ಮಗುವಿಗೆ ಹಲ್ಲು ಮೂಡುವುದನ್ನು ನೋಡಿದಾಗ ಎಲ್ಲಾ ಪೇರೆಂಟ್ಸ್ ಖುಷಿಯಿಂದ ಬಹಳ ಸಂಭ್ರಮಿಸುತ್ತಾರೆ. ಮೊದಲ ಹಲ್ಲು ಮೂಡುತ್ತಿದೆ ಎಂದರೆ, ಮಗು ಇನ್ನು ಮುಂದೆ ಅತಿ ಮೃದುವಾದ ಆಹಾರ ಸೇವಿಸಬಹುದು ಎಂದರ್ಥ. ಆದರೆ ಮಗುವಿಗೆ ಈ ಹಲ್ಲು ಮೂಡುವ ಸ್ಥಿತಿ ಕಷ್ಟಕರವೇ ಹೌದು. ಏಕೆಂದರೆ ಈ ಸಮಯದಲ್ಲಿ ಮಗುವಿಗೆ ನೋವು, ಜ್ವರದಂತಹ ಸಮಸ್ಯೆ ತಲೆದೋರಬಹುದು.

ನಿಮ್ಮ ಸಣ್ಣ ಮಗು ಸಹ ಯಾವುದೇ ಕಾರಣವಿಲ್ಲದೆ ಅಳುತ್ತಿದ್ದರೆ, ತನ್ನ ಕೈಗೆ ಸಿಕ್ಕಿದ ಪ್ರತಿ ವಸ್ತುವನ್ನು ಬಾಯಿಗೆ ಹಾಕಿಕೊಂಡು ಕಚ್ಚಲು ಯತ್ನಿಸುತ್ತಿದ್ದರೆ, ಅನಗತ್ಯವಾಗಿ ಕಂಗಾಲು ಪಡುತ್ತಿದ್ದರೆ, ಭೇದಿ ಆಗುತ್ತಲೇ ಇದ್ದರೆ…. (ವಸ್ತುಗಳನ್ನು ಕಚ್ಚಾಡುವುದರಿಂದ) ಇದೆಲ್ಲ ಅದಕ್ಕೆ ಹಲ್ಲು ಮೂಡುತ್ತಿರುವ ಸಂಕೇತ ಎಂದರ್ಥ. ಸಾಮಾನ್ಯವಾಗಿ ಮಗುವಿಗೆ 4-7 ತಿಂಗಳಾಗುವ ಹೊತ್ತಿಗೆ ಮೊದಲ ಹಲ್ಲುಗಳು ಮೂಡಲು ಶುರುವಾಗುತ್ತದೆ. ಕೆಲವೊಂದು ಸಲ ಮಗುವಿಗೆ ಹಲ್ಲು ಮೂಡಲು ತಡ ಸಹ ಆಗಬಹುದು. ಹಲ್ಲು ಮೂಡುವ ಈ ಸಂದರ್ಭದಲ್ಲಿ ಮಗುವಿನ ಮೈಯಲ್ಲಿ ಹಲವಾರು ಬದಲಾವಣೆ ಸಹ ಆಗಬಹುದು. ಆದರೆ ಈ ಮಾಹಿತಿ ಸರಿಯಾಗಿ ಗೊತ್ತಿರದ ಕಾರಣ ಪೇರೆಂಟ್ಸ್ ಟೆನ್ಶನ್‌ ಗೆ ಒಳಗಾಗುತ್ತಾರೆ.

ಹಲ್ಲು ಬರುವ ಲಕ್ಷಣಗಳು

ಮಗು ಮತ್ತೆ ಮತ್ತೆ ಅಳ ತೊಡಗುತ್ತದೆ, ಸದಾ ತೊಂದರೆಗೆ ಸಿಲುಕಿರುವಂತೆ ಒದ್ದಾಡುತ್ತದೆ. ಹಲ್ಲು ಮೂಡುವಾಗ ಅದರ ವಸಡುಗಳಲ್ಲಿ ತೊಂದರೆ ಆಗುವುದು ಸಹಜ. ಹೀಗಾದಾಗ ಅದು ಹೆಚ್ಚು ರಚ್ಚೆ ಹಿಡಿಯುತ್ತದೆ. ಸರಿಯಾಗಿ ನಿದ್ದೆ ಮಾಡುವುದೇ ಇಲ್ಲ.

ಹೊಟ್ಟೆಯ ಸಮಸ್ಯೆಗಳು

ಮಗುವಿಗೆ ಹಲ್ಲು ಬರುವಾಗ, ಮುಖ್ಯವಾಗಿ ಅದಕ್ಕೆ ಡಯೇರಿಯಾ ಅಂದ್ರೆ ಲೂಸ್‌ ಮೋಶನ್‌ ಆಗಬಹುದು. ಇದು 2-3 ದಿನ ಸತತ ಕಾಡಬಹುದು. ಕೆಲವೊಂದು ಮಕ್ಕಳಿಗೆ ಮಲಬದ್ಧತೆ ಸಹ ಆಗಬಹುದು. ಇವೆಲ್ಲದರ ಕಾರಣ ಮಗುವಿಗೆ ಹೊಟ್ಟೆ ನೋವು ತಪ್ಪದು. ಅದರಿಂದ ಮಗು ಅಳುತ್ತಾ ಇರುತ್ತದೆ.

ಸಿಕ್ಕಿದ್ದನ್ನು ಬಾಯಿಗೆ ಹಾಕಿಕೋ

ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ, ಅದು ಕೈಗೆ ಸಿಕ್ಕಿದ ಪ್ರತಿ ವಸ್ತುವನ್ನೂ ಬಾಯಿಗೆ ಹಾಕಿಕೊಳ್ಳಲು ಯತ್ನಿಸುತ್ತದೆ. ಏಕೆಂದರೆ ಅದರ ವಸಡುಗಳಲ್ಲಿ ಊತ, ನಿ, ತುರಿಕೆ ಹೆಚ್ಚುತ್ತದೆ. ಹೀಗಾದಾಗ ಮಗು ಏನಾದರೂ ಬಾಯಿಗೆ ಹಾಕಿಕೊಂಡು ಅಗಿಯುತ್ತಿದ್ದರೆ, ಅದಕ್ಕೆ ಆರಾಮ ಎನಿಸುತ್ತದೆ. ಮಕ್ಕಳ ಸಡನ್ನು ಸೀಳಿಕೊಂಡು ಹಲ್ಲು ಮೇಿ ಬರುತ್ತದೆ. ಹೀಗಾಗಿಯೇ ಮಗುವಿಗೆ ಆ ಭಾಗದಲ್ಲಿ ಹೆಚ್ಚಿನ ನವೆ, ನೋವು ಕಾಡುತ್ತದೆ. ಈ ತೊಂದರೆಗಳಿಂದ ತಪ್ಪಿಸಿಕೊಳ್ಳಲು ಮಗು ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಂಡು ಕಚ್ಚಲು ಯತ್ನಿಸುತ್ತದೆ.

ಜ್ವರದ ಬಾಧೆ

ತನ್ನ ವಸುಡುಗಳ ಬಾಧೆ ತಪ್ಪಿಸಲು, ಹಲ್ಲು ಮೂಡುವಾಗ ಮಗು ಏನೇನೋ ಬಾಯಿಗೆ ಹಾಕಿ ಅಗಿಯುವುದರಿಂದ, ಅಂಥ ವಸ್ತುಗಳು ಶುಭ್ರವಾಗಿರದೆ ಕೊಳಕಾಗಿ ಇರುವ ಸಾಧ್ಯತೆಗಳು ಇರುವುದರಿಂದ, ಮಗು ಅವುಗಳಿಂದ ಬ್ಯಾಕ್ಟೀರಿಯಾ ಸೇವಿಸುವಂತೆ ಆಗುತ್ತದೆ. ಇದರಿಂದಾಗಿ ಮಗುವಿನ ಹೊಟ್ಟೆ ಕೆಡುತ್ತದೆ. ಪರಿಣಾಮ…. ವಾಂತಿ, ಭೇದಿ ಶುರುವಾಗಿ ಸೋಂಕಿನ ಕಾರಣ ಅದು ಜ್ವರಕ್ಕೂ ತಿರುಗಬಹುದು.

ಎಷ್ಟೋ ಸಲ ಪೇರೆಂಟ್ಸ್ ಮಗುವನ್ನು ಇಂಥ ಕಷ್ಟಗಳಿಂದ ಪಾರು ಮಾಡಲು ಅದಕ್ಕೆ ಏನೇನೋ ಔಷಧಿ ಕೊಡಿಸುತ್ತಾರೆ. ಆದರೆ ಸಂದರ್ಭ ಅರಿತುಕೊಂಡು, ಹಾಗೆ ಮಾಡದೇ ಇರುವುದೇ ಲೇಸು. ಹಲ್ಲು ಮೂಡುವಾಗ ಇವೆಲ್ಲ ಕಷ್ಟಗಳಿಂದ ಪಾರಾಗಲು ಔಷಧಿ ಬಳಸುವ ಬದಲು, ನೀವು ಈ ಕೆಳಗಿನ ಸಲಹೆ ಅನುಸರಿಸಿ, ಮನೆಯಲ್ಲೇ ಉಪಾಯ ಕೈಗೊಂಡರೆ, ಇಂಥ ಕಷ್ಟಗಳಿಂದ ಸುಲಭವಾಗಿ ಪಾರಾಗಬಹುದು :

ಮಗುವಿಗೆ ಹಲ್ಲು ಬರುವಾಗ, ಅದಕ್ಕೆ ಬಾಯಲ್ಲಿ ಏನಾದರೂ ಕಚ್ಚುತ್ತಲೇ ಇರಬೇಕು ಅನಿಸುತ್ತದೆ. ಅದರಿಂದ ಮಗುವಿಗೆ ಆರಾಮ ದೊರಕುತ್ತದೆ. ಕ್ಯಾರೆಟ್‌ ತುಸು ಗಟ್ಟಿ ಪದಾರ್ಥ. ಹೀಗಾಗಿ ಕ್ಯಾರೆಟ್‌ ನ್ನು ಕಚ್ಚಲು ನೀಡಬಹುದು. ಒಂದು ಕ್ಯಾರೆಟ್‌ ಶುಚಿಗೊಳಿಸಿ, ಸಿಪ್ಪೆ ಹೆರೆದು, 15-20 ನಿಮಿಷ ಫ್ರಿಜ್‌ ನಲ್ಲಿರಿಸಿ, ನಂತರ ಮಗುವಿಗೆ ಅದನ್ನು ಕಚ್ಚಲು ಕೊಡಿ. ಆದರೆ ಮಗು ಇದರ ತುಂಡನ್ನು ನುಂಗಿ ಬಿಡಬಾರದು, ಹಾಗೆ ಎಚ್ಚರವಹಿಸಿ. ಗಂಟಲಲ್ಲಿ ಸಿಕ್ಕಿ ಹಾಕಿಕೊಂಡರೆ ಬಲು ಕಷ್ಟ. ಇದೇ ರೀತಿ ಸೌತೇಕಾಯಿ, ಸೇಬಿನ ತುಂಡುಗಳನ್ನೂ ಕೊಡಬಹುದು.

ಮಾರ್ಕೆಟ್‌ ನಲ್ಲಿ ಈಗ ಎಲ್ಲೆಡೆ ಟೀಥಿಂಗ್‌ ಬಿಸ್ಕೆಟ್ಸ್ ಲಭ್ಯ. ಇದರಿಂದ ಹಲ್ಲು ಮೂಡುವ ಪ್ರಕ್ರಿಯೆಗೆ ಎಷ್ಟೋ ಸಹಾಯ ಆಗುತ್ತದೆ. ಸಿಹಿ ಇರದ ಈ ಬಿಸ್ಕತ್ತು, ಮಗುವಿಗೆ ಬಾಯಲ್ಲಿ ಆಗುತ್ತಿರುವ ತೊಂದರೆ ನಿವಾರಿಸಲು, ಕಚ್ಚಲು ಅನುಕೂಲಕರ ಆಗಿರುತ್ತದೆ. ಈ ನಿಟ್ಟಿನಲ್ಲಿ ಬಾಳೆಹಣ್ಣು ಸಹ ಕೊಡಬಹುದು. ಬಾಳೆ ಮೂಲತಃ ಮೃದು, ಮಗು ಕಚ್ಚಾಡಿದರೆ ತೊಂದರೆ ಇಲ್ಲ.

ಮಗುವಿಗೆ ಹಲ್ಲು ಮೂಡುವಾಗ, ಅದರ ವಸಡುಗಳನ್ನು ಮಸಾಜ್‌ ಮಾಡುವುದರಿಂದ, ಮಗುವಿಗೆ ಈ ಕಾರಣದಿಂದ ಉಂಟಾಗುವ ತೊಂದರೆ ಎಷ್ಟೋ ತಪ್ಪುತ್ತದೆ. ವಸಡಿನ ಮೇಲೆ ಬೀಳುವ ವೈಟ್‌ ಒತ್ತಡ ಮಗುವಿಗೆ ಆ ನೋವನ್ನು ಮರೆಸುತ್ತದೆ, ಮಗು ಶಾಂತವಾಗಿ ನಿದ್ದೆ ಮಾಡಲು ಸಹಕಾರಿ. ನಿಮ್ಮ ತೋರು ಬೆರಳನ್ನು ಶುಚಿಗೊಳಿಸಿಕೊಂಡು ಅದರ ವಸಡನ್ನು ಒತ್ತಿ, ಮಸಾಜ್ ಮಾಡಿ. ಮೃದು ಬಟ್ಟೆ ಬಳಸಿದರೂ ನಡೆಯುತ್ತದೆ. ಇದು ಮೊದಮೊದಲು ಮಗುವಿಗೆ ಇಷ್ಟ ಆಗದಿದ್ದರೂ ನಂತರ ಮಗು ಇಂಥ ಮಸಾಜ್‌ ಗೆ ಹೊಂದಿಕೊಳ್ಳುತ್ತದೆ. ಇದರ ಜೊತೆಗೆ ಉತ್ತಮ ಆರ್ಗ್ಯಾನಿಕ್‌ ಆಯಿಲ್ ನಿಂದ ಮಗುವಿನ ಹಣೆ, ಕೆನ್ನೆಗಳನ್ನೂ ಮಸಾಜ್‌ ಮಾಡಿ.

ಮಗುವಿನ ಹಾಲಿನ ಬಾಟಲಿಯನ್ನು ಸ್ವಲ್ಪ ಹೊತ್ತು ಫ್ರಿಜ್‌ ನಲ್ಲಿರಿಸಿಬಿಡಿ. ನಂತರ ಹೊರ ತೆಗೆದು, ಸ್ವಲ್ಪ ಹೊತ್ತು ಬಿಟ್ಟು, ಮಗುವಿಗೆ ಅದನ್ನು ಕೊಟ್ಟು ಕಚ್ಚಲು ಹೇಳಿ. ಇದರಿಂದ ಮಗುವಿಗೆ ಆರಾಮ ಎನಿಸುತ್ತದೆ.

ಅರ್ಧ ಚಮಚದಷ್ಟು ಒಣ ಕೆಮೋಮೈಲ್ ‌ಹೂಗಳನ್ನು 1 ಕಪ್‌ ಬಿಸಿ ನೀರಿಗೆ ಬೆರೆಸಿರಿ. ಇದನ್ನು ಸೋಸಿಕೊಳ್ಳಿ. ಇದನ್ನು ಗಂಟೆಗೊಂದು ಸಲ ಮಗುವಿಗೆ ಕುಡಿಸಿ. ಮಗುವಿಗೆ ಹಲ್ಲು ಮೂಡುವ ಸಂದರ್ಭದಲ್ಲಿ ಇದರ ಸೇವನೆ ಬಹು ಉಪಕಾರಿ. ಇದಕ್ಕೆ ಊತ ಕಡಿಮೆ ಮಾಡುವ ಗುಣವುಂಟು.

ಜಿ. ಪಂಕಜಾ 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ