ಭಾರತದ ಸ್ವಿಡ್ಝರ್ಲ್ಯಾಂಡ್ ಎನಿಸಿರುವ ಕಾಶ್ಮೀರನ್ನು ನೋಡಿಯೇ ತಣಿಯಬೇಕು! ಇಂತಹ ಅದ್ಭುತ ಪ್ರವಾಸಕ್ಕೆ ನೀವು ಸಿದ್ಧರಿದ್ದೀರಾ....? ಇಲ್ಲಿವೆ ವಿವರಗಳು...!
ಕಾಶ್ಮೀರ ಎಂದಾಗ ನಮಗೆ ನೆನಪಿಗೆ ಬರುವುದು `ಕಾಶ್ಮೀರ್ ಕಿ ಕಲಿ' ಅಥವಾ `ಜಬ್ ಜಬ್ ಪೂಲ್ ಕಿಲೇ' ಚಲನಚಿತ್ರ. ಆ ಚಲನಚಿತ್ರಗಳಲ್ಲಿ ನಾಯಕ ಇರುವ ಹೌಸ್ ಬೋಟ್ ಖಂಡಿತಾ ಮನಸೆಳೆಯುತ್ತದೆ. ಅಂತಹ ಹೌಸ್ ಬೋಟ್ ನಲ್ಲಿ ಜೀವನದ ಒಂದು ದಿನವಾದರೂ ಕಾಲ ಕಳೆಯೋಣ ಎನ್ನುವ ಮನಸ್ಸಾಗಿತ್ತು. ಆ ಕನಸು ನನಸಾಗುವ ಕಾಲ ಬಂದೇಬಿಟ್ಟಿತು!
ನಾವು ಶ್ರೀನಗರಕ್ಕೆ ಹೋದ ಮೊದಲ ದಿನವೇ ನಮ್ಮ ಠಿಕಾಣಿ ಹೌಸ್ ಬೋಟ್ ನಲ್ಲಿ ಎಂದು ನಿರ್ಧಾರವಾಯಿತು. ಆದರೆ ನಮಗಿಂತಾ ಮೊದಲು ಹೋದವರಿಂದ ತಿಳಿದದ್ದು ಹೌಸ್ ಬೋಟ್ ನಲ್ಲಿ ವಾಸನೆ ಮತ್ತು ಅವರು ಕೊಡುವ ಆಹಾರ ಚೆನ್ನಾಗಿರೋಲ್ಲ ಎಂದು. ಹೀಗಾಗಿ ಹೌಸ್ ಬೋಟ್ ನಲ್ಲಿ ಇರುವ ಬಗ್ಗೆ ಒಂದು ರೀತಿಯ ಎಗ್ಸೈಟ್ ಮೆಂಟ್ ಎನಿಸಿದರೂ ಹೇಗಿರುತ್ತದೋ ಎನ್ನುವ ಆತಂಕ. ಆದರೂ ನಿರ್ಧಾರವಾಗಿದ್ದರಿಂದ ಹೊರಟೇಬಿಟ್ಟೆವು. ನಾವು ಬಂದ ತಕ್ಷಣ ಶ್ರೀನಗರದ ಉದ್ಯಾನವನಗಳ ಮೇಲೆ ಒಂದು ಪಕ್ಷಿನೋಟವನ್ನು ಬೀರಿ ಹೊರಬಂದೆ. ಜೋರಾಗಿ ಮಳೆ ಬರುತ್ತಿತ್ತು, ಚಳಿಯೂ ನಡುಗುವಂತಿತ್ತು. ಆ ಮಳೆ ಚಳಿಯಲ್ಲೇ ಎಲ್ಲರೂ ನಮಗಾಗಿ ಕಾಯುತ್ತಿದ್ದರು. ನಮ್ಮ ವ್ಯಾನಿಗೆ ಹೋದೆವು. ಆ ದಿನ ಅಲ್ಲಿಂದ ಮುಂದೆ ನಾವು ಹೋಗಬೇಕಾದ್ದದ್ದು, ಶಿಕಾರದಲ್ಲಿ ಕುಳಿತು ಹೌಸ್ ಬೋಟ್ ನ್ನು ತಲುಪುವುದು. ಶಿಕಾರ ಎಂದರೆ ಚಂದದ, ಬಣ್ಣದ ಬಟ್ಟೆಗಳಿಂದ ಅಲಂಕೃತವಾದ ಬೋಟು. ದಾಲ್ ಲೇಕ್ ನಲ್ಲಿ ಈ ಶಿಕಾರ, ನಮ್ಮ ಸಿಟಿ ಬಸ್ಸುಗಳಂತೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಓಡಾಡುತ್ತಿರುತ್ತವೆ. ಪ್ರವಾಸಿಗರನ್ನು ಹೌಸ್ ಬೋಟಿಗೆ ತಲುಪಿಸುವುದು ಅಥವಾ ದಾಲ್ ಲೇಕ್ ನಲ್ಲಿ ಒಂದು ಸುತ್ತು ಹಾಕಿಸುವುದು ಅವರ ಕೆಲಸ. ನಾವು ನಮ್ಮ ಲಗೇಜುಗಳನ್ನು ಅದರಲ್ಲಿ ತುಂಬಿಸಿಕೊಂಡು, ಎರಡು ಬೋಟುಗಳಲ್ಲಿ ಕುಳಿತು ಹೊರಟೆವು. ಮಳೆ ಹನಿಯುತ್ತಿತ್ತು. ಚಳಿಯೋ ಚಳಿ. ಸೂಟ್ ಕೇಸ್ ನಲ್ಲಿದ್ದ ಸ್ವೆಟರ್, ಟೋಪಿ ಎಲ್ಲವೂ ಹೊರಗೆ ಬಂದವು. ಎಲ್ಲರೂ ಬೆಚ್ಚಗೆ ಸಿದ್ಧರಾದರು.
ಶ್ರೀನಗರದ ಆಭರಣ
ಕಾಶ್ಮೀರಿ ಭಾಷೆಯಲ್ಲಿ ದಾಲ್ ಎಂದರೆ ಸರೋವರ. ಇದನ್ನು ಬೇಸಿಗೆಯ ರಾಜಧಾನಿ ಎನ್ನಬಹುದು. ಕಾಶ್ಮೀರ ಎನ್ನುವ ಕಿರೀಟದ ಹೊಳೆಯುವ ಆಭರಣ ಎನ್ನಬಹುದು. ಮೀನುಗಾರಿಕೆ ಮತ್ತು ಜಲ ಸಸ್ಯ ಕೊಯ್ಲು, ಜೊತೆಗೆ ಅನೇಕ ವಾಣಿಜ್ಯ ಕೆಲಸಗಳಿಗೆ ಪ್ರಮುಖ ಮೂಲವಾಗಿದೆ. ಈ ಸರೋವರದ ದಡದ ಸುತ್ತಲೂ ಸುಂದರ ಉದ್ಯಾನವನಗಳು, ಹೌಸ್ ಬೋಟ್ ಗಳು ಅರ್ಥಾತ್ ದೋಣಿ ಮನೆಗಳು ಮತ್ತು ಅಲ್ಲಲ್ಲಿ ಓಡಾಡುವ ಬಣ್ಣ ಬಣ್ಣದ ಶಿಕಾರಗಳು ಎಲ್ಲರ ಮನಸೆಳೆಯುತ್ತದೆ. ದಾಲ್ ನದಿಯ ತಟ ಸುಮಾರು 15.5 ಕಿಲೋ ಮೀಟರ್ ಗಳಷ್ಟು ಇದೆ (9.6 ಮೈಲುಗಳು). ಈ ಸಾಲು ಮರಗಳ ವಿಶಾಲ ಮಾರ್ಗದ ಸುತ್ತಲೂ ಮೊಗಲ್ ಕಾಲದ ಪಾರ್ಕು, ಉದ್ಯಾನವನ, ಹೋಟೆಲ್ ಮತ್ತು ಹೌಸ್ ಬೋಟ್ ಗಳಿಂದ ಆವೃತವಾಗಿವೆ.