ಜೀವನದಲ್ಲಿ ನೊಂದು ಹತಾಶಳಾಗಿದ್ದ ಅರುಂಧತಿ, ಬಹಳ ವರ್ಷಗಳ ಕಾಲ ಒಬ್ಬಂಟಿಯಾಗೇ ಉಳಿದುಬಿಟ್ಟಳು. ಮುಂದೆ ಅವಳ ಬದುಕು ಬದಲಾದದ್ದು ಹೇಗೆ…….?
ನಿಧಾನಕ್ಕೆ ಕಣ್ಣು ತೆರೆದಳು ಅರುಂಧತಿ, `ಅರೇ… ಇದೇನಿದು! ನಾನು ಹಾಸ್ಪಿಟಲ್ ನಲ್ಲಿ….. ನಾನೇಕೆ ಇಲ್ಲಿದ್ದೀನಿ…..’ ಎಂದುಕೊಳ್ಳುತ್ತಾ ಎದ್ದು ಕುಳಿತಳು.
“ನಿಧಾನ ಮೇಡಂ…. ಬೆಳಗ್ಗೆ ನಿಮಗೆ ಆಕ್ಸಿಡೆಂಟ್ ಆಯಿತು. ನೀವು ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಿರಿ. ನಾನು ನಿಮ್ಮನ್ನು ಆಸ್ಪತ್ರೆಗೆ ಸೇರಿಸಿದೆ. ನಿಮ್ಮ ವಿಳಾಸ ತಿಳಿಯದೆ ಮನೆಗೆ ತಿಳಿಸಲಿಲ್ಲ ಮೇಡಂ. ನಿಮ್ಮ ಮೊಬೈಲ್ ಲಾಕ್ ಆಗಿದ್ದ ಕಾರಣ ಯಾರ ನಂಬರೂ ನನಗೆ ಗೊತ್ತಾಗಲಿಲ್ಲ,” ಎಂದ ರಘು.
‘ಮನೆಗೆ ತಿಳಿಸಲು ಯಾರಿದ್ದಾರೆ ನನಗೆ….. ನಾನೊಬ್ಬಳು ಒಂಟಿ,’ ಎಂದುಕೊಂಡಳು ಮನಸ್ಸಿನಲ್ಲಿ.
ದಿನಾ ಆಫೀಸಿಗೆ ಹೋಗುವಾಗ ಬರುವಾಗ ಸಿಗ್ನಲ್ ನಲ್ಲಿ ಸೊಪ್ಪು, ತರಕಾರಿ ಮಾರುತ್ತಿದ್ದ ಹುಡುಗ ರಘು. ಅರುಂಧತಿ ಬೇಡವೆಂದರೂ ಬಲವಂತ ಮಾಡಿ ಕೊಡುತ್ತಿದ್ದ. ಒಮ್ಮೆ ಅಳು ಎಷ್ಟು ಬಲವಂತ ಮಾಡುತ್ತೀಯಾ ಎಂದು ಬೈದಾಗ, ಅವನು ಹೇಳಿದ್ದ, “ಸಾರಿ ಮೇಡಂ ನಾನು ಅನಾಥ. ಒಂಬತ್ತನೇ ಕ್ಲಾಸಿನಲ್ಲಿ ಇರುವಾಗ ಅಪ್ಪ ಅಮ್ಮ ಇಬ್ಬರೂ ತೀರಿಹೋದರು. ಅವರು ಕೂಡ ತರಕಾರಿ ಮಾರಿ ಬದುಕುತ್ತಿದ್ದರು. ಈಗ ನನಗೂ ಜೀವನಕ್ಕೆ ಬೇರೆ ದಾರಿ ಕಾಣದೆ ಇದನ್ನೇ ಮಾರುತ್ತಿರುವೆ. ಈ ವರ್ಷ ಹತ್ತನೇ ತರಗತಿ ಪರೀಕ್ಷೆ ಕಟ್ಟಿರುವೆ. ಓದುವುದು ಇರುತ್ತದೆ. ಅದಕ್ಕೆ ಆಫೀಸಿಗೆ ಹೋಗುವ ಬರುವ ಸಮಯದಲ್ಲಿ ತುಂಬಾ ಜನ ಸಿಗುತ್ತಾರೆ ಎಂದು ಎರಡು ಗಂಟೆ ಇಲ್ಲಿ ನಿಂತು ಮಾರಾಟ ಮಾಡುವೆ,” ಎಂದು ಹೇಳಿದ್ದ.
ಯೋಚಿಸಿದ ಅರುಂಧತಿ, `ತನಗೆ ಹೇಗಿದ್ದರೂ ತರಕಾರಿ ಬೇಕೇಬೇಕು. ಎಲ್ಲೋ ತೆಗೆದುಕೊಳ್ಳುವ ಬದಲು ಇಲ್ಲೇ ಕೊಳ್ಳೋಣ,’ ಎಂದಕೊಳ್ಳುತ್ತಿದ್ದಳು. ಆ ಹುಡಗನ ಮೇಲೆ ಯಾವುದೋ ಆತ್ಮೀಯತೆ ಉಂಟಾಗಿ ಒಮ್ಮೊಮ್ಮೆ ಉಳಿದ ತಿಂಡಿ, ಹಣ್ಣು ಎಲ್ಲಾ ಕೊಡುತ್ತಿದ್ದಳು.
ಕೇವಲ ಅಷ್ಟು ಪರಿಚಯಕ್ಕೆ ಈ ಹುಡುಗ ತನ್ನನ್ನು ಆಸ್ಪತ್ರೆಗೆ ಸೇರಿಸಿ ಸಂಜೆಯ ತನಕ ಇಲ್ಲೇ ಇದ್ದಾನೆ ಪಾಪ ಎಂದುಕೊಂಡಳು.
“ಮೇಡಂ ಮನೆಯ ನಂಬರ್ ಕೊಡಿ ಫೋನ್ ಮಾಡಿ ತಿಳಿಸ್ತೀನಿ,” ಎಂದ ರಘು.
“ಬೇಡ ರಘು. ನಾನು ನಿನ್ನ ಹಾಗೆ ಒಂಟಿ. ನಾನೊಬ್ಬಳೇ ಇರುವುದು,” ಎಂದಳು.
ಅದೇ ಸಮಯಕ್ಕೆ ಒಳ ಬಂದ ಡಾಕ್ಟರ್, “ಮೇಡಂ ಈಗ ಹೇಗಿದ್ದೀರಾ…? ಇವತ್ತು ಇಲ್ಲೇ ಇರಿ. ನಾಳೆ ಮನೆಗೆ ಹೋಗಬಹುದು. ಆದರೆ ದಿನಾ ಬಂದು ಡ್ರೆಸ್ಸಿಂಗ್ ಮಾಡಿಸಿಕೊಳ್ಳಿ,” ಎಂದರು.
ಸರಿ ಎಂದ ಅರುಂಧತಿ, “ರಘು ನೀನು ಮನೆಗೆ ಹೋಗಿ ಬೆಳಗ್ಗೆ ಬಾ,” ಎಂದು ಅವನನ್ನು ಕಳುಹಿಸಿದಳು.
ಆಫೀಸ್ ಗೆ ಫೋನ್ ಮಾಡಿ ನಾಲ್ಕು ದಿನ ರಜೆ ಹಾಕಿದಳು. ಹಾಗೆ ಹಾಸಿಗೆಯಲ್ಲಿ ಮಲಗಿದ ಅರುಂಧತಿಗೆ ಹಳೆಯದೆಲ್ಲಾ ನೆನಪಾಯಿತು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಅವಳು ತಂದೆ ಹಾಗೂ ಅಣ್ಣನ ಜೊತೆ ಬೆಳೆದಳು. ಡಿಗ್ರಿ ಓದುವಾಗ ಅಣ್ಣನ ಮದುವೆಯಾಯಿತು. ನಂತರ ಅವಳಿಗೂ ಸರ್ಕಾರಿ ಕೆಲಸ ಸಿಕ್ಕಿತು. ನೋಡಲು ಬಂದ ಹುಡುಗನ ಮನೆಯವರಿಗೆ ಅವಳ ಸಂಬಳದ ಮೇಲೆ ಕಣ್ಣು. ಅಂತೂ ಒಬ್ಬ ಹುಡುಗ ಅವಳಿಗೆ ಇಷ್ಟವಾಗಿ ಮದುವೆಯೂ ಆಯಿತು. ಆದರೆ ಅವನು ಮೊದಲೇ ಬೇರೆ ಹುಡುಗಿಯನ್ನು ಪ್ರೀತಿಸುತ್ತಿದ್ದ. ಅವಳ ಜಾತಿ ಬೇರೆಯಾದ ಕಾರಣ ಮನೆಯಲ್ಲಿ ಒಪ್ಪಿರಲಿಲ್ಲ. ಅದಕ್ಕೆ ಮನೆಯವರ ಬಲವಂತಕ್ಕೆ ಇವಳನ್ನು ಮದುವೆಯಾಗಿದ್ದ. ಅವಳಿಂದ ಅಂತರ ಕಾಯ್ದುಕೊಂಡಿದ್ದ.
ಗಂಡ ಸರಿ ಇಲ್ಲದೆ, ಜೊತೆಗೆ ಅವರ ಮನೆಯವರ ಕಾಟ ತಡೆಯಲಾರದೆ ಒಬ್ಬಳೇ ಇರುವ ನಿರ್ಧಾರ ಮಾಡಿ ದೂರದ ಊರಿಗೆ ಟ್ರಾನ್ಸ್ ಫರ್ ಮಾಡಿಸಿಕೊಂಡು ಬಂದಿದ್ದಳು. ಜೊತೆಗೆ ಸುಲಭವಾಗಿ ಡೈವೋರ್ಸ್ ಕೂಡ ಸಿಕ್ಕಿತು. ತಂದೆ ಇರುವ ತನಕ ಅವಳ ಜೊತೆ ಇದ್ದರು. ಕಳೆದ ಐದು ವರ್ಷಗಳಿಂದ ಅವಳು ಒಂಟಿಯಾಗಿದ್ದಳು. ಅಣ್ಣ ಅತ್ತಿಗೆಯರಿಗೆ ಅವಳು ಗಂಡನನ್ನು ಬಿಟ್ಟು ಬಂದಿದ್ದು ಇಷ್ಟವಾಗಿರಲಿಲ್ಲ. ಆದ್ದರಿಂದ ಅವರಿಂದಲೂ ಸಾಧ್ಯವಾದಷ್ಟೂ ದೂರ ಇದ್ದಳು. ಈಗಾಗಲೇ ನಲತ್ತೈದರ ವಸಂತ ದಾಟಿದ ಅವಳಿಗೆ ಒಂಟಿತನ ರೂಢಿಯಾಗಿತ್ತು. ಆದರೆ ಪಾಪ ಈ ರಘು ಸಹ ತನ್ನ ಹಾಗೆ ಒಂಟಿ. ಅವನಿಗೆ ಓದು ಆಸೆ ಬಹಳ ಇದೆ. ತರಕಾರಿ ಮಾರಿ ಜೀವನ ಸಾಗಿಸುತ್ತಿದ್ದಾನೆ. ಪಾಪ ಓದಲು ಸಮಯ ಸಿಗುವುದಿಲ್ಲ. ಅವನನ್ನು ತನ್ನ ಜೊತೆಗೆ ಇರಿಸಿಕೊಂಡರೆ ಹೇಗೆ…. ಎಂದುಕೊಂಡಳು.
ಹೌದು ಹೌದು ಅದೇ ಸರಿ…. ಇನ್ನು ಮುಂದೆ ಅವನಿಗೆ ಕೇರ್ ಟೇಕರ್ ಆಗಿ ಅವನನ್ನು ಮನೆಯಲ್ಲಿ ಇಟ್ಟುಕೊಂಡು ಓದಿಸುವೆ. ಪಾಪ ಓದು ಹುಡುಗ, ದುಡಿದು ಓದಬೇಕೆಂದರೆ ಕಷ್ಟ ಅಂತ ಯೋಚಿಸಿ ಹಾಗೆ ಮಲಗಿದಳು.
ಮರುದಿನ ಮೇಡಂ ಎನ್ನುತ್ತಾ ಒಳ ಬಂದ ರಘು.“ರಘು, ಇನ್ನೂ ಮೇಲೆ ನನ್ನನ್ನು ಮೇಡಂ ಎಂದು ಕರೆಯಬೇಡ. ನೀನು ಅಕ್ಕ ಎಂದು ಕರೆ. ಇಂದಿನಿಂದ ನನ್ನ ತಮ್ಮ ನೀನು! ಇನ್ನು ಮೇಲೆ ನೀನು ನನ್ನ ಜೊತೆ ನನ್ನ ಮನೆಯಲ್ಲಿ ಇರು. ನೀನು ಎಲ್ಲಿಯವರೆಗೂ ಓದುತ್ತಿಯೋ ಅಲ್ಲಿಯವರೆಗೆ ನಾನು ಓದಿಸುತ್ತೇನೆ,” ಎಂದಳು. ನಂತರ ಖುಷಿಯಾಗಿ ಇಬ್ಬರೂ ಒಟ್ಟಿಗೆ ಮನೆಗೆ ಬಂದರು. ಒಂಟಿಯಾಗಿದ್ದ ಇಬ್ಬರ ಬದುಕಲ್ಲೂ ಬದಲಾವಣೆಯ ಗಾಳಿ ಬೀಸಿತು.