ತವರಿನ ಕಣ್ಮಣಿಯಾಗಿದ್ದ ಪ್ರಕೃತಿ, ತಾನಾಗಿ ಆಸೆ ಪಟ್ಟು ನಿಹಾಲ್ ನನ್ನು ಮದುವೆಯಾಗಿ ವಿದೇಶಕ್ಕೆ ಹಾರಿದಳು. ಆದರೆ ಅವಳಿಗೆ ಭಾರತದಲ್ಲಿಯೇ ಇದ್ದು ತನ್ನ ವೈದ್ಯ ವೃತ್ತಿ ಮುಂದುವರಿಸಬೇಕೆಂದು, ವಿದೇಶಿ ಯಾಂತ್ರಿಕ ಜೀವನ ತೊರೆದು ಭಾರತಕ್ಕೆ ಮರಳಿದಳು. ಇದರಿಂದ ಅವಳ ವೈವಾಹಿಕ ಜೀವನಕ್ಕೆ ಧಕ್ಕೆಯಾಯಿತೇ...? ಮುಂದೆ ಇವರ ಬದುಕು ಏನಾಯಿತು.....?
ಗಿರಿಧರ್ ಬ್ಯಾಂಕ್ ನಲ್ಲಿ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಗಿರಿಧರ್ ಮತ್ತು ರಾಧಾ ದಂಪತಿಗಳಿಗೆ ಇಬ್ಬರು ಮಕ್ಕಳು ಪ್ರಮೋದ್ ಮತ್ತು ಪ್ರಕೃತಿ. ಪ್ರಮೋದ್ ಹುಟ್ಟಿದ ಮೂರು ವರ್ಷದ ನಂತರ ಪ್ರಕೃತಿ ಜನಿಸಿದಳು. ಒಬ್ಬಳೇ ಮಗಳು ಎಂದು ತುಂಬಾ ಮುದ್ದಿನಿಂದ ಬೆಳೆಸಿದರು ಅವಳ ಪೋಷಕರು. ಅಣ್ಣ ತಂಗಿ ಇಬ್ಬರಿಗೂ ಕಡಿಮೆ ಅಂತರ ಇದ್ದ ಕಾರಣ ಒಳ್ಳೆಯ ಸ್ನೇಹಿತರಂತೆ ಇದ್ದರು.
ಪ್ರಕೃತಿ ಸ್ನೇಹ ಜೀವಿ, ಎಲ್ಲರೊಡನೆ ಬೇಗ ಬೆರೆತು ಆತ್ಮೀಯತೆ ತೋರುತ್ತಿದ್ದಳು. ಹಾಗಾಗಿ ಅವಳ ಬಡಾವಣೆಯವರಿಗೆಲ್ಲಾ ಅವಳು ಅಚ್ಚುಮೆಚ್ಚು. ಎಲ್ಲರ ಅಕ್ಕರೆಯ ಮಗಳು ಅವಳು. ಓದಿನಲ್ಲೂ ಅಷ್ಟೇ ಬಲು ಜಾಣೆ. ಯಾವಾಗಲೂ ಮೊದಲ ರಾಂಕ್. ಪಿಯುಸಿಯಲ್ಲಿ ಅತ್ಯುತ್ತಮ ಫಲಿತಾಂಶ ಬಂತು. ವೈದ್ಯೆ ಆಗಬೇಕು, ಜನರ ಸೇವೆ ಮಾಡಬೇಕು, ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು ಎಂಬ ಆದರ್ಶ ಹೊತ್ತು ಮೆಡಿಕಲ್ ಗೆ ಸೇರಿಕೊಂಡಳು.
ಅವಳ ಅಣ್ಣ ಪ್ರಮೋದ್ ಎಂಜಿನಿಯರಿಂಗ್ ತೆಗೆದುಕೊಂಡಿದ್ದ. ಮನೆಯವರು ಕೂಡ ಪ್ರಕೃತಿಗೆ ಎಲ್ಲಾ ವಿಷಯಗಳಿಗೂ ಎಲ್ಲಾ ಸಾಧನೆಗಳಿಗೂ ಪ್ರೋತ್ಸಾಹಿಸುತ್ತಿದ್ದರು. ಮೆಡಿಕಲ್ ಗೆ ಸೇರಿದ ಮೇಲೂ ತನ್ನ ಪರಿಶ್ರಮದಿಂದ ಉತ್ತಮ ಅಂಕ ಗಳಿಸಿ ತೇರ್ಗಡೆಯಾದಳು.
ಹೌಸ್ ಸರ್ಜನ್ ಕೋರ್ಸ್ ಮಾಡುವಾಗ ಡಾ. ನಿಹಾಲ್ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಡಾ. ನಿಹಾಲ್ ಚಿಕಿತ್ಸೆ ಕೊಡುವ ರೀತಿ, ರೋಗಿಗಳನ್ನು ಕಾಳಜಿ ಮಾಡುವ ಹಾಗೂ ಅವರೊಡನೆ ತೋರುವ ಆತ್ಮೀಯತೆ ತುಂಬಿದ ಧೈರ್ಯದ ನುಡಿಗಳು, ಅವನ ಶ್ರದ್ಧೆ, ಗುಣಕ್ಕೆ ಮನಸೋತಳು ಪ್ರಕೃತಿ. ನಿಹಾಲ್ ಗೂ ಅಷ್ಟೇ ಪ್ರಕೃತಿಯ ಮಾತು, ಅವಳ ಚುರುಕು ಬುದ್ಧಿ, ಉತ್ಸಾಹ, ಅವಳಲ್ಲಿನ ಲವಲವಿಕೆ ಎಲ್ಲ ತುಂಬಾ ಇಷ್ಟವಾಯಿತು.
ಅವರ ಸ್ನೇಹ ಅನುರಾಗವಾಗಿ ಬದಲಾಗಲು ಹೆಚ್ಚು ದಿನ ಬೇಕಾಗಲಿಲ್ಲ. ಒಂದು ದಿನ ಪ್ರಕೃತಿಯನ್ನು ಊಟಕ್ಕೆಂದು ಆಹ್ವಾನಿಸಿದ ನಿಹಾಲ್. ಇಬ್ಬರೂ ಊಟಕ್ಕೆ ಹೊರಗೆ ಹೋದರು. ಸಮಯ ನೋಡಿ ಪ್ರಕೃತಿಯನ್ನು ಕುರಿತು, ``ಪ್ರಕೃತಿ ಐ ಲವ್ ಯೂ ಸೋ ಮಚ್. ಇಡೀ ಜೀವನವನ್ನು ನಿನ್ನ ಜೊತೆ ಜೊತೆಯಲ್ಲೇ ಹೆಜ್ಜೆ ಹಾಕುವ ಆಸೆ ನನಗೆ. ನನ್ನ ಬದುಕಿಗೆ ಸ್ವಾತಿ ಮುತ್ತು ನೀನು. ನೀನಿಲ್ಲದೆ ಈ ಬದುಕು ಅರ್ಥಹೀನ. ಹೇಳು ಪ್ರಕೃತಿ, ನೀನು ನನ್ನನ್ನು ಮದುವೆ ಆಗ್ತೀಯಾ.....?''
ಪ್ರಕೃತಿ ಐದು ನಿಮಿಷ ಸುಮ್ಮನೆ ಇದ್ದಳು. ನಿಹಾಲ್ ನನ್ನು ಕಂಡು ಒಳಗೊಳಗೆ ನಗುತ್ತಾ ನಿಧಾನವಾಗಿ, ``ನಿಹಾಲ್ ಐ ಟೂ ಲವ್ ಯೂ ಸೋ ಮಚ್! ಖಂಡಿತವಾಗಿಯೂ ನಿನ್ನನ್ನು ಬಿಟ್ಟು ನಾನು ಇನ್ನು ಯಾರನ್ನೂ ಮದುವೆಯಾಗಲಾರೆ. ನಾವು ಮದುವೆ ಆಗೋಣ,'' ಎಂದಳು.





