ಟೇಸ್ಟಿ ಹಾಗಲಕಾಯಿ ಸ್ಪೆಷಲ್

ಸಾಮಗ್ರಿ : 500 ಗ್ರಾಂ ಹಾಗಲಕಾಯಿ, 100 ಗ್ರಾಂ ಗೋಡಂಬಿ, 250 ಗ್ರಾಂ ಈರುಳ್ಳಿ, 4 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲ, ಅರಿಶಿನ, ಧನಿಯಾಪುಡಿ, ಅಮ್ಚೂರ್‌ ಪುಡಿ, ಮೆಣಸು/ಜೀರಿಗೆ/ಓಮದ ಪುಡಿ, ಕುಕಿಂಗ್‌ ಕ್ರೀಂ, ಇಡಿಯಾದ ಒಣ ಮೆಣಸಿನಕಾಯಿ, ಅರ್ಧ ಸೌಟು ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು, ಪಲಾವ್ ಎಲೆ, ತುಸು ಹುಳಿ ಮಾವಿನ ಉಪ್ಪಿನಕಾಯಿ.

ವಿಧಾನ : ಹಾಗಲ ತೊಳೆದು ಒರೆಸಿ, ಶುಚಿ ಮಾಡಿಡಿ. ಇದನ್ನು ಸಣ್ಣ ಹೋಳಾಗಿಸಿ, ಬೀಜ ತೆಗೆದುಬಿಡಿ. ಒಂದು ಪಾತ್ರೆಯಲ್ಲಿ ಇದು ಮುಳುಗುವಷ್ಟು ನೀರಿಗೆ ತುಸು ಎಣ್ಣೆ, ಉಪ್ಪು, ಅರಿಶಿನ ಹಾಕಿ 1 ತಾಸು ನೆನೆಸಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಜೀರಿಗೆ, ಓಮ, ಪಲಾವ್ ಎಲೆ, ತುಂಡರಿಸಿದ ಒಣ ಮೆಣಸಿನಕಾಯಿ ಹಾಕಿ ಚಟಪಟಾಯಿಸಿ. ನಂತರ ನೀಟಾಗಿ ಹೆಚ್ಚಿದ ಈರುಳ್ಳಿ, ಆಮೇಲೆ ಹಾಗಲ ನಂತರ ಟೊಮೇಟೊ ಹಾಕಿ ಬಾಡಿಸಿ. ನಂತರ 2 ಬಗೆ ಪೇಸ್ಟ್, ಅರಿಶಿನ, ಧನಿಯಾಪುಡಿ, ಖಾರ, ಜೀರಿಗೆ ಪುಡಿ ಹಾಕಿ ಕೆದಕಬೇಕು. ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ, ಅಮ್ಚೂರ್‌ ಪುಡಿ, ಮಾವಿನ ಉಪ್ಪಿನಕಾಯಿ, ಕ್ರೀಂ ಸೇರಿಸಿ ಕೆದಕಬೇಕು. 2 ನಿಮಿಷ ಎಲ್ಲನ್ನೂ ಕೆದಕಿ ಕೆಳಗಿರಿಸಿ. ಚಿತ್ರದಲ್ಲಿರುವಂತೆ ಪುದೀನಾ ಉದುರಿಸಿ. ಇದನ್ನು ಜೀರಾ ರೈಸ್‌ ಅಥವಾ ಚಪಾತಿ, ದೋಸೆ ಜೊತೆ ಸವಿಯಲು ಕೊಡಿ.

AA-Arbi-cutlet-(3)

ಟೇಸ್ಟಿ ಕಟ್ಲೆಟ್

ಸಾಮಗ್ರಿ : 300 ಗ್ರಾಂ ಸೀಮೆಗೆಡ್ಡೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಜೀರಿಗೆ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 3-4 ಹಸಿ ಮೆಣಸು, ಒಗ್ಗರಣೆಗೆ ಸಾಸುವೆ, ಜೀರಿಗೆ, ಅರಿಶಿನ, ಕರಿಯಲು ಎಣ್ಣೆ, ಬ್ರೆಡ್‌ ಕ್ರಂಬ್ಸ್, 4-5 ಚಮಚ ತುಪ್ಪ.

ವಿಧಾನ : ಮೊದಲು ಸೀಮೆಗೆಡ್ಡೆ ಬೇಯಿಸಿ, ಅದರ ಸಿಪ್ಪೆ ಸುಲಿದು, ಸ್ಟೀಲ್ ಮ್ಯಾಶರ್‌ ನಿಂದ ನೀಟಾಗಿ ಮಸೆಯಿರಿ. ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಒಗ್ಗರಣೆ ಕೊಡಿ. ನಂತರ ಇದಕ್ಕೆ ಜೀರಿಗೆ ಪುಡಿ, 2 ಬಗೆ ಪೇಸ್ಟ್, ಹೆಚ್ಚಿದ ಹಸಿ ಮೆಣಸು, ಅರಿಶಿನ ಹಾಕಿ ಹುರಿಯಿರಿ. ನಂತರ ಮ್ಯಾಶ್‌ ಮಾಡಿದ ಗೆಡ್ಡೆ ಸೇರಿಸಿ, ಮಂದ ಉರಿಯಲ್ಲಿ ಬಾಡಿಸಿ. ಆಮೇಲೆ ಇದಕ್ಕೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿ, ಬ್ರೆಡ್‌ ಕ್ರಂಬ್ಸ್ ನಲ್ಲಿ ಹೊರಳಿಸಿ ಕಟ್‌ ಲೆಟ್‌ ಆಕಾರದಲ್ಲಿ ತಟ್ಟಿಕೊಂಡು ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಸಂಜೆ ಹೊತ್ತು ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

AA-Mix-Pakora-(5)

ವೆಜ್ವಡೆ

ಸಾಮಗ್ರಿ : 1-1 ಬದನೆ, ಬೆಂಡೆ, ಸಣ್ಣ ಸೌತೆ, ಆಲೂ, 2 ಈರುಳ್ಳಿ, ತಲಾ 100 ಗ್ರಾಮಿನ ಅಕ್ಕಿಹಿಟ್ಟು, ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಗರಂಮಸಾಲ, ಜೀರಿಗೆ ಪುಡಿ, ಅರಿಶಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಸಣ್ಣಗೆ ಹೆಚ್ಚಿದ ಎಲ್ಲಾ ತರಕಾರಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಕೆದಕಿ ಕೆಳಗಿಳಿಸಿ. ತುಸು ಆರಿದಾಗ ಇದಕ್ಕೆ ಉಳಿದ ಪದಾರ್ಥ ಹಾಕಿ, ನೀರು ಚಿಮುಕಿಸಿ ಪಕೋಡ ಮಿಶ್ರಣಕ್ಕೆ ಕಲಸಿಡಿ. ಇದರಿಂದ ಜಿಡ್ಡು ಸವರಿದ ಅಂಗೈ ಮೇಲೆ, ಚಿತ್ರದಲ್ಲಿರುವ ಆಕಾರದಲ್ಲಿ ವಡೆ ತಟ್ಟಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಸಂಜೆ ಹೊತ್ತು ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

Sabudana-Rose-Falooda-4

ಸಾಬೂದಾಣಿ ಫಲೂದಾ

ಸಾಮಗ್ರಿ : 1 ಕಪ್‌ ಸಾಬೂದಾಣಿ/ಸಬ್ಬಕ್ಕಿ (ನೀರಾದ ಹಾಲಲ್ಲಿ ನೆನೆಸಿಡಿ), ಅರ್ಧ ಕಪ್‌ ಶ್ಯಾವಿಗೆ, ಅರ್ಧ ಲೀ. ಕೆನೆಭರಿತ ಗಟ್ಟಿ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ಫಲೂದಾ ಮಿಕ್ಸ್ (ರೆಡಿಮೇಡ್‌ ಲಭ್ಯ), ಜೇನುತುಪ್ಪ, ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾಗಿ ಅರ್ಧ ಕಪ್‌), 2 ಕಪ್‌ ತುಪ್ಪ.

ವಿಧಾನ : ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಮೊದಲು ದ್ರಾಕ್ಷಿ, ಗೋಡಂಬಿ ಹುರಿದು ತೆಗೆಯಿರಿ. ನಂತರ ಅದರಲ್ಲಿ ಶ್ಯಾವಿಗೆ ಹಾಕಿ ಹುರಿದು ತೆಗೆಯಬೇಕು. ಆಮೇಲೆ ಇದಕ್ಕೆ ಹಾಲು, ಸಕ್ಕರೆ ಬೆರೆಸಿ ಕಾಯಿಸಿ, ಮಂದ ಉರಿಯಲ್ಲಿ ಚೆನ್ನಾಗಿ ಕುದಿಸಿ, ಅರ್ಧದಷ್ಟು ಹಿಂಗಿಸಿ. ಇದರಿಂದಲೇ ತುಸು ಹಾಲು ತೆಗೆದು ಅದಕ್ಕೆ ತುಸು ರೋಜ್‌ ಮಿಕ್ಸ್ ಬೆರೆಸಿ ಕದಡಿರಿ. ಇಳಿಸುವ ಮುನ್ನ ಡ್ರೈಫ್ರೂಟ್ಸ್ ಬೆರೆಸಿಕೊಳ್ಳಿ. ಚೆನ್ನಾಗಿ ಆರಿದ ನಂತರ 1-2 ತಾಸು ಫ್ರಿಜ್‌ ನಲ್ಲಿರಿಸಿ ಸವಿಯಲು ಕೊಡಿ.

RAJDHANI-Sattu

ಬ್ರೋಕನ್ವೀಟ್ಪರೋಟ

ಸಾಮಗ್ರಿ : 2 ಕಪ್‌ ಬ್ರೋಕನ್‌ ವೀಟ್‌, ಸಣ್ಣಗೆ ಹೆಚ್ಚಿದ ಒಂದಿಷ್ಟು ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊ.ಸೊಪ್ಪು, ಪುದೀನಾ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅಮ್ಚೂರ್‌ ಪುಡಿ, ನಿಂಬೆರಸ, ಅರಿಶಿನ, ಓಮ, 3 ಕಪ್‌ ಗೋಧಿಹಿಟ್ಟು, ಅರ್ಧ ಸೌಟು ತುಪ್ಪ, ತುಸು ಬೆಚ್ಚಗಿನ ಹಾಲು.

ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಬ್ರೋಕನ್‌ ವೀಟ್‌ ಹಾಕಿ ಹದನಾಗಿ ಹುರಿದು ಹೊರ ತೆಗೆಯಿರಿ. ನಂತರ ಅದೇ ಬಾಣಲೆಗೆ ಇನ್ನಷ್ಟು ತುಪ್ಪ ಬೆರೆಸಿ, ಈರುಳ್ಳಿ-ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಉಳಿದೆಲ್ಲ ಸಾಮಗ್ರಿ ಸೇರಿಸುತ್ತಾ ಬಾಡಿಸಿ. ಕೊನೆಯಲ್ಲಿ ಬ್ರೋಕನ್‌ ವೀಟ್‌ ಹಾಕಿ, ಹಾಲು ಬೆರೆಸುತ್ತಾ, ಉಪ್ಪಿಟ್ಟಿನ ಹದಕ್ಕೆ ಕೆದಕಿ ಕೆಳಗಿಳಿಸಿ.

ಗೋಧಿಹಿಟ್ಟಿಗೆ ಉಪ್ಪು, ತುಸು ಬೆಚ್ಚಗಿನ ನೀರು ಬೆರೆಸಿ ಮೃದು ಚಪಾತಿ ಹಿಟ್ಟು ಕಲಸಿ, ಸಾಟಿ ತುಪ್ಪ ಹಾಕಿ ಚೆನ್ನಾಗಿ ನಾದಿಕೊಂಡು, 1 ಗಂಟೆ ಕಾಲ ನೆನೆಯಲು ಬಿಡಿ. ನಂತರ ಇದರಿಂದ ಸಣ್ಣ ಉಂಡೆಗಳಾಗಿಸಿ, ಲಟ್ಟಿಸಿ, 2-3 ಚಮಚ ಹೂರಣ ತುಂಬಿಸಿ. ತುಪ್ಪ ಸವರಿ ಮತ್ತೆ ಲಟ್ಟಿಸಿ. ನಂತರ ಕಾವಲಿಗೆ ಹಾಕಿ, ತುಪ್ಪ ಸೇರಿಸುತ್ತಾ ಎರಡೂ ಕಡೆ ಹದನಾಗಿ ಬೇಯಿಸಿ. ಬಿಸಿಯಾದ ಇದನ್ನು ಗಟ್ಟಿ ಮೊಸರು, ಟೊಮೇಟೊ ಚಟ್ನಿ ಜೊತೆ ಸವಿಯಲು ಕೊಡಿ.

ONION-RICE

ಕ್ಯಾಪ್ಸಿಕಂ ಫ್ರೈಡ್ರೈಸ್

ಸಾಮಗ್ರಿ : 1 ಕಪ್‌ ಬಾಸುಮತಿ ಅಕ್ಕಿ, 4-5 ಈರುಳ್ಳಿ, 3-4 ಕ್ಯಾಪ್ಸಿಕಂ, ಅರ್ಧ ಸೌಟು ತುಪ್ಪ, ಒಗ್ಗರಣೆಗೆ ಕ/ಉ ಬೇಳೆ, ಕಡಲೆಬೀಜ, ಎಳ್ಳು, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸಿನ ಪೇಸ್ಟ್, ವಿನಿಗರ್‌, ಚಿಲೀ ಸಾಸ್‌, ವೈಟ್‌ ಸಾಸ್‌, ಗ್ರೀನ್‌ ಸಾಸ್‌, ತುಸು ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಮೊದಲು ಪ್ರೆಷರ್‌ ಪ್ಯಾನಿನಲ್ಲಿ ತುಸು ತುಪ್ಪ ಬಿಸಿ ಮಾಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಿ, ನೆನೆಸಿದ ಅಕ್ಕಿ, ಉಪ್ಪು, ಅನ್ನ ಉದುರಾಗುವಷ್ಟು ನೀರು ಬೆರೆಸಿ, ಅನ್ನ ರೆಡಿ ಮಾಡಿ. ತಣಿದ ನಂತರ ಇದನ್ನು ತಟ್ಟೆಗೆ ಹರಡಿ ಆರಲು ಬಿಡಿ. ನಂತರ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ (ಅರ್ಧ ಭಾಗ) ಹಾಕಿ ಕೆಂಪಾಗುವಂತೆ ಬಾಡಿಸಿ, ಬೇರೆಯಾಗಿಡಿ. ನಂತರ ಇನ್ನಷ್ಟು ತುಪ್ಪದ ಜೊತೆಗೆ ಒಗ್ಗರಣೆ ಕೊಡಿ. ನಂತರ ಉಳಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಕ್ಯಾಪ್ಸಿಕಂ ಹಾಕಿ ಬಾಡಿಸಿ. ಆಮೇಲೆ ಒಂದೊಂದಾಗಿ ಉಳಿದೆಲ್ಲ ಸಾಮಗ್ರಿ ಹಾಕಿ ಕೆದಕಬೇಕು. ಕೊನೆಯಲ್ಲಿ ಅನ್ನ ಹಾಕಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ಇದರ ಮೇಲೆ ಕೆಂಪಗೆ ಹುರಿದ ಈರುಳ್ಳಿಯಿಂದ ಅಲಂಕರಿಸಿ, ಗಟ್ಟಿ ಮೊಸರಿನೊಂದಿಗೆ ಸವಿಯಿರಿ.

Ragi-Vegetable-Upma

ರಾಗಿ ಉಪ್ಪಿಟ್ಟು

ಸಾಮಗ್ರಿ : ಅರ್ಧರ್ಧ ಕಪ್‌ ರಾಗಿ ಹಿಟ್ಟು, ರವೆ, ಒಂದಿಷ್ಟು ಹೆಚ್ಚಿದ ಬೀನ್ಸ್, ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಂ, ಹಸಿ ಮೆಣಸು, ಕರಿಬೇವು, ಕೊ.ಸೊಪ್ಪು, ತುರಿದ ಕ್ಯಾರೆಟ್‌, ತೆಂಗು ಅರ್ಧ ಸೌಟು ತುಪ್ಪ, ಒಗ್ಗರಣೆ ಸಾಮಗ್ರಿ, ರುಚಿಗೆ ಉಪ್ಪು, ನಿಂಬೆ ರಸ.

ವಿಧಾನ : ಬಾಣಲೆಯಲ್ಲಿ ತುಪ್ಪ ಬಿಸಿ ಮಾಡುತ್ತಾ ರವೆ, ರಾಗಿ ಹಿಟ್ಟನ್ನು ಬೇರೆ ಬೇರೆಯಾಗಿ ಹುರಿದಿಡಿ. ನಂತರ ಇನ್ನಷ್ಟು ತುಪ್ಪಕ್ಕೆ ಒಗ್ಗರಣೆ ಕೊಟ್ಟು ಹೆಚ್ಚಿದ ಹಸಿ ಮೆಣಸು, ಈರುಳ್ಳಿ ಹಾಕಿ ಬಾಡಿಸಿ. ನಂತರ ತುರಿದ ಕ್ಯಾರೆಟ್‌, ತೆಂಗು, ಕ್ಯಾಪ್ಸಿಕಂ, ಬೀನ್ಸ್ ಹಾಕಿ ಬಾಡಿಸಿ. ಕೊನೆಯಲ್ಲಿ ಟೊಮೇಟೊ ಬಾಡಿಸಿದ ನಂತರ ಉಪ್ಪು, 2 ಕಪ್‌ ನೀರು ಬೆರೆಸಿ ಕುದಿಯಲು ಬಿಡಿ. ಆಮೇಲೆ ಇದಕ್ಕೆ ಎಡಗೈಯಿಂದ ರಾಗಿ ಹಿಟ್ಟು, ರವೆ ಸೇರಿಸುತ್ತಾ ಬಲಗೈಯಿಂದ ಗಂಟಾಗದಂತೆ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಿರಿ. ಕೊನೆಯಲ್ಲಿ ನಿಂಬೆಹಣ್ಣು ಹಿಂಡಿಕೊಂಡು, ಕೊ.ಸೊಪ್ಪು ಬೆರೆಸಿ, ಬಿಸಿ ಬಿಸಿಯಾಗಿ ಸವಿಯಿರಿ.

BHUGA-CHAWAL

ಸ್ಪೈಸಿ ಫ್ರೈಡ್ರೈಸ್

ಸಾಮಗ್ರಿ : 1 ಕಪ್‌ ಅಕ್ಕಿ, ಅರ್ಧ ಸೌಟು ತುಪ್ಪ, ಒಗ್ಗರಣೆಗೆ ಲವಂಗ, ಚಕ್ಕೆ, ಮೊಗ್ಗು, ಏಲಕ್ಕಿ, ಸ್ಟಾರ್‌ ಅನೀಸ್‌, ಪಲಾವ್ ಎಲೆ, ಶಾಹಿಜೀರಿಗೆ, ಸೋಂಪು, ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸು, ಟೊಮೇಟೊ, ಕೊ.ಸೊಪ್ಪು, ಪುದೀನಾ, ಕರಿಬೇವು, ಉಪ್ಪು, ಖಾರ, ಮೆಣಸು, ಗರಂ ಮಸಾಲ, ಹುಳಿ ಮೊಸರು, ಅರಿಶಿನ.

ವಿಧಾನ : ಪ್ರೆಷರ್‌ಕುಕ್ಕರ್‌ ನಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದಕ್ಕೆ ಚಕ್ಕೆ ಲವಂಗ ಇತ್ಯಾದಿ ಹಾಕಿ ಚಟಾಪಟಾಯಿಸಿ. ನಂತರ ಇದಕ್ಕೆ ಒಂದೊಂದಾಗಿ ಹೆಚ್ಚಿದ ಸಾಮಗ್ರಿ ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಹಾಕಿ ಕೈಯಾಡಿಸಿ. ಮೊಸರು ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಅಕ್ಕಿ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಅನ್ನ ಉದುರಾಗಿ ಬರುವಷ್ಟು ನೀರು, ಅಕ್ಕಿ ಬೆರೆಸಿ ಕೆದಕಿ, ಮೇಲಷ್ಟು ತುಪ್ಪ ಹಾಕಿ. 2 ಸೀಟಿ ಬಂದಾಗ, ಒಲೆ ಆರಿಸಿ. ನಂತರ ಇದನ್ನು ತೆರೆದು, ಹೆಚ್ಚಿದ ಪದಾರ್ಥ ಹಾಕಿ ಅಲಂಕರಿಸಿ ಬಿಸಿಯಾಗಿ ರಾಯ್ತಾ ಜೊತೆ ಸವಿಯಲು ಕೊಡಿ.

VEGETABLE-RICE

ಸ್ಪೆಷಲ್ ವೆಜಿಟೆಬಲ್ ರೈಸ್

ಸಾಮಗ್ರಿ : 500 ಗ್ರಾಂ ಬಾಸುಮತಿ ಅಕ್ಕಿ, 1 ಸೌಟು ತುಪ್ಪ, ಹಸಿ ಬಟಾಣಿ, ಹೆಚ್ಚಿದ ಆಲೂ, ಕ್ಯಾರೆಟ್‌, ಬೀನ್ಸ್, ಗೆಡ್ಡೆಕೋಸು, ಡಬ್ಬಲ್ ಬೀನ್ಸ್, ಹೂಕೋಸು (ಒಟ್ಟಾರೆ 1 ದೊಡ್ಡ ಬಟ್ಟಲು), ಒಂದಿಷ್ಟು ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೇಟೊ, ಒಗ್ಗರಣೆಗೆ ಜೀರಿಗೆ, ಸೋಂಪು, ಚಕ್ಕೆ, ಮೊಗ್ಗು, ಏಲಕ್ಕಿ, ಲವಂಗ, ಕರಿಬೇವು, ಗರಂಮಸಾಲ, ಅರಿಶಿನ, ಉಪ್ಪು, ನಿಂಬೆರಸ.

ವಿಧಾನ : ಮೊದಲು ಕುಕ್ಕರ್‌ ನಲ್ಲಿ ಅರ್ಧ ಸೌಟು ತುಪ್ಪ ಬಿಸಿ ಮಾಡಿ ಒಗ್ಗರಣೆಗೆ ಕೊಡಿ. ನಂತರ ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮತ್ತಿತರ ಪದಾರ್ಥ ಹಾಕಿ ಬಾಡಿಸಿ. ಆಮೇಲೆ ಬಟಾಣಿ ಸಮೇತ ಉಳಿದೆಲ್ಲ ತರಕಾರಿ ಹೋಳು ಹಾಕಿ ಬಾಡಿಸಿ. ಕೊನೆಯಲ್ಲಿ ಉಪ್ಪು, ಅರಿಶಿನ, ಗರಂಮಸಾಲ ಹಾಕಿ ಕೆದಕಿರಿ. ತೊಳೆದ ಅಕ್ಕಿ ಹಾಕಿ, ಮತ್ತೆ ತುಪ್ಪ ಸೇರಿಸಿ ಬೆರೆಸಿಡಿ. ಅಗತ್ಯವಿದ್ದಷ್ಟು ನೀರು ಬೆರೆಸಿ, ಕೆದಕಿ, 2 ಸೀಟಿ ಬರುವಂತೆ ಕೂಗಿಸಿ. ತಣಿದ ನಂತರ ರಾಯ್ತಾ ಜೊತೆ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ