ಆಕಸ್ಮಿಕ ಅಪಘಾತಕ್ಕೆ ತನ್ನ ಕಾಲು ಕಳೆದುಕೊಂಡ ರಘುನಂದನ್‌, ಈಗಾಗಲೇ ಮೈಥಿಲಿಯ ಜೊತೆ ನಡೆದಿದ್ದ ಲಗ್ನ ಪತ್ರಿಕೆ ಕ್ಯಾನ್ಸಲ್ ಮಾಡಿ ಅವಳು ಬೇರೆ ಮದುವೆಯಾಗುವಂತೆ ಒತ್ತಾಯಿಸಿದ. ಮುಂದೆ ನಡೆದದ್ದೇನು……?

ರಘುನಂದನ ಕಣ್ಣು ಬಿಟ್ಟಾಗ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದ. ಮೈಥಿಲಿ ಹಾಗೂ ಅವನ ಅಮ್ಮ ಅಪ್ಪ ಪಕ್ಕದಲ್ಲಿ ಕುಳಿತಿದ್ದರು. “ಮೈಥಿಲಿ…. ನಾನು ಯಾಕೆ ಇಲ್ಲಿದ್ದೇನೆ. ಅಪ್ಪ ನೀವಿಬ್ಬರೂ ಯಾವಾಗ ಬಂದಿರಿ….” ಎನ್ನುತ್ತಾ ಏಳಲು ಯತ್ನಿಸಿದ.

“ನಿಧಾನ ರಘು….” ಎನ್ನುತ್ತಾ ಮೈಥಿಲಿ ಅವನನ್ನು ಎತ್ತಿ ಕೂರಿಸಿದಳು.

ನೆನಪಾಯಿತು…. ಹೌದು ತಾನು ಮತ್ತು ಮೈಥಿಲಿ ಬೈಕ್‌ ನಲ್ಲಿ ಹೋಗುವಾಗ ಆ್ಯಕ್ಸಿಡೆಂಟ್‌ ಆಗಿತ್ತು… ಮುಂದೆ ತನಗೆ ಏನೊಂದೂ ನೆನಪಿಲ್ಲ.

“ಮೈಥಿಲಿ ನೀನು ಹುಷಾರಾಗಿ ಇದ್ದೀಯಾ… ನಿನಗೆ ಏನೂ ಆಗಲಿಲ್ವಾ….?” ಎನ್ನುತ್ತಾ ಅಮ್ಮನ ಕಡೆ ನೋಡಿದ. ಅಮ್ಮನ ಕಣ್ಣಲ್ಲಿ ನೀರು ತುಂಬಿತ್ತು.

“ಅಮ್ಮಾ….?” ಎಂದು ಪ್ರಶ್ನಾರ್ಥಕವಾಗಿ ಕಣ್ಣಲ್ಲೇ ಕೇಳಿ ಕಾಲೆತ್ತಲು ನೋಡಿದ, ಆಗಲಿಲ್ಲ. ಬ್ಯಾಂಡೇಜ್‌ ಸುತ್ತಿದ್ದರು, ಅಷ್ಟರಲ್ಲಿ ಡಾಕ್ಟರ್‌ ಬಂದರು.

“ಏನಾಯಿತು ನನಗೆ? ಸರಿಯಾಗಿ ಹೇಳಿ ಡಾಕ್ಟರ್‌….” ಎಂದು ತನ್ನ ಬ್ಯಾಂಡೇಜ್‌ ಮಾಡಿದ ಕಾಲನ್ನೇ ನೋಡುತ್ತಾ.

“ಏನಿಲ್ಲಾ…. ನಿನಗೆ ಆ್ಯಕ್ಸಿಡೆಂಟ್‌ ಆಗಿ ನಿನ್ನ ಬಲಗಾಲು ಜಜ್ಜಿ ಹೋಗಿತ್ತು. ಆಪರೇಷನ್‌ ಮಾಡಿ ತೆಗೆದಿದ್ದೇವೆ,” ಎಂದರು ಡಾಕ್ಟರ್‌.

“ಅಂದರೆ…. ನಾನೀಗ ಕಾಲಿಲ್ಲದ ಕುಂಟನಾ….. ನನಗೆ ನಡೆಯಲು ಸಾಧ್ಯವಿಲ್ವಾ….. ಏನು ನನ್ನ ಹಣೆಬರಹ….” ಎಂದು ಕಿರುಚಿದ.

“ರಘು…. ನಿನಗೆ ಆ್ಯಕ್ಸಿಡೆಂಟ್‌ ಆದಾಗ ಮೈಥಿಲಿ ಹಾಗೂ ಅವರ ತಂದೆ ಸೇರಿ ನಿನ್ನನ್ನು ಆಸ್ಪತ್ರೆಗೆ ಸೇರಿಸಿದ್ದರು. ನನಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ನಾವಿಬ್ಬರೂ ಎದ್ದೇವೋ…. ಬಿದ್ದೇವೋ…. ಎಂದು ಓಡಿಬಂದೆ. ಪುಣ್ಯಕ್ಕೆ ಒಂದು ಕಾಲು ಹೋಗಿ, ನಿನ್ನ ಜೀವ ಉಳಿದಿದೆ,” ಎಂದು ಭಾವುಕರಾಗಿ ನುಡಿದರು ರಘುನಂದನನ ತಂದೆ.

“ಅಪ್ಪಾ…. ನಾನಿನ್ನು ಕುಂಟನಾ…. ಒಂದೇ ಕಾಲಿನಲ್ಲಿ ನಡೆಯಬೇಕಾ…..” ಎಂದು ನೋವಿನಿಂದ ತಂದೆಯನ್ನು ಕೇಳಿದ.

ಅಲ್ಲೇ ಇದ್ದ ಡಾಕ್ಟರ್‌, “ಏನ್ರೀ….. ರಘುನಂದನ್‌ ವಿದ್ಯಾವಂತರಾಗಿ ನೀವು ಹೀಗೆ ಹೇಳಿದರೆ ಹೇಗೆ….? ವಿಜ್ಞಾನ ಎಷ್ಟು ಮುಂದುವರಿದಿದೆ…. ನಿಮಗೆ ಬೇರೆ ಕಾಲು ಹಾಕ್ತೀವಿ. ಎಲ್ಲರೂ ನಡೆಯುಂತೆ ನೀವು ನಡೆಯಬಹುದು,” ಎಂದರು.

ರಘುನಂದನ ಅಪ್ಪ ಬೆಂಗಳೂರಿನಿಂದ ನಾನೂರು ಕಿಲೋಮೀಟರ್‌ ದೂರದ ಹಳ್ಳಿಯಲ್ಲಿ ದೊಡ್ಡ ಜಮೀನ್ದಾರರು. ರಘುನಂದನ್ ಮಾಸ್ಟರ್‌ ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದ. ಮೈಥಿಲಿ ಅವನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದಳು. ಅವಳು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಳು. ಸಿರಿವಂತ ಕುಟುಂಬದ ಒಬ್ಬಳೇ ಮಗಳು. ರಘುನಂದನನ್ನು ನೋಡಿದ ಕ್ಷಣವೇ ಅವನಲ್ಲಿ ಏನೋ ಸೆಳೆತ…. ಮಧುರ ಭಾವನೆ…. ಅವಳೇ ಅವನನ್ನು ಮೊದಲು ಪರಿಚಯ ಮಾಡಿಕೊಂಡು ಮಾತನಾಡಿಸಿದಳು.

ಮುಂದೆ ಅವರಿಬ್ಬರೂ ಪ್ರೀತಿಸಲು ಶುರು ಮಾಡಿದರು. ಎರಡು ಮನೆಯಲ್ಲೂ ಹೇಳಿದಾಗ ಯಾವ ವಿರೋಧ ಬರಲಿಲ್ಲ. ಎರಡು ಕಡೆಯವರೂ ಅವರಿಬ್ಬರ ಮದುವೆಗೆ ಸಮ್ಮತಿ ಸೂಚಿಸಿದ್ದರು.

ಕಳೆದ ವಾರವಷ್ಟೇ ಮೈಥಿಲಿ ಜೊತೆ ಎಂಗೇಜ್‌ ಮೆಂಟ್‌ ಆಗಿತ್ತು. ಇನ್ನೂ ಎರಡು ತಿಂಗಳಿಗೆ ಮದುವೆ ಎಂದು ನಿಶ್ಚಯವಾಗಿತ್ತು. ರಘುನಂದನನಿಗೆ ಬೇರೆ ಕೃತಕ ಕಾಲು ಹಾಕಿದ್ದರು. ಒಂದು ತಿಂಗಳು ಆಸ್ಪತ್ರೆಯಲ್ಲೇ ಇದ್ದ. ಅವನನ್ನು ನೋಡಿಕೊಳ್ಳಲು ಊರಿನಿಂದ ಅವನ ತಮ್ಮ ವಿಜಯೇಂದ್ರ ಬಂದಿದ್ದ. ದಿನಾಲು ಮೈಥಿಲಿ ಬೆಳಗ್ಗೆಯಿಂದ ಸಂಜೆಯವರೆಗೆ ಇಲ್ಲೇ ಇರುತ್ತಿದ್ದಳು. ಎರಡು ತಿಂಗಳು ದಿನಾ ಫಿಸಿಯೋಥೆರಪಿ ಮಾಡಿ ನಡೆಯಲು ಪ್ರಾಕ್ಟೀಸ್‌ ಮಾಡಿಸಬೇಕು ಎಂದು ಹೇಳಿ ಡಿಸ್‌ ಚಾರ್ಜ್‌ ಮಾಡಿದರು.

vriksh-mitrea-story1

ರಘುನಂದನ್‌ ನ ತಂದೆ, “ರಘು ಇಲ್ಲಿ ಒಬ್ಬನೇ ಇರುವುದು ಬೇಡ, ಊರಿಗೆ ಕರೆದುಕೊಂಡು ಹೋಗೋಣ,” ಎಂದರು.

ಅದಕ್ಕೆ ಮೈಥಿಲಿ, “ರಘು ಸರಿಯಾಗಿ ನಡೆಯಲು ಆಗುವ ತನಕ ನಮ್ಮ ಮನೆಯಲ್ಲಿ ಇರಲಿ, ನಾನು ನೋಡಿಕೊಳ್ಳುತ್ತೇನೆ,” ಎಂದಳು.

“ಬೇಡ ನಾನು ನನ್ನ ರೂಮಿನಲ್ಲೇ ಇರುತ್ತೇನೆ. ವಿಜು ನನ್ನ ಜೊತೆಗೆ ಇರಲಿ,” ಎಂದ ರಘುನಂದನ್‌.

ಎಲ್ಲರೂ ಸಮ್ಮತಿಸಿದರು. ಮೈಥಿಲಿ ಅವನ ರೂಮಿಗೆ ದಿನ ಬೆಳಗ್ಗೆ ಬಂದು ಸಂಜೆ ಹೋಗುತ್ತಿದ್ದಳು. ಅವಳು ಆಫೀಸಿಗೆ ಲಾಂಗ್‌ ಲೀವ್ ‌ಹಾಕಿದ್ದಳು. ಮೈಥಿಲಿ ಮಾಡುವ ಸೇವೆಯನ್ನು ನೋಡಿ ರಘುಗೆ ಬೇಸರವಾಗುತ್ತಿತ್ತು. ಆದರೆ ಊರಿನಲ್ಲಿ ಕೃಷಿ ಕೆಲಸ ಬಿಟ್ಟು  ಅಪ್ಪ, ತಮ್ಮ ಎಲ್ಲರೂ ಎಷ್ಟು ದಿನ ಇಲ್ಲಿರಲು ಸಾಧ್ಯ….?  ಅದಕ್ಕೆ ಅವರಿಬ್ಬರನ್ನೂ ಮನೆಗೆ ಕಳುಹಿಸಿದ ರಘುನಂದನ್ ಮೈಥಿಲಿಯಿಂದ ಆದಷ್ಟೂ ದೂರವಿರಲು ಪ್ರಯತ್ನಿಸುತ್ತಿದ್ದ.

ರಘುನಂದನ್‌ ಮೈಥಿಲಿಯ ತಂದೆ ಬಳಿ, “ನನಗೆ ಕುಂಟುತ್ತಾ ಆಫೀಸ್‌ ಗೆ ಹೋಗಲು ಸಂಕೋಚವಾಗುತ್ತದೆ. ನಾನು ಕೆಲಸ ಬಿಟ್ಟು ಊರಿಗೆ ಹೋಗಿ ಸೆಟಲ್ ಆಗುತ್ತೇನೆ. ಮೈಥಿಲಿಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡಿ,” ಎಂದು ಹೇಳಿದ.

“ಮೈಥಿಲಿ ಏನು ಹೇಳುತ್ತಾಳೋ…..” ಎಂದರು ಅವರು ಬೇಸರದಿಂದ.

“ಅಂಕಲ್, ನೀವು ಅವಳ ಮನವೊಲಿಸಿ, ಪಾಪ…. ಮೈಥಿಲಿ ಏನೂ ಅರಿಯದ ಮುಗ್ಧೆ…. ಈ ಕುಂಟನನ್ನು ಕಟ್ಟಿಕೊಂಡು ಸಾಯುವ ತನಕ ನರಳಬೇಕಾ…. ಸಧ್ಯ ಮದುವೆಯಾಗಿಲ್ಲ ಎನ್ನುವುದೇ ನನಗೆ ಸಮಾಧಾನ,” ಎಂದ.

ಎರಡೂ ಕುಟುಂಬದ ದೊಡ್ಡವರು ಸೇರಿ ಮೈಥಲಿಯನ್ನು ಕೂರಿಸಿಕೊಂಡು, ನಿನಗೆ ಬೇರೆ ಹುಡುಗನನ್ನು ನೋಡಿ ಮದುವೆ ಮಾಡುತ್ತೇವೆ, ಎಂದು ಹೇಳಿ ಅವಳನ್ನು ಒಪ್ಪಿಸಲು ಪ್ರಯತ್ನಿಸಿದರು. ಆದರೆ ಮೈಥಲಿ ಸುತರಾಂ ಒಪ್ಪಲಿಲ್ಲ.

“ಮದುವೆಯಾದ ಮೇಲೆ ಹೀಗಾಗಿದ್ದರೆ ನನಗೆ ರಘುವನ್ನು ಬಿಟ್ಟು ಬಿಡಲು ಹೇಳುತ್ತಿದ್ರಾ….? ಇಲ್ಲ ತಾನೇ….? ಸಮಾಜದ ಎದುರು ನಮ್ಮಿಬ್ಬರ ಮದುವೆಯಾಗಿಲ್ಲ ಅಷ್ಟೇ…. ಮಾನಸಿಕವಾಗಿ ನಾವಿಬ್ಬರು ಎಂದೋ ಗಂಡ ಹೆಂಡತಿ ಆಗಿದ್ದೇವೆ. ನಾನು ಬೇರೆ ಮದುವೆ ಆಗುವುದಿಲ್ಲ. ನಾನು ರಘುನಂದನನ್ನೇ ಮದುವೆ ಆಗುವುದು. ಇದಕ್ಕೆ ಯಾರೂ ಅಡ್ಡಿ ಬರಬೇಡಿ,” ಎಂದು ಖಡಾಖಂಡಿತವಾಗಿ ಹೇಳಿದಳು.

ಕೊನೆಗೆ ರಘುನೇ ಮೈಥಿಲಿ ಬಳಿ, “ಮೈಥಿಲಿ, ನನ್ನ ಮಾತು ಕೇಳು. ನಾನು ಇನ್ನೂ ಬೆಂಗಳೂರಿನಲ್ಲಿ ಇರುವುದಿಲ್ಲ. ನಾನು ಊರಿಗೆ ಹೊರಟು ಹೋಗುತ್ತೇನೆ. ನೀನು ಇಲ್ಲೇ ಹುಟ್ಟಿ ಬೆಳೆದವಳು. ನಿನಗೆ ಹಳ್ಳಿಯ ಜೀವನ ನಡೆಸುವುದು ತುಂಬಾ ಕಷ್ಟ. ಅಲ್ಲದೆ, ಈ ಕುಂಟನನ್ನು ಕಟ್ಟಿಕೊಂಡು ಏನು ಸುಖ ಪಡುವೆ? ಈ ಆದರ್ಶವೆಲ್ಲಾ ಹೇಳಲಷ್ಟೇ ಚೆನ್ನಾಗಿರುತ್ತದೆ. ಮುಂದೆ ನೀನೇ ಪಶ್ಚಾತ್ತಾಪ ಪಡುತ್ತೀಯಾ…. ಚೆನ್ನಾಗಿ ಯೋಚಿಸು…. ನಿನ್ನ ಒಳ್ಳೆಯದಕ್ಕೆ ಹೇಳುತ್ತಿದ್ದೇನೆ,” ಎಂದು ಪರಿಪರಿಯಾಗಿ ಹೇಳಿದ.

“ರಘು ಪ್ಲೀಸ್‌….. ಇನ್ನೊಮ್ಮೆ ಈ ಮಾತನಾಡಬೇಡಿ…. ಮಾನಸಿಕವಾಗಿ ನಮ್ಮಿಬ್ಬರ ಮದುವೆ ಎಂದೋ ಆಗಿಹೋಯಿತು. ಹೆಣ್ಣು ಒಬ್ಬರನ್ನು ಹೃದಯದಲ್ಲಿ ಇಟ್ಟು ಆರಾಧಿಸಿದರೆ ಅಲ್ಲಿ ಇನ್ನಾರಿಗೂ ಅವಕಾಶ ಕೊಡುವುದಿಲ್ಲ. ನನ್ನ ಹೃದಯದಲ್ಲಿ ನೀವೆಂದೋ ಸೇರಿ ಹೋಗಿದ್ದೀರಿ….. ಅಲ್ಲಿ ಇನ್ನು ಯಾರಿಗೂ ಜಾಗವಿಲ್ಲ. ಸಾಯುವ ತನಕ ನಿಮ್ಮ ನೆರಳಿನಾಸರೆಯಲ್ಲಿ ಬದುಕುತ್ತೇನೆ….” ಎಂದು ಹೇಳಿದಳು.

“ಮೈಥಿಲಿ… ನೀನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವಳು ಆ ಹಳ್ಳಿಯಲ್ಲಿ ಹೇಗಿರುತ್ತೀ…. ಹಳ್ಳಿಯಲ್ಲಿ ಜೀವನ ಬಹಳ ಕಷ್ಟ…. ನೀನು ಸುಖವಾಗಿ ಇರಬೇಕು, ಅದು ನನಗೆ ಮುಖ್ಯ…..”

“ಅರಮನೆಯಲ್ಲಿ ಬೆಳೆದ ಸೀತೆಯೇ, ಮಳೆ, ಬಿಸಿಲು, ಚಳಿಗೆ ಅಂಜದೆ ರಾಮನ ಜೊತೆಗೆ ಕಾಡಿಗೆ ಹೋಗಲಿಲ್ವಾ…..? ನನ್ನದು ಯಾವ ಮಹಾ…. ನಿಮ್ಮ ಹಳ್ಳಿಯನ್ನು ನೋಡಿದ್ದೇನೆ. ಅಷ್ಟು ಸುಂದರವಾದ ಮನೆಯಲ್ಲಿ ಸುತ್ತಲೂ ಹಸಿರು ತುಂಬಿದ ಪ್ರಕೃತಿಯ ಮಡಿಲಲ್ಲಿ ನನ್ನನ್ನು ಪ್ರೀತಿಸಿದವನ ಜೊತೆ ಇರುವುದು ಕಷ್ಟವಾ…..?” ಎಂದು ಅವಳು ತನ್ನ ನಿರ್ಧಾರವನ್ನು ಬದಲಿಸದೆ ಹಠ ಮಾಡಿದಳು.

ಅವಳ ನಿರ್ಧಾರಕ್ಕೆ ಎಲ್ಲರೂ ಮೌನವಾದರು. ಕೊನೆಗೆ ಅವಳು ರಘುನಂದನನನ್ನು ಮದುವೆಯಾಗಿ, ಅವನ ನೆರಳಿನಾಸರೆಯಲ್ಲಿ ಬದುಕು ಸಾಗಿಸುವೆ ಎಂದು ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಅವನ ಜೊತೆಗೆ ಹಳ್ಳಿಗೆ ಹೊರಟಳು. ಕೋಟಿ ಜನ್ಮಗಳ ಆತ್ಮ ಸಂಗಾತಿ ನೀನು ಏನೇ ಬರಲಿ, ಜೊತೆಗೆ ಸಾಗೋಣ ಎನ್ನುತ್ತಾ ಅವನ ಕೈ ಹಿಡಿದು ಮುಂದೆ ಸಾಗಿದಳು ಮೈಥಿಲಿ…..!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ