ಗಣಿತ ಎಂದರೆ, ಕಬ್ಬಿಣದ ಕಡಲೆ ಎಂದೇ ಭಾವಿಸಿ ಭಯಪಡುತ್ತಿದ್ದ ಜಾನಕಿ, ಸದಾ ಶಾಲೆ ತಪ್ಪಿಸುತ್ತಿದ್ದಳು. ಅವಳ ಭಯ ನಿವಾರಣೆಗೊಂಡು ಗಣಿತದಲ್ಲಿ ಆಸಕ್ತಿ ಬಂದದ್ದು ಹೇಗೆ……?

ಐದು ಗಂಟೆಗೆ ಶಾಲೆ ಬಿಟ್ಟಾಗಲೇ ದಟ್ಟವಾದ ಮೋಡ ಕವಿದಿತ್ತು. ಪುಸ್ತಕದ ಬ್ಯಾಗ್‌ ನ್ನು ಹೆಗಲಿಗೆ ತೂಗು ಹಾಕಿಕೊಂಡು, ಕೈಯಲ್ಲಿ ಊಟದ ಬಾಕ್ಸ್ ಹಿಡಿದುಕೊಂಡು, ಉದ್ದನೆಯ ಲಂಗವನ್ನು ಮೇಲಕ್ಕೆ ಸಿಕ್ಕಿಸಿಕೊಂಡು ಮನೆಯ ದಾರಿ ಹಿಡಿದರು ಸುಮಾ, ಸುಧಾ ಮತ್ತು ಜಾನಕಿ. ಸುರಿಯುತ್ತಿರುವ ಮಳೆ, ಹರಿಯುತ್ತಿರುವ ನೀರು, ಸುಂಯ್ಯನೆ ಬೀಸುವ ಗಾಳಿ…. ಕಾಲಿನಿಂದ ನೀರನ್ನು ಚಿಮ್ಮುತ್ತಾ ನಡೆಯುತ್ತಿದ್ದ ಅವರಿಗೆ ಮನೆ ಸೇರುವುದೇ ಮುಖ್ಯ ಗುರಿಯಾಗಿತ್ತು.

ಮಟ್ಟಿ ಮನೆ ಮಲೆನಾಡ ಒಂದು ಸಣ್ಣ ಹಳ್ಳಿ. ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ ರಸ್ತೆ, ವಿದ್ಯುತ್‌ ದೀಪಗಳಿಲ್ಲದ ಕುಗ್ರಾಮ ಎಂದರೆ ತಪ್ಪಾಗಲಾರದು. ಒಂದು ಕಿ.ಮೀ. ದೂರದ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿದ ಸುಮಾ, ಸುಧಾ, ಜಾನಕಿಯರು ಐದನೇ ತರಗತಿಗೆ ಕಾಂಚನಗಿರಿಗೆ ಹೋಗಬೇಕಾಗಿತ್ತು. ಒಂದೇ ವಾರಿಗೆಯವರಾದ ಇವರು ಚಿಕ್ಕಂದಿನಿಂದಲೂ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದರು, ಒಟ್ಟಾಗಿ ಆಟವಾಡುತ್ತಿದ್ದರು.

ಪ್ರತಿ ವರ್ಷ ನಡೆಯುವ ಕೆಂಚಮ್ಮನ ಜಾತ್ರೆಗೂ, ಪಾರ್ವತಮ್ಮನ ಬೆಟ್ಟದ ಜಾತ್ರೆಗೂ ಒಟ್ಟಾಗಿಯೇ ಹೋಗಿ ಬರುತ್ತಿದ್ದರು. ಬೆಟ್ಟ ಹತ್ತಿ, ಕಾಡು ದಾಟಿ ಕಾಫಿ ತೋಟದ ನಡುವೆ ಸಾಗಿ ಶಾಲೆ ಸೇರಲು ಅವರಿಗೆ ಒಂದೂವರೆ ಗಂಟೆ ಸಮಯ ಬೇಕಾಗುತ್ತಿತ್ತು. ಕಲ್ಲು ಮುಳ್ಳುಗಳಿಂದ ಕೂಡಿದ ಹಾದಿ ಮಳೆಗಾಲದಲ್ಲಿ ಅಕ್ಕಪಕ್ಕದ ಗಿಡಗಳು ಬೆಳೆದು ದಾರಿಗೆ ಅಡ್ಡವಾಗಿ ಇರುತ್ತಿದ್ದವು.

ಸಂಜೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಆಕಾಶದ ತುಂಬೆಲ್ಲ ಕಪ್ಪು ಮೋಡ. ವಾತಾವರಣವೆಲ್ಲ ಕತ್ತಲೋ ಕತ್ತಲು. ಹಿಡಿದಿದ್ದ ಮರದ ದೊಡ್ಡ ಕೊಡೆಯ ಮೇಲೆ ಬಿದ್ದ ನೀರಿನ ಹನಿಗಳು ಟಪ್‌ ಟಪ್‌ ಟಪ್‌ ಎಂದು ಸದ್ದು ಮಾಡುತ್ತಿದ್ದವು. ಗಾಳಿ ಮಳೆಯ ಅಬ್ಬರಕ್ಕೆ ಒಬ್ಬರ ಮಾತು ಮತ್ತೊಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಾಫಿ ತೋಟದ ಮರಗಳಲ್ಲಿ ಕುಳಿತು ಜೀರ್‌ ಜೀರ್‌ ಸದ್ದು ಮಾಡುವ ಕಣ್ಣಿಗೆ ಕಾಣದ ಹುಳುಗಳು. ಅವು ಹೇಗಿರಬಹುದೆಂದು ಹುಡುಕಿ, ಅವು ಕಾಣದೆ ಎಷ್ಟೋ ಬಾರಿ ನಿರಾಶರಾಗಿದ್ದರು.

ಅಷ್ಟರಲ್ಲಿ ಕಾಫಿ ತೋಟದ ಕೆಲಸ ಮುಗಿಸಿದ ಕೂಲಿಯಾಳುಗಳು ಹಲಸಿನ ಹಣ್ಣನ್ನು ಕತ್ತರಿಸಿ ತಿನ್ನುತ್ತಿದ್ದರು. ಪಾಪ ಮಕ್ಕಳಿಗೂ ಕೊಡಿ ಎಂದು ಯಾರೋ ಹೇಳಿದರು. ಇವರಿಗೂ ಹಣ್ಣುಗಳನ್ನು  ಕೊಟ್ಟರು. ಮಧ್ಯಾಹ್ನ ತಿಂದ ತಿಂಡಿ ಯಾವಾಗಲೋ ಕರಗಿ ಹೋಗಿದ್ದರಿಂದ ಅವರು ಕೊಟ್ಟ ಹಲಸಿನ ಹಣ್ಣನ್ನು ತಿಂದ ಕೂಡಲೇ ದೇಹದಲ್ಲಿ ಹೊಸ ಶಕ್ತಿ ಬಂದಂತಾಗಿ, ಗೆಳತಿಯರು ಮನೆಯ ಕಡೆಗೆ ಬಿರಬಿರನೆ ಹೆಜ್ದೆ ಹಾಕಿದರು. ತಾವು ನೆನೆದರೂ ಪುಸ್ತಕದ ಬ್ಯಾಗು ನೆನೆಯಬಾರದೆಂದು ಜೋಪಾನವಾಗಿ ಬ್ಯಾಗನ್ನು ಹಿಡಿದು ಸಾಗಿದರು.

“ಇವತ್ತು ಶ್ರಾವಣ ಶನಿವಾರ. ನಮ್ಮೇನಲಿ ಶ್ಯಾವಿಗೆ, ಕೋಳಿ ಸಾರು ಮಾಡು ಎಂದು ತಾತ ಅವ್ವನ ಬಳಿ ಹೇಳ್ತಾ ಇದ್ರು,” ಎಂದಳು ಜಾನಕಿ.

“ನಮ್ಮನೇಲು ಇವತ್ತು ಶ್ರಾವಣ,” ಎಂದಳು ಸುಧಾ. ಹೀಗೆ ಮಾತನಾಡುತ್ತ ಮುಂದೆ ಸಾಗಿದರು.

ಮನೆ ತಲುಪಿದಾಗ ಬಾಗಿಲಲ್ಲಿ ಹಿತ್ತಾಳೆಯ ಹಂಡೆ, ಪಕ್ಕದಲ್ಲೇ ಒಂದು ಚೊಂಬು. ಮನೆಯ ಸೂರಿನಿಂದ ಬಿದ್ದ ನೀರು ತಗಡಿನ ಮೂಲಕ ಒಂದೇ ಕಡೆ ಶೇಖರವಾಗಿ ಹಂಡೆ ತುಂಬಿಕೊಳ್ಳುವಂತೆ ವ್ಯವಸ್ಥೆ ಮಾಡಿದ್ದರು. ಕೊಡೆಯನ್ನು ನೀರು ಸೋರಿಕೊಳ್ಳಲು ಬಾಗಿಲಿಗೆ ಒರಗಿಸಿಟ್ಟ ಜಾನಕಿ, ಕಾಲು ತೊಳೆದುಕೊಂಡು ಒಳಗೆ ಬಂದಳು. ಬ್ಯಾಗನ್ನು ಒಳಗಿಟ್ಟು, ಊಟದ ಡಬ್ಬಿಯನ್ನು ತೊಳೆಯಲು ಹಾಕಿ, ಬಟ್ಟೆ ಬದಲಾಯಿಸಿಕೊಂಡು ಬಂದು ಒಲೆ ಮುಂದೆ ಕುಳಿತರು.

ಒಲೆ ಮುಂದೆ ಬೆಚ್ಚಗೆ ಕುಳಿತು ಅವ್ವ ಕೊಟ್ಟ ಬಿಸಿ ಬಿಸಿ ಕಾಫಿಯನ್ನು ಗಂಟಲಿಗೆ ಇಳಿಸುತ್ತಿದ್ದಂತೆ, ದೇಹದಲ್ಲಿ ಹೊಸ ಶಕ್ತಿ ಸಂಚಾರವಾದಂತೆ ಆಯಿತು. ಸಂಜೆ ಮಾಡಿದ ಒಂದು ರೊಟ್ಟಿಯನ್ನು ಹಲಸಿನ ಬೀಜದ ಚಟ್ನಿಯೊಂದಿಗೆ ಕೈಗಿಟ್ಟ ಅವ್ವ, “ತಿಂದು ಓದಿಕೋ ಹೋಗು,” ಎಂದರು.

ರೊಟ್ಟಿ ತಿನ್ನುತ್ತಾ ಶಾಲೆಗೆ ಹೋಗುವಾಗ ಬರುವಾಗಿನ ಘಟನೆಗಳು, ಶಾಲೆಯಲ್ಲಿ ನಡೆದ ಸಂಗತಿಗಳನ್ನೆಲ್ಲಾ ಅವ್ವನಿಗೆ ಹಾಗೂ ಯಾವಾಗಲೂ ಬೆಂಕಿ ಕಾಯಿಸುತ್ತಾ ಕುಳಿತಿರುತ್ತಿದ್ದ ತಾತನಿಗೆ ಹೇಳಿದಳು. ಪ್ರತಿ ದಿನ ಅವಳು ನಡೆದುದ್ದೆಲ್ಲವನ್ನೂ ಬಂದು ಮನೆಯಲ್ಲಿ ವರದಿ ಒಪ್ಪಿಸಿದರೇ ಅವಳಿಗೆ ಸಮಾಧಾನ.

ಸೀಮೆ ಎಣ್ಣೆ ದೀಪ ಇಟ್ಟುಕೊಂಡು ಬಂದು ಚಾಪೆ ಮೇಲೆ ತಮ್ಮನೊಂದಿಗೆ ಕುಳಿತು, ಅಂದಿನ ಪಾಠ ಓದಿಕೊಂಡು, ಹೋಂವರ್ಕ್ ಮಾಡ ತೊಡಗಿದಳು. ನಾಟಿ ಕೋಳಿ ಸಾರಿನ ಘಮಲು ಮೂಗಿಗೆ ಬಡಿಯುತ್ತಿದ್ದಂತೆ, ಪುಸ್ತಕಗಳನ್ನು ಬ್ಯಾಗಿನೊಳಗೆ ಜೋಡಿಸಿಟ್ಟು, ತೂಕಡಿಸುತ್ತಿದ್ದ ತಮ್ಮನನ್ನು ಎಬ್ಬಿಸಿಕೊಂಡು ಅಡುಗೆ ಮನೆಗೆ ಊಟಕ್ಕೆ ಬಂದಳು.

ಬೆಳಗಾದೊಡನೆ ಬಾಗಿಲಿಗೆ ಬಂದು `ಕೊ….ಕ್ಕೊ…ಕ್ಕೋ…..’ ಎಂದು ಕೂಗುತ್ತಿದ್ದ ದೊಡ್ಡ ಹುಂಜನನ್ನು ಕುಯ್ದಿದ್ದು ಎಂದು ತಿಳಿದಾಗ ಜಾನಕಿಗೆ ಮನಸ್ಸು ಮುದುಡಿತಾದರೂ ತಿನ್ನುವಾಗ ಅದು ನೆನಪಿಗೇ ಬರಲೇ ಇಲ್ಲ. ಹೊಟ್ಟೆ ತುಂಬಾ ಉಂಡು ಬಿಳಿ ಕಂಬಳಿ ಹೊದ್ದು ದಿಂಬಿಗೆ ತಲೆ ಕೊಟ್ಟಿದ್ದೆ ತಡ ಮಟ್ಟಿಮನೆ, ಕಾಂಚನಗಿರಿ ಎಲ್ಲವನ್ನೂ ದಾಟಿ ಎಲ್ಲೋ ತೇಲಿ ಹೋಗಿದ್ದಳು ಜಾನಕಿ.

ಮೂಡಣದ ಸೂರ್ಯ ಮೂಡುವ ಮೊದಲೇ ಅಲ್ವಾ, “ಜಾನಕಿ ಏಳವ್ವಾ….” ಎಂದಾಗಲೇ ಎಚ್ಚರವಾಗಿತ್ತು.

vidhva-vidhur-story2

`ಕಣ್ಣು ಬಿಡೋಕು ಆಗ್ತಾ ಇಲ್ಲ. ಅಲ್ವಾ ಯಾಕಾದ್ರೂ ಇಷ್ಟೊತ್ತಿಗೆ ಎಬ್ಬಿಸ್ತಾಳೋ, ತಾನು ಏಳೋದಲ್ಲದೆ ನಮ್ಮನ್ನೂ ಮಲಗೋಕೆ ಬಿಡಲ್ಲ,’ ಎಂದುಕೊಂಡು ಕಣ್ಣುಜ್ಜಿಕೊಳ್ಳುತ್ತಾ ಎದ್ದು ಆಚೆ ನಡೆದಳು. ಕೊಟ್ಟಿಗೆಯಲ್ಲಿದ್ದ ದನಕರುಗಳನ್ನು ಹೊರಗೆ ಕಟ್ಟಿ ಸಗಣಿ ಬಾಚುತ್ತಿದ್ದ ಅವ್ವನ ಬಳಿ ಹೋಗಿ ಸುಮ್ಮನೆ ನಿಂತುಕೊಂಡಳು. ತನ್ನ ಕೆಲಸಗಳ ನೆನಪಾಗಿ ಹಿಂದಿರುಗಿದಳು.

ಪ್ರತಿ ದಿನ ಬಾಗಿಲಿಗೆ ನೀರು ಹಾಕಿ, ರಂಗೋಲಿ ಬಿಡಿಸುವುದು, ಅವ್ವ ಕೊಟ್ಟ ಕಾಫಿ ಕುಡಿದು, ಪಾತ್ರೆ ತೊಳೆದು ಕೊಡುವುದು, ಗದ್ದೆ ಬಾವಿಯಿಂದ ತಾಮ್ರದ ಬಿಂದಿಗೆಯಲ್ಲಿ ನೀರು ತಂದು ಅಡುಗೆ ಮನೆಯ ಹಂಡೆ ಹಾಗೂ ಬಚ್ಚಲು ಮನೆಯ ಹಂಡೆಗೆ ನೀರು ತುಂಬಿಸುವುದು ಜಾನಕಿಯ ಕೆಲಸಗಳು. ನಂತರ ತಿಂಡಿ ತಿಂದು ಅವ್ವನ ಕೈಲಿ ಎರಡು ಜಡೆ ಹಾಕಿಸಿಕೊಂಡು ಮಧ್ಯಾಹ್ನಕ್ಕೆ ತಿಂಡಿ ತುಂಬಿಕೊಂಡು ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಸರಿಯಾದ ಸಮಯಕ್ಕೆ ಶಾಲೆಯನ್ನು ತಲುಪುತ್ತಿದ್ದಳು.

ಇಂದು ಎಂದಿನಂತೆ ಶಾಲೆಗೆ ಬಂದಾಗ, ರಜೆಯ ಮೇಲಿದ್ದ ಗಣಿತದ ಮೇಷ್ಟ್ರು ಬಂದಿದ್ದರು. ತರಗತಿಗೆ ಬಂದ ಅವರು, “ನಾನು ರಾಜಶೇಖರ್‌ ಅಂತ. ನನ್ನನ್ನು ಆರ್‌.ಎಸ್‌ ಅಂತ ಕರೀತಾರೆ. ನಿಮಗೆ ಗಣಿತ ತೆಗೆದುಕೊಳ್ತೀನಿ,” ಎಂದರು. ಎತ್ತರದ ನಿಲುವು, ತೆಳ್ಳಗಿನ ದೇಹ, ಮುಖದಲ್ಲಿ ಪ್ರಧಾನವಾಗಿ ಕಾಣುತ್ತಿದ್ದ ದಪ್ಪ ಮೀಸೆ, ಸ್ವಲ್ಪ ದೊಡ್ಡದೇ ಎನಿಸಬಹುದಾದ ಮೂಗು, ಕೆಂಪು ಕಣ್ಣುಗಳು, ಒಪ್ಪವಾಗಿ ಬಾಚಿದ್ದ ತಲೆ. ಎಲ್ಲರೂ ಅವರನ್ನೇ ನೋಡುತ್ತಿದ್ದರು.

ವಿದ್ಯಾರ್ಥಿಗಳು ಅವರನ್ನು ಕಣ್ತುಂಬಿಕೊಳ್ಳುವ ಮೊದಲೇ, “ಎಲ್ಲರಿಗೂ ಮಗ್ಗಿ ಬರುತ್ತಾ? ಯಾರು ಯಾರಿಗೆ ಬರಲ್ಲ ಕೈಯೆತ್ತಿ,” ಎಂದು ಮೇಷ್ಟ್ರ ಧ್ವನಿ ಕೇಳಿ ಬಂತು, ಯಾರೂ ಕೈಯೆತ್ತಲಿಲ್ಲ, “ಹಾಗಾದ್ರೆ ಎಲ್ಲರೂ ಮಗ್ಗಿ ಕಲಿತಿದ್ದೀರಾ ಎಂದಾಯಿತು. ಒಂದು ಕಡೆಯಿಂದ ಮಗ್ಗಿ ಹೇಳಿ,” ಎಂದರು.

ಮೊದಲ ಬೆಂಚಿನಿಂದ ಶುರುವಾದ, `ಎರಡೊಂದ್ಲ ಎರಡು……’ ಇಪ್ಪತ್ತರ ಮಗ್ಗಿವರೆಗೆ ಮೂರು ಜನ ಹೇಳಿದ್ರು. ನಾಲ್ಕನೆಯವ ಆರರ ಮಗ್ಗಿ ಹೇಳುವಾಗಲೇ ತೊದಲಾರಂಭಿಸಿದ.

“ಯಾರಿಗೆ ಮಗ್ಗಿ ಬರಲ್ಲ ಕೈಯೆತ್ತಿ ಅಂದ್ರೆ ಕೈಯೆತ್ತೋಕಾಗಲ್ಲ…. ಯಾತಕ್ಕೆ ಬರ್ತೀಯಾ ಕ್ಲಾಸಿಗೆ ದನ ಕಾಯೋಕೆ ಹೋಗು,” ಎಂದು ಅವನನ್ನು ಬೆಂಚಿನ ಮೇಲೆ ನಿಲ್ಲಿಸಿದರು.

ಮುಂದಿನವನಿಗೆ, “ನೀನು ಹೇಳು,” ಅಂದ್ರು. ಅವನಿಗೆ ಹೆದರಿಕೆಯಿಂದ ಎರಡರ ಮಗ್ಗಿಯನ್ನೇ ಹೇಳಲು ಸಾಧ್ಯವಾಗಲಿಲ್ಲ.

“ಸರಿಯಾಗಿ ಹೇಳೋ….. ಇಲ್ಲಾ ಹತ್ತು ಬೆಂಚಿನ ಮೇಲೆ,” ಎನ್ನುವಾಗ ಅವರ ಕೆಂಪಗಿದ್ದ ಕಣ್ಣು ಮತ್ತಷ್ಟು ಕೆಂಪಗಾಗಿದ್ದವು. ಅರ್ಧ ಮಕ್ಕಳು ಮಗ್ಗಿ ಹೇಳುವಷ್ಟರಲ್ಲಿ ಸಮಯಾಗಿದ್ದರಿಂದ, “ಉಳಿದವರು ನಾಳೆ ಹೇಳಿ…. ಎಲ್ಲರೂ ಮಗ್ಗಿ ಕಲಿತುಕೊಂಡು ಬರಬೇಕು. ಮಗ್ಗಿ ಕಲಿಯದೇ ಲೆಕ್ಕ ಮಾಡೋದು ಹೇಗೆ….?” ಎನ್ನುತ್ತಿದ್ದಂತೆ ಬೆಂಚಿನ ಮೇಲೆ ನಿಂತಿದ್ದವರು ಸಧ್ಯ ಬದುಕಿಕೊಂಡೆ ಎಂದು ಇಳಿಯಲಾರಂಭಿಸಿದರು.

“ನಿಮಗೆ ಇಳಿಯಲು ಹೇಳಿದವರು ಯಾರು? ಕೈಯನ್ನು ಮಗುಚಿ ಹಿಡಿಯಿರಿ,” ಎಂದವರೇ ಹಿಡಿದಿದ್ದ ಮರದ ಸ್ಕೇಲಿನಿಂದ ಬಾರಿಸಲಾರಂಭಿಸಿದರು. ಎರಡನೇ ಬೆಂಚಿನ ಮುಕುಂದ ಹೆದರಿಕೆಯಿಂದ ಏಟು ಬೀಳುವ ಮೊದಲೇ ಚಡ್ಡಿ ಒದ್ದೆ ಮಾಡಿಕೊಂಡ. ಇದರಿಂದ ಮತ್ತಷ್ಟು ಕೋಪಗೊಂಡ ಮೇಷ್ಟ್ರು ಎರಡೇಟು ಹೆಚ್ಚಾಗಿಯೇ ಹಾಕಿ ಹೊರಟರು. ಹೋಗುವಾಗ ನಾಳೆ ಬಿದಿರಿನ ಕೋಲನ್ನು ತರಲು ಹೇಳಲು ಮರೆಯಲಿಲ್ಲ.

ಆಘಾತಕ್ಕೆ ಒಳಗಾದವರಂತೆ ಕುಳಿತಿದ್ದ ಮಕ್ಕಳನ್ನು ನೋಡಿ, “ಯಾಕೆ ಎಲ್ರೂ ಸಪ್ಪಗಿದ್ದೀರಿ,” ಎನ್ನುತ್ತಾ ಕನ್ನಡ ಮೇಷ್ಟ್ರು ಜೆ.ಎಸ್‌ಒಳಗೆ ಬಂದ್ರು.

ಯಾರೂ ಮಾತನಾಡಲಿಲ್ಲ. `ಈಗ ಯಾರು ಕ್ಲಾಸ್‌ ತಗೊಂಡಿದ್ರು?’ ಎಂದಾಗ `ಗಣಿತ,’ ಎಂಬ ಉತ್ತರ ಬಂತು. ಮಕ್ಕಳು ಸದಾ ನಗುತ್ತಿರಬೇಕೆಂದು ಬಯಸುವ ಜೆ.ಎಸ್‌, “ಈ ದಿನ ಪಾಠ ಬೇಡ ಕಥೆ ಹೇಳೋಣ,” ಎಂದು,  ಕಷ್ಟ ಬಂದಾಗ ಕುಗ್ಗದೆ ಅದನ್ನು ಎದುರಿಸಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ ಒಬ್ಬ ಬಡಹುಡುಗ ರಾಜನಾದ ಕಥೆ ಹೇಳಿದರು. ಅಷ್ಟರಲ್ಲಿ ಮಕ್ಕಳು ಸಹಜ ಸ್ಥಿತಿಗೆ ಮರಳಿದ್ದರು. ಈಗ ಹೇಳಿ ಏನಾಯ್ತು, ಎಂದವರಿಗೆ ಮಕ್ಕಳು ಎಲ್ಲವನ್ನೂ ಹೇಳಿದರು.

“ಬೇಜಾರು ಮಾಡಿಕೊಳ್ಳಬಾರದು. ಮಗ್ಗಿ ಕಲೀಬೇಕಲ್ವಾ….. ಎಲ್ಲರೂ ಮಗ್ಗಿ ಕಲಿತುಕೊಳ್ಳಿ,” ಎಂದು ಬುದ್ಧಿ ಹೇಳಿದರು.

ಅಂದು ಸುಮಾ, ಸುಧಾ ಹಾಗೂ ಜಾನಕಿಯರು ದಾರಿಯುದ್ದಕ್ಕೂ ಮಗ್ಗಿ ಹೇಳಿಕೊಂಡರು. ಹೇಳುವಾಗ ತಪ್ಪಾದರೆ ಏಟು ಬೀಳುತ್ತದೆಂದು ಮಾತನಾಡಿಕೊಂಡು ಮನೆಯ ಹಾದಿ ಹಿಡಿದರು.

ದಾರಿಯ ಬದಿಯಲ್ಲಿ ಮೇಯುತ್ತಿದ್ದ ಸೋರೆಹಕ್ಕಿಗಳನ್ನು ನೋಡಿದ ಸುಮಾ, “ಜಾನಕಿ…. ಅದರ ಕೊರಳಲ್ಲಿರು ಬಿಳಿಯ ಪಟ್ಟಿ ಹೇಗೆ ಬಂತೆಂದು ನಿಂಗೆ ಗೊತ್ತಾ?” ಎಂದು ಕೇಳದಳು. ಜಾನಕಿ ನಿರಾಸಕ್ತಿಯಿಂದ ಇಲ್ಲವೆಂದಾಗ ತಾನೇ ಮುಂದುವರಿಸಿದಳು, “ಒಂದೂರಲ್ಲಿ ಮುತ್ತಿನ ಶೆಟ್ಟಿ ಇದ್ನಂತೆ. ವ್ಯಾಪಾರಕ್ಕಾಗಿ ಹೋಗಿ ಬರುವಾಗ ಒಂದು ದಿನ ಆಯಾಸ ಪರಿಹಾರಕ್ಕಾಗಿ ಊಟ ಮಾಡಿ ಒಂದು ತೊರೆಯ ಬಳಿ ಮಲಗಿದನಂತೆ. ಆ ಸಮಯದಲ್ಲಿ ಮಳೆ ಬಂದು ತೊರೆಯಲ್ಲಿ ನೀರು ಹೆಚ್ಚು ಹೆಚ್ಚು ತುಂಬಲಾರಂಭಿಸಿತು. ಆಗ ಸೋರೆಹಕ್ಕಿ, `ಮುತ್ತಿನ ಶೆಟ್ಟಿ ತೊರೆ ತೊರೆ,’ ಎಂದು ಮುತ್ತಿನ ಶೆಟ್ಟಿಯನ್ನು ಎಚ್ಚರಿಸಿತಂತೆ. ತನ್ನನ್ನು ರಕ್ಷಿಸಿದ ಸೋರೆಕಟ್ಟನಿಗೆ ಮುತ್ತಿನ ಶೆಟ್ಟಿ ಹಾರವನ್ನು ಬಹುಮಾನವಾಗಿ ಕೊಟ್ಟನಂತೆ. ಅದು ಇಂದಿಗೂ ಅದರ ಕೊರಳಲ್ಲಿ ಇದೆಯಂತೆ,” ಎಂದು ಹೇಳಿ ಮುಗಿಸಿದಳು.

ಜಾನಕಿಯಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ತಾನೂ ಮೌನವಾದಳು. ಮಗ್ಗಿ ಹೇಳುವುದರಲ್ಲಿ ಬಚಾವಾದರೂ ಒಂದು ದಿನ ಗಣಿತದ ಮೇಷ್ಟ್ರು ಬೋರ್ಡ್‌ ಮೇಲೆ ಲೆಕ್ಕ ಮಾಡಲು ಜಾನಕಿಯನ್ನು ಕರೆದರು. ಆ ಲೆಕ್ಕ ಅವಳಿಗೆ ಗೊತ್ತಿರಲಿಲ್ಲ. ಲೆಕ್ಕ ಮಾಡಲು ಬಾರದೆ ಏಟು ತಿಂದು ಅವಮಾನದಿಂದ ಕುಗ್ಗಿಹೋದಳು. ಎಷ್ಟೇ ಪ್ರಯತ್ನಪಟ್ಟರೂ ಹೆದರಿಕೆಯಿಂದ ಅವಳಿಗೆ ಲೆಕ್ಕ ತಲೆಗೆ ಹತ್ತುತ್ತಿರಲಿಲ್ಲ. ಮನೆಯಲ್ಲಿ ಹೇಳಿ ಕೊಡುವವರು ಯಾರೂ ಇರಲಿಲ್ಲ. ತರಗತಿಯಲ್ಲಿ ಎಲ್ಲರೂ ಸರಿಯಾಗಿ ಹೋಂವರ್ಕ್ ಮಾಡಿಕೊಂಡು ಬರುತ್ತಿದ್ದರು. ಕರೆದ ಕೂಡಲೇ ಹೋಗಿ ಬೋರ್ಡ್‌ ಮೇಲೆ ಲೆಕ್ಕ ಮಾಡುತ್ತಿದ್ದರು. ಆದರೆ ಜಾನಕಿಗೆ ಲೆಕ್ಕ ಬರಲೇ ಇಲ್ಲ. ಅವಳು ದಿನೇ ದಿನೇ ಮಂಕಾಗತೊಡಗಿದಳು. ತಲೆನೋವು, ಹೊಟ್ಟೆ ನೋವು ಎಂದು ಒಂದೊಂದು ದಿನ ಒಂದೊಂದು ರೀತಿಯ ಸಬೂಬು ಹೇಳುತ್ತಾ ಶಾಲೆಗೆ ಚಕ್ಕರ್‌ ಹೊಡೆಯತೊಡಗಿದಳು.

ಅವಳಿಗೆ ತನ್ನ ನೋವನ್ನು ಹೇಳಿಕೊಳ್ಳಲು ಯಾರೂ ಸಿಗಲಿಲ್ಲ. ಅವ್ವನ ಬಳಿ ಹೇಳಲು ಹೋದರೆ, `ಬೈಯುವವರು ಬದುಕಲು ಹೇಳ್ತಾರೆ, ಅದಕ್ಕೆಲ್ಲಾ ಬೇಜಾರು ಮಾಡಿಕೊಳ್ತಾರಾ? ಹೋಗವ್ವಾ…..’ ಅಂದುಬಿಡುತ್ತಿದ್ದಳು. ತಾತನ ಬಳಿ ಹೇಳಹೋದರೆ, `ಮೇಷ್ಟ್ರು ಅಂದ್ರೆ ದೇವ್ರಿದ್ದಂಗೆ. ಅವರ ಬಗ್ಗೆ ಅಂಗೆಲ್ಲಾ ಬೇಜಾರು ಮಾಡ್ಕೋಬಾರ್ದು,’ ಎಂದು ಬುದ್ಧಿ ಹೇಳುವುದಕ್ಕೆ ಶುರು ಮಾಡ್ತಿದ್ರು. ಇನ್ನು ಸುಮಾ, ಸುಧಾರ ಬಳಿ ಹೇಳಿಕೊಂಡ್ರೆ, “ಅಲ್ಲ ಕಣೆ ಜಾನಕಿ, ಕ್ಲಾಸ್‌ ನಲ್ಲಿ ಲೆಕ್ಕ ಬರದೆ ಇದ್ದವರಿಗೆಲ್ಲಾ ಬೈಯ್ತಾರೆ ಹೊಡೀತಾರೆ. ಎಲ್ರೂ ನಿನ್ನ ಹಾಗೆ ಹೆದರಿ ಶಾಲೆ ಬಿಟ್ಟಿದ್ದಾರಾ….? ಏನೂ ಆಗಲ್ಲ ಎಲ್ಲ ಸರಿಯಾಗುತ್ತೆ. ಸುಮ್ಮನೆ ಕ್ಲಾಸಿಗೆ ಬಾರೆ,” ಎನ್ನುತ್ತಿದ್ದರು.

ಎಷ್ಟು ಯೋಚಿಸಿದರೂ ಜಾನಕಿಗೆ ಪರಿಹಾರ ಹೊಳೆಯಲಿಲ್ಲ. ಒಂದೊಂದು ದಿನ ಶಾಲೆಗೆ ಹೋಗುವುದು ಒಂದೊಂದು ದಿನ ತಪ್ಪಿಸಿಕೊಳ್ಳುವುದು ಮಾಮೂಲಿ ಆಯಿತು. ನಾಲ್ಕು ದಿನದಿಂದ ಶಾಲೆಗೆ ಹೋಗಿರಲಿಲ್ಲ.

ಶ್ರಾವಣ ಕಳೆದು ಗೌರಿಹಬ್ಬ ಬಂತು. ಮಳೆಯೂ ಕಡಿಮೆಯಾಯಿತು. ಒಂದು ಸಂಜೆ ಜಾನಕಿಯನ್ನು ಹುಡುಕಿಕೊಂಡು ಬಂದ ಸುಮಾ, ಸುಧಾ, “ಜಾನಕಿ, ನಿನಗೊಂದು ಒಳ್ಳೆಯ ಸುದ್ದಿ. ನಾಳೆ ನೀನು ಶಾಲೆಗೆ ಬಾ ಗೊತ್ತಾಗುತ್ತೆ….” ಎಂದರು. ಜಾನಕಿ ಎಂದಿನ ನಿರಾಸಕ್ತಿಯಿಂದ, “ಶಾಲೆಯಲ್ಲಿ ಗಣಪತಿ ಇಟ್ಟಿರುವುದು ತಾನೇ?” ಎಂದಳು.

“ನಾವು ಹೇಳುವುದಿಲ್ಲ ನೀನೇ ಬಂದು ತಿಳ್ಕೋ….” ಎಂದು ಅವರು ಹೊರಟು ಹೋದರು.

ರಾತ್ರಿಯೆಲ್ಲಾ ಯೋಚಿಸಿದ ಜಾನಕಿ, ಬೆಳಗ್ಗೆ ಶಾಲೆಗೆ ಹೊರಟಳು. ಸುಮಾ, ಸುಧಾ ಇಬ್ಬರೂ ಪಟ ಪಟಾಂತ ಮಾತಾಡುತ್ತಿದ್ದರೆ, ಜಾನಕಿ ಸುಮ್ಮನೆ ಅವರೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಮಾತಿಗಿಂತ ಮೌನವೇ ಹಿತವಾದವಳಂತೆ ತಲೆ ತಗ್ಗಿಸಿ ಸುಮ್ಮನೆ ನಡೆಯುತ್ತಿದ್ದಳು.

ಮಳೆಗಾಲದಲ್ಲಿ ನೀರುಂಡ ಭೂಮಿ ಸೂರ್ಯನ ಬಿಸಿಲಿಗೆ ಮೈ ಕಾಯಿಸಿಕೊಳ್ಳುವಂತೆ ತೋರುತ್ತಿತ್ತು. ಮರಗಿಡಗಳಿಂದ ಪಕ್ಷಿಗಳ ಕೂಗು ಬಗೆ ಬಗೆಯಾಗಿ ಕೇಳಿ ಬರುತ್ತಿತ್ತು. ಸೋರೆಹಕ್ಕಿ, ಮೈನಾ ಹಕ್ಕಿಗಳು ಗುಂಪು ಗುಂಪಾಗಿ ಮೇಯುತ್ತಿದ್ದವು. ಮಲಗಿದ್ದ ಎಮ್ಮೆಯ ಬೆನ್ನಿನ ಮೇಲಿದ್ದ ಸಣ್ಣ ಗಾಯನ್ನು ಕಾಗೆಯೊಂದು ಕೊಕ್ಕಿನಿಂದ ಕುಕ್ಕಿ ಕುಕ್ಕಿ ದೊಡ್ಡದು ಮಾಡುತ್ತಿತ್ತು. ದನ ಮೇಯಿಸುವ ಹುಡುಗರು ತಮ್ಮ ಪಾಡಿಗೆ ತಾವು ಗೋಲಿ ಆಡುವುದರಲ್ಲಿ ಮಗ್ನರಾಗಿದ್ದರು.

ಶಾಲೆಗೆ ಬಂದಾಗ ಪ್ರಾರ್ಥನೆಯ ಸಮಯದಲ್ಲಿ ಗಣಿತದ ಮೇಷ್ಟ್ರು ಕಾಣಲಿಲ್ಲ. ಬದಲಾಗಿ ಹೊಸ ಮೇಡಂ ಒಬ್ಬರು ನಿಂತಿದ್ದರು. ಜಾನಕಿ, ಸುಮಾ, ಸುಧಾರ ಮುಖ ನೋಡಿದಾಗ ಸುಮ್ಮನೆ ನಕ್ಕರು. ಮೊದಲ ಪೀರಿಯಡ್‌ ಕನ್ನಡ, ಎಲ್ಲರಿಗೂ ಪ್ರಿಯವಾದ ತರಗತಿ. ಎರಡನೇ ಪೀರಿಯಡ್‌ ಗಣಿತ. ಹೊಸ ಮಿಸ್‌ ಬಂದಾಗ ಎಲ್ಲರೂ ಖುಷಿಯಿಂದ ಎದ್ದು ನಿಂತರು.

“ಆರ್‌.ಎಸ್‌ ಎಲ್ಲೇ….?” ಎಂದು ಜಾನಕಿ ಸುಮಾಳ ಕಿವಿಯಲ್ಲಿ ಪಿಸುಗುಟ್ಟಿದಳು.

`ಅವರಿಗೆ ಆರೋಗ್ಯ ಸರಿಯಿಲ್ಲವೆಂದು ಅವರ ಊರಿನ ಹತ್ತಿರಕ್ಕೆ ವರ್ಗಾವಣೆ ಮಾಡಿಸಿಕೊಂಡರಂತೆ. ಅವರ ಬದಲಿಗೆ ಈ ಮಿಸ್ ಬಂದಿದ್ದಾರೆ ಎಂದು ನಿನ್ನೆ ಹೆಡ್‌ ಮಾಷ್ಟ್ರು ಹೇಳಿದ್ರು,’ ಎಂದು ಹಾಳೆಯ ಮೇಲೆ ಬರೆದು ತೋರಿಸಿದಳು.

ಹೊಸ ಮಿಸ್‌ ಹಾಜರಾತಿ ಪುಸ್ತಕ ತೆಗೆದು ಎಲ್ಲರ ಹೆಸರು ಕೂಗಲಾರಂಭಿಸಿದರು. ಜಾನಕಿಯ ಹೆಸರು ಬಂದಾಗ, “ಯಾಕೆ ಮಗು ಶಾಲೆಗೆ ಸರಿಯಾಗಿ ಬರುತ್ತಿಲ್ಲ,” ಎಂದು ಕೇಳಿದರು. ಜಾನಕಿ ಸುಮ್ಮನೆ ತಲೆ ತಗ್ಗಿಸಿ ನಿಂತಳು.

“ನೀನು ಮಧ್ಯಾಹ್ನ ಊಟ ಮಾಡಿದ ನಂತರ ಬಂದು ನನ್ನನ್ನು ಕಾಣು,” ಎಂದರು.

`ಮಗು,’ ಎಂದಾಗಲೇ ಅವರ ಮಾತಿಗೆ ಅರ್ಧ ಕರಗಿ ಹೋಗಿದ್ದ ಜಾನಕಿ ಊಟದ ನಂತರ ಹೋಗಿ ಎಲ್ಲವನ್ನೂ ಹೇಳಿಕೊಂಡಳು. ಅತ್ತು ಮನಸ್ಸು ಹಗುರವಾದ ಮೇಲೆ ತಾನು ದೂರದ ಊರಿನಿಂದ ಶಾಲೆಗೆ ಬರುವುದು ತುಂಬಾ ಓದಬೇಕೆಂಬ ಆಸೆ, ಗಣಿತದ ಮೇಷ್ಟ್ರಿಗೆ ಹೆದರಿ ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದುದು, ಮನೆಯಲ್ಲಿ ಲೆಕ್ಕ ಹೇಳಿಕೊಡಲು ಯಾರೂ ಇಲ್ಲದಿರುವುದು ಎಲ್ಲವನ್ನೂ ಹೇಳಿಕೊಂಡಳು.

ಇದನ್ನೆಲ್ಲಾ ಕೇಳಿ ಬಹಳ ನೊಂದುಕೊಂಡ ಮಿಸ್‌, “ಇನ್ನು ಮುಂದೆ ಹಾಗಾಗುವುದಿಲ್ಲ. ಏನು ಗೊತ್ತಾಗದಿದ್ದರೆ ನನ್ನನ್ನು ಕೇಳು, ನಾನು ಹೇಳಿ ಕೊಡ್ತೀನಿ. ಅಲ್ಲದೆ ನಿನಗೆ ಯಾವುದೇ ಸಮಸ್ಯೆಗಳಿದ್ದರೂ ಬಂದು ನನ್ನ ಹತ್ತಿರ ಹೇಳಬಹುದು. ಆದರೆ ಶಾಲೆಗೆ ತಪ್ಪಿಸಿಕೊಳ್ಳಬಾರದು. ನೀನು ಜಾಣೆ ಈಗ ಕ್ಲಾಸಿಗೆ ಹೋಗು, ” ಎಂದ ಹೊಸ ಮಿಸ್‌ ಜಾನಕಿಗೆ ಧರೆಗಿಳಿದ ದೇವತೆಯಂತೆ ಕಂಡರು. ಅವರ ಮಾತಿನಿಂದ ಅವಳಲ್ಲಿ ಹೊಸ ಉತ್ಸಾಹ ಚಿಮ್ಮಿತು, ತಾನು ಚೆನ್ನಾಗಿ ಓದಬೇಕೆಂಬ ನಿರ್ಧಾರದಿಂದ ಮನೆಗೆ ಬಂದಳು. ಅಂದಿನಿಂದ ನಿಯಮಿತವಾಗಿ ಅವರ ಬಳಿ ಗಣಿತದ ಲೆಕ್ಕಗಳನ್ನು ಕಲಿಯತೊಡಗಿದಳು. ಈಗವಳು ಎಂದೂ ಶಾಲೆ ತಪ್ಪಿಸುತ್ತಿರಲಿಲ್ಲ.

`ನಾಗರ ಹಾವೇ ಹಾವೊಳು ಹೂವೇ ಬಾಗಿಲ ಬಿಲದೊಳು ನಿನ್ನಯ ಠಾವೆ ಕೈಗಳ ಮುಗಿವೆ ಹಾಲನ್ನೀಯಲೆ ಬಾ ಬಾ ಬಾ ಬಾ ಬಾ….’ ಎಂದು ಹಾಡುತ್ತಾ ಬಂದ ಜಾನಕಿಯನ್ನು ಏಡಿ ಸೋಸುತ್ತಾ ಬಾಗಿಲ ಬಳಿ ಕುಳಿತಿದ್ದ ಅಜ್ಜಿ, “ಏನೇ ಜಾನಕಿ ಇದು…. ಹೆಣ್ಮಕ್ಕಳು ಸ್ವಲ್ಪ ಗಂಭೀರವಾಗಿರೊಂದು ಕಲಿತುಕೋಬೇಕು,” ಎಂದಿತು.

ಆದರೆ ಅದನ್ನು ಕೇಳಿಸಿಕೊಳ್ಳಲು ಜಾನಕಿ ಅಲ್ಲಿರಲಿಲ್ಲ. ಅವಳಾಗಲೇ ಪುಸ್ತಕದ ಬ್ಯಾಗನ್ನು ಇಟ್ಟು ಆಟವಾಡಲು ಹೋಗಿಯಾಗಿತ್ತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ