ಮದುವೆ ಆಗುವಾಗಲೇ ಅವಿಭಕ್ತ ಕುಟುಂಬ ಇರಬಾರದು ಎಂಬ ಷರತ್ತನ್ನು ಒಡ್ಡಿ, ಶಮಂತಾ ತಾನು ಅಂದುಕೊಂಡಂಥ ಹುಡುಗನನ್ನೇ ಆರಿಸಿ ಮದುವೆಯಾದಳು. ವಿಭಕ್ತ ಕುಟುಂಬದಲ್ಲಿ ಅವಳು ಅಂದುಕೊಂಡಿದ್ದ ಐಷಾರಾಮಿ ಬದುಕು ಸಿಕ್ಕಿತು. ಆದರೆ ಕೈಗೆ ಬರಲಿದ್ದ ಮಗ, ಕಣ್ಣ ಮುಂದೆಯೇ ಕೆಟ್ಟು ಹೋಗುವುದನ್ನು ನೋಡಿ ಮನಶ್ಶಾಂತಿ ಕಳೆದುಕೊಂಡಳು. ಮುಂದೆ ಅವಳ ಸಂಸಾರ ಏನಾಯಿತು.....?
``ಶಮಂತಾ, ಶಮಂತಾ....'' ಎಂದು ಕೂಗುತ್ತಲೇ ಮನೆಯೊಳಗೆ ಬಂದ ಸುಮೇಶ. ಹಾಲ್ ನಲ್ಲಿ ಟಿವಿ ಮುಂದೆ ಕುಳಿತಿದ್ದ ಮಗಳು ಶಮಂತಾ, ``ಇಲ್ಲೇ ಇದ್ದೀನಿ, ಹೇಳಿ ಪಪ್ಪಾ....'' ಎಂದಳು.
``ಅಮ್ಮನನ್ನು ಕರಿ....'' ಎಂದ.
ಅಂದು ಭಾನುವಾರ. ಗೆಳೆಯನನ್ನು ಭೇಟಿ ಮಾಡಿ ಬರುತ್ತೇನೆಂದು ಹೋಗಿದ್ದ ಸುಮೇಶ. ಅಲ್ಲಿ ಗೆಳೆಯ ಮಗಳಿಗೆ ಒಂದು ಹುಡುಗನ ವಿಷಯ ಹೇಳಿ ಫೋನ್ ನಂಬರ್ ಕೊಟ್ಟಿದ್ದ. ಮೂರು ಜನ ಹೆಣ್ಣು ಮಕ್ಕಳಲ್ಲಿ ಶಮಂತಾ ಮೊದಲನೆಯವಳು. ಎಂ.ಎಸ್ಸಿ ಮಾಡಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಳು. ಸಂಡೆ ಸೇರಿ ಮೂರು ದಿನ ರಜೆ ಇದೆಯೆಂದು ಮೈಸೂರಿಗೆ ಬಂದಿದ್ದಳು. ಈ ಹುಡುಗನನ್ನಾದರೂ ತನ್ನ ಹೆಂಡತಿ, ಮಗಳು ಒಪ್ಪಿಕೊಂಡರೆ ಸಾಕು ಅಂದುಕೊಂಡೇ ಮನೆಗೆ ಬಂದಿದ್ದ ಸುಮೇಶ.
ಅಡುಗೆ ಮನೆಯಿಂದ ಬಂದ ಜಯಶ್ರೀ, ``ಏನ್ರೀ.....!! ಅಷ್ಟು ಜೋರಾಗಿ ಕೂಗುತ್ತಾ ಬಂದಿರಿ?'' ಎಂದು ಸೆರಗಿಗೆ ಕೈ ಒರೆಸುತ್ತಾ ಕೇಳಿದಳು.
``ನೋಡೇ..... ನನ್ನ ಫ್ರೆಂಡ್ ಗಣೇಶ ಒಬ್ಬ ಹುಡುಗನ ಬಗ್ಗೆ ಹೇಳಿದ, ಇದು ಶಮ್ಮಿಗೆ ಆಗಬಹುದು ಅಂದುಕೊಂಡೆ,'' ಎಂದ.
``ಹುಡುಗ ನಮ್ಮ ಊರಿನ ಕಡೆಯವನು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾನಂತೆ, ಬೆಂಗಳೂರಿನಲ್ಲಿ ಕೆಲಸ. ಊರಿನಲ್ಲಿ ಗದ್ದೆ, ತೋಟ, ಮನೆ ಇದೆಯಂತೆ. ಇಬ್ಬರೇ ಗಂಡುಮಕ್ಕಳು, ಶಮ್ಮಿಗಿಂತ ಎರಡು ವರ್ಷ ದೊಡ್ಡವನು,'' ಎಂದ.
``ನೋಡೇ ಶಮಂತಾ, ಅಪ್ಪ ಅಮ್ಮ ಊರಿನಲ್ಲಿ ಇರುತ್ತಾರೆ. ಹುಡುಗ ಎಂಜಿನಿಯರ್ ಬೇರೆ. ಅತ್ತೆ ನಾದಿನಿ ಯಾರ ಜಂಜಾಟವಿಲ್ಲ. ನೋಡೋಣಾ.....?'' ಎಂದಳು ಜಯಶ್ರೀ.
``ಸರಿ ಆಯಿತು ಹುಡುಗನನ್ನು ನೋಡೋಣ,'' ಎಂದಳು ಶಮಂತಾ.
ಎರಡು ವರ್ಷಗಳಿಂದ ಅವಳಿಗೆ ಹುಡುಗನನ್ನು ನೋಡುತ್ತಿದ್ದರು. ಅವಳದು ಒಂದೇ ಹಠ, ಕೂಡು ಕುಟುಂಬ ಬೇಡ, ಅಪ್ಪ ಅಮ್ಮ ಊರಿನಲ್ಲಿ ಇದ್ದು ಹುಡುಗ ಒಬ್ಬನೇ ಬೆಂಗಳೂರಿನಲ್ಲಿ ಇರಬೇಕು, ಓದಿರಬೇಕು.... ಗಾಡಿ, ಫ್ಲಾಟ್ ಇರಬೇಕು ಅಂತ.
ಇದು ಎಲ್ಲಾ ರೀತಿಯಿಂದಲೂ ಸರಿ ಎಂದು ಯೋಚಿಸಿ ಸುಮೇಶ ಗೆಳೆಯನಿಗೆ ಹೇಳಿದ. ಮುಂದಿನವಾರ ಬೆಂಗಳೂರಿಗೆ ಬರುತ್ತೀವಿ, ತಮ್ಮ ಅಣ್ಣನ ಮನೆಯಲ್ಲಿ ಹುಡುಗಿ ನೋಡು ಶಾಸ್ತ್ರವಾಗಲಿ ಎಂದ.
ಸುಮೇಶನ ಅಣ್ಣನ ಮನೆಗೆ ಬರಲು ಹುಡುಗನಿಗೆ ಹೇಳಿದರು. ಹುಡುಗ ಹುಡುಗಿ ಒಪ್ಪಿಕೊಂಡ ಮೇಲೆ ಹುಡುಗನ ಮನೆಗೆ ಹೋಗುವುದು ಎಂದು ತೀರ್ಮಾನಿಸಿಕೊಂಡರು. ಹುಡುಗ ಶಶಾಂಕ್, ಅವನ ಅಪ್ಪನಿಗೆ ಸುಮೇಶನ ಗೆಳೆಯನೇ ಫೋನ್ ಮಾಡಿ ವಿಷಯ ತಿಳಿಸಿದ. ಸರಿ ಆಯಿತು ಹಾಗೆ ಮಾಡಲಿ, ಶಶಾಂಕ್ ಒಪ್ಪಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು. ಶಶಾಂಕನ ಅಪ್ಪ ಹೇಳಿದಂತೆ ಮುಂದಿನ ವಾರ ಬೆಂಗಳೂರಿಗೆ ಬಂದರು. ಶಮಂತಾ ಇಲ್ಲೇ ಇರುವ ಕಾರಣ ಮೈಸೂರಿನಿಂದ ಸುಮೇಶ ಹಾಗೂ ಜಯಶ್ರೀ ಇಬ್ಬರೇ ಬಂದರು.





