ಕುಟುಂಬದ ಕೇಂದ್ರಬಿಂದು ಆಗಿರುವ ಗೃಹಿಣಿ, ಏನಾದರೂ ಮಾಡಿ ಒಂದಿಷ್ಟು ಹಣಕಾಸು ಉಳಿತಾಯ ಮಾಡಿದರೆ ಮಾತ್ರ, ಮುಂದೆ ಆ ಕುಟುಂಬಕ್ಕೆ ಸುಖವೇ ಭವಿಷ್ಯ ಗ್ಯಾರಂಟಿ. ಇದನ್ನು ಹಂತ ಹಂತವಾಗಿ ಸಾಧಿಸುವುದು ಹೇಗೆ……?
ಮಹಿಳೆಯರು ತಮ್ಮ ಕುಟುಂಬದ ಸದಸ್ಯರೆಲ್ಲರ ದೈಹಿಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವರೆಂದೇ ಗುರುತಿಸಿ ಕೊಂಡವರು. ಹಾಗೆಯೇ ಮಹಿಳೆಯರಾದ ನಾವೆಲ್ಲರೂ ನಮ್ಮ ಹಣಕಾಸಿನ ಕಡೆಗೆ ಗಮನ ಹರಿಸುವುದು ಕೂಡ ಅಷ್ಟೇ ಅತ್ಯಗತ್ಯ. ಹಣಕಾಸನ್ನು ಸದಾ ನಾವು ಉಳಿತಾಯ ಮಾಡುತ್ತಾ ಬಂದು ಅದರ ಕಡೆಗೆ ವಿಶೇಷ ಗಮನಹರಿಸಿದರೆ, ಅದೇ ಹಣಕಾಸು ಕಷ್ಟ ಕಾಲದಲ್ಲಿ ನಮ್ಮ ನೆರವಿಗೆ ಬರುವುದು, ಕಂಡವರ ಬಳಿ ಸಾಲಕ್ಕೆ ಕೈ ಚಾಚುವ ಅಗತ್ಯವಿಲ್ಲ. ಹಣವನ್ನು ಸಮರ್ಪಕ ರೀತಿಯಲ್ಲಿ ಬಳಸುತ್ತಾ ನಿರಂತರವಾಗಿ ಉಳಿತಾಯ ಮಾಡುತ್ತಾ ಬಂದರೆ ನಮ್ಮ ಬಳಿ ಅಗತ್ಯಕ್ಕೆ ತಕ್ಕಷ್ಟು ಹಣವಿದೆ ಎಂಬ ಆತ್ಮವಿಶ್ವಾಸ ಕೂಡ ಬೆಳೆಯುವುದು.
ಈ ರೀತಿ ಹಣವನ್ನು ಉಳಿಸಿ ನಿಯಮಿತ ಖರ್ಚು ಮಾಡುವುದರಿಂದ ನಮಗೆ ಲಂಚಕ್ಕೆ ಕೈ ಒಡ್ಡಬೇಕೆಂದು ಅಥವಾ ಭ್ರಷ್ಟಾಚಾರವೆಸಗಿ ಅಪಾರ ದುಡ್ಡು ಮಾಡಬೇಕೆಂಬ ಕೆಟ್ಟ ಆಲೋಚನೆಗಳು ಬರುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ, ನಮಗೆ ಬೇರೆಯವರ ದುಡ್ಡಿಗೆ ಬಾಯಿ ಬಿಡಬೇಕೆಂದು ಎಂದಿಗೂ ಅನಿಸುವುದೇ ಇಲ್ಲ. ಮುಂದಿನ ದಿನಗಳಿಗಾಗಿ ಕುಟುಂಬದ ಹಣಕಾಸಿನ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ನಾವೆಲ್ಲರೂ ಈ ಕೆಳಗಿನಂತೆ ಗಮನ ಹರಿಸೋಣವೇ?
ಅತಿ ಮುಖ್ಯ ಅಂಶಗಳು
ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತಮ್ಮ ಖರ್ಚಿಗೆಂದು ಹೆತ್ತವರು ನೀಡಿದ ಪಾಕೆಟ್ ಮನಿಯಲ್ಲಿ ಸ್ವಲ್ಪ ಭಾಗವನ್ನು ಬ್ಯಾಂಕ್ ಖಾತೆ ತೆರೆದು ಅಲ್ಲಿ ಉಳಿತಾಯ ಮಾಡುವುದು ಒಳ್ಳೆಯ ಅಭ್ಯಾಸ. ಮುಂದೆ ಅದೇ ರೂಢಿಯಾಗಿ ಇನ್ನಷ್ಟು ಉಳಿತಾಯ ಮಾಡಲು ಪ್ರೇರಣೆ ಸಿಗುತ್ತದೆ.
ನೌಕರಿಗೆ ಸೇರಿ ಸಂಬಳ ದೊರಕಿದ ಕೂಡಲೇ ಸಂತಸ ಹಂಚಿಕೊಳ್ಳಲು ತಮ್ಮ ಪ್ರೀತಿ ಪಾತ್ರರಿಗೆ ಮೊದಲ ಸಂಬಳದಲ್ಲಿ ಉಡುಗೊರೆ ನೀಡುವುದು ಎಷ್ಟು ಮುಖ್ಯವೋ, ಮೊದಲ ತಿಂಗಳಿನಿಂದಲೇ ಹಣ ಉಳಿತಾಯ ಮಾಡುವುದೂ ಅಷ್ಟೇ ಮುಖ್ಯ. ದೊರೆತ ಸಂಬಳದಲ್ಲಿ ಕನಿಷ್ಠ ಶೇ.25 ರಷ್ಟನ್ನು ಉಳಿತಾಯ ಮಾಡುವುದು ಅಪೇಕ್ಷಣೀಯ. ಮನೆ ಖರ್ಚಿಗೆಂದು ಗಂಡಂದಿರು ತಿಂಗಳ ಆರಂಭದಲ್ಲಿ ನೀಡುವ ಹಣದಲ್ಲಿ ಸ್ವಲ್ಪ ಭಾಗವನ್ನು ಹೀಗೆ ಉಳಿತಾಯ ಮಾಡಬಹುದು.
ಪ್ರತಿ ತಿಂಗಳೂ ಹಣ ಉಳಿತಾಯ ಮಾಡಲು ಅನುಕೂಲವಾಗುವಂತೆ ಬ್ಯಾಂಕ್, ಅಂಚೆ ಕಛೇರಿಗಳಲ್ಲಿ ಆರ್ತಕ ಠೇವಣಿ (ರೆಕರಿಂಗ್‌ಡೆಪಾಸಿಟ್ ಅಥವಾ ಆರ್.ಡಿ) ಖಾತೆಗಳನ್ನು ತೆರೆಯುವ ಸೌಲಭ್ಯವಿದೆ. ಅಗತ್ಯ ಬಿದ್ದರೆ ಇಂತಹ ಆರ್.ಡಿ. ಖಾತೆಗಳಲ್ಲಿ ಜಮಾ ಮಾಡಿದ ಮೊತ್ತದ ಮೇಲೆ ಸಾಲ ಕೂಡ ಪಡೆಯಬಹುದು.
ಈ ಸಾಲಕ್ಕೆ ಆರ್.ಡಿ ಠೇವಣಿಗೆ ದೊರಕುವ ಬಡ್ಡಿಗಿಂತ ತುಸು ಹೆಚ್ಚಿನ ಬಡ್ಡಿ ಇರುವುದು. ಠೇವಣಿಯ ಮೇಲಿನ ಬಡ್ಡಿ ದೊರಕುತ್ತಲೇ ಇರುವುದು. ಬೇರೆ ಮೂಲಗಳಿಂದ ಹಣ ದೊರಕಿದರೆ ಇಂತಹ ಸಾಲವನ್ನು ತೀರಿಸಬಹುದು ಅಥವಾ ಠೇವಣಿ ಪರಿಪಕ್ವಗೊಂಡಾಗ ಅಂದರೆ ಅವಧಿ ಮುಗಿದಾಗ ಅದರಲ್ಲಿ ಸಾಲದ ಮೊತ್ತವನ್ನು ಕಳೆದು, ಉಳಿದ ಮೊತ್ತವನ್ನು ಪಡಕೊಳ್ಳಬಹುದು.
ಆರ್ತಕ ಠೇವಣಿ ಮುಗಿದ ಬಳಿಕ ಆ ಮೊತ್ತವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು ಅಥವಾ ಆ ಮೊತ್ತವನ್ನು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮಾಡಿ ಹೆಚ್ಚಿನ ಬಡ್ಡಿಯನ್ನು ಪಡಕೊಳ್ಳಬಹುದು.
ಸ್ವಂತಕ್ಕೆ ಕಲೆ ಹಾಗೂ ಕುಟುಂಬದವರ ಹೆಸರಲ್ಲಿ ನಾವು ಆರೋಗ್ಯ ಮತ್ತು ಅಪಘಾತ ವಿಮೆಗಳನ್ನು ಮಾಡಿಸಿಕೊಳ್ಳುವುದು ನಿಜಕ್ಕೂ ಒಳ್ಳೆಯದೇ. ಹಾಗೆಯೇ ಅದನ್ನು ಪ್ರತೀ ವರ್ಷ ನವೀಕರಿಸುವುದನ್ನು ಮರೆಯಬಾರದು. ಅನಿರೀಕ್ಷಿತ ಅಪಘಾತ ಅಥವಾ ಅನಾರೋಗ್ಯ ಉಂಟಾದಾಗ ಆಸ್ಪತ್ರೆಯ ದುಬಾರಿ ವೆಚ್ಚಗಳನ್ನು ಭರಿಸುವಾಗ ಇಂತಹ ವಿಮೆಗಳಿದ್ದರೆ ಸಹಕಾರಿ. ಇವುಗಳಿಗೆ ಕಟ್ಟುವ ವಾರ್ಷಿಕ ಕಂತಿಗೆ (ಪ್ರೀಮಿಯಂ) ಆದಾಯ ತೆರಿಗೆಯ ವಿನಾಯಿತಿ ದೊರಕುವುದು.
ಆಪ್ತರು ಅಗಲಿದಾಗ
ಕುಟುಂಬದವರ ಅನಿರೀಕ್ಷಿತ ಅಗಲಿಕೆಯ ನೋವು ಸದಾ ಕಾಡುತ್ತಿರುವುದು. ಅವರ ದುಡಿತದಿಂದ ಕುಟುಂಬದ ನಿರ್ವಹಣೆ ನಡೆಯುತ್ತಿದ್ದರಂತೂ ವ್ಯಕ್ತಿಯ ಕಣ್ಮರೆಯ ವೇದನೆಯ ಜೊತೆಗೇ ಹಣಕಾಸಿನ ಕೊರತೆಯ ಕಷ್ಟ ಉಂಟಾಗುವುದು. ಹಾಗಾಗಿ ಅಂಥವರು ಅಗತ್ಯವಾಗಿ ಜೀವ ವಿಮೆ ಹೊಂದಿರುವುದು ಅಗತ್ಯ. ಆಗ ಆ ವ್ಯಕ್ತಿ ಮರಣ ಹೊಂದಿದರೂ ಮುಂದೆ ಕುಟುಂಬದವರಿಗೆ ಹಣಕಾಸಿನ ಮಟ್ಟಿಗೆ ಸಾಂತ್ವನ ದೊರಕಿದಂತಾಗುವುದು. ಅಧಿಕ ಪ್ರೀಮಿಯಂ ಇರುವಂತಹ ವಿಮೆಗಳು ಅಥವಾ ಬೇರೆ ಬೇರೆ ಕಂಪನಿಗಳಲ್ಲಿರುವ ವಿಭಿನ್ನ ವಿಮೆಗಳು ಬೇಕಾಗಿಲ್ಲ. ಏಕೆಂದರೆ ವಿಮೆಯನ್ನು ಕುಟುಂಬದ ಆಪದ್ಧನ ಎಂದು ನೋಡಬೇಕೇ ಹೊರತು ಒಂದು ಉಳಿತಾಯ ಯೋಜನೆ ಎಂದು ನೋಡಿದರೆ ಅದರಲ್ಲಿ ದೊರಕುವ ರಿಟರ್ನ್ ಅಥವಾ ಬಡ್ಡಿ ಬಹಳ ಕಡಿಮೆ.
ಕ್ರೆಡಿಟ್ ಕಾರ್ಡ್ ವ್ಯಾಮೋಹ
ಈಗ ಎಲ್ಲೆಡೆಗಳಲ್ಲೂ ಕ್ರೆಡಿಟ್ ಕಾರ್ಡ್ ಗಳು ಯಥೇಚ್ಛವಾಗಿ ದೊರಕುತ್ತಿರುತ್ತವೆ. ಕ್ರೆಡಿಟ್ ಕಾರ್ಡ್ ಗಳನ್ನು ಹೊಂದುವುದು ತಪ್ಪಲ್ಲವಾದರೂ ಪ್ರತಿ ಬಾರಿ ಕ್ರೆಡಿಟ್ ಕಾರ್ಡ್ ಬಳಸುವಾಗಲೂ ಮುಂದಿನ ತಿಂಗಳಲ್ಲಿ ಆ ಮೊತ್ತವನ್ನು ಭರಿಸುವಷ್ಟು ವರಮಾನ ಇರುವುದನ್ನು ಖಾತರಿ ಪಡಿಸಿಕೊಳ್ಳಲೇಬೇಕು. ವಾಯಿದೆಯ ದಿನಾಂಕದಂದು ಕ್ರೆಡಿಟ್ ಕಾರ್ಡ್ ನ ಬಾಕಿ ಮೊತ್ತವನ್ನು ಭರಿಸದಿದ್ದರೆ ತೆರಬೇಕಾದ ಬಡ್ಡಿ ದರ ದುಬಾರಿ ಆಗಿರುತ್ತದೆ. ಈ ಮೊತ್ತವನ್ನು ಕಂತಿನಲ್ಲಿ ಭರಿಸುವ ಆಯ್ಕೆ ಇರುವುದಾದರೂ ಇಲ್ಲೂ ಬಡ್ಡಿ ದರ ಹೆಚ್ಚೇ ಇರುವುದು.
ಉಳಿತಾಯ ಖಾತೆಯಲ್ಲಿ ತಿಂಗಳ ಖರ್ಚಿಗೆ ಅಗತ್ಯವಿರುವಷ್ಟು ಮಾತ್ರ ಹಣವನ್ನು ಉಳಿಸಿ, ಉಳಿದ ಮೊತ್ತವನ್ನು ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್)ಗೆ ವರ್ಗಾಯಿಸಿ ಹೆಚ್ಚಿನ ಬಡ್ಡಿ ಬರುವಂತೆ ನೋಡುವುದು ಜಾಣತನ. ಸದ್ಯ ಉಳಿತಾಯ ಖಾತೆಗಳಲ್ಲಿ ವಾರ್ಷಿಕ ಶೇ.2.5ರ ಆಸುಪಾಸಿನಲ್ಲಿ ಬಡ್ಡಿ ದರ ಲಭ್ಯವಿದ್ದರೆ ನಿಶ್ಚಿತ ಠೇವಣಿಗಳಲ್ಲಿ ವಾರ್ಷಿಕ ಸುಮಾರು ಶೇ.7 ರಷ್ಟು ಬಡ್ಡಿ ದೊರಕುವುದು.
ಉಳಿತಾಯ ಖಾತೆಗಳಲ್ಲಿ ದೈನಿಕ ದರದ ಆಧಾರದಲ್ಲಿ ಬಡ್ಡಿಯ ಲೆಕ್ಕಾಚಾರವಾಗುವ ಕಾರಣ ಎಷ್ಟು ಬೇಕೋ ಅಷ್ಟು ಮೊತ್ತವನ್ನು ಮಾತ್ರ ಉಳಿತಾಯ ಖಾತೆಯಿಂದ ಹಿಂಪಡೆಯುವುದು ಒಳ್ಳೆಯದು. ಯಾವುದಾದರೂ ಕಾರಣಕ್ಕೆಂದು ದೊಡ್ಡ ಮೊತ್ತವನ್ನು ಬ್ಯಾಂಕ್ ನಿಂದ ತೆಗೆದಿದ್ದು, ಅದನ್ನು ಉಪಯೋಗಿಸದಿದ್ದರೆ ಮರಳಿ ಬ್ಯಾಂಕ್ ಗೇ ಕಟ್ಟುವುದರಿಂದ ಮತ್ತೆ ಬಡ್ಡಿ ದೊರಕಲು ಪ್ರಾರಂಭವಾಗುವುದು.
ಉಳಿತಾಯಕ್ಕೆ ಸೂಕ್ತ ಉಪಾಯ
ಸ್ವಂತದ ಹೆಸರಲ್ಲಿ ತೆರೆದ ಉಳಿತಾಯ, ನಿಶ್ಚಿತ, ಆರ್ತಕ ಮುಂತಾದ ಖಾತೆಗಳಿಗೆ ಬಾಳ ಸಂಗಾತಿಯನ್ನೋ ಹೆತ್ತವರನ್ನೋ ನಾಮ ನಿರ್ದೇಶನ (ನಾಮಿನೇಷನ್) ಮಾಡುವುದು ಅತಿ ಅಗತ್ಯ. ಹಾಗೆ ಮಾಡಿದರೆ ಖಾತೆದಾರನ ಮರಣದ ಬಳಿಕ ನಾಮ ನಿರ್ದೇಶಿತ ವ್ಯಕ್ತಿ (ನಾಮಿನಿ) ಹೆಚ್ಚೇನೂ ತ್ರಾಸವಿಲ್ಲದೆ ಖಾತೆದಾರನ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬಹುದು. ಹಾಗೆಯೇ ಇಂತಹ ಖಾತೆಗಳನ್ನು ಸಂಗಾತಿಯೊಂದಿಗೋ, ಹೆತ್ತವರೊಂದಿಗೋ ಜಂಟಿ ಖಾತೆಯನ್ನಾಗಿಸಬಹುದು. ಆಗ ಜಂಟಿ ಖಾತೆದಾರರೂ ಖಾತೆಗಳಿಂದ ಹಣವನ್ನು ಹಿಂಪಡೆಯಬಹುದಾಗಿದೆ.
ಆಂಗ್ಲ ಭಾಷೆಯಲ್ಲಿ ಒಂದೂ ಸೂಕ್ತಿ ಇದೆ, `ಡೋಂಟ್ ಪುಟ್ ಆಲ್ ಯುವರ್ ಎಗ್ಸ್ ಇನ್ ಎ ಸಿಂಗಲ್ ಬಾಸ್ಕೆಟ್.’ ಅಂದರೆ ಎಲ್ಲ ಮೊಟ್ಟೆಗಳನ್ನೂ ಒಂದೇ ಬುಟ್ಟಿಯಲ್ಲಿಡಬೇಡಿ ಎಂದು. ಆಗ ಒಂದು ಮೊಟ್ಟೆ ಕೊಳೆತರೆ ಉಳಿದೆಲ್ಲ ಮೊಟ್ಟೆಗಳೂ ಕೊಳೆಯುತ್ತವೆ. ಅದೇ ರೀತಿಯಲ್ಲಿ ನಮ್ಮ ಎಲ್ಲ ಹಣವನ್ನೂ ಒಂದೇ ಕಡೆ ಹೂಡುವುದು ಅಷ್ಟು ಒಳ್ಳೆಯದಲ್ಲ.
ಬ್ಯಾಂಕ್, ಅಂಚೆ ಕಛೇರಿ, ಸಾರ್ಜನಿಕ ಭವಿಷ್ಯ ನಿಧಿ (ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಥವಾ ಪಿ.ಪಿ.ಎಫ್), ವಿಮೆ, ಮ್ಯೂಚುಯೆಲ್ ಫಂಡ್, ಶೇರು ಮಾರುಕಟ್ಟೆ, ಈ ವರ್ಷದ ಕೇಂದ್ರ ಮುಂಗಡ ಪತ್ರದಲ್ಲಿ ಘೋಷಿಸಿದ ಅಂಚೆ ಕಛೇರಿ ಮತ್ತು ಬ್ಯಾಂಕ್ ಗಳಲ್ಲಿ ಲಭ್ಯವಿರುವ ಮಹಿಳಾ ಸಮ್ಮಾನ ಉಳಿತಾಯ ಸರ್ಟಿಫಿಕೇಟ್, ಸ್ಥಿರಾಸ್ತಿ ಹೀಗೆ ಹಲವು ಕ್ಷೇತ್ರಗಳಲ್ಲಿ ಹಣವನ್ನು ಹೂಡಿ ನಷ್ಟದ ಅಪಾಯಗಳನ್ನು ತಗ್ಗಿಸಿ ಹೆಚ್ಚಿನ ಲಾಭ ಗಳಿಸಬಹುದು.
ತೆರಿಗೆ ಬಗ್ಗೆ ಎಚ್ಚರ
ಹಣ ಹೂಡುವಾಗ ಮುಂದೆ ನೀಡಬೇಕಾದಂತಹ ಆದಾಯ ತೆರಿಗೆ, ಲಭ್ಯವಿರುವ ತೆರಿಗೆ ವಿನಾಯಿತಿಗಳ ಕಡೆಗೂ ಗಮನ ನೀಡುವುದು ಅಗತ್ಯ. ಹಣ ಹೂಡಿಕೆ ಮಾಡುವಾಗ ಬಹು ಮುಖ್ಯ ಅಂಶ ಅಂದರೆ ನಮ್ಮ ಅಸಲಿನ ಮೊತ್ತ ಸುಭದ್ರವಾಗಿರಬೇಕು. ಹಾಗೆಯೇ ಹೂಡಿದ ಮೊತ್ತಕ್ಕೆ ಉತ್ತಮ ಎನಿಸುವಂತಹ ಬಡ್ಡಿಯೂ ದೊರಕುವಂತಿರಬೇಕು. ಹಾಗೆಂದೇ ಹೆಚ್ಚಿನ ಬಡ್ಡಿಯ ಆಕರ್ಷಣೆಯಿಂದ ಎಲ್ಲೆಲ್ಲೋ ಹಣ ಹೂಡಿ ಕೊನೆಗೆ ಅಸಲನ್ನೇ ಕಳೆದುಕೊಳ್ಳುವಂತೆ ಆಗಬಾರದು. ಚೀಟಿ ವ್ಯವಹಾರಗಳಲ್ಲಿ ಹಣ ತೊಡಗಿಸುವುದರಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ, ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕು.
ಹೊಸ ವಾಹನವನ್ನು ಖರೀದಿಸಬೇಕೆಂಬ ಆಸೆ ಇರುವುದು ಸಹಜವೇ. ಸಾಲ ಮಾಡುವುದಾದರೆ ಮರು ಪಾವತಿ ಹೇಗೆ? ಬಡ್ಡಿ ಎಷ್ಟು, ಬಡ್ಡಿಯ ಲೆಕ್ಕಾಚಾರ ಹೇಗೆ? ಅವಧಿಗಿಂತ ಮೊದಲೇ ಸಾಲವನ್ನು ತೀರಿಸಿದರೆ ಶುಲ್ಕ ಇದೆಯೇ ಎಂಬಿತ್ಯಾದಿ ಅಂಶಗಳನ್ನು ತಿಳಿದುಕೊಳ್ಳಲೇಬೇಕು. ಹಾಗೆಯೇ ಮನೆ ಕಟ್ಟಲು ಅಥವಾ ಫ್ಲ್ಯಾಟ್ ಖರೀದಿಸಲು ಗೃಹ ಸಾಲ ಪಡೆಯುವಾಗಲೂ ಈ ಎಲ್ಲ ವಿಚಾರಗಳ ಬಗ್ಗೆ ಗಮನ ಕೊಡಲೇಬೇಕು.
ಮಹಿಳೆಯರಿಗಾಗಿ ಬ್ಯಾಂಕಿನ ಸಾಲ
ಅನೇಕ ಬ್ಯಾಂಕುಗಳು ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಕೊಡುವ ಕಾರಣ ಅಂತಹ ಬ್ಯಾಂಕುಗಳಲ್ಲಿ ಸಾಲ ತೆಗೆಯುವುದು ಲಾಭದಾಯಕ. ಪ್ರತಿ ತಿಂಗಳೂ ತಪ್ಪದೇ ಬೇರೆ ಬೇರೆ ಸಾಲದ ಕಂತುಗಳನ್ನು ಕಟ್ಟುತ್ತಾ ಬಂದರೆ ಯಾವುದೇ ದಂಡ ಅಥವಾ ಹೆಚ್ಚಿನ ಶುಲ್ಕಗಳನ್ನು ತೆರಬೇಕಾಗಿಲ್ಲ. ಸಾಕಷ್ಟು ಆದಾಯವಿದ್ದರೆ, ಸಾಲದ ಕಂತುಗಳನ್ನು ನಿಗದಿತ ದಿನಾಂಕದಂದು ಕಟ್ಟುವುದಿದೆ ಎಂದು ಪ್ರತಿ ತಿಂಗಳೂ ಮಾಡಿಕೊಂಡು ಬಂದಿದ್ದ ಉಳಿತಾಯವನ್ನು ನಿಲ್ಲಿಸಬೇಕಾಗಿಲ್ಲ. ಸಾಲದ ಮರುಪಾವತಿ ಬೇರೆ, ಉಳಿತಾಯ ಬೇರೆ.
ಈಗ ಸಾಲ ಬಹಳ ಸುಲಭವಾಗಿ ದೊರಕುವುದು (ಪರ್ಸನಲ್ ಲೋನ್). ಹಾಗೆಂದು ಅನವಶ್ಯಕವಾಗಿ ಎಂದೂ ಸಾಲ ಮಾಡಲು ಹೋಗಬಾರದು. ಪಡೆದ ಸಾಲನ್ನು ಬಡ್ಡಿ ಸಮೇತ ಹಿಂತಿರುಗಿಸುವುದಿದೆ ಎಂಬುದು ಸದಾ ನಮ್ಮ ಸ್ಮರಣೆಯಲ್ಲಿರಲಿ. ತಿಂಗಳ ಆದಾಯ, ಮನೆಯ ಖರ್ಚು, ಅನಿರೀಕ್ಷಿತ ವೆಚ್ಚಗಳು, ಸಾಲದ ಕಂತುಗಳು, ಇವುಗಳನ್ನೆಲ್ಲ ಗಮನದಲ್ಲಿ ಇಟ್ಟುಕೊಳ್ಳಬೇಕು.
ಆರ್ಥಿಕ ಹಿಂಜರಿತ ಉಂಟಾದಾಗ ಕೆಲವೊಮ್ಮೆ ನೌಕರಿಯನ್ನು ಕಳೆದುಕೊಳ್ಳಬೇಕಾದ ಪ್ರಸಂಗಗಳು ಎದುರಾಗಬಹುದು. ಮುಂದೆ ಇನ್ನೊಂದು ಕೆಲಸ ಸಿಗುವವರೆಗೆ ಅನಿಶ್ಚತೆ ಉಂಟಾಗಬಹುದು. ಅಂತಹ ಸಂದರ್ಭಗಳಿಗಾಗಿ ಆಪದ್ಧನ ಇರಲೇ ಬೇಕು. ಅಷ್ಟೇ ಅಲ್ಲ, ಅಗತ್ಯವಿಲ್ಲದಿದ್ದರೆ ಯಾವ ಸಾಲವನ್ನೂ ಬೇಕಾ ಬಿಟ್ಟಿಯಾಗಿ ತೆಗೆದುಕೊಳ್ಳುವುದು ಖಂಡಿತ ಹಿತವಲ್ಲ.
ನೆನಪಿಡಬೇಕಾದ ಎಚ್ಚರಿಕೆಗಳು
ಬ್ಯಾಂಕಿನ ಚೆಕ್ ಗಳಿಗೆ ಮೊದಲೇ ಸಹಿ ಮಾಡಿಡುವುದು ಅಪಾಯಕಾರಿ. ಹಾಗೆಯೇ ಎ.ಟಿ.ಎಂ ಕಾರ್ಡುಗಳ ಹಿಂದುಗಡೆ ಅಥವಾ ಕಾರ್ಡಿನ ಜೊತೆಯಲ್ಲೇ ಅದರ ವೈಯಕ್ತಿಕ ಗೋಪ್ಯ ಸಂಖ್ಯೆ (ಪಿನ್) ಬರೆದಿಡುವುದು. ಖಾಲಿ ಚೆಕ್ಕು ಹಾಳೆಗೆ ಸಹಿ ಹಾಕಿದ್ದಕ್ಕೆ ಸಮಾನ ಎಂದರೆ ಮೊಬೈಲ್ ದೂರವಾಣಿಯಲ್ಲೋ ಮಿಂಚಂಚೆಯಲ್ಲೋ ಯಾವುದೋ ಅಪರಿಚಿತ ಲಿಂಕ್ ಗಳನ್ನು ಒತ್ತಿ ಬ್ಯಾಂಕ್ ಖಾತೆಯ ವಿವರ ನೀಡುವುದು.
ಅಪರಿಚಿತ ಕರೆಯ ಮೇರೆಗೆ ಒಟಿಪಿಯನ್ನು ಹಂಚಿಕೊಳ್ಳುವುದು. ಹಣ ಬರುತ್ತದೆ ಎಂದು ಯಾವುದೋ ಕ್ಯೂ ಆರ್ ಕೋಡ್ ನ್ನು ಸ್ಕ್ಯಾನ್ ಮಾಡುವುದು, ಲಾಟರಿ, ಉಡುಗೊರೆ ಅಥವಾ ಬಹುಮಾನ ಬಂದಿದೆ ಎಂದು ಶುಲ್ಕ ರೂಪದಲ್ಲಿ ಯಾವುದೋ ಅಪರಿಚಿತ ಬ್ಯಾಂಕ್ ಖಾತೆಗೆ ಹಣ ಕಳುಹಿಸುವುದು ಇಂತಹಗಳಿಂದ ವಂಚಕರ ಜಾಲಕ್ಕೆ ಬಿದ್ದು ಲಕ್ಷಾಂತರ ರೂಪಾಯಿಗಳನ್ನು ಕಳಕೊಳ್ಳುವಂತಾಗುವ ಕಾರಣ ಎಚ್ಚರ ವಹಿಸುವುದು ಲೇಸು.
ಸಾಲದ ಖಾತೆಗಳ ವಹಿವಾಟು
ಬ್ಯಾಂಕ್ ಠೇವಣಿ ಹಾಗೂ ಸಾಲದ ಖಾತೆಗಳ ವಹಿವಾಟುಗಳ ವಿವರ (ಬ್ಯಾಂಕ್ ಸ್ಟೇಟ್ ಮೆಂಟ್) ಇವುಗಳನ್ನು ಆಗಾಗ ಪರಿಶೀಲಿಸಿ ಸಂಶಯಗಳಿದ್ದರೆ ಅಥವಾ ಶಿಲ್ಕಿನಲ್ಲಿ ವ್ಯತ್ಯಾಸ ಕಂಡುಬಂದರೆ ಸಂಬಂಧಪಟ್ಟ ಬ್ಯಾಂಕು ಶಾಖೆಯನ್ನು ಕೂಡಲೇ ಸಂಪರ್ಕಿಸುವುದು ಒಳಿತು.
ಹಣ ಉಳಿತಾಯ ಮಾಡುವಂತೆಯೇ ಅನಾಥಾಶ್ರಮ, ವೃದ್ಧಾಶ್ರಮ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಮುಂತಾದೆಡೆ ಅಗತ್ಯವಿರುವವರಿಗೆ ಧನ ಸಹಾಯ ಮಾಡುವುದು ಒಳ್ಳೆಯ ಸಮಾಜ ಸೇವೆ. ನಾವು ಸಮಾಜದಿಂದ ಬೇರೆ ಬೇರೆ ರೀತಿಯಲ್ಲಿ ಸಹಾಯ ಪಡೆದುಕೊಂಡಂತೆ ಅವಕಾಶ ದೊರಕಿದಾಗ ನಾವು ಬೇರೆಯವರಿಗೆ ಸಹಾಯ ಮಾಡಲು ಹಿಂದೆ ಮುಂದೆ ನೋಡಬಾರದು.
`ಹಾಸಿಗೆ ಇದ್ದಷ್ಟೇ ಕಾಲು ಚಾಚು’ ಎಂಬಂತೆ ನಮ್ಮ ಇತಿಮಿತಿ ನೋಡಿ ಖರ್ಚು ಮಾಡಿದರೆ ಇನ್ನೊಬ್ಬರ ಮುಂದಿ ಕೈ ಚಾಚುವುದು ತಪ್ಪುತ್ತದೆ. ತೋರಿಕೆಗಾಗಿ, ಪ್ರತಿಷ್ಠೆಗಾಗಿ ದುಂದುವೆಚ್ಚ ಮಾಡಿದರೆ ನಮಗೇ ನಷ್ಟ.
ಹಣಕಾಸು ನಮ್ಮ ಆಪದ್ಭಾಂಧವ. ಅದನ್ನು ನಾವು ಗೌರವಿಸಿದರೆ, ಏನೂ ಪ್ರಯತ್ನ ಪಡದೆ ಸಮಾಜದಲ್ಲಿ ನಮಗೂ ಗೌರವ ದೊರಕುವುದು.
ಈ ಮೇಲಿನ ಅಂಶಗಳ ಕಡೆಗೆ ಗಮನಹರಿಸಿದರೆ ನಿಮ್ಮ ಬದುಕು ಸುಖಕರವಾಗುವುದರಲ್ಲಿ ಯಾವ ಸಂಶಯ ಇಲ್ಲ. ಹ್ಯಾಪಿ ಸೇವಿಂಗ್ಸ್!
– ಬಿ.ಎನ್. ಭರತ್ ಬಾಳಿಕೆ