ಶಾಲಾ ಕಾಲೇಜುಗಳಲ್ಲಿ ಎಲ್ಲಾ ಗಂಡು ಮಕ್ಕಳಂತೆ ಆಟ ಪಾಠಗಳಲ್ಲಿ ಅತ್ಯುತ್ತಮ ಹೆಸರು ಗಳಿಸಿದ್ದ ತಿಲಕ್ ಅಂತರಂಗದಲ್ಲಿ ವಿಚಿತ್ರವಾದ ಒಂದು ಬಯಕೆ ತಾನಾಗಿ ಬೆಳೆಯತೊಡಗಿತು. ಇದು ಅವನ ವೈಯಕ್ತಿಕ ಜೀವನಕ್ಕೆ ಮುಳ್ಳಾಯಿತು. ಮುಂದೆ ಅವನು ಸಮಸ್ಯೆಯಿಂದ ಹೊರಬಂದದ್ದು ಹೇಗೆ…..?

ಶಾಲೆಯಲ್ಲಿ ವ್ಯಾಲಿಡಿಕ್ಟ್ರಿ ಫಂಕ್ಷನ್‌ ಭರಾಟೆ! ಹತ್ತನೇ ತರಗತಿ ಮಕ್ಕಳೇ ಅಲ್ಲಿ ಸೆಂಟರ್‌ ಆಫ್‌ ಅಟ್ರಾಕ್ಷನ್‌. ಶಾಲೆಯಲ್ಲಿ ಕಡೆಯ ಸ್ಟೇಜ್‌ ಪರ್ಫಾರ್ಮೆನ್ಸ್ ಎಂದು ಮಕ್ಕಳು ಅತೀ ಉತ್ಸಾಹದಿಂದ ಇರುತ್ತಾರೆ. ತಿಲಕ್‌ ಕೂಡ ಅದರಲ್ಲಿ ಒಬ್ಬ. ಡ್ಯಾನ್ಸ್ ಮಾಡಬೇಕು ಅಂದಾಗ ಅವನಿಗೊಂದು ದುಪಟ್ಟಾ ಬೇಕಿರುತ್ತದೆ. ತರಗತಿಯ ಹುಡುಗಿಯೊಬ್ಬಳ ದುಪಟ್ಟಾ ತೆಗೆದುಕೊಂಡು, `ಓ… ನಾರಿ ನಿನಗ್ಯಾರೆ ಜಗದಲ್ಲಿ ಸಾಟಿ…..’ ಎನ್ನುವ ಹಾಡಿಗೆ ನೃತ್ಯ ಮಾಡುತ್ತಾನೆ.

ದುಪಟ್ಟಾ ಹಾಕಿಕೊಂಡ ಕ್ಷಣದಿಂದ ಅವನ ಮನಸ್ಸಿನಲ್ಲಿ ಏನೋ ಅಸ್ಪಷ್ಟ ತಲ್ಲಣಗಳು ಪ್ರಾರಂಭವಾಗ ತೊಡಗುತ್ತವೆ. ಅಸ್ಪಷ್ಟ ಭಾವನೆಗಳು, ನಾನ್‌ ಪ್ರಾಕ್ಟಿಕಲ್ ಆಸೆಗಳು ಅವನನ್ನು ಹಿಂಸಿಸತೊಡಗುತ್ತವೆ. ಅವುಗಳನ್ನು ಹಿಂದಿಕ್ಕಿ ನಾನು ಓದುವುದರಲ್ಲಿಯೇ ಹೆಚ್ಚು ಉತ್ಸಾಹ ತೋರಿಸಬೇಕು ಎಂದು ತನ್ನ ಮನದಲ್ಲಿ ಆಗುತ್ತಿರುವ ಭಾವನೆಗಳಿಗೆ ಇಂಬುಗೊಡದೆ ಅವುಗಳನ್ನು ಹತ್ತಿಕ್ಕಲು ಪ್ರಾರಂಭಿಸುತ್ತಾನೆ. ಆದರೂ ಎಲ್ಲರ ನಡುವಿದ್ದರೆ ನಾನು ಹೇಗೆ ಕಾಣಬಹುದು? ನಾನು ಹೇಗೆ ನಡೀಬಹುದು? ವಿಚಿತ್ರ ಅನ್ನಿಸುತ್ತೇನೋ ನೋಡೋರಿಗೆ ಎಂದು ತನ್ನಷ್ಟಕ್ಕೆ ತಾನಿರಲು ಪ್ರಾರಂಭಿಸುತ್ತಾನೆ. ಅವ್ಯಕ್ತ ಭಾವನೆ ತನಗೆ ಅಸಹನೀಯ ಅನ್ನುವ ಆಸೆ ಅವುಗಳಿಂದ ಹೈರಾಣಾಗುತ್ತಾನೆ.

ಹತ್ತನೆ ತರಗತಿಯಲ್ಲಿ ಒಳ್ಳೆ ಅಂಕ ತೆಗೆದುಕೊಂಡು ಪಿಯುಸಿಗೂ ಸೇರಿಕೊಳ್ಳುತ್ತಾನೆ. ಎರಡನೆ ಪಿಯುಸಿ ಕಡೆಯಲ್ಲಿ ಮತ್ತದೆ ಎಥ್ನಿಕ್ ಡೇ ಸಂಭ್ರಮ. ಹುಡುಗಿಯರೆಲ್ಲ ಒಬ್ಬರನ್ನೊಬ್ಬರು ಮೀರುವಂತೆ ಗ್ರಾಂಡ್‌ ಎಥ್ನಿಕ್‌ ವೇರ್‌ ನಲ್ಲಿ ಮಿರಮಿರನೆ ಮಿಂಚುತ್ತಿರುತ್ತಾರೆ. ಅವರನ್ನು ನೋಡಿ ಅವನ ಒಳಮನಸ್ಸು ಅವರನ್ನು ಮತ್ತೆ ಮತ್ತೆ ಮಾತನಾಡಿಸುವಂತೆ ಪ್ರೇರೇಪಿಸುತ್ತಿತ್ತು. ಅವರ ಬಳಿ ಹೋಗಿ, “ಹಲೋ… ಯೂ ಆರ್‌ ಲುಕಿಂಗ್‌ ವೆರಿ ಗಾರ್ಜಿಯಸ್‌. ನೈಸ್‌ ಡ್ರೆಸ್‌ ಹ್ಞಾಂ…” ಎನ್ನುತ್ತಾನೆ.

ಅದನ್ನು ಕೇಳಿದ ಹುಡುಗಿಗೆ ವಿಚಿತ್ರ ಎನಿಸುತ್ತದೆ. ಎಂದಿಗೂ ಹೀಗೆ ಮಾತನಾಡದೆ ಇದ್ದವನು ಈ ರೀತಿ ಮಾತನಾಡುತ್ತಿದ್ದಾನಲ್ಲ ಎನ್ನುವ ಗೊಂದಲ ಆ ಹುಡುಗಿಗೆ. ಇತರರಿಗೂ ಅವನು ತರಗತಿಯಲ್ಲಿ ಇರುತ್ತಿದ್ದುದಕ್ಕೂ ಆ ದಿನ ಅವನು ನೋಡುತ್ತಿದ್ದುದಕ್ಕೂ ವಿಭಿನ್ನ ಅನ್ನಿಸುತ್ತಿರುತ್ತದೆ. ತಿಲಕ್‌ ಹಾಗೆ ಮಾತನಾಡುತ್ತಾ ಪೂರ್ವಿಕಾ ಬಳಿ ಹೋಗಿ, “ವೆರಿ ಬ್ಯೂಟಿಫುಲ್ ಯಂಗ್‌ ಲೇಡಿ,” ಎನ್ನುತ್ತಾನೆ.

ಆ ಹುಡುಗಿಗೆ ವಿಚಿತ್ರ ಎನಿಸಿದರೂ ಕಡೆ ಫಂಕ್ಷನ್‌ ತಾನೇ ಮಾತನಾಡೋಣ ಎಂದೆನಿಸಿ, “ಥ್ಯಾಂಕ್ಯೂ,” ಎನ್ನುತ್ತಾಳೆ.

ಅವನು ಚೆನ್ನಾಗಿ ಓದುತ್ತಿದ್ದ ಕಾರಣದಿಂದ ಪರೀಕ್ಷೆಯ ಕಡೆ ತಯಾರಿಯಲ್ಲಿ ಏನಾದರೂ ಸಹಾಯ, ಏನಾದರೂ ಎಕ್ಸ್ ಟ್ರಾ ಮೆಟೀರಿಯಲ್ ಇದ್ದರೆ ತಗೋಬಹುದು ಎನ್ನುವ ಕಾರಣಕ್ಕೆ ನಂಬರನ್ನೂ ಕೊಡುತ್ತಾಳೆ.

ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ನಂತರ ತಿಲಕ್‌ ಗೆ ಕಾಲೇಜಿನಲ್ಲಿ ನೋಡಿದ ಹೆಣ್ಣುಮಕ್ಕಳ ಉಡುಪನ್ನು ತಾನೂ ತೊಟ್ಟರೆ ಹೇಗಿರಬಹುದು ಎಂಬ ಕುತೂಹಲ ಬೆಂಬಿಡದೆ ಕಾಡುತ್ತದೆ. ಆ ಡ್ರೆಸ್‌ ಗಳನ್ನು ಈಗಿಂದೀಗಲೇ ಹಾಕಿಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಆಗುತ್ತದೆ. ಆದರೆ ಸಮಾಜ ಏನನ್ನುತ್ತದೆ ಎನ್ನುವ ಬಗ್ಗೆ ಭಯ ಶಂಕೆಯೂ ಮನಸ್ಸಿನ ತುಂಬಾ ಆವರಿಸಿರುತ್ತದೆ.

ಪೂರ್ವಿಕಾ ನಂಬರ್‌ ಹೇಗಿದ್ದರೂ ಇದೆಯಲ್ಲ ಎನ್ನುತ್ತಲೇ ಕರೆ ಮಾಡುತ್ತಾನೆ. ಕರೆ ಸ್ವೀಕರಿಸಿದ ಅವಳಿಗೆ ತಿಲಕ್‌ ಹೊಸದನ್ನೇನಾದರೂ ಹೇಳಿ ಕೊಡುವನೆ ಎಂಬ ಆಸೆಯಾದರೆ ತಿಲಕ್‌ಗೆ, `ನನ್ನ ನಡವಳಿಕೆ ಹುಡುಗಿಯಂತೆ ಬದಲಾಗಿದೆಯೆ? ನನ್ನ ಧ್ವನಿ, ನನ್ನ ನಡಿಗೆ ಹೇಗೆ?’ ಇತ್ಯಾದಿ ಪ್ರಶ್ನೆಗಳನ್ನು ಕೇಳುವ ತವಕ. ತನ್ನ ಗೆಳೆಯರಲ್ಲಿ ಹೇಳಲಾಗದ್ದನ್ನು ಪೂರ್ವಿಕಾ ಬಳಿ  ಕೇಳಬಹುದು ಎಂದುಕೊಂಡು ಆಕೆಯ ಬಳಿ ಸುತ್ತಿ ಬಳಸಿ, “ನನ್ನ ವಾಸ್, ವಾಕಿಂಗ್‌ ಸ್ಟೈಲ್ ‌ಹೇಗಿದೆ? ಈಸ್‌ ಇಟ್‌ ಆಡ್‌…..?” ಎಂದು ಕೇಳುತ್ತಾನೆ.

ಅದಕ್ಕೆ ಪೂರ್ವಿಕಾ, “ನೋ…. ನೋ….! ಸೂಪರ್‌, ವೆರಿ ಸೂಪರ್‌!” ಎನ್ನುತ್ತಾಳೆ.

ಅಷ್ಟಕ್ಕೆ ತೃಪ್ತಿಯಾಗದ ತಿಲಕ್‌, ತನ್ನ ನಡಿಗೆಯನ್ನು ತನ್ನದೇ ಮನೆಯ ಸಿಸಿ ಟಿವಿ ರೆಕಾರ್ಡಿಂಗ್ಸ್ ತೆಗೆದು ನೋಡುತ್ತಿರುತ್ತಾನೆ. ಆದರೆ ಅದು ಅವನಿಗೆ ಹುಡುಗರ ರೀತಿಯೇ ಅನಿಸುತ್ತದೆ. ಸುಮ್ಮನಾಗುತ್ತಾನೆ. ಗೆಳೆಯರ ಸ್ಟೇಟಸ್‌ ನಲ್ಲಿ ಅಲಂಕಾರಗೊಂಡ ಹುಡುಗಿಯರ ಫೋಟೋ ನೋಡಿದ. ಆ ಉಡುಪುಗಳನ್ನು ಮತ್ತೆ ಮತ್ತೆ ಧರಿಸಲೇಬೇಕೆಂಬ ತುಡಿತ ಹೆಚ್ಚಾಗುತ್ತದೆ. ಅಂಗಡಿಗೆ ಹೋಗಿ ತರಲಾಗದು ಅವುಗಳನ್ನು ಕೇಳುವುದಾದರೂ ಹೇಗೆ ಅನ್ನಿಸಿ ಅಮೆರನ್‌ ಮೂಲಕ ಆನ್‌ ಲೈನ್‌ ನಲ್ಲಿ ಆರ್ಡರ್‌ ಮಾಡುತ್ತಾನೆ.

ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಪೂರ್ವಿಕಾ ತಿಲಕ್‌ ನ ಬಳಿ ಫಿಸಿಕ್ಸ್ ನಲ್ಲಿ ಏನೋ ಡೌಟ್‌ ಎಂದು ಕಾಲ್ ‌ಮಾಡಿದಳು. ಅವಳ ಡೌಟ್‌ ನ್ನು ಕ್ಷಣಾರ್ಧದಲ್ಲಿ ಕ್ಲಿಯರ್‌ ಮಾಡಿ, “ನನ್ನದೂ ಒಂದು ಡೌಟ್‌,” ಎಂದು ಕೇಳುತ್ತಾನೆ.

“ನನ್ನಂಥ ದಡ್ಡಿ ಹತ್ತಿರ ನಿನ್ನದೇನೋ ಡೌಟ್‌….? ನನ್ನನ್ನೇ ಆಟ ಆಡಿಸ್ತೀಯಾ…..?” ಎಂದಳು ಪೂರ್ವಿಕಾ.

“ಇಲ್ಲ ನೀನು ಕ್ಲಿಯರ್‌ ಮಾಡ್ತೀಯ…..” ಎಂದ ತಿಲಕ್‌.

“ಸರಿ! ಅದೇನು ಎಂದು ಕೇಳು?” ತಿಲಕ್‌ ಆತುರಕ್ಕೆ ಬಿದ್ದವನಂತೆ, “ನೀವು ‌ಹೆಣ್ಮಕ್ಕಳು ಒಟ್ಟಿಗೆ ಎಷ್ಟು ಬಟ್ಟೆ ಹಾಕ್ಕೊಳ್ತೀರಾ…..?” ಎಂದು ಕೇಳುತ್ತಾನೆ.

ಪೂರ್ವಿಕಾಳಿಗೆ ಒಮ್ಮೆಲೆ ತಲೆ ಸುತ್ತಿದಂತಾಗಿ, ”ನೀನು ತಿಲಕ್‌ ಅಲ್ಲ ಕಣೋ ತಿಕ್ಲ. ತಲೆ ಏನಾದ್ರೂ ಕೆಟ್ಟಿದೆಯಾ…..?” ಎಂದು ಬೇಗನೆ ಫೋನ್‌ ಕಟ್‌ ಮಾಡಿ ಅವನ ನಂಬರ್‌ ನ್ನು ಬ್ಲಾಕ್‌ ಲಿಸ್ಟ್ ಗೆ ಹಾಕಿಬಿಟ್ಟಳು.

ಪೂರ್ವಿಕಾ ಇದನ್ನು ಯಾರ ಬಳಿಯೂ ಹೇಳಿಕೊಳ್ಳಲಾಗದೆ ಒದ್ದಾಡಿದಳು. ಆದರೆ ಯಾರಿಗಾದರೂ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬೇಕೆಂದು ಯಾವುದೋ ಡೌಟ್‌ ಕೇಳುವ ನೆಪದಲ್ಲಿ, ಯಾರೂ ಇರದ ಸಂದರ್ಭ ನೋಡಿಕೊಂಡು ಪ್ರಿನ್ಸಿಪಾಲ್ ‌ಮೇಡಂ ಬಳಿ, `ತಿಲಕ್‌ ನಿನ್ನೆ ರಾತ್ರಿ ಕರೆ ಮಾಡಿ, ಹೀಗೆಲ್ಲಾ ಆಡ್‌ ಆಗಿ ಕೇಳಿದ,’ ಎಂದು ಹೇಳಿದಳು.

ಅದಕ್ಕೆ ಮೇಡಂ, “ಏ ತಮಾಷೆಗೆ ಕೇಳಿರುತ್ತಾನೆ. ಡೋಂಟ್‌ ಟೇಕ್‌ ಇಟ್‌ ಸೀರಿಯಸ್‌. ಬೈ ದಿ ಬೈ ಡೋಂಟ್‌ ಶೇರ್‌ ವಿತ್‌ ಎನಿ ಒನ್‌, ದಿಸ್‌ ಈಸ್‌ ವೆರಿ ಸಿಲ್ಲಿ,” ಎಂದು ಹೇಳಿದರು.

ಪೂರ್ವಿಕಾ ಕ್ಯಾಬಿನ್‌ ನಿಂದ ಹೊರಹೋದ ನಂತರ ಪ್ರಿನ್ಸಿಪಾಲ್ ಮೇಡಂಗೆ ತಿಲಕ್‌ ನ ಮೇಲೆ ನಿಗಾ ಇಡಬೇಕು ಅನಿಸುತ್ತದೆ. ತರಗತಿಯಲ್ಲಿದ್ದಾಗ ಅವನ ನಡವಳಿಕೆಯನ್ನು ಒಮ್ಮೆಗೆ ತಮ್ಮ ಕಣ್ಮುಂದೆ ತಂದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಓ.ಕೆ. ಹಾಗೇನೂ ಅನಿಸುತ್ತಿಲ್ಲ ಎಂದು ಸಮಾಧಾನ ಮಾಡಿಕೊಂಡರೂ, ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಎಥ್ನಿಕ್‌ ಡೇ ವಿಡಿಯೋಗಳನ್ನು ಒಮ್ಮೆ ನೋಡೋಣ ಎಂದುಕೊಂಡು ವಿಡಿಯೋಗಳನ್ನು ಒಂದೊಂದಾಗಿ ನೋಡತೊಡಗಿದರು.

ತಿಲಕ್‌ ಒಮ್ಮೊಮ್ಮೆ ತಲೆ ಕೆಳಗೆ ಹಾಕಿ ಕುಳಿತಿರುವಂತೆ, ಕೆಲವೊಮ್ಮೆ ಹೆಣ್ಣು ಮಕ್ಕಳನ್ನೇ ದಿಟ್ಟಿಸಿ ನೋಡುತ್ತಿರುವ ದೃಶ್ಯಗಳು, ಅವರು ಬರುವಾಗ ಒಂದೆರಡು ಬಾರಿ ಛೇರ್‌ ನಿಂದ ದಢಕ್ಕನೆ ಎದ್ದ ಹಾಗೆ ಅವರ ಡ್ರೆಸ್‌ ನ್ನು ಇನ್ನೇನು ಮುಟ್ಟಿಯೇ ಬಿಡುತ್ತಾನೇನೋ ಎನ್ನುವಂತಿರುತ್ತದೆ. ಅದನ್ನು ಗಮನಿಸಿದ ಪ್ರಿನ್ಸಿಪಾಲ್ ‌ಮೇಡಂ, `ಓಹೋ… ಸಮಸ್ಯೆ ಇದೆ…..’ ಎಂದುಕೊಂಡು ಯಾರಿಗೂ ಹೇಳದಂತೆ ಕಾಲೇಜು ದಾಖಲಾತಿಗಳಲ್ಲಿ ಇದ್ದ ಪೇರೆಂಟ್ಸ್ ಗಳ ನಂಬರ್‌ ನ್ನು ಹುಡುಕಿ ತೆಗೆದರು.

ಅದರಲ್ಲೂ ತಿಲಕ್‌ ನ ತಾಯಿಯ ನಂಬರ್‌ ನ್ನು ಹುಡುಕಿಕೊಂಡು, ಎಲ್ಲರೂ ಊಟಕ್ಕೆ ಹೋದ ನಂತರ ಅವರಿಗೆ ಕರೆ ಮಾಡಿ, “ತಿಲಕ್‌ ಹೇಗೆ ಓದುತ್ತಾ ಇದ್ದಾನೆ….?” ಎಂದು ಕೇಳಿದರು.

ತಿಲಕ್‌ ತಾಯಿಯಿಂದ ಸಕಾರಾತ್ಮಕ ಉತ್ತರ ಬಂದರೂ, “ನಿಮ್ಮೊಂದಿಗೆ ಸ್ವಲ್ಪ ಮಾತನಾಡಬೇಕಿತ್ತು. ಸ್ವಲ್ಪ ತಡವಾದರೂ ಇಂದು ನಮ್ಮ ಮನೆಗೆ ಬನ್ನಿ,” ಎಂದು ಆಹ್ವಾನಿಸಿದರು.

ತಿಲಕ್‌ ನ ತಾಯಿ ಪ್ರಿನ್ಸಿಪಾಲ್ ‌ಮೇಡಂ ಹೇಳಿದಂತೆ ಅವರ ಮನೆಗೆ ಹೋದರು. ಅಲ್ಲಿ ಅವರಿಬ್ಬರೂ ಮಾತನಾಡುತ್ತಾ, ಮಾತನಾಡುತ್ತಾ, ತಿಲಕ್‌ ಇರುವ ದೃಶ್ಯಗಳನ್ನು ಮತ್ತು ಪೂರ್ವಿಕಾ ಬಳಿ ಅವನು ಕೇಳಿದ ಪ್ರಶ್ನೆಗಳನ್ನು ಕುರಿತು ಮಾತನಾಡುತ್ತಾ, “ಮನೆಯಲ್ಲಿ ಅವನ ಈ ರೀತಿಯ ನಡವಳಿಕೆಯನ್ನು ಇತ್ತೀಚೆಗೆ ಗಮನಿಸಿದ್ದೀರಾ….?” ಎಂದು ಕೇಳಿದರು.

ಅದಕ್ಕೆ ಅವರ ತಾಯಿ, “ಇಲ್ಲ ಖಂಡಿತಾ ಇಲ್ಲ…. ನೀವು ಹೇಳಿದ ಮೇಲೆಯೇ ನನಗೆ ತಿಳಿದಿದ್ದು….” ಎಂದರು.

“ಪರೀಕ್ಷೆ ಮುಗಿಯಲಿ. ಅಲ್ಲಿಯವರೆಗೂ ಅವನನ್ನು ವಾಚ್‌ ಮಾಡುತ್ತಿರಿ….” ಎಂದು ಸಲಹೆ ಕೊಟ್ಟು ಅವರನ್ನು ಬೀಳ್ಕೊಂಡರು.

ತಿಲಕ್‌ ನ ತಾಯಿಗೆ, ಅವನನ್ನು ನೋಡಿದರೆ ಹಾಗೆ ಅನಿಸುತ್ತಿಲ್ಲ. ಆದರೆ ಕಣ್ಮುಚ್ಚಿದರೆ ಏನೇನೋ ತಾಕಲಾಟಗಳು ಕಾಣತೊಡಗಿತು. ಅವನು ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾಗ, “ನಿನ್ನ ಹತ್ತಿರ ಬಂದು ಕೂರ್ತೀನಿ ಕಣೋ,” ಎಂದರು.

“ಹೋಗಮ್ಮ ಸುಮ್ನೆ….. ಯಾಕೆ ಹೀಗೆಲ್ಲಾ ಆಡ್ತಿದ್ದಿ,” ಎಂದು ಕೊಸರಾಡಿದ.

ಅಷ್ಟರಲ್ಲಿ ಅವನಿಗೆ ಒಂದು ಪಾರ್ಸೆಲ್ ಬಂದಿತು. “ಏನೋ…. ಅದು,” ಎಂದು ಕೇಳಿದವರು ಅವನ ತಾಯಿ.

“ಸಿಇಟಿ ಮೆಟೀರಿಯಲ್ಸ್….” ಎಂದು ಹೇಳಿದ.

ಸರಿ ಇರಬಹುದು ಎಂದುಕೊಂಡು, “ಸೋಲಾರ್‌ ವಾಟರ್‌ ಬರ್ತಿಲ್ಲ. ನಿನ್ನ ರೂಮಿನ ಗೀಜರ್‌ ನಲ್ಲಿ ಸ್ನಾನ ಮಾಡ್ತೀನಿ ಕಣೋ,” ಎನ್ನುತ್ತಾ  ಅವನ ರೂಮಿಗೆ ಬಂದಾಗ ಅವನು ಸ್ನಾನಕ್ಕೆ ಹೋಗಿದ್ದರಿಂದ, “ಗೀಝರ್‌ ಆನ್‌ ಮಾಡು….” ಎಂದು ಹೇಳುತ್ತಾ ರೂಮಿನಿಂದ ಹೊರಗೆ ಬಂದರು.

ತಿರುಗಿ ಅವನ ರೂಮಿಗೆ ಹೋದಾಗ, ಅವನು ಹೆಣ್ಣು ಮಕ್ಕಳ ಉಡುಪುಗಳನ್ನು ಹಾಕಿಕೊಂಡು ನೋಡುತ್ತಿದ್ದ. ನಿನ್ನೆ ಬಂದ ಪಾರ್ಸೆಲ್ ‌ಕವರ್‌ ನೆಲದಲ್ಲಿ ಬಿದ್ದಿತ್ತು. ಅದನ್ನು ನೋಡಿದ ತಾಯಿಗೆ ಸಹಜವಾಗಿಯೇ ಶಾಕ್‌ ಆಯಿತು. ಜೊತೆಗೆ ತಿಲಕ್‌ ಗೆ ನಾಚಿಕೆ, ಭಯ ಆಯಿತು.

ಇಬ್ಬರಿಗೂ ಪರಸ್ಪರ ಹೇಗೆ ಸಂದರ್ಭವನ್ನು ನಿಭಾಯಿಸಬೇಕೋ ತಿಳಿಯದೆ ಹೆಣಗಾಡುತ್ತಾರೆ. ಸಂಜೆವರೆಗೂ ಇಬ್ಬರಿಗೂ ಗೊಂದಲದಲ್ಲೇ ಇರುವ ಪರಿಸ್ಥಿತಿ.

ತಿಲಕ್‌ ನ ತಾಯಿ ಪ್ರಿನ್ಸಿಪಾಲ್ ಮೇಡಂಗೆ ಕರೆ ಮಾಡಿ, “ಮೇಡಂ… ಈ ಕಡೆಗೆ ಬಂದಾಗ ಒಮ್ಮೆ ಮನೆಗೆ ಬನ್ನಿ,” ಎಂದು ಹೇಳುತ್ತಾರೆ.

ಮೇಡಂಗೆ ಏನೋ ಆಗಿದೆ ಅನ್ನಿಸಿ ಇಬ್ಬರನ್ನೂ ಒಟ್ಟಿಗೆ ಹೇಗೆ  ಮಾತನಾಡಿಸಬೇಕು ಎಂಬ ತಯಾರಿಯಲ್ಲಿಯೇ ಹೋಗುತ್ತಾರೆ. ಸಂಜೆ ಮನೆಗೆ ಬಂದ ಪ್ರಿನ್ಸಿಪಾಲ್ ‌ಮೇಡಂನ್ನು ನೋಡುತ್ತಲೇ ತಿಲಕ್‌ ಗೆ ಖುಷಿಯ ಜೊತೆಗೆ ಬೆಳಗಿನ ಘಟನೆಯನ್ನು ಅಮ್ಮ ಅವರಿಗೆ ಹೇಳಿದರೆ ಎನ್ನುವ ಕಸಿವಿಸಿಯೂ ಉಂಟಾಗುತ್ತದೆ.

vanvas-story1

“ತಿಲಕ್‌ ಹೇಗಿದ್ದೀಯಾ…? ಹೇಗಿದೆ ಸ್ಟಡೀಸ್‌….? ಏನಾದ್ರೂ ಡೌಟ್ಸ್ ಇದೆಯಾ ಮ್ಯಾಥ್ಸ್ ನಲ್ಲಿ….?” ಎಂದು ಕೇಳಿದರು.

“ಒಂದು ಪ್ರಾಬ್ಲಮ್ ಸಾಲ್ವ್ ಮಾಡ್ಲಿಕ್ಕೆ ಗೊತ್ತಾಗಿಲ್ಲ ಮೇಡಂ….”

“ಅದು ತುಂಬಾ ಈಸಿ…..” ಎನ್ನುತ್ತಾ ಫಾರ್ಮುಲಾಗಳನ್ನು ಅಪ್ಲೈ ಮಾಡಿ ಅದನ್ನು ಬಿಡಿಸಿ ಮತ್ತದೆ ರೀತಿಯ ಪ್ರಾಬ್ಲಮ್ ಹೇಳಿಕೊಡುತ್ತಾ, ಇದೇ ಸರಿಯಾದ ಸಮಯವೆಂದು ಅಲ್ಲೇ ಇದ್ದ ಅವನ ಮೊಬೈಲ್ ‌ನ್ನು ತೆಗೆದುಕೊಂಡು ಸ್ಕ್ರಾಲ್ ಮಾಡಲು ಶುರು ಮಾಡುತ್ತಾರೆ.

ಪ್ರಾಬ್ಲಮ್ ಬಿಡಿಸುವ ಉತ್ಸಾಹದಲ್ಲಿದ್ದ ತಿಲಕ್‌ ಗೆ ಅರ್ಧ ಪ್ರಾಬ್ಲಮ್ ಸಾಲ್ವ್ ಮಾಡುವಷ್ಟರಲ್ಲಿ ತನ್ನ ಮೊಬೈಲ್ ‌ಮೇಡಂ ಕೈಯಲ್ಲಿದ್ದನ್ನು ನೋಡಿ ಶಾಕ್‌ ಆಗುತ್ತದೆ. ಮೇಡಂ ಕೈಯಲ್ಲಿದ್ದ  ಮೊಬೈಲ್ ‌ನಲ್ಲಿ ಅವನ ದೃಶ್ಯಗಳು. ಒಂದಾದ ನಂತರ ಒಂದು ಆನ್‌ ಲೈನ್‌ ನಲ್ಲಿ ತರಿಸಿದ ಉಡುಪುಗಳನ್ನು ಧರಿಸಿ ತೆಗೆದುಕೊಂಡ ಸೆಲ್ಛಿಗಳು. ಅದನ್ನು ನೋಡಿದ ಕೂಡಲೇ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ.

“ಹೆಲ್ಪ್ ಪ್ಲೀಸ್‌….” ಎನ್ನುವಂತೆ ತಿಲಕ್‌ ಸುಮ್ಮನಾಗುತ್ತಾನೆ. ಅಷ್ಟರಲ್ಲಿ ಕಾಫಿ ಸ್ನ್ಯಾಕ್ಸ್ ನೊಂದಿಗೆ ತಿಲಕ್‌ ನ ತಾಯಿ ಒಳಬರುತ್ತಾರೆ. ಒಟ್ಟಿನಲ್ಲಿ ಮೂವರಿಗೂ ವಿಚಾರ ಗೊತ್ತಾಗುತ್ತದೆ.

ಪ್ರಿನ್ಸಿಪಾಲ್ ಮೇಡಂ ತಿಲಕ್‌ ನ ಮೈದಡವುತ್ತಾ, ಗಲ್ಲ ಹಿಡಿದು, “ಇದು ತೊಂದರೆಯೇ ಅಲ್ಲ ಸರಿ ಹೋಗುತ್ತದೆ,” ಎಂದು ವಿಶ್ವಾಸದ ಮಾತುಗಳನ್ನಾಡುತ್ತಾ, “ನೋಡು ತಿಲಕ್‌, ಪರೀಕ್ಷೆ ಮುಗಿಯುವವರೆಗೂ ಯಾವುದೇ ಚಿಂತೆಗಳನ್ನು ಮಾಡಬೇಡ. ಮೊದಲು ಪರೀಕ್ಷೆ ಬರಿ. ಒಳ್ಳೆಯ ಮಾರ್ಕ್ಸ್ ಬರಲಿ. ಕಾಲೇಜಿಗೆ ಹೆಸರು ತಂದುಕೊಡು,” ಎಂದು ಹೇಳುತ್ತಾರೆ.

ಅದಕ್ಕೆ ಸರಿ ಎನ್ನುವಂತೆ ತಿಲಕ್‌ ತಲೆಯಾಡಿಸುತ್ತಾನೆ.

ಮರುದಿನ ತಿಲಕ್‌ ನ ತಾಯಿ ತರಕಾರಿ ತರುವ ನೆಪ ಮಾಡಿಕೊಂಡು ಪ್ರಿನ್ಸಿಪಾಲ್ ರ ಮನೆಗೆ ಹೋಗಿ ನಡೆದ ವಿಚಾರದ ಬಗ್ಗೆ ಚರ್ಚಿಸಿದರು.

“ಅವನಿಗೆ ಒಂದು ಕೌನ್ಸೆಲಿಂಗ್‌ ಕೊಡಿಸಿದರೆ ಎಲ್ಲಾ ಸರಿ ಹೋಗುತ್ತದೆ. ಚಿಂತೆ ಬೇಡ…. ಪರೀಕ್ಷೆ ಮುಗಿಯಲಿ,” ಎಂದು ಸಮಾಧಾನಿಸುತ್ತಾರೆ.

ಪರೀಕ್ಷೆ ಮುಗಿಯುವಷ್ಟರಲ್ಲಿ ಭಟಿಂಡಾಗೆ ಪೋಸ್ಟಿಂಗ್‌ ಹೋಗಿದ್ದ ಅವನ ತಂದೆಯೂ ವಾಪಸ್‌ ಬರುತ್ತಾರೆ. ನಮಗೆ ಈ ಊರೇ ಬೇಡ, ಬೆಂಗಳೂರಿಗೆ ಅಥವಾ ಬೇರೆಲ್ಲಿಗಾದರೂ ಹೋಗೋಣ ಎಂದು ನಿರ್ಧರಿಸುತ್ತಾರೆ.

ಆದರೆ ಹೆತ್ತ ಕರುಳು ಸುಮ್ಮನಿರದೆ ಮನೋವೈದ್ಯರನ್ನು ಭೇಟಿಯಾಗಿ ತಮ್ಮ ಮಗನ ಬಗ್ಗೆ ಹೇಳಿಕೊಂಡು ಅತ್ತರು. ಡಾಕ್ಟರ್ ಅಳುವುದರಲ್ಲಿ ಅರ್ಥವಿಲ್ಲ ಎಂದು ಸಮಾಧಾನಿಸಿ, ಕೆಲವೊಂದು ಪ್ರಶ್ನೆಗಳನ್ನು ತಿಲಕ್‌ ನ ತಾಯಿಯ ಬಳಿ ಕೇಳಿ ಕಡೆಯಲ್ಲಿ, “ನಿಮ್ಮ ಮಗ ಯಾವುದೇ ರೀತಿಯ ಭಯದಿಂದ ಬಳಲುತ್ತಿಲ್ಲ. ದಿನವಿಡೀ ಹೆಣ್ಣುಡುಗೆಯಲ್ಲಿಯೇ ಇರಲು ಆಸೆಯೂ ಪಡುವುದಿಲ್ಲ. ಮೇಲಾಗಿ ಇತರರಿಗೂ ಮಾನಸಿಕವಾಗಿ ಹಿಂಸೆ ಕೊಡುವುದು, ಅಸಭ್ಯವಾಗಿ ನಡೆದುಕೊಳ್ಳುವುದು ಯಾದೂ ಇಲ್ಲ. ಹೀಗಾಗಿ ತಿಲಕ್ ಗೆ ಥೆರಪಿಯ ಅವಶ್ಯಕತೆ ಇಲ್ಲ. ಅವನನ್ನು ಮತ್ತೆ ಮತ್ತೆ ಈ ವಿಚಾರದಲ್ಲಿ ವಿರೋಧಿಸುವುದು, ಬೈಯ್ಯುವುದು, ಹೀನಾಯವಾಗಿ ಕಾಣುವುದು ಮಾಡಿದರೆ ಸಮಸ್ಯೆ ಬಿಡಗಾಯಿಸಬಹುದು. ಈಗ ಹೇಗೆ ಪ್ರೀತಿಯಿಂದ ನೋಡಿಕೊಳ್ಳುತ್ತಿರುವಿರೋ ಹಾಗೆಯೇ ನೋಡಿಕೊಳ್ಳಿ,” ಎಂದು ಸಲಹೆ ನೀಡಿ ಕಳುಹಿಸಿದರು.

ಇದರಿಂದ ಆಕೆ ತಕ್ಕ ಮಟ್ಟಿಗೆ ನಿರುಮ್ಮಳರಾದರು. ತಾಯಿಗೆ ವಿಚಾರ ತಿಳಿದಿದೆ ಎಂದು ಅರಿತ ಮೇಲೂ ಯಾವುದೇ ಹಿಂಜರಿಕೆ ಪಡದೆ ತಿಲಕ್‌ ಓದುವುದರಲ್ಲಿ ಬಹಳ ಪರಿಶ್ರಮ ಪಡತೊಡಗಿದ. `ಪರೀಕ್ಷೆ ಪ್ರಾರಂಭವಾಗಿದೆ. ಇಂದು ಗ್ಯಾಪ್‌! ನಾಳೆಗೆ ಓದುತ್ತಿರಬಹುದು,’ ಎಂದುಕೊಂಡು ಅವನ ರೂಮಿಗೆ ಹೋದರು. ಅವನು ಮಲಗಿದ್ದ. ಅವನನ್ನು ಎಬ್ಬಿಸಲು ಹೋದರು. ಅವನು ಹುಡುಗಿಯರ ಉಡುಪು ಹಾಕಿಕೊಂಡು ಮಲಗಿದ್ದ.

ಕೋಪ ತಡೆಯದೆ, “ತಿಲಕ್‌, ಇದೆಲ್ಲಾ ಅತಿಯಲ್ವಾ…. ನಿನಗ್ಯಾಕೆ ಅರ್ಥವಾಗುತ್ತಿಲ್ಲ…..?” ಎಂದು ಸಿಟ್ಟಿನಿಂದ ಹೇಳಿ ಅವರು ರೂಮಿಂದಾಚೆ ಹೋದರು.

ತಿಲಕ್‌ ಹೆಣ್ಣುಡುಗೆ ಧರಿಸಿ ಟೆರೆಸ್‌ ಮೇಲೆ ಓಡಾಡುವುದನ್ನು ನೋಡಿದ ಅಕ್ಕಪಕ್ಕದವರು ಅವನ ತಾಯಿ ಬಳಿ ಬಂದು ಉಪ್ಪು, ಹುಳಿ, ಖಾರ ಸೇರಿಸಿ ಹೇಳತೊಡಗಿದರು. ಅಷ್ಟರಲ್ಲಿ ಸಿಇಟಿ ರಿಸಲ್ಟ್ ಬಂದಿತು. ಒಳ್ಳೆಯ ಕಡೆ ಎಂಜಿನಿಯರ್‌ ಸೀಟ್‌ ಆಯಿತು ಎನ್ನುವ ಕಾರಣಕ್ಕೆ ಪೋಷಕರು ತಿಲಕ್‌ ನನ್ನು ಕರೆದುಕೊಂಡು ಬೆಂಗಳೂರಿಗೆ ಶಿಫ್ಟ್ ಆದರು.

ಬೆಂಗಳೂರಿಗೆ ಬಂದು ತಿಲಕ್‌ ಶಾಪಿಂಗ್‌ ಮಾಲ್ ‌ಗಳಿಗೆ ಹೋದಾಗ ಯಾವಾಗಲೂ ಅವನ ದೃಷ್ಟಿ ಹೆಣ್ಣು ಮಕ್ಕಳ ಬಟ್ಟೆಯ ಮೇಲೆಯೇ ಇರುತ್ತಿತ್ತು. ಇದನ್ನು ಗಮನಿಸಿದ ತಾಯಿಗೆ ಇದನ್ನು ತಹಬದಿಗೆ ತರುವುದು ಹೇಗೆ? ಎಂದು ತಿಳಿಯದಾಯಿತು. ಆದರೆ ಓದಿನಲ್ಲಿ ಬಹಳ ಬುದ್ಧಿವಂತ. ನಡೆಯಲ್ಲಿ, ಮಾತಿನಲ್ಲಿ, ದೈಹಿಕ ಬೆಳವಣಿಗೆಯಲ್ಲಿ ಯಾವ ವ್ಯತ್ಯಾಸ ಇರಲಿಲ್ಲ. ಅವನ ಪೋಷಕರಿಗೆ ಇದೊಂದು ಬಿಡಿಸಲಾಗದ ಸಮಸ್ಯೆಯಾಗಿತ್ತು.

ಸಮಸ್ಯೆ ತಿಳಿದ ತಿಲಕ್‌ ನ ತಂದೆಯೂ ನಿವೃತ್ತಿ ಪಡೆದುಕೊಂಡು ಬಂದರು. ಇಬ್ಬರೂ ಮಗನ ಮೇಲೆ ಕಣ್ಗಾವಲು ಇಡಲು ಪ್ರಾರಂಭಿಸಿದರು. ಕಡೆಗೆ ಅವನಿಗೊಂದು ಮದುವೆ ಮಾಡಿದರೆ ಸರಿ ಹೋಗುತ್ತದೆ ಎಂಬ ನಿರ್ಧಾರಕ್ಕೆ ಬಂದರು. ಹಾಗೆಯೇ ಹುಡುಗಿ ಹುಡುಕಲೂ ಪ್ರಾರಂಭಿಸಿದರು.

ಓದುವಾಗಲೇ ಉದ್ಯೋಗ ಗಿಟ್ಟಿಸಿಕೊಂಡ ತಿಲಕ್‌ ಗೆ ಯುಎಸ್‌ ಪ್ಯಾಕೇಜ್‌ ದೊರೆಯಿತು. ವರ್ಷಕ್ಕೆ ಇಂತಿಷ್ಟು ಎಂದು ಉತ್ತಮ ಸಂಬಳ ನಿಗದಿಯಾಯಿತು. ಹೊಸ ಸಂಬಂಧ, ಅಷ್ಟೇ ಚೆನ್ನಾಗಿ ಓದಿದ್ದ, ಚೆಂದದ ಹುಡುಗಿ ತಿಲಕ್‌ ನ ಮದುವೆಗೂ ಒಪ್ಪಿಕೊಂಡಳು. ಇಬ್ಬರಿಗೂ ಈಡು ಜೋಡು ಸರಿಯಾಗಿತ್ತು. ಮದುವೆ ನಿಶ್ಚಯವಾಯಿತು.

ತಿಲಕ್‌ ತಾನು ಮದುವೆಯಾಗುವ ಹುಡುಗಿಯ ದಿರಿಸಿನ ಬಗ್ಗೆಯೇ ಯಾವಾಗಲೂ ಯೋಚಿಸುತ್ತಾ, ತಾನು ಹೇಳಿದ್ದನ್ನೇ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ. ಇದರಿಂದ ಹುಡುಗಿಗೆ ಇವನ ಸ್ವಭಾವ ಸರಿ ಕಾಣಲಿಲ್ಲ. ಮದುವೆಗೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕೆಂದು ನೆಪ ಹೇಳಿ ಹುಡುಗಿ ಕಡೆಯವರು ಮದುವೆ ಮುಂದೂಡಿದರು.

ಆದರೂ ಕುಟುಂಬ ಸಮೇತ ಮುಂಗಾರು ಮಳೆಯ ಆರಂಭಕ್ಕೆ ಫ್ರೀ ವೆಡ್ಡಿಂಗ್‌ ಶೂಟಿಂಗ್‌ ಗೆ ಹೋದರು. ಹುಡುಗಿ ಪೋಷಕರ ಒತ್ತಾಯಕ್ಕೆ ಬಂದಿದ್ದಳು. ಬೆಳಗ್ಗೆ ಎಲ್ಲಾ ಕುರ್ತಾ ಧೋತಿ, ಫಾರ್ಮಲ್ಸ್ ನಲ್ಲಿ ಶೂಟ್‌ ಮಾಡಿದರು. ಆದರೆ ಆ ಸಂಜೆ ಅವರು ಉಳಿದುಕೊಂಡಿದ್ದ ರೂಮಿನಲ್ಲಿ ತಿಲಕ್‌ ತಾನು ಮದುವೆಯಾಗಬೇಕಿದ್ದ ಹುಡುಗಿಯ ಬಟ್ಟೆ ತೊಡುತ್ತಾನೆ. ಅಕಸ್ಮಾತ್ತಾಗಿ ಅದನ್ನು ಹುಡುಗಿ ನೋಡಿಬಿಡುತ್ತಾಳೆ.  ಒಂದು ಕ್ಷಣ ತಡಮಾಡದೆ, “ನಾನು ಇವನನ್ನು ಮದುವೆ ಆಗುವುದಿಲ್ಲ,” ಎಂದು ಅಂತಿಮವಾಗಿ ತನ್ನ ನಿರ್ಧಾರ ಹೇಳಿದಳು.

“ನೋಡು ನಿನ್ನ ಹುಚ್ಚಾಟದಿಂದ ಹೇಗಾಯ್ತು? ಲೋಕದಲ್ಲಿ ಯಾವುದು ಸಮ್ಮತವೋ ಅದಕ್ಕಷ್ಟೇ ಬೆಲೆ. ಹೀಗೆ ವಿಚಿತ್ರವಾದರೆ ಯಾರು ತಾನೇ ಒಪ್ಪುತ್ತಾರೆ. ಪ್ಯಾಕ್‌ ಮಾಡು ಇಲ್ಲಿಂದ ಹೊರಡೋಣ. ಇನ್ನೇನು ಕಾದಿದೆಯೋ,” ಎಂದು ರೇಗಿದರು ಅವನ ತಾಯಿ.

ಬೆಂಗಳೂರಿಗೆ ಹಿಂದುರುಗಿದ ನಂತರ. ಇಲ್ಲೇ ಇದ್ದರೆ ಅಮ್ಮನ ಮುಖ ನೋಡಲಿಕ್ಕೆ ಅಸಾಧ್ಯ ಎಂದು ಯೋಚಿಸಿದ ತಿಲಕ್‌, “ಅಮ್ಮಾ… ನಾನು ಯುಎಸ್‌ ಗೆ ಹೊರಡುವೆ. ಹೇಗೂ ಜಾಬ್‌ ಆಗಿದೆ. ಮೊದಲು ನಾನು ಹೋಗಿ ಅಡ್ಜೆಸ್ಟ್ ಆದ ಮೇಲೆ ನಿಮ್ಮಿಬ್ಬರನ್ನು ಕರೆಸಿಕೊಳ್ತೀನಿ. ಅದಕ್ಕೇನು ಪ್ರೋಸೀಜರ್ಸ್‌ ಇದೆಯೋ ನೋಡ್ತೀನಿ,” ಎಂದು ಹೇಳಿದ.

ತಿಲಕ್‌ ನ ತಾಯಿಗೂ ಅದುವೆ ಸರಿ ಎನಿಸಿತು. `ನಮ್ಮಲ್ಲಿ ಇದೆಲ್ಲಾ ಅಸಭ್ಯ. ಆದರೆ ಪಾಶ್ಚಾತ್ಯರಲ್ಲಿ ಇಂಥದ್ದು ಕಂಡಾಗ ಅಷ್ಟು ರಾದ್ಧಾಂತ ಆಗಲಾರದು,’ ಎಂದುಕೊಂಡು, “ಆಯ್ತು ತಿಲಕ್‌, ನೀನು ಹೋಗಿ ತಯಾರಿ ಮಾಡಿಕೋ,” ಎಂದು ಒಪ್ಪಿಗೆ ಸೂಚಿಸಿದರು.

ತಿಲಕ್‌ ಹೊರಡುವ ತಯಾರಿ ಮಾಡತೊಡಗಿದ. ತಿಲಕ್‌ ಒಬ್ಬನೇ ಇದ್ದಾಗ ಅವನ ಬಯಕೆಗಳ ಬಗೆಗಿನ ಯೋಚನೆಗಳು ಸುಳಿದು  ಸುತ್ತತೊಡಗಿದವು. ಗಂಡು ಮಕ್ಕಳು ಚಿಕ್ಕವರಿದ್ದಾಗ ಫ್ರಾಕ್‌ ಹಾಕಿ, ಜುಟ್ಟು ಕಟ್ಟಿ, ಹೂ ಮುಡಿಸಿ, ಫೋಟೋ ತೆಗೆಸುತ್ತಾರೆ. ಇನ್ನೇನು ಶಾಲೆಗೆ ಸೇರಿಸಬೇಕು ಎನ್ನುವಷ್ಟರಲ್ಲಿ ಉದ್ದ ಕೂದಲು ಬಿಟ್ಟು, ರೇಷ್ಮೆ ಲಂಗ ಹಾಕಿಸಿ, ಬಳೆ ತೊಡಿಸಿ, ಇರುವ ಆಭರಣಗಳನ್ನೆಲ್ಲಾ ಹೇರಿ, ಮೊಗ್ಗಿನ ಜಡೆ ಹಾಕಿಸಿ, ಕಾಡಿಗೆ ಹಚ್ಚಿ ಆ ಮಕ್ಕಳ ಅಂದ ಚೆಂದ ನೋಡಿ ಖುಷಿಪಡುತ್ತಾರೆ. ದೊಡ್ಡವರಾದ ಮೇಲೆ ಹೀಗೆ ಕ್ರಾಸ್‌ ಡ್ರೆಸ್‌ ಮಾಡಿಕೊಂಡ್ರೆ ಹಾವು ಕಂಡ ಹಾಗಾಡುತ್ತಾರೆ. ಎಂಥ ಜನ? ಎಂಥ ಸಮಾಜ? ಅದೇ ಹೆಣ್ಮಕ್ಕಳು ಬಾಯ್‌ ಕಟ್‌ ಮಾಡಿ, ಜೀನ್ಸ್ ಹಾಕಿ, ಬೋಳು ಕಿವಿ, ಬೋಳು ಹಣೆ, ಕೈಯಲ್ಲಿ ತಿರುಗಾಡುತ್ತಿದ್ದರೆ ಅವರಿಗೆ ಏನೂ ಹೇಳುವುದಿಲ್ಲ. ಅದೇ ಗಂಡು ಮಕ್ಕಳೂ ಕೂದಲು ಬಿಟ್ಟು ಜುಟ್ಟು ಹಾಕ್ಕೋತ್ತಾರೆ, ಓಲೆ ಹಾಕ್ಕೊತ್ತಾರೆ, ಇವೆಲ್ಲಾ ಫ್ಯಾಷನ್‌…! ಆದರೆ ಹೆಣ್ಮಕ್ಕಳ ಬಟ್ಟೆ ಹಾಕಿಕೊಂಡರೆ….?

ಇರಲಿ ಹಾಗಂತ ನನಗೂ ಹೆಣ್ಮಕ್ಕಳ ಬಟ್ಟೆಗಳನ್ನು ಹಾಕಿಕೊಂಡು ಹೊರಗೆ ಹೋಗುವುದು ಇಷ್ಟ ಆಗಲ್ಲ. ಆದರೆ ಒಬ್ಬನೇ ಇರೋವಾಗ ಹಾಕಿಕೊಳ್ಳೋಕೆ ಭಾರೀ ಇಷ್ಟ. ಹಾಗೆ ಹಾಕಿಕೊಳ್ಳೋದರಿಂದ ನನಗೆ ಸಮಾಧಾನ ಸಿಗುತ್ತೆ. ಇದನ್ನು ಮನೆಯವರಿಗೆ ಹೇಗೆ ಅರ್ಥ ಮಾಡಿಸಲಿ? ಎಂಬ ಆಲೋಚನೆ ಬಂದಿತು. ಇವನ್ನೆಲ್ಲ ಬದಿಗಿಟ್ಟು ನಾನು ಸ್ಟೇಟ್ಸ್ ಗೆ ಹೋಗಿ ಸೆಟಲ್ ಆಗೋದು ಉತ್ತಮ ಎಂದು ನಿರ್ಧರಿಸಿದ. ತಾನು ಯಾರಾದರೂ ಸೈಕ್ರಿಯಾಟಿಸ್ಟ್ ರ ಒಪೀನಿಯನ್‌ ಕೇಳೋಣ ಎಂದು ಯೋಚಿಸಿ ಮನೋವೈದ್ಯರ ಬಳಿ ಹೋಗಿ ತನ್ನ ವಿಚಾರಗಳನ್ನು ತಿಳಿಸಿದ.

ಮನೋವೈದ್ಯರಿಗೆ ತಿಲಕ್‌ ನೇರವಾಗಿ, ನಿರ್ಭಿಡೆಯಿಂದ ತನ್ನ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಕ್ಕೆ ಬಹಳ ಮೆಚ್ಚಿಗೆಯಾಯಿತು.

“ಈ ಕ್ರಾಸ್‌ ಡ್ರೆಸಿಂಗ್‌ ಮಾನಸಿಕ ರೋಗವಲ್ಲ! ಈ ಕ್ರಾಸ್‌ ಡ್ರೆಸರ್ಸ್‌ ಒಂದೇ ಮನೋಭಾವದವರೂ ಆಗಿರುವುದಿಲ್ಲ. ಅವರಿಗೆ ಹಾಗೆ ಇರಲು ಪ್ರತ್ಯೇಕ ಕಾರಣವಿರುತ್ತದೆ. ಇವರಲ್ಲಿ ಮೂರು ವರ್ಗವಿದೆ. ಮೊದಲನೇ ವರ್ಗದಲ್ಲಿ ಕೆಲವರಿಗೆ ಕೇವಲ ಹೆಣ್ಣು ಮಕ್ಕಳ ಬಟ್ಟೆಯಲ್ಲಿ ಮಾತ್ರ ಇರಲು ಬಯಸುತ್ತಾರೆ. ಬಟ್ಟೆ ಮಾತ್ರ ಹೆಣ್ಣಿನದ್ದು. ಯೋಚನೆ, ದೇಹ, ಮನಸ್ಸು ಗಂಡಿನದ್ದೇ ಆಗಿರುತ್ತದೆ. ತಮ್ಮನ್ನು ತಾವು ನೋಡಿ ಖುಷಿ ಪಡುತ್ತಾರೆ. ಮನೆಯಲ್ಲಿ ಯಾರೂ ಇಲ್ಲದ್ದಿದ್ದಾಗ ತಮ್ಮ ಸಹೋದರಿಯರ ಬಟ್ಟೆಯಲ್ಲಿ ತಮ್ಮನ್ನು ತಾವು ನೋಡಿ ಖುಷಿ ಪಡುತ್ತಾರೆ.

“ಎರಡನೇ ವರ್ಗ ಮೆಂಟಲ್ ಆಗಿ ಸ್ವಲ್ಪ ಡಿಸ್ಟರ್ಬ್‌ ಆಗಿರುತ್ತದೆ. ಹೆಣ್ಣುಡುಗೆ ತೊಟ್ಟು ಮಾನಸಿಕವಾಗಿ ನೆಮ್ಮದಿ ಹೊಂದುವುದು. ಮಹಿಳೆಯರ ಗುಣಗಳನ್ನು ಹೊಂದಿರುತ್ತಾರೆ. ಇವರಿಗೆ ತಮ್ಮ ಬಗ್ಗೆ ತಮಗೆ ಕೀಳರಿಮೆ ಇರುತ್ತದೆ. ಕೆಲವೊಮ್ಮೆ ಸಾಮಾಜಿಕ ನಿಯಮ, ಕಾನೂನನ್ನೂ ಮುರಿಯಬಹುದು. ಹೆಣ್ಣು ಮಕ್ಕಳನ್ನು ವಿಚಿತ್ರವಾಗಿ ಕಾಡಲೂಬಹುದು. ಮಾನಸಿಕ ಕಿರುಕುಳ ಕೊಡಬಹುದು. ಇವರು ಸದಾ ಖಿನ್ನರಾಗಿರುತ್ತಾರೆ. ಇವರಿಗೆ ಥೆರಪಿ ಅವಶ್ಯಕತೆ ಇರುತ್ತದೆ.

“ಮೂರನೇ ವರ್ಗ ಹೆಣ್ಣಾಗಿಯೇ ಇರಲು ಇಷ್ಟಪಡುದು. ಲಿಂಗ ಪರಿವರ್ತನೆ ಮಾಡಿಸಿಕೊಳ್ಳುವುದು ಹೆಣ್ಣಿನಂತೆಯೇ. ಸಂಪೂರ್ಣ ಬದುಕಲು ಇಷ್ಟಪಡುವರು. ಅವರಿಗೆ ಸಮಾಜದಲ್ಲಿ ಇನ್ನೂ ಕೀಳರಿಮೆ ಇದೆ. ಇವರನ್ನು ಸಮಾಜದಲ್ಲಿ ನಡೆಸಿಕೊಳ್ಳುವ ರೀತಿಯಿಂದ  ರೋಸಿ ರಿಲೇಟೀವ್ ‌ಆಗಿರುತ್ತಾರೆ. ಇನ್ನೂ ಕೆಲವರು ಸ್ವಾಭಿಮಾನದಿಂದ ಬದುಕುತ್ತಾರೆ. ಅವರಲ್ಲಿಯೂ ವೈದ್ಯರು, ಐಎಎಸ್ ಅಧಿಕಾರಿಗಳು, ಸಾಹಿತಿಗಳು, ಪದ್ಮಭೂಷಣ ಪ್ರಶಸ್ತಿ ಪಡೆದವರೂ ಇದ್ದಾರೆ,” ಎಂದು ವಿಸ್ತಾರ ಮಾಹಿತಿಯನ್ನು ನೀಡಿದರು.

ಮನೋವೈದ್ಯರ ಈ ಮಾತುಗಳು ತಿಲಕನ ಮನೋಬಲವನ್ನು ಹೆಚ್ಚಿಸಿತು.

ತಿಲಕ್‌ ಹೊಸ ಹುರುಪಿನಿಂದಲೇ ವಿದೇಶಿ ನೆಲವನ್ನು ಪ್ರವೇಶಿಸಿದ. ವಿದೇಶಿ ನೆಲದ ಹೊಸತನ, ದೇಶ, ವೇಷ, ಭಾಷೆ, ಜನ, ಊಟ ತಿಂಡಿ, ವಾಸಿಸುವ ಸ್ಥಳ, ಮರಗಿಡಬಳ್ಳಿ ಎಲ್ಲವೂ ಹೊಸತನನ್ನು ತೋರಿಸಿತು. ಆ ಹೊಸತನದಲ್ಲಿ ತಿಲಕ್‌ ತಾನು ಹೊಸ ಮನುಷ್ಯನಾಗಿ ಬೆಳೆಯಬೇಕು, ಬಾಳಬೇಕು ಎಂಬ ಸಾಮರ್ಥ್ಯ ಮೀರಿ ಕಂಪನಿ ಕೆಲಸಗಳಲ್ಲಿ ತೊಡಗಿಕೊಂಡ.

ಮಾಲ್ ಗಳಿಗೆ ಹೋದಾಗ ಸಹೋದ್ಯೋಗಿಗಳನ್ನು ನೋಡಿದಾಗ ಮತ್ತೆ ಅವನಿಗೆ ಆ ಉಡುಪುಗಳನ್ನು ತೊಟ್ಟ ತಾನು ಹೇಗೆ ಕಾಣುವೆ ಎನ್ನುವ ಆಸೆ ಮತ್ತೆ ಮತ್ತೆ ಪುಟಿದೇಳುತ್ತಲೇ ಇತ್ತು. ತನ್ನನ್ನು ತಾನು ಅವಲೋಕನ ಮಾಡಿಕೊಂಡರೆ ತಪ್ಪಾ…? ಎಂದರೆ ತನ್ನದೇನೂ ತಪ್ಪಿಲ್ಲ ಎನ್ನುವ ಭಾವ. ಹಾಗಂತ ಹೆಣ್ಣು ಮಕ್ಕಳ ಬಟ್ಟೆ ಧರಿಸಿ ಹೊರ ಹೋಗಬಹುದು ಎಂದರೆ ಅದು ಹೇಗಾಗುತ್ತದೆ? ಎಂಬ ತಾಕಲಾಟದಿಂದ ತೊಳಲಾಡಿದ.

ಹೀಗೆ ಗೊಂದಲದಲ್ಲಿ ಇರುವಾಗ ಇವನಿಗೆ ಹೆಚ್ಚು ಆಪ್ತ ಅನಿಸಿದ ಜೀವ ಜಾಯ್‌ ಜೊತೆಯಾದಳು. ಅವಳ ಹೆಸರೇ ಸಂತೋಷ. ಹೆಸರಿಗೆ ತಕ್ಕಂತೆ ಯಾವಾಗಲೂ ಸಂತೋಷದಿಂದ ಇರುತ್ತಿದ್ದಳು. ಅವಳ ತಂದೆ ಮಂಗಳೂರಿನವರು ಜೊತೆಗೆ ಕನ್ನಡದವರೇ ಆಗಿದ್ದರು. ಮಗಳಿಗೂ ಕನ್ನಡ ಓದುವುದನ್ನು ಬರೆಯುವುದನ್ನು ಕಲಿಸಿದ್ದರು. ತಾಯಿ ಉತ್ತರ ಅಮೆರಿಕಾದವರು. ಅವರಿಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಒಲವಿತ್ತು.

ತಂದೆಯಿಂದ ಇಂಡಿಯಾದ ಬಗ್ಗೆ ಇಲ್ಲಿನ ದೇವಸ್ಥಾನ ಉಡುಗೆತೊಡುಗೆ, ಆಚಾರವಿಚಾರಗಳ ಬಗ್ಗೆ ತಿಳಿದುಕೊಂಡ ಕಾರಣದಿಂದಲೋ ಏನೋ ತಿಲಕ್‌ ನನ್ನು ಕಂಡಾಗ ಅಷ್ಟೇ ಹೆಮ್ಮೆಪಟ್ಟಳು ಜಾಯ್‌. ವೀಕೆಂಡ್‌ ಗಳಲ್ಲಿ ಒಂದೆರಡು ಭಾರಿ ಲಾಂಗ್ ಡ್ರೈವ್ ‌ಹೋಗಿದ್ದರು. ಅವರಿಬ್ಬರ ಸ್ನೇಹ ಮದುವೆಯ ಮಾತುಕತೆವರೆಗೆ ಹೋಗಲು ಹೆಚ್ಚು ದಿನ ತೆಗೆದುಕೊಳ್ಳಲಿಲ್ಲ. ತಿಲಕ್‌ ಏನೇ ಆದರೂ ತನ್ನ ಭಾವನೆಯನ್ನು ಆಕೆಯಲ್ಲಿ ಹೇಳಬೇಕೆಂದು ಸರಿಯಾದ ಸಮಯಕ್ಕೆ ಕಾದಿದ್ದ. ಆದರೆ ಸಾಧ್ಯವಾಗಲಿಲ್ಲ. ಆದರೆ ಜಾಯ್‌ ಮುಚ್ಚುಮರೆಯಿಲ್ಲದೆ ತನ್ನ ಅನಿಸಿಕೆಗಳನ್ನು ಹೇಳಿಕೊಂಡಳು.

“ಐ ಹ್ಯಾವ್ ಒನ್‌ ವೀಕ್ನೆಸ್‌. ಐ ಆ್ಯಮ್ ಕ್ರಾಸ್‌ ಡ್ರೆಸರ್‌. ಡು ಯೂ ಅಗ್ರೀ ವಿಥ್‌ ಮಿ,” ಎಂದು ಧೈರ್ಯ ಮಾಡಿ ಅವಳಿಗೆ ವಾಟ್ಸ್ ಆ್ಯಪ್‌ ನಲ್ಲಿ ಮೆಸೇಜ್‌ ಮಾಡಿದ ತಿಲಕ್‌.

ಸ್ವಲ್ಪ ಸಮಯ ತೆಗೆದುಕೊಂಡ ಜಾಯ್‌, “ಐ ಡೋಂಟ್‌ ಹ್ಯಾವ್ ‌ಎನಿ ಪ್ರಾಬ್ಲಂ. ಡು ಯು ಹ್ಯಾವ್ ‌ಎನಿ ಪ್ರಾಬ್ಲಂ. ವೈ ಡು ಯೂ ಥಿಂಕ್‌ ಡಟ್ಸ್ ಯುವರ್‌ ವೀಕ್ನೆಸ್‌,” ಎಂದು ಬೋಲ್ಡಾಗಿ ಮೆಸೇಜ್‌ ಮಾಡಿದಳು.

ಆ ಉತ್ತರ ನೋಡಿದವನೇ ತಿಲಕ್‌ ಜಾಯ್‌ ಗೆ ಕರೆ ಮಾಡಿ ಒಂದೇ ಸಮನೆ ಅಳಲು ಪ್ರಾರಂಭಿಸಿದ. ಜಾಯ್‌ ಮಗುವನ್ನು ಸಮಾಧಾನಿಸುವಂತೆ ಸಮಾಧಾನಿಸಿದಳು.

“ನಾಳೆ ನೀನು ರಜೆ ತಗೋ, ನಾನು ರಜೆ ಹಾಕ್ತೀನಿ. ಇಬ್ಬರೂ ಎಲ್ಲಾದರೂ ದೂರ ಹೋಗಿ ಮಾತನಾಡೋಣ,” ಎಂದು ಹೇಳಿದ್ದೇ ತಡ ತಿಲಕ್‌ ಕೂಡ ಸ್ವರ್ಗಕ್ಕೆ ಮೂರೇ ಗೇಣು ಎಂದು ಹೊರಟು ನಿಂತ. ಜಾಯ್‌ ಮತ್ತು ತಿಲಕ್‌ ರ ಆ ಭೇಟಿ ಅತ್ಯಂತ ಮಹತ್ವದ್ದಾಗಿತ್ತು. ಅವರಿಬ್ಬರ ಬದುಕಿನ ಮಹತ್ವದ ದಿನ ಅದಾಗಿತ್ತು.

ಜಾಯ್‌ ತಿಲಕ್‌ ನನ್ನು ಕುರಿತು, “ಕ್ರಾಸ್‌ ಡ್ರೆಸರ್‌ ಎಂದು ಏಕೆ ಭಯಪಟ್ಟೆ. ಅದರಲ್ಲೇನಿದೆ? ಬಟ್ಟೆ ಹಾಕುವುದು ನಮ್ಮ ಸ್ವಾತಂತ್ರ್ಯ. ಆದರೆ ಸ್ವೇಚ್ಛೆ ಅಲ್ಲ ಅದರ ಅರಿವು ನನಗಿದೆ. ನಿನ್ನ ಭಾವನೆ ನನಗೆ ಅರ್ಥವಾಗುತ್ತದೆ. ನೀನು ಇದಕ್ಕೆ ಅಂಜಬೇಕಾಗಿಲ್ಲ. ನಿನಗೆ ಗೊತ್ತಾ? ಮೊದ ಮೊದಲು ಹೈ ಹೀಲ್ಡ್ಸ್ ಹಾಕುತ್ತಿದ್ದವರು ಗಂಡಸರೇ! ನಾಗರಿಕತೆ ಮುಂದುವರಿದಂತೆ ಹೆಣ್ಣು ಮಕ್ಕಳೂ ಹೀಲ್ಸ್ ಹಾಕಲು ಆರಂಭಿಸಿದರು. ಕ್ರಾಸ್‌ ಡ್ರೆಸಿಂಗ್‌ ನನಗೂ ಇಷ್ಟ. ನಿನ್ನಂಥವರಲ್ಲಿ ನಿಷ್ಕಲ್ಮಶ ಪ್ರೀತಿ ಇರುತ್ತದೆ. ಸಂಗಾತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಸಂಗಾತಿ ಮಾತ್ರವಲ್ಲ, ಸಂಪ್ರೀತಿ ತೋರುವ ಗೆಳತಿಯೂ ಆಗಿರುತ್ತಾರೆ,” ಎಂದು ಹೇಳಿದಳು.

ಇದರಿಂದ ಭಾವೋದ್ವೇಗಕ್ಕೆ ಒಳಗಾದ ತಿಲಕ್‌, ಖುಷಿಯಿಂದ ತಕ್ಷಣ ತಾಯಿಗೆ ಕರೆ ಮಾಡಿ, ತಾನು ಆರಿಸಿಕೊಂಡ ಗೆಳತಿಯ ಬಗ್ಗೆ ಸಂತೋಷದಿಂದ ಹೇಳಿದ. ತನ್ನ ಹೆಣ್ಣುಡುಗೆ ಬಗ್ಗೆ ಅವಳಿಗೂ ಸಮ್ಮತವಿದೆ ಎಂಬ ವಿಚಾರವನ್ನು ಅಷ್ಟೇ ಆತ್ಮವಿಶ್ವಾಸದಿಂದ ಹೇಳಿದ.

ತಿಲಕ್‌ ನ ತಾಯಿ ತಂದೆಯರಿಗೆ ಇನ್ನಿಲ್ಲದ ಸಂತೋಷ. ಸಮಸ್ಯೆ ಹೂವಿನಷ್ಟು ಹಗುರವಾಗಿ ಬಗೆಹರಿದದ್ದು ಅವರಿಗೆ ಸಮಾಧಾನವಾಗಿತ್ತು. ಮಗನ ಮದುವೆಯನ್ನು ವಿದೇಶಿ ನೆಲದಲ್ಲೇ ಮಾಡಲು ನಿರ್ಧರಿಸಿದರು. ತಿಲಕ್‌ ನನ್ನು ಭಾವಿ ಅಳಿಯನನ್ನಾಗಿ ಮನಸಾರೆ ಸ್ವೀಕರಿಸಿದ ಭಾವೀ ಬೀಗರನ್ನು ಸಂಪರ್ಕಿಸಿ ಸಂತೋಷ ಹಂಚಿಕೊಂಡರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ