ಹೊಸದಾಗಿ ಬಂಗಾರ ತೆಗೆದುಕೊಳ್ಳಲಿದ್ದೀರಾ? ಇದಕ್ಕಾಗಿ ನಿಮಗೆ ದೀಪಾವಳಿಗಿಂದ ಬೇರೆ ಸುವರ್ಣಾವಕಾಶ ಬೇಕೇ…..?

ಭಾರತೀಯ ಕುಟುಂಬಗಳಲ್ಲಿ ಅನಾದಿ ಕಾಲದಿಂದಲೂ ಬಂಗಾರದ ಆಭರಣಗಳ ಕೊಳ್ಳುವ ಬಗ್ಗೆ ದೊಡ್ಡ ಕ್ರೇಝ್ ಇದ್ದೇ ಇದೆ. ತೀರಾ ಸಣ್ಣಪುಟ್ಟ ಸಂದರ್ಭ ಅಲ್ಲದಿದ್ದರೂ, ಮದುವೆ ಮುಂಜಿಗಳಂಥ ಶುಭ ಸಮಾರಂಭ ಏರ್ಪಡಿಸುವಾಗ ಅವರವರ ಬಜೆಟ್‌ ಗೆ ತಕ್ಕಂತೆ ಮಧ್ಯಮ, ಕೆಳ ಮಧ್ಯಮ ವರ್ಗದವರೂ ಸಹ ಚಿನ್ನ ಕೊಳ್ಳದೇ ಇರಲಾರರು. ಬಂಗಾರದ ಒಡವೆ ಹೆಣ್ಣಿನ ಮೊದಲ ಅಕ್ಕರೆಯ ವಸ್ತುವಾದರೆ, ಇದರ ಮೇಲೆ ಹಣ ಹೂಡುವಿಕೆ ಖಂಡಿತಾ ನಮ್ಮ ಆಪತ್ತಿನ ಕಾಲಕ್ಕೆ ನೆರವಾಗುತ್ತದೆ.

ಯಾವುದೇ ವಿಷಮ ಪರಿಸ್ಥಿತಿಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿ ಏರುಪೇರಾದಾಗ, ಚಿನ್ನ ಮಾತ್ರವೇ ಮನೆಯ ಪರಿಸ್ಥಿತಿ ಸರಿದೂಗಿಸಬಲ್ಲದು! ಹೀಗಾಗಿಯೇ ಜನ ಕಷ್ಟ ಕಾಲ ಬಂದಾಗ ನೆಂಟರಿಷ್ಟರೆದುರು ಆರಡಿ ದೇಹವನ್ನು ಮೂರಡಿ ಮಾಡಿ ಬೇಡುವುದಕ್ಕಿಂತ, ತಮ್ಮ ಬಳಿ ಇರುವ ಬಂಗಾರವನ್ನು ಅಡವಿಟ್ಟೋ, ಮಾರಿಯೋ, ಬಂದ ಕಷ್ಟ ಸರಿಪಡಿಸಿಕೊಳ್ಳುವುದೇ ಸೂಕ್ತ ಎಂದು ಭಾವಿಸುತ್ತಾರೆ. ಇಂದಿನ ಆಧುನಿಕ ದಿನಗಳಲ್ಲಿ ನಮ್ಮ ಬಳಿಯ ಬಂಗಾರವನ್ನು ಬ್ಯಾಂಕಿನಲ್ಲಿಟ್ಟರೆ ಅದಕ್ಕೆ ಉತ್ತಮ ಸಾಲ ಸಿಗುತ್ತದೆ. ಚಿನ್ನಕ್ಕೆ ಬದಲು ಸಾಲ ಪಡೆಯುವ ಈ ಪ್ರಕ್ರಿಯೆಯೂ ಅತಿ ಸರಳ. ಬ್ಯಾಂಕಿನ ಅತಿ ಕ್ಲಿಷ್ಟಕರ ವ್ಯವಹಾರಗಳೇನೂ ಇಲ್ಲ.

Gold-1

ಗೋಲ್ಡ್ ಲೋನಿನ ಅಗತ್ಯ

ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು, ಮನೆ ಮಂದಿಗೆ ಆಪರೇಶನ್‌ ನಂಥ ಗಂಭೀರ ಪರಿಸ್ಥಿತಿ, ವ್ಯವಹಾರದಲ್ಲಿ ಲಾಸ್‌, ಆಕಸ್ಮಿಕ ದುರ್ಘಟನೆ….. ಇತ್ಯಾದಿ ಏನೇ ಸಂಕಷ್ಟಗಳಿರಲಿ, ಹಣದ ಅಗತ್ಯ ತುರ್ತಾಗಿ ಬೇಕಾದಾಗ, ಜನ ಗೋಲ್ಡ್ ಲೋನ್ ಪಡೆಯಲು ಮುಂದಾಗುತ್ತಾರೆ. ಆದರೆ ಇದಕ್ಕೆ ಮೂಲಾಧಾರ…. ಮನೆಯಲ್ಲಿ ಚಿನ್ನ ಇರಲೇಬೇಕು! ಅಂದರೆ ಪರಿಸ್ಥಿತಿ ಅನುಕೂಲವಾಗಿದ್ದಾಗ ಅಗತ್ಯವಾಗಿ ಚಿನ್ನ ಕೊಂಡು ಇಟ್ಟುಕೊಂಡಿರಬೇಕು. ಮಧ್ಯಮ ವರ್ಗದವರಿಗೆ ವರ್ಷವಿಡೀ ಏನೋ ಒಂದು ಕಾಟ ಇದ್ದದ್ದೇ, ಹೀಗಾಗಿ ಏನಾದರೂ ಮಾಡಿ, ಹೇಗಾದರೂ ವರ್ಷ ಪೂರ್ತಿ ಹಣ ಕೂಡಿಟ್ಟು, ದೀಪಾವಳಿ ಸಂದರ್ಭದಲ್ಲಿ ಕನಿಷ್ಠ 8-10 ಗ್ರಾಂ. ಚಿನ್ನವಾದರೂ ಕೊಳ್ಳಲೇಬೇಕು.

ಹಾಗಾದಾಗ ಮಾತ್ರ ಮುಂದಿನ ದಿನಗಳಲ್ಲಿ ಇಂಥ ಕಷ್ಟ ಎದುರಾದಾಗ, ಕಂಡವರ ಬಳಿ ಸಾಲಕ್ಕೆ ಕೈ ಒಡ್ಡದೇ, ತಮ್ಮದೇ ಚಿನ್ನದಿಂದ ಸಾಲ ಪಡೆದು ಮರ್ಯಾದೆ ಉಳಿಸಿಕೊಳ್ಳಬಹುದು. ಆದ್ದರಿಂದ ಏನಾದರೂ ಮಾಡಿ ಬ್ಯಾಂಕ್‌ ನಲ್ಲಿ ಪ್ರತಿ ತಿಂಗಳೂ ಕನಿಷ್ಠ 1-2 ಸಾವಿರ ಆರ್‌.ಡಿ. ಅಕೌಂಟ್‌ ನಲ್ಲಿ ಹಣ ಕೂಡಿಸಿ, ವರ್ಷಕ್ಕೊಮ್ಮೆ ದೀಪಾವಳಿ ಸಂದರ್ಭದಲ್ಲಿ ಚಿನ್ನ ಕೊಂಡುಕೊಳ್ಳಿ.

ಲೋನಿನ ಪ್ರೀ ಪೇಮೆಂಟ್

ಲೋನಿನ ಪ್ರೀ ಪೇಮೆಂಟ್‌ ಬಹುತೇಕ ಪ್ರಕರಣಗಳಲ್ಲಿ ಉತ್ತಮ ಎಂದೇ ಪರಿಗಣಿಸಲ್ಪಟ್ಟಿದೆ. ಬಲ್ಲವರು ಹೇಳುವಂತೆ, ಪ್ರೀ ಪೇಮೆಂಟ್‌ ಗೆ ಹೋಲಿಸಿದಾಗ ಅದೇ ಮೊತ್ತಕ್ಕಿಂತ ತುಸು ಹೆಚ್ಚಿನ ಹಣ ಸಿಗುವುದಾದರೆ, ಅದರಲ್ಲಿ ಇನ್‌ ವೆಸ್ಟ್ ಮಾಡುವುದು ಉತ್ತಮ ಎಂದಾಗುತ್ತದೆ.

ಒತ್ತಡಕ್ಕೆ ಸಿಲುಕದಿರಿ

ಗೋಲ್ಡ್ ಲೋನ್‌ ಅಥವಾ ಯಾವುದೇ ಲೋನ್‌ ಇರಲಿ, ನಿಮ್ಮ ಮಾಸಿಕ ಆದಾಯವನ್ನು ಗಮನದಲ್ಲಿಟ್ಟುಕೊಂಡೇ ಸಾಲ ಪಡೆಯಿರಿ, ಆಗ ಮಾತ್ರವೇ ನೀವು ಆ ಭಾಗದ ಮಾಸಿಕ ಕಂತನ್ನು ಸುಲಭವಾಗಿ ಕಟ್ಟಲು ಸಾಧ್ಯ. ನಿಮ್ಮ ಆದಾಯದ ಗರಿಷ್ಠ ಮೊತ್ತ, ಮಾಸಿಕ ಕಂತು ತೀರಿಸುವುದರಲ್ಲಿ ವ್ಯರ್ಥವಾದೀತು!

ಸಾಲ ಎಲ್ಲಿಂದ ಪಡೆಯುವುದು?

ಇತ್ತೀಚೆಗೆ ಗೋಲ್ಡ್ ಲೋನ್‌ ವ್ಯವಹಾರದಲ್ಲಿ ಮುಳುಗಿದ ಕಂಪನಿಗಳು ಎಲ್ಲರಿಗೂ ಸಾಲ ನೀಡಿ ತಾವು ಉದ್ಧಾರ ಆಗುತ್ತಿವೆ. ಈಗಂತೂ ಭಾರತೀಯ ಮಾರುಕಟ್ಟೆಯಲ್ಲಿ ಗೋಲ್ಡ್ ಲೋನ್‌ ಕೊಡುವಂಥ 3 ಬಗೆಯ ಮುಖ್ಯ ಕಂಪನಿಗಳಿವೆ. ಮೊದಲನೆಯದು…. ಬ್ಯಾಂಕುಗಳು. ಇವು 60-65% ಗೋಲ್ಡ್ ಲೋನ್‌ ನೀಡುತ್ತವೆ. 2ನೆಯದು, ಬ್ಯಾಂಕಿಂಗ್‌ ಹಣಕಾಸು ಸಂಸ್ಥೆಗಳು…. ಇವು 70-75% ವರೆಗೂ ಸಾಲ ನೀಡುತ್ತವೆ. 3ನೆಯದು ಖಾಸಗಿ ಬ್ರೋಕರ್ಸ್‌ ಇವು 100% ಸಾಲ ನೀಡುತ್ತವೆ.

ಎಲ್ಲಾ ದೊಡ್ಡ ದೊಡ್ಡ ಬ್ಯಾಂಕುಗಳೂ ಚಿನ್ನ ಅಡವಿಟ್ಟುಕೊಂಡು ಸಾಲ ನೀಡುತ್ತವೆ. ಇಂಡಿಯನ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್‌….. ಎಲ್ಲವೂ ಗೋಲ್ಡ್ ಲೋನ್‌ ನೀಡುತ್ತವೆ. 79% ತರಹ ಬಡ್ಡಿ ವಸೂಲಿ ಮಾಡುತ್ತವೆ. ಆದರೆ ಇದನ್ನು ಪಡೆಯುವ ಮೊದಲು, ಅವುಗಳ ಷರತ್ತು ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ.

ಗೋಲ್ಡ್ ಲೋನ್‌ ಇತರ ಸಾಲಗಳಂತಲ್ಲ. ಇದರ ಸಾಲ ತೀರಿಸುವ ಅವಧಿ ಕಡಿಮೆಯದ್ದು. ಸಾಮಾನ್ಯವಾಗಿ ಇದು 1 ತಿಂಗಳಿನಿಂದ 1 ವರ್ಷದವರೆಗೂ ಇರುತ್ತದೆ. ಸಕಾಲಕ್ಕೆ ಸಾಲ ತೀರಿಸದಿದ್ದರೆ ಅಧಿಕ ದಂಡ ಕಟ್ಟಬೇಕು, ಅಲ್ಲೂ ಸೋತರೆ ನಿಮ್ಮ ಚಿನ್ನ ನಿಮ್ಮನ್ನು ಕೈ ಬಿಟ್ಟಂತೆ!

ಸಾಮಾನ್ಯಾಗಿ ಇಂಥ ಕಂಪನಿಗಳು ಚಿನ್ನಕ್ಕೆ ಬದಲು ಸಾಲ ನೀಡಿ, ಅಧಿಕ ಬಡ್ಡಿ ದರದಲ್ಲಿ ಅವನ್ನು ವಸೂಲಿ ಮಾಡುತ್ತವೆ.

1 ದಿನ ತಡ ಮಾಡಿದರೂ ಬಡ್ಡಿಯ ದರದಲ್ಲಿ ಭಾರಿ ಬದಲಾವಣೆ ಆಗುತ್ತದೆ. 24% ಬಡ್ಡಿ ದರದಲ್ಲಿ, ನಿಗದಿತ ದಿನಾಂಕದಂದು ಸಾಲದ ಕಂತು ಕಟ್ಟದಿದ್ದರೆ, ತಕ್ಷಣ ಅದು 25%ಗೆ ಏರುತ್ತದೆ!

ಸಕಾಲಕ್ಕೆ ಗೋಲ್ಡ್ ಲೋನ್‌ ಸಲ್ಲಿಸದಿದ್ದರೆ  530%ವರೆಗೂ ಹೆಚ್ಚಿನ ಬಡ್ಡಿ ತೆರಬೇಕಾಗುತ್ತದೆ.

ಸಾಲ ತೀರಿಸಲು ಕೊನೆಯ ಕಂತನ್ನು ಯಾವಾಗ ಕಟ್ಟಬೇಕು ಎಂಬುದನ್ನು ಸ್ಪಷ್ಟ ಮನದಟ್ಟು ಮಾಡಿಕೊಳ್ಳಿ.

ಸಕಾಲಕ್ಕೆ ಬಡ್ಡಿ ಕಟ್ಟಿ ಸಾಲ ತೀರಿಸದಿದ್ದರೆ ಖಂಡಿತಾ ನಿಮ್ಮ ಚಿನ್ನ ನಿಮಗೆ ಸಿಗುವುದಿಲ್ಲ! ಇದಕ್ಕಾಗಿ ಚಿನ್ನವನ್ನು ಮತ್ತೆ ಅಡವಿಡಬೇಕಾಗುತ್ತದೆ. ಹೀಗಾಗಿ ಸಕಾಲಕ್ಕೆ ಕಂತು ಕಟ್ಟುಬಿಡಿ.

ಗೋಲ್ಡ್ ಲೋನ್‌ ತೀರಿಸಲು ಬ್ಯಾಂಕಿನ ಸಿಬ್ಬಂದಿ ನಿಮಗೆ ಮೆಸೇಜ್‌ ನೀಡಿ, ಕರೆ ಮಾಡಿ ನೆನಪಿಸುತ್ತಾರೆ. ಇಮೇಲ್‌, ಪತ್ರಗಳೂ ಬರಬಹುದು. ಇಂಥ ಸಮಯದಲ್ಲಿ ಅವರಿಗೆ ನೀವು ಸರಿಯಾದ ವಿಳಾಸ, ಫೋನ್‌ ನಂಬರ್‌ ಕೊಟ್ಟಿರಬೇಕು.

ಫಾರ್ಮಲ್ ತುಂಬಿಸುವಾಗ ನಿಮಯಗಳನ್ನು ಸರಿಯಾಗಿ ಗಮನಿಸಿಕೊಳ್ಳಿ. ಇತರ ಮಾಹಿತಿಗಾಗಿ ಸಾಲ ನೀಡುವ ಕಂಪನಿ ಬಳಿ, ನಿಮಗೆ ಮನದಟ್ಟಾಗುವಂತೆ ಮಾಹಿತಿ ಪಡೆಯಿರಿ.

ಲೋನ್ಹೇಗೆ ಸಿಗುತ್ತದೆ?

ನಿಮ್ಮ ಬಳಿ ಸಾಕಷ್ಟು ಚಿನ್ನ ಇರಲೇಬೇಕು, ಏಕೆಂದರೆ ಇದರ ಮಾರ್ಕೆಟ್‌ ವ್ಯಾಲ್ಯೂ ಆಧಾರದಿಂದ ಲೋನ್‌ ಸಿಗಲಿದೆ. ಚಿನ್ನದ ಪರಿಶುದ್ಧತೆ (ಎಷ್ಟು ಕ್ಯಾರೆಟ್‌) ಎಂಬುದೂ ಮುಖ್ಯ. ಆ ಕಂಪನಿ ನಿಮ್ಮಿಂದ ಗೋಲ್ಡ್ ಮಾತ್ರವಲ್ಲದೆ ಇತರೆ ಅಗತ್ಯ ದಸ್ತಾವೇಜನ್ನೂ ಕೇಳುತ್ತದೆ. ಫೋಟೋ, ಅಡ್ರೆಸ್‌ ಪ್ರೂಫ್‌, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಸ್ಯಾಲರಿ ಸ್ಲಿಪ್‌ ಇತ್ಯಾದಿ. ಇವೆಲ್ಲವನ್ನೂ ಅಗತ್ಯವಾಗಿ ಜೊತೆಗೆ ಕೊಂಡೊಯ್ಯಿರಿ.

ಜಾಗೃತಿ ಅತಿ ಮುಖ್ಯ

ಇಂದಿನ ಮಾರುಕಟ್ಟೆ ಅನೇಕ ನಕಲಿ ಸಂಸ್ಥೆಗಳಿಂದ ತುಂಬಿಹೋಗಿದೆ. ನಿಮ್ಮ ಚಿನ್ನಕ್ಕೆ ಬದಲಾಗಿ ಅಗತ್ಯವಿರುವ 100% ಸಾಲ ನೀಡುವ ಭರವಸೆ ಕೊಡುತ್ತವೆ. ಇಂಥಗಳ ಬಗ್ಗೆ ಬಲು ಜಾಗೃತಿ ವಹಿಸಿ. ಇಂಥ ಅಸಂಗತ ರೀತಿಯಲ್ಲಿ ಚಿನ್ನಕ್ಕೆ ಬದಲಾಗಿ ಹಣ ನೀಡಿ, ನಿಮ್ಮಿಂದ ಆ ಚಿನ್ನ ಮೀಟಿಕೊಳ್ಳುವುದನ್ನೇ ಗುರಿ ಮಾಡಿಕೊಳ್ಳುತ್ತವೆ. ಇದರಲ್ಲಿ ಮೋಸ, ವಂಚನೆ ಅಲ್ಲದೆ ಬೇರೇನಿಲ್ಲ. ಇಂಥ ಸ್ಥಳೀಯ ಬ್ರೋಕರ್‌ ಸಂಸ್ಥೆ ಬಿಟ್ಟು, ಪ್ರಮುಖ ಬ್ಯಾಂಕುಗಳಿಗೆ ಹೋಗುವುದೇ ಸೂಕ್ತ.

ಅದೇ ತರಹ ನಕಲಿ, ಖೋಟಾ ಚಿನ್ನ ಅಡವಿಟ್ಟು ಸಾಲ ಪಡೆಯುವವರಿಗೇನೂ ಕಡಿಮೆ ಇಲ್ಲ. ಇಂಥವರಿಂದಲೇ ಬ್ಯಾಂಕುಗಳು 100 ನಿಯಮ ಮುಂದಿಡುತ್ತವೆ. ಸಕಾಲಕ್ಕೆ ಸಾಲ ತೀರಿಸದಿದ್ದರೆ, ನಿಮ್ಮ ಚಿನ್ನವನ್ನು ಹರಾಜಿಗೆ ಬಿಟ್ಟು, ಸಾಲಕ್ಕೆ ಹಣ ವಜಾ ಮಾಡುತ್ತವೆ. ಸುಭದ್ರಾ ಜಿ.ಪಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ