಟೋಗಳನ್ನು ಹುಡುಗರು ತೆಗೆದುಕೊಂಡುಬಿಡುತ್ತಾರೆ.
ಆ ಒಂದು ಪೋಟೋ ತನ್ನ ಜೀವನದ ನೆಮ್ಮದಿಗೆ ಭಂಗ ತರಬಹುದೆಂಬ ಒಂದಿಷ್ಟೂ ಸುಳಿವು ಕೂಡ ಹುಡುಗಿಯರಿಗೆ ಆಗ ಇರುವುದಿಲ್ಲ. ಕಾರಣ ಏನೇ ಇರಲಿ, ಬ್ರೇಕ್ ಅಪ್ ಆದಾಗ ಹುಡುಗರು ತಮ್ಮ ನಿಜವಾದ ಬಣ್ಣ ತೋರಿಸಲು ಆರಂಭಿಸುತ್ತಾರೆ. ಉದಾಹರಣೆಗೆ ಚೇತನ್ ಹಾಗೂ ಅನಿಲ್ ಮಾಡಿದಂತೆ.
ಪ್ರೀತಿ ನಂಬಿಕೆಗೆ ಇನ್ನೊಂದು ಹೆಸರು ಎನ್ನುವುದು ಈಗ ಹೇಳುವುದಕ್ಕಷ್ಟೇ ಸೀಮಿತವಾಗುಳಿದಿದೆ. ಅದನ್ನು ಮೊಬೈಲ್ ಟ್ರೆಂಡ್ ಸಾಬೀತು ಕೂಡ ಮಾಡಿ ತೋರಿಸಿದೆ. ಪ್ರೀತಿ ಮಾಡುವವರು ಹೆಜ್ಜೆ ಹೆಜ್ಜೆಗೂ ಫೋಟೋ ತೆಗೆಸಿಕೊಳ್ಳುತ್ತಿರುತ್ತಾರೆ. ಆದರೆ ಯಾರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ಯಾರೂ ಅರಿಯರು. ಕೆಲವರು ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ಹುಡುಗರು ಹೇಳಿದಂತೆ ಮಾಡಿಬಿಡುತ್ತಾರೆ. ಅವರೇ ಮುಂದೆ ತಾವು ಮಾಡಿದ ತಪ್ಪಿಗೆ ಪಶ್ಚಾತ್ತಾಪಪಡುತ್ತಾರೆ. ಪೂರ್ಣಿಮಾಳಂತಹ ದುರ್ಬಲ ಮನಸ್ಸಿನ ಹುಡುಗಿಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ರಜನಿಯಂತಹ ಹುಡುಗಿಯರು ಹೇಗೋ ಬದುಕುಳಿಯುತ್ತಾರೆ. ಆದರೆ ಅವರ ಜೀವನ ನರಕ ಸದೃಶವಾಗಿರುತ್ತದೆ.
ಪ್ರೇಮಿಯ ಉದ್ದೇಶ ಅರಿಯಿರಿ
ಪ್ರೀತಿ ಒಂದು ಹಂತ ದಾಟಿದ ಬಳಿಕ ಹುಡುಗಿಯರಲ್ಲಿ ಒಂದು ರೀತಿಯ ವಿಶ್ವಾಸ ಮೂಡುತ್ತದೆ. ಈಗಿನ ಹುಡುಗಿಯರು ಮದುವೆಗೂ ಮುನ್ನ ಪ್ರೇಮಿಯ ಜೊತೆ ಡೇಟಿಂಗ್ ಹೋಗಲು ಹಿಂಜರಿಯುವುದಿಲ್ಲ. ಕೆಲವು ಹುಡುಗಿಯರು ಅದಕ್ಕೂ ಮತ್ತೊಂದು ಹೆಜ್ಜೆ ಮುಂದೆ ಹೋಗುತ್ತಾರೆ. ಆದರೆ ಅದರ ಮುಂದಿನ ಪರಿಣಾಮ ಏನಾಗಬಹುದು ಎಂಬುದರ ಬಗ್ಗೆ ಯೋಚನೆ ಮಾಡುವುದಿಲ್ಲ. ಪ್ರೇಮಿಯ ಜೊತೆ ಅರೆ ನಗ್ನ ಫೋಟೋ ತೆಗೆಯಿಸಿಕೊಳ್ಳುವಾಗ ಅದರಿಂದ ಮುಂದೆ ಏನಾದರೂ ತೊಂದರೆಯಾಗಬಹುದು ಎಂಬ ಸಣ್ಣ ಕಲ್ಪನೆಯೂ ಅವರಿಗಿರುವುದಿಲ್ಲ.
ಪ್ರೀತಿಯಲ್ಲಿ ಮುಳುಗಿ ಹೋದ ಹುಡುಗಿಯರು ತಮ್ಮ ಪ್ರಿಯಕರನ ಬಗ್ಗೆ ಅತಿಯಾದ ನಂಬಿಕೆ ಇಟ್ಟುಕೊಂಡಿರುತ್ತಾರೆ. ನಕ್ಷತ್ರ ತಂದು ಕೈಗೆ ಕೊಡುತ್ತೇನೆಂದು ಹೇಳುವ ಪ್ರಿಯಕರ ನಾಳೆ ಕೈ ಕೊಟ್ಟರೆ ಏನು ಗತಿ ಎಂದು ಯೋಚನೆ ಮಾಡುವುದಿಲ್ಲ. ಅವನು ಕೈಕೊಟ್ಟು ಹೋದರೂ ತೊಂದರೆಯಿಲ್ಲ. ಆದರೆ ಅವನೊಂದಿಗೆ ಕಳೆದ ದಿನಗಳ ಫೋಟೋಗಳ ಭಂಡಾರವೇ ಅವನ ಮೊಬೈಲ್ ನಲ್ಲಿರುತ್ತದೆ. ಅದನ್ನು ಆಧಾರವಾಗಿಟ್ಟುಕೊಂಡು ಅವನು ಮುಂದೆ ಬ್ಲ್ಯಾಕ್ ಮೇಲ್ ಮಾಡಬಹುದು. ನಿಮ್ಮ ಪ್ರಿಯಕರ ಪ್ರಾಮಾಣಿಕನೊ, ಅಪ್ರಾಮಾಣಿಕನೊ ಎಂಬುದನ್ನು ಕಂಡುಕೊಳ್ಳಲು ಈ ಕೆಳಕಂಡ ಸಂಗತಿಗಳ ಮೇಲೆ ಗಮನಹರಿಸಿ.
ಯಾವುದೇ ಪ್ರೇಮಿ ಅಥವಾ ಗೆಳೆಯ ಅರೆನಗ್ನ ಅಥವಾ ಅಶ್ಲೀಲ ಫೋಟೋ ತೆಗೆಯಿಸಿಕೊಳ್ಳುವ ಬಗ್ಗೆ ಹೇಳುತ್ತಿದ್ದಾನೆಂದರೆ, ಆತ ನಿಮಗೆ ಮೋಸ ಮಾಡುವ ಉದ್ದೇಶ ಹೊಂದಿದ್ದಾನೆಂದೇ ಅರ್ಥ. ಆ ಫೋಟೋಗಳನ್ನು ಆಧಾರವಾಗಿಟ್ಟುಕೊಂಡು ಆತ ನಿಮ್ಮ ದೇಹದ ಜೊತೆ ಚೆಲ್ಲಾಟ ಆಡಲು ಬಯಸಿದ್ದಾನೆ. ಅಂದರೆ ಅವನ ಉದ್ದೇಶ ದೈಹಿಕ ಸುಖ ಪಡೆದುಕೊಳ್ಳುವುದು, ಅದೂ ಕೂಡ ನಿಮ್ಮ ಇಚ್ಛೆಗೆ ವಿರುದ್ಧವಾಗಿದೆ.
ಅಂತಹ ಫೋಟೋ ತೆಗೆಯಲು ಹುಡುಗಿಯರನ್ನು ಸಿದ್ಧಗೊಳಿಸಲು `ನೀನೇ ನನ್ನ ಸುಂದರಿ, ನೀನೇ ನನ್ನ ಚಿನ್ನ, ಬಂಗಾರ! ನಿನ್ನ ಬಿಟ್ಟು ನಾನು ಬದುಕುವುದಾದರೆ ಹೇಗೆ…. ನನ್ನ ಮೇಲೆ ನಿನಗೆ ನಂಬಿಕೆಯಿಲ್ಲವೇ?’ ಎಂದು ಹೇಳಿ ಅವರನ್ನು ನಂಬಿಸಿಬಿಡುತ್ತಾರೆ. ಬಳಿಕ ಮೊಬೈಲ್ ನಲ್ಲಿ ದೃಶ್ಯ ಸೆರೆಹಿಡಿಯುತ್ತಾರೆ.
ಮೋಸಗಾರ ಪ್ರೇಮಿ ಪ್ರೀತಿ ಮೂಡುತ್ತಿದ್ದಂತೆ ತಕ್ಷಣವೇ ಇಂತಹ ಫೋಟೋ ತೆಗೆಯಲು ಬೇಡಿಕೆಯಿಡುವುದಿಲ್ಲ. ಮೊದಲು ನಿಮ್ಮ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆ ಕಾರಣಕ್ಕಾಗಿ ಆತ ಕೊಡುಗೈ ದಾನಿಯಂತೆ ಸಾಕಷ್ಟು ಖರ್ಚೂ ಮಾಡುತ್ತಾನೆ ಹಾಗೂ ಸದಾ ನಿಮ್ಮ ಹಿಂದೆ ಹಿಂದೆಯೇ ಸುತ್ತುತ್ತಿರುತ್ತಾನೆ. ಆಗ ನಿಮಗೆ ಇವನೇ ನಿಜವಾದ ಪ್ರೇಮಿ, ನನಗೆ ಇನ್ನೆಂಥ ಸಂಕೋಚ ಅನಿಸುತ್ತದೆ.
ಪ್ರೀತಿಯ ನಂಬಿಕೆ ಗಟ್ಟಿಯಾಗುತ್ತಿದ್ದಂತೆ ಮದುವೆ ಮಾಡಿಕೊಳ್ಳುವ ಭರವಸೆ ನೀಡುತ್ತಾನೆ. ನಿಮಗೆ ಬಗೆಬಗೆಯ ಕನಸು ಕಾಣುವ ಹಾಗೆ ಮಾಡುತ್ತಾನೆ. ನೀವು ಕನಸಿನಲೋಕಕ್ಕೆ ಜಾರುತ್ತಿದ್ದಂತೆ ಆತ ಹೇಳಿದ ಹಾಗೆ ನೀವು ಕೇಳಲು ಶುರು ಮಾಡುತ್ತೀರಿ.
ನಿಮ್ಮ ನಂಬಿಕೆ ಗಳಿಸಲು ಮೊದಲು ಫೋಟೋ ತೆಗೆದು ಅದನ್ನು ಡಿಲೀಟ್ ಮಾಡುವ ಭರವಸೆ ನೀಡುತ್ತಾನೆ. ಹಾಗೆ ಮಾಡುತ್ತಾನೆ ಕೂಡ. ಇದರಿಂದ ನಿಮಗೆ ನಂಬಿಕೆ ಹೆಚ್ಚಾಗುತ್ತದೆ. ಆಗ ನೀವು ಮೊದಲಿಗಿಂತ ಹೆಚ್ಚು ಮುಕ್ತವಾಗಿ ಫೋಟೊ ತೆಗೆಯಲು ಅವಕಾಶ ಕೊಡುತ್ತೀರಿ. ಬಳಿಕ ಅವನು ಈ ಫೋಟೋಗಳನ್ನು ಹೇಗೆ ಸೇಲ್ ಮಾಡುತ್ತಾನೆ ಎನ್ನುವುದು ನಿಮ್ಮ ಅರಿವಿಗೆ ಬರುವುದೇ ಇಲ್ಲ.
ಸಾಮಾನ್ಯವಾಗಿ ಜನದಟ್ಟಣೆ ಇರುವ ಕಡೆ ಪ್ರೇಮಿ ನಿಮ್ಮ ಫೋಟೊ ತೆಗೆಯುವುದಿಲ್ಲ. ಅದಕ್ಕಾಗಿ ಅವನು ಏಕಾಂತ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸುತ್ತಾನೆ. ವಾಸ್ತವದಲ್ಲಿ ಸಮಸ್ಯೆ ಇಲ್ಲಿಯೇ ಶುರುವಾಗುತ್ತದೆ. ನೀವು ಅವನೆದುರು ಒಂದೊಂದಾಗಿ ಬಟ್ಟೆ ಕಳಚುತ್ತ ಹೋದಂತೆ ಅವನು ಫೋಟೋ ತೆಗೆಯುತ್ತಿರುತ್ತಾನೆ.
ಆ ಫೋಟೊಗಳನ್ನು ಅವನು ನಿಮ್ಮ ಅನುಮತಿ ಪಡೆದೇ ತೆಗೆಯುತ್ತಾನೆ ಎಂದೇನಿಲ್ಲ. ಇತ್ತೀಚೆಗೆ ಗುಪ್ತ ಕ್ಯಾಮೆರಾಗಳು ಕೂಡ ಬಂದಿದ್ದು, ನಿಮ್ಮ ಗಮನಕ್ಕೆ ಬಾರದಂತೆ ಫೋಟೊ ತೆಗೆಯಬಹುದು.
ಬ್ಲ್ಯಾಕ್ ಮೇಲಿಂಗ್ ಶುರು
ಒಂದು ಸಲ ಫೋಟೊ ಅವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದ್ದಂತೆ ಅವನು ಬಣ್ಣ ಬದಲಿಸತೊಡಗುತ್ತಾನೆ. ಲೈಂಗಿಕ ಬಯಕೆ ಉಂಟಾದಾಗ ನಿಮ್ಮ ಸನಿಹ ಬರುತ್ತಾನೆ. ನೀವೇನಾದರೂ ನಿರಾಕರಿಸಲು ನೋಡಿದರೆ ಅವನು ನೇರವಾಗಿ ಬ್ಲ್ಯಾಕ್ ಮೇಲ್ ಗೆ ಇಳಿಯುವುದಿಲ್ಲ. ಹೊಂದಾಣಿಕೆಯ ಧಾಟಿಯಲ್ಲಿ ಮಾತಾಡುತ್ತಾನೆ. ಅದರಿಂದ ನೀವು ಹೆದರಿಬಿಡುತ್ತೀರಿ.
ಅವನು ಬಯಸುವುದು ಇದನ್ನೇ. ಅಲ್ಲಿಂದ ಮುಂದೆ ಅವನ ಬೇಡಿಕೆಗಳು ಹೆಚ್ಚುತ್ತಾ ಹೋಗುತ್ತವೆ. ನಿನ್ನೆಯ ತನಕ ನಿಮ್ಮ ಹೀರೊ ಆಗಿದ್ದ ವ್ಯಕ್ತಿ ಈಗ ವಿಲನ್ ಆಗಿಬಿಟ್ಟಿರುತ್ತಾನೆ. ಆಗ ನಿಮಗೆ ಎರಡೇ ದಾರಿಗಳು ಉಳಿದಿರುತ್ತವೆ. ಮೊದಲನೆಯದು ಆತ್ಮಹತ್ಯೆ, ಎರಡನೆಯದು ಅವನು ಹೇಳಿದಂತೆ ಕೇಳುವುದು. ನೀವು ಮಾಡಿದ ತಪ್ಪಿಗೆ ನಿಮ್ಮನ್ನೇ ಹಳಿಯುತ್ತಾ ಇರುವುದು.
ಆದರೆ ಇದು ಸಮಸ್ಯೆಗೆ ಪರಿಹಾರವಲ್ಲ. ನಿಮ್ಮ ಅವಹೇಳನ ಹಾಗೂ ಕುಟುಂಬದ ಮರ್ಯಾದೆಯ ವಿಷಯ ಗಂಭೀರವಾಗಿದೆ. ಒಮ್ಮೆ ತಪ್ಪು ನಡೆದು ಹೋಗಿದೆಯೆಂದರೆ, ಅದನ್ನು ಹೀಗೆ ಸುಧಾರಿಸಿ.
ನಿಮ್ಮ ಪ್ರೇಮಿ ಮೊದಲ ಬಾರಿ ಮೆಲ್ಲನೆಯ ಧ್ವನಿಯಲ್ಲಿ ಅಥವಾ ಜೋರುಧ್ವನಿಯಲ್ಲಿ ಬೆದರಿಕೆ ಹಾಕಿದರೆ ಹೆದರಬೇಡಿ. ಅವನಿಗೆ ನೀವು ಹೇಳಬೇಕಾದ ವಿಷಯ ಏನೆಂದರೆ ಕುಟುಂಬದ ಮರ್ಯಾದೆಯ ಗೌರವ ಲೆಕ್ಕಿಸದೆ ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ಕೊಡುತ್ತೇನೆ ಎಂದು ಹೆದರಿಸಿ. ಆಗ ಅವನ ಧೈರ್ಯ ಕೈಕೊಡುತ್ತೆ.
ಮೊದಲ ಬೆದರಿಕೆಯ ಬಳಿಕ ಅವನಿಗೆ ಪ್ರತಿಯಾಗಿ ಅವನ ಹಾಗೂ ನಿಮ್ಮ ತಾಯಿತಂದೆಯರಿಗೆ ಈ ವಿಷಯ ಹೇಳದೆ ಇರುವುದಿಲ್ಲ ಎಂದು ಬೆದರಿಕೆ ಹಾಕಿ. ಅದಕ್ಕೂ ಅವನು ಬಗ್ಗದಿದ್ದರೆ ನಿಮ್ಮ ತಾಯಿ ತಂದೆಯರ ಮುಂದೆ ಸತ್ಯ ಹೇಳಲು ಹಿಂದೇಟು ಹಾಕಬೇಡಿ. ಏಕೆಂದರೆ ಅವರೇ ನಿಮ್ಮನ್ನು ಬ್ಲ್ಯಾಕ್ ಮೇಲಿಂಗ್ ನಿಂದ ಪಾರು ಮಾಡಬಲ್ಲರು. ನಿಮ್ಮ ಈ ರೀತಿಯ ಬೆಳವಣಿಗೆಯಿಂದ ಅವರಿಗೆ ನೋವಾಗಬಹುದು. ನಿಮ್ಮನ್ನು ಬಯ್ಯಬಹುದು, ಹೊಡೆಯಬಹುದು. ಆದರೆ ಸಮಸ್ಯೆ ಬಗೆಹರಿಯುತ್ತಿದ್ದಂತೆ ನೀವು ಅದನ್ನು ಮರೆಯಲೂಬಹುದು. ಆದರೆ ಬಹು ದೊಡ್ಡ ಸಮಸ್ಯೆಯೊಂದರಿಂದ ಹೊರಗೆ ಬರುವಿರಿ.
ನಿಮಗೆ ಅವಕಾಶ ಸಿಕ್ಕಾಗ ಅವನ ಮೊಬೈಲ್ ಎತ್ತಿಕೊಂಡು ಒಡೆದು ಹಾಕಿ. ಇಲ್ಲವೇ, ಅದನ್ನು ನೀರಿಗೆ ಎಸೆಯಿರಿ. ನಿಮ್ಮ ಫೋಟೊ ತೆಗೆಯಲು ಅವನು ಹೇಗೆ ಸಿದ್ಧತೆ ಮಾಡಿಕೊಂಡಿದ್ದನೋ ಅದೇ ರೀತಿ ನೀವು ಕೂಡ ಸಿದ್ಧತೆ ಮಾಡಿಕೊಳ್ಳಬೇಕು.
ಚಾಟಿಂಗ್ ಹಾಗೂ ಮೊಬೈಲ್ ಮಾತುಕಥೆಯ ಸಂದರ್ಭದಲ್ಲಿ ಸೆಕ್ಸಿ ಮಾತುಕಥೆ ಬೇಡ. ಅದರಿಂದಲೂ ನೀವು ಬ್ಲ್ಯಾಕ್ ಮೇಲ್ ಗೆ ಒಳಗಾಗಬಹುದು.
ಏಕಾಂಗಿಯಾಗಿ ಭೇಟಿಯಾಗುವುದರಿಂದ ದೂರ ಇರಿ.
ನೀವು ಅವನ ಹತ್ತಿರ ಇದ್ದಾಗ ಅವನ ಫೋನ್ ನ ರಿಂಗ್ ಟೋನ್ ನಿಮ್ಮ ಮೂಡ್ ಹಾಳು ಮಾಡುತ್ತಿದೆ ಅಥವಾ ಡಿಸ್ಟರ್ಬ್ ಮಾಡುತ್ತಿದೆ, ಎಂದು ಹೇಳಿ ಅದನ್ನು ಬಂದ್ ಮಾಡಲು ಪ್ರಯತ್ನಿಸಿ.
ನಿಮ್ಮ ಮೊಬೈಲ್ ನಿಂದ ಎಂತಹ ಫೋಟೊ ಕಳಿಸಬಾರದು. ಒಂದು ಸಂಗತಿ ಗಮನದಲ್ಲಿರಲಿ, ನಿಮ್ಮ ಪ್ರೇಮಿ ನಿಮ್ಮನ್ನು ಪ್ರೀತಿ ಹಾಗೂ ನಂಬಿಕೆಯಿಂದ ಫೋಟೊ ತೆಗೆಯಿಸಿಕೊಳ್ಳಲು ಒತ್ತಾಯಿಸಿದರೆ ನೀವು ಅದಕ್ಕೆ ಒಪ್ಪಬೇಡಿ. ನಿಮ್ಮ ಈ ವರ್ತನೆಯಿಂದ ಅವನಿಗೆ ಬೇಜಾರಾಗಬಹುದು. ಅದು ಬ್ರೇಕ್ ಅಪ್ ತನಕ ಹೋಗಬಹುದು. ಬ್ರೇಕ್ ಅಪ್ ಆದರೂ ಅವನು ನಿಮಗೇನೂ ಮಾಡಲು ಆಗುವುದಿಲ್ಲ. ಆದರೆ ಒಂದು ಸಲ ಅವನು ನಿಮ್ಮ ಫೋಟೋಗಳನ್ನು ತೆಗೆದುಕೊಂಡನೆಂದರೆ ಪ್ರೀತಿಯ ಭರವಸೆ ಎನ್ನುವುದು ಹೊರಟು ಹೋಗಿರುತ್ತದೆ. ಹೀಗಾಗಿ ಎಚ್ಚರದಿಂದ ಇರಿ!
– ವಾರಿಜಾ