ದೆಹಲಿ ಸಮೀಪದ ಗುರುಗ್ರಾಮದ ಸೆಕ್ಟರ್ 57ರ ಸುಶಾಂತ್ ಲೋಕ್ ಪ್ರದೇಶದಲ್ಲಿ ತಂದೆಯಿಂದಲೇ ಹತ್ಯೆಯಾದ ರಾಷ್ಟ್ರೀಯ ಮಟ್ಟದ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಬಗ್ಗೆ ದೇಶಾದ್ಯಂತ ವಿಷಾದ ವ್ಯಕ್ತವಾಗುತ್ತಿದೆ.
ರಾಧಿಕಾ ಕೊಲೆ ಮಾಡಿದ ಆರೋಪದ ಮೇಲೆ ಆಕೆಯ ತಂದೆ ದೀಪಕ್ ಯಾದವ್ (49) ನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 10ರಂದು 5 ಗಂಟೆ ಸುಮಾರಿಗೆ ಒಂದನೇ ಮಹಡಿಯ ಕೋಣೆಯಲ್ಲಿ 25 ವರ್ಷದ ರಾಧಿಕಾ ಅದೇನೋ ತಡಕಾಡುತ್ತಿದ್ದರು ಎನ್ನಲಾಗಿದೆ, ಸದ್ದಿಲ್ಲದೆ ಹಿಂದಿನಿಂದ ಬಂದ ದೀಪಕ್ ಯಾದವ್, ಆಕೆಯ ಬೆನ್ನಿಗೆ ರಿವಾಲ್ವರ್ನಿಂದ 5 ಸುತ್ತು ಗುಂಡು ಹಾರಿಸಿದ್ದಾರೆ. ನೆಲಮಹಡಿಯ ಅಡುಗೆ ಕೋಣೆಯಲ್ಲಿದ್ದ ತಾಯಿ ಮಂಜು ಯಾದವ್ ಬಂದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ರಾಧಿಕಾ ಮೃತಪಟ್ಟಿದ್ದರು ಎನ್ನಲಾಗಿದೆ.
ರಾಧಿಕಾ ಯಾದವ್ ಅವರನ್ನು ಹತ್ಯೆ ಮಾಡಿದ ತಂದೆ ದೀಪಕ್ ಯಾದವ್, ನನ್ನ ಆದಾಯದಲ್ಲಿ ಬದುಕುತ್ತಿದ್ದಿಯಾ ಅಂತ ಆಗಾಗ್ಗೆ ನಿಂದಿಸುತ್ತಿದ್ದ ಕಾರಣ ಆಕೆ ಮೇಲೆ ಗುಂಡು ಹಾರಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಶುಕ್ರವಾರ ಪೊಲೀಸರು ಮಾಜಿ ಟೆನಿಸ್ ಆಟಗಾರ್ತಿ ರಾಧಿಕಾ ಯಾದವ್ ಅವರ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಘಟನೆ ನಡೆದಾಗ ಅವರ ತಾಯಿ ಏನು ಮಾಡುತ್ತಿದ್ದರು ಎಂಬುದನ್ನು ಸಹ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮೃತ ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಅವರ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಘಟನೆ ನಡೆದಾಗ ದೀಪಕ್, ಅವರ ಪತ್ನಿ ಮತ್ತು ಮಗಳು ಮಾತ್ರ ಮನೆಯ ಮೊದಲ ಮಹಡಿಯಲ್ಲಿದ್ದರು. ಅವರ ಮಗ ಧೀರಜ್ ಆ ಸಮಯದಲ್ಲಿ ಅಲ್ಲಿ ಇರಲಿಲ್ಲ ಎಂದು ಮೃತ ರಾಧಿಕಾ ಚಿಕ್ಕಪ್ಪ ಕುಲದೀಪ್ ಯಾದವ್ ಪೊಲೀಸರಿಗೆ ಹೇಳಿದ್ದಾರೆ.
ಪೊಲೀಸರ ಪ್ರಕಾರ, ದೀಪಕ್ ಕನಿಷ್ಠ ಐದು ಗುಂಡುಗಳನ್ನು ಹಾರಿಸಿದ್ದು, ಅದರಲ್ಲಿ ಮೂರು ಗುಂಡುಗಳು ರಾಧಿಕಾ ಅವರ ಬೆನ್ನಿಗೆ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
“ರಾಧಿಕಾ ತುಂಬಾ ಒಳ್ಳೆಯ ಟೆನಿಸ್ ಆಟಗಾರ್ತಿ ಮತ್ತು ಅವರು ಹಲವಾರು ಟ್ರೋಫಿಗಳನ್ನು ಗೆದ್ದಿದ್ದರು. ಅವರನ್ನು ಏಕೆ ಕೊಲೆ ಮಾಡಲಾಯಿತು ಎಂದು ನನಗೆ ಆಶ್ಚರ್ಯವಾಗಿದೆ. ನನ್ನ ಸಹೋದರನ ಬಳಿ ಪರವಾನಗಿ ಪಡೆದ .32 ಬೋರ್ ರಿವಾಲ್ವರ್ ಇದೆ. ಅದು ಅಲ್ಲಿ ಬಿದ್ದಿತ್ತು” ಎಂದು ರಾಧಿಕಾ ಅವರ ಚಿಕ್ಕಪ್ಪ ಪೊಲೀಸರಿಗೆ ತಿಳಿಸಿದ್ದಾರೆ.ಪೊಲೀಸರಿಗೆ ನೀಡಿದ ಅಧಿಕೃತ ಹೇಳಿಕೆಯಲ್ಲಿ, ರಾಧಿಕಾ ನಡೆಸುತ್ತಿದ್ದ ಟೆನಿಸ್ ಅಕಾಡೆಮಿ ಸಂಬಂಧ ತಂದೆ ಮತ್ತು ಮಗಳ ನಡುವೆ ಜಗಳಕ್ಕೆ ಕಾರಣವಾಗಿತ್ತು. ರಾಧಿಕಾ ಟೆನಿಸ್ ಅಕಾಡೆಮಿಯನ್ನು ನಡೆಸುತ್ತಿದ್ದರು ಮತ್ತು ಅದರಿಂದ ಬಂದ ಹಣದಲ್ಲಿ ಅವರ ತಂದೆ ಜೀವನ ನಡೆಸುತ್ತಿದ್ದರು” ಎಂದು ಗುರುಗ್ರಾಮ ಪೊಲೀಸ್ ವಕ್ತಾರ ಸಂದೀಪ್ ಸಿಂಗ್ ಹೇಳಿದ್ದಾರೆ.
“ ಮಗಳ ಸಂಪಾದನೆಯಲ್ಲಿ ಅಪ್ಪ ಬದುಕುತ್ತಿದ್ದಾನೆ.” ಎಂಬ ಕುಹಕದ ಮಾತುಗಳಿಂದ ಬೇಸತ್ತು ಮಗಳನ್ನು ಗುಂಡಿಕ್ಕಿ ಕೊಂದಿದ್ದಾಗಿ ರಾಧಿಕಾ ಯಾದವ್ ತಂದೆ ದೀಪಕ್ ಯಾದವ್ ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾರೆ.
ವಿಚಾರಣೆ ವೇಳೆ ಹತ್ಯೆಗೆ ಕಾರಣ ವಿವರಿಸಿರುವ ಆರೋಪಿ ತಂದೆ ದೀಪಕ್ ಯಾದವ್ “ಮಗಳು ದುಡಿಮೆಯಲ್ಲಿ ಬದುಕುತ್ತಿದ್ದೀಯ ಎಂಬಂತೆ ಜನ ಮೂದಲಿಸುತ್ತಿದ್ದರು. ನಾನೇ ದುಡ್ಡುಕೊಟ್ಟು ಆರಂಭಿಸಿದ್ದ ಟೆನಿಸ್ ಅಕಾಡೆಮಿ ಮುಚ್ಚುವಂತೆ ಮಗಳಿಗೆ ಸೂಚಿಸಿದ್ದೆ. ಆದರೆ, ಮಗಳು ನನ್ನ ಮಾತು ಕೇಳದೆ ಅಕಾಡೆಮಿ ಮುಂದುವರಿಸಿದ್ದಳು. ಸುಮಾರು 2 ಕೋಟಿ ರೂ. ಬಂಡವಾಳ ಹೂಡಲಾಗಿದೆ. ನೀವು ಹೇಳಿದಂತೆ ಮುಚ್ಚಲು ಸಾಧ್ಯವಿಲ್ಲ ಎಂದಿದ್ದಳು. ಇದೇ ವಿಚಾರವಾಗಿ ಮೂರು ದಿನಗಳಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಘಟನೆ ದಿನ ಮತ್ತೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಮಗಳಿಗೆ ಬುದ್ಧಿ ಹೇಳಿದೆ. ಈ ಸಂದರ್ಭ ಇಬ್ಬರ ನಡುವೆ ವಾಗ್ವಾದ ನಡೆಯಿತು. ಕೋಪಗೊಂಡು ಮಗಳಿಗೆ ಗುಂಡಿಕ್ಕೆ ಹತ್ಯೆ ಮಾಡಿದೆ” ಎಂದು ವಿವರಣೆ ನೀಡಿದ್ದಾರೆ.
ಮತ್ತೊಂದು ಮೂಲದ ಪ್ರಕಾರ ಕಳೆದ ವರ್ಷ ಯುವಕನೊಂದಿಗೆ ರಾಧಿಕಾ ಯಾದವ್ ಮ್ಯೂಸಿಕ್ ವಿಡಿಯೋ ಒಂದರಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಾಗೂ ಟೆನಿಸ್ ಬಿಡುವು ನೀಡಿ ನಟನೆಗೆ ಹೋಗುತ್ತಾಳೆ ಎಂಬುದಕ್ಕೆ ದೀಪಕ್ ಕೋಪಗೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ರಾಧಿಕಾ ಟೆನಿಸ್ ಆಟದಿಂದ ಗುರುತಿಸಿಕೊಂಡಿದ್ದರಿಂದ ಗುರುಗ್ರಾಮದಲ್ಲಿ ಸ್ಥಳೀಯ ಟೆನಿಸ್ ಅಕಾಡೆಮಿ ತೆರೆದಿದ್ದರು. ಇದರಿಂದ ಸಾಕಷ್ಟು ಆದಾಯ ಸಂಪಾದಿಸುತ್ತಿದ್ದರು. ಮನೆಗೂ ಹಣಕಾಸಿನ ಸಾಹಾಯ ಮಾಡುತ್ತಿದ್ದರು. “ಮಗಳ ಸಂಪಾದನೆಯಿಂದ ತಂದೆ ಬದುಕುತ್ತಿದ್ದಾನೆ” ಎಂದು ದೀಪಕ್ ಬಗ್ಗೆ ನೆರೆಹೊರೆಯವರು ಕುಹಕವಾಡುತ್ತಿದ್ದರು. ಹಾಗಾಗಿ ಮಗಳ ಬಗ್ಗೆ ದೀಪಕ್ ಯಾದವ್ ಕಳೆದ ಕೆಲ ತಿಂಗಳುಗಳಿಂದ ಮುನಿಸಿಕೊಂಡಿದ್ದರು. ಹತ್ಯೆ ಮಾಡಲು ಈ ಅಂಶಗಳೇ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂಪೂರ್ಣ ವಿಚಾರಣೆ ನಂತರ ನಿಖರ ಕಾರಣಗಳು ತಿಳಿಯಲಿದೆ ಎಂದು ಗುರುಗ್ರಾಮ ಪೊಲೀಸ್ ಕಮಿಷನರೇಟ್ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಂದೀಪ್ ಸಿಂಗ್ ತಿಳಿಸಿದ್ದಾರೆ.
ರಾಧಿಕಾ ರಾಷ್ಟ್ರೀಯ ಟೆನಿಸ್ ಆಟಗಾರ್ತಿಯಾಗಿ ಖ್ಯಾತಿ ಪಡೆದಿದ್ದು, ಹಲವಾರು ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲೂ ಭಾಗವಹಿಸಿದ್ದರು.