ಸಾಮಗ್ರಿ : 250 ಗ್ರಾಂ ಎಳೆ ಬೆಂಡೆಕಾಯಿ, 2 ಈರುಳ್ಳಿಯ ಪೇಸ್ಟ್, 4 ಚಮಚ ಹುರಿಗಡಲೆ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಧನಿಯಾಪುಡಿ, ಗರಂ ಮಸಾಲ, ಅಮ್ಚೂರ್‌ ಪುಡಿ, ಅರಿಶಿನ, ಅರ್ಧ ಸೌಟು ಎಣ್ಣೆ, ಅಲಂಕರಿಸಲು ಈರುಳ್ಳಿ, ಟೊಮೇಟೊ ಬಿಲ್ಲೆ.

ವಿಧಾನ : ಬೆಂಡೆ ಶುಚಿಗೊಳಿಸಿ, ಒರೆಸಿಕೊಂಡು, ಮೇಲಿನ ಕೆಳಭಾಗ ಎರಡನ್ನೂ ಕತ್ತರಿಸಿ. ಇದನ್ನು ಉದ್ದುದ್ದಕ್ಕೆ ಸೀಳಿಕೊಂಡು, ನಡುವಿನ ಬೀಜ ಬೇರ್ಪಡಿಸಿ. ಚಿಕ್ಕ ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಮೊದಲು ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಎಲ್ಲಾ ಮಸಾಲೆ ಹಾಕಿ ಚೆನ್ನಾಗಿ ಕೆದಕಿ ಕೆಳಗಿಳಿಸಿ. ಇದಕ್ಕೆ ಹುರಿಗಡಲೆ ಹಿಟ್ಟು, ಉಪ್ಪು ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದು ಚೆನ್ನಾಗಿ ಆರಿದ ನಂತರ, ಪ್ರತಿ ಬೆಂಡೆಯಲ್ಲೂ 1-1 ಚಮಚದಷ್ಟು ತುಂಬಿಸಿ. ಒಂದು ನಾನ್ ಸ್ಟಿಕ್‌ ಬಾಣಲೆಯಲ್ಲಿ ಮೊದಲು ತುಸು ಎಣ್ಣೆ ಬಿಸಿ ಮಾಡಿ, ಅದಕ್ಕೆ ಒಗ್ಗರಣೆ ಕೊಡಿ. ನಂತರ ಈ ಬೆಂಡೆ, ಕರಿಬೇವು ಹಾಕಿ, ನಡುನಡುವೆ ತುಸು ಎಣ್ಣೆ ಬೆರೆಸುತ್ತಾ ಹದನಾಗಿ ಬಾಡಿಸಿ, ಬೆಂದಾಗ ಕೆಳಗಿಳಿಸಿ.

cookry-3

ಮಿಶ್ರ ತರಕಾರಿಯ ಸ್ಪೆಷಲ್ ಪಲ್ಯ

ಸಾಮಗ್ರಿ : ಒಂದಿಷ್ಟು ಹೆಚ್ಚಿದ ಬೀನ್ಸ್, ತೊಂಡೆಕಾಯಿ, ಆಲೂ, ಕ್ಯಾರೆಟ್‌, ಹೂಕೋಸು, ಎಲೆಕೋಸು, ಗೆಡ್ಡೆಕೋಸು, 2 ಬಗೆಯ  ಕ್ಯಾಪ್ಸಿಕಂ ಹೋಳು, 4 ಈರುಳ್ಳಿ, 3 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿ, ಲವಂಗ, ಕರಿ ಮೆಣಸು, ಚಕ್ಕೆ, ಮೊಗ್ಗು, ಗಸಗಸೆ, ಲವಂಗದ ಎಲೆ (ಪಲಾವ್ ಎಲೆ), ಒಗ್ಗರಣೆ ಸಾಮಗ್ರಿ, ಅರ್ಧ ಸೌಟು ಎಣ್ಣೆ, ಕರಿಬೇವು, ಕೊ.ಸೊಪ್ಪು, 1 ಗಿಟುಕು ತೆಂಗಿನ ತುರಿ.

ವಿಧಾನ : ಗಟ್ಟಿ ತರಕಾರಿ ಹೋಳುಗಳನ್ನು ಕುಕ್ಕರ್‌ ನಲ್ಲಿ 1 ಸೀಟಿ ಬರುವಂತೆ (ಸ್ವಲ್ಪವೇ ನೀರಿರಲಿ) ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆ ಕೊಡಿ. ನಂತರ ಚಕ್ಕೆ, ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ಆಮೇಲೆ ಹೆಚ್ಚಿದ ಈರುಳ್ಳಿ, ಪಲಾವ್ ‌ಎಲೆ, ಕ್ಯಾಪ್ಸಿಕಂ, ಹೂಕೋಸು ಹಾಕಿ ಬಾಡಿಸಿ. ನಂತರ ಟೊಮೇಟೊ ಸೇರಿಸಿ ಬಾಡಿಸಿ. ಅಷ್ಟರಲ್ಲಿ ಮಿಕ್ಸಿಗೆ ಕರಿಮೆಣಸು, ಗಸಗಸೆ, ತೆಂಗಿನ ತುರಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ರುಬ್ಬಿಕೊಂಡು ಬಾಣಲೆಗೆ ಸೇರಿಸಿ ಬಾಡಿಸಿ. ನಂತರ ಬೆಂದ ತರಕಾರಿ ಹೋಳು, ಉಪ್ಪು, ಖಾರ ಎಲ್ಲಾ ಸೇರಿಸಿ ಹದನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಮೇಲೆ ಇನ್ನಷ್ಟು ತೆಂಗಿನ ತುರಿ, ಕೊ.ಸೊಪ್ಪು ಉದುರಿಸಿ ಬಿಸಿ ಬಿಸಿ ಅನ್ನ ಸಾರಿನ ಜೊತೆ ಸವಿಯಲು ಕೊಡಿ.

cookry-2

ಡ್ರೈ ವೆಜಿಟೆಬಲ್ ಮಂಚೂರಿಯನ್

ಸಾಮಗ್ರಿ : ಒಂದಿಷ್ಟು ಹೆಚ್ಚಿದ ಹೂಕೋಸು, ಎಲೆಕೋಸು, ಕ್ಯಾರೆಟ್‌, 3 ಬಗೆ ಕ್ಯಾಪ್ಸಿಕಂ, ಬೀನ್ಸ್, ಆಲೂ, ಜೊತೆಗೆ ಹೆಚ್ಚಿದ 3 ಈರುಳ್ಳಿ, ಅರ್ಧ ಕಪ್‌ ಈರುಳ್ಳಿ ತೆನೆ, 4-5 ಹಸಿ ಮೆಣಸು, 1 ತುಂಡು ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು, ಪುಡಿ ಮೆಣಸು, ಸೋಯಾ/ರೆಡ್‌ ಚಿಲೀ/ಟೊಮೇಟೊ ಸಾಸ್‌, ವಿನಿಗರ್‌, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕಾರ್ನ್‌ ಫ್ಲೋರ್‌, ಮೈದಾ, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಸಣ್ಣಗೆ ಹೆಚ್ಚಿದ ಎಲ್ಲಾ ತರಕಾರಿ, ಹಸಿ ಮೆಣಸು, ಶುಂಠಿ, ಮೈದಾ, ಕಾರ್ನ್‌ ಫ್ಲೋರ್‌, ಉಪ್ಪು, ಪುಡಿ ಮೆಣಸು, ಸೋಯಾ ಸಾಸ್‌ ಹಾಕಿ, ತುಸು ನೀರು ಚಿಮುಕಿಸಿ ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಉಂಡೆ ಹಿಡಿದು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ 3 ಬಗೆ ಸಾಸ್‌, ವಿನಿಗರ್‌ ಹಾಕಿ ಕೈಯಾಡಿಸಿ. ಉಳಿದ ಮೈದಾ ಕಾರ್ನ್‌ ಫ್ಲೋರ್‌ ನ್ನು ಬಿಸಿ ನೀರಲ್ಲಿ ಕದಡಿಕೊಂಡು, ಉಪ್ಪು, ಪುಡಿ ಮೆಣಸು ಸಮೇತ ಇದಕ್ಕೆ ಬೆರೆಸಿ ಕೆದಕಬೇಕು.  ಕೊನೆಯಲ್ಲಿ ಕರಿದ ವೆಜ್‌ ಬಾಲ್ಸ್ ಇದಕ್ಕೆ ಬೆರೆಸಿ, ಒಡೆಯದಂತೆ ಚೆನ್ನಾಗಿ ಬ್ಲೆಂಡ್‌ ಮಾಡಿ. ಈ ಗ್ರೇವಿ ಕುದ್ದು ಸಾಕಷ್ಟು ಗಟ್ಟಿಯಾದಾಗ, ಇದರ ಮೇಲೆ ಈರುಳ್ಳಿ ತೆನೆ ಉದುರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ, ಬಿಸಿ ಬಿಸಿಯಾಗಿ ಚಪಾತಿ/ ಪೂರಿ ಜೊತೆ ಸವಿಯಲು ಕೊಡಿ.

page-3

ಬೀನ್ಸ್ ಸ್ಪೆಷಲ್ ಪಲ್ಯ

ಸಾಮಗ್ರಿ : 250 ಗ್ರಾಂ ಎಳೆ ತಾಜಾ ಹುರುಳಿಕಾಯಿ, 1-2 ಕ್ಯಾರೆಟ್‌, ಅರ್ಧ ಕಪ್‌ ಹೆಸರುಬೇಳೆ, ಒಗ್ಗರಣೆಗೆ ಎಣ್ಣೆ, ಕರಿಬೇವು, ಸಾಸುವೆ, ಜೀರಿಗೆ, ಕ/ಉ ಬೇಳೆ, 1-2 ಇಡಿಯಾದ ಒಣ ಮೆಣಸಿನಕಾಯಿ, 1 ದೊಡ್ಡ ಗಿಟುಕು ತೆಂಗಿನ ತುರಿ, ರುಚಿಗೆ ತಕ್ಕಷ್ಟು ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹಸಿ ಮೆಣಸಿನ ಪೇಸ್ಟ್.

ವಿಧಾನ : ಮೊದಲು ಹೆಸರು ಬೇಳೆಯನ್ನು ತುಸು ತುಪ್ಪದಲ್ಲಿ ಲಘುವಾಗಿ ಹುರಿದು ಹೆಚ್ಚಿದ ಬೀನ್ಸ್ ಜೊತೆ 1-2 ಸೀಟಿ ಬರುವಂತೆ ಬೇಯಿಸಿಡಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ತುಂಡರಿಸಿದ ಒಣ ಮೆಣಸಿನಕಾಯಿ ಸಮೇತ ಒಗ್ಗರಣೆ ಕೊಡಿ. ನಂತರ ಇದಕ್ಕೆ ಸಣ್ಣಗೆ, ಉದ್ದಕ್ಕೆ ಹೆಚ್ಚಿದ ಕ್ಯಾರೆಟ್‌ ಹಾಕಿ ಬಾಡಿಸಿ ಆಮೇಲೆ ಶುಂಠಿ-ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ ಹಾಕಿ ಬಾಡಿಸಿ, ಉಪ್ಪು ಸೇರಿಸಿ. ನಂತರ ತೆಂಗಿನ ತುರಿ, ಬೆಂದ ಬೇಳೆ ಬೀನ್ಸ್ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿಯಾದ ಇದನ್ನು ದೋಸೆ, ಚಪಾತಿ, ತಿಳಿಸಾರು ಅನ್ನದ ಜೊತೆ ಸವಿಯಿರಿ.

ಹಾಗಲಕಾಯಿ ಸ್ಪೆಷಲ್ ತೊವ್ವೆ

ಸಾಮಗ್ರಿ : 250 ಗ್ರಾಂ ಹಾಗಲಕಾಯಿ, ಅರ್ಧ ಕಪ್‌ ಕಡಲೆಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಧನಿಯಾಪುಡಿ, ಸೋಂಪಿನ ಪುಡಿ, ಗರಂಮಸಾಲ, ಅರಿಶಿನ, ಟೊಮೇಟೊ  ಪೇಸ್ಟ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1 ಲವಂಗದೆಲೆ, ತುಸು ಏಲಕ್ಕಿ, ಮೆಣಸು, ಲವಂಗ, ಒಗ್ಗರಣೆಗೆ ಜೀರಿಗೆ, ಸಾಸುವೆ, ಈರುಳ್ಳಿ, ಕೊ.ಸೊಪ್ಪು, ಕರಿಯಲು ಎಣ್ಣೆ.

ವಿಧಾನ : ಹಾಗಲಕಾಯಿ ಶುಚಿ ಮಾಡಿ, ಬಿಲ್ಲೆಗಳಾಗಿಸಿ ಮಧ್ಯದ ಭಾಗ ತೆಗೆಯಿರಿ. ಇದನ್ನು ಅರಿಶಿನ, ಉಪ್ಪು ಬೆರೆಸಿದ ನೀರಲ್ಲಿ 1 ಗಂಟೆ ನೆನೆಹಾಕಿಡಿ. ನಂತರ ನಲ್ಲಿ ನೀರಲ್ಲಿ ತೊಳೆದು, ಒರೆಸಿ, ಫ್ಯಾನಿನಡಿ ಒಣಗಲು ಬಿಡಿ. ನಂತರ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಒಂದು ಪ್ರೆಷರ್‌ ಪ್ಯಾನ್‌ ನಲ್ಲಿ ಮೊದಲು ತುಸು ಎಣ್ಣೆ ಬಿಸಿ ಮಾಡಿ, ಲವಂಗ ಇತ್ಯಾದಿ ಹಾಕಿ ಚಟಪಟಾಯಿಸಿ. ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಕಡಲೆಬೇಳೆ ಬೆರೆಸಿ, ತುಸು ಉಪ್ಪು, ನೀರು ಹಾಕಿ, 2 ಸೀಟಿ ಬರುವಂತೆ ಬೇಯಿಸಿ. ಆಮೇಲೆ ತೊವ್ವೆಗೆ ಟೊಮೇಟೊ ಪೇಸ್ಟ್, ಉಪ್ಪು, ಖಾರ, ಮಸಾಲೆ, ಕರಿದ ಹಾಗಲಕಾಯಿ ಎಲ್ಲಾ ಹಾಕಿ 2 ನಿಮಿಷ ಕುದಿಸಬೇಕು. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿ ಚಪಾತಿ, ದೋಸೆ, ಅನ್ನದ ಜೊತೆ ಸವಿಯಿರಿ.

page-4

ಸೋರೆಕಾಯಿ ಸ್ಪೆಷಲ್

ಸಾಮಗ್ರಿ : 1 ಸಣ್ಣ ಸೋರೆಕಾಯಿ, 1 ಕಪ್‌ ಕಡಲೆಹಿಟ್ಟು, ಅರ್ಧ ಕಪ್‌ ಹೆಸರುಬೇಳೆ (ನೆನೆಸಿ ರುಬ್ಬಿಡಿ), ಒಂದಿಷ್ಟು ಹೆಚ್ಚಿದ ಶುಂಠಿ, ಹಸಿಮೆಣಸು, ಕರಿಬೇವು, ಕೊ.ಸೊಪ್ಪು, ಪುದೀನಾ, ಬೆಳ್ಳುಳ್ಳಿ, ಈರುಳ್ಳಿ, ಚಿಟಕಿ ಅರಿಶಿನ, ರುಚಿಗೆ ಉಪ್ಪು, ಖಾರ, ಕರಿಯಲು ಎಣ್ಣೆ.

ವಿಧಾನ : ಸೋರೆಕಾಯಿ ನೀಟಾಗಿ ತುರಿದುಕೊಂಡು ಅದಕ್ಕೆ ಉಳಿದೆಲ್ಲ ಸಾಮಗ್ರಿ ಬೆರೆಸಿ ಬೋಂಡ ಮಿಶ್ರಣದಂತೆ ಕಲಸಿಡಿ, ತೆಳು ಆಗದಂತೆ ಎಚ್ಚರವಹಿಸಿ. ಇದನ್ನು 1-5 ನಿಮಿಷ ಹೀಗೆ ನೆನೆಯಲು ಬಿಡಿ. ಒಂದು ನಾನ್‌ ಸ್ಟಿಕ್‌ ಪ್ಯಾನಿನಲ್ಲಿ 3-4 ಚಮಚ ಎಣ್ಣೆ ಬಿಸಿ ಮಾಡಿ. ಅದರ ಮೇಲೆ ದಪ್ಪು ಪದರ ಬರುವಂತೆ ಈ ಮಿಶ್ರಣವನ್ನು ಹರಡಿ. ನಂತರ ಇನ್ನೊಂದು ಬದಿ ತಿರುವಿಹಾಕಿ, ಮತ್ತೆ ಎಣ್ಣೆ ಬಿಟ್ಟು ಬೇಯಿಸಿ. ನಂತರ ಜಿಡ್ಡು ಸವರಿದ ಒಂದು ತಟ್ಟೆಗೆ ಇದನ್ನು ರವಾನಿಸಿ. ಚೆನ್ನಾಗಿ ಆರಿದ ನಂತರ ಇದರಿಂದ ಕ್ಯೂಬ್ಸ್ ಕತ್ತರಿಸಿ. ಮತ್ತೆ ಅದೇ ಪ್ಯಾನಿನಲ್ಲಿ ಇವೆಲ್ಲವನ್ನೂ ಹಾಕಿ, ಎಣ್ಣೆ ಬಿಟ್ಟು ತಿರುವಿ ಹಾಕುತ್ತಾ, ಫ್ರೈ ಮಾಡಿ ತೆಗೆಯಿರಿ.

ಕ್ಯಾಪ್ಸಿಕಂ ಕೋಫ್ತಾ

ಮೂಲ ಸಾಮಗ್ರಿ : ಅತಿ ಸಣ್ಣಗೆ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ (ಒಟ್ಟಾರೆ 1 ಕಪ್‌), 1 ಕಪ್‌ ಕಡಲೆಹಿಟ್ಟು, 50 ಗ್ರಾಂ ಪನೀರ್‌, ತುಸು ಹೆಚ್ಚಿದ ಶುಂಠಿ, ಹಸಿ ಮೆಣಸು, ಅರ್ಧ ಸಣ್ಣ ಚಮಚ ಗರಂಮಸಾಲ, ಉಪ್ಪು, ಕರಿಯಲು ಎಣ್ಣೆ.

ಮಸಾಲೆಗಾಗಿ ಸಾಮಗ್ರಿ : ಅರ್ಧ ಕಪ್‌ ಈರುಳ್ಳಿ ಪೇಸ್ಟ್, ಉದ್ದಕ್ಕೆ ಹೆಚ್ಚಿದ 1 ಈರುಳ್ಳಿ,  ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿನ, ಧನಿಯಾಪುಡಿ, ಏಲಕ್ಕಿ ಪುಡಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಕರಿಬೇವು.

ವಿಧಾನ : ತುಸು ನೀರು ಬೆರೆಸಿ ಮೂಲ ಸಾಮಗ್ರಿ ಎಲ್ಲಾ ಕಲಸಿಕೊಳ್ಳಿ. ಇದರಿಂದ ಸಣ್ಣ ಉಂಡೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು, ಈರುಳ್ಳಿ ಹಾಕಿ ಬಾಡಿಸಿ. ನಂತರ ಎಲ್ಲಾ ಮಸಾಲೆ ಸಾಮಗ್ರಿ ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಕರಿದ ಕೋಫ್ತಾ, ಬೆರೆಸಿ ಅದನ್ನೂ ಸೇರಿಸಿ ಕೆದಕಬೇಕು. 2 ಚಮಚ ನೀರು ಬೆರೆಸಿ, ಮಂದ ಉರಿಯಲ್ಲಿ ಕುದಿಸಬೇಕು. ನಂತರ ಚಿತ್ರದಲ್ಲಿರುವಂತೆ ಸರ್ವಿಂಗ್‌ ಡಿಶ್ಶಿಗೆ ರವಾನಿಸಿ, ನೀಟಾಗಿ ಅಲಂಕರಿಸಿ, ಸಂಜೆ ಬಿಸಿ ಬಿಸಿಯಾಗಿ ಕಾಫಿ/ಟೀ ಜೊತೆ ಸವಿಯಿರಿ.

AA-palak-sabudane-ki-tikki-(4)

ಸ್ವಾದಿಷ್ಟ ಸಾಬೂದಾಣಿ ಮಸಾಲೆ ವಡೆ

ಸಾಮಗ್ರಿ : 1-1 ಕಪ್‌ ಸಾಬೂದಾಣಿ (ಸಬ್ಬಕ್ಕಿ), ಹೆಚ್ಚಿದ ಸಬ್ಬಸಿಗೆ ಸೊಪ್ಪು, ಅರ್ಧರ್ಧ ಕಪ್‌ ಪನೀರ್‌, ಹುರಿದು ತರಿ ಮಾಡಿದ ಕಡಲೆಬೀಜ, ಬೇಯಿಸಿ ಮಸೆದ 2 ಆಲೂ, ತುಸು ಹೆಚ್ಚಿದ ಹಸಿಮೆಣಸು, ಶುಂಠಿ, ಕರಿಬೇವು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಕರಿಯಲು ಎಣ್ಣೆ.

ವಿಧಾನ : ಹಿಂದಿನ ರಾತ್ರಿ ನೆನೆಹಾಕಿಟ್ಟ ಸಬ್ಬಕ್ಕಿ ಶುಚಿಗೊಳಿಸಿಕೊಂಡು ಅದಕ್ಕೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿ ಬೆರೆಸಿ, ವಡೆಯ ಹದಕ್ಕೆ ಮಿಶ್ರಣ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಜಿಡ್ಡು ಸವರಿದ ಅಂಗೈ ಮೇಲೆ ಒಂದೊಂದೇ ವಡೆ ತಟ್ಟಿಕೊಳ್ಳುತ್ತಾ, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿಯಿರಿ. ಗರಿಗರಿಯಾದ ಇವನ್ನು ಪುದೀನಾ ಚಟ್ನಿ, ಟೊಮೇಟೊ ಸಾಸ್‌ ಜೊತೆ ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ