ವ್ಯಂಗ್ಯ – ಪೂರ್ಣಿಮಾ ಆನಂದ್
ಇದೆಂಥ ವಿಡಂಬನೆ! ನಿಜಕ್ಕೂ ಮನೆ ಮನೆ ಕಥೆ ಅಂದ್ರೂ ಅಡ್ಡಿಯಿಲ್ಲ….. ನಾವು ಹೊರಗಿನವರ ಮೇಲೆ ಇಂಪ್ರೆಶನ್‌ಮೂಡಿಸಬಹುದೇ ಹೊರತು ಮನೆಯವರ ಮೇಲಲ್ಲ ಎಂಬುದು ನುಂಗಲಾರದ ಬಿಸಿ ತುಪ್ಪ……….ಈ ದಿನ ಮನೆಗೆಲಸಗಳನ್ನೆಲ್ಲ ಬೇಗ ಬೇಗ ಮುಗಿಸಿ ಪೂರೈಸಿದೆ, ಅಬ್ಬಾ……. ಈಗಲಾದರೂ ಜೀವಕ್ಕೆ ತುಸು ರಿಲ್ಯಾಕ್ಸೇಷನ್ ಕೊಡೋಣ ಅನ್ನಿಸಿತು. ಸ್ವಲ್ಪ ಹೊತ್ತು ಸೋಫಾ ಮೇಲೆ ಹಾಗೇ ಅಡ್ಡವಾಗಿ, ಐಪ್ಯಾಡ್ ನಲ್ಲಿ ನನ್ನ ಫೇರಿಟ್ ಶೋ `ಮ್ಯಾರೀಡ್ ವುಮನ್’ ನೋಡೋಣ ಅಂದುಕೊಂಡೆ. ಹಾಗೆ ಅಂದುಕೊಳ್ಳುತ್ತಲೇ ಕಿವಿಗೆ ಇಯರ್ ಫೋನ್ ಸಿಗಿಸಿಕೊಂಡು, ಶ್ರೀರಂಗನಾಥನ ಪೋಸ್ ನೀಡಲು ತಯಾರಾಗತೊಡಗಿದೆ. ಬಂದೇಬಿಟ್ಲು ಈ ಮನೆಯ ಮಹಾತಾಯಿ….. ಅಂದ್ರೆ ನಮ್ಮ ಮನೆ ರೇಡಿಯೋ ರಂಗಿ ಅರ್ಥಾತ್ ನನ್ನ ಮಗಳು ಮೋನಿಕಾ. ಅಮ್ಮಂದಿರಿಗೆ ಲೇಶಮಾತ್ರದ ಬಿಡುವು ಸಿಕ್ಕಿದೆ ಎಂದು ಈ ಹೆಮ್ಮಾರಿಯರಿಗೆ ಅದು ಹೇಗೆ ತಿಳಿದುಹೋಗುತ್ತದೋ ಏನೋ….? ಅಂತೂ ಬಂದು ಪಕ್ಕದಲ್ಲೇ ವಕ್ರಿಸಿಕೊಂಡಳು.
“ಸರ್ಕೋ ಮಮ್ಮಿ……. ನಾನೂ ಸ್ವಲ್ಪ ಇಲ್ಲೇ ಹಾಗೇ ಮಲಗುತ್ತೇನೆ,” ಎಂದು ಒತ್ತರಿಸಿಕೊಂಡಳು.
“ಅದು ಸರಿ….. ಏನು ನೋಡ್ಬೇಕೂಂತ ನಿನ್ನ ಐಡಿಯಾ?” ಮಗಳ ಆದೇಶ.
“ಮ್ಯಾರೀಡ್ ವುಮನ್!”
ಮೋನಿಗೆ ಕರೆಂಟ್ ಹೊಡೆದಂತಾಯ್ತು. “ಏನಂದೆ? ನಾನು ನಿನಗೆ ಹೇಳಿದ ಶೋ `ಮೆಯ್ಡ್’ ನೋಡೋದಿಲ್ವೇ? ಅದನ್ನು ಬಿಟ್ಟು ಹೋಗಿ ಹೋಗಿ ಈ…..”
“ಅಯ್ಯೋ ಹೋಗೇ…… ಅದನ್ನು ಆಮೇಲೆ ನೋಡಿದ್ರಾಯ್ತು.”
“ನನಗೆ ಗೊತ್ತಿತ್ತು ಬಿಡು ಮಮ್ಮಿ….. ಆ ದಡಿಯಾ ಆದಿತ್ಯ ಹೇಳಿದ್ದನ್ನೇ ನೀನು ಮೊದಲು ನೋಡ್ತೀಯಾ ಅಂತ….” ಮಗಳು ಅನಗತ್ಯವಾಗಿ ಮುಖ ಊದಿಸಿಕೊಂಡಿದ್ದಳು.
“ಅವರೇ….. ಬೇಗ ಎಲ್ಲಿ ನೋಡ್ಲಿಕ್ಕೆ ಬಿಡ್ತೀರೇ ನೀವು ಮಿನಿ ರಾಕ್ಷಸರು….. ಹೋಗ್ಲಿ ಅಂದ್ರೆ ನನಗೆ ನೋಡಲಿಕ್ಕೆ ಪುರಸತ್ತಾದರೂ ಎಲ್ಲಿ?”
“ಮಮ್ಮಿ, ಅದೆಲ್ಲ ನಂಗೆ ಗೊತ್ತಿಲ್ಲ….. ಮೊದಲು ನಾನು ಹೇಳಿದಂತೆ ನೀನು `ಮೆಯ್ಡ್’ ನೋಡಬೇಕು. ಆಮೇಲೆ ಬೇರೇನಾದ್ರೂ ನೋಡ್ಕೋ ಬಿಟ್ಕೋ….ಇಂಥ ಒಳ್ಳೊಳ್ಳೆ ಶೋಗಳ ಬಗ್ಗೆ ನನ್ನ ತರಹ ಯಾವ ಮಗಳಾದಳು ತನ್ನ ತಾಯಿಗೆ ತಿಳಿ ಹೇಳುತ್ತಾಳಾ….. ಹೇಳು ಸ್ವಲ್ಪ ನೋಡೋಣ….. ನಿನಗಂತೂ ಅವೆಲ್ಲದಕ್ಕೂ ವ್ಯಾಲ್ಯೂನೇ ಇಲ್ಲ…… ನಾನು ಎಷ್ಟು ಕಷ್ಟಪಟ್ಟು ನನ್ನ ಗೆಳತಿಯರು, ಅವರ ಅಮ್ಮಂದಿರ ಬಳಿ ಮಾತಾಡಿ, ವಿಚಾರಿಸಿ, ಡೀಟೈಲ್ಸ್ ಕಲೆಕ್ಟ್ ಮಾಡಿ, ಡಿಸ್ಕಸ್ ಮಾಡಿಕೊಂಡು ಬಂದು ಹೇಳಿದ್ರೆ….. ಹೀಗಾ ನೀನು ಮಾಡೋದು? ನನ್ನ ತರಹ ಈ ಒಳ್ಳೊಳ್ಳೆ ಧಾರಾವಾಹಿಗಳ ಬಗ್ಗೆ ನಿನಗೆ ಬೇರೆ ಯಾರು ತಾನೇ ಇನ್ ಪರ್ಮೇಶನ್ ಕೊಡ್ತಾರೆ ಹೇಳು…..? ನಿನ್ನಂಥವರಿಗೆ ಹೇಳಕ್ಕೆ ಹೋಗ್ತೀನಲ್ಲ ಮುಖ್ಯ ನನಗೆ ಬುದ್ದಿ ಇಲ್ಲ!” ಎಂದು ದೊಡ್ಡ ಮುದುಕಿಯಂತೆ ತಲೆಯ ಮೇಲೆ ಕೈ ಹೊತ್ತು ಕುಳಿತಳು.
“ಅಯ್ಯೋ….. ಮೋನಿ ಡಿಯರ್, ನನ್ನ ಎಲ್ಲಾ ಫ್ರೆಂಡ್ಸ್ `ಮ್ಯಾರೀಡ್ ವುಮನ್’ ನೋಡಿಬಿಟ್ಟಿದ್ದಾರೆ ಬೇಬಿ. ಅವರ ಮುಂದೆ ನಾನು ಇನ್ನೂ ಅದನ್ನು ನೋಡಿಲ್ಲ ಅಂತ ಹೇಳಿಕೊಂಡ್ರೆ, ನನ್ನ ಮಗಳಾದ ನಿನಗೆ ತಾನೇ ಶೇಮ್ ಶೇಮ್…..? ಸ್ವಲ್ಪ ಇದನ್ನು ನೋಡಕ್ಕೆ ಬಿಡಮ್ಮ ಪುಟ್ಟಾ…..”
“ಅಂದ್ರೆ…. ನಾನು ಹೇಳಿದ ಧಾರಾವಾಹಿಗಳಿಗೆ ತಲೆ ಬಾಲ ಇಲ್ಲ ಅಂತ ಅರ್ಥವೇ?” ಅವಳಿಗೆ ಮೈ ಮೇಲೆ `ಕಾಂತಾರ’ ಇಳಿದು ಬಂದಿತ್ತು ಅಂತ್ಲೇ ಕಾಣಿಸುತ್ತೆ!
“ಅದಕ್ಕೆ ಯಾಕೆ ಅಷ್ಟು ಕೋಪ?” ಅವಳನ್ನು ಓಲೈಸಲು ಯತ್ನಿಸಿದೆ.
“ನನಗೆ ಗೊತ್ತು ಬಿಡು ಮಮ್ಮಿ. ಈಗ ಇದನ್ನು ನೋಡ್ತೀಯಾ, ಇದು ಮುಗಿಯುವಷ್ಟರಲ್ಲಿ ಆ ಆದಿ ಬಂದು ಏನೋ ಒಂದಷ್ಟು ಊದ್ತಾನೆ…. ನೀನು ಆಮೇಲೆ ಅದನ್ನೇ ನೋಡ್ಕೊಂಡು ಕೂತಿರ್ತೀಯಾ…..”
ಅವಳ ಇಷ್ಟದ ಧಾರಾವಾಹಿಯನ್ನು ನಾನು ಆನ್ ಮಾಡದಿದ್ದರೆ ಬಿಟ್ಟಾಳೆಯೇ ಈ ಮಹಾಮಾರಿ? ತಕ್ಷಣ ನನ್ನ ಕೈಯಿಂದ ಐಪ್ಯಾಡ್ ಕಿತ್ತುಕೊಂಡು `ಮೆಯ್ಡ್’ ಮೊದಲ ಕಂತು ಆನ್ ಮಾಡಿ ಅದನ್ನು ನನ್ನ ಕೈಗೆ ತುರುಕಿಯೇಬಿಟ್ಟಳು.
“ಮೊದಲು ಇದನ್ನು ನೋಡು ಮಮ್ಮಿ!” ಆರ್ಡರ್ ಮಾಡಿದ ಮೇಲೆಯೇ ಅವಳ ಜೀವಕ್ಕೆ ನೆಮ್ಮದಿ ಬಂದದ್ದು.ನನ್ನ ಬಳಿ ಇದ್ದ ಬಿಡುವಿನ ಸಮಯವೇ ಅತ್ಯಲ್ಪ. ಅದರಲ್ಲಿ ಈ ಮಹಾತಾಯಿ ಬಳಿ ವಾಗ್ವಾದ ಮಾಡುದರಲ್ಲಿ ಸುಮಾರು ವ್ಯರ್ಥವಾಗಿತ್ತು. ಅಂತೂ ವಿಧಿಯಿಲ್ಲದೆ ನಾನು `ಮೆಯ್ಡ್’ ಧಾರಾವಾಹಿಯನ್ನೇ ನೋಡತೊಡಗಿದೆ. ಅಂತೂ ಈ ದಿನ ನಾನು `ಮ್ಯಾರೀಡ್ ವುಮನ್’ ನೋಡಲು ಆಗಲೇ ಇಲ್ಲ. ಇದೇನು ಇವತ್ತಿನ ಹೊಸ ವಿಷಯವೇ? ಇವರುಗಳ ತಾಯಿಯಾದ ಕರ್ಮಕ್ಕೆ ಈ ಅಕ್ಕಾತಮ್ಮ ಇಬ್ಬರೂ ಬಂದು ಆಗಾಗ ನನ್ನ ಸತ್ವ ಪರೀಕ್ಷೆಗೆ ತೊಡಗುವರು.
10 ನಿಮಿಷ ನೋಡುವಷ್ಟರಲ್ಲಿ ಯಾಕೋ ಪಿಚ್ಚೆನಿಸಿ, ನಾನು ಅದನ್ನು ಬಿಟ್ಟು ನನ್ನ ಸ್ಥಿತಿಯ ವಿಶ್ಲೇಷಣೆಗೆ ತೊಡಗಿದೆ. ಈ ರೀತಿ ನಾನು ನೋಡಬೇಕು ಅಂದುಕೊಳ್ಳುವ ಸೀರಿಯಲ್ ಗಳ ವಾಚ್ ಲಿಸ್ಟ್ ಎಷ್ಟು ದೊಡ್ಡ ಪಟ್ಟಿಯಾಗಿರಬಹುದು ಎಂದು ಯೋಚಿಸತೊಡಗಿದೆ. ಬರೀ ಇವತ್ತು ನೋಡೋಣ ನಾಳೆ ನೋಡೋಣ…. ಅಂದುಕೊಳ್ಳುವುದೇ ಆಗಿಹೋಯ್ತು, ಒಂದನ್ನೂ ನೋಡಲು ಆಗಿರಲೇ ಇಲ್ಲ.ಈ ಮಕ್ಕಳಿದ್ದಾರಲ್ಲ…. ಇವರು ಕೊಡುವ ಕಾಟ ನನ್ನ ಆಜನ್ಮ ಶತ್ರುಗಳಿಗೂ ಬೇಡ! ಇವಕ್ಕೆ ಇಷ್ಟ ಬಂದದ್ದನ್ನು ಫ್ರೆಂಡ್ಸ್ ಜೊತೆ ನೋಡಿಕೊಂಡು ಬಂದುಬಿಡೋದು, ನಾನು ಅದನ್ನೇ ನೋಡಬೇಕು ಅಂತ ಗೋಳು ಹೊಯ್ದುಕೊಳ್ಳೋದು….. ಅವರಿಗೆ ಯಾದು ಚೆನ್ನಾಗಿದೆ,
ಬೆಸ್ಟ್ ಅನಿಸುತ್ತೋ ತಪ್ಪದೇ ನಾನೂ ಅದನ್ನೇ ನೋಡಬೇಕು! ಆದರೆ ಅವರಿಬ್ಬರ ಇಷ್ಟಾನಿಷ್ಟಗಳಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು.
ಇವರಿಬ್ಬರ ಪ್ರಕಾರ, ಇವರು ಹೇಳಿದ ಶೋ ಮಾತ್ರ ನಾನು ನೋಡಬೇಕು, ನನ್ನಿಷ್ಟದ್ದಲ್ಲ. ಎಲ್ಲಕ್ಕಿಂತ ದೊಡ್ಡ ಶಿಕ್ಷೆ ಅಂದ್ರೆ, ನನಗೆ ಆ ಶೋ ಇಷ್ಟವಾಗಲಿ ಬಿಡಲಿ, ಅದು ಬೊಂಬಾಟಾಗಿದೆ, ಸೂಪರ್ ಆಗಿದೆ, ಅದರ ಪಾತ್ರಗಳು ಆಹಾ ಓಹೋ ಅಂತ ಹೊಗಳಲೇಬೇಕು. ಇಲ್ಲದಿದ್ದರೆ ಆಕಾಶ ಭೂಮಿ ಒಂದು ಮಾಡಿ, `ಹೋ’ ಅಂತ ಹುಯಿಲೆಬ್ಬಿಸುತ್ತಿದ್ದರು. ಯಾವಾಗಲೋ ಒಂದು ಸಲ ಅಪ್ಪಿತಪ್ಪಿ ನಾನು “ಛೇ….. ಅದೇನೂ ಚೆನ್ನಾಗಿಲ್ಲ….. ಏನೋ ಸುಮಾರಾಗಿದೆ,” ಅಂದುಬಿಟ್ಟೆ, ನೋಡಬೇಕಿತ್ತು ಇವುಗಳ ಲಬೋ ಲಬೋ!
“ಛೇ….ಛೇ…. ನಿನ್ನ ಟೇಸ್ಟ್ ಭಲೇ ಕಳ್ಳಿ ಮಮ್ಮಿ….. ಈಗಿನ ಕಾಲದ ಮಾಡರ್ನ್ ಮಮ್ಮಿಯರ ತರಹ `ಔಟ್ ಆಫ್ ದಿ ಬಾಕ್ಸ್’ ಬಂದು ಆಲೋಚಿಸುವ. ಪೂರ್ವ ಕಾಲದ ಪುಟ್ಟಮ್ಮನ ತರಹ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸೀರಿಯಲ್ ಗಳಿಗೇ ಅಂಟಿ ಕೂರಬೇಡ. ನಿಮ್ಮಂಥವರಿಗೆ ಬುದ್ಧಿ ಕಲಿಸಬೇಕೆಂದೇ ಆ …… ಸೀರಿಯಲ್ ನ ಮಧ್ಯದಲ್ಲೇ ನಿಲ್ಲಿಸಿಬಿಟ್ಟರು. ಗೊತ್ತಾಯ್ತು ತಾನೇ? ಯಾವಾಗ ನೋಡಿದರೂ ಅಳುಮೂಂಜಿ ಸೀರಿಯಲ್ ನೋಡೋದೇ ಆಗೋಯ್ತು ನಿನ್ನಂಥ ಆಂಟಿಯವರದು. ಇಂದಿನ ಕಾಲಕ್ಕೆ ತಕ್ಕಂತೆ ಅಪ್ ಟು ಡೇಟ್ ಮಾಡರ್ನ್ ಮಮ್ಮಿಯಾಗಿರುವುದನ್ನು ಆ `ಕಿಟೀ ಪಾರ್ಟಿ’ ಆಂಟಿಗಳನ್ನು ನೋಡಿಯಾದರೂ ಕಲೀ!”
`ಅಯ್ಯೋ…. ಅಯ್ಯೋ….. ಅಯ್ಯೋ….. ಈ ಮಕ್ಕಳ ಬಾಯಲ್ಲಿ ಇಷ್ಟು ಹೀನಾಯವಾಗಿ ಅನ್ನಿಸಿಕೊಳ್ಳೋ ಹಾಗಾಯ್ತೆ ನನ್ನ ಬಾಳು?’
ಇವರುಗಳ ಫ್ರೆಂಡ್ಸ್ ಏನು ಹೇಳುತ್ತಾರೋ ಅದೇ ವೇದವಾಕ್ಯ. ನನ್ನ ಟೇಸ್ಟ್ ಮಾತ್ರ ಅಂತೆ. ಇವರುಗಳ ಟೇಸ್ಟ್ ಮಾತ್ರ ಇವರ ಈ ವಾದ ನಿಜಕ್ಕೂ ಬಹಳ ಅನ್ಯಾಯ. ಜನ ಹೊರಗಿನವರನ್ನು ಹೇಗಾದರೂ ಮೆಚ್ಚಿಸಬಹುದು, ಆದರೆ ಮನೆಯಲ್ಲೇ ಅಡಗಿರುವ ಇಂಥ ಮರಿ ಪಿಶಾಚಿಗಳನ್ನು ಹೇಗೆ ಮೆಚ್ಚಿಸೋದು? ಕಾಲೇಜು ದಿನಗಳಲ್ಲಿ ಅಂಥ ಕಷ್ಟಕರ ಪೇಪರ್ಸ್, ಮರ್ಕೆಂಟೈಲಾ, ಕಾಮರ್ಸ್‌ಪರೀಕ್ಷೆಗಳನ್ನು ಲೀಲಾಜಾಲವಾಗಿ ಎದುರಿಸಿದ್ದ ನನಗೆ, ಈ ಚಿಲ್ಟಾರಿಗಳ ಮುಂದೆ ಅದೇಕೋ ಬಾಯೇ ಹೊರಡಲ್ವಲ್ಲ…..?
ಕಳೆದ ವಾರ ನನ್ನ ಮಗರಾಯ ಹೇಳಿದ ಅಂತ `ಮಹಾರಾಣಿ’ಯ ಸೀಝನ್ 1 2 ಎರಡೂ ನೋಡಿದೆ, ಅದೇನೋ ಚೆನ್ನಾಗಿತ್ತು. ಆದರೆ ಈ ಚಂಡಿ ಚಾಮುಂಡಿ ಮುಂದೆ ಮಗನ ಬಳಿ ಹಾಗೆ ಹೇಳಲು ಸಾಧ್ಯವೇ? ಇವಳು ನನ್ನನ್ನು ಸುಮ್ಮನೇ ಬಿಟ್ಟಾಳೆಯೇ? ಮಕ್ಕಳಿಗೆ ಯಾವ ನಟನಟಿಯರ ಸೀರಿಯಲ್ಸ್ ಇಷ್ಟವೇ, ತಾಯಿಯಾದ ಕರ್ಮಕ್ಕೆ ನಾನೂ ಅದನ್ನು ನೋಡಲೇ ಬೇಕಿತ್ತು. ಅಷ್ಟು ಮಾತ್ರ ಸಾಲದು ಅಂತ, ಪ್ರತಿ ಕಂತು ಮುಗಿಯುವಾಗಲೂ `ಭಲೇ….ಭಲೇ…’ ಅಂತ ಹೊಗಳಲೇಬೇಕಿತ್ತು. ಜೊತೆಗೆ, “ಮಗು, ನೀನು ಹೇಳಿದ ಈ ಶೋ ನೋಡಿ ನಾನು ಧನ್ಯಳಾದೆ. ಇಲ್ಲದಿದ್ದರೆ ಈ ಪ್ರಪಂಚದಿಂದ ನಾನು ಹಾಗೇ ಮೇಲಕ್ಕೆ ಹೋಗಿಬಿಡುತ್ತಿದ್ದೆನೋ…. ಏನೋ…..” ಅಂತಲೂ ಅವರನ್ನು ಪೂಸಿ ಮಾಡಬೇಕಿತ್ತು.
ನನ್ನ ಫ್ರೆಂಡ್ ರಮ್ಯಾ ಒಂದು ದಿನ ಫೋನ್ ಮಾಡಿ ಕೇಳಿದಳು, “ಅಲ್ವೇ, ಇಷ್ಟು ದಿನ ಆಯ್ತು, ನೀನು ಇನ್ನೂ `ಬಾಲಿವುಡ್ ಬೇಗಂ’ ಸೀರಿಯಲ್ ನೋಡೇ ಇಲ್ವಾ? ನಿನ್ನಂಥ ಗೂಶ್ಲುಗಳಿಗೆ ಐಪ್ಯಾಡ್ ಒಂದು ಕೇಡು, ಸಾಲದ್ದಕ್ಕೆ ಅದರಲ್ಲಿ OTT ಬೇರೆ ಹಾಕಿಸಿಕೊಳ್ಳೋದಂತೆ….. ಈ ವಾರ ನೋಡಿದೋ ಸರಿ, ಇಲ್ಲದಿದ್ದರೆ ನಿನ್ನ ನಂಬರ್ ಬ್ಲಾಕ್ ಮಾಡಿಬಿಡ್ತೀನಿ!” ಅಂತ ಧಮಕಿ ಕೊಟ್ಟು ಫೋನ್ ಕಟ್ ಮಾಡಿಬಿಡುವುದೆ?ಸರಿ, ಅಂಥ ಹಳೆಯ ಸಹಪಾಠಿಯ ಮಾತನ್ನು ನಿರ್ಲಕ್ಷಿಸುವುದು ಬೇಡ ಅಂತ ನಾನು ಆ ಧಾರಾವಾಹಿಯ ಮೊದಲ ಕಂತು ನೋಡಲು ಕುಳಿತೆ. ಅಷ್ಟರಲ್ಲಿ ಎಲ್ಲಿದ್ದನೋ ನನ್ನ ಮರಿ ರಾಕ್ಷಸ ಮಗ…. ಧುತ್ತೆಂದು ಮನೆಗೆ ವಕ್ರಿಸಬೇಕೇ?
“ಮಮ್ಮಿ….. ಯಾವುದು ನೋಡ್ತಿದ್ದೀಯಾ? ಸರಿಬಿಡು, ಯಾರೋ ಮಿಡ್ಲ್ ಕ್ಲಾಸ್ ಆಂಟಿ ಹೇಳಿದರು ಅಂತ ಕೂತ್ಕೊಂಡು ಈ ಮಹಾನ್ ಸೀರಿಯಲ್ ನೋಡೋದಾ? ನಾನು ಹೇಳ್ತೀನಿ, ನನ್ನ ಫ್ರೆಂಡ್ಸ್ ಸೂಚಿಸಿದ ಆ ಒಳ್ಳೆ ಸೀರಿಯಲ್ ಮಾತ್ರ ನೀನು ನೋಡಬೇಕು!”
“ಬಿಡೋ ಪುಟ್ಟಾ….. ಇದೂ ಒಳ್ಳೆ ಸೀರಿಯಲ್….. ಈಗ ತಾನೇ ಆನ್ ಮಾಡಿದ್ದೀನಿ…… ಇದನ್ನೇ ನೋಡ್ತೀನಿ ಬಿಡು,” ಮಗನಿಗೂ ಸಮಜಾಯಿಷಿ ನೀಡಬೇಕಾದ ಕರ್ಮ ಒದಗಿತ್ತು.
“ಅಯ್ಯೋ ಬಿಡು ಮಮ್ಮಿ…… ಇದೇನು ಮಹಾ ಸೀರಿಯಲ್, ಇರು…. ಈಗ ನಾನೇ ಹಾಕಿಕೊಡ್ತೀನಿ,” ಎಂದು ನನ್ನ ಕೈಯಿಂದ ಐಪ್ಯಾಡ್ ಕಿತ್ತುಕೊಂಡನೇ `ಬಾಲಿವುಡ್ ಬೇಗಂ’ ಬದಲಾಯಿಸಿ `ರ್ಯಕ್ ರೈನ್’ ಹಾಕಿಕೊಟ್ಟ. ನನಗಂತೂ ತಲೆಚಿಟ್ಟು ಹಿಡಿದಿತ್ತು.
ಈ ಹಾಳಾದ ಯಾಕಾದ್ರೂ ಬಂತೋ ಎಂದು ನಾನು ಶಾಪ ಹಾಕದ ದಿನವೇ ಇಲ್ಲ. ಎಲ್ಲರೂ ಹೊರಗೆ ಹೋಗಿದ್ದಾಗ, ನನ್ನ ಕೆಲಸ ಮುಗಿಸಿ ನನ್ನ ಪಾಡಿಗೆ ನಾನು ಯಾವುದೋ ಹಾಳುಮೂಳು ನೋಡಿಕೊಂಡು ನೆಮ್ಮದಿಯಾಗಿರುತ್ತಿದ್ದೆ…. ಈಗ ಅದಕ್ಕೂ ಕಲ್ಲು ಬಿತ್ತು. ಈ ಮರಿ ಪಿಶಾಚಿಗಳು ಆನ್ ಲೈನ್ ಕ್ಲಾಸ್ ಮುಗಿಸಿ ತಮ್ಮ ವಿಡಿಯೋ ಗೇಮ್ಸ್, ಮೊಬೈಲ್, ಐಪ್ಯಾಡ್ ಗಳಲ್ಲಿ ಮುಳುಗಿ ನನ್ನ ಪಾಲಿಗೆ ಐಪ್ಯಾಡ್ ಸಿಗದಂತೆ ಮಾಡುತ್ತಿದ್ದರು.
ನಾನು ಯಾವುದೋ ಒಂದು ಧಾರಾವಾಹಿ ನೋಡಲಿಕ್ಕಿಲ್ಲ, ತಕ್ಷಣ ಬಂದು ಇವರಿಬ್ಬರೂ ತಮ್ಮದೇ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುತ್ತಿದ್ದರು. ಅರೆ….. ಇದೆಂಥ ಸಾವು ಮಾರ್ರೆ…… ನನಗೂ ಒಂದು ವಾಚ್ ಲಿಸ್ಟ್ ಇದೆ, ಆ ಪಟ್ಟಿ ಪ್ರಕಾರ ನನಗೆ ಬೇಕಾದ್ದನ್ನು ನೋಡಿಕೊಳ್ಳುವ ಸ್ವಾತಂತ್ರ್ಯ ನನಗಿಲ್ಲವೇ? ಈ ಮಕ್ಕಳು ಮಾತ್ರವಲ್ಲ, ಅವರಪ್ಪನೂ ಅಂದ್ರೆ ನನ್ನ ಪತಿರಾಯರೂ ಈ ವಿಷಯದಲ್ಲಿ ಹಿಂಸಕ ಮಹಾಶಯರೇ!
ಅವರಿಗೆ ಸದಾ ಮಾರಾಮಾರಿ ಚಿತ್ರಗಳೆಂದರೆ ಬಲು ಇಷ್ಟ. ನನಗೆ ಬೇಕೋ ಬೇಡವೋ, ಅವರು ನೋಡಲು ಕುಳಿತಾಗೆಲ್ಲ ಅಂಥ ಘನಘೋರ ಫೈಟಿಂಗ್ ಸಿನಿಮಾ ನಾನು ನೋಡಲೇಬೇಕೆಂದು ಪ್ರಾಣ ಹಿಂಡುವರು. ಆ ಫೈಟಿಂಗ್ ನಲ್ಲಿ ಕಾರು, ಜೀಪುಗಳು ಬಾಂಬ್ ದಾಳಿಯಿಂದ ಆಕಾಶಕ್ಕೆ ಹಾರುತ್ತಿದ್ದರೆ, ಈ ಮನುಷ್ಯನಿಗೆ ಅದೇನು ಸಂಭ್ರಮ, ಸಡಗರವೇ! ಹಾಗೆಯೇ ಆ ಹಾಳು ಕ್ರಿಕೆಟ್, ಫುಟ್ ಬಾಲ್ ಮ್ಯಾಚುಗಳೂ ಸಹ! ನನಗಂತೂ ಯಾವಾಗಪ್ಪ ಈ ಮ್ಯಾಚ್ ಮುಗಿಯೋದು ಅಂತ ಸಾಕಾಗಿರುತ್ತೆ. ಈ ಮಹಾಶಯ ಬಿಟ್ಟರೆ ತಾನೇ? ಆದರೆ ಯಾವಾಗ ನಾನು ಏನಾದರೂ ನೋಡಲಿಕ್ಕೆ ಕುಳಿತರೂ ಅದಕ್ಕೆ 108 ವಿಘ್ನಗಳು! ಇದೆಲ್ಲ ನೋಡುವ ಬದಲು, ದೂರದ ಸಿಂಗ್ ಸೋಫಾದಲ್ಲಿ ಕುಳಿತು, ಕಿವಿಗೆ ಇಯರ್ ಫೋನ್ ಹಾಕಿಕೊಂಡು, 80ರ ದಶಕದ ಕನ್ನಡ ಚಿತ್ರಗೀತೆಗಳು, ಭಾವಗೀತೆಗಳು ಕೇಳೋಣ ಅನ್ಸುತ್ತೆ. ಅದಕ್ಕೆ ಇವರುಗಳು ಅವಕಾಶ ಕೊಟ್ಟರೆ ತಾನೇ?
“ಏ….. ಎಲ್ಲೇ ಹೋದೆ ಮಾರಾಯ್ತಿ? ನಿನಗೆ ಒಂದು ಫಿಲಾಸಫಿ ಗೊತ್ತಾ? ದಂಪತಿ ಇಬ್ಬರೂ ಸದಾ ಒಟ್ಟೊಟ್ಟಿಗೆ ಸಿನಿಮಾ ನೋಡಬೇಕಂತೆ, ಆಗಲೇ ಅವರ ಪ್ರೀತಿ ಹೆಚ್ಚೋದಂತೆ. ಪರಸ್ಪರ ಹೀಗೆ ಕಲೆತು ಟೈಂ ಪಾಸ್ ಮಾಡೋದು ಎಷ್ಟು ಒಳ್ಳೆಯದಲ್ಲವೇ?” ಇವರ ಮಾತಿಗೆ ಕೊನೆ ಇರಲಿಲ್ಲ.
`ಅಯ್ಯೋ ಮಹಾರಾಯ….. ನೀವೇ ನಿಮ್ಮ ಈ ಹಾಳು ಡಿಶುಂ ಡಿಶುಂ ಫೈಟಿಂಗ್ ಸಿನಿಮಾ ನೋಡಿಕೊಳ್ಳಿ. ಇದಕ್ಕೆಂಥ ಸುಡುಗಾಡು ಕಂಪನಿ ಬೇಕು? ಈ ಹಾಳು ಕೊರೋನಾ ಕಾಲದಲ್ಲಿ, ಲಾಕ್ ಡೌನ್ ನೆಪದಲ್ಲಿ ಬೆಳಗ್ಗಿನಿಂದ ಸಂಜೆವರೆಗೂ ಒಟ್ಟೊಟ್ಟಿಗೆ ಇರುವುದು ಸಾಲದೇ? ಇದು ಬೇರೆ ಬೇಕಾ?’ನನಗೆ ಸಸ್ಪೆನ್ಸ್ ಥ್ರಿಲ್ಲರ್ ಅಥವಾ ರೊಮ್ಯಾಂಟಿಕ್ ಕಾಮಿಡಿ ಚಿತ್ರಗಳು ಇಷ್ಟ. ಮಕ್ಕಳು ಒಮ್ಮೊಮ್ಮೆ ಅಂಥ ಸಿನಿಮಾಗಳ ಹೆಸರು ಹೇಳುವುದೂ ಉಂಟು. ಆದರೆ ತಾವು ಹೇಳಿದ್ದನ್ನೇ ಅಮ್ಮನೆಂಬ ಪ್ರಾಣಿ ಕೇಳಬೇಕೆಂಬ ಕೆಟ್ಟ ಹಠ ಇಬ್ಬರಲ್ಲೂ ಬೇರೂರಿತ್ತು. ಇವರುಗಳ ಮಧ್ಯೆ ಸಿಕ್ಕಿ ಹಾಕಿಕೊಂಡು ನನ್ನ ಸ್ಥಿತಿ ಅಡಕತ್ತರಿಯ ಹಾಗಾಗಿತ್ತು.
ಈ ಹೊಸ ವಿಧಾನ ಸಿಬಲಿಂಗ್ ರೈಲ್ವೇ ನನ್ನ ಕುತ್ತಿಗೆಗೆ ನೇಣವಾಗಿದೆ. ಅವರಿಬ್ಬರ ಮಧ್ಯದ ಜಗಳಕ್ಕೆ ನನ್ನನ್ನು ಬಲಿ ಹಾಕುವುದೇ? ಹಿಂದಿನ ಕಾಲದಲ್ಲಿ ಹೀಗೆಲ್ಲ ಎಲ್ಲಿತ್ತು? ಅಮ್ಮ ಅಪ್ಪಂದಿರ ಮುಂದೆ ಜಾಸ್ತಿ ವಾದ ಮಾಡಲು ಹೋದರೆ ಇಬ್ಬರಿಗೂ 1-1 ಗೂಸಾ ಬೀಳುತ್ತಿತ್ತಷ್ಟೆ! ಅಂಥ ಸುವರ್ಣಯುಗ ಮತ್ತೆ ಮರಳಿ ಬರಬಾರದೇ?
ಆ ದಿನ ನನಗೆ `ಹಾಸ್ಟೇಜಸ್’ ಶೋ ನೋಡಬೇಕಿತ್ತು. ಆ ಕಾಲದಿಂದ ನಾನು ರೋನಿತ್ ರಾಯ್ ಫ್ಯಾನ್ ಆಗಿದ್ದೆ. ಆದರೆ ಅದನ್ನು ಇಷ್ಟು ಬೇಗ ನೋಡಲು ಬಿಡ್ತಾರಾ ಇರು? ಈ ಮರಿ ಪಿಶಾಚಿಗಳಿಬ್ಬರಿಗೂ `ಹಾಸ್ಟೇಜಸ್’ ನಂತರ `ಆವ್ಯೆಂಜರ್ಸ್’ ಮತ್ತು `ದಿ ಇಂಟರ್ನ್’ ನೋಡೇ ನೋಡ್ತೀನಿ ಅಂತ ಪ್ರಾಮಿಸ್ ಮಾಡಬೇಕಾಯ್ತು.
ವಿಶಾಲ ಮನೋಭಾವದಿಂದ ಅವರು ಒಪ್ಪಿಗೆ ಕೊಟ್ಟ ನಂತರವೇ ನಾನು ನನಗೆ ಬೇಕಾದ್ದನ್ನು ನೋಡುವಂತಾಯಿತು. ಅಂತೂ ಅವರು ಹೇಳಿದ್ದನ್ನೂ ನೋಡಿದ್ದಾಯಿತು. ಆದರೆ ನನ್ನ ವಾಚ್ ಲಿಸ್ಟ್ ಹಾಗೇ ಉಳಿದುಬಿಟ್ಟಿತಲ್ಲ…..? ನಂತರ ರೋನಿತ್ ರಾಯ್ ನ `ಕ್ಯಾಂಡಿ’ ಬಂದಾಗ, ಅದನ್ನು ನೋಡದೆ ನೀವುಗಳು ಹೇಳಿದ್ದನ್ನು ನೋಡಲಾಗದು ಎಂದು ಶೀತಲ ಸಮರ ಸಾರಿದೆ. ನನ್ನನ್ನು ನೆಮ್ಮದಿಯಾಗಿ ಆ ಶೋ ನೋಡಲು ಬಿಟ್ಟಿದ್ದರೆ ತಾನೇ? ನಾನೇನೋ ದೊಡ್ಡ ಅಪರಾಧ ಮಾಡಿರುವೆ ಎಂಬಂತೆ ಇವರಿಬ್ಬರೂ ಮುಖ ಊದಿಸಿಕೊಂಡು ಅಸಹಕಾರ ಚಳುವಳಿ ನಡೆಸಿದ್ದರು.
ಈಗ ಈ ಮಕ್ಕಳು ಇನ್ನೂ ಹೈಸ್ಕೂಲು ಸೇರಿಲ್ಲವಾದ್ದರಿಂದ ನನ್ನ ಜೊತೆ ಇಷ್ಟೆಲ್ಲ ತರಲೆ ಮಾಡುತ್ತಿದ್ದಾರೆ. ಬೆಳೆಯುತ್ತಾ ಹೋದಂತೆ ಅವರು ಇನ್ನೂ ಸೀರಿಯಸ್ ಆಗಿಬಿಡುತ್ತಾರೆ. ಆಗ ನನ್ನನ್ನು ಮಾತನಾಡಿಸಲು ಇವರಿಗೆ ಸಮಯವಾದರೂ ಎಲ್ಲಿ ಸಿಗಬೇಕು? ಈ ಸಣ್ಣಪುಟ್ಟ ವಿಷಯ ಅವರಿಗೆ ಆಗ ನಗಣ್ಯ ಆಗಿಬಿಡುತ್ತದೆ. ಅವರಿಗೆ ತಮ್ಮ ಮಾತೇ ನಡೆಯಬೇಕೆಂಬ ಹಠ, ಆದರೆ ನನ್ನ ವಾಚ್ ಲಿಸ್ಟ್ ದೊಡ್ಡದಾಗುತ್ತಾ ಹೋಗುತ್ತಿದೆ, ಅದಕ್ಕೆ ಒಂದು ಗತಿ ಸಿಗಬೇಕಲ್ಲ?
ನೋಡಿ, ಒಟ್ಟಾರೆ ನಾನು ಹೇಳುವುದು, ಈ ಸಮಸ್ಯೆ ಎಷ್ಟು ಚಿಕ್ಕದಾಗಿದೆಯೋ ಅಷ್ಟು ಸಿಲ್ಲಿ ಅಲ್ಲ. ನೋಡಬೇಕಾದ ಟೈಂ ಕಡಿಮೆ ಆಗಿದ್ದು, ಶೋ ಲಿಸ್ಟ್ ದೊಡ್ಡದಾಗಿದ್ದರೆ ಏನು ಮಾಡುವುದು? ಅಷ್ಟಲ್ಲದೆ ಇವರುಗಳ ವಾಚ್ ಲಿಸ್ಟ್ ಅತಿ ದೊಡ್ಡದಾಗಿದೆ, ಅದನ್ನು ಪೂರೈಸುವುದರಲ್ಲಿ ನನ್ನ ಲಿಸ್ಟಿನ ಗತಿ ಏನು? ಇದನ್ನೆಲ್ಲ ಹೇಗಪ್ಪ ಮ್ಯಾನೇಜ್ ಮಾಡಲಿ….? ನನ್ನ ಲಿಸ್ಟ್ ಹಾಳು ಬೀಳಲಿ….. ಮಗ, ಮಗಳು, ಪತಿರಾಯರ ವಾಚ್ ಲಿಸ್ಟ್ ಪೂರೈಸುವಷ್ಟರಲ್ಲಿ ನನಗೊಂದು ಅಸ್ತಿತ್ವ ಬೇರೆ ಇದೆ ಅನಿಸುತ್ತಾ? ಅಯ್ಯೋ….. ನನ್ನ ಕರ್ಮವೇ!
ಇದರ ಬಗ್ಗೆ ಯೋಚಿಸುತ್ತಾ ತಲೆ ಕೆಡಿಸಿಕೊಳ್ಳುತ್ತಿದ್ದರೆ, ಮಗಳ ದನಿ ಮೊಳಗಿತು, “ಇದೇನಮ್ಮ ನೀನು…… ನಾನು ಹೇಳಿದ ಶೋ ನೋಡ್ತಿಲ್ಲ, ನಿನಗೆ ಬೇಕಾದ್ದನ್ನೂ ನೋಡ್ತಿಲ್ಲ…… ಹೀಗೆ ಕಣ್ಣು ಮುಚ್ಚಿಕೊಂಡು ಬಕಧ್ಯಾನ ಮಾಡುತ್ತಾ ಕುಳಿತರೆ ಏನು ಬಂತು ಲಾಭ? ಇದುವರೆಗೂ ನೀನು ನನ್ನ ನೆಚ್ಚಿನ `ಮೆಯ್ಡ್’ ಸೀರಿಯಲ್ ನ ಒಂದು ಎಪಿಸೋಡ್ ಸಹ ಮುಗಿಸಿಲ್ಲವಲ್ಲ…..? ಓ…. ಸೋ ಡಿಸಪಾಯಿಂಟಿಂಗ್….. ಮಮ್ಮಿ ನೀನಂತೂ ಒಮ್ಮೊಮ್ಮೆ ಡಿಸ್ ಗಸ್ಟಿಂಗ್! ಒಂದು ಕಂತೂ ಮುಗಿಸಿಲ್ಲವೆಂದರೆ ನಾನು ನನ್ನ ಫ್ರೆಂಡ್ಸ್ ಬಳಿ ನಿನ್ನ ಬಗ್ಗೆ ಏನೂಂತ ಹೇಳಿಕೊಳ್ಳಲಿ?”
ನನಗೂ ರೇಗಿಹೋಯಿತು, “ಅಯ್ಯೋ… ಹೋಗೇ ಸಾಕು! ನನ್ನ ಮೂಡ್ ಪೂರ್ತಿ ಕೆಟ್ಟು ಕೆರ ಹಿಡಿಯಿತು. ಬರೀ ಯೋಚಿಸೋದರಲ್ಲಿ ಆಗಿಹೋಯ್ತು.”
ಅವಳು ನನ್ನ ಪಕ್ಕ ಕೂರುತ್ತಾ ಮತ್ತೆ ಕೇಳಿದಳು, “ಈಗ ಏನು ಯೋಚಿಸುತ್ತಿರುವೆ ಮಮ್ಮಿ?”
“ಅಯ್ಯೋ…. ನನ್ನ ಪಾಪದ ವಸ್ತು ಬಗ್ಗೆ ಯೋಚಿಸುತ್ತಿದ್ದೆ.”
“ಅದೆಂಥದ್ದು?”
“ಅದೇ….. ನನ್ನ ಪಾಪದ ಲಿಸ್ಟ್….. ಅಂದ್ರೆ ವಾಚ್ ಲಿಸ್ಟ್!”
ನಾನು ಯಾವುದೋ ಬೇರೆ ಗ್ರಹದಿಂದ ಬಂದಿರುವ ಏಲಿಯನ್ ತರಹ ಅವಳಿಗೆ ಕಂಡಿರಬೇಕು. “ಈ ವಯಸ್ಸಾದ ಕಾಲದಲ್ಲಿ ನಿನಗೂ ಒಂದು ವಾಚ್ ಲಿಸ್ಟೇ?” ಎಂದಾಗ ನಾನು ಮೂರ್ಛೆ ಹೋಗುವುದೊಂದು ಬಾಕಿ!