- ರಾಘವೇಂದ್ರ ಅಡಿಗ ಎಚ್ಚೆನ್.
ಕಾಂತಾರ' ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 42ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ನಟನಿಗೆ ಕುಟುಂಬ ಸದಸ್ಯರು, ಚಿತ್ರರಂಗದವರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದ್ದಾರೆ. ಕಾಂತಾರ ಚಿತ್ರತಂಡ ಕೂಡಾ ಪೋಸ್ಟರ್ ಅನಾವರಣಗೊಳಿಸಿ ಬಹಳ ವಿಶೇಷವಾಗಿ ಶುಭ ಕೋರಿದೆ.
ಅಲ್ಲದೇ ಕಳೆದ ದಿನ ಡಿವೈನ್ ಸ್ಟಾರ್ ತಮ್ಮ ಬಹುನಿರೀಕ್ಷಿತ ಕಾಂತಾರ ಪ್ರೀಕ್ವೆಲ್ ಚಿತ್ರತಂಡದೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ವಿಡಿಯೋಗಳಲ್ಲಿ ಚಿತ್ರತಂಡದ ನಡುವೆ ನಟ ಕೇಕ್ ಕತ್ತರಿಸುತ್ತಿರೋದನ್ನು ಕಾಣಬಹುದು.
ಇಂದು ಬೆಳಗ್ಗೆ 'ಕಾಂತಾರ: ಅಧ್ಯಾಯ 1'ರ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಸಾರಥಿ ಶೆಟ್ಟಿ ಉಗ್ರ, ದೈವಿಕ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಬಹುತೇಕರು ಉತ್ಸುಕರಾಗಿದ್ದರು. 2022ರ ಬ್ಲಾಕ್‌ಬಸ್ಟರ್ ಕಾಂತಾರದ ಪ್ರೀಕ್ವೆಲ್ ನಿಗದಿತ ದಿನಾಂಕ, ಅಂದರೆ ಅಕ್ಟೋಬರ್ 2, 2025ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
'ಕಾಂತಾರ: ಅಧ್ಯಾಯ 1' ಕದಂಬರ ಆಳ್ವಿಕೆಯ ಹಿನ್ನೆಲೆಯಲ್ಲಿ ನಡೆಯಲಿದ್ದು, ರಿಷಬ್ ಶೆಟ್ಟಿ ಸೂಪರ್ ಹ್ಯೂಮನ್ ಪವರ್ ಹೊಂದಿರುವ ನಾಗ ಸಾಧುವಿನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿದೆ. ಚಿತ್ರದಲ್ಲಿ ಜಯರಾಮ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ರಿಷಬ್ ಅವರೇ ಬರೆದು, ನಿರ್ದೇಶಿಸುವ ಜೊತೆಗೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಜಾನಪದ, ಆ್ಯಕ್ಷನ್, ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯಂತಹ ಅಂಶಗಳ ಮಿಶ್ರಣವಾಗಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಂತೆ, ಇಂದು ಅನಾವರಣಗೊಂಡಿರುವ ಪೋಸ್ಟರ್ ಸಿನಿಮಾ ಸುತ್ತಲಿನ ಉತ್ಸಾಹ, ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.