ಓದಿನಲ್ಲಿ ಚುರುಕಾಗಿದ್ದ ಚಮೇಲಾ ಇದ್ದಕ್ಕಿದ್ದಂತೆ ವಿಚಿತ್ರವಾಗಿ ಆಡಲಾರಂಭಿಸಿದಳು. ಮಗಳಿಗೆ ಬಂದಿರುವ ಹೀನಸ್ಥಿತಿ ಕಂಡು ತಾಯಿ ತಂದೆ ಬಹಳ ಹೆದರಿದರು. ಅದಕ್ಕಾಗಿ ಬೆಟ್ಟಕ್ಕೆ ಹರಕೆ ತೀರಿಸಲು ಹೋಗಿದ್ದೂ ಆಯಿತು. ಮುಂದೆ ಈ ಸಮಸ್ಯೆ ಬಗೆಹರಿದದ್ದು ಹೇಗೆ.....?
ಚಮೇಲಾ ರೂಪವತಿ, ಕೋಮಲ ಕನ್ಯೆ, ಗಂಧರ್ವ ಕನ್ಯೆಯಂತೆ ನೋಡುಗರ ಹೃದಯವನ್ನು ಜಲ್ಲೆನಿಸುವ ಲಾವಣ್ಯವತಿ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕಲಿಯುತ್ತಿದ್ದ ಈಕೆ ಇತ್ತೀಚೆಗೆ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ. ಕಾರಣ ಯಾರಿಗೂ ಗೊತ್ತಿಲ್ಲ. ಇವಳನ್ನು ನಿಮ್ಹಾನ್ಸ್ ಗೆ ಕರೆದುಕೊಂಡು ಹೋಗಿ ಸಿಟಿ ಸ್ಕ್ಯಾನ್, ನ್ಯೂರಾಲಜಿಸ್ಟ್ ಹೀಗೆ ಎಲ್ಲ ವೈದ್ಯರ ಹತ್ತಿರ ತೋರಿಸಿದರೂ ಬಂದ ರಿಪೋರ್ಟ್ ಒಂದೇ.... ಅದೇನೆಂದರೆ ಇವಳಿಗೇನು ಕಾಯಿಲೆ ಇಲ್ಲ ಎಂಬುದು. ತಾಯಿ ಸಂಕಮ್ಮನಿಗಂತೂ ಆಕೆಯ ಸ್ಥಿತಿ ನೋಡಿ ಕರುಳು ಕಿತ್ತು ಬಂದಾಗುತ್ತಿತ್ತು.
ದೇವರೇ ನನ್ನ ಮಗಳಿಗೆ ಯಾಕೆ ಹೀಗೆ ಶಿಕ್ಷೆ ಕೊಡುತ್ತೀಯಾ....? ನಿನಗೆ ಕರುಣೆ ಇಲ್ಲಿ...? ಲೋಕ ತಿಳಿಯದ ಕಂದನಿಗೆ ಮಾರಣಾಂತಿಕ ಸಂಕಟ ಕೊಟ್ಟೆಯಲ್ಲ ಎಂದು ಹಿಡಿ ಶಾಪ ಹಾಕುತ್ತಿದ್ದಳು.
ತಂದೆಯಾದ ಸುದರ್ಶನ ಹೆಂಡತಿಗೆ ಸಮಾಧಾನಪಡಿಸಿ, ``ಏನು ಮಾಡೋಕಾಗುತ್ತೆ ಎಲ್ಲಾ ನಮ್ಮ ಹಣೆಬರಹ ಅನುಭವಿಸಲೇಬೇಕು....'' ಎಂದು ಅಳುತ್ತಾ ಉತ್ತರ ನೀಡಿದ.
ಮಗಳು ಈ ರೀತಿ ಏಕೆ ವರ್ತಿಸುತ್ತಾಳೋ.... ನನಗಂತೂ ತಿಳಿಯದಾಗಿದೆ. ಒಬ್ಬಳೇ ಮಗಳು ಚಮ್ಮು (ಚಮೇಲಾ) ಈ ರೀತಿ ಸಂಕಟಪಡುವ ಪಾಡು ಯಾ ವೈರಿಗೂ ಬೇಡ ಎಂದು ಕಲ್ಲು ಕರುಗುವಂತೆ ರೋದಿಸುತ್ತಿದ್ದರು.
ಚಮೇಲಾ ಈಗಿನ ಕಾಲದ ಹುಡುಗಿ. ದೆವ್ವ, ಭೂತ, ಪೀಡೆ ಪಿಶಾಚಿ ಇವುಗಳನ್ನು ಕೊಂಚ ನಂಬದ ಹೆಣ್ಣು. ಎಂ.ಟೆಕ್ಪ ಪದವೀಧರೆಯಾದ ಈಕೆ ರಾತ್ರಿ ಹೊತ್ತು ಯಾಕೆ ಹುಚ್ಚಳಂತೆ ವೇಷ ತಾಳುತ್ತಾಳೋ ಗೊತ್ತಾಗದೆ ಉಳಿಯಿತು.
ಒಮ್ಮೆ ಮನೆ ದೇವರ ಜಾತ್ರೆಗೆಂದು ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಈ ಫ್ಯಾಮಿಲಿ ಹೋಗಿತ್ತು. ಚಮೇಲಾಗೆ ನೌಕರಿ ಸಿಕ್ಕರೆ ಮಹದೇಶ್ವರನಿಗೆ ದೀರ್ಘದಂಡ ನಮಸ್ಕಾರ ಹಾಕುವ ಹರಕೆಯನ್ನು ತಾಯಿ ಸಂಕಮ್ಮ ಹೊತ್ತಿದ್ದಳು. ಅದಕ್ಕಾಗಿ ತಮ್ಮದೇ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಗಂಡ ಹೆಂಡತಿ ಮಗಳು ಕೂಡಿ ಹೊರಟರು.
ಯಾವುದೋ ಹಳೆಯ ಹರಕೆಯನ್ನು ತೀರಿಸಲಿಕ್ಕೆ ಬೆಟ್ಟಕ್ಕೆ ಹೊರಟರು. ಎಲ್ಲೆಲ್ಲೂ ಅಪ್ಪ ಮಾದಪ್ಪನ ಹಾಡು ಕುಣಿತದ ಮೋಜು ಕಣ್ಣುಗಳಿಗೆ ಖುಷಿ ತಂದಿದ್ದವು. ಏಳು ಮಲೆ ಬೆಟ್ಟದ ಒಡೆಯ ಮಾದಯ್ಯಂಗೆ ಉಘೇ ಅನ್ರಪ್ಪ ಎಂದೂ ಕುಡತದ ಗಾಯಕನೊಬ್ಬ ಹಾಡುತ್ತಿದ್ದ. ಇತ್ತ ಎಲ್ಲರೂ ಅಲ್ಲಿಯೇ ಇದ್ದ ನದಿಯಲ್ಲಿ ಮಿಂದು ಮಡಿಯಾದರು. ಚಮೇಲಾಗೆ ಸ್ನಾನ ಮಾಡುವಾಗ ಒಂದು ರೀತಿ ಮೈ ಜುಂ ಎಂದಂತಾಯಿತು. ಏಕೆ.... ಎಂದು ಯಾರಿಗೂ ಗೊತ್ತಾಗಲಿಲ್ಲ. ಬಟ್ಟೆ ಬದಲಿಸಿಕೊಂಡು ಎಲ್ಲರೂ ಕಾರ್ಯಕ್ರಮಕ್ಕೆ ಅಣಿಯಾದರು. ಅಮ್ಮ ನಮಸ್ಕಾರ ಹಾಕಿದಂತೆ ಮಗಳು ಅವಳಿಗೆ ಕಣ್ಣಿಗೆ ನೀರು ಚಿಮುಕಿಸುತ್ತಿದ್ದಳು. ಹೀಗೆ ಒಂದೂವರೆ ತಾಸುಗಳ ನಿರಂತರ ಕಾರ್ಯಕ್ರಮ ನಡೆದು, ತಾಯಿ ಮತ್ತೆ ನದಿಯಲ್ಲಿ ಮಿಂದು ಬಟ್ಟೆ ಬದಲಿಸಿ ಪೂಜೆಗೆ ಹೊರಟರು.





