ಪ್ರ : ನಾನು ಕಾಲೇಜು ಸಮಯದಲ್ಲಿ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೆ. ಆದರೆ ಎಂದೂ ಅವನ ಮುಂದೆ ಪ್ರೀತಿಯನ್ನು ಹೇಳಿಕೊಳ್ಳಲು ಆಗಲಿಲ್ಲ. ಆ ಬಳಿಕ ನನಗೆ ಮನೆಯವರು ಬೇರೆ ಒಬ್ಬ ಹುಡುಗನನ್ನು ನೋಡಿ ಮದುವೆ ಮಾಡಿದರು. ಗಂಡ ನನ್ನ ಬಗ್ಗೆ ಕೇರ್ ಮಾಡುತ್ತಾರೆ. ಹೀಗಾಗಿ ನನ್ನ ಜೀವನದಲ್ಲಿ ನಾನು ಬಹಳ ಖುಷಿಯಿಂದಿದ್ದೆ. ಆದರೆ ಇತ್ತೀಚೆಗೆ ಒಂದು ದಿನ ನನ್ನ ಜೀವನದಲ್ಲಿ ಬಿರುಗಾಳಿ ಎದ್ದಿತು. ಅದೊಂದು ದಿನ ಫೇಸ್ ಬುಕ್ ನಲ್ಲಿ ಆ ಹುಡುಗನ ಮೆಸೇಜ್ ಬಂತು. ಅವನು ನನ್ನ ಜೊತೆಗೆ ಮಾತಾಡಲು ಇಚ್ಛಿಸಿದ. ನನಗೆ ನನ್ನ ಮನಸ್ಸಿನಲ್ಲಿ ಹುದುಗಿದ್ದ ಪ್ರೀತಿ ಮತ್ತೆ ಜಾಗೃತವಾಯಿತು. ನಾನು ತಕ್ಷಣವೇ ಅವನ ಮೆಸೇಜ್ ಗೆ ಉತ್ತರಿಸಿಬಿಟ್ಟೆ. ಫೇಸ್ ಬುಕ್ ನಲ್ಲಿ ನನ್ನ ಮತ್ತು ಅವನ ಸ್ನೇಹ ಉತ್ತುಂಗಕ್ಕೇರತೊಡಗಿತು. ಬಿಡುವಿನ ವೇಳೆಯಲ್ಲಿ ನಾನು ಅವನ ಜೊತೆಗೆ ಹರಟುತ್ತಿದೆ. ಕ್ರಮೇಣ ನಮ್ಮಿಬ್ಬರ ನಡುವಿನ ಸಂಕೋಚದ ಎಲ್ಲೆಗಳು ಮೀರತೊಡಗಿದವು. ಅದೊಂದು ದಿನ ಅವನು ನನಗೆ ಏಕಾಂಗಿಯಾಗಿ ಭೇಟಿಯಾಗಲು ಹೇಳಿದ. ಅವನ ಉಪಾಯ ಏನಿರಬಹುದು? ಎಂದು ನನಗೆ ಗೊತ್ತು. ಆದರೆ ನನ್ನ ಒಳಮನಸ್ಸು ಅವನ ಜೊತೆ ಹೆಜ್ಜೆ ಹಾಕಲು ಪ್ರೇರೇಪಿಸುತ್ತಿದೆ. ನಾನು ಏನು ಮಾಡಬೇಕು ತಿಳಿಸಿ.
ಉ : ಮೊದಲ ಪ್ರೀತಿಯನ್ನು ಯಾರೂ ಮರೆಯುವುದಿಲ್ಲ ಎಂಬುದು ಸತ್ಯ. ಆದರೆ ಜೀವನ ಮುಂದೆ ಮುಂದೆ ಸಾಗಿದಾಗ, ಪುನಃ ಅದೇ ದಾರಿಗೆ ಬರುವುದು ಮೂರ್ಖತನದ ವಿಷಯವೇ ಸರಿ. ಅಂದಹಾಗೆ ನಿಮಗೆ ನಿಮ್ಮ ಪತಿಯ ಬಗ್ಗೆ ಯಾವುದೇ ದೂರು ಇಲ್ಲ. ಇಂತಹದರಲ್ಲಿ ಮಾಜಿ ಪ್ರೇಮಿಯ ಜೊತೆ ಪುನಃ ಸಂಬಂಧ ಬೆಸೆದುಕೊಳ್ಳುವುದು ತೊಂದರೆಗಳನ್ನು ಮೈಮೇಲೆ ಎಳೆದುಕೊಂಡಂತೆ. ನೀವು ಆ ಹುಡುಗನಿಗೆ, ನಾನು ನಿನ್ನೊಂದಿಗೆ ಆರೋಗ್ಯಕರ ಸ್ನೇಹ ಮಾತ್ರ ಮುಂದುವರಿಸಲು ಇಷ್ಟಪಡುತ್ತೇನೆ ಎಂದು ಸ್ಪಷ್ಟಪಡಿಸಿ. ಅದು ನಿಮ್ಮ ಜೀವನಕ್ಕೆ ಏಕತಾನತೆಯ ಬೇಸರ ನೀಗಿಸಿ ನೆಮ್ಮದಿ ನೀಡುವಂತಾಗಬೇಕು. ಅದು ಬಿಟ್ಟು ನೀವು ಆ ವ್ಯಕ್ತಿಯ ಜೊತೆ ದೈಹಿಕ ಸಂಬಂಧ ಬೆಳೆಸಿದರೆ ನಿಮ್ಮ ವೈವಾಹಿಕ ಜೀವನಕ್ಕೆ ಅನ್ಯಾಯ ಮಾಡಿಕೊಂಡಂತೆ. ಹೀಗಾಗಿ ವಿಳಂಬ ಮಾಡದೆ ದ್ವಂದ್ವವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ, ನಿಮ್ಮ ಮಾಜಿ ಪ್ರೇಮಿಗೆ ಈ ಕುರಿತಂತೆ ನಿಮ್ಮ ನಿರ್ಧಾರ ತಿಳಿಸಿ.