ಕಿರುತೆರೆಯ ಖ್ಯಾತ ನಟಿ ಎನಿಸಿದ್ದ ಪ್ರೇಕ್ಷಾಳನ್ನು ಅವಳ ತಾಯಿಯ ಲಿವಿಂಗ್ ಪಾರ್ಟ್ ನರ್ ಕೃಷ್ಣಾನಂದ ಹಿರಿತೆರೆಗೆ ಪರಿಚಯಿಸುವುದಾಗಿ ದುಷ್ಟ ಸಂಚು ಹೂಡಿದ್ದ. ಇದರಿಂದ ಪ್ರೇಕ್ಷಾ ಪಾರಾದದ್ದು ಹೇಗೆ......?
ರಾಜ್ಯದ ಪ್ರಸಿದ್ಧ ದೂರದರ್ಶನ ವಾಹಿನಿಗಳ ಧಾರಾವಾಹಿಗಳಲ್ಲಿ ನಾಯಕಿಯ ಪಾತ್ರಗಳನ್ನು ನಿರ್ವಹಿಸುತ್ತಿರುವಾಕೆ ಪ್ರೇಕ್ಷಾ. ಅಭಿನಯ ಕುಶಲತೆಯಿಂದ ಜನರ ಮನಗಳಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವಾಕೆ. ಹೃದಯಸ್ಪರ್ಶಿ ಭಾವಾಭಿನಯದ ಜೊತೆಗೆ ತನ್ನ ಪ್ರಮಾಣಬದ್ಧ ಅಂಗಸೌಷ್ಠವದಿಂದ ಯುವ ಜನತೆಯ ಹೃದಯಗಳಲ್ಲಿ ಕಿಚ್ಚೆಬ್ಬಿಸಿರುವ ಇಪ್ಪತ್ತೈದರ ಹರೆಯದ ಯುವತಿ ಪ್ರೇಕ್ಷಾಳ ನೈಜ ಅಭಿನಯ, ಸೌಂದರ್ಯಕ್ಕೆ ಮಾರು ಹೋಗಿರುವ ಹಿರಿತೆರೆಯ ಒಬ್ಬಿಬ್ಬರು ನಿರ್ಮಾಪಕರು, ನಿರ್ದೇಶಕರು ಪ್ರೇಕ್ಷಾಳನ್ನು ಹಿರಿ ತೆರೆಗೆ ಪರಿಚಯಿಸಬೇಕೆಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಈ ಪ್ರೈಮ್ ನ್ಯೂಸ್, ಕಿರುತೆರೆಯಂತೆ ಹಿರಿತೆರೆಯಲ್ಲಿಯೂ ಪ್ರೇಕ್ಷಾ ಮಿಂಚುವುದಕ್ಕೆ ಬಹಳ ಕಾಲವೇನು ಬೇಕಾಗಲಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಂದು ರವಿವಾರ. ಪ್ರೇಕ್ಷಾಳಿಗೆ ಶೂಟಿಂಗ್ ಇಲ್ಲದ್ದರಿಂದ ಮನೆಯಲ್ಲಿ ಹಾಯಾಗಿ ಸಮಯ ತಳ್ಳುತ್ತಿದ್ದಳು. ಅಮ್ಮ ಪಕ್ಕದ ಮನೆಗೆ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಏಕಾಂಗಿಯಾಗಿ ತನ್ನ ಐಷಾರಾಮಿ ಮಂಚದ ಹಾಸಿಗೆಯಲ್ಲಿ ಬೋರಾಗಿ ಮಲಗಿ ಶೃಂಗಾರ ಕಾವ್ಯದ ಪ್ರತೀಕದಂತಿದ್ದ ಯಾವುದೋ ಇಂಗ್ಲಿಷ್ ಸಿನಿಮಾ ನೋಡುವುದರಲ್ಲಿ ತಲ್ಲೀನಳಾಗಿದ್ದಳು. ಮೇಲೊಂದು ತೋಳಿಲ್ಲದ, ಲೋ ನೆಕ್ ನ ಬನಿಯನ್ ನಂಥಹ ಟಾಪ್ ನಲ್ಲಿ ಅವಳ ತುಂಬಿದೆದೆಯ ಬಹುಭಾಗ ಢಾಳಾಗಿ ಕಾಣುತ್ತಿತ್ತು. ಕೆಳಗೆ ತೊಡೆಯ ಮುಕ್ಕಾಲು ಭಾಗ ಕಾಣುವಂಥ ಹಾಫ್ ಪ್ಯಾಂಟ್. ಪ್ಯಾಂಟ್ ಎನ್ನುವುದಕ್ಕಿಂತ ಚಡ್ಡಿ ಅಂದರೆ ಸರಿಯೇನೋ? ಮಿನಿ ಡ್ರೆಸ್ ನಲ್ಲಿ ಅವಳ ನೈಜ ಅಂಗಸೌಷ್ಠವ ಹೊರಸೂಸುತ್ತಿತ್ತು. ಮನೆಯಲ್ಲಿ ಒಬ್ಬಳೇ ಇದ್ದಾಗ ಇಂಥಹ ಡ್ರೆಸ್ ಗಳನ್ನು ಧರಿಸುವ ವಾಡಿಕೆ ಮಾಡಿಕೊಂಡಿದ್ದಳು. ಸಿನಿಮಾದಲ್ಲಿನ ಪ್ರಣಯ ದೃಶ್ಯಗಳನ್ನು ತದೇಕಚಿತ್ತದಿಂದ ದೃಷ್ಟಿಸುತ್ತಿದ್ದ ಅವಳಿಗೆ ಅಮ್ಮನ ಸ್ನೇಹಿತ ರೂಮಿನಲ್ಲಿ ಎಂಟ್ರಿ ಹೊಡೆದಿದ್ದು ಗೊತ್ತಾಗಲೇ ಇಲ್ಲ. ಅಮ್ಮ ಇನ್ನೇನು ಬರುವ ಹೊತ್ತಾಗಿದ್ದರಿಂದ ಮುಂಬಾಗಿಲು ಮತ್ತು ತನ್ನ ರೂಮಿನ ಬಾಗಿಲನ್ನು ಜಸ್ಟ್ ಮುಂದಕ್ಕೆ ಮಾಡಿಕೊಂಡು ಸಿನಿಮಾದ ದೃಶ್ಯಗಳನ್ನು ಸವಿಯುವುದರಲ್ಲಿ ಮೈ ಮರೆತಿದ್ದಳು.
``ವಾಹ್, ರಿಯಲಿ ಬ್ಯೂಟಿಫುಲ್,'' ಎಂಬ ಉದ್ಗಾರದ ಮಾತುಗಳು ಪ್ರೇಕ್ಷಾಳ ಕಿವಿಗೆ ಅಪ್ಪಳಿಸಿದಾಗಲೇ ಪ್ರೇಕ್ಷಾ ಸಿನಿಮಾದಲ್ಲಿನ ತನ್ಮಯತೆಯಿಂದ ಹೊರಬಂದಿದ್ದಳು. ಅಸಹನೆಯಿಂದ ಅಂಕಲ್ ಕೃಷ್ಣಾನಂದನವನ ಕಡೆಗೆ ದೃಷ್ಟಿ ಹರಿಸಿದ್ದಳು. ತುಂಡುಡುಗೆಯಲ್ಲಿ ಹೊರಸೂಸುತ್ತಿದ್ದ ಅವಳ ಯೌವನವನ್ನೇ ದಿಟ್ಟಿಸುತ್ತಾ ನಿಂತಿದ್ದ ಕೃಷ್ಣಾನಂದ, ``ಪ್ರೇಕ್ಷಾ, ನಿಜವಾಗಿಯೂ ನೀನು ತುಂಬಾ ಬ್ಯೂಟಿಫುಲ್ ಗರ್ಲ್! ನೀನು ನೋಡುತ್ತಿರುವ ಇಂಗ್ಲಿಷ್ ಸಿನಿಮಾದ ಆ ಹೀರೋಯಿನ್ ನನ್ನು ನಿನ್ನ ಅಂದಚೆಂದದ ಮುಂದೆ ನಿವಾಳಿಸಿ ಒಗೆಯಬೇಕು. ರಿಯಲೀ ಮಾರ್ವಲಸ್ ಅಂಡ್ ಚಾರ್ಮಿಂಗ್. ಶಿಲಾಬಾಲಿಕೆಯಂಥಹ ರೂಪರಾಶಿ ನಿಂದು....'' ಮತ್ತೊಮ್ಮೆ ಉಸುರಿದ್ದ. ಅವನ ಕಣ್ಣುಗಳು ಅವಳ ತುಂಬಿದ ದೇಹದ ಮೇಲೆಯೇ ಓಡಾಡುತ್ತಿದ್ದವು. ತಡಬಡಾಯಿಸಿ ಎದ್ದ ಪ್ರೇಕ್ಷಾ ಕೈಗೆ ಸಿಕ್ಕ ದೊಡ್ಡ ವೆಲ್ವೆಟ್ ಟವೆಲ್ ನಿಂದ ತನ್ನ ಮೈ ಮುಚ್ಚಿಕೊಳ್ಳುತ್ತಾ, ``ಅಂಕಲ್ ರೂಮಿನ ಒಳಗೆ ಬರುವುದಕ್ಕಿಂತ ಮುಂಚೆ ಬಾಗಿಲು ತಟ್ಟಿ ಬರಬೇಕೆನ್ನುವ ಸೌಜನ್ಯ, ಶಿಷ್ಟಾಚಾರ ನಿಮ್ಮಲ್ಲೇಕಿಲ್ಲ? ನಿಮ್ಮ ನಡೆ ನನಗೆ ಸ್ವಲ್ಪವೂ ಇಷ್ಟವಿಲ್ಲ. ಹೊರಗೆ ಹಾಲಿನಲ್ಲಿ ಕುಳಿತುಕೊಳ್ಳಿ. ಅಮ್ಮ ಇನ್ನೇನು ಒಂದೆರಡು ನಿಮಿಷಗಳಲ್ಲಿ ಬರಬಹುದು.'' ಪ್ರೇಕ್ಷಾಳ ಮಾತಿನಲ್ಲಿ ಸಹನೆ ಇರಲಿಲ್ಲ.





