ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ತಾಯಿ ಮಗಳು ಕನ್ನಡ ಚಿತ್ರರಂಗದಲ್ಲಿ ಖ್ಯಾತರಾಗಿರುವ ತಾಯಿ ಮಗಳು ಸುಧಾ ಹಾಗೂ ಸಂಯುಕ್ತಾ ಮದರ್ಸ್ಡೇ ಸಂದರ್ಭದಲ್ಲಿ ಓದುಗರೊಂದಿಗೆ ಏನನ್ನು ಹಂಚಿಕೊಳ್ಳಲು ಬಯಸುತ್ತಾರೆ ಎಂದು ಗಮನಿಸೋಣವೇ……?

ಕಲಾವಿದರ ಕುಟುಂಬದಿಂದ ಬಂದ ಸುಧಾ ಬೆಳವಾಡಿ ರಂಗಭೂಮಿ ಮತ್ತು ಸಿನಿಮಾರಂಗ ಎರಡರಲ್ಲೂ ಬಾಲಕಲಾವಿದೆಯಾಗಿ ಬೆಳೆದು ಬಂದರು. ಅಮ್ಮ ಭಾರ್ಗವಿ ನಾರಾಯಣ್‌ ಹೆಸರುವಾಸಿ ಕಲಾವಿದೆ. ಸುಮಾರು 70ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ತಾಯಿ ಪಾತ್ರಗಳಿಗೆ ಜೀವ ತುಂಬಿಸಿ, ಮುಂದೆ ಕಿರುತೆರೆಯಲ್ಲೂ ಅದ್ಭುತವಾಗಿ ತಮ್ಮ ಪ್ರತಿಭೆ ಮೆರೆದರು. ಟಿ.ಎನ್‌. ಸೀತಾರಾಂರ `ಮುಕ್ತ’ ಮುಂತಾದ ಧಾರಾವಾಹಿಗಳಲ್ಲಿ ಈ ಅಜ್ಜಿ ಇಲ್ಲದೇ ನಡೆಯುತ್ತಲೇ ಇರಲಿಲ್ಲ. ತಂದೆ ಮೇಕಪ್‌ ನಾಣಿ ಎಂದೇ ಹೆಸರುವಾಸಿ ಆಗಿದ್ದಂತಹ ನಾರಾಯಣ್‌ ರಂಗಕರ್ಮಿ, ಕಪ್ಪುಬಿಳುಪಿನ ಚಿತ್ರಗಳಿಂದ ಕನ್ನಡ ಕಲಾವಿದರಿಗೆ ಬಣ್ಣ ಹಚ್ಚಿ ಮೇಕಪ್‌ ನಲ್ಲಿ ಕಿಂಗ್ ಎನಿಸಿದರು. ಒಟ್ಟಾರೆ ಕಲೆಗೆ ಬೆಲೆ ಕೊಡುವ ಕುಟುಂಬ. ಏನೇ ಬರಲಿ ಶೋ ಮಸ್ಟ್ ಗೋ ಆನ್‌ ಎಂದು ಹುರಿದುಂಬಿಸಿ ಮಕ್ಕಳಲ್ಲಿ ನಟನೆ ಬಗ್ಗೆ ಆಸಕ್ತಿ ತುಂಬಿದವರಾಗಿದ್ದರು. ಸುಧಾ ಬೆಳವಾಡಿ ಬಾಲಕಲಾವಿದೆಯಾಗಿ `ಕಾಡು, ಭೂತಯ್ಯನ ಮಗ ಅಯ್ಯು’ ಮುಂತಾದ ಚಿತ್ರಗಳಲ್ಲಿ ನಟಿಸಿ, ಆನಂತರ ಕಿರುತೆರೆ ಅದರಲ್ಲೂ ಟಿ.ಎನ್‌. ಸೀತಾರಾಂರವರ ಸಿನಿಮಾಗಳಲ್ಲಿ ನಟಿಸಿದ್ದರೂ ಹೆಚ್ಚು ಜನಪ್ರಿಯತೆ ತಂದಕೊಟ್ಟಿದ್ದು `ಮುಂಗಾರು ಮಳೆ’ ಚಿತ್ರದಲ್ಲಿ ನಟ ಗಣೇಶ್‌ ನ ಅಮ್ಮನ ಪಾತ್ರ. ಕಮರ್ಷಿಯಲ್ ಚಿತ್ರಗಳಲ್ಲಿ ಅಮ್ಮನ ಪಾತ್ರಕ್ಕೆ ನೈಜತೆ ತುಂಬಿದ ನಟಿ ಎಂದೇ ಹೇಳಬಹುದು. ಹಾಗೆಯೇ ನಿಜ ಜೀವನದಲ್ಲಿ ಅಮ್ಮನಾಗಿ, ಮಗಳಿಗೆ ಗೆಳತಿಯಾಗಿ ಸಹಜವಾಗಿ ಎಲ್ಲರೊಂದಿಗೆ ಬೆರೆಯುವ ಸಿಂಪಲ್ ನಟಿ ಸುಧಾ ಬೆಳವಾಡಿ. ಇವರ ಅಣ್ಣ ಪ್ರಕಾಶ್‌ ಬೆಳವಾಡಿ ಸಹ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಹಿಂದಿ ಮತ್ತು ದಕ್ಷಿಣದ ಎಲ್ಲಾ ಭಾಷೆಗಳಲ್ಲೂ ನಟಿಸಿದ್ದಾರೆ.

ಆಗಾಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಡುಗಳನ್ನು ಹಾಡಿ ಮಿಂಚುವ ಈ ಅಮ್ಮ ಮಗಳ ಜೋಡಿ ಫೇಮಸ್‌.

`ಮಗಳು ಜಾನಕಿ, ಮಂಥನ, ಯುಗಾಂತರ’ ಧಾರಾವಾಹಿಗಳಲ್ಲಿ ಸುಧಾರ ಅಭಿನಯ ಇಂದಿಗೂ ಯಾರೂ ಮರೆತಿಲ್ಲ. ರಂಗ ಚಟುವಟಿಕೆ ಜೊತೆಗೆ ಸಿನಿಮಾ ನಟನೆ ಎರಡನ್ನೂ ರೂಢಿಸಿಕೊಂಡಿರುವ ಸುಧಾ, ತಮ್ಮ ತಾಯಿ ಭಾರ್ಗವಿ ನಾರಾಯಣ್‌ ಅವರನ್ನು ಇತ್ತೀಚೆಗೆ ಕಳೆದುಕೊಂಡ ಮೇಲೆ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ಕಲೆಗೆ ಬೆಲೆ ಕೊಡುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ.

ಮಗಳು ಸಂಯುಕ್ತಾ ಹೊರನಾಡು ಕೂಡ ನಟಿ ಆಗಿರೋದ್ರಿಂದ ಅವಳಿಗೂ ಸಾಕಷ್ಟು ಪ್ರೋತ್ಸಾಹ ನೀಡುತ್ತಾರೆ. ಬಾಹ್ಯಾಡಂಬರಕ್ಕಿಂತ ನಮ್ಮ ಪಕ್ಕದಲ್ಲೇ ಕಷ್ಟಪಡುತ್ತಾ ಇರುವ ಜೀವಿಗಳಿಗೆ ನೆರವಾಗುವುದರಲ್ಲಿ ಹೆಚ್ಚು ಅರ್ಥವಿದೆ ಎಂದು ನಂಬಿರುವವರಲ್ಲಿ ಸುಧಾ ಕೂಡ ಒಬ್ಬರು. ಅಮ್ಮ ಮಗಳು ಪ್ರಾಣಿಪ್ರಿಯರು. ಹಾಗೆಯೇ ರಕ್ಷಣೆ ಕೂಡ ಮಾಡುತ್ತಾರೆ.

kangana-lead

ಪ್ರಾಣ ಸಂಸ್ಥೆಯ ರೂವಾರಿ

ತಮ್ಮ ಅಭಿನಯದ ಮೂಲಕ ಜನಪ್ರಿಯರಾಗಿರುವ ಆಧುನಿಕ ನಟಿ ಸಂಯುಕ್ತಾ ಹೊರನಾಡು, ಸುಧಾ ಬೆಳವಾಡಿಯವರ ಮಗಳು ಈಗ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

`ಪ್ರಾಣ ಅನಿಮಲ್ ಫೌಂಡೇಶನ್‌’ ಮೂಲಕ ಪ್ರಾಣಿಗಳ ರಕ್ಷಣೆಗೆ ಈಕೆ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆ್ಯಂಬುಲೆನ್ಸ್ ಸೇವೆ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಲು ಸಹಾಯವಾಣಿ ಕೂಡ ತೆರೆದಿದ್ದಾರೆ.

ಇತ್ತೀಚೆಗೆ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯಲ್ಲಿ `ಪ್ರಾಣ ಅನಿಮಲ್ ಫೌಂಡೇಶನ್‌’ ಸಂಸ್ಥೆಯಿಂದ ಪ್ರಾಣಿಗಳ ಆ್ಯಂಬುಲೆನ್ಸ್ 247 ಮತ್ತು ಪ್ರಾಣಿಗಳ ರಕ್ಷಣೆಯ ಸಹಾಯವಾಣಿ ಸೇವೆಗೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಚಾಲನೆ ನೀಡಿದರು. ಪ್ರಕಾಶ್‌ ಬೆಳವಾಡಿ, ಸುಧಾ ನಾರಾಯಣ್‌, ಅನಿರುದ್ಧ, ಸುಧಾ ಬೆಳವಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾಣಿಗಳ ಮೇಲೆ ನಾವು ಹೆಚ್ಚು ಪ್ರೀತಿಯಿಂದ ಮಾತನಾಡಿದಾಗ, ಕೆಲವರು ಹುಚ್ಚರು ಎಂದುಕೊಳ್ಳಬಹುದು. ಆದರೆ ನನಗೆ ಮೊದಲಿನಿಂದಲೂ ಪ್ರಾಣಿ ಪ್ರೀತಿ ಹೆಚ್ಚು. ಈಗಿನ ಪೀಳಿಗೆಯ ಯುವಕಯುವತಿಯರಿಗೂ ಪ್ರಾಣಿಗಳ ಮೇಲಿನ ಪ್ರೀತಿ ಹೆಚ್ಚಾಗುತ್ತಿದೆ. ಇದು ಸಂತೋಷ ಪಡುವ ವಿಚಾರ ಎಂದು ನಟ ಪ್ರಕಾಶ್‌ ರಾಜ್‌ ಹೇಳಿದರು.

ನಮ್ಮ ಅಜ್ಜಿ ಭಾರ್ಗವಿ ನಾರಾಯಣ್‌ ನಿಧನರಾಗಿದ್ದು ಫೆ.14 ರಂದು. ಅಜ್ಜಿಯ ನೆನಪಿನಲ್ಲಿ ಈ ಕಾರ್ಯಕ್ರಮ ನಡೆಸಲು ನನಗೆ ಅವರೇ ಅವಕಾಶ ನೀಡಿದ್ದಾರೆ. ಪ್ರಾಣಿಗಳು ತುಂಬಾ ಪ್ರೀತಿ ಕೊಡುತ್ತವೆ. ಅವುಗಳ ನೋವನ್ನು ಕಡಿಮೆ ಮಾಡುವುದೇ `ಪ್ರಾಣ ಅನಿಮಲ್ ಫೌಂಡೇಶನ್‌`ನ ಉದ್ದೇಶ. ಸದ್ಯಕ್ಕೆ ಬೆಂಗಳೂರಿನಲ್ಲಿ `ಪ್ರಾಣ ಆ್ಯಂಬುಲೆನ್ಸ್ 24×7′ ಕೆಲಸ ಮಾಡುತ್ತದೆ. ಅದರೊಂದಿಗೆ ಪ್ರಾಣಿಗಳ ನೆರವಿಗೆ ಸಹಾಯವಾಣಿ ಸಹ ಸ್ಥಾಪಿಸಿದ್ದೇವೆ. ಮುಂದೆ ಇದನ್ನು ವಿಸ್ತರಿಸುವ ಉದ್ದೇಶ ಇದೆ.

ಪ್ರಾಣ ಫೌಂಡೇಶನ್‌ ಆರಂಭಿಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು ಪ್ರಾಣ ಅನಿಮಲ್ ಫೌಂಡೇಶನ್ ಸ್ಥಾಪಕಿ ಸಂಯುಕ್ತಾ ಹೊರನಾಡು ಅಭಿನಂದನೆ ಸಲ್ಲಿಸುತ್ತಾರೆ.

ತಾಯಿ ಮಗಳ ಬಾಂಧವ್ಯ ಎಂಬುದು ಅನನ್ಯ ಎನ್ನುತ್ತಾರೆ ಸುಧಾ. ತಮ್ಮ ತಾಯಿಯಿಂದ ಕಲಿತಿದ್ದನ್ನು ಮಗಳ ಮೂಲಕ ಮುನ್ನಡೆಸುವ ಇರುವ ಎಲ್ಲಾ ತಾಯಂದಿರಿಗೂ ಆದರ್ಶಪ್ರಾಯ ಎಂದರೆ ಆಶ್ಚರ್ಯವಲ್ಲ. ತನ್ನ ತಾಯಿಯಿಂದ ಸುಸಂಸ್ಕೃತ ನಡೆನುಡಿ ಮುಂದುವರಿಸಿಕೊಂಡು ಹೋಗುತ್ತಿರುವ ಸಂಯುಕ್ತಾ, ಪ್ರಾಚೀನ ಮತ್ತು ಆಧುನಿಕ ಪೀಳಿಗೆಗೆ ಕೊಂಡಿಯಾಗಿದ್ದಾರೆ. ಈ ತಾಯಿ ಮಕ್ಕಳ ಬಾಂಧವ್ಯದಂತೆಯೇ ನಮ್ಮ ಓದುಗರ ಕೌಟುಂಬಿಕ ಬಾಂಧವ್ಯ ಇರಬೇಕು ಎಂದು ಈ ಮದರ್ಸ್‌ ಡೇ ಸಂದರ್ಭದಲ್ಲಿ ಗೃಹಶೋಭಾ ಹಾರೈಸುತ್ತಾಳೆ.

ಸರಸ್ವತಿ ಜಾಗೀರ್ದಾರ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ