ಸಾಮಗ್ರಿ : 10-15 ಪಾನಿಪೂರಿಗಳು, ಬೇಯಿಸಿ ಮಸೆದ 3-4 ಆಲೂ, ಬೆಂದ ಕಾಬೂಲ್ ಕಡಲೆಕಾಳು, ಮೊಸರು, ತುರಿದ ಚೀಸ್, ಅಕ್ಕಿ ಹಿಟ್ಟು, ಖಾರಾಸೇವೆ, ಮೈದಾ (ತಲಾ ಅರ್ಧರ್ಧ ಕಪ್), 1-2 ಹಸಿ ಮೆಣಸು, ತುಸು ಅರಿಶಿನ, ಜೀರಿಗೆ, ಸೋಂಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪುದೀನಾ ಚಟ್ನಿ, ಟೊಮೇಟೊ ಸಾಸ್, ಕರಿಯಲು ಎಣ್ಣೆ.
ವಿಧಾನ : ಕಡಲೆಕಾಳನ್ನು ಮಸೆದು ಇದಕ್ಕೆ ಆಲೂ, ಮೊಸರು, ಚೀಸ್, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಉಪ್ಪು, ಖಾರ, ಹೆಚ್ಚಿದ ಹಸಿಮೆಣಸು, ಪುದೀನಾ ಚಟ್ನಿ ಎಲ್ಲವನ್ನೂ ಸೇರಿಸಿ ಬೆರೆಸಿಕೊಳ್ಳಿ. ಅಕ್ಕಿಹಿಟ್ಟಿಗೆ, ಮೈದಾ ಉಪ್ಪು, ಖಾರ ಸೇರಿಸಿ ಬೋಂಡ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಪಾನಿಪೂರಿಗಳನ್ನು ಮೇಲ್ಭಾಗದಲ್ಲಿ ತುಸು ಮುರಿದು, ಅದರೊಳಗೆ ಆಲೂ ಮಿಶ್ರಣ ತುಂಬಿಸಿ, ಇದನ್ನು ಅಕ್ಕಿಹಿಟ್ಟಿನ ಮಿಶ್ರಣದಲ್ಲಿ ಅದ್ದಿಕೊಂಡು, ಖಾರಾಸೇವೆಯಲ್ಲಿ ಹೊರಳಿಸಿ, ಕಾದ ಎಣ್ಣೆಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಅಲಂಕರಿಸಿ ಬಿಸಿ ಬಿಸಿ ಟೀ, ಕಾಫಿ ಜೊತೆ ಸವಿಯಲು ಕೊಡಿ.
ರೋಟಿ ರೋಲ್ಸ್
ಸಾಮಗ್ರಿ : 4-5 ಚಪಾತಿ, ಬಿಸಿ ನೀರಲ್ಲಿ ನೆನೆದ ಸೋಯಾ, ಹಸಿ ಬಟಾಣಿ, ಬ್ರೆಡ್ ಕ್ರಂಬ್ಸ್, ಅಕ್ಕಿಹಿಟ್ಟು (ತಲಾ ಅರ್ಧರ್ಧ ಕಪ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನ ಪೇಸ್ಟ್, ಮ್ಯಾಗಿ ಮ್ಯಾಜಿಕ್ಮಸಾಲ, 1 ಮೊಟ್ಟೆ, ಪುದೀನಾ ಹುಳಿ ಸಿಹಿ ಚಟ್ನಿ, ಕರಿಯಲು ಎಣ್ಣೆ.
ವಿಧಾನ : ಸೋಯಾ ಚಂಕ್ಸ್ ನ್ನು ನೀರಿನಿಂದ ತೆಗೆದು ಹಿಂಡಿಕೊಂಡು ಬಟ್ಟೆ ಮೇಲೆ ಹರಡಿರಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಮಂದ ಉರಿಯಲ್ಲಿ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್ ಹಾಕಿ ಕೆದಕಿರಿ. ನಂತರ ಟೊಮೇಟೊ ಪೇಸ್್ಟ ಹಾಕಿ ಕೈಯಾಡಿಸಿ. ಆಮೇಿ ಸೋಯಾ, ಬಟಾ; ಸೇರಿಸಿ ಕೆದಕಬೇಕು. ಇದಕ್ಕೆ ಉಪ್ಪು, ಖಾರ ಹಾಕಿ, ಮೇಲೆ ನೀರು ಚಿಮುಕಿಸಿ ಮುಚ್ಚಳ ಮುಚ್ಚಿರಿಸಿ ಬೇಯಿಸಿ, ಎಲ್ಲವನ್ನೂ ಕೆದಕಿ ಕೆಳಗಿಳಿಸಿ. ಈ ಹೂರಣವನ್ನು ಒಂದೊಂದೇ ಚಪಾತಿಗೆ ಹರಡಿ, ರೋಲ್ ಮಾಡಿ. ಉದ್ದಕ್ಕೆ ಅರ್ಧ ಭಾಗಕ್ಕೆ ಕತ್ತರಿಸಿ. ಒಂದು ಬಟ್ಟಲಿಗೆ ಮೊಟ್ಟೆ ಒಡೆದು ಗೊಟಾಯಿಸಿ, ಅದಕ್ಕೆ ಅಕ್ಕಿಹಿಟ್ಟು, ಉಪ್ಪು, ಖಾರ ಹಾಕಿ ಬೋಂಡ ಹಿಟ್ಟಿನಂತೆ ಕಲಸಿಡಿ. ಇದರಲ್ಲಿ ಈ ರೋಲ್ಸ್ ಅದ್ದಿಕೊಂಡು, ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ.
ಸ್ಪೆಷಲ್ ಪೊಟೇಟೋ ಸ್ನ್ಯಾಕ್ಸ್
ಸಾಮಗ್ರಿ : 15-20 ಬೇಬಿ ಆಲೂ, 4-5 ಹೆಚ್ಚಿದ ಈರುಳ್ಳಿ, 7-8 ಎಸಳು ಬಿಳ್ಳುಳ್ಳಿ, 4-5 ಹಸಿಮೆಣಸು, 1 ತುಂಡು ಶುಂಠಿ, ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಟೊಮೇಟೊ ಸಾಸ್, ಸೋಯಾ ಸಾಸ್, ವಿನಿಗರ್, ರೆಡ್ ಚಿಲೀ ಪೇಸ್ಟ್, ವೈಟ್ ಪೆಪ್ಪರ್ ಪುಡಿ, ಅರ್ಧ ಕಪ್ ಕಾರ್ನ್ ಫ್ಲೋರ್, ಹೆಚ್ಚಿದ ಈರುಳ್ಳಿ ತೆನೆ, ಕರಿಯಲು ಎಣ್ಣೆ.
ವಿಧಾನ : ಸಿಪ್ಪೆ ಸಹಿತ ಆಲೂ ಬೇಯಿಸಿ. ಇದನ್ನು ಹೊರ ತೆಗೆದು ಆರಿದ ನಂತರ, ಫೋರ್ಕ್ ನಿಂದ ಅಲ್ಲಲ್ಲಿ ಚುಚ್ಚಿ ರಂಧ್ರ ಮಾಡಿಕೊಳ್ಳಿ. ಇದರ ಒಳಭಾಗಕ್ಕೆ ಕಾರ್ನ್ ಫ್ಲೋರ್ ಸೇರಿಕೊಳ್ಳುವಂತೆ, ಅದರಲ್ಲಿ ಹೊರಳಿಸಿ. ನಂತರ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು ಹೆಚ್ಚಿದ ಒಂದೊಂದೇ ಸಾಮಗ್ರಿ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಉಪ್ಪು, ಖಾರ, ಉಳಿದೆಲ್ಲ ಮಸಾಲೆ ಹಾಕಿ ಕೆದಕಬೇಕು. 4 ಚಮಚ ಕಾರ್ನ್ ಫ್ಲೋರಿಗೆ ತುಸು ಹಾಲು ಬೆರೆಸಿ ಕದಡಿಕೊಂಡು ಇದಕ್ಕೆ ಬೆರೆಸಿ ಗಟ್ಟಿ ಗ್ರೇವಿಯಾಗಿ ಕುದಿಸಿರಿ. ನಂತರ ಇದಕ್ಕೆ ಕರಿದ ಆಲೂ ಸೇರಿಸಿ, ಚೆನ್ನಾಗಿ ಕೆದಕಬೇಕು. ಕೆಳಗಿಳಿಸಿ ಚಿತ್ರದಲ್ಲಿರುವಂತೆ ಈರುಳ್ಳಿ ತೆನೆ ಉದುರಿಸಿ ಸವಿಯಲು ಕೊಡಿ.
ಗರಿಗರಿ ಕಟ್ಲೆಟ್
ಸಾಮಗ್ರಿ : ಇಡೀ ರಾತ್ರಿ ನೆನೆಸಿದ ಸೋಯಾ ಚಂಕ್ಸ್, ಬೇಯಿಸಿ ಮಸೆದ ಕಾಬೂಲ್ ಕಡಲೆಕಾಳು, ಕಾರ್ನ್ ಫ್ಲೋರ್ (ತಲಾ ಅರ್ಧರ್ಧ ಕಪ್), ಬೇಯಿಸಿ ಮಸೆದ 3-4 ಆಲೂ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಏಲಕ್ಕಿಪುಡಿ, ದಾಲ್ಚಿನ್ನಿ ಪುಡಿ, ಧನಿಯಾ ಪುಡಿ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಕರಿಬೇವು, ಪುದೀನಾ, ಕರಿಯಲು ಎಣ್ಣೆ.
ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಂಡು ಮಿಶ್ರಣ ಕಲಸಿಡಿ. ಇದರಿಂದ ಸಣ್ಣ ಗಾತ್ರದ ಉಂಡೆ ಮಾಡಿ, (ಚಿತ್ರದಲ್ಲಿರುವಂತೆ) ಕಟ್ಲೆಟ್ ಆಕಾರದಲ್ಲಿ ತಟ್ಟಿಕೊಂಡು, ಹೊಂಬಣ್ಣ ಬರುವಂತೆ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಬಿಸಿ ಬಿಸಿ ಕಾಫಿ, ಟೀ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಪಾಪಡಿ ಚಾಟ್
ಸಾಮಗ್ರಿ : 1 ಕಪ್ ಬೆಂದ ಬಟಾಣಿ, ಹೆಚ್ಚಿದ ಸೌತೆ, ಈರುಳ್ಳಿ, ಟೊಮೇಟೊ, ತುರಿದ ಕ್ಯಾರೆಟ್, ಬೀಟ್ ರೂಟ್ (ತಲಾ ಅರ್ಧರ್ಧ ಕಪ್), 10-15 ಪೀಸ್ ರೆಡಿಮೇಡ್ ಪಾಪಡಿ (ಫ್ಲಾಟ್ ಪಾನಿಪೂರಿ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆ ರಸ, ಚಾಟ್ ಮಸಾಲ, ಗರಂ ಮಸಾಲ, ಹುರಿದು ಪುಡಿ ಮಾಡಿದ ಜೀರಿಗೆ, ಸೋಂಪು, ಒಣಶುಂಠಿ ಪುಡಿ, ಧನಿಯಾಪುಡಿ, ಒಂದಿಷ್ಟು ಹೆಚ್ಚಿದ ಕೊ.ಸೊಪ್ಪು, ಪುದೀನಾ, ಈರುಳ್ಳಿ ತೆನೆ, ಹುಳಿ ಸಿಹಿ ಪುದೀನಾ ಚಟ್ನಿ, ಖಾರಾಸೇವೆ.
ವಿಧಾನ : ಮೊದಲು ಬೆಂದ ಬಟಾಣಿಗೆ ಉಪ್ಪು, ಖಾರ, ಜೀರಿಗೆ, ಸೋಂಪಿನ ಪುಡಿ, ಚಾಟ್ ಮಸಾಲ, ಗರಂಮಸಾಲ ಹಾಕಿ ಮಿಶ್ರಣ ಮಾಡಿಕೊಂಡು ನಿಂಬೆ ಹಿಂಡಿಕೊಳ್ಳಿ. ನಂತರ ಇದಕ್ಕೆ ಎಲ್ಲಾ ಹೆಚ್ಚಿದ, ತುರಿದ ಸಾಮಗ್ರಿ ಸೇರಿಸಿ. ಚಟ್ನಿ ಬೆರೆಸಿಕೊಳ್ಳಿ. ಮೊದಲು ಟ್ರೇನಲ್ಲಿ ಎಲ್ಲಾ ಪಾಪಡಿಗಳನ್ನೂ ಹರಡಿಕೊಂಡು, ಅದರ ಮೇಲೆ ಈ ಮಿಶ್ರಣ ಸಮನಾಗಿ ಹರಡಬೇಕು. ಇದರ ಮೇಲೆ ಚಿತ್ರದಲ್ಲಿರುವಂತೆ ಇತರ ಎಲ್ಲಾ ಸಾಮಗ್ರಿ ಉದುರಿಸಿ, ಖಾರಾ ಸೇವೆಯಿಂದ ಅಲಂಕರಿಸಿ ಸವಿಯಲು ಕೊಡಿ.
ಟೇಸ್ಟಿ ಕ್ರಿಸ್ಪಿ ಫ್ಲವರ್
ಸಾಮಗ್ರಿ : 1-1 ಕಪ್ ಕಡಲೆಹಿಟ್ಟು, ಅಕ್ಕಿಹಿಟ್ಟು, 1-5 ಸಣ್ಣ ಗಾತ್ರದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಓರಿಗ್ಯಾನೋ, ಚಿಲೀಫ್ಲೇಕ್ಸ್, ಕರಿಯಲು ಎಣ್ಣೆ.
ವಿಧಾನ : ಈರುಳ್ಳಿಗಳನ್ನು ಅಡಿ ಭಾಗ ಹಿಡಿದಿಡುವಂತೆ ಹೂವಿನ ಆಕಾರದಲ್ಲಿ ದಳಗಳನ್ನು ಬಿಡಿಸಿಕೊಳ್ಳಿ. ಉಳಿದೆಲ್ಲ ಸಾಮಗ್ರಿ ಬೆರೆಸಿ, ಬೋಂಡಾ ಮಿಶ್ರಣದಂತೆ ಮಾಡಿಕೊಂಡು, ಇದನ್ನು ಅದರಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಗರಿಗರಿಯಾಗಿ ಬರುವಂತೆ ಕರಿದು ತೆಗೆಯಿರಿ. ಚಟ್ನಿ, ಸಾಸ್ ಜೊತೆ ಕಾಫಿ, ಟೀ ಸಹಿತ ಸೇವಿಸಿ.
ಸ್ಪೈಸಿ ಪಾಪ್ಸ್
ಸಾಮಗ್ರಿ : 10-15 ಅಣಬೆ, 1 ಕಪ್ ಬ್ರೆಡ್ ಕ್ರಂಬ್ಸ್, ಅರ್ಧ ಕಪ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್, ನಿಂಬೆರಸ, ಈರುಳ್ಳಿ ಪೇಸ್ಟ್, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿಯಲು ಎಣ್ಣೆ.
ವಿಧಾನ : ಅಣಬೆಗಳನ್ನು ಅರ್ಧರ್ಧ ಭಾಗವಾಗಿ ಕತ್ತರಿಸಿ. ಒಂದು ಟ್ರೇನಲ್ಲಿ ಬ್ರೆಡ್ ಕ್ರಂಬ್ಸ್ ಹರಡಿಕೊಳ್ಳಿ. ಒಂದು ಬಟ್ಟಲಿಗೆ ಉಳಿದೆಲ್ಲ ಸಾಮಗ್ರಿ ಹಾಕಿ ಬೆರೆಸಿಕೊಳ್ಳಿ. ಇದಕ್ಕೆ ತುಸು ನೀರು ಬೆರೆಸಿ ಪೇಸ್ಟ್ ತರಹ ಮಾಡಿ, ಅದರಲ್ಲಿ ಅಣಬೆಗಳನ್ನು ನೆನೆಯಲು ಬಿಡಿ. ನಂತರ ಒಂದೊಂದೇ ಅಣಬೆಯನ್ನು ಬ್ರೆಡ್ ಕ್ರಂಬ್ಸ್ ನಲ್ಲಿ ಚೆನ್ನಾಗಿ ಹೊರಳಿಸಿ, ಇದನ್ನು ಒಂದು ಟ್ರೇನಲ್ಲಿ ಜೋಡಿಸಿಕೊಂಡು 1-2 ಗಂಟೆ ಕಾಲ ಫ್ರಿಜ್ ನಲ್ಲಿರಿಸಿ. ನಂತರ ಕಾದ ಎಣ್ಣೆಯಲ್ಲಿ ಕರಿದು, ಚಿತ್ರದಲ್ಲಿರುವಂತೆ ಅಲಂಕರಿಸಿ ಸವಿಯಲು ಕೊಡಿ.
ಹೆಲ್ದಿ ಟೋಸ್ಟ್
ಸಾಮಗ್ರಿ : 10 ಬ್ರೆಡ್ಸ್ಲೈಸ್, 5 ಅನಾನಸ್ ಸ್ಲೈಸ್, 1 ಸೇಬು, 1 ಮರಸೇಬು, 1 ಕಪ್ ತುರಿದ ಚೀಸ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಜೇನು, ಮೆಯೋನೀಸ್, ಬೆಣ್ಣೆ, ಓರಿಗ್ಯಾನೋ.
ವಿಧಾನ : ಬ್ರೆಡ್ ನ ಅಂಚು ಕತ್ತರಿಸಿ ಎಲ್ಲಾ ಹಣ್ಣುಗಳನ್ನು ಸಣ್ಣಗೆ ಹೆಚ್ಚಿಡಿ. ಇದಕ್ಕೆ ಮೆಯೋನೀಸ್, ಜೇನು, ಉಪ್ಪು, ಮೆಣಸು, ನಿಂಬೆರಸ ಬೆರೆಸಿಕೊಳ್ಳಿ. ನಾನ್ ಸ್ಟಿಕ್ ತವಾ ಮೇಲೆ ಬೆಣ್ಣೆ ಹಚ್ಚಿದ ಬ್ರೆಡ್ ನ್ನು ಒಂದು ಬದಿಯಿಂದ ಬಿಸಿ ಮಾಡಿ. ಈ ಭಾಗದ ಮೇಲೆ ಹಣ್ಣಿನ ಮಿಶ್ರಣ ಬರುವಂತೆ ಎಲ್ಲಕ್ಕೂ ಹರಡಿರಿ. ಇದರ ಮೇಲೆ ತುರಿದ ಚೀಸ್ ಉದುರಿಸಿ. ಬ್ರೆಡ್ ನ ಮತ್ತೊಂದು ಬದಿಗೆ ಈಗ ಬೆಣ್ಣೆ ಸವರಿ, ಅದೇ ತವಾ ಮೇಲೆ ಮತ್ತೆ ಬಿಸಿ ಮಾಡಿ. ಇದರ ಮೇಲೆ ಮುಚ್ಚಳ ಇರಿಸಿ, ಚೀಸ್ ಕರಗುವಂತೆ ಮಾಡಿ. ನಂತರ ಇದರ ಮೇಲೆ ಓರಿಗ್ಯಾನೋ ಉದುರಿಸಿ, ಕಾಫಿ/ಟೀ ಜೊತೆ ಸವಿಯಲು ಕೊಡಿ.
ಬ್ರೆಡ್ ವೆಜ್ ಟಾರ್ಟ್
ಸಾಮಗ್ರಿ : 5-6 ಬ್ರೆಡ್ ಸ್ಲೈಸ್, ಒಂದಿಷ್ಟು ಹೆಚ್ಚಿದ ಈರುಳ್ಳಿ ಕ್ಯಾಪ್ಸಿಕಂ, ಬೀನ್ಸ್, ಕ್ಯಾರೆಟ್, ಬಟಾಣಿ, ತುರಿದ ಚೀಸ್, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಪೆಪ್ಪರ್.
ವಿಧಾನ : ಬ್ರೆಡ್ ಸ್ಲೈಸ್ ನ್ನು ಒಂದೊಂದೇ ಲಟ್ಟಿಸಿ ಗುಂಡಗೆ ಬರುವಂತೆ ಕತ್ತರಿಸಿಕೊಳ್ಳಿ. ಮೋಲ್ಡ್ ಗೆ ಬೆಣ್ಣೆ ಸವರಿ, ಅದರಲ್ಲಿ ಈ ಬ್ರೆಡ್ ಇರಿಸಿ ಚಿತ್ರದಲ್ಲಿರುವಂತೆ ಬಟ್ಟಲಿನ ಆಕಾರ ಬರಿಸಿ. ಇದಕ್ಕೆ ಎಲ್ಲಾ ಬದಿಯಿಂದ ಬೆಣ್ಣೆ ಹಚ್ಚಿ, ಓವನ್ನಿನಲ್ಲಿ ಹೊಂಬಣ್ಣಕ್ಕೆ ಬೇಕ್ ಮಾಡಿ. ಒಲೆ ಮೇಲೆ ಬಾಣಲೆಯಿಟ್ಟು ಬೆಣ್ಣೆ ಬಿಸಿ ಮಾಡಿ. ಇದಕ್ಕೆ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ. ನಂತರ ಬೀನ್ಸ್, ಕ್ಯಾರೆಟ್ ಸಹ ಬಾಡಿಸಿಕೊಳ್ಳಿ. ನಂತರ ಇದಕ್ಕೆ ಮೈದಾ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಹಾಲು ಬೆರೆಸಿ ಬೇಯಿಸಿ. ಆಮೇಲೆ ಉಪ್ಪು, ಮೆಣಸು, ಚೀಸ್ ಹಾಕಿ ಕೆದಕಬೇಕು. ನಂತರ ಈ ವೈಟ್ ಸಾಸ್ ನ್ನು ಎಲ್ಲಾ ಬ್ರೆಡ್ ಬಟ್ಟಲಿಗೂ ತುಂಬಿಸಿ, ಬಿಸಿಯಾಗಿ ಸವಿಯಲು ಕೊಡಿ.
ಕಾರ್ನ್ ಮ್ಯಾಶ್ಡ್ ಪೊಟೇಟೊ
ಸಾಮಗ್ರಿ : 1 ತಾಜಾ ತೆನೆ ಜೋಳ, 2 ಬೆಂದ ಆಲೂ, ಒಂದಿಷ್ಟು ಹೆಚ್ಚಿದ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನಿಂಬೆರಸ, ಅಲಂಕರಿಸಲು ರೋಸ್ಟೆಡ್ ಬ್ರೆಡ್.
ವಿಧಾನ : ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸು ಸೇರಿಸಿ ಪೇಸ್ಟ್ ಮಾಡಿ. ಜೋಳದ ಕಾಳನ್ನು ಬೇರೆಯಾಗಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿಕೊಂಡು ಮೆಣಸಿನ ಪೇಸ್ಟ್ ಮಿಶ್ರಣ ಹಾಕಿ ಮಂದ ಉರಿಯಲ್ಲಿ ಕೆದಕಿರಿ. ನಂತರ ಇದಕ್ಕೆ ಜೋಳದ ಪೇಸ್ಟ್ ಹಾಕಿ ಕೆದಕಬೇಕು. ತುಸು ನೀರು ಬೆರೆಸಿ ಕೈಯಾಡಿಸಿ. ನಂತರ ಇದಕ್ಕೆ ಮಸೆದ ಆಲೂ ಸೇರಿಸಿ. ಉಪ್ಪು, ಮೆಣಸು, ತುರಿದ ಚೀಸ್ ಹಾಕಿ ಕೈಯಾಡಿಸಿ. ಕೆಳಗಿಳಿಸಿದ ಮೇಲೆ ನಿಂಬೆರಸ ಬೆರೆಸಿರಿ. ಚಿತ್ರದಲ್ಲಿರುವಂತೆ ಬ್ರೆಡ್ ರೋಸ್ಟ್ ಜೊತೆ ಸವಿಯಲು ಕೊಡಿ.