ಕನ್ನಡ ಕೋಗಿಲೆ ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡ ಅಖಿಲಾ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕಾಗಿ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
3 ವರ್ಷಗಳ ಹಿಂದೆ ಅಮೆರಿಕ ನಿವಾಸಿ ಧನಂಜಯ್ ಶರ್ಮ ಜೊತೆ ಅಖಿಲಾ ಪಜಿಮಣ್ಣು ವಿವಾಹ ನೆರವೇರಿತ್ತು. ಧನಂಜಯ್ ಶರ್ಮಾ ಮತ್ತು ಅಖಿಲಾ ಪಜಿಮಣ್ಣು ಇದೀಗ ಬೇರಾಗಲು ನಿರ್ಧರಿಸಿದ್ದಾರೆ.ಅಖಿಲಾ ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನವರು. ಕಿರುತೆರೆ ಹಾಗೂ ಸೋಶಿಯಲ್ ಮೀಡಿಯಾ ಮೂಲಕ ಖ್ಯಾತಿ ಗಳಿಸಿದ್ದ ಅವರು, ಸುಮಧುರ ಗಾಯನದ ಮೂಲಕ ಜನಮನ ಗೆದ್ದವರು.
ಗಾಯಕಿ ಅಖಿಲಾ ಪಜಿಮಣ್ಣು ಮತ್ತು ಪತಿ ಟಿ.ಆರ್ ಧನರಾಜ್ ಶರ್ಮಾ ಪರಸ್ಪರ ಒಪ್ಪಿ ಇದೇ ಜೂನ್ 12 ರಂದು ಪುತ್ತೂರು ಕೋರ್ಟ್ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪುತ್ತೂರಿನ ವಕೀಲ ಮಹೇಶ್ ಕಜೆ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಅಖಿಲಾ ಪಜಿಮಣ್ಣು ಮತ್ತು ಧನಂಜಯ್ ಶರ್ಮಾ ನಡುವೆ ಮಧ್ಯಸ್ಥಿಕೆಗೆ ಕಳೆದ ಆರು ತಿಂಗಳಿಂದ ಕೋರ್ಟ್ ಅವಕಾಶ ನೀಡಿತ್ತು. ಬುಧವಾರ ಈ ದಂಪತಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಮ್ಯೂಚುಯಲ್ ಡಿವೋರ್ಸ್ ಪಡೆಯಲು ಇಬ್ಬರೂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಧನಂಜಯ್ ಶರ್ಮ ಅವರು ಪುತ್ತೂರಿನ ನ್ಯಾಯಾಲಯಕ್ಕೆ ಆಗಮಿಸಿ ಹೇಳಿಕೆ ನೀಡಿ ವಾಪಸ್ ತೆರಳಿದ್ದಾರೆ. ಸದ್ಯದಲ್ಲೇ ಅವರು ಅಮೆರಿಕಕ್ಕೆ ತೆರಳಲಿದ್ದಾರೆ. ಸದ್ಯ ನ್ಯಾಯಾಲಯದಲ್ಲಿ ಈ ದಂಪತಿಯ ವಿಚ್ಛೇದನ ಅರ್ಜಿಯ ವಿಚಾರಣೆ ಮುಗಿದಿದೆ. ನ್ಯಾಯಾಲಯವು ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ.
ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಇಬ್ಬರದ್ದೂ ಅರೇಂಜ್ಡ್ ಮ್ಯಾರೇಜ್. ಎರಡು ಕುಟುಂಬಗಳ ಸಮ್ಮುಖದಲ್ಲಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಎಲ್ಲವೂ ಖುಷಿ ಖುಷಿಯಾಗಿಯೇ ಇದ್ದರು. ಇದೀಗ ಇಬ್ಬರೂ ಬೇರೆಯಾಗುವುದಕ್ಕೆ ನಿರ್ಧರಿಸಿದ್ದಾರೆ. ಸದ್ಯ ಗಾಯಕಿಯ ಅಭಿಮಾನಿಗಳಿಗೆ ಈ ಸುದ್ದಿ ಬೇಸರ ಮೂಡಿಸಿದೆ.