ಭಾರತದ ಸ್ವಿಡ್ಝರ್ಲ್ಯಾಂಡ್ಎನಿಸಿರುವ ಕಾಶ್ಮೀರನ್ನು ನೋಡಿಯೇ ತಣಿಯಬೇಕು! ಇಂತಹ ಅದ್ಭುತ ಪ್ರವಾಸಕ್ಕೆ ನೀವು ಸಿದ್ಧರಿದ್ದೀರಾ….? ಇಲ್ಲಿವೆ ವಿವರಗಳು…!

ಕಾಶ್ಮೀರ ಎಂದಾಗ ನಮಗೆ ನೆನಪಿಗೆ ಬರುವುದು `ಕಾಶ್ಮೀರ್‌ ಕಿ ಕಲಿ’ ಅಥವಾ `ಜಬ್‌ ಜಬ್‌ ಪೂಲ್ ಕಿಲೇ’ ಚಲನಚಿತ್ರ. ಆ ಚಲನಚಿತ್ರಗಳಲ್ಲಿ ನಾಯಕ ಇರುವ ಹೌಸ್‌ ಬೋಟ್‌ ಖಂಡಿತಾ ಮನಸೆಳೆಯುತ್ತದೆ. ಅಂತಹ ಹೌಸ್‌ ಬೋಟ್‌ ನಲ್ಲಿ ಜೀವನದ ಒಂದು ದಿನವಾದರೂ ಕಾಲ ಕಳೆಯೋಣ ಎನ್ನುವ ಮನಸ್ಸಾಗಿತ್ತು. ಆ ಕನಸು ನನಸಾಗುವ ಕಾಲ ಬಂದೇಬಿಟ್ಟಿತು!

ನಾವು ಶ್ರೀನಗರಕ್ಕೆ ಹೋದ ಮೊದಲ ದಿನವೇ ನಮ್ಮ ಠಿಕಾಣಿ ಹೌಸ್‌ ಬೋಟ್‌ ನಲ್ಲಿ ಎಂದು ನಿರ್ಧಾರವಾಯಿತು. ಆದರೆ ನಮಗಿಂತಾ ಮೊದಲು ಹೋದವರಿಂದ ತಿಳಿದದ್ದು ಹೌಸ್‌ ಬೋಟ್‌ ನಲ್ಲಿ ವಾಸನೆ ಮತ್ತು ಅವರು ಕೊಡುವ ಆಹಾರ ಚೆನ್ನಾಗಿರೋಲ್ಲ ಎಂದು. ಹೀಗಾಗಿ ಹೌಸ್‌ ಬೋಟ್‌ ನಲ್ಲಿ ಇರುವ ಬಗ್ಗೆ ಒಂದು ರೀತಿಯ ಎಗ್ಸೈಟ್‌ ಮೆಂಟ್‌ ಎನಿಸಿದರೂ ಹೇಗಿರುತ್ತದೋ ಎನ್ನುವ ಆತಂಕ. ಆದರೂ ನಿರ್ಧಾರವಾಗಿದ್ದರಿಂದ ಹೊರಟೇಬಿಟ್ಟೆವು. ನಾವು ಬಂದ ತಕ್ಷಣ ಶ್ರೀನಗರದ ಉದ್ಯಾನವನಗಳ ಮೇಲೆ ಒಂದು ಪಕ್ಷಿನೋಟವನ್ನು ಬೀರಿ ಹೊರಬಂದೆ. ಜೋರಾಗಿ ಮಳೆ ಬರುತ್ತಿತ್ತು, ಚಳಿಯೂ ನಡುಗುವಂತಿತ್ತು. ಆ ಮಳೆ ಚಳಿಯಲ್ಲೇ ಎಲ್ಲರೂ ನಮಗಾಗಿ ಕಾಯುತ್ತಿದ್ದರು. ನಮ್ಮ ವ್ಯಾನಿಗೆ ಹೋದೆವು. ಆ ದಿನ ಅಲ್ಲಿಂದ ಮುಂದೆ ನಾವು ಹೋಗಬೇಕಾದ್ದದ್ದು, ಶಿಕಾರದಲ್ಲಿ ಕುಳಿತು ಹೌಸ್‌ ಬೋಟ್‌ ನ್ನು ತಲುಪುವುದು. ಶಿಕಾರ ಎಂದರೆ ಚಂದದ, ಬಣ್ಣದ ಬಟ್ಟೆಗಳಿಂದ ಅಲಂಕೃತವಾದ ಬೋಟು.   ದಾಲ್ ಲೇಕ್‌ ನಲ್ಲಿ ಈ ಶಿಕಾರ, ನಮ್ಮ ಸಿಟಿ ಬಸ್ಸುಗಳಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುತ್ತವೆ. ಪ್ರವಾಸಿಗರನ್ನು ಹೌಸ್‌ ಬೋಟಿಗೆ ತಲುಪಿಸುವುದು ಅಥವಾ ದಾಲ್ ಲೇಕ್‌ ನಲ್ಲಿ ಒಂದು ಸುತ್ತು ಹಾಕಿಸುವುದು ಅವರ ಕೆಲಸ. ನಾವು ನಮ್ಮ ಲಗೇಜುಗಳನ್ನು ಅದರಲ್ಲಿ ತುಂಬಿಸಿಕೊಂಡು, ಎರಡು ಬೋಟುಗಳಲ್ಲಿ ಕುಳಿತು ಹೊರಟೆವು. ಮಳೆ ಹನಿಯುತ್ತಿತ್ತು. ಚಳಿಯೋ ಚಳಿ. ಸೂಟ್‌ ಕೇಸ್‌ ನಲ್ಲಿದ್ದ ಸ್ವೆಟರ್‌, ಟೋಪಿ ಎಲ್ಲವೂ ಹೊರಗೆ ಬಂದವು. ಎಲ್ಲರೂ ಬೆಚ್ಚಗೆ ಸಿದ್ಧರಾದರು.

Dal-Lake-3629

ಶ್ರೀನಗರದ ಆಭರಣ

ಕಾಶ್ಮೀರಿ ಭಾಷೆಯಲ್ಲಿ ದಾಲ್ ‌ಎಂದರೆ ಸರೋವರ. ಇದನ್ನು ಬೇಸಿಗೆಯ ರಾಜಧಾನಿ ಎನ್ನಬಹುದು. ಕಾಶ್ಮೀರ ಎನ್ನುವ ಕಿರೀಟದ ಹೊಳೆಯುವ ಆಭರಣ ಎನ್ನಬಹುದು. ಮೀನುಗಾರಿಕೆ ಮತ್ತು ಜಲ ಸಸ್ಯ ಕೊಯ್ಲು, ಜೊತೆಗೆ ಅನೇಕ ವಾಣಿಜ್ಯ ಕೆಲಸಗಳಿಗೆ ಪ್ರಮುಖ ಮೂಲವಾಗಿದೆ. ಈ ಸರೋವರದ ದಡದ ಸುತ್ತಲೂ ಸುಂದರ ಉದ್ಯಾನವನಗಳು, ಹೌಸ್‌ ಬೋಟ್‌ ಗಳು ಅರ್ಥಾತ್‌ ದೋಣಿ ಮನೆಗಳು ಮತ್ತು ಅಲ್ಲಲ್ಲಿ ಓಡಾಡುವ ಬಣ್ಣ ಬಣ್ಣದ ಶಿಕಾರಗಳು ಎಲ್ಲರ ಮನಸೆಳೆಯುತ್ತದೆ. ದಾಲ್ ನದಿಯ ತಟ ಸುಮಾರು 15.5 ಕಿಲೋ ಮೀಟರ್‌ ಗಳಷ್ಟು ಇದೆ (9.6 ಮೈಲುಗಳು). ಈ ಸಾಲು ಮರಗಳ ವಿಶಾಲ ಮಾರ್ಗದ ಸುತ್ತಲೂ ಮೊಗಲ್ ಕಾಲದ ಪಾರ್ಕು, ಉದ್ಯಾನವನ, ಹೋಟೆಲ್ ಮತ್ತು ಹೌಸ್‌ ಬೋಟ್‌ ಗಳಿಂದ ಆವೃತವಾಗಿವೆ.

ಉದ್ಯಾನ ವನಗಳಿಂದಲೂ ದಾಲ್ ಸರೋವರದ ಸುಂದರ ನೋಟ ಮತ್ತು ಬಣ್ಣ ಬಣ್ಣದ ಶಿಕಾರಗಳು ಓಡಾಡುವುದನ್ನು ನೋಡಿ ಆನಂದಿಸಬಹುದು. ಚಳಿಗಾಲದಲ್ಲಿ ಹವಾಮಾನ 11 ಡಿಗ್ರಿಗಳಿಗೆ ಇಳಿಯುತ್ತದೆ. ಆಗ ಈ ಲೇಕ್‌ ಹೆಪ್ಪುಗಟ್ಟುತ್ತದೆ. ಪೂರ್ಣವಾಗಿ ಹಿಮದಿಂದ ಆವೃತವಾದ ಸರೋವರದ ನೋಟ ಬಲು ಚೆನ್ನ!

ಕಾಶ್ಮೀರಕ್ಕೆ ಬಂದವರು ಯಾರೂ ದಾಲ್ ಲೇಕ್‌ ನ್ನು ನೋಡದೆ ಹೋಗುವುದಿಲ್ಲ. ಹಿಮ ಕರಗಿದ ನಂತರ ನಿರ್ಮಿತಗೊಂಡ ಸರೋವರವಿದು. ವರ್ಷಗಳು ಕಳೆದಂತೆ ಅಳತೆ ಮತ್ತು ಗಾತ್ರದಲ್ಲಿ ಬದಲಾವಣೆಯಾಗಿದೆ ಎನ್ನುವುದು ಒಂದು ಸಿದ್ಧಾಂತವಾದರೆ, ಜೀಲಂ ನದಿಯಲ್ಲಿ ಪ್ರವಾಹ ಬಂದು ಆ ಸರೋವರದ ನಿರ್ಮಾಣವಾಯಿತು ಎನ್ನುವುದು ಮತ್ತೊಂದು ಸಿದ್ಧಾಂತ. ದಾಲ್ ಲೇಕ್‌ ನ ಆಳ ಐದು ಅಡಿಯಿಂದ ಇಪ್ಪತ್ತು ಅಡಿಗಳವರೆಗೆ ಇದೆ. ಈ ಸರೋವರ ಜೌಗು ಪ್ರದೇಶದ ಒಂದು ಭಾಗವಾಗಿದ್ದು, ತೇಲುವ ಉದ್ಯಾನವನಗಳು, ತೋಟಗಳನ್ನು ನೋಡಲು ಸಿಗುತ್ತದೆ. ಈ ತೋಟಗಳಿಗೆ ಕಾಶ್ಮೀರಿ ಭಾಷೆಯಲ್ಲಿ ರಾಡ್‌ ಎನ್ನುತ್ತಾರೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅರಳುವ ತಾವರೆ ಹೂಗಳ ನೋಟ  ನಿಜಕ್ಕೂ ಚಂದ. ದಾಲ್ ಲೇಕ್ ನ ಸುತ್ತಲಿರುವ ಮೊಗಲ್ ಉದ್ಯಾನವನಗಳು ಸರೋವರದ ಸೌಂದರ್ಯವನ್ನು ಹೆಚ್ಚಿಸುತ್ತವೆ.

shops

ವೆನಿಸ್ನಗರದಂತೆ….

ದಾಲ್ ಲೇಕ್‌ ನಮಗೆ ವೆನಿಸ್‌ ನಗರವನ್ನು ನೆನಪಿಸುತ್ತದೆ. ಇಲ್ಲಿನ ಅಂಗಡಿಗಳು ಮತ್ತು ಪೂರ್ಣ ಪ್ರಮಾಣದ ಮಾರುಕಟ್ಟೆಯನ್ನು ನೋಡಿದಾಗ ವೆನಿಸ್‌ ನಷ್ಟೇ ಚಂದವೆನಿಸುತ್ತದೆ. ದಾಲ್ ‌ಸರೋವರದಲ್ಲೇ ತರಕಾರಿಯಿಂದ ಹಿಡಿದು ಎಲ್ಲ ಅಂಗಡಿಗಳೂ ಲಭ್ಯ. ನಾವು ಶಿಕಾರಾದಲ್ಲಿ ಹೋಗುವಾಗ ಎಲ್ಲರೂ ನಮ್ಮನ್ನು ಕೂಗಿ ಕರೆಯುತ್ತಿರುತ್ತಾರೆ. ಬಟ್ಟೆಯ ಮತ್ತು ಅಲ್ಲಿನ ಕುಸುರಿ ಕೆಲಸ, ಕಶೀದಾ ಕಸೂತಿಯ ಶಾಲುಗಳ ಅಂಗಡಿಗಳು, ಹಣ್ಣುಗಳನ್ನು ತುಂಬಿಕೊಂಡ ಅಂಗಡಿಗಳು, ಜೊತೆಗೆ ಅಲ್ಲಲ್ಲಿ ಕೇಸರಿ ಡಬ್ಬಗಳನ್ನು ಹಿಡಿದುಕೊಂಡು ಬಂದು ಮಾರುತ್ತಾರೆ.

ಅದೊಂದು ಪೂರ್ಣ ನಗರವಿದ್ದಂತೆ. ಒಟ್ಟಾರೆ ಆ ದಾಲ್ ಲೇಕ್‌ ನಲ್ಲಿ ನೀವು ಬೇಕಾದ್ದನ್ನು ಖರೀದಿಸಬಹುದು. ಅದರಲ್ಲಿ ನಮಗೆ ಬಹಳ ಹಿಡಿಸಿದ್ದು ಪೇಪರ್‌ ಮೆಶ್‌ ನಿಂದ ಎಲ್ಲವನ್ನೂ ತಯಾರಿಸುವ ಕೌಶಲ. ಅದರಿಂದ ಬಹಳಷ್ಟು ಕೆತ್ತನೆಯ ಸಾಮಾನುಗಳನ್ನು ತಯಾರಿಸುತ್ತಾರೆ. ಅದೊಂದು ಅದ್ಭುತ ಕಲೆ ಎನ್ನುವುದರಲ್ಲಿ ಅತಿಶಯವಿಲ್ಲ. ದಾಲ್ ಲೇಕ್‌ ನಲ್ಲಿ ಎಲ್ಲರನ್ನೂ ಓಡಾಡಿಸುವ ಶಿಕಾರಗಳು ಅಲ್ಲಿನ ಜಲರಾಶಿಯ ಮೇಲೆ ತಾವರೆಗಳಂತೆ ಶೋಭಿಸುತ್ತದೆ. ಪ್ರವಾಸಿಗರ ದಿನನಿತ್ಯದ ಜನಪ್ರಿಯ ಚಟುವಟಿಕೆಯ ಭಾಗವಾಗಿರುವ ಅವುಗಳು ನಮ್ಮ ಸಾಂಸ್ಕೃತಿಕ ಗುರುತು ಎನಿಸಿಕೊಂಡಿವೆ. ಇದನ್ನು ಕಾಶ್ಮೀರದ ಗೊಂಡಾಲಾ ಎಂದೂ ಕರೆಯುತ್ತಾರೆ. ಜೊತೆಗೆ ಸಾಂಪ್ರದಾಯಿಕ ಪ್ರತಿಮೆಯನ್ನಾಗಿ ಗುರುತಿಸಬಲ್ಲ ಅರ್ಹತೆಯನ್ನು ಪಡೆದಿದೆ.

sundara-dal-lake

ದಾಲ್ ಲೇಕಿಗೆ ಬಾಲಿವುಡ್ ನಂಟು

ದಾಲ್ ಲೇಕ್‌ ನಲ್ಲಿ ಅನೇಕ ಚಲನಚಿತ್ರಗಳು ನಿರ್ಮಾಣಗೊಂಡಿವೆ. ಜಂಗಲೀ, ಜಬ್‌ ಜಬ್‌ ಪೂಲ್ ಕಿಲೇ, ಕಾಶ್ಮೀರ್‌ ಕಿ ಕಲಿ, ಜಾನ್ವರ್‌, ಕಭಿ ಕಭಿ, ಲಮ್ಹೆ, ಯಹಾನ್‌, ಮಿಶನ್‌ ಕಾಶ್ಮೀರ, ದಿಲ್ ‌ಸೆ,  ಇತ್ಯಾದಿ…… ದಾಲ್ ಲೇಕ್‌ ನ್ನು ಪ್ರೇಮ ಪ್ರಣಯದ ಸಾಕಾರ ಪ್ರತಿನಿಧಿಯನ್ನಾಗಿ ರೂಪಿಸಲಾಗಿದೆ. ಆದ್ದರಿಂದಲೋ ಏನೋ ದಾಲ್ ಲೇಕ್‌ ಎಂದರೆ ಸುಂದರ ಸ್ವಪ್ನಗಳು ಮನದಲ್ಲಿ ಮೂಡುತ್ತವೆ.

namma-house-boat

ಹೌಸ್ಬೋಟ್ ವೈಭವ

ಶಿಕಾರಾಗಳಲ್ಲಿ ನಮ್ಮ ಲಗೇಜ್‌ ನ್ನು ಹಾಕಿಕೊಂಡು ನಾವು ಹೌಸ್‌ ಬೋಟ್‌ ನ್ನು ತಲುಪಿದೆ. ಈವರೆಗೂ ನಮಗೆ ಸಿಕ್ಕಿದ್ದ ಮಾಹಿತಿಯ ಪ್ರಕಾರ ಹೌಸ್‌ ಬೋಟ್‌ ಹೇಗಿರುತ್ತದೆ ಎನ್ನುವ ಬಗ್ಗೆ ನಮಗೆ ಆತಂಕವಿತ್ತು. ಸ್ವಲ್ಪ ಶುಭ್ರವಾಗಿದ್ದರೆ ಸಾಕು ಎನ್ನುವ ಕಳಕಳಿ ಇತ್ತು. ಆದರೆ ನಮ್ಮ ಹೌಸ್‌ ಬೋಟ್‌ ಬಹಳ ಸುಂದರವಾಗಿ, ವೈಭವಯುತವಾಗಿ ಒಂದು ಪಂಚತಾರ ಹೋಟೆಲ್ ‌ನಂತಿತ್ತು. ಮೊಗಲರ ಯಾವುದೋ ಪುಟ್ಟ ಅರಮನೆಯನ್ನು ಹೊಕ್ಕಂತಿತ್ತು. ಗೋಡೆಗಳಿಗೆ, ಸೂರಿಗೆ ಸುಂದರ ಕುಸುರಿ ಕೆತ್ತನೆಗಳು, ಸೂರಿನ ಮಧ್ಯದಲ್ಲಿ ಇಳಿಬಿಟ್ಟಿರುವ ಸುಂದರ ಗಾಜಿನ ಅಲಂಕಾರಿಕ ದೀಪಗಳು….. ಇತ್ಯಾದಿ.

ಅಲ್ಲೇ ಒಂದು ಶೋಕೇಸ್‌ ಒಳಗೆ ಬಗೆಬಗೆಯ ಹಿತ್ತಾಳೆಯ ಸುಂದರ ಪರಿಕರಗಳು, ಮಧ್ಯದ ಮೇಜಿನ ಮೇಲೆ ಇಟ್ಟಿರುವ ಒಂದು ದೊಡ್ಡ ಸುಂದರವಾದ ಹೂಜಿ. ಆದರೆ ಹತ್ತಿರ ಹೋಗಿ ಅದನ್ನು ಅಲುಗಾಡಿಸಿದಾಗ ಗೊತ್ತಾದದ್ದು ಅದು ಪೇಪರ್‌ ಮೆಶ್‌ ನಿಂದ ಮಾಡಿದ ಹೂಜಿ ಎಂದು. ನೋಡಲು ತಾಮ್ರದಂತೆಯೇ ಹೊಳೆಯುತ್ತಿತ್ತು. ಅದರ ಮನಸೆಳೆಯುವ ಕುಸುರಿ ಕೆತ್ತನೆ, ಬಹಳ ಸುಂದರವಾಗಿತ್ತು.

shikaaara-mattu-angadi

ಕೇರಳ/ಕಾಶ್ಮೀರದ ಹೌಸ್ಬೋಟುಗಳು

ಹೇಳಬೇಕೆಂದರೆ ಕೇರಳದಲ್ಲಿನ ಹೌಸ್‌ ಬೋಟ್‌ ಗಳು ಚಲಿಸುತ್ತಿರುವೆ. ಆದರೆ ಇಲ್ಲಿನವುಗಳು ಒಂದೆಡೆ ನಿಂತಿರುತ್ತವೆ. ಮರದಿಂದ ನಿರ್ಮಿಸಲಾಗಿದ್ದು ಸುಂದರ ಕೆತ್ತನೆಯ ಪ್ಯಾನಲಿಂಗ್‌ ನ್ನು ಮಾಡಲಾಗಿದೆ. ಈ ಹೌಸ್‌ ಬೋಟ್‌ ಗಳು ವಿಭಿನ್ನ ಗಾತ್ರದವುಗಳಾಗಿ ಇರುತ್ತವೆ ಮತ್ತು ವೈಭವದಲ್ಲೂ ಭಿನ್ನವಾಗಿರುತ್ತವೆ. ನೀವು ಕೊಡುವ ಕಾಸಿಗೆ ತಕ್ಕನಾದ ಕಜ್ಜಾಯ ನಿಮಗೆ ದೊರಕುವಂತೆ ನಿಮ್ಮ ಹಣಕ್ಕೆ ಸರಿಯಾದ ವೈಭವ ಮತ್ತು ಸೇವೆ ದೊರಕುತ್ತದೆ.

ಜನಸಂಖ್ಯೆಯ ಹೆಚ್ಚಳ ಮತ್ತು ಹೆಚ್ಚು ಹೆಚ್ಚು ಪ್ರವಾಸಿಗರ ಆಗಮನ ಲೇಕ್‌ ನ ಪರಿಶುದ್ಧತೆಯನ್ನು ಕಡಿಮೆ ಮಾಡಿದೆ ಮತ್ತು ಅದು ಮಲಿನವಾಗಲು ಕಾರಣವಾಗಿದೆ ಎನ್ನಲಾಗುತ್ತದೆ. ನಾವು ನಮ್ಮ ಲಗೇಜಿನ ಸಮೇತ ಶಿಕಾರದಿಂದ ಹೌಸ್‌ ಬೋಟ್‌ ತಲುಪಿದೆವು. ನಮಗೆ ಮತ್ತೊಂದು ಗಂಟೆ ಶಿಕಾರಾ ವಿಹಾರ ಮಾಡಲು ಅವಕಾಶವಿತ್ತು. ನನಗಂತೂ ಚಳಿ ನಡುಗಿಸುವಂತಿತ್ತು. ಮತ್ತೊಮ್ಮೆ ಶಿಕಾರಾದಲ್ಲಿ ಹೋಗುವುದೆಂದರೆ ಅಸಾಧ್ಯವೆನಿಸಿತು. ಆದರೆ ಮಕ್ಕಳಿಗೆಲ್ಲಾ ಹುರುಪು, ಶಕ್ತಿ ಎಲ್ಲವೂ ಹೆಚ್ಚು.  ಎಲ್ಲರೂ ಒಮ್ಮೆ ಫ್ರೆಶ್ ಅಪ್‌ ಆಗಿ ಮತ್ತೊಮ್ಮೆ ದೋಣಿ ವಿಹಾರಕ್ಕೆ ಹೊರಟರು. ಸಂಜೆಯ ಮಬ್ಬುಗತ್ತಲು. ಎಲ್ಲೆಲ್ಲಿ ಅಂಗಡಿ ಮುಂಗಟ್ಟುಗಳಿವೆಯೋ ದೀಪಗಳ ಸಾಲು ಸಾಲೇ ಅಲ್ಲಿತ್ತು. ಕತ್ತಲಲ್ಲಿ ಹೊಳೆಯುವ ಬೆಳಕಿನ ಸಾಲು. ನಾವು ಯಾವುದೋ ದೇವಲೋಕದ ಮಾರುಕಟ್ಟೆಯಲ್ಲಿದ್ದಂತೆ ಭಾಸವಾಗುತ್ತಿತ್ತು. ಶಿಕಾರಾದಲ್ಲಿ ಸಾಗುವಾಗ ಮತ್ತೊಂದು ದೋಣಿಯಲ್ಲಿದ್ದವನು ತನ್ನ ಕಾಲಿನಿಂದ ನಮ್ಮ ದೋಣಿಯನ್ನು ನಿಲ್ಲಿಸಿ ಹಣ್ಣು ಬೇಕೇ ಎಂದು ಕೇಳಿದ. ಅಲ್ಲಿ ಅವನು ದೋಣಿಯಲ್ಲಿಯೇ ಚಕಚಕನೆ ಹಣ್ಣನ್ನು ಕೊಯ್ದು ಎಲ್ಲರಿಗೂ ಕೊಟ್ಟನು. ಅಲ್ಲಿಂದ ಮುಂದೆ ಕಾಲಾ ಕೊಟ್ಟನು. ಬಹಳ ರುಚಿಕರ ಪೇಯವದು. ಕಾಶ್ಮೀರಕ್ಕೆ ಹೋದವರು ಯಾರೂ ಕಾಲಾದ ರುಚಿ ನೋಡದೆ ಇರಲಾರರು. ಆ ಚಳಿಗೆ ಬಿಸಿ ಬಿಸಿ ಕಾಲಾ, ದೇಹ ಮತ್ತು  ಮನಸ್ಸುಗಳೆರಡನ್ನೂ ಬೆಚ್ಚಗೆ ಮಾಡಿತು.

inside-the-house-boat

ಬೆಚ್ಚಗಿನ ಕೋಣೆಯ ವೈಭವ

ಹೌಸ್‌ ಬೋಟ್‌ ನಲ್ಲಿರುವುದೇ ಒಂದು ವಿಶೇಷ ಅನುಭವ. ರಾತ್ರಿ ಬಿಸಿ ಬಿಸಿ ಊಟ ಮಾಡಿದ ಮೇಲೆ ನಮ್ಮ ನಮ್ಮ ಕೋಣೆಗಳಿಗೆ ಬಂದು ಮಲಗಿಕೊಂಡೆವು. ಇಲ್ಲಿ ಕೋಣೆಯನ್ನು ಬೆಚ್ಚಗಾಗಿರಿಸುವ ವಿಧಾನವೇ ಬೇರೆ. ಹಾಸಿಗೆಗೆ ವಿದ್ಯುತ್‌ ಕಾಯಲ್ ಗಳನ್ನು ಅಳವಡಿಸಲಾಗಿರುತ್ತದೆ. ಅದು ನಮ್ಮನ್ನು ಬೆಚ್ಚಗಿರಿಸುತ್ತದೆ. ಬೇಕೆಂದಾಗ ಶಾಖವನ್ನು ನಿಯಂತ್ರಿಸಬಹುದು. ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು. ಆ ದಿನವಂತೂ ಜೋರಾಗಿ ಮಳೆ ಸುರಿಯುತ್ತಿತ್ತು. ನಾವಿದ್ದದ್ದು ನೀರಿನ ಮೇಲೆ ಅಲ್ಲವೇ? ಇನ್ನೂ ಚಳಿ ಹೆಚ್ಚು. ಮಧ್ಯ ರಾತ್ರಿಯಲ್ಲಿ ಕರೆಂಟ್‌ ಬೇರೆ ಹೋಯಿತು. ಆದರೆ ಅಷ್ಟು ಹೊತ್ತಿಗಾಗಲೇ ನಮ್ಮ ಕೋಣೆ, ಹಾಸಿಗೆ ಬಿಸಿಯಾಗಿತ್ತು. ರಾತ್ರಿ ಕಳೆದದ್ದಾಯಿತು.

ಬೆಳಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಹೌಸ್‌ ಬೋಟ್‌ ನ ಹೊರ ಬಂದು ಸೂರ್ಯೋದಯ ನೋಡಬೇಕು ಎಂದುಕೊಂಡೆವು. ಆದರೆ ಮೋಡ ಮತ್ತು ಸಣ್ಣಗೆ ಮಳೆಯೂ ಬರುತ್ತಿತ್ತು. ಆದರೂ ಹಸಿರು ಬೆಟ್ಟಗಳ ಮೇಲೆ ಆವರಿಸಿದ ಹಿಮ ರಾಶಿಯ ನೋಟ ರೋಚಕವಾಗಿತ್ತು. ಅಷ್ಟರಲ್ಲಿ ಬಿಸಿ ಬಿಸಿ ತಿಂಡಿ ಸಿದ್ಧವಾಯಿತು. ರುಚಿಯಾದ ತಿಂಡಿ ತಿಂದು ಎಲ್ಲರೂ ಹೊರಡಲು ಸಿದ್ಧರಾದೆವು. ಅಷ್ಟು ಹೊತ್ತಿಗೆ ಒಂದಷ್ಟು ಶಾಲುಗಳನ್ನು ಹಿಡಿದುಕೊಂಡು ಒಬ್ಬ ವ್ಯಾಪಾರಿ ಬಂದಿದ್ದ. ಎಲ್ಲವನ್ನೂ ನೋಡಿದೆವು. ಆದರೆ ಏನನ್ನೂ ಕೊಳ್ಳಲಿಲ್ಲ. ನಂತರ ನಾವು ನಮ್ಮ ಲಗೇಜ್‌ ನ್ನು ಪ್ಯಾಕ್‌ ಮಾಡಿಕೊಂಡು ಸಿದ್ಧರಾದೆವು. ಮಧ್ಯೆ ಮಕ್ಕಳು ಒಂದು ಬುಕ್‌ ಶಾಪ್‌ ನಲ್ಲಿ ಪುಸ್ತಕಗಳನ್ನು ಕೊಂಡು ಕೊಂಡರು. ಉದ್ದಕ್ಕೂ ಸಾಲು ಸಾಲು ಅಂಗಡಿಗಳು. ಆದರೆ ಏನು ಕೊಳ್ಳಬೇಕೆನ್ನುವುದೇ ಗೊತ್ತಾಗಲಿಲ್ಲ. ಆದರೂ ಅವುಗಳನ್ನು ನೋಡುವುದೇ ಚೆನ್ನ! ಅಂತೂ ಹೌಸ್‌ ಬೋಟ್‌ ಗೆ ವಿದಾಯ ಹೇಳಿ ಬೆಂಗಳೂರಿಗೆ ಬಂದಿದ್ದಾಯಿತು.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ