ಅನಿವಾರ್ಯ ಪರಿಸ್ಥಿತಿಗಳಿಂದ ಅವಿವಾಹಿತೆ ಅರುಂಧತಿ, ಕಸೀನ್ ಶೃತಿಗಾಗಿ ಮಗು ಹೆತ್ತು ಕೊಟ್ಟು ದೂರ ಹೋಗುವ ಪ್ರಸಂಗ ಎದುರಾಯಿತು. ಸದಾ ತನ್ನ ಮಗುವಿಗಾಗಿ ಹಂಬಲಿಸುತ್ತಿದ್ದ ಅರುಂಧತಿಗೆ ಮುಂದೆ ಆ ಮಗುವಿನ ತಾಯಿಯಾಗುವ ಅವಕಾಶ ಸಿಕ್ಕಿತೇ......?
ಅರುಂಧತಿ ಮೊಬೈಲ್ ನಲ್ಲಿ ಬಂದಿದ್ದ ವಾಟ್ಸ್ ಆ್ಯಪ್ ನಲ್ಲಿನ ಆ ಜಾಹೀರಾತನ್ನು ಮತ್ತೆ ಮತ್ತೆ ಓದುತ್ತಿದ್ದವಳಿಗೆ ಎಂಥ ವಿಪರ್ಯಾಸ ಅಲ್ಲವೇ ಎನಿಸಿತ್ತು.
ಬಾಡಿಗೆ ತಾಯಿಯ ಕೆಲಸವೆಂದರೆ ಗರ್ಭಿಣಿಯಾಗಲು ಚುಚ್ಚಿಸಿಕೊಂಡು ತಾನು ಗರ್ಭಿಣಿ ಎಂದು ತಿಳಿದು ಎಚ್ಚರಿಕೆಯಿಂದ ಇದ್ದು ಮಗುವನ್ನು ನವಮಾಸ ಹೊತ್ತು ಹೆತ್ತು ಆ ಆನಂದ ಅನುಭವ, ಕಂದನ ಸಂಚಲನ ಏನನ್ನೂ ಅನುಭವಿಸಲು ಆನಂದಪಡಲೂ ಆಗದೇ ಕರುಳಬಳ್ಳಿ ಕತ್ತರಿಸಿಕೊಂಡು ಕೊಟ್ಟರೆ ಆಯಿತು. ಮುಂದೆ ಮಗುವಿಗೂ ಹೆತ್ತವಳಿಗೂ ಯಾವ ಸಂಬಂಧ ಇರುವುದಿಲ್ಲ. ತನ್ನ ಕರುಳಿನ ಕುಡಿಯನ್ನು ನೋಡುವ ಅವಕಾಶ ಇರುವುದಿಲ್ಲ. ಬಾಡಿಗೆ ತಾಯಿಯಾಗಲು ಸಿದ್ಧರಾಗಿರುವ ಆರೋಗ್ಯವಂತ ಇಪ್ಪತ್ತೈದು ವರ್ಷದೊಳಗಿನ ತರುಣಿಯರು ಬೇಕು ಎಂಬ ವಾಟ್ಸ್ ಆ್ಯಪ್‌ನಲ್ಲಿ ಬಂದಿದ್ದವು, ಯಾರೋ ಅನಾಮಿಕರು ಕಳುಹಿಸಿದ್ದ ಮೆಸೇಜ್ ನೋಡಿದ ಅರುಂಧತಿಗೆ ತನ್ನ ಜೀವನದಲ್ಲಿ ಆದ ಕಹಿ ಅನುಭವ ನೆನಪಿಗೆ ಬಂದು, ಹೃದಯ ಹಿಂಡಿದಷ್ಟು ನೋವಾಗಿತ್ತು.
ತಾನು ಸಹ ಶೃತಿಗಾಗಿ ಹೆತ್ತು ಕೊಟ್ಟದ್ದು ಬಾಡಿಗೆಯ ತಾಯಿಯಾಗಿಯೇ ಅಲ್ಲವೇ? ಆ ನನ್ನ ಕರುಳ ಕುಡಿಯ ಮೇಲೆ ನನಗ್ಯಾವ ಹಕ್ಕೂ ಇಲ್ಲ. ಅದನ್ನು ನೋಡುವ, ಮುಟ್ಟುವ ಅಧಿಕಾರವೂ ಇಲ್ಲ ಎಂಬ ಷರತ್ತಿನ ಮೇಲೆ ಅಲ್ಲವೇ ಮಗುವನ್ನು ಹೆತ್ತು ಕೊಟ್ಟ ಮೂರು ತಿಂಗಳ ಕಾಲ ಆ ಪುಟ್ಟ ಕಂದನಿಗೆ ಹಾಲುಣಿಸಿದ್ದನ್ನು ಹೇಗೆ ತಾನೇ ಮರೆಯಲಿ?
ಆದರೆ ನಾನು ಯಾರದ್ದೋ ವೀರ್ಯವನ್ನು ಇಂಜೆಕ್ಷನ್ ಮೂಲಕ ಪಡೆಯದೇ ಕತ್ತಲಿನಲ್ಲಿ ಅವನನ್ನು ಅಂದರೆ ಶ್ರುತಿಯ ಪತಿ ಮನೋಹರ್ ನನ್ನು ತನ್ನ ಗಂಡನೆಂದೇ ತಿಳಿದು ತನ್ನನ್ನು ತಾನು ಸಮರ್ಪಿಸಿಕೊಂಡದ್ದು ಹೇಗೆ ತಾನೇ ಮರೆಯಲಿ?
ದೊಡ್ಡಮ್ಮನ ಹೇಳಿಕೆಯಂತೆ ಮದುವೆಯಿಲ್ಲದೆಯೇ ಒಂದಲ್ಲ ಎರಡಲ್ಲ, ಅವರು ಹೇಳಿದ್ದ ಸುಮೂಹರ್ತಗಳಲ್ಲಿ ಅವನ ಬಾಹುಗಳಲ್ಲಿ ಹಿತವಾಗಿ ಸುಖಿಸಿದ್ದು ಅದೊಂದು ಸವಿನೆನಪು ಮಾತ್ರವೇ..... ಅವನು ತನ್ನನ್ನು ಗುರುತಿಸಿ ಹುಡುಕಿಕೊಂಡು ಬರುತ್ತಾನೆ ಎಂದೆಲ್ಲಾ ನಂಬಿಕೊಂಡು ಮೈ ಮರೆತು ಚಾತಕಪಕ್ಷಿಯಂತೆ ಕಾದ ದಿನಗಳು ಅದೆಷ್ಟು? ಯಾವುದೂ ನಿಜವಾಗದೆ ಭ್ರಮನಿರಸನವಾಗಿದ್ದು, ಈಗ ಹಳೆಯ ಮಾಸಿದ ನೆನಪು ಮಾತ್ರ. ಆ ಕಂದ ಹೇಗಿದ್ದಾನೋ? ಯಾರಂತೆ ಇದ್ದಾನೋ? ಸುಮಾರು ಆರು ವರ್ಷದವನಿರಬೇಕು ಈಗ ತನ್ನ ಕಂದ. ಯೋಚಿಸುತ್ತಾ ಕುಳಿತ ಆರುಂಧತಿಯನ್ನು ಗತಕಾಲದ ಆ ನೆನಪು ಬಹಳ ಹಿಂದಕ್ಕೆ ಕೊಂಡೊಯ್ಯಿತು.
ಅರುಂಧತಿ ಹಾಗೂ ಅವಳ ತಂದೆ ಸದಾಶಿವ ರಾಯರು ತಾಯಿ ಸಾವಿತ್ರಿಬಾಯಿ ಕೆಂಚೇನಹಳ್ಳಿಯಲ್ಲಿನ ವಿಠ್ಠಲ್ ರಾವ್ ಜೋಡಗೆಯರ ದೊಡ್ಡ ಮನೆಯಲ್ಲಿ ಅವರ ಆಡಳಿತದಲ್ಲಿ ಸುಖವಾಗಿ ಕೂಡು ಕುಟುಂಬದಲ್ಲಿದ್ದರು. ಆದರೆ ಅವರು ಆ ಆನಂದ ಅನುಭವಿಸಿದ್ದು ಕ್ಷಣಿಕ ಕಾಲವಷ್ಟೆ.
ಅರುಂಧತಿಯ ತಂದೆ ಸದಾಶಿವ ರಾಯರನ್ನು ಹೆತ್ತದ್ದು ಅವರ ತಂದೆ ವಿಠ್ಠಲ್ ರಾವ್ ಇಟ್ಟುಕೊಂಡಿದ್ದ ಬಡ ಹುಡುಗಿ ಭವಾನಿ ಎಂಬಾಕೆ. ಅವರಿಬ್ಬರ ಪ್ರೇಮದ ಫಲವೇ ಸದಾಶಿವರಾಯ. ಭವಾನಿಯನ್ನು ದೇವರ ಸಾಕ್ಷಿಯಾಗಿ ಅವರು ಮದುವೆಯಾಗಿದ್ದರೂ ಸಹ ಅವರಿಗೇ ಜೋಡಗೆ ಕುಟುಂಬದಲ್ಲಿರಲು ಅನುಮತಿ ದೊರಕಿರಲಿಲ್ಲ. ಕಾರಣ ವಿಠ್ಠಲ್ ರಾವ್ ರ ಧರ್ಮಪತ್ನಿ ಗೌರಿ ಬಾಯಿ.