– ರಾಘವೇಂದ್ರ ಅಡಿಗ ಎಚ್ಚೆನ್.
ಹನುಮಂತನ ಸಾಹಸಗಾಥೆಯನ್ನು ಹೊಂದಿರುವ ‘ಗದಾಧಾರಿ ಹನುಮಾನ್ ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವ ಈ ಚಿತ್ರಕ್ಕೆ ರೋಹಿತ್ ಕೊಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿರಭ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜಂಟಿಯಾಗಿ ಬಂಡವಾಳ ಹೂಡುತ್ತಿದ್ದಾರೆ.
ಟೀಸರ್ ಬಿಡುಗಡೆ ಕಾರ್ಯಕ್ರಮ ಮಹಾಲಕ್ಷ್ಮಿ ಲೇಔಟ್ ವೀರಾಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ಸ್ವಾಮಿ ದೇವಸ್ಥಾನದಲ್ಲಿ ಬಿಡುಗಡೆಯಾಗಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ಎಂ. ನರಸಿಂಹಲು, ಶಿಲ್ಪಾ ಶ್ರೀನಿವಾಸ್, ಎಂ.ಎನ್. ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರದ ನಿರ್ಮಾಪಕರು, ನಿರ್ದೇಶಕರು ಉಪಸ್ಥಿತರಿದ್ದರು.
ಗದಾಧಾರಿ ಹನುಮಾನ್ ಒಂದು ಸಾಹಸಮಯ, ಹಾರರ್-ಥ್ರಿಲ್ಲರ್ ಫ್ಯಾಂಟಸಿ ಚಿತ್ರವಾಗಿದ್ದು, ದೈವತ್ವ ಮತ್ತು ರಾಕ್ಷಸತ್ವದ ಕಥಾಹಂದರವನ್ನು ಹೊಂದಿದೆ. ದುಬಾರಿ ವೆಚ್ಚದ ಗ್ರಾಫಿಕ್ಸ್, ವಿಎಫ್‌ಎಕ್ಸ್, ಮತ್ತು ಸೌಂಡ್ ಎಫೆಕ್ಟ್ಸ್‌ನೊಂದಿಗೆ ತಯಾರಾದ ಈ ಚಿತ್ರವು ತಾಂತ್ರಿಕ ನೈಪುಣ್ಯತೆಯಿಂದ ಕೂಡಿದೆ.
‘ತಾರಕಾಸುರ’ ಖ್ಯಾತಿಯ ರವಿ ಈ ಚಿತ್ರದ ನಾಯಕ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ ಮುಂತಾದವರು ನಟಿಸುತ್ತಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಚಿತ್ರಗ್ರಹಣ , ಸಿ.ಎನ್.ಕಿಶೋರ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಹಂಪಿ, ಗಂಗಾವತಿ, ಅಂಜನಾದ್ರಿ, ಕಿತ್ತೂರು, ಹೊನ್ನಾಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಟೀಸರ್‌ನ ಮೊದಲ ನೋಟವು ಚಿತ್ರದ ಭವ್ಯತೆ ಮತ್ತು ತಾಂತ್ರಿಕ ಗುಣಮಟ್ಟವನ್ನು ಎತ್ತಿ ತೋರಿಸಿದೆ. ಚಿತ್ರತಂಡವು ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಸನ್ನಾಹದಲ್ಲಿದೆ.