ಮದುವೆ ಆಗುವಾಗಲೇ ಅವಿಭಕ್ತ ಕುಟುಂಬ ಇರಬಾರದು ಎಂಬ ಷರತ್ತನ್ನು ಒಡ್ಡಿ, ಶಮಂತಾ ತಾನು ಅಂದುಕೊಂಡಂಥ ಹುಡುಗನನ್ನೇ ಆರಿಸಿ ಮದುವೆಯಾದಳು. ವಿಭಕ್ತ ಕುಟುಂಬದಲ್ಲಿ ಅವಳು ಅಂದುಕೊಂಡಿದ್ದ ಐಷಾರಾಮಿ ಬದುಕು ಸಿಕ್ಕಿತು. ಆದರೆ ಕೈಗೆ ಬರಲಿದ್ದ ಮಗ, ಕಣ್ಣ ಮುಂದೆಯೇ ಕೆಟ್ಟು ಹೋಗುವುದನ್ನು ನೋಡಿ ಮನಶ್ಶಾಂತಿ ಕಳೆದುಕೊಂಡಳು. ಮುಂದೆ ಅವಳ ಸಂಸಾರ ಏನಾಯಿತು…..?
“ಶಮಂತಾ, ಶಮಂತಾ….” ಎಂದು ಕೂಗುತ್ತಲೇ ಮನೆಯೊಳಗೆ ಬಂದ ಸುಮೇಶ. ಹಾಲ್ ನಲ್ಲಿ ಟಿವಿ ಮುಂದೆ ಕುಳಿತಿದ್ದ ಮಗಳು ಶಮಂತಾ, “ಇಲ್ಲೇ ಇದ್ದೀನಿ, ಹೇಳಿ ಪಪ್ಪಾ….” ಎಂದಳು.
“ಅಮ್ಮನನ್ನು ಕರಿ….” ಎಂದ.
ಅಂದು ಭಾನುವಾರ. ಗೆಳೆಯನನ್ನು ಭೇಟಿ ಮಾಡಿ ಬರುತ್ತೇನೆಂದು ಹೋಗಿದ್ದ ಸುಮೇಶ. ಅಲ್ಲಿ ಗೆಳೆಯ ಮಗಳಿಗೆ ಒಂದು ಹುಡುಗನ ವಿಷಯ ಹೇಳಿ ಫೋನ್ ನಂಬರ್ ಕೊಟ್ಟಿದ್ದ. ಮೂರು ಜನ ಹೆಣ್ಣು ಮಕ್ಕಳಲ್ಲಿ ಶಮಂತಾ ಮೊದಲನೆಯವಳು. ಎಂ.ಎಸ್ಸಿ ಮಾಡಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಳು. ಸಂಡೆ ಸೇರಿ ಮೂರು ದಿನ ರಜೆ ಇದೆಯೆಂದು ಮೈಸೂರಿಗೆ ಬಂದಿದ್ದಳು. ಈ ಹುಡುಗನನ್ನಾದರೂ ತನ್ನ ಹೆಂಡತಿ, ಮಗಳು ಒಪ್ಪಿಕೊಂಡರೆ ಸಾಕು ಅಂದುಕೊಂಡೇ ಮನೆಗೆ ಬಂದಿದ್ದ ಸುಮೇಶ.
ಅಡುಗೆ ಮನೆಯಿಂದ ಬಂದ ಜಯಶ್ರೀ, “ಏನ್ರೀ…..!! ಅಷ್ಟು ಜೋರಾಗಿ ಕೂಗುತ್ತಾ ಬಂದಿರಿ?” ಎಂದು ಸೆರಗಿಗೆ ಕೈ ಒರೆಸುತ್ತಾ ಕೇಳಿದಳು.
“ನೋಡೇ….. ನನ್ನ ಫ್ರೆಂಡ್ ಗಣೇಶ ಒಬ್ಬ ಹುಡುಗನ ಬಗ್ಗೆ ಹೇಳಿದ, ಇದು ಶಮ್ಮಿಗೆ ಆಗಬಹುದು ಅಂದುಕೊಂಡೆ,” ಎಂದ.
“ಹುಡುಗ ನಮ್ಮ ಊರಿನ ಕಡೆಯವನು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾನಂತೆ, ಬೆಂಗಳೂರಿನಲ್ಲಿ ಕೆಲಸ. ಊರಿನಲ್ಲಿ ಗದ್ದೆ, ತೋಟ, ಮನೆ ಇದೆಯಂತೆ. ಇಬ್ಬರೇ ಗಂಡುಮಕ್ಕಳು, ಶಮ್ಮಿಗಿಂತ ಎರಡು ವರ್ಷ ದೊಡ್ಡವನು,” ಎಂದ.
“ನೋಡೇ ಶಮಂತಾ, ಅಪ್ಪ ಅಮ್ಮ ಊರಿನಲ್ಲಿ ಇರುತ್ತಾರೆ. ಹುಡುಗ ಎಂಜಿನಿಯರ್ ಬೇರೆ. ಅತ್ತೆ ನಾದಿನಿ ಯಾರ ಜಂಜಾಟವಿಲ್ಲ. ನೋಡೋಣಾ…..?” ಎಂದಳು ಜಯಶ್ರೀ.
“ಸರಿ ಆಯಿತು ಹುಡುಗನನ್ನು ನೋಡೋಣ,” ಎಂದಳು ಶಮಂತಾ.
ಎರಡು ವರ್ಷಗಳಿಂದ ಅವಳಿಗೆ ಹುಡುಗನನ್ನು ನೋಡುತ್ತಿದ್ದರು. ಅವಳದು ಒಂದೇ ಹಠ, ಕೂಡು ಕುಟುಂಬ ಬೇಡ, ಅಪ್ಪ ಅಮ್ಮ ಊರಿನಲ್ಲಿ ಇದ್ದು ಹುಡುಗ ಒಬ್ಬನೇ ಬೆಂಗಳೂರಿನಲ್ಲಿ ಇರಬೇಕು, ಓದಿರಬೇಕು…. ಗಾಡಿ, ಫ್ಲಾಟ್ ಇರಬೇಕು ಅಂತ.
ಇದು ಎಲ್ಲಾ ರೀತಿಯಿಂದಲೂ ಸರಿ ಎಂದು ಯೋಚಿಸಿ ಸುಮೇಶ ಗೆಳೆಯನಿಗೆ ಹೇಳಿದ. ಮುಂದಿನವಾರ ಬೆಂಗಳೂರಿಗೆ ಬರುತ್ತೀವಿ, ತಮ್ಮ ಅಣ್ಣನ ಮನೆಯಲ್ಲಿ ಹುಡುಗಿ ನೋಡು ಶಾಸ್ತ್ರವಾಗಲಿ ಎಂದ.
ಸುಮೇಶನ ಅಣ್ಣನ ಮನೆಗೆ ಬರಲು ಹುಡುಗನಿಗೆ ಹೇಳಿದರು. ಹುಡುಗ ಹುಡುಗಿ ಒಪ್ಪಿಕೊಂಡ ಮೇಲೆ ಹುಡುಗನ ಮನೆಗೆ ಹೋಗುವುದು ಎಂದು ತೀರ್ಮಾನಿಸಿಕೊಂಡರು. ಹುಡುಗ ಶಶಾಂಕ್, ಅವನ ಅಪ್ಪನಿಗೆ ಸುಮೇಶನ ಗೆಳೆಯನೇ ಫೋನ್ ಮಾಡಿ ವಿಷಯ ತಿಳಿಸಿದ. ಸರಿ ಆಯಿತು ಹಾಗೆ ಮಾಡಲಿ, ಶಶಾಂಕ್ ಒಪ್ಪಿದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದರು. ಶಶಾಂಕನ ಅಪ್ಪ ಹೇಳಿದಂತೆ ಮುಂದಿನ ವಾರ ಬೆಂಗಳೂರಿಗೆ ಬಂದರು. ಶಮಂತಾ ಇಲ್ಲೇ ಇರುವ ಕಾರಣ ಮೈಸೂರಿನಿಂದ ಸುಮೇಶ ಹಾಗೂ ಜಯಶ್ರೀ ಇಬ್ಬರೇ ಬಂದರು.
ಹುಡುಗನನ್ನು ನೋಡಿದ ತಕ್ಷಣ ಶಮಂತಾಳಿಗೆ ಬೇಡ ಎನ್ನಲು ಯಾವ ಕಾರಣ ಸಿಗಲಿಲ್ಲ. ಹುಡುಗ ತುಂಬಾ ಸುಂದರವಾಗಿದ್ದ. ಒಳ್ಳೆಯ ಕೆಲಸದಲ್ಲಿದ್ದಾನೆ, ಕೈ ತುಂಬಾ ಸಂಬಳ, ಅಲ್ಲದೆ ಊರಿನಲ್ಲಿ ಸ್ವಲ್ಪ ಆಸ್ತಿ ಇದೆ. ಅಮ್ಮ ಅಪ್ಪ ತಮ್ಮ ಪಾಡಿಗೆ ತಾವು ಊರಿನಲ್ಲಿ ಇರುತ್ತಾರೆ. ಬೆಂಗಳೂರಿನಲ್ಲಿ ತಾವಿಬ್ಬರೇ ಹಾಯಾಗಿ ಇರಬಹುದು. ತನ್ನ ಮನಸ್ಸಿನಲ್ಲಿ ಇರುವಂತಹ ಹುಡುಗನೇ ಇವನು. ಇಬ್ಬರೂ ಕೆಲಸಕ್ಕೆ ಹೋಗ್ತೀವಿ, ಬೆಂಗಳೂರಿನಲ್ಲಿ ಮನೆ ಸಹ ಕೊಂಡುಕೊಳ್ಳಬಹುದು, ಅಂತ ಲೆಕ್ಕಾಚಾರ ಹಾಕಿ ಒಪ್ಪಿಕೊಂಡರು.
ಶಶಾಂಕನೂ ಅಷ್ಟೇ ಹುಡುಗಿ ನೋಡಲು ಸುಂದರಿ, ಮಾಸ್ಟರ್ಸ್ ಡಿಗ್ರಿ ಮಾಡಿದ್ದಾಳೆ. ಹೆಚ್ಚು ಕಡಿಮೆ ತನ್ನಷ್ಟೇ ಸಂಬಳ ಬರುತ್ತದೆ. ಬೆಂಗಳೂರಿನಲ್ಲಿ ಒಬ್ಬರ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ಬೆಳೆದಿದ್ದು ಮೈಸೂರು ಆದರೂ ತಮ್ಮ ಊರಿನವರು ತಮ್ಮ ಭಾಷೆ ಸಂಪ್ರದಾಯ ಅನುಸರಿಸುವ ಹುಡುಗಿ ಅಂತ ಒಪ್ಪಿಕೊಂಡ.
ಎರಡು ಮನೆಯ ಹಿರಿಯರಿಗೂ ಇಷ್ಟವಾಗಿ ಮದುವೆಯಾಯಿತು. ಹೊಸ ಜೀವನ ಶುರುವಾಯಿತು. ಇಬ್ಬರೂ ಸೇರಿ ಅಡುಗೆ, ಮನೆ ಕೆಲಸ ಮುಗಿಸಿ ಕೆಲಸಕ್ಕೆ ಹೊರಡುತ್ತಿದ್ದರು. ಬೆಂಗಳೂರೇ ಆದರೂ ಇಬ್ಬರ ಆಫೀಸು ಬೇರೆ ಬೇರೆ ಕಡೆ. ಒಬ್ಬರದು ಉತ್ತರಕ್ಕಾದರೆ ಇನ್ನೊಬ್ಬರದು ದಕ್ಷಿಣ ಅನ್ನುವ ಹಾಗಿತ್ತು. ಶಮಂತಾಗೆ ಸ್ವಲ್ಪ ಹತ್ತಿರ ಇರುವ ಹಾಗೇ ಮನೆ ಮಾಡಿದರು.
ಮದುವೆಯಾದ ಮೊದ ಮೊದಲು ಹಬ್ಬಕ್ಕೆಲ್ಲಾ ಮೈಸೂರಿಗೂ ಹೋಗುತ್ತಿದ್ದರು. ಹಾಗೂ ಹೀಗೂ ವರ್ಷದಲ್ಲಿ ಎರಡು ಸಲ ಶಶಾಂಕನ ಊರಿಗೆ ಹೋದರೂ ಶಮಂತಾ ಎರಡು ದಿನದ ಮೇಲೆ ಅಲ್ಲಿ ಇರುತ್ತಿರಲಿಲ್ಲ. ಹಾಗೇ ಮೂರು ವರ್ಷ ಕಳೆಯಿತು.
ಶಮಂತಾ ಗರ್ಭಿಣಿಯಾದಳು, ಊರಿನಿಂದ ಅತ್ತೆ ಬಂದು ಸ್ವಲ್ಪ ದಿನ ಇದ್ದರು. ಅವಳಿಗೆ ಅತ್ತೆ ಮಾಡಿದ್ದು ಸರಿ ಬರುತ್ತಿರಲಿಲ್ಲ. ಅವಳು ಎಲ್ಲದರಲ್ಲೂ ಕ್ಲೀನ್. ಶಶಾಂಕನ ಅಮ್ಮ ಹಳ್ಳಿಯವರು. ದೊಡ್ಡ ಮನೆಯಲ್ಲಿ ಇದ್ದು ರೂಢಿ. ಚಿಕ್ಕ ಮನೆಯಲ್ಲಿ ಅವರಿಗೆ ಕಷ್ಟವಾಗುತ್ತಿತ್ತು. ಆದರೂ ಮಗನಿಗೋಸ್ಕರ ಇದ್ದರು.
ಗಂಡು ಮಗುವಾಯಿತು. ಆರು ತಿಂಗಳು ರಜೆ ಹಾಕಿದ್ದಳು. ಮೈಸೂರಿನಲ್ಲಿ ಬಾಣಂತನ ಆಯಿತು. ಆರು ತಿಂಗಳ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗಬೇಕು, “ಅಮ್ಮಾ… ನೀನು ಬಂದು ಸ್ವಲ್ಪ ದಿನ ನಮ್ಮ ಮನೆಯಲ್ಲಿ ಇರು,” ಎಂದು ಕರೆದಳು.
“ಆಗೋಲ್ಲ ಕಣೇ. ಇಲ್ಲಿ ನಿಮ್ಮಪ್ಪ, ತಂಗಿಯರಿಗೆ ಯಾರು ಮಾಡುತ್ತಾರೆ? ನಿಮ್ಮ ಅತ್ತೆಯನ್ನು ಕರೆಸಿಕೋ ಇಲ್ಲಾ ನೀನು ಕೆಲಸ ಬಿಟ್ಟು ಬಿಡು,” ಎಂದರು.
“ನೋ… ನೋ…! ಇಷ್ಟು ವರ್ಷ ಕಷ್ಟಪಟ್ಟು ಒಳ್ಳೆಯ ಹೆಸರು ಪೊಸಿಶನ್ ಸಂಪಾದಿಸಿರುವೆ. ಅಲ್ಲದೆ ಒಬ್ಬರ ಸಂಬಳದಲ್ಲಿ ಮಗುವಿನ ಖರ್ಚು, ಸ್ಕೂಲ್ ಫೀಸ್ ಎಲ್ಲಾ ನಿಭಾಯಿಸುವುದು ಕಷ್ಟ. ಊರಿನಲ್ಲಿ ಇರುವ ಆಸ್ತಿ ಮೈದುನನಿಗೆ ಆಗುತ್ತದೆ. ನಾವು ಒಂದು ಮನೆಯಾದರೂ ಮಾಡಿಕೊಳ್ಳಬೇಕು, ಇನ್ನೂ ಅತ್ತೆ ಬಂದರೆ ಅವರಿಗೆ ಏನೂ ತಿಳಿಯುವುದಿಲ್ಲ, ಒಂದು ತಿಂಗಳು ಬರುವ ಗ್ಯಾಸ್ ಹದಿನೈದು ದಿನದಲ್ಲಿ ಮುಗಿಸುತ್ತಾರೆ. ಅಡುಗೆಯೂ ಅಷ್ಟೇ ಊರಲ್ಲಿ ಜಾಸ್ತಿ ಮಾಡಿ ಆಳುಕಾಳುಗಳಿಗೆ ಕೊಟ್ಟು ರೂಢಿ. ಇಲ್ಲೂ ಅಷ್ಟೇ ಜಾಸ್ತಿ ಮಾಡಿ ದಂಡ ಮಾಡುತ್ತಾರೆ,” ಎಂದಳು.
ಈ ಕಾರಣಕ್ಕೆ ನಾನು ಅತ್ತೆ ಮಾವ ಇರುವ ಮನೆಯ ಹುಡುಗನನ್ನು ನೋಡುವಾ ಎಂದಿದ್ದು ಎಂದು ಮಧ್ಯೆ ನುಡಿದ ಸುಮೇಶ. ಮತ್ತೆ ಮದುವೆ ಮಾಡಿಸಿದ ಸುಮೇಶನ ಗೆಳೆಯನೇ ಊರ ಕಡೆಯವರ ಬೇಬಿ ಸಿಟ್ಟಿಂಗ್ ಸೆಂಟರ್ ಪರಿಚಯಿಸಿದ.
ಮಗುವನ್ನು ಅಲ್ಲಿ ಬಿಟ್ಟು ಕೆಲಸಕ್ಕೆ ಹೊರಟಳು ಶಮಂತಾ.
ಅಪ್ಪ ಅಮ್ಮ ಎಷ್ಟೋ ಹೇಳಿದರು, “ಶಮಂತಾ, ಮಗುವನ್ನು ಪ್ಲೇ ಹೋಮ್ ನಲ್ಲಿ ಬಿಡಬೇಡಾ ಕಣೇ. ಪಾಪ ಅದು ಮಕ್ಕಳಿಗೆ ಜೈಲು ತರ ಆಗುತ್ತದೆ. ಆ ಮಗುವಿನ ಬಾಲ್ಯ ಕಸಿಯಬೇಡವೇ…. ಮನೆಯಲ್ಲಿ ಮಕ್ಕಳು ತಾಯಿ ಜೊತೆ ಆಟವಾಡಿಕೊಂಡು ಇರಬೇಕು. ನೀನು ದುಡಿದದ್ದು ಸಾಕು, ಗಂಡ ದುಡಿತದಲ್ಲಿ ಸಂಸಾರ ನಿಭಾಯಿಸು,” ಎಂದರು. ಶಮಂತಾ ಕೇಳಲಿಲ್ಲ.
ಮಗ ಅಭಿಯನ್ನು ಸ್ಕೂಲಿಗೆ ಸೇರಿಸಿದ ಮೇಲೆ, ಸ್ಕೂಲು ಮುಗಿದ ತಕ್ಷಣ ಫ್ಲೇ ಹೋಮ್ ಗೆ ವಾಪಸ್ಸು ಬರುವ ವ್ಯವಸ್ಥೆ ಮಾಡಿದರು. ಕೆಲಸದಲ್ಲಿ ಶಶಾಂಕ್ ಮ್ಯಾನೇಜರ್ ಪೋಸ್ಟಿಗೆ ಹೋದ, ತುಂಬಾ ಕೆಲಸ. ಶಮಂತಾಳು ಅಷ್ಟೇ ಮ್ಯಾನೇಜರ್ ಆದಳು. ಉತ್ತಮ ಹುದ್ದೆಯಲ್ಲಿ ಇದ್ದ ಕಾರಣ ಅವಳಿಗೆ ತುಂಬಾ ಕೆಲಸ. ಬೆಳಗ್ಗೆ ಎಂಟೂವರೆಗೆ ಮನೆ ಬಿಟ್ಟರೆ ರಾತ್ರಿ ಎಂಟು ಗಂಟೆಯಾಗುತ್ತಿತ್ತು.
ಇಬ್ಬರಿಗೂ ಕಂಪನಿಯಿಂದ ಕಾರ್ ಕೊಟ್ಟಿದ್ದರು. ಶಮಂತಾ ಅಂದುಕೊಂಡ ಹಾಗೆ ಒಂದು ದೊಡ್ಡ ಮನೆಯನ್ನು ಕೊಂಡುಕೊಂಡರು. ಆದರೆ ಮಗು ಮಾತ್ರ ಸ್ಕೂಲ್, ಮುಗಿದ ನಂತರ ಪ್ಲೇ ಹೋಮ್ ಅಂತ ಬಾಲ್ಯದಲ್ಲೇ ಆಟ ಓಟವಿಲ್ಲದೆ ಮಂಕಾದ. ಹಾಗೆ ಓದುತ್ತಾ ಮಗ ಹೈಸ್ಕೂಲಿಗೆ ಬಂದ. ಇನ್ನು ಪ್ಲೇ ಹೋಮ್ ಬೇಡ ಅಂತ ಸ್ಕೂಲಿನಿಂದ ಬಂದು ಮನೆಯಲ್ಲೇ ಇರುತ್ತಿದ್ದ. ಹಸಿವಾದಾಗ ಪಕ್ಕದ ಬೇಕರಿಯಲ್ಲಿ ಏನಾದರೂ ತಿನ್ನು ಅಂತ ದುಡ್ಡು ಕೊಟ್ಟು ಹೋಗುತ್ತಿದ್ದರು. ಅವನ ಕೈಯಲ್ಲಿ ಹಣ ನೋಡಿ ಅವನಿಗೆ ಗೆಳೆಯರು ಜಾಸ್ತಿಯಾದರು. ಸ್ಕೂಲ್ ಮುಗಿಸಿದ ತಕ್ಷಣ ಮೊದಲು ವ್ಯಾನಿನಲ್ಲಿ ಬರುತ್ತಿದ್ದ.
“ಎಲ್ಲಾ ಮಕ್ಕಳು ಸೈಕಲ್ ನಲ್ಲಿ ಬರುತ್ತಾರೆ. ನಾನು ಮಾತ್ರ ಮಗು ತರ ಸ್ಕೂಲ್ ವ್ಯಾನಿನಲ್ಲೇ ಹೋಗಬೇಕಾ….?” ಎಂದು ಹಠ ಮಾಡಿ ತನಗೂ ಸೈಕಲ್ ಬೇಕು ಎಂದು ತೆಗೆಸಿಕೊಂಡ.
ಅವನ ಕೈಯಲ್ಲಿ ಹಣ ನೋಡಿ ಇವನಿಗೆ ಗೆಳೆಯರು ಜಾಸ್ತಿಯಾದರೂ ಮೊದಲು ಸ್ಕೂಲಿನಿಂದ ಸರಿಯಾಗಿ ಮನೆಗೆ ಬರುತ್ತಿದ್ದವನು, ಈಗ ಮನೆಯಲ್ಲಿ ಹೇಗಿದ್ದರೂ ಅಪ್ಪ ಅಮ್ಮ ಇಬ್ಬರೂ ಇರುವುದಿಲ್ಲ. ಎಷ್ಟೊತ್ತಿಗೆ ಹೋದರೂ ಕೇಳುವವರಿಲ್ಲ ಅಂತ ಗೆಳೆಯರ ಜೊತೆ ಸೇರಿ ಅಲ್ಲಿ ಇಲ್ಲಿ ತಿರುಗಾಡಿ ಬರಲು ಶುರು ಮಾಡಿದ.
ನಿಧಾನಕ್ಕೆ ಓದಿನಲ್ಲಿ ಹಿಂದೆ ಬಿದ್ದ. ಕೆಲವು ದಿನ ಸ್ಕೂಲಿಗೆ ಬಂಕ್ ಹೊಡೆಯಲು ಶುರು ಮಾಡಿದ. ಸ್ಕೂಲಿನಿಂದ ಶಮಂತ್ ಹಾಗೂ ಶಶಾಂಕನನ್ನು ಕರೆಸಿ, `ಸರಿಯಾಗಿ ಸ್ಕೂಲಿಗೆ ಬರುತ್ತಿಲ್ಲ,’ ಎಂದು ಹೇಳಿದರು. ಮಗನಿಗೆ ಬೈದು ಬುದ್ಧಿ ಹೇಳಿದರು. ಸ್ವಲ್ಪ ದಿನ ಊರಿನಿಂದ ಶಶಾಂಕನ ಅಪ್ಪ ಅಮ್ಮನನ್ನು ಕರೆಸಿದರು. ಶಶಾಂಕ್ ನ ತಮ್ಮನಿಗೆ ಮದುವೆಯಾದ ಕಾರಣ ಊರಲ್ಲಿ ಅವರು ಗಂಡ ಹೆಂಡತಿ ನೋಡಿಕೊಳ್ಳುತ್ತಾರೆ. ನೀವು ಸ್ವಲ್ಪ ದಿನ ನನ್ನ ಜೊತೆ ಇರಿ ಎಂದು ಕರೆಸಿಕೊಂಡ.
ಆದರೆ 10ನೇ ಕ್ಲಾಸಿನಲ್ಲಿ ಇರುವ ಅಭಿ ಅಜ್ಜ ಅಜ್ಜಿಗೆ ಸ್ಪೆಷಲ್ ಕ್ಲಾಸ್ ಇದೆ ಅಂತ ಸುಳ್ಳು ಹೇಳಿ ಫ್ರೆಂಡ್ಸ್ ಜೊತೆ ತಿರುಗಾಡಲು ಶುರು ಮಾಡಿದ. ಆಗಲೇ ಸಿಗರೇಟು ಡ್ರಿಂಕ್ಸ್ ಎಲ್ಲವನ್ನೂ ಕಲಿತುಕೊಂಡ. ಶಮಂತಾ ಹಾಗೂ ಶಶಾಂಕ್ ಈಗ ಸರಿಯಾಗಿದ್ದಾನೆ ಎಂದುಕೊಂಡು ಅವನ ಕಡೆ ಗಮನ ಕೊಡದೆ ತಮ್ಮ ತಮ್ಮ ಕೆಲಸದಲ್ಲಿ ಬಿಜಿ ಆದರು.
ಊರಿನಲ್ಲಿ ಈಗ ಕೆಲಸದ ಸಮಯವೆಂದು ಅಮ್ಮ ಅಪ್ಪ ಊರಿಗೆ ಹೋದರು. ಹಾಗೇ ಸ್ವಲ್ಪ ದಿನ ಕಳೆಯಿತು. ಒಂದು ದಿನ ಪಕ್ಕದ ಮನೆಯವರು ಶಮಂತಾಳನ್ನು ಕರೆದು, “ನೀವು ತಪ್ಪು ತಿಳಿಯಬೇಡಿ. ನಿಮ್ಮ ಮಗನಿಗೆ ಗೆಳೆಯರ ಸಹವಾಸ ಸರಿಯಿಲ್ಲ. ಸ್ಕೂಲ್ ಬಿಟ್ಟ ಮೇಲೆ ಸ್ವಲ್ಪ ಲೇಟಾಗಿ ಎಲ್ಲರೂ ನಿಮ್ಮ ಮನೆಗೆ ಬರುತ್ತಾರೆ. ಏನು ಮಾಡುತ್ತಾರೆ ಅಂತ ನನಗೆ ತಿಳಿದಿಲ್ಲ. ಆದರೆ ನನಗೆ ಅನಿಸುವ ಪ್ರಕಾರ ಅವರುಗಳು ಸ್ಮೋಕ್ ಮಾಡುತ್ತಾರೆ ಅಂತ ಡೌಟು. ನೀವು ಸ್ವಲ್ಪ ವಿಚಾರಿಸಿಕೊಳ್ಳಿ,” ಎಂದರು.
ಶಮಂತಾ ಅದನ್ನು ಶಶಾಂಕ್ ಗೆ ಹೇಳಿದಾಗ ಇಬ್ಬರಿಗೂ ಆಘಾತವಾಯಿತು. “ನೋಡೋಣ ನಾಳೆ ಆಫೀಸಿನಿಂದ ಬೇಗ ಬರುತ್ತೇನೆ,” ಎಂದ ಶಶಾಂಕ್.
ಮರುದಿನ ಸ್ಕೂಲ್ ಬಿಟ್ಟು ಅರ್ಧ ಗಂಟೆಯ ನಂತರ ಶಶಾಂಕ್ ಮನೆಗೆ ಬಂದ. ಅವನ ಬಳಿ ಇನ್ನೊಂದು ಡೋರ್ ಲಾಕ್ ಇತ್ತು. ಇನ್ನೂ ಅಭಿ ಮನೆಗೆ ಬಂದಿರಲಿಲ್ಲ.
ಶಶಾಂಕ ಬಾಗಿಲು ತೆರೆದು ಮತ್ತೆ ಡೋರ್ ಲಾಕ್ ಮಾಡಿ ಒಳಗಡೆ ರೂಮಿನಲ್ಲಿ ಬಚ್ಚಿಟ್ಟುಕೊಂಡ. ಸ್ವಲ್ಪ ಹೊತ್ತಿಗೆ ಅಭಿ ಇಬ್ಬರು ಗೆಳೆಯರ ಜೊತೆ ಬಂದ. ಮತ್ತೆ ಬಾಗಿಲು ಲಾಕ್ ಮಾಡಿ ಮೂವರೂ ಸಿಗರೇಟ್ ತೆಗೆದು ಸ್ಮೋಕ್ ಮಾಡಲು ಶುರು ಮಾಡಿದರು.
ಶಶಾಂಕ್ ಹೊರಗಡೆ ಬಂದ. ಮೂವರು ಸಿಗರೇಟ್ ಮುಚ್ಚಿಟ್ಟುಕೊಂಡರು. ಶಶಾಂಕ್ ಮೂವರನ್ನೂ ಗದರಿದ, “ಏನಿದು…..? ನೀವು ಇನ್ನೂ ಚಿಕ್ಕ ಮಕ್ಕಳು, ಈ ವಯಸ್ಸಿನಲ್ಲಿ ಇದೆಲ್ಲಾ ಕಲಿಯಬೇಕಾ….? ಯಾಕೆ ಹೀಗೆ ಮಾಡುತ್ತೀರಿ….. ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ತುಂಬಾ ಕೆಟ್ಟದ್ದು,” ಎಂದು ಅವರನ್ನು ಬೈದು ಮನೆಗೆ ಕಳುಹಿಸಿದ.
“ಏನೋ ಅಭಿ….. ನಿನ್ನ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದೇವೆ. ನೀನು ಚೆನ್ನಾಗಿ ಓದುತ್ತೀಯಾ ಅಂದುಕೊಂಡಿದ್ದೇವೆ. ನೀನು ಈ ತರಹ ದುಷ್ಟರ ಸಹವಾಸ ಮಾಡುತ್ತಿಯಲ್ಲಾ,” ಎಂದು ನೋವಿನಿಂದ ಹೇಳಿದ.
“ಸಾರಿ ಡ್ಯಾಡಿ…. ಇನ್ನು ಮೇಲೆ ಹೀಗೆ ಮಾಡುವುದಿಲ್ಲ. ನನಗೆ ಮನೆಯಲ್ಲಿ ಒಬ್ಬನೇ ಬೇಸರ ಅವರ ಗೆಳೆತನ ಮಾಡಿದೆ. ಅವರು ಬೇಡ ಎಂದರೂ ಬಲವಂತ ಮಾಡಿದರು,” ಎಂದ.
ಇದು ಬೈದು ಹೊಡೆದರೆ ಸರಿಯಾಗುವುದಿಲ್ಲ. ಅದನ್ನು ನಾವು ಶ್ರಮವಹಿಸಿ ಸರಿ ದಾರಿಗೆ ತರಬೇಕು ಎಂದು ಶಶಾಂಕ್ ಯೋಚಿಸಿದ.
ಮರುದಿನ ದಂಪತಿ ಇಬ್ಬರೂ ರಜಾ ಹಾಕಿದರು. ಅಭಿಯನ್ನು ತಾನೇ ಶಾಲೆಗೆ ಬಿಟ್ಟು ಬಂದ ಶಶಾಂಕ್. ನಂತರ ಇಬ್ಬರೂ ಕುಳಿತು ಯೋಚಿಸಿದರು. ದಿನ ಅಭಿಯನ್ನು ಸ್ಕೂಲ್ ಗೆ ಬಿಟ್ಟು, ಬರುವ ಸಮಯಕ್ಕೆ ನಾವೇ ಹೋಗಿ ಕರೆದುಕೊಂಡು ಬಂದರೆ, ಸ್ನೇಹಿತರ ಸಹವಾಸ ಕಡಿಮೆಯಾಗುತ್ತದೆ ಎಂದು ಯೋಚಿಸಿದರು.
ಶಶಾಂಕ್ ಹೇಳಿದ, “ನೋಡು ಶಮಂತಾ, ನೀನು ಇಷ್ಟು ದಿನ ಕೆಲಸ ಮಾಡಿದ್ದು ಸಾಕು. ಈಗ ಅಭಿ ಬೆಳೆಯುವ ವಯಸ್ಸು, ಇನ್ನೂ ನಾಲ್ಕು ಐದು ವರ್ಷ ನಾವು ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕು. ಇಲ್ಲ ಅಂದರೆ ಅವನು ತಪ್ಪು ದಾರಿಗೆ ಹೋಗುವುದು ಖಚಿತ.
“ನಾವು ದುಡಿಯುವುದು ಅವನ ಭವಿಷ್ಯಕ್ಕೋಸ್ಕರ, ಅವನೇ ಹಾಳಾದರೆ ಏನು ಪ್ರಯೋಜನ? ಅದರಿಂದ ನೀನು ಇನ್ನು ನಾಲ್ಕೈದು ವರ್ಷ ಕೆಲಸ ಬಿಟ್ಟುಬಿಡು ಆಮೇಲೆ ಮನಸ್ಸಿದ್ದರೆ ಸೇರಿಕೊಳ್ಳುವೆಯಂತೆ. ಹಾಸ್ಟೆಲ್ ನಲ್ಲಿ ಬಿಟ್ಟರೂ ಪ್ರಯೋಜನವಿಲ್ಲ. ದಿನಾಲು ಅವನನ್ನು ಸ್ಕೂಲಿಗೆ ನಾವೇ ಕರೆದುಕೊಂಡು ಹೋಗಿ ಬಿಟ್ಟು ವಾಪಸ್ ಕರೆದುಕೊಂಡು ಬರಬೇಕು. 4 ವರ್ಷ ಅವನನ್ನು ಇದೇ ತರಹ ಮಾಡಿ ಗೆಳೆಯರ ಜೊತೆ ಬೆರೆಯಲು ಬಿಡದಿದ್ದರೆ ಮುಂದೆ ಅವನು ಸರಿಯಾಗುತ್ತಾನೆ,” ಎಂದ ಶಶಾಂಕ್.
“ನೀನೇ ಕೆಲಸ ಬಿಡಬಹುದ್ಲಾ…..” ಎಂದಳು ಶಮಂತಾ.
“ನಿನಗೆ ನನ್ನಷ್ಟೇ ಸಂಬಳ ಬರಬಹುದು. ಆದರೂ ನಾನು ಗಂಡಸು, ಮನೆಯಲ್ಲಿ ಇರುವುದು ಸರಿಯಲ್ಲ. ನೀನು ಮನೆಯಲ್ಲಿ ಇದ್ದು ಬೇರೆ ನಿನ್ನ ಹವ್ಯಾಸದ ಕಡೆ ಗಮನ ಕೊಡು,” ಎಂದ.
“ಅದೆಲ್ಲಾ ಸರಿ ಶಶಾಂಕ್, ಆದರೆ ಮನೆಗೆ ಮಾಡಿರೋ ಲೋನ್ ತೀರಬೇಕಲ್ಲಾ…. ಅಲ್ಲದೆ, ಅವನ ಮುಂದಿನ ಎಜುಕೇಶನ್ ಗೆ ಎಷ್ಟೊಂದು ಹಣ ಬೇಕು, ಇದೆಲ್ಲಾ ಒಬ್ಬರ ಸಂಬಳದಲ್ಲಿ ಕಷ್ಟವಾಗುತ್ತದೆ ಅಲ್ವಾ…. ಮತ್ತೆ ನನಗೂ ಕೆಲಸ ಬಿಟ್ಟರೆ ಈಗಿನ ಪೊಸಿಷನ್ ಮತ್ತೆ ಸಿಗುವುದಿಲ್ಲ. ಏನೋ ಒಂದಿಷ್ಟು ಲಾಂಗ್ ಲೀವ್ ಅಂತ ಹಾಕಬಹುದು. ಆದರೆ ಮಗನ ವಿಷಯ ಎಲ್ಲರ ಬಳಿ ಹೇಗೆ ಹೇಳಲಿ?”
“ಮಗನ ವಿಷಯ ಹೇಳಬೇಡ. ಆರೋಗ್ಯ ಸರಿ ಇಲ್ಲ ಅಂತ ಹೇಳೋಣ. ನನ್ನ ಗೆಳೆಯನೊಬ್ಬ ಡಾಕ್ಟರ್ ಇದ್ದಾನೆ. ಅವನ ಹತ್ತಿರ ಬೇಕಿದ್ದರೆ ಸರ್ಟಿಫಿಕೇಟ್ ಮಾಡಿಸಿ ಕೊಡೋಣ. ಯಾರಲ್ಲಿಯೂ ಅಭಿ ವಿಷಯ ಹೇಳುವುದು ಬೇಡ. ನಾವೇ ಗಂಡಹೆಂಡತಿ ಸರಿ ಮಾಡೋಣ. ನಿಮ್ಮ ಹೆತ್ತವರಿಗೂ ನನ್ನ ಹೆತ್ತವರಿಗೂ ತಿಳಿಯುವುದು ಬೇಡ, ಆಮೇಲೆ ಊರೆಲ್ಲಾ ಗುಲ್ಲಾಗಿ ಎಲ್ಲರೂ ಆಡಿಕೊಳ್ಳುತ್ತಾರೆ,” ಎಂದ ಶಶಾಂಕ್.
“ಹೌದು ಕಳೆದ ಸಲ ನಿಮ್ಮ ಅಪ್ಪ ಅಮ್ಮನ್ನ ಕರೆಸಿದ್ದೆ ತಪ್ಪಾಯಿತು. ಸುಮ್ಮನೆ ಶಶಾಂಕ್ ಮಗ ಗೆಳೆಯರ ಜೊತೆ ಸುತ್ತುತ್ತಾನೆ. ಚೆನ್ನಾಗಿ ಓದುವುದಿಲ್ಲ. ಹೋಟೆಲ್ ತಿಂಡಿ ಊಟವೇ ರೂಢಿ ಅವನಿಗೆ ಅಂತ ಹೇಳಿಕೊಂಡು ಬಂದಿದ್ದಾರೆ. ನಾನು ಮನೆಯಲ್ಲಿ ಇದ್ದು ಸರಿಯಾಗಿ ಅಡುಗೆ ತಿಂಡಿ ಮಾಡಿ ಹಾಕಿ ಮಗುವನ್ನು ನೋಡಿಕೊಳ್ಳುವುದಿಲ್ಲ, ಅಂತ ಊರಿನಲ್ಲಿ ಇರುವ ನಮ್ಮ ಚಿಕ್ಕಪ್ಪನ ಜೊತೆ ಹೇಳಿದ್ದಾರೆ…. ಇನ್ನೂ ನಮ್ಮ ಅಪ್ಪ ಅಮ್ಮನಿಗೆ ಇಷ್ಟು ವಿಷಯ ಸಿಕ್ಕಿದರೆ ಸಾಕು, `ಅದಕ್ಕೆ ಶಮಂತಾ ಅತ್ತೆ ಮಾವ ಜೊತೆಗೆ ಇರುವ ಫ್ಯಾಮಿಲಿ ಬೇಕು ಅನ್ನುವುದು. ನೀನು ಬೇಡ ಅಂತ ಹಠ ಮಾಡಿದೆ,’ ಅಂತ ನನಗೆ ಬುದ್ಧಿವಾದ ಹೇಳುವರು,” ಎಂದಳು ಶಮಂತಾ.
ಇಬ್ಬರೂ ಕುಳಿತು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಂಡರು. ನಂತರ ಶಮಂತಾ ಕೆಲಸ ಬಿಟ್ಟು ಮನೆಯಲ್ಲಿ ಮಗನಿಗೆ ಬೇಕಿರುವ ಅಡುಗೆ ಮಾಡುತ್ತಾ, ಅವಳೇ ಅವನನ್ನು ಸ್ಕೂಲಿಗೆ ಬಿಟ್ಟು ಕರೆದುಕೊಂಡು ಬರುವಳು. ಹಾಗೆ ಅವನ ಓದಿನ ಕಡೆ ಗಮನಹರಿಸಿದಳು. ವಾರಕ್ಕೊಮ್ಮೆ ಅವರೇ ಅವನನ್ನು ಹೊರಗಡೆ ಕರೆದುಕೊಂಡು ಹೋಗಿ ಬರುತ್ತಿದ್ದರು.
ಆರು ತಿಂಗಳು ಕಳೆಯುವಷ್ಟರಲ್ಲಿ ಅಭಿ ಮತ್ತೆ ಒಳ್ಳೆಯ ಮಾರ್ಕ್ಸ್ ಪಡೆಯಲು ಶುರು ಮಾಡಿದ. ಸ್ನೇಹಿತರ ಸಹವಾಸ ಮರೆತೇಬಿಟ್ಟ. ಈ ಸಲ ಬೋರ್ಡ್ ಎಗ್ಸಾಮ್ ನಲ್ಲಿ ಡಿಸ್ಟಿಂಕ್ಷನ್ ಬಂದ.
“ಶಮಂತಾ, ನೀನು ಜಾಬ್ ಬಿಟ್ಟು ಎಷ್ಟು ಒಳ್ಳೆಯ ಕೆಲಸ ಮಾಡಿದೆ. ಇನ್ನೂ ಎರಡು ವರ್ಷ ನೀನು ಹೀಗೆ ಅವನ ಕಡೆ ಗಮನ ಕೊಟ್ಟು ನೋಡಿಕೊಂಡರೆ ಅವನು ಮತ್ತೆ ಹಳೆಯದೆಲ್ಲ ಮರೆತು ಒಳ್ಳೆಯ ಹುಡುಗನಾಗುತ್ತಾನೆ. ನಿನಗೆ ತುಂಬಾ ತುಂಬಾ ಥ್ಯಾಂಕ್ಸ್ ನನ್ನ ಮಾತಿಗೆ ಬೆಲೆ ಕೊಟ್ಟು ಕೆಲಸ ಬಿಟ್ಟೆ,” ಎಂದ ಶಶಾಂಕ್.
“ಇದಕ್ಕೆಲ್ಲಾ ಥ್ಯಾಂಕ್ಸ್ ಯಾಕೆ ಶಶಾಂಕ್….. ಅಭಿ ನನ್ನ ಮಗನೇ ತಾನೇ…. ಅವನನ್ನು ಸರಿ ದಾರಿಯಲ್ಲಿ ಬೆಳೆಸುವುದರಲ್ಲಿ ನನ್ನ ಜವಾಬ್ದಾರಿಯೂ ಇದೆ. ನೀನು ಸರಿಯಾದ ಸಮಯಕ್ಕೆ ನನ್ನನ್ನು ಎಚ್ಚರಿಸಿದೆ. ಇಲ್ಲಾ ಅಂದರೆ ನಾನು ನನ್ನ ಕೆರಿಯರ್ ಮುಖ್ಯ ಅಂದುಕೊಂಡು ಅದರ ಕಡೆ ಮಾತ್ರ ಗಮನ ಕೊಡುತ್ತಿದ್ದೆ,” ಎಂದಳು.
ನಂತರ ಅಭಿ ಪಿಯುಸಿಯಲ್ಲೂ ಒಳ್ಳೆಯ ಮಾರ್ಕ್ಸ್ ಪಡೆದು, ಒಳ್ಳೆಯ ಕಾಲೇಜಿನಲ್ಲಿ ಮೆಡಿಕಲ್ ಸೀಟು ಗಿಟ್ಟಿಸಿಕೊಂಡ. ಶಶಾಂಕ್ ಹಾಗೂ ಶಮಂತಾ ಸಮಯಕ್ಕೆ ಸರಿಯಾದ ನಿರ್ಧಾರ ತೆಗೆದುಕೊಂಡ ಕಾರಣ ಅಭಿ ಕೆಟ್ಟ ಹುಡುಗರ ಸಹವಾಸದಿಂದ ಹಾಳಾಗುವುದು ಬಿಟ್ಟು ಒಳ್ಳೆಯ ವಿದ್ಯಾರ್ಥಿಯಾದ, ಸಮಾಜಕ್ಕೆ ಸತ್ಪ್ರಜೆಯಾದ.





