ಶಾರ್ಟ್ ಸ್ಕರ್ಟ್ ಯಾ ಡೀಪ್ ಲೋ ನೆಕ್ ಡ್ರೆಸ್ ಧರಿಸಿ ಯಾವುದೇ ಇವೆಂಟ್ ಯಾ ಪ್ರಮೋಶನ್ ಗಾಗಿ ಓಡಾಡುವ ತಾರೆಯರಿಗೆ ಅಸಹಜತೆ, ಇರಿಸುಮುರಿಸು ಹೊಸತೇನಲ್ಲ. ಇದು ತಂತಾನೇ ಆಗಿರುತ್ತದೋ ಅಥವಾ ಇವರೇ ಮೇಲೆ ಬಿದ್ದು ಮಾಡಿಕೊಳ್ಳುತ್ತಾರೋ…. ಅವರೇ ಹೇಳಬೇಕು. ಸೋನಾಳ `ದಹಾಡ್’ ಚಿತ್ರದ ಪ್ರಮೋಟ್ ಗಾಗಿ ಹೊರಟ ಹುಮಾಳ ಕಥೆ ಕೇಳಿ. ಹುಮಾ ಇನ್ನರ್ ವೇರ್ ಧರಿಸದೆ, ಡೀಪ್ ಲೋ ನೆಕ್ ಡ್ರೆಸ್ ಧರಿಸಿ ಇವೆಂಟ್ ಗೆ ಬಂದಿಳಿದಳು. ಸೋನಾಳ ಜೊತೆ ಹಾಡು ಕುಣಿತದ ಮಸ್ತಿಯಲ್ಲಿ ಮೈಮರೆತ ಹುಮಾಳಿಗೆ, ತನ್ನ ಲೋ ನೆಕ್ ಮತ್ತಷ್ಟು ಜಾರುತ್ತಿರುವ ಕಡೆ ಜ್ಞಾನವೇ ಇರಲಿಲ್ಲ. ಆದರೆ ವರದಿಗಾರರು ಇದನ್ನೆಲ್ಲ ರೆಕಾರ್ಡ್ ಮಾಡದೇ ಇರುತ್ತಾರೆಯೇ? ಇನ್ನಾದರೂ ಎಚ್ಚರ ಹುಮಾ, ಬೋಲ್ಡ್ ನೆಸ್ ನಿಭಾಯಿಸುವುದು ಸುಲಭವಲ್ಲ, ಎನ್ನುತ್ತಾರೆ ಹಿತೈಷಿಗಳು.
ನಾನು ಐಶ್ವರ್ಯಾ ಅಲ್ಲ, ಆಲಿಯಾ!
ಇತ್ತೀಚೆಗೆ ಆಲಿಯಾ ಭಟ್ ಬ್ಯೂಟಿಫುಲ್ ಗೌನ್ ಧರಿಸಿ ಮ್ಯಾಟ್ ಗಾಲಾ 2023 ಇವೆಂಟ್ ಗೆ ಬಂದು ಅದರ ಬೆಡಗು ಹೆಚ್ಚಿಸಿದಳು. ಆದರೆ ವಿದೇಶೀ ವರದಿಗಾರರು ಅವಳ ಈ ಮಜಾ ವೇಳೆಯನ್ನು ಕಿರಿಕಿರಿಗೆ ಬದಲಾಯಿಸಿದರು. ಇವೆಂಟ್ ಗೆ ಬಂದಿದ್ದ ಒಬ್ಬ ವಿದೇಶೀ ವರದಿಗಾರ, ಇವಳನ್ನು ಐಶ್ವರ್ಯಾ ರೈ ಎಂದೇ ಭಾವಿಸಿ, ಹಾಗೆಂದೇ ಮತ್ತೆ ಮತ್ತೆ ಜೋರಾಗಿ ಕರೆಯುತ್ತಿದ್ದ. ಮೊದಲೇನೋ ಗೊಂದಲಕ್ಕೊಳಗಾದ ಆಲಿಯಾ ನಂತರ ಮಂದಹಾಸ ಬೀರುತ್ತಾ ಮುನ್ನಡೆದಳು. ಅತ್ತ ಸೋಶಿಯಲ್ ಮೀಡಿಯಾದಲ್ಲಿ ಇಂಥದಕ್ಕೆ ಕಾದಿದ್ದ ಐಶ್ ಫ್ಯಾನ್ಸ್ ಗೆ ಲಾಟರಿ ಹೊಡೆಯಿತು. ಹೀಗಾಗಿ ಅವರು ಹುಯಿಲೆಬ್ಬಿಸಿದರು. ಐಶ್ ಬಿಟ್ಟರೆ ಇಲ್ಲ ಅಂತ ಕೂಗಾಡಿದರು. ಪಾಪ, ಇತ್ತ ಆಲಿಯಾಳನ್ನು ಕೇಳುವವರೇ ಇಲ್ಲ! ಅವಳ ಗ್ಲಾಮರ್, ಗೌನಿನ ಬೆಡಗಿನ ಬಗ್ಗೆ ವಿಚಾರಿಸುವವರೇ ಇಲ್ಲ. ಅವಳು ಮಾಡದ ತಪ್ಪಿಗೆ ಪ್ರಚಾರ ಕಳೆದುಕೊಂಡಳು. ಒಮ್ಮೊಮ್ಮೆ ಹೀಗೂ ಆಗುತ್ತದೆ ಎಂಬ ಪಾಠ ಕಲಿತಳು.
ಮನೋಜ್ ಏಕೆ ಡಿನ್ನರ್ ಮಾಡುವುದಿಲ್ಲ?
ಫಿಟ್ನೆಸ್ ಗಾಗಿ ಸಿನಿ ತಾರೆಯರು ಏನು ತಾನೇ ಮಾಡುವುದಿಲ್ಲ? ಈ ನಿಟ್ಟಿನಲ್ಲಿ ಹೊಸ ಹೆಸರಿನ ಸೇರ್ಪಡೆ ಎಂದರೆ ಅದು ಮನೋಜ್ ವಾಜಪೇಯಿ ಅವರದು. ಮನೋಜ್ ತನ್ನ ದೇಹಕ್ಕೆ ಒಂದಿಷ್ಟೂ ಕೊಬ್ಬು ಸೇರಬಾರದು ಎಂದು ಬಯಸುವರು. ಇದಕ್ಕಾಗಿ ಆತ ತನ್ನ ತಂದೆ, ತಾತಂದಿರ ಡಯೆಟ್ ಪ್ಲಾನ್ ಫಾಲೋ ಮಾಡುತ್ತಾ, ರಾತ್ರಿ ಹೊತ್ತು ಊಟ ಮಾಡುವುದನ್ನೇ ಬಿಟ್ಟರು. ಹೀಗೆ ಕಳೆದ 12 ವರ್ಷಗಳಿಂದ ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ನೀವು ಸಹ ಪತ್ನಿಗೆ ಅದು ಮಾಡು, ಇದು ಮಾಡು ಎನ್ನುವುದನ್ನು ಬಿಟ್ಟು, ಮನೋಜ್ ತರಹ ಫಿಟ್ & ಫೈನ್ ಆಗಿರಬಾರದೇಕೆ?
ಉದ್ಧಾರ ಆಗಲ್ಲ, ಉದ್ಧಾರ ಆಗೋದಿಕ್ಕೂ ಬಿಡೋಲ್ಲ!
ಭಗವಾಧಾರಿಗಳು ಭಾರತದ ಚಿತ್ರರಂಗವನ್ನು ಎಷ್ಟು ಭಗವಾಗೊಳಿಸಿದ್ದಾರೆ ಎಂದರೆ, ಪ್ರತಿ ವರ್ಷ ಯಾವುದಾದರೊಂದು ಪೌರಾಣಿಕ ಚಿತ್ರ ಬಿಡುಗಡೆ ಆಗಲೇಬೇಕು ಎಂಬುದು ಟ್ರೆಂಡ್ ಆಗಿಹೋಗಿದೆ. ಈ ಸರಣಿಯಲ್ಲಿ ವಿವಾದಗಳಿಗೆ ಇದೀಗ ಸಿಲುಕಿರುವ ಚಿತ್ರ ಅಂದ್ರೆ `ಆದಿ ಪುರುಷ್.’ ಮೊದಲು ಈ ಚಿತ್ರದ ಪಾತ್ರಗಳ ಗೆಟಪ್ ಬಗ್ಗೆ ದೊಡ್ಡ ಗಲಭೆ ಎಬ್ಬಿಸಲಾಯಿತು. ಇದೀಗ ಕೆಲವು ದೃಶ್ಯಗಳ ಬಗ್ಗೆ ಆಕ್ಷೇಪಣೆ ಎದ್ದಿದೆ. FB ನಲ್ಲಿ ಭಗವಾ ತಂಡ ರಾಮ, ಹನುಮಂತ, ರಾವಣರ ಸರಿಯಾದ ಗೆಟಪ್ ಬಗ್ಗೆ ಏನೆಲ್ಲ ವ್ಯಾಖ್ಯಾನ ಮಾಡಿದರು ಅಂದ್ರೆ, ಏನೋ ಪರ್ಸನಲಿ ಅವರನ್ನೆಲ್ಲ ಭೇಟಿ ಮಾಡಿ ಬಂದಂತೆ! ಈಗ ಈ ತಂಡದ ಆಕ್ಷೇಪಣೆ ಅಂದ್ರೆ, ಈ ಚಿತ್ರದ ಕೆಲವು ದೃಶ್ಯಗಳು ಬ್ಯಾನ್ ಆಗಿಲ್ಲವಂತೆ! ಇವರ ಬಳಿ ಇಷ್ಟೊಂದು ದಂಡದ ಸಮಯ ಎಲ್ಲಿರುತ್ತೆ ಅಂತ? ಇವರ ಕೆಲಸವೇ ಇದು, ಹೇಗಾದರೂ ಮಾಡಿ ಜನರ ಮನಸ್ಸನ್ನು ಇಂಥ ಕಡೆ ಕೇಂದ್ರೀಕರಿಸಿ, ಭಗವಾ ಸರ್ಕಾರದ ಚಟುವಟಿಕೆಗಳನ್ನು ಗಮನಿಸದಂತೆ ಮಾಡುವುದು!
ಬಾಲಿವುಡ್ ನ ಬ್ಯೂಟಿ ಸ್ಟಾಂಡರ್ಡ್
ರಿಯಲಿ ಫೇಕ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಮರಳಿದಾಗಿನಿಂದ, ಬಾಲಿವುಡ್ ಮೇಲೆ ಕೆಂಗಣ್ಣು ಬೀರುತ್ತಿದ್ದಾಳೆ. ಈ ಚಿತ್ರತಂಡದವರಿಗೆ ಹೇಳಲಿಕ್ಕೆಂದೇ ಬಹಳಷ್ಟು ಮಾಹಿತಿ ಹೊತ್ತು ತಂದಿದ್ದಾಳೆ. ಬಾಲಿವುಡ್ ನಿರ್ಮಾಪಕರು ಇಲ್ಲಿ ನಟಿಯ ಪ್ರತಿಭೆಗಿಂತ ಅವಳ ಫಿಗರ್ ಬಗ್ಗೆ ಮಾತ್ರ ಗಮನ ಹರಿಸುತ್ತಾರೆ. ಯಾರು ಬಳಕುವ ಬಳ್ಳಿಯಂತಿದ್ದಾಳೋ, ಅಂಥ ಥಳುಕಿನವಳನ್ನೇ ಹುಡುಕಿ ಹೊರಡುತ್ತಾರೆ. ಆದರೆ ಹೀರೋ ಪರ್ಸನಾಲ್ಟಿ ಬಗ್ಗೆ ಇಂಥ ಅಕ್ಕರೆ ಏನಿಲ್ಲ. ಇಂಥ ಬ್ಯೂಟಿ ಸ್ಟಾಂಡರ್ಡ್ ರಿಯಲಿ ಫೇಕ್ ಎಂದು ಸಿಡುಕುತ್ತಾಳೆ, ಪ್ರಿಯಾಂಕಾ, ನೀನು ಹೇಳುವ ಮಾತು ನಿಜವೇ ಇರಬಹುದು. ಖಂಡಿತವಾದಿ ಲೋಕ ವಿರೋಧಿ ಎಂಬುದನ್ನು ಮರೆಯಬೇಡ. ಆದರೆ ಫಿಟ್ನೆಸ್ ಮೇಂಟೇನ್ ಮಾಡುವುದರಲ್ಲಿ ತಪ್ಪೇನಿದೆ? ಇತ್ತೀಚೆಗೆ ಪ್ರತಿ ನಟನಟಿ ತಮ್ಮ ಫಿಟ್ನೆಸ್ ಕುರಿತು ಎಚ್ಚರ ವಹಿಸುತ್ತಾರೆ, ಇದಕ್ಕಾಗಿ ಯಾರೂ ಅವರನ್ನು ಬಲವಂತಪಡಿಸುತ್ತಿಲ್ಲ, ಎನ್ನುತ್ತಾರೆ ಹಿತೈಷಿಗಳು.
ಶರ್ಮನ್ ನ ಕೆರಿಯರ್ ಮುಳುಗಿದ್ದೇಕೆ?
ರೋಹಿತ್ ಶೆಟ್ಟಿ ರಾಜ್ ಕುಮಾರ್ ಹಿರಾನಿಯಂಥ ಚಿತ್ರ ನಿರ್ಮಾಪಕರ ಜೊತೆ ಕೆಲಸ ಮಾಡಿ, ಖ್ಯಾತಿಯ ಶಿಖರಕ್ಕೇರಿದ್ದ ಶರ್ಮನ್, ಕಾಲ ಕಳೆದಂತೆ ಹೇಗೆ ತನ್ನ ಕೆರಿಯರ್ ನಲ್ಲಿ ಕೆಳ ಜಾರಿದ ಎಂದು ಗೊತ್ತೇ ಆಗಲಿಲ್ಲ. ಈಗಿನ ಪರಿಸ್ಥಿತಿ ಹೇಗಿದೆ ಅಂದ್ರೆ, OTT ವೆಬ್ ಸೀರೀಸ್ ನಲ್ಲೂ ಈತನಿಗೆ ಲೀಡ್ ರೋಲ್ ದೊರಕುತ್ತಿಲ್ಲ. ಸುದ್ದಿಗಾರರ ಪ್ರಕಾರ, ರೋಹಿತ್ ಶೆಟ್ಟಿ ಜೊತೆ ಹಣದ ವಿಷಯವಾಗಿ ಈತನೊಂದಿಗೆ ಗೋಲ್ ಮಾಲ್ ನಡೆದಾಗಿನಿಂದ, ಈತನ ಕೆರಿಯರ್ ಡೌನ್ ಆಗಿದೆಯಂತೆ. ಶಿಖರವೇರಿ ಒಮ್ಮೆಲೇ ಅಲ್ಲಿಂದ ಜಾರಿ ಬಿದ್ದ ಜಾಣನಾದ ಶರ್ಮನ್. ಇರಲಿ, ಸದ್ಯಕ್ಕಂತೂ ಈತ ಶ್ರೇಯಾ ಶರಣ್ ಜೊತೆ `ಮ್ಯೂಸಿಕ್ ಸ್ಕೂಲ್’ನಲ್ಲಿ ನಟಿಸುತ್ತಿದ್ದಾನೆ. ಈ ಚಿತ್ರ ಕ್ಲಿಕ್ ಆಗಲಿ, ಆಲ್ ದಿ ಬೆಸ್ಟ್ ಶರ್ಮನ್!
ವಿವಾದಗಳ ಮಧ್ಯೆ ಅದಾ ಶರ್ಮ
ಅದಾ ಶರ್ಮ ತನ್ನ ನಟನೆ, ಪ್ರತಿಭೆ, ಯಶಸ್ವಿ ಚಿತ್ರಗಳಿಂದ ಹೆಸರು ಮಾಡದ್ದಿದರೂ ತಾನಾಗಿ ಸೃಷ್ಟಿಸಿಕೊಂಡ ಇಲ್ಲಸಲ್ಲದ ವಿವಾದಗಳಿಗೆ ಆಗಾಗ ಗುರಿಯಾಗುತ್ತಿರುತ್ತಾಳೆ. ಇವಳ `ದಿ ಕೇರಳ ಸ್ಟೋರಿ’ ಚಿತ್ರ ಮೊದಲಿನಿಂದಲೂ ವಿವಾದಗಳಲ್ಲಿತ್ತು. ಈ ಚಿತ್ರ ಅಂಥ ವಿಶೇಷ ಹೆಸರೇನೂ ಗಳಿಸಲಿಲ್ಲ. ಅಷ್ಟು ಸಾಲದೆಂಬಂತೆ ಇತ್ತೀಚೆಗೆ ಇವಳು FBಗೆ ಹಂಚಿಕೊಂಡ ಒಂದು ಪೋಸ್ಟ್ ಮತ್ತೆ ವಿವಾದ ಸೃಷ್ಟಿಸಿತು. ಅಪ್ಪಿತಪ್ಪಿ ಎಲ್ಲೋ ಒಂದು ಕಡೆ ಇವಳು ಮಾಲಿವುಡ್ (ಮಲೆಯಾಳಿ) ಚಿತ್ರರಂಗವನ್ನು ಹೊಗಳುತ್ತಾ, ಅದು ತನಗೆ ಬಹು ಪ್ರಿಯವಾದುದು ಎಂದುಬಿಟ್ಟಳು. ಅದನ್ನು ಅವಳು ತಮಿಳು ಭಾಷೆಯಲ್ಲಿ ಹೇಳಿಕೊಂಡಿದ್ದಾಳೆ. ಇದರಿಂದ ಬಾಲಿವುಡ್ ಇವಳತ್ತ ಕೆಂಗಣ್ಣು ಬೀರುತ್ತಿದೆ. ಅಷ್ಟು ಸಾಲದೆಂಬಂತೆ, ಬಾಲಿವುಡ್ ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದ ಟ್ರೋಲಿಗರು ಇವಳಿಗೆ ಬೆಂಡೆತ್ತಿ ಬ್ರೇಕ್ ಹಾಕಿದರು. ಇದಕ್ಕೆ ಮೊದಲು ಇವಳು ಸುಮ್ಮನಿರಲಾಗದೆ ಬಪ್ಪಿ ಲಹರಿಯರ ಸಂಗೀತದ ಬಗ್ಗೆ ತನ್ನ ಹಗುರ ಅನಿಸಿಕೆ ತೇಲಿಬಿಟ್ಟದ್ದು ಈಗಾಗಲೇ ಟ್ರೋಲಿಗರನ್ನು ಕೆರಳಿಸಿತ್ತು. ಇನ್ನೀಗ ಸುಮ್ಮನೆ ಬಿಟ್ಟಾರೆಯೇ? ಮೊದಲು ನಿನ್ನ ಈ ಹುಚ್ಚುಖೋಡಿ ಮನಸ್ಸನ್ನು ಕಂಟ್ರೋಲ್ ಮಾಡಮ್ಮ. ಇಲ್ಲದಿದ್ದರೆ ಬಾಲಿವುಡ್ ನಿನ್ನನ್ನು ಮೂಲೆಗುಂಪಾಗಿಸೀತು ಎನ್ನುತ್ತಾರೆ ಹಿತೈಷಿಗಳು.
ಇನ್ನು ಮುಂದೆ ಕೇವಲ ಲೀಡ್ ರೋಲ್ ಮಾತ್ರ!
ಅದ್ಭುತ ನಟನೆಂದೇ ಹೆಸರಾದ ನವಾಜ್ ಸಿದ್ಧಿಕಿ ತನ್ನ ಪತ್ನಿಯ ಜೊತೆಗಿನ ವಿವಾದಗಳಿಂದ ಇದೀಗ ತುಸು ಹೊರಬಂದಿದ್ದಾನೆ. ಹೀಗಾಗಿ ತನ್ನ ಕೆಲಸಗಳತ್ತ ಆತ ಕೀನ್ ಆಗಿ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತಿದೆ. ಇನ್ನು ಮುಂದೆ ತಾನು ಕೇವಲ ಲೀಡ್ ರೋಲ್ಸ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವೆ ಅಂತಾನೆ. ನೀನು ಹೇಳೇದೇನೋ ಸರಿ ಕಣಪ್ಪ, ಆದರೆ ಬಾಲಿವುಡ್ ನ ಸದ್ಯದ ಪರಿಸ್ಥಿತಿಯಲ್ಲಿ ದೊಡ್ಡ ಘಟಾನುಘಟಿಗಳೇ ಸಿಕ್ಕಿದ ಪಾತ್ರ ಸಾಕು ಎಂದು ಹಪಹಪಿಸುತ್ತಿರುವಾಗ, ನಿನ್ನಂಥವರು ಲೀಡ್ ರೋಲ್ ಮಾತ್ರ ಎಂದು ಸೀಮಾರೇಖೆ ಹಾಕಿಕೊಂಡರೆ, ಹೊಟ್ಟೆಪಾಡು ನಡೆಯುವುದು ಹೇಗೆ? ಅಂತಾರೆ ಹಿತೈಷಿಗಳು.
ಜುಬಲೀಯಿಂದ ಮಿಂಚುತ್ತಿರುವ ವಾಮಿಕಾ????
ಪಂಜಾಬ್ ನ ರಾಜಧಾನಿ ಚಂಡೀಗಢದಲ್ಲಿ ಹುಟ್ಟಿದ ವಾಮಿಕಾ ಭಾರತೀಯ ಬೆಳ್ಳಿತೆರೆಗ ಹೊಸಬಳೇನಲ್ಲ. ಅವಳು ಈಗಾಗಲೇ ಪಂಜಾಬಿ, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ಪಳಗಿದ ಹುಲಿ. ಆದರೆ 29 ವರ್ಷದ ಈ ವಾಮಿಕಾಳಿಗೆ ಬಾಲಿವುಡ್ ನಲ್ಲಿ ಇದೀಗ ಐಡೆಂಟಿಟಿ ಸಿಗುತ್ತಿರುವುದು ಅವಳ `ಜುಬಲೀ’ ವೆಬ್ ಸೀರೀಸ್ ನಿಂದ. ಇದರಲ್ಲಿ ನೀಲೋಫರ್ ಪಾತ್ರ ವಹಿಸಿರು ವಾಮಿಕಾ, ತನ್ನ ಸ್ಟೈಲಿಶ್ ಗ್ಲಾಮರಸ್ ಬೋಲ್ಡ್ ಲುಕ್ಸ್ ನಿಂದ ಎಲ್ಲರ ಗಮನ ಸೆಳೆದಿದ್ದಾಳೆ. OTT ತನ್ನಂಥ ಎಷ್ಟೋ ಪ್ರತಿಭಾನ್ವಿತರಿಗೆ ಉತ್ತಮ ಪ್ಲಾಟ್ ಫಾರ್ಮ್ ಆಗಿದೆ ಮನದುಂಬಿ ಮಾತನಾಡುತ್ತಾಳೆ. ಈ ಮಾಧ್ಯಮದಿಂದ ಪ್ರಾಂತೀಯ ಭಾಷೆಯ ನಟನಟಿಯರಿಗೆ ಉತ್ತಮ ಅವಕಾಶ ಸಿಕ್ಕಿದೆ ಅಂತಾಳೆ. ಆಲ್ ದಿ ಬೆಸ್ಟ್ ವಾಮಿಕಾ!
ತಮನ್ನಾಳ ತಮನ್ನಾ ಏನು?
ಹಿಂದಿಯ `ಬಿಗ್ ಬಾಸ್’ ಶೋನಲ್ಲಿ ತನ್ನ ರೌದ್ರ ರೂಪದಿಂದ ಖ್ಯಾತಳಾದ ಕರಿಶ್ಮಾ ತನ್ನಾಳಿಗೆ, ಈ ಶೋ ನಂತರ ಕೆಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳೇನೋ ದೊರೆತ, ಆದರೆ ಹೇಳಿಕೊಳ್ಳುವಂಥದ್ದೇನಲ್ಲ. ಇದೀಗ ನಿರ್ದೇಶಕ ಹಂಪ್ ಮೆಹ್ತಾ ಈಕೆಗೆ ತಮ್ಮ `ಸ್ಕೂಪ್’ ಲೆಬ್ ಸೀರೀಸ್ ನಲ್ಲಿ ದೊಡ್ಡ ಅವಕಾಶ ನೀಡಿದ್ದಾರೆ. ಸುದ್ದಿಗಾರರ ಪ್ರಕಾರ ಈಕೆ ಇದರಲ್ಲಿ ಕ್ರೈಂ ಜರ್ನಲಿಸ್ಟ್ ಪಾತ್ರ ವಹಿಸಲಿದ್ದಾಳೆ, ಅದು ನಿಜ ಜೀವನದಿಂದ ಪ್ರೇರಿತವಂತೆ. ಅಂದಹಾಗೆ ಈ ತಮನ್ನಾಳ ತಮನ್ನಾ (ಬಯಕೆ) ಬೆಳ್ಳಿತೆರೆಯಲ್ಲಿ ರಾರಾಜಿಸಬೇಕೆಂಬುದು. ಆದರೆ ಈಗ ಕಾಲ ಮಿಂಚಿಹೋಗಿದೆ. ಇಂದಿನ ಬಾಲಿವುಡ್ ಸ್ಥಿತಿಯಂತೂ ಶೋಚನೀಯವೇ ಸರಿ, ಹೀಗಾಗಿ ಎಲ್ಲರ ಪೊಸಿಶನ್ ಟೈಟ್! ಹೀಗಾಗಿ OTT ಮನರಂಜನೆ ಒಂದೇ ಗಟ್ಟಿ ಎಂದಾಗಿದೆ. ಹೀಗಾಗಿ ಇವಳಿಗೆ ಇದು ಸುವರ್ಣಾವಕಾಶ. ನೋಡೋಣ, ಮುಂದೆ ಹೇಗೋ…. ಏನೋ?
ನ್ಯಾಪೋಟಿಸಂಗೆ ಬಲಿಯಾದ ನಟ ವಿದ್ಯುತ್
ಅತ್ಯಂತ ಪ್ರತಿಭಾವಂತ, ಅತ್ಯುತ್ತಮ ಮೈಕಟ್ಟು, ಫಿಟ್ನೆಸ್, ಆ್ಯಕ್ಷನ್ ಕಿಂಗ್ ಎನಿಸಿದ್ದರೂ ವಿದ್ಯುತ್ ಜಮಾಲ್ ಗೇಕೆ ಚಿತ್ರಗಳು ಕೈಗೂಡುತ್ತಿಲ್ಲ? ಬಹುಶಃ ಈತನಿಗೆ ಯಾರೂ ಗಾಡ್ ಫಾದರ್ ಇಲ್ಲ ಎಂಬುದೇ ಪ್ರಮುಖ ಕಾರಣವಿರಬಹುದು. ಟೈಗರ್ ಶ್ರಾಫ್, ಹೃತಿಕ್ ಗಿಂತಲೂ ಮಿಗಿಲಾದ ಬಾಡಿ ಫಿಟ್ನೆಸ್ ಹೊಂದಿರುವ ಈತನ ಚಿತ್ರಗಳಿಗೆ ಡಿಮ್ಯಾಂಡ್ ಇಲ್ಲ. ಆದರೆ ತಲೆಬಾಲವಿಲ್ಲದ ಅವರಿಬ್ಬರ ಚಿತ್ರಗಳಿಗೆ ಮೊದಲ ಮನ್ನಣೆ! ವಿದ್ಯುತ್ ನ ಇತ್ತೀಚಿನ ಹೊಸ ಚಿತ್ರ ಬಹಳ ಡ್ಯಾಶಿಂಗ್ ಚಿತ್ರವೇನಲ್ಲ. ಆದರೆ ವೀಕ್ಷಕರಿಗೆ ಧಾರಾಳ ಮನರಂಜನೆ ಅಂತೂ ಗ್ಯಾರಂಟಿ! ಈ ಚಿತ್ರ ಹಣ ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ. ಆದರೂ ಯಾರೂ ಮುಂದಿ ಬಂದು ಈತನಿಗೆ ಹೊಸ ಚಿತ್ರಗಳ ಆಫರ್ ನೀಡುತ್ತಿಲ್ಲ. ಯಾಕೋ ಏನೋ…. ಈತ ಬಾಲಿವುಡ್ ನ ಕೆಟ್ಟ ಕ್ಯಾಂಪ್ ಬಾಜಿ ಹಾಗೂ ನ್ಯಾಪೋಟಿಸಂಗೆ ಹರಕೆಯ ಕುರಿ ಆಗಿಹೋದನೇ…… ಅನಿಸುತ್ತಿದೆ.