ರಾಘವೇಂದ್ರ ಅಡಿಗ ಎಚ್ಚೆನ್.

ಹಿರಿಯ ನಟಿ ಬಿ.ಸರೋಜಾ ದೇವಿ ಇನ್ನಿಲ್ಲ – ವಯೋಸಹಜ ಕಾಯಿಲೆಯಿಂದ ಬಳಲ್ತಿದ್ದ ನಟಿ – ಹಿರಿಯ ನಟಿ ಬಿ.ಸರೋಜಾದೇವಿ(87) ನಿಧನರಾಗಿದ್ದಾರೆ.  ಅವರು ಯಶವಂತಪುರದಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಹುಭಾಷಾ ತಾರೆ, ಅಭಿನಯ ಸರಸ್ವತಿ ಬಿ. ಸರೋಜದೇವಿ ರವರು ಕನ್ನಡದ ಹಿರಿಯ ತಾರೆಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಬೆಳಗಿದ ಅಭಿನೇತ್ರಿ.  ತಮಿಳಿನಲ್ಲಿ “ಕನ್ನಡದ ಪಾರಿವಾಳ” ಎಂದು ಹೆಸರು ಪಡೆದಿದ್ದರು. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದ ಬಡ ಕುಟುಂಬದಲ್ಲಿ 1938ರ ಜನವರಿ 7ರಂದು ಜನಿಸಿದ ಸರೋಜಾದೇವಿ ಅವರಿಗೆ ಬಾಲ್ಯದಿಂದಲೇ ಲಲಿತಕಲೆಗಳ ಬಗ್ಗೆ ಆಸಕ್ತಿ ಇತ್ತು. ಇವರಲ್ಲಿದ್ದ ಪ್ರತಿಭೆಯನ್ನು ಮೊದಲು ಗುರುತಿಸಿದವರು ಹೊನ್ನಪ್ಪ ಭಾಗವತರು.

saroja1

ಇವರ ಮೊದಲ ಚಿತ್ರ  ಹೊನ್ನಪ್ಪ ಭಾಗವತರ ರವರ ೧೯೫೫ ರಲ್ಲಿ ತೆರೆ ಬಂದ ಮಹಾಕವಿ ಕಾಳಿದಾಸ. ಆದರೆ ನಮಗೆ ಬಹುವಾಗಿ ನೆನಪಾಗುವುದು ಬಿ. ಸರೋಜಾದೇವಿ ಅಂದರೆ ಕಿತ್ತೂರು ರಾಣಿ ಚೆನ್ನಮ್ಮನ ಪಾತ್ರ. ಅರವತ್ತರ ದಶಕದಲ್ಲಿ ಅವರು ನಟಿಸಿರುವ ಕಪ್ಪು-ಬಿಳುಪು ಚಿತ್ರಗಳು, ಇಂದಿಗೂ ಪುಳಕ ಹುಟ್ಟಿಸುತ್ತವೆ. ತಮ್ಮ ಅಭಿನಯ ಕೌಶಲ್ಯದಿಂದ ಬಹುಬೇಗ ಚತುರ್ಭಾಷಾ ತಾರೆಯಾದವರು..!

saroja

ವರನಟರಾದ ಡಾ.ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಎ. ನಾಗೇಶ್ವರರಾವ್, ಉದಯಕುಮಾರ್, ಎನ್.ಟಿ. ರಾಮರಾವ್, ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್, ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮಿಕಪೂರ್, ಸುನಿಲ್‌ ದತ್ ಮೊದಲಾದವರೊಂದಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಬಬ್ರುವಾಹನ, ಕಿತ್ತೂರು ಚೆನ್ನಮ್ಮ, ಲಕ್ಷ್ಮಿ ಸರಸ್ವತಿ, ಗೃಹಿಣಿ, ಶ್ರೀ ರೇಣುಕಾದೇವಿ ಮಹಾತ್ಮೆ, ಭಾಗ್ಯವಂತರು, ಚಿರಂಜೀವಿ, ಶ್ರೀ ರಾಘವೇಂದ್ರ ಕರುಣೆ ಅವರ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು. ೧೯೬೯ ರಲ್ಲಿ ಪದ್ಮಶ್ರೀ, ೧೯೯೨ ರಲ್ಲಿ ಪದ್ಮಭೂಷಣ ಪಡೆದರು.  ಸರೋಜಾದೇವಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರೋಜಾ ದೇವಿ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು. 2019ರಲ್ಲಿ ರಿಲೀಸ್ ಆದ ಪುನೀತ್ ರಾಜ್ಕುಮಾರ್ ನಟನೆಯ ‘ನಟಸಾರ್ವಭೌಮ’ ಅವರು ನಟಿಸಿದ ಕೊನೆಯ ಚಿತ್ರವಾಗಿತ್ತು.  ಸರೋಜಾ ಅವರು 1967ರಲ್ಲಿ ಹರ್ಷ ಅವರನ್ನು ವಿವಾಹ ಆದರು. 1986ರಲ್ಲಿ ಪತಿ ನಿಧನ ಹೊಂದಿದರು. ಈಗ ಪತಿ ಹರ್ಷ ಸಮಾಧಿ ಪಕ್ಕದಲ್ಲೇ ಸರೋಜಾ ಅವರ ಅಂತ್ಯಕ್ರಿಯೆ ನಡೆಯಲಿದೆ. ಕೊಡಿಗೆಹಳ್ಳಿಯ ತೋಟದಲ್ಲಿ ಒಕ್ಕಲಿಗೆ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ