ಸಾಮಗ್ರಿ : 1-1 ಕಪ್ ಕಡಲೆಹಿಟ್ಟು, ಸಕ್ಕರೆ, ಅರ್ಧರ್ಧ ಕಪ್ ಬಾದಾಮಿ ಪೌಡರ್, ತುಪ್ಪ, ಅಗತ್ಯವಿದ್ದಷ್ಟು ತುಪ್ಪದಲ್ಲಿ ಹುರಿದ ಬಾದಾಮಿ, ಗೋಡಂಬಿ ಚೂರು, ನೀರು.
ವಿಧಾನ : ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಕಡಲೆಹಿಟ್ಟು ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ನಂತರ ಬಾದಾಮಿ ಪೌಡರ್ ಸೇರಿಸಿ ಕೆದಕಬೇಕು. ಇದಕ್ಕೆ ಸಕ್ಕರೆ ಸೇರಿಸಿ ಕೆದಕುತ್ತಾ, ತುಸು ನೀರು ಸೇರಿಸಿ ನಿಧಾನವಾಗಿ ಎಲ್ಲ ಬೆರೆತುಕೊಳ್ಳುವಂತೆ ಮಾಡಿ. ನಡುನಡುವೆ ತುಪ್ಪ ಬೆರೆಸುತ್ತಾ ತಳ ಹಿಡಿಯದಂತೆ, ಮೈಸೂರುಪಾಕಿಗೆ ಮಾಡುವಂತೆ ಕೆದಕಬೇಕು. 2-3 ನಿಮಿಷ ಬಿಟ್ಟು ಇದನ್ನು ಕೆಳಗಿಳಿಸಿ, ತುಪ್ಪ ಸವರಿದ ತಟ್ಟೆಯಲ್ಲಿ ಹರಡಿರಿ. ಆರಿದ ನಂತರ ಸ್ವಲ್ಪ ಹೊತ್ತು ಫ್ರಿಜ್ ನಲ್ಲಿರಿಸಿ, ಆಮೇಲೆ ವಜ್ರಾಕಾರದಲ್ಲಿ ಕತ್ತರಿಸಿ, ಗೋಡಂಬಿ, ಬಾದಾಮಿ ಚೂರು ಉದುರಿಸಿ, ಸವಿಯಲು ಕೊಡಿ
ಸ್ವಾದಿಷ್ಟ ರಸಗುಲ್ಲ
ಸಾಮಗ್ರಿ : 4 ಕಪ್ ಮಸೆದ ಪನೀರ್, ಅರ್ಧ ಕಪ್ ಮೈದಾ, ರುಚಿಗೆ ತಕ್ಕಷ್ಟು 5-6 ಕಪ್ ಸಕ್ಕರೆ, 1 ಕಪ್ ಗಟ್ಟಿ ಹಾಲು.
ವಿಧಾನ : ತುಪ್ಪದ ಕೈ ಮಾಡಿಕೊಂಡು, ಅದರಿಂದ ಮಸೆದ ಪನೀರ್ ನ್ನು ಸಣ್ಣ ನಿಂಬೆ ಗಾತ್ರದ ಉಂಡೆಗಳಾಗಿಸಿ. ಈ ಉಂಡೆಗಳಲ್ಲಿ ಸ್ವಲ್ಪವೂ ಬಿರುಕು ಇರಬಾರದು, ಎಚ್ಚರಿಕೆ ವಹಿಸಿ. ಇದರ ಮೇಲೆ ತೆಳು ಒದ್ದೆ ಬಟ್ಟೆ ಹೊದಿಸಿಬಿಡಿ.
ಕಾದಾರಿದ ಹಾಲಿಗೆ ಸಕ್ಕರೆ, 3-4 ಕಪ್ ಬೆಚ್ಚನೆಯ ನೀರು ಬೆರೆಸಿ ಚೆನ್ನಾಗಿ ಕದಡಿಕೊಂಡು, ಒಲೆಯ ಮೇಲಿರಿಸಿ ಮಂದ ಉರಿಯಲ್ಲಿ ಕಾಯಿಸಿ, ಕುದಿಸಿರಿ. ಮಂದ ಉರಿ ಮಾಡಿ, ಪಾಕ ಕುದಿಯಲಿ. 5 ನಿಮಿಷ ಬಿಟ್ಟು ಮತ್ತೆ 1 ಕಪ್ ನೀರು ಬೆರೆಸಿ. 10 ನಿಮಿಷ ಹಾಗೇ ಕುದಿ ಬಂದ ನಂತರ, ಪೂರ್ತಿ ಮಂದ ಉರಿ ಮಾಡಿಕೊಳ್ಳಿ. ಈಗ ಮತ್ತೆ 1 ಕಪ್ ನೀರು ಬೆರೆಸಬೇಕು. 2-3 ನಿಮಿಷ ಮಂದ ಉರಿಯಲ್ಲಿ ಕುದಿಸಿರಿ. ನಂತರ ಇದನ್ನು ಕೆಳಗಿಳಿಸಿ ಆರಲು ಬಿಡಿ. ಮೈದಾಗೆ 1 ಕಪ್ ಬಿಸಿ ನೀರು ಬೆರೆಸಿ ಚೆನ್ನಾಗಿ ಗೊಟಾಯಿಸಿ ಬೇರೆಯಾಗಿಡಿ. ಮತ್ತೆ ಸಕ್ಕರೆ ಪಾಕನ್ನು ಒಲೆ ಮೇಲಿಟ್ಟು ಕುದಿಸಬೇಕು. ಮೈದಾ ಮಿಶ್ರಣದ ಅರ್ಧ ಭಾಗ ಇದಕ್ಕೆ ಬೆರೆಸಿ, ಮಂದ ಉರಿಯಲ್ಲಿ ಮುಚ್ಚಳ ಇರಿಸಿ ಕುದಿಸಬೇಕು. ಪಾಕದಿಂದ ನೊರೆ ಉಕ್ಕಿ ಬಂದಂತೆ, ಅದರ ಮೇಲೆ ನೀರ ಹನಿ ಚಿಮುಕಿಸಿ, ಉಳಿದ ಮೈದಾ ಮಿಶ್ರಣ ಬೆರೆಸಿಬಿಡಿ. ಈ ರೀತಿ ಸಂಪೂರ್ಣ ಮಂದ ಉರಿಯಲ್ಲಿ 15 ನಿಮಿಷ ಕುದಿಸಬೇಕು. ನಂತರ 1 ರಸಗುಲ್ಲ ತೆಗೆದು ತಣ್ಣೀರ ಬಟ್ಟಲಿಗೆ ಹಾಕಿ ನೋಡಿ. ಅದು ಮುಳುಗಿದರೆ, ಚೆನ್ನಾಗಿ ಬೆಂದಿದೆ ಎಂದರ್ಥ. ಇಲ್ಲದಿದ್ದರೆ ಮತ್ತೆ 5-6 ನಿಮಿಷ ಹಾಗೇ ಕುದಿಸಿರಿ. ನಂತರ ಒಲೆ ಆರಿಸಿ, ಪಾಕದ ಬಾಣಲೆ ಕೆಳಗಿಳಿಸಿ. ಚೆನ್ನಾಗಿ ಆರುವವರೆಗೂ 3-4 ಗಂಟೆ ಕಾಲ, ಅದು ಹಾಗೇ ಪಾಕದಲ್ಲಿ ನೆನೆಯಲಿ. ನಂತರ ಬಟ್ಟಲಿಗೆ ಹಾಕಿ 1-2 ತಾಸು ಫ್ರಿಜ್ ನಲ್ಲಿರಿಸಿ ಆಮೇಲೆ ಸವಿಯಲು ಕೊಡಿ!
ಸ್ವಾದಿಷ್ಟ ಕೇಸರಿಭಾತ್
ಸಾಮಗ್ರಿ : ಅರ್ಧರ್ಧ ಕಪ್ ರವೆ, ತುಪ್ಪ, 1 ಕಪ್ ಸಕ್ಕರೆ, ತುಪ್ಪದಲ್ಲಿ ಹುರಿದ ಒಂದಿಷ್ಟು ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು, 1 ಕಪ್ ತುರಿದ ಅನಾನಸ್, ಹಾಲಲ್ಲಿ ನೆನೆದ ತುಸು ಕೇಸರಿ ಎಸಳು, ಚಿಟಕಿ ಏಲಕ್ಕಿಪುಡಿ, ಪಚ್ಚಕರ್ಪೂರ, ಲವಂಗ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ ಘಮ್ಮೆನ್ನುವಂತೆ ರವೆ ಹುರಿದು, ಪಕ್ಕಕ್ಕಿಡಿ. ಅದೇ ಬಾಣಲೆಯಲ್ಲಿ ಮತ್ತೆ 2 ಚಮಚ ತುಪ್ಪ ಬಿಸಿ ಮಾಡಿಕೊಂಡು ಲವಂಗ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ತುರಿದ ಅನಾನಸ್ ಹಾಕಿ ಬಾಡಿಸಿ. ಆಮೇಲೆ ಇದಕ್ಕೆ ಏಲಕ್ಕಿ ಪುಡಿ, ಪಚ್ಚಕರ್ಪೂರ ಸೇರಿಸಿ. ನಂತರ ಸಕ್ಕರೆ, ಅಗತ್ಯವಿದ್ದಷ್ಟು ನೀರು ಬೆರೆಸಿ ಪಾಕ ಸಿದ್ಧಪಡಿಸಿ. ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಆಮೇಲೆ ಹಾಲಲ್ಲಿ ನೆನೆಸಿದ ಕೇಸರಿ ಹಾಕಿ ಕೆದಕಿ, ಎಡಗೈಯಿಂದ ನಿಧಾನವಾಗಿ ರವೆ ಸೇರಿಸುತ್ತಾ, ಬಲಗೈಯಿಂದ ಗಂಟಾಗದಂತೆ ಕೆದಕಬೇಕು. ನಡುನಡುವೆ ತುಪ್ಪ ಬೆರೆಸುತ್ತಿರಿ. ಎಲ್ಲ ಚೆನ್ನಾಗಿ ಬೆರೆತುಕೊಂಡಾಗ, 2 ನಿಮಿಷ ಬಿಟ್ಟು ಕೆಳಗಿಳಿಸಿ. ಬಿಸಿ ಬಿಸಿಯಾಗಿ ಮತ್ತಷ್ಟು ತುಪ್ಪ ಸೇರಿಸಿ ಸವಿಯಲು ಕೊಡಿ.
ಮಾಲ್ ಪುವಾ
ಸಾಮಗ್ರಿ : 1 ಲೀ. ಗಟ್ಟಿ ಹಾಲು, ಅರ್ಧರ್ಧ ಕಪ್ ಮೈದಾ, ಸಣ್ಣರವೆ, 1-1 ಕಪ್ ಸಕ್ಕರೆ, ಕರಿಯಲು ತುಪ್ಪ, ತುಸು ಏಲಕ್ಕಿಪುಡಿ. ವಿಧಾನ : ಹಾಲನ್ನು ಕಾಯಿಸಿದ ನಂತರ, ಸಣ್ಣ ಉರಿ ಮಾಡಿ ನಿಧಾನವಾಗಿ ಅದು ಅರ್ಧದಷ್ಟು ಹಿಂಗುವಂತೆ ಕುದಿಸಬೇಕು. ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ರವೆ ಹಾಕಿ ಮಂದ ಉರಿಯಲ್ಲಿ ಹುರಿಯಿರಿ. ಹಿಂಗಿದ ಬಿಸಿ ಹಾಲಿನಿಂದ 1 ಸೌಟಿನಷ್ಟು ತೆಗೆದುಕೊಂಡು, ಅದಕ್ಕೆ ಮೈದಾ ಹಾಕಿ ಚೆನ್ನಾಗಿ ಗೊಟಾಯಿಸಿ. ಈ ಮಿಶ್ರಣವನ್ನು ರವೆಗೆ ಹಾಕಿ, ಉಳಿದ ಹಾಲನ್ನೂ ಬೆರೆಸಿಕೊಳ್ಳಿ. ಇದು ಕುದ್ದು ಸಾಕಷ್ಟು ಗಟ್ಟಿಯಾದಾಗ ಕೆಳಗಿಳಿಸಿ. ಬೇರೆ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ. ಅದರಲ್ಲಿ ನೇರವಾಗಿ ಮಿಶ್ರಣ ಬೆರೆಸುತ್ತಾ, ಸಣ್ಣ ಸೌಟಿನಿಂದ ಗುಂಡಗೆ ಬರುವಂತೆ ಪೂರಿ ತರಹ ಮಾಡಿ. ಹೀಗೆ ಒಂದೊಂದೇ ಪೂರಿ ಕರಿದು ತೆಗೆಯಿರಿ. ಪಕ್ಕದ ಒಲೆಯಲ್ಲಿ ಬೇರೆ ಪಾತ್ರೆಯಲ್ಲಿ ಸಕ್ಕರೆಗೆ ನೀರು ಬೆರೆಸಿ, ಒಂದೆಳೆ ಪಾಕ ತಯಾರಿಸಿ. ಕರಿದ ಪೂರಿಗಳನ್ನು ಇದರಲ್ಲಿ ನೆನೆಹಾಕಿ. 4-5 ಗಂಟೆಗಳ ನಂತರ ಇವು ಸವಿಯಲು ಸಿದ್ಧ!
ಟೇಸ್ಟಿ ರಬಡೀ
ಸಾಮಗ್ರಿ : 1 ಲೀ. ಫುಲ್ ಕ್ರೀಂ ಗಟ್ಟಿ ಹಾಲು, 1 ಕಪ್ ಸಕ್ಕರೆ, ತುಪ್ಪದಲ್ಲಿ ಹುರಿದ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರು (ಒಟ್ಟಾರೆ ಅರ್ಧ ಕಪ್), ತುಸು ಏಲಕ್ಕಿ ಪುಡಿ.
ವಿಧಾನ : ಒಂದು ಆಳವಾದ ಬಾಣಲೆಯಲ್ಲಿ ಹಾಲು ಕಾಯಿಸಿ. ಮಂದ ಉರಿ ಮಾಡಿ ಇದನ್ನು ಸತತ ಕುದಿಸಬೇಕು. ಸಣ್ಣ ಸೌಟಿನಿಂದ ಇದನ್ನು ಆಗಾಗ ಕೈಯಾಡಿಸುತ್ತಿರಿ, ಕೆನೆ ಕಟ್ಟಿದ್ದು ಮರಳಿ ಮರಳಿ ಹಾಲಿಗೆ ಹೋಗಿ, ಮತ್ತೆ ಕುದಿಯುತ್ತಿರಬೇಕು. ಇದು ಅರ್ಧದಷ್ಟು ಹಿಂಗುವವರೆಗೂ ಹೀಗೆ ಮಾಡುತ್ತಿರಿ. ನಂತರ ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ, ಗೋಡಂಬಿ ಎಲ್ಲಾ ಸೇರಿಸಿ, ಮತ್ತೆ ಕೈಯಾಡಿಸಿ. ಇದರಲ್ಲಿ ಸಕ್ಕರೆ ಸಂಪೂರ್ಣ ವಿಲೀನ ಆಗುವವರೆಗೂ ಕೈಯಾಡಿಸುತ್ತಿರಿ. ಹೀಗೆ 10 ನಿಮಿಷ ಆದ ನಂತರ ಕೆಳಗಿಳಿಸಿ, ಸಂಪೂರ್ಣ ಆರಲು ಬಿಡಿ. ನಂತರ ಇದನ್ನು 2-3 ಗಂಟೆಗಳ ಕಾಲ ಫ್ರಿಜ್ ನಲ್ಲಿರಿಸಿ ನಂತರ ಹೊರ ತೆಗೆಯಿರಿ. ಇದನ್ನು ಫಲೂದಾ, ಮಾಲ್ ಪುವಾ ಜೊತೆಗೆ ಸೇವಿಸಿದರೆ ಬಹಳ ರುಚಿಕರ ಎನಿಸುತ್ತದೆ, ಹಾಗೆಯೇ ಸವಿದರೂ ಚೆಂದ! ಪೂರಿ ಚಪಾತಿಗೂ ಸೊಗಸಾಗಿ ಹೊಂದುತ್ತದೆ.
ಕೊಬ್ಬರಿ ಮಿಠಾಯಿ
ಸಾಮಗ್ರಿ : 1 ದೊಡ್ಡ ತೆಂಗಿನಕಾಯಿಯ ತುರಿ, 250 ಗ್ರಾಂ ಸಕ್ಕರೆ, ತುಸು ಏಲಕ್ಕಿ ಪುಡಿ, ಅರ್ಧರ್ಧ ಕಪ್ ತುಪ್ಪ ಖೋವಾ, ಅಲಂಕರಿಸಲು ಬೆಳ್ಳಿ ರೇಕು.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಇದಕ್ಕೆ ತೆಂಗಿನ ತುರಿ ಹಾಕಿ ಮಂದ ಉರಿಯಲ್ಲಿ ನಿಧಾನವಾಗಿ ಬಾಡಿಸಬೇಕು. ಪೂರ್ತಿ ಹಸಿ ವಾಸನೆ ಹೋಗಿ, ಬಣ್ಣ ತೇಲಿದಾಗ, ಖೋವಾ ಹಾಕಿ ಕೆದಕಬೇಕು. ನಂತರ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಬೇಗ ಬೇಗ ಕೈಯಾಡಿಸಿ. ಕರಗಿದ ಸಕ್ಕರೆಯಲ್ಲಿ ತುರಿ ವಿಲೀನಗೊಂಡಾಗ, ನಡುನಡುವೆ ತುಪ್ಪ ಬೆರೆಸುತ್ತಾ ಬಾಡಿಸುತ್ತಿರಿ. ಈ ಮಿಶ್ರಣ ಸಾಕಷ್ಟು ಕುಗ್ಗಿದಾಗ, ಕೆಳಗಿಳಿಸಿ ತುಪ್ಪ ಹಚ್ಚಿದ ತಟ್ಟೆಯಲ್ಲಿ ಹರಡಿ, ಆರಲು ಬಿಡಿ. ಚೌಕಾಕಾರದಲ್ಲಿ ಕೊಬ್ಬರಿ ಮಿಠಾಯಿ ಕತ್ತರಿಸಿ, ಚಿತ್ರದಲ್ಲಿರುವಂತೆ ಬೆಳ್ಳಿ ರೇಕಿನಿಂದ ಅಲಂಕರಿಸಿ, ಸವಿಯಲು ಕೊಡಿ.
ಫ್ರೂಟ್ ಪಲಾವ್
ಸಾಮಗ್ರಿ : 1-1 ಕಪ್ ಅಕ್ಕಿ, ಸಕ್ಕರೆ, ತುರಿದ ಸೇಬು, ಅನಾನಸ್, 2 ಪಲಾವ್ ಎಲೆ, 4 ಲವಂಗ, 1 ತುಂಡು ಚಕ್ಕೆ, 1-2 ಮೊಗ್ಗು, 4 ಏಲಕ್ಕಿ, 10-12 ಕಾಳು ಮೆಣಸು, 10-15 ಎಸಳು ಕೇಸರಿ, ತುಪ್ಪದಲ್ಲಿ ಹುರಿದ 10-12 ಬಾದಾಮಿ, 15-20 ದ್ರಾಕ್ಷಿ, 10-12 ಗೋಡಂಬಿ, 5-6 ಹಸಿ ಖರ್ಜೂರ, ರುಚಿಗೆ ತಕ್ಕಷ್ಟು ಉಪ್ಪು.
ವಿಧಾನ : ಒಂದು ಚಿಕ್ಕ ಕುಕ್ಕರ್ ನಲ್ಲಿ ತುಪ್ಪ ಬಿಸಿ ಮಾಡಿ ದ್ರಾಕ್ಷಿ, ಗೋಡಂಬಿಗಳನ್ನು ಹುರಿದು ತೆಗೆಯಿರಿ. ಇದಕ್ಕೆ ಚಕ್ಕೆ, ಲವಂಗ, ಪಲಾವ್ ಎಲೆ ಇತ್ಯಾದಿ ಎಲ್ಲಾ ಹಾಕಿ ಚಟಪಟಾಯಿಸಿ. ಹೆಚ್ಚಿದ ಹಸಿ ಖರ್ಜೂರ, ಹಣ್ಣಿನ ತುರಿ ಹಾಕಿ ಕೆದಕಬೇಕು. ನಂತರ ಉಪ್ಪು, ತೊಳೆದ ಅಕ್ಕಿ ಹಾಕಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ, ಉದುರುದುರಾಗಿ ಬರುವಷ್ಟು ನೀರು ಬೆರೆಸಿ. 2 ಸೀಟಿ ಬಂದಾಗ ಒಲೆ ಆರಿಸಿ. ಮುಚ್ಚಳ ತೆರೆದ ನಂತರ ಡ್ರೈ ಫ್ರೂಟ್ಸ್, ಮತ್ತಷ್ಟು ತುಪ್ಪ ಹಾಕಿ ಎಲ್ಲವನ್ನೂ ಬೆರೆಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಆಲೂ ಬಜ್ಜಿ
ಸಾಮಗ್ರಿ : 200 ಗ್ರಾಂ ಆಲೂ, 1 ಕಪ್ ಕಡಲೆಹಿಟ್ಟು, ಅರ್ಧ ಕಪ್ ಅಕ್ಕಿಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಅಡುಗೆಸೋಡ, ಅರಿಶಿನ, ಕರಿಯಲು ಎಣ್ಣೆ, ಜೊತೆಗೆ ಟೊಮೇಟೊ ಸಾಸ್ ಯಾ ಕಾಯಿ ಚಟ್ನಿ.
ವಿಧಾನ : ಆಲೂ ತೊಳೆದು, ದಪ್ಪ ಬಿಲ್ಲೆಗಳಾಗಿ ಕತ್ತರಿಸಿ. ಕಡಲೆ ಹಿಟ್ಟಿಗೆ ತುಸು ನೀರಿನ ಜೊತೆ ಉಳಿದೆಲ್ಲಾ ಸಾಮಗ್ರಿ ಬೆರೆಸಿಕೊಂಡು ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು, ಒಂದೊಂದಾಗಿ ಆಲೂ ಬಿಲ್ಲೆಯನ್ನು ಮಿಶ್ರಣದಲ್ಲಿ ಅದ್ದಿ, ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಇದನ್ನು ಟಿಶ್ಯು ಪೇಪರ್ ಮೇಲೆ ಹರಡಿ, ಹೆಚ್ಚುವರಿ ಎಣ್ಣೆ ಹೋಗಲಾಡಿಸಿ, ಸಾಸ್/ಚಟ್ನಿ ಜೊತೆ ಬಿಸಿ ಬಿಸಿಯಾಗಿ ಫ್ರೂಟ್ ಪಲಾವ್ ನೊಂದಿಗೆ ಸವಿಯಿರಿ!
ಟೇಸ್ಟಿ ಢೋಕ್ಲಾ
ಸಾಮಗ್ರಿ : 1 ಕಪ್ ಕಡಲೆಹಿಟ್ಟು, 2 ಚಮಚ ರವೆ, 4 ಚಮಚ ಸಕ್ಕರೆ, ಅರ್ಧರ್ಧ ಸಣ್ಣ ಚಮಚ ಶುಂಠಿ, ಹಸಿ ಮೆಣಸಿನ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು.
ಒಗ್ಗರಣೆಗಾಗಿ : 1 ಚಮಚ ಎಣ್ಣೆ, ಸಾಸುವೆ, ಜೀರಿಗೆ, ಸೋಂಪು, ಕರಿಬೇವು ಉದ್ದಕ್ಕೆ ಸೀಳಿದ ಹಸಿ ಮೆಣಸಿನಕಾಯಿ.
ವಿಧಾನ : ನಿಂಬೆ ರಸ ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನೂ ಒಂದು ಬಟ್ಟಲಿಗೆ ಹಾಕಿಕೊಂಡು ನಿಧಾನವಾಗಿ ಬೆರೆಸಿಕೊಳ್ಳಿ. ಇದಕ್ಕೆ ಮೊಸರು ಬೆರೆಸಿ, ಇಡ್ಲಿ ಹಿಟ್ಟಿನ ಹದಕ್ಕೆ ಮಿಶ್ರಣ ಸಿದ್ಧಪಡಿಸಿಕೊಳ್ಳಿ. ಗಟ್ಟಿ ಎನಿಸಿದರೆ ಸ್ವಲ್ಪ ನೀರು ಸಹ ಬೆರೆಸಬಹುದು. ನಂತರ ಇದನ್ನು ಜಿಡ್ಡು ಸವರಿದ ಇಡ್ಲಿ ತಟ್ಟೆಗಳಿಗೆ 1-1 ಸೌಟು ಈ ಮಿಶ್ರಣ ಹಾಕಿ, ಹಬೆಯಲ್ಲಿ 15-20 ನಿಮಿಷ ಹದನಾಗಿ ಬೇಯಿಸಿ. ನಂತರ ಇವನ್ನು ಹೊರತೆಗೆದು, ಚಿತ್ರದಲ್ಲಿರುವಂತೆ ನೀಟಾಗಿ ಚೌಕಾಕಾರವಾಗಿ ಕತ್ತರಿಸಿ, ನಿಂಬೆರಸ ಹಿಂಡಿಕೊಂಡು, ಸೀಳಿದ ಹಸಿ ಮೆಣಸಿನೊಂದಿಗೆ ಒಗ್ಗರಣೆ ಕೊಡಿ. ಕಾಯಿ ಚಟ್ನಿ/ ಟೊಮೇಟೊ ಚಟ್ನಿ ಜೊತೆ ಸವಿಯಿರಿ.
ಸ್ವಾದಿಷ್ಟ ಪಳಿದ್ಯ
ಸಾಮಗ್ರಿ : 1 ಕಪ್ ಹುಳಿ ಮೊಸರು, ಅರ್ಧ ಕಪ್ ಕಡಲೆಹಿಟ್ಟು, ಇಂಗು, ಕರಿಬೇವಿನ ಸಹಿತ ಒಗ್ಗರಣೆ ಸಾಮಗ್ರಿ 2-3 ಈರುಳ್ಳಿ, 3-4 ಹುಳಿ ಟೊಮೇಟೊ, 4-5 ಎಸಳು ಜಜ್ಜಿದ ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹೆಚ್ಚಿದ ಶುಂಠಿ, ಹಸಿ ಮೆಣಸು, ಕೊ.ಸೊಪ್ಪು, ಪುದೀನಾ, ತುಸು ತುಪ್ಪ, ಕರಿಯಲು ಎಣ್ಣೆ.
ವಿಧಾನ : ಮೊದಲು ಕಡಲೆಹಿಟ್ಟಿಗೆ ತುಸು ಉಪ್ಪು, ಖಾರ, ಇಂಗು, ಜೀರಿಗೆ, ಶುಂಠಿ ಹಾಕಿ ಗಟ್ಟಿ ಮಿಶ್ರಣ ಕಲಸಿಕೊಂಡು, ಕಾದ ಎಣ್ಣೆಯಲ್ಲಿ ತುಸುವೇ ಮಿಶ್ರಣ ಬಿಡುತ್ತಾ ಸಣ್ಣ ಸಣ್ಣ ಬೋಂಡಾ ಕರಿದಿಡಿ. ಅದೇ ಬಾಣಲೆಯಲ್ಲಿ ಅರ್ಧ ಸೌಟು ಎಣ್ಣೆ ಉಳಿಸಿಕೊಂಡು, ತುಪ್ಪ ಬೆರೆಸಿ ಬಿಸಿ ಮಾಡಿ. ಇದಕ್ಕೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು ಹಾಕಿ ಬಾಡಿಸಿ. ಆಮೇಲೆ ಉಪ್ಪು, ಖಾರ, ಕರಿದ ಸಣ್ಣ ಬೋಂಡ ಹಾಕಿ ಕೈಯಾಡಿಸಿ. ನಂತರ ಮೊಸರು ಬೆರೆಸಿ ಮಂದ ಉರಿಯಲ್ಲಿ ಎಲ್ಲಾ ಬೆರೆತುಕೊಳ್ಳುವಂತೆ ಕುದಿಸಿ ಕೆಳಗಿಳಿಸಿ. ಇದಕ್ಕೆ ಹೆಚ್ಚಿದ ಕೊ.ಸೊಪ್ಪು ಇತ್ಯಾದಿ ಹಾಕಿ, ಬಿಸಿ ಬಿಸಿ ಅನ್ನದ ಜೊತೆ ಹಪ್ಪಳ ಸಂಡಿಗೆ ಕುರಿದು, ಸವಿಯಲು ಕೊಡಿ.