ಅನಿವಾರ್ಯ ಪರಿಸ್ಥಿತಿಗಳಿಂದ ಅವಿವಾಹಿತೆ ಅರುಂಧತಿ, ಕಸೀನ್ ಶೃತಿಗಾಗಿ ಮಗು ಹೆತ್ತು ಕೊಟ್ಟು ದೂರ ಹೋಗುವ ಪ್ರಸಂಗ ಎದುರಾಯಿತು. ಸದಾ ತನ್ನ ಮಗುವಿಗಾಗಿ ಹಂಬಲಿಸುತ್ತಿದ್ದ ಅರುಂಧತಿಗೆ ಮುಂದೆ ಆ ಮಗುವಿನ ತಾಯಿಯಾಗುವ ಅವಕಾಶ ಸಿಕ್ಕಿತೇ……?
ಅರುಂಧತಿ ಮೊಬೈಲ್ ನಲ್ಲಿ ಬಂದಿದ್ದ ವಾಟ್ಸ್ ಆ್ಯಪ್ ನಲ್ಲಿನ ಆ ಜಾಹೀರಾತನ್ನು ಮತ್ತೆ ಮತ್ತೆ ಓದುತ್ತಿದ್ದವಳಿಗೆ ಎಂಥ ವಿಪರ್ಯಾಸ ಅಲ್ಲವೇ ಎನಿಸಿತ್ತು.
ಬಾಡಿಗೆ ತಾಯಿಯ ಕೆಲಸವೆಂದರೆ ಗರ್ಭಿಣಿಯಾಗಲು ಚುಚ್ಚಿಸಿಕೊಂಡು ತಾನು ಗರ್ಭಿಣಿ ಎಂದು ತಿಳಿದು ಎಚ್ಚರಿಕೆಯಿಂದ ಇದ್ದು ಮಗುವನ್ನು ನವಮಾಸ ಹೊತ್ತು ಹೆತ್ತು ಆ ಆನಂದ ಅನುಭವ, ಕಂದನ ಸಂಚಲನ ಏನನ್ನೂ ಅನುಭವಿಸಲು ಆನಂದಪಡಲೂ ಆಗದೇ ಕರುಳಬಳ್ಳಿ ಕತ್ತರಿಸಿಕೊಂಡು ಕೊಟ್ಟರೆ ಆಯಿತು. ಮುಂದೆ ಮಗುವಿಗೂ ಹೆತ್ತವಳಿಗೂ ಯಾವ ಸಂಬಂಧ ಇರುವುದಿಲ್ಲ. ತನ್ನ ಕರುಳಿನ ಕುಡಿಯನ್ನು ನೋಡುವ ಅವಕಾಶ ಇರುವುದಿಲ್ಲ. ಬಾಡಿಗೆ ತಾಯಿಯಾಗಲು ಸಿದ್ಧರಾಗಿರುವ ಆರೋಗ್ಯವಂತ ಇಪ್ಪತ್ತೈದು ವರ್ಷದೊಳಗಿನ ತರುಣಿಯರು ಬೇಕು ಎಂಬ ವಾಟ್ಸ್ ಆ್ಯಪ್‌ನಲ್ಲಿ ಬಂದಿದ್ದವು, ಯಾರೋ ಅನಾಮಿಕರು ಕಳುಹಿಸಿದ್ದ ಮೆಸೇಜ್ ನೋಡಿದ ಅರುಂಧತಿಗೆ ತನ್ನ ಜೀವನದಲ್ಲಿ ಆದ ಕಹಿ ಅನುಭವ ನೆನಪಿಗೆ ಬಂದು, ಹೃದಯ ಹಿಂಡಿದಷ್ಟು ನೋವಾಗಿತ್ತು.
ತಾನು ಸಹ ಶೃತಿಗಾಗಿ ಹೆತ್ತು ಕೊಟ್ಟದ್ದು ಬಾಡಿಗೆಯ ತಾಯಿಯಾಗಿಯೇ ಅಲ್ಲವೇ? ಆ ನನ್ನ ಕರುಳ ಕುಡಿಯ ಮೇಲೆ ನನಗ್ಯಾವ ಹಕ್ಕೂ ಇಲ್ಲ. ಅದನ್ನು ನೋಡುವ, ಮುಟ್ಟುವ ಅಧಿಕಾರವೂ ಇಲ್ಲ ಎಂಬ ಷರತ್ತಿನ ಮೇಲೆ ಅಲ್ಲವೇ ಮಗುವನ್ನು ಹೆತ್ತು ಕೊಟ್ಟ ಮೂರು ತಿಂಗಳ ಕಾಲ ಆ ಪುಟ್ಟ ಕಂದನಿಗೆ ಹಾಲುಣಿಸಿದ್ದನ್ನು ಹೇಗೆ ತಾನೇ ಮರೆಯಲಿ?
ಆದರೆ ನಾನು ಯಾರದ್ದೋ ವೀರ್ಯವನ್ನು ಇಂಜೆಕ್ಷನ್ ಮೂಲಕ ಪಡೆಯದೇ ಕತ್ತಲಿನಲ್ಲಿ ಅವನನ್ನು ಅಂದರೆ ಶ್ರುತಿಯ ಪತಿ ಮನೋಹರ್ ನನ್ನು ತನ್ನ ಗಂಡನೆಂದೇ ತಿಳಿದು ತನ್ನನ್ನು ತಾನು ಸಮರ್ಪಿಸಿಕೊಂಡದ್ದು ಹೇಗೆ ತಾನೇ ಮರೆಯಲಿ?
ದೊಡ್ಡಮ್ಮನ ಹೇಳಿಕೆಯಂತೆ ಮದುವೆಯಿಲ್ಲದೆಯೇ ಒಂದಲ್ಲ ಎರಡಲ್ಲ, ಅವರು ಹೇಳಿದ್ದ ಸುಮೂಹರ್ತಗಳಲ್ಲಿ ಅವನ ಬಾಹುಗಳಲ್ಲಿ ಹಿತವಾಗಿ ಸುಖಿಸಿದ್ದು ಅದೊಂದು ಸವಿನೆನಪು ಮಾತ್ರವೇ….. ಅವನು ತನ್ನನ್ನು ಗುರುತಿಸಿ ಹುಡುಕಿಕೊಂಡು ಬರುತ್ತಾನೆ ಎಂದೆಲ್ಲಾ ನಂಬಿಕೊಂಡು ಮೈ ಮರೆತು ಚಾತಕಪಕ್ಷಿಯಂತೆ ಕಾದ ದಿನಗಳು ಅದೆಷ್ಟು? ಯಾವುದೂ ನಿಜವಾಗದೆ ಭ್ರಮನಿರಸನವಾಗಿದ್ದು, ಈಗ ಹಳೆಯ ಮಾಸಿದ ನೆನಪು ಮಾತ್ರ. ಆ ಕಂದ ಹೇಗಿದ್ದಾನೋ? ಯಾರಂತೆ ಇದ್ದಾನೋ? ಸುಮಾರು ಆರು ವರ್ಷದವನಿರಬೇಕು ಈಗ ತನ್ನ ಕಂದ. ಯೋಚಿಸುತ್ತಾ ಕುಳಿತ ಆರುಂಧತಿಯನ್ನು ಗತಕಾಲದ ಆ ನೆನಪು ಬಹಳ ಹಿಂದಕ್ಕೆ ಕೊಂಡೊಯ್ಯಿತು.
ಅರುಂಧತಿ ಹಾಗೂ ಅವಳ ತಂದೆ ಸದಾಶಿವ ರಾಯರು ತಾಯಿ ಸಾವಿತ್ರಿಬಾಯಿ ಕೆಂಚೇನಹಳ್ಳಿಯಲ್ಲಿನ ವಿಠ್ಠಲ್ ರಾವ್ ಜೋಡಗೆಯರ ದೊಡ್ಡ ಮನೆಯಲ್ಲಿ ಅವರ ಆಡಳಿತದಲ್ಲಿ ಸುಖವಾಗಿ ಕೂಡು ಕುಟುಂಬದಲ್ಲಿದ್ದರು. ಆದರೆ ಅವರು ಆ ಆನಂದ ಅನುಭವಿಸಿದ್ದು ಕ್ಷಣಿಕ ಕಾಲವಷ್ಟೆ.
ಅರುಂಧತಿಯ ತಂದೆ ಸದಾಶಿವ ರಾಯರನ್ನು ಹೆತ್ತದ್ದು ಅವರ ತಂದೆ ವಿಠ್ಠಲ್ ರಾವ್ ಇಟ್ಟುಕೊಂಡಿದ್ದ ಬಡ ಹುಡುಗಿ ಭವಾನಿ ಎಂಬಾಕೆ. ಅವರಿಬ್ಬರ ಪ್ರೇಮದ ಫಲವೇ ಸದಾಶಿವರಾಯ. ಭವಾನಿಯನ್ನು ದೇವರ ಸಾಕ್ಷಿಯಾಗಿ ಅವರು ಮದುವೆಯಾಗಿದ್ದರೂ ಸಹ ಅವರಿಗೇ ಜೋಡಗೆ ಕುಟುಂಬದಲ್ಲಿರಲು ಅನುಮತಿ ದೊರಕಿರಲಿಲ್ಲ. ಕಾರಣ ವಿಠ್ಠಲ್ ರಾವ್ ರ ಧರ್ಮಪತ್ನಿ ಗೌರಿ ಬಾಯಿ.
“ಅವಳನ್ನೇನಾದರೂ ಆ ಮನೆಗೆ ಕರೆತಂದರೆ ತಾನು ಜೀವಸಹಿತ ಇರುವುದಿಲ್ಲ. ನೇಣು ಹಾಕಿಕೊಂಡು ಸಾಯುತ್ತೇನೆ!” ಎಂದಾಗ ಆಕೆಯನ್ನು ಬೇರೆಯೇ ಇರಿಸದೆ ವಿಧಿ ಇರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಭವಾನಿ ಜಾರಿ ಬಿದ್ದು ಅಲ್ಲಿಯೇ ಮರಣ ಹೊಂದಿದಾಗ ವಿಠ್ಠಲ್ ರಾವ್ ತುಂಬಾ ಕೊರಗಿದ್ದರು. ಭವಾನಿಯ ಪ್ರೀತಿಯಲ್ಲಿ ಸುಖವಾಗಿದ್ದ ವಿಠ್ಠಲ್ ರಾವ್ ಆಕೆಯ ಮರಣಾನಂತರ ಎಲ್ಲವನ್ನೂ ಕಳೆದುಕೊಂಡವರಂತೆ ಮಂಕಾಗಿಬಿಟ್ಟಿದ್ದರು.
ಕ್ರಮೇಣ ಗೌರಿ ವಿಠ್ಠಲ್ ರಾವ್ ರನ್ನು ಸ್ವೀಕರಿಸಿದ್ದರಿಂದ ವಿಠ್ಠಲ್ ರಾವ್ ದಿನ ಕ್ರಮೇಣ ಚೇತರಿಸಿಕೊಂಡಿದ್ದರು. ವಿಠ್ಠಲ್ ರಾವ್ ಮಹಾ ಕೋಪಿಷ್ಠರಾಗಿದ್ದರಿಂದ ಮನೆಯಲ್ಲಿಯೇ ಆಗಲಿ, ಊರಿನವರೇ ಆಗಲಿ ಅವರಿಗೇ ಎದುರಾಡುವ ಧೈರ್ಯ ಯಾರಿಗೂ ಇರಲಿಲ್ಲ. ಕೊಡುಗೈ ದಾನಿ ಎಂದು ಹೆಸರು ಪಡೆದಿದ್ದ ವಿಠ್ಠಲ್ ರಾವ್ ರನ್ನು ಹಿಂದೆ ಆಡಿಕೊಳ್ಳುವವರು ಯಾರೂ ಇರಲಿಲ್ಲ. ಸದಾಶಿವನ ಮದುವೆಯನ್ನು ಬಡವರ ಮನೆಯ ಹುಡುಗಿ ಸಾವಿತ್ರಿಯ ಜೊತೆಗೆ ಅವರೇ ಖುದ್ದಾಗಿ ನಿಂತು ಮಾಡಿಸಿದ್ದರು. ಸದಾಶಿವ ಸಾವಿತ್ರಿ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾ ಅನ್ಯೋನ್ಯತೆಯಿಂದ ಇದ್ದರು. ಅವರಿಬ್ಬರ ಪ್ರೀತಿಯ ಫಲವಾಗಿ ಹುಟ್ಟಿದ ಒಬ್ಬಳೇ ಮಗಳು ಅರುಂಧತಿ. ಹಾಲುಜೇನಿನಂತೆ ಬೆರೆತ ಸಂಸಾರದಲ್ಲಿ ಬಡತನವಿದ್ದರೂ ಅಲ್ಲಿ ಪ್ರೀತಿಗೆ ಕೊರತೆ ಇರಲಿಲ್ಲ.
ವಿಠ್ಠಲ್ ರಾವ್ ರ ಪತ್ನಿ ಗೌರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಅವರ ಮದುವೆ ಸಿರಿವಂತ ಕುಟುಂಬದ ಹುಡುಗಿಯರೊಂದಿಗೆ ಅದ್ದೂರಿಯಾಗಿ ಆಗಿತ್ತು. ಯಾವುದಕ್ಕೂ ಕೊರತೆಯಿಲ್ಲದ ಜಮೀನುದಾರರ ಕುಟುಂಬ ಅವರದಾಗಿತ್ತು. ವಿಠ್ಠಲ್ ರಾವ್ ಸದಾಶಿವನನ್ನು ಮಗನಂತೆಯೇ ಪ್ರೀತಿಸುತ್ತಾ ಅವನ ಸಂಸಾರಕ್ಕೆ ಎಲ್ಲಾ ಅನುಕೂಲ ಮಾಡಿಕೊಟ್ಟಿದ್ದರು. ಗೌರಿಯ ಮರಣಾನಂತರ ವಿಠ್ಠಲ್ ರಾವ್ ಸಕಲ ಸನ್ಮಾನದಿಂದ ಸದಾಶಿವ, ಸಾವಿತ್ರಿ ಹಾಗೂ ಅರುಂಧತಿಯನ್ನು ಮನೆ ತುಂಬಿಸಿಕೊಂಡಾಗ ಬೇರೆ ಮಕ್ಕಳ್ಯಾರೂ ತುಟಿಕ್ ಪಿಟಿಕ್ ಎಂದಿರಲಿಲ್ಲ.
ಬೇಯಿಸಿ ಹಾಕಲು ಬಿಟ್ಟಿ ಆಳೊಬ್ಬಳು ಸಿಕ್ಕಿದ್ದು ಅವರಿಗೆ ಕೊಂಚ ಸಮಾಧಾನವನ್ನೇ ತಂದಿತ್ತು. ಸದಾಶಿವ ರಾಯರು ದುಡಿಯಲು ಒಬ್ಬ ಆಳಾಗಿ ಮಾತ್ರ ಆ ಮನೆಗೆ ಬಂದಿದ್ದರು. ಮಿಕ್ಕ ಇಬ್ಬರು ಮಕ್ಕಳ ಸೇವೆಗೆ ಸದಾ ಸಿದ್ಧಾಗಿರಬೇಕಾಗುತ್ತಿತ್ತು. ಇದನ್ನೆಲ್ಲಾ ನೋಡುವಾಗ ಸಾವಿತ್ರಿಗೆ ಬಹಳ ದುಃಖವಾಗುತ್ತಿತ್ತು. ಆ ಮನೆಯ ಮಕ್ಕಳು, ಅವರ ಪತ್ನಿಯರು, ಅವರ ನಾಲ್ಕು ಗಂಡು ಮಕ್ಕಳ ನಡುವೆ ಅರುಂಧತಿ ಒಬ್ಬಳೇ ಮೊಮ್ಮಗಳೆಂಬ ಅಭಿಮಾನ ತಂದೆ ವಿಠ್ಠಲ್ ರಾವ್ ರಿಗೆ ಇದ್ದರೂ ಮಕ್ಕಳು ಯಾರಿಗೂ ಅವಳನ್ನು ಕಂಡರೆ ಆಗುತ್ತಿರಲಿಲ್ಲ.
ಸೊಸೆಯರಿಗೆ ಸಾವಿತ್ರಿ ಹಾಗೂ ಅರುಂಧತಿ ಆ ಮನೆಯ ಆಳುಗಳು ಮಾತ್ರವೇ. ಆ ವಿಷಯ ತಾಯಿ ಮಗಳಿಬ್ಬರಿಗೂ ಗೊತ್ತಿದ್ದರೂ ತಂದೆಗೆ ಹೇಳದಂತೆ ಸುಮ್ಮನಿರುತ್ತಿದ್ದರು. ಅರುಂಧತಿ ಬಹಳ ಸೌಮ್ಯ ಸ್ವಭಾವದವಳಾದರೂ ಜಾಣೆ. ಶಾಲೆಯಲ್ಲಿ ಎಲ್ಲರಿಗಿಂತ ಚೆನ್ನಾಗಿ ಓದುತ್ತಿದ್ದುದು ಸಹ ಅಣ್ಣಂದಿರ ಕೋಪಕ್ಕೆ ಕಾರಣವಾಗಿತ್ತು.
ಅವಳು ಪಿಯೂಸಿಗೆ ಬಂದಾಗ ಹಿರಿಯಣ್ಣನ ಮದುವೆಯಾಗಿತ್ತು. ಬಂದ ಅತ್ತಿಗೆಗೆ ತಾಯಿ ಮಗಳನ್ನು ಕಂಡರಾಗುತ್ತಿರಲಿಲ್ಲ. ಆಕೆ ಬಂದ ಮೇಲೇ ಎಲ್ಲಾ ಆಡಳಿತ ತಾನೇ ವಹಿಸಿಕೊಂಡು ಸಾವಿತ್ರಿಯನ್ನು ಬರಿ ಅಡುಗೆಯವಳಾಗಿ ಮಾತ್ರ ನೋಡುತ್ತಿದ್ದಳು.
ಸ್ವಭಾತಃ ಮೃದು ಸ್ವಭಾವದವಳಾದ ಸಾವಿತ್ರಿ ಗಂಡನಿಗೆ ಏನೂ ಹೇಳುತ್ತಿರಲಿಲ್ಲ. ಒಮ್ಮೊಮ್ಮೆ ತಾಯಿ ಮಗಳಿಗೆ ತಿನ್ನಲೂ ಏನೂ ಇರದೇ ನೀರು ಕುಡಿದೇ ಮಲಗಬೇಕಾಗುತ್ತಿತ್ತು. ವಿಠ್ಠಲ್ ರಾವ್ ರಿಗೆ ವಯಸ್ಸಾಗಿದ್ದ ಕಾರಣ ಮನೆಯ ಎಲ್ಲಾ ಆಡಳಿತ ಅವರ ಮಕ್ಕಳಾದ ರಾಜಗೋಪಾಲ್, ವೇಣುಗೋಪಾಲ್ ಅವರ ಸುಪರ್ದಿಗೆ ಬಂದಿತ್ತು. ಸದಾಶಿವ, ಸಾವಿತ್ರಿ, ಅರುಂಧತಿ ಆ ಮನೆಯಲ್ಲಿ ದುಡಿಯುವ ಬಿಟ್ಟಿ ಆಳುಗಳು ಮಾತ್ರವಾಗಿದ್ದರು.
ವರ್ಷದಲ್ಲಿ ವಿಠ್ಠಲ್ ರಾವ್ ತೀರಿಕೊಂಡಿದ್ದರು. ಆ ನಂತರ ಸದಾಶಿವ ಬೀದಿಗೆ ಬರಬೇಕಾದಾಗ ಗಂಡ, ಹೆಂಡತಿ ಎಲ್ಲರನ್ನು ಕಾಲು ಹಿಡಿದು ಪರಿಪರಿಯಾಗಿ ಬೇಡಿಕೊಂಡ ಮೇಲೆ ಅವರು ಆ ಮನೆಯಲ್ಲಿ ಕೆಲಸದ ಆಳುಗಳಂತೆ ಇರುವುದಾದರೆ ಇರಬಹುದು ಎಂದಾಗ ಅವರಿಗೆ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಅಲ್ಲಿಂದ ಅವರ ಜೀವನದಲ್ಲಿನ ಕರಾಳ ದಿನಗಳು ಶುರುವಾಗಿದ್ದವು. ಹಿಂದೆ ಇದ್ದ ಕೆಲಸದವಳನ್ನು ಬಿಡಿಸಿ ಅವಳ ಪಾಲಿನ ಕೆಲಸ ಅರಂಧತಿಗೆ ವಹಿಸಲಾಗಿತ್ತು. ಮೂಗೆತ್ತಿನ ಹಾಗೆ ದುಡಿಯುವುದೊಂದೇ ಆಗಿತ್ತು. ಅವರ ಕೋಣೆ ಸ್ಟೋರ್ ರೂಮಿಗೆ ಬದಲಾಗಿತ್ತು. ಅತಿಯಾದ ಕೆಲಸದಿಂದಾಗಿ ಸದಾಶಿವನ ಆರೋಗ್ಯ ಕೆಡತೊಡಗಿತ್ತು.
ತೋಟದಲ್ಲಿ ಮನೆ ಕಟ್ಟಿಸುವಾಗ ಎಲ್ಲಾ ಜವಾಬ್ದಾರಿ ಸದಾಶಿವನಿಗೆ ವಹಿಸಿದ್ದರು. ಒಂದು ಬೆಳಗ್ಗೆ ಎದ್ದು ಹಾಲು ಕರೆದು, ಕೊಟ್ಟಿಗೆ ಗುಡಿಸಿ ಸ್ವಚ್ಛಗೊಳಿಸಿ ಹೊಲದ ಕೆಲಸ ನೋಡಿಕೊಂಡು, ಹೊಸ ಮನೆಗೆ ನೀರು ಬಿಡಲು ಮೇಲೆ ಹತ್ತಿದ್ದ ಸದಾಶಿವ ಕಾಲು ಜಾರಿ ಬಿದ್ದು ಅಲ್ಲಿಯೇ ಮರಣನ್ನಪ್ಪಿದ್ದ.
ಅಲ್ಲಿಗೆ ಅರುಂಧತಿ ಹಾಗೂ ಸಾವಿತ್ರಿಗೆ ಆ ಮನೆಯ ಋಣ ತೀರಿತ್ತು. ಊಟಕ್ಕೆ ಬಡಿಸುವಾಗ ಎಲ್ಲರ ತಟ್ಟೆಯಲ್ಲಿ ಮಿಕ್ಕಿದ್ದ ಪದಾರ್ಥಗಳನ್ನು ತಮಗೆ ಬಡಿಸಿದ್ದನ್ನು ನೋಡಿದ ಅರುಂಧತಿಗೆ ಛೇ ಇಂತಹವರೊಂದಿಗೆ ಬದುಕುವುದಕ್ಕಿಂತ ಯಾವುದಾದರೂ ಹಾಳು ಬಾವಿಯಲ್ಲಿ ಬಿದ್ದು ಸಾಯುವುದು ಒಳಿತೆನ್ನಿಸಿ ಮರುದಿನ ಬೆಳಗ್ಗೆಯೇ ಅವರಿಗೇ ಹೇಳಿ ಹೊರಬಂದಿದ್ದಾಗಿತ್ತು.
`ಕೆಟ್ಟು ಪಟ್ಟಣ ಸೇರು,’ ಎಂಬ ಮಾತಿನಂತೆ ಪಟ್ಟಣಕ್ಕೇನೊ ಬಂದಿದ್ದರು. ಆದರೆ ಇರುವುದೆಲ್ಲಿ? ಯೋಚಿಸುತ್ತಾ ಸಾಯಿಬಾಬಾ ದೇವಸ್ಥಾನದಲ್ಲಿ ಊಟ ಬಡಿಸುತ್ತಿದ್ದು ನೋಡಿ ಭಕ್ತಿಯಿಂದ ಕೈ ಮುಗಿದು ಪ್ರಸಾದ ಸ್ವೀಕರಿಸಿದ್ದರು. ಬಹಳ ತಿಂಗಳುಗಳ ನಂತರ ತಾಯಿ ಮಗಳು ಹೊಟ್ಟೆ ತುಂಬಾ ಊಟ ಮಾಡಿದ್ದರು. ಊಟದ ಚಿಂತೆ ನೀಗಿದರೂ ಇರುವುದೆಲ್ಲಿ? ಹರೆಯದ ಹೆಣ್ಣು ಮಗಳನ್ನು ಎಲ್ಲಿ ಮಲಗಿಸಲಿ? ಎಂಬ ಚಿಂತೆಯಲ್ಲಿ ಸಾವಿತ್ರಿ ಹಣ್ಣಾಗಿದ್ದರು.
ದೇವರು ಅವರ ಮೊರೆ ಕೇಳಿದರೇನೋ ಎಂಬಂತೆ ಸಾವಿತ್ರಿಯ ದೂರದ ಸಂಬಂಧಿ ರಾಜಮ್ಮ ಸಿಕ್ಕಿ ಅವರೇ ಮಾತನಾಡಿಸಿದ್ದರು. ಅವರ ಕಥೆ ಕೇಳಿದರು, “ನೋಡೇ ಸಾತು…. ಬೇಕಿದ್ದರೆ ನೀವಿಬ್ಬರೂ ನಮ್ಮ ಮನೆ ಔಟ್ ಹೌಸ್ ನಲ್ಲಿ ಇದ್ದುಕೊಳ್ಳಿ. ಆದರೆ ಮನೆ ಕೆಲಸ ಎಲ್ಲಾ ನೀವಿಬ್ಬರೇ ಮಾಡಬೇಕು,” ಎಂದಾಗ ತಾಯಿ ಮಗಳಿಬ್ಬರೂ ಸಂತೋಷದಿಂದ ಒಪ್ಪಿಕೊಂಡಿದ್ದರು.
ಮತ್ತೆ ಅದೇ ಕತ್ತೆ ದುಡಿತ ಶುರುವಾಗಿತ್ತು. ಆದರೆ ಅವರ ಮಗಳು ಶೃತಿಗೆ ಮಾತ್ರ ಅರುಂಧತಿಯನ್ನು ಕಂಡರಾಗುತ್ತಿರಲಿಲ್ಲ. ಅವಳ ಮದುವೆಯಾಗಿತ್ತು. ಅವರ ಅಳಿಯ ಮನೆಯಲ್ಲಿದ್ದಾಗ ಅಪ್ಪಿತಪ್ಪಿಯೂ ಅರುಂಧತಿ ಅವನ ಕಣ್ಣಿಗೆ ಬೀಳದಂತೆ ಇರಬೇಕಾಗಿತ್ತು. ಶೃತಿಗೆ ಮದುವೆಯಾಗಿ ಐದು ವರ್ಷಗಳಾಗಿದ್ದರೂ ಮಕ್ಕಳಾಗಿಲ್ಲವೆಂಬ ಕೊರಗೊಂದನ್ನು ಬಿಟ್ಟರೆ ಅವಳು ತನ್ನ ಗಂಡನೊಂದಿಗೆ ಸುಖವಾಗಿದ್ದಳು. ಕೆಲಸ ಮಾಡಲು ಇಬ್ಬರಿಗೂ ಬೇಸರವಿರಲಿಲ್ಲ. ರಾಜಮ್ಮನ ಬಾಯಿ ಜೋರಾದರೂ ಉಡಲು ಉಣ್ಣಲು ಕಡಿಮೆ ಮಾಡಿರಲಿಲ್ಲ. ಬಹಳ ಸಂದೇಹದ ಬುದ್ಧಿಯವರು. ಸದಾ ಹದ್ದಿನ ಹಾಗೆ ಅವರ ಮೇಲೆ ಕಣ್ಣಿಟ್ಟಿರುತ್ತಿದ್ದರು. ಅರುಂಧತಿ ರಾಜಮ್ಮನನ್ನು ದೊಡ್ಡಮ್ಮ ಎಂದೇ ಕರೆಯುತ್ತಿದ್ದಳು.
ಅದು ಸಾವಿತ್ರಿಗೆ ತುಂಬಾ ನೋವಾಗುತ್ತಿತ್ತು. ಅವಮಾನ ಸಹಿಸಿ ಬದುಕುವುದು ಅನಿವಾರ್ಯವೇ ಆಗಿತ್ತು. ಅವರ ಒಬ್ಬಳೇ ಮಗಳು ಶೃತಿ ತೊಟ್ಟು ಬಿಟ್ಟ ಬಟ್ಟೆಗಳು ಅರುಂಧತಿಗೆ ಸಿಕ್ಕಿದ್ದವು. ಅವಳು ಓದನ್ನು ಮುಂದುವರಿಸಿದ್ದು ಸಹ ರಾಜಮ್ಮನಿಗೆ ಇಷ್ಟವಾಗಿರಲಿಲ್ಲ. ಆದರೂ ಯಾವ ಅಡ್ಡಿ ಅಂಕೆಯಿಲ್ಲದೇ ವರ್ಷಗಳು ಉರುಳಿದ್ದವು. ಅರುಂಧತಿ ಡಿಗ್ರಿ ಕೊನೆ ವರ್ಷದಲ್ಲಿದ್ದಳು. ಅಂದು ದೊಡ್ಡ ಮನೆಯಲ್ಲಿ ಜೋರು ಜೋರಾಗಿ ಮಾತುಕತೆ ನಡೆದಿತ್ತು. ಅಂದು ಅವರನ್ನು ಕೆಲಸಕ್ಕೂ ಕರೆದಿರಲಿಲ್ಲ.
ಅವರ ಅಳಿಯ ರಾಜಮ್ಮನ ಬಳಿ, “ಅತ್ತೆ, ಶೃತಿಗೆ ಮಕ್ಕಳು ಆಗುವುದಿಲ್ಲ ಎಂದಾದರೆ ನಾನು ಬೇರೆ ಯೋಚನೆ ಮಾಡಬೇಕು ಎಂದಿರುವೆ. ಏಕೆಂದರೆ ನನ್ನ ವಂಶ ಬೆಳೆಯಲೇ ಬೇಕು. ಅದು ಹೆಣ್ಣಾದರೂ ಸರಿ, ಗಂಡಾದರೂ ಸರಿ. ನಾನು ಎಲ್ಲ ರೀತಿಯಲ್ಲಿಯೂ ಸಮರ್ಥನಾಗಿರುವೆ ಎಂದೂ ಡಾಕ್ಟರ್ ಸರ್ಟಿಫೈ ಮಾಡಿದ್ದಾರೆ. ಶ್ರುತಿಯಲ್ಲಿ ಏನಾದರೂ ದೋಷವಿದ್ದರೂ ಇರಬಹುದು. ಅವಳನ್ನು ಡಾಕ್ಟರ್ ಹತ್ತಿರ ತೋರಿಸಿ. ನಮ್ಮ ಮದುವೆಯಾಗಿ ಆಗಲೇ ಐದು ವರ್ಷಗಳಾಯಿತು. ನಮ್ಮ ಅಮ್ಮ ದಿನ ಇದೇ ಮಾತನಾಡುತ್ತಾರೆ. ಇಲ್ಲದಿದ್ದರೆ ನೀನು ಬೇರೆ ಮದುವೆಯಾಗು ಎನ್ನುತ್ತಿದ್ದಾರೆ. ನನಗೂ ನನ್ನದೇ ಆದ ಮಗು ಬೇಕು….. ಅತ್ತೆ ನೋಡಿ ಅದೇನು ಮಾಡುತ್ತೀರೋ….. ನನಗೆ ಗೊತ್ತಿಲ್ಲ,” ಎಂದು ಅಲ್ಲಿಂದ ಹೊರಟು ಹೋಗಿದ್ದ.
ಶೃತಿ ಒಂದೇ ಸಮನೆ ಅಳುತ್ತಿದ್ದಳು, “ನಾನು ಅವರನ್ನು ಬಿಟ್ಟು ಬದುಕಲಾರೆ ಮಮ್ಮಿ…. ಏನಾದರೂ ಮಾಡಿ ಪ್ಲೀಸ್….!” ಎಂದು ಅವಳು ಮಗಳನ್ನು ಕಂಡು ತಾಯಿ ತಂದೆಯರ ಹೃದಯ ವಿಲವಿಲನೆ ಒದ್ದಾಡಿತು.
ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದ ಗಂಡನ ಬಳಿ ಬಂದ ರಾಜಮ್ಮ, “ಈಗ ಏನು ಮಾಡೋದು ಅಂದ್ರೆ….? ನನಗಂತೂ ದಿಕ್ಕೇ ತೋಚುತ್ತಿಲ್ಲ. ಇರೋ ಒಬ್ಬ ಮಗಳ ಜೀವನ ಹೀಗೆ ಹಾಳಾಗಿ ಹೋಗ್ತಿರೋದು ನೋಡಿದ್ರೆ ನನಗೇನೂ ಮಾಡಲು ತೋಚುತ್ತಿಲ್ಲ. ಅಸಲು ವಿಷಯ ನಮಗೇ ಗೊತ್ತಿದ್ದೂ ಅವಳ ಮದುವೆ ಮಾಡಿ ತಪ್ಪು ಮಾಡಿದೆನೇನೋ ಎನ್ನಿಸುತ್ತೆ. ಅಳಿಯಂದಿರಂತೂ ಬೇರೆ ಮದುವೆಯಾಗುವುದಾಗಿ ಖಡಾ ಖಂಡಿತವಾಗಿ ಹೇಳಿಬಿಟ್ಟಿದ್ದಾರೆ. ಬೀಗಿತ್ತಿಗೆ ಇದೇ ನೆಪ ಸಾಕು, ಏನಾದ್ರೂ ಮಾಡಲೇಬೇಕು….”
“ನನಗಂತೂ ಏನೂ ತೋಚುತ್ತಿಲ್ಲ ಕಣೆ, ನಾವು ಮಾಡೋ ಪ್ರಯತ್ನ ಎಲ್ಲಾ ಮಾಡಿ ಆಗಿದೆ. ಎಲ್ಲರ ಉತ್ತರ ಒಂದೇ. ಇನ್ನೇನು ಮಾಡೋಕ್ಕಾಗುತ್ತೆ. ಅವಳ ಹಣೇಲಿ ಬರೆದ ಹಾಗಾಗಲಿ ಅಷ್ಟೆ…..!”
ಎಲ್ಲ ಕಡೆ ಶೃತಿಯನ್ನು ತೋರಿಸಿ ಆಗಿತ್ತು. ಎಲ್ಲಾ ಗೈನಕಾಲಜಿಸ್ಟ್ ರನ್ನು ಸಂಪರ್ಕಿಸಿ ಆಗಿತ್ತು. ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. `ಅವಳ ಗರ್ಭಕೋಶ ಬಹಳವೇ ಕಿರಿದಾಗಿದ್ದು ಮಗುವನ್ನು ಹೊರಲು ಸಶಕ್ತವಾಗಿಲ್ಲ. ಯಾವುದಾದರೂ ಸರೋಗೇಟ್ ಮದರ್ ಸಿಕ್ಕರೆ ಒಳ್ಳೆಯದು. ಇನ್ನು ಅಕಸ್ಮಾತ್ ಅವಳೇನಾದರೂ ಪ್ರೆಗ್ನೆಂಟ್ ಆದರೆ ಅವಳ ಜೀವಕ್ಕೆ ಅಪಾಯ!’ ಎಂದಾಗ ತಾಯಿತಂದೆಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತಾಗಿತ್ತು.
ಅಂದು ಸಾವಿತ್ರಿಗೆ ಬೆಳಗಿನಿಂದಲೇ ಉಸಿರು ಕಟ್ಟಿದಂತಾಗಿ ಏಳಲೂ ಸಹ ಆಗಿರಲಿಲ್ಲ. ಅರುಂಧತಿ, “ಅಮ್ಮಾ…. ನೀನು ಮಲಗಿಕೋ. ನಾನು ಎಲ್ಲಾ ಕೆಲಸ ಮಾಡುತ್ತೇನೆ,” ಎಂದು ತಾಯಿಯನ್ನು ಬಲವಂತವಾಗಿ ಮಲಗಿಸಿದ್ದಳು. ಅವಳು ಕೆಲಸ ಮಾಡಲು ಬಂದಾಗ ಮನೆಯಲ್ಲಿ ವಿಪರೀತ ಎನಿಸುವಷ್ಟು ನೀರವತೆ ಇತ್ತು. ತನ್ನ ಪಾಡಿಗೆ ತಾನು ಕೆಲಸ ಮುಗಿಸಿ ಮನೆಗೆ ಬಂದಾಗಲೂ ಯಾವ ಉತ್ತರ ಸಿಕ್ಕಿರಲಿಲ್ಲ.
ಮನೆಗೆ ಬಂದವಳೆ ಸ್ವಲ್ಪ ಗಂಜಿ ಮಾಡಿ ತಾಯಿಗೆ ಕುಡಿಸಲು ಯತ್ನಿಸಿದಳು. ಅವರನ್ನು ಎಷ್ಟು ಅಲುಗಿಸಿದರೂ ಏಳದಿದ್ದಾಗ ಅವರ ಮೂಗಿನ ಬಳಿ ಕೈಯಿಟ್ಟು ನೋಡಿದಳು. ಅವರ ಉಸಿರು ಯಾವಾಗಲೋ ನಿಂತುಹೋಗಿ ಪರಮಾತ್ಮನಲ್ಲಿ ಲೀನವಾಗಿ ಹೋಗಿತ್ತು. ಅವಳಿಗೇನು ಮಾಡಬೇಕು ಎಂದೇ ತೋಚಲಿಲ್ಲ. ದೊಡ್ಡ ಮನೆಗೆ ಓಡಿ ಬಂದವಳೇ, “ದೊಡ್ಡಮ್ಮ….. ದೊಡ್ಡಮ್ಮ….” ಎಂದು ಅಳುತ್ತಾ ಬಂದವಳನ್ನು ನೋಡಿ ಗಾಬರಿಯಿಂದ ಕೇಳಿದವರಿಗೆ ಎಲ್ಲವನ್ನೂ ಹೇಳಿದ್ದಳು. ಅವಳನ್ನು ಅಂತಹ ಸ್ಥಿತಿಯಲ್ಲಿ ನೋಡಿದ ರಾಜಮ್ಮನಿಗೆ ಆ ಸಂದರ್ಭದಲ್ಲಿಯೂ ಥಟ್ಟನೆ ಉಪಾಯವೊಂದು ತಲೆಯಲ್ಲಿ ಮಿಂಚಿನಂತೆ ಹೊಳೆದಿತ್ತು. ಅರುಂಧತಿ ತಾಯಿಯ ಅಂತ್ಯ ಸಂಸ್ಕಾರಕ್ಕೆ ರಾಜಮ್ಮನ ಬಳಿ ಸಹಾಯ ಕೇಳಿದಾಗ, “ನೋಡು ಅರುಂಧತಿ, ನೀನು ಅವಳನ್ನು ಡಾಕ್ಟರ್ ಹತ್ತಿರ ಸಹ ಕರೆದುಕೊಂಡು ಹೋಗಿಲ್ಲ. ಅದಲ್ಲದೆ, ನೀವು ಈ ಮನೆಯ ಕೆಲಸದವರು ಎಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿ ಜನರು ನಮ್ಮ ಮೇಲೆ ಸಂಶಯಪಡಬಹುದು. ಡಾಕ್ಟರ್ ಸರ್ಟಿಫಿಕೇಟ್ ತೆಗೆದುಕೊಳ್ಳಲು ತುಂಬಾ ಪ್ರೊಸೀಝರ್ ಇದೆ. ಇದಕ್ಕೆಲ್ಲ ತುಂಬಾ ಹಣ ಸಹ ಖರ್ಚಾಗುತ್ತದೆ. ನಾವು ಈ ವಿಷಯದಲ್ಲಿ ತಲೆ ಹಾಕಬೇಕು ಎಂದಾದರೆ ನೀನು ನಾವು ಹೇಳಿದಂತೆ ಕೇಳಬೇಕು. ಹಾಗೆಂದು ಬರೆದು ಕೊಡಬೇಕು. ಇದಕ್ಕೆ ಒಪ್ಪಿದರೆ ಮಾತ್ರ ಸಹಾಯ ಮಾಡುತ್ತೇನೆ,” ಎಂದರು.
ಬೇರೆ ದಾರಿಯೇ ಕಾಣದೆ ಅರುಂಧತಿ ಒಪ್ಪಲೇಬೇಕಾಯ್ತು. ಹಾಗಾಗಿ ಯಾವುದೇ ಕೊರತೆ ಬಾರದಂತೆ ಸಾವಿತ್ರಿಯ ಅಂತ್ಯಕ್ರಿಯೆ ನಡೆದಿತ್ತು. ತಾಯಿಯ ಅಂತ್ಯ ಸಂಸ್ಕಾರವೆಲ್ಲವನ್ನೂ ಮಾಡಿ ಮುಗಿಸಿದ ಅರುಂಧತಿ ರಾಜಮ್ಮನವರಿಗೆ ಋಣಿಯಾಗಿದ್ದಳು. ಅವಳ ಕೊನೆಯ ಪರೀಕ್ಷೆಯ ಉಳಿದ ಪೇಪರ್ಸ್ ಬರೆದು ಬಂದಿದ್ದಳು. ದೊಡ್ಡಮ್ಮನಿಗೆ ಮಾತು ಕೊಡುವುದೇನು? ಬಾಂಡ್ ಪೇಪರ್ ನಲ್ಲಿ ಬರೆದು ಕೊಟ್ಟಾಗಿತ್ತು. ಹಾಗಾಗಿ ಅವರೇನೇ ಹೇಳಿದರೂ ಅವರ ಮಾತಿನಂತೆ ನಡೆಯುವುದು ಅನಿವಾರ್ಯವಾಗಿತ್ತು.
ರಾಜಮ್ಮ ತಮ್ಮ ಅಳಿಯ ಮನುಗೆ, “ನೋಡಿ ಅಳಿಯಂದಿರೇ, ನೀವು ಅವಳಿಂದ ಸ್ವಲ್ಪ ದೂರವಿರಬೇಕು. ಅವಳಿಗೆ ಔಷಧಿ ಕೊಡಿಸುತ್ತಿದ್ದೇವೆ,” ಎಂದು ಹೇಳಿ ಅವನಿಂದ ಶೃತಿಯನ್ನು ದೂರ ಇರಿಸಿದರು.
ಅರುಂಧತಿ ಮುಟ್ಟಾದ ಏಳನೇ ದಿನ ಅವಳನ್ನು ತಮ್ಮ ಬಳಿಗೆ ಕರೆಸಿಕೊಂಡ ರಾಜಮ್ಮ ಎಲ್ಲವನ್ನೂ ತಿಳಿಸಿ ಹೇಳಿದರು. ಅವರ ಮಾತನ್ನು ಕೇಳಿ ಅರುಂಧತಿ ಹೌಹಾರಿದ್ದಳು. ಇದೆಂತಹ ಸಂದಿಗ್ಧ ಪರಿಸ್ಥಿತಿ ನನ್ನದು! ಮದುವೆಯೇ ಇಲ್ಲದೇ ಪರಪುರುಷನನ್ನು ಸೇರಬೇಕು ಎಂದರೆ ಹೇಗೆ? ಇದು ತಪ್ಪಲ್ಲವೇ….? ಎನಿಸಿ ಅಳುತ್ತಾ, “ಇದೊಂದು ಬಿಟ್ಟು ಬೇರೇನೂ ಹೇಳಿದ್ರೂ ಕೇಳ್ತೇನೆ…..” ಎಂದು ಅವರ ಕಾಲು ಹಿಡಿದು ಬೇಡಿಕೊಂಡಿದ್ದಳು.
ದೊಡ್ಡಮ್ಮ ಅವಳ ಅಳುವಿಗೆ ಕರಗದೆ, “ನೋಡು ಅರು, ನೀನು ಬರೆದು ಕೊಟ್ಟಿರುವ ಮಾತಿಗೆ ತಪ್ಪುವಂತಿಲ್ಲ….” ಎಂದು ಕೊಂಚ ಕಠೋರವಾಗಿಯೇ ಹೇಳಿದರು.
`ದೇವರೇ, ನೀನೇಕೆ ಒಬ್ಬೊಬ್ಬರ ಹಣೆಯಲ್ಲಿ ಒಂದೊಂದು ರೀತಿ ಹೀಗೇಕೆ ಬರೆದಿರುವೆ? ನಾವು ಸ್ವತಂತ್ರವಾಗಿ ಬಾಳುವಂತೆಯೇ ಇಲ್ಲವೇ? ನಾವು ಅದೆಷ್ಟು ಪಾಪ ಮಾಡಿ ಈ ಭೂಮಿಗೆ ಬಂದಿದ್ದೇವೆ,’ ಎಂದೆಲ್ಲಾ ದೇವರ ಮುಂದೆ ಗೋಳಾಡಿ ಅತ್ತಿದ್ದಳು. ಆದರೆ ಅವಳ ಅಳು ಯಾವ ದೇವರ ಮನವನ್ನೂ ಕರಗಿಸಲು ಆಗಿರಲಿಲ್ಲ.
ರಾಜಮ್ಮ ಅಂದು ಅರುಂಧತಿಯನ್ನು ಕರೆದು ಶೃತಿಯ ಸೀರೆಯುಡಿಸಿ, ಸಿಂಗರಿಸಿ, “ನೋಡು ಅರು, ಅಪ್ಪಿ ತಪ್ಪಿಯೂ ಮಾತನಾಡಬೇಡ. ನಾನು ಅಳಿಯಂದಿರ ಬಳಿ ಶೃತಿ ಇಂದು ಮೌನ ವ್ರತ ಹಿಡಿದಿದ್ದಾಳೆ. ಆದ್ದರಿಂದ ಅವಳನ್ನು ಮಾತನಾಡಿಸಬೇಡಿ. ಡಾಕ್ಟರ್ ಅವಳಿಗೆ ಔಷಧಿ ಕೊಟ್ಟಿದ್ದಾರೆ. ಆದ್ದರಿಂದ ಈ ಬಾರಿ ಅವಳು ಗರ್ಭ ಧರಿಸಬಹುದು ಎಂದಿದ್ದಾರೆ ಎಂದು ಹೇಳಿದ್ದೇನೆ. ಆದ್ದರಿಂದ ಮಾತನಾಡಲೇಬೇಡ,” ಎಂದು ಹೇಳಿ ಅವಳನ್ನು ಅಳಿಯ ಮನುವಿನ ಕೋಣೆಗೆ ಕಳುಹಿಸಿದರು.
ಮನು ತನ್ನ ಪತ್ನಿಯನ್ನು ಸೇರುವ ಖುಷಿಯಲ್ಲಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ಕುಡಿದಿದ್ದ. ಸುಮಾರು ದಿನಗಳಿಂದ ಹೆಂಡತಿಯಿಂದ ದೂರವಿದ್ದ ಅವನು ಅವಳ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾದಿದ್ದ. ಹೆದರುತ್ತಲೇ ಆ ರೂಮಿಗೆ ಬಂದಿದ್ದಳು. ಅರುಂಧತಿ ಮದುವೆಯೇ ಇಲ್ಲದೆ, ಮಂಗಳಸೂತ್ರದ ನಂಟಿಲ್ಲದೆ ಮನೋಹರನ ಕೋಣೆಗೆ ಕಾಲಿಟ್ಟಳು. ಅಲಂಕೃತಗೊಂಡ ಅರುಂಧತಿಯನ್ನು ಗುರುತಿಸುವಷ್ಟು ತಾಳ್ಮೆಯಾಗಲಿ, ಪ್ರೀತಿಯಾಗಲಿ ಮನೋಹರನಿಗೆ ಇರಲಿಲ್ಲ. ಅವನು ಅವಳನ್ನು ತಬ್ಬಿಕೊಂಡು ಉನ್ಮತ್ತನಾಗಿದ್ದ. ನಶೆಯಲ್ಲಿದ್ದ ಮನುವಿನ ಬಳಿ ಏನೋ ಒಂದು ರೀತಿಯ ವಾಸನೆ ಬಂದಾಗ ಅರುಂಧತಿಗೆ ಹೊಟ್ಟೆ ತೊಳೆಸಿದಂತೆ ಆಯಿತು. ಆದರೂ ಯಾರನ್ನು ಕೇಳುವುದು? ಅದೇ ಸಮಯದಲ್ಲಿ ರಾಜಮ್ಮ ಕರೆಂಟ್ ಸಹ ತೆಗೆದುಬಿಟ್ಟಿದ್ದರು.
“ವಾವ್ ಶೃತಿ, ಇದೇನಿದು ನೀನು ಇಷ್ಟು ಚೆನ್ನಾಗಿ ಮೈ ತುಂಬಿಕೊಂಡಿರುವೆ?” ಎನ್ನುತ್ತಲೇ ಅವಳನ್ನು ಆಕ್ರಮಿಸಿಕೊಂಡಿದ್ದ. ಪುರುಷನ ಸ್ಪರ್ಶ ಹೇಗಿರುತ್ತದೆ ಎನ್ನುವುದನ್ನೇ ತಿಳಿಯದ ಅರುಂಧತಿ ಅವನ ಸ್ಪರ್ಶದಲ್ಲಿ ನಲುಗಿದ್ದಳು. ಅದೊಂದು ರೀತಿಯಲ್ಲಿ ಅವನೇ ತನ್ನವನು ಎಂಬಂತೆ ಅವನಿಗೆ ತನ್ನನ್ನು ಮನಃಪೂರ್ವಕವಾಗಿ ಅರ್ಪಿಸಿಕೊಂಡಿದ್ದಳು. ಈ ಪ್ರಕರಣ ಮೂರು ನಾಲ್ಕು ದಿನ ನಡೆದರೂ ಅವನಿಗೇಕೆ ತಾನು ಶೃತಿಯಲ್ಲ ಎಂಬುದು ಅರಿವಾಗಲಿಲ್ಲ ಎಂಬುದು ಮಾತ್ರ ಅವಳಿಗೇ ತಿಳಿಯಲೇ ಇಲ್ಲ.
ಅದಾದ ತಿಂಗಳಿಗೆ ಅವಳಿಗೆ ಮುಟ್ಟು ನಿಂತಿತ್ತು. ಅವಳನ್ನು ತಮ್ಮ ಪರಿಚಯದ ಡಾಕ್ಟರ್ ಬಳಿ ಕರೆದೊಯ್ದು ಅವಳು ಗರ್ಭಿಣಿ ಎಂದು ಖಚಿತ ಪಡಿಸಿಕೊಂಡ ರಾಜಮ್ಮ, ಅಂದಿನಿಂದ ಅವಳ ಆರೈಕೆ ಶುರು ಮಾಡಿದರು. ಜೊತೆಗೆ ಶೃತಿ ಬಸುರಿಯಂತೆ ನಡೆದುಕೊಳ್ಳತೊಡಗಿದ್ದಳು. ಮನು ಅವಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳತೊಡಗಿದ. ಆದರೆ ರಾಜಮ್ಮ ಅರುಂಧತಿಯನ್ನು ಗೃಹಬಂಧನದಲ್ಲಿ ಇರಿಸಿದ್ದರು. ಅವಳಿಗೆ ಮೂರು ತಿಂಗಳು ತುಂಬು ಹೊತ್ತಿಗೆ ಕಾಕತಾಳೀಯ ಎಂಬಂತೆ ಮನೋಹರ್ ಒಂದು ವರ್ಷ ಅಮೆರಿಕಾಗೆ ಹೋಗಬೇಕಾಗಿ ಬಂದಿತ್ತು. ಪತ್ನಿಯನ್ನು ಬಿಡಲಾರದೆ ಬಿಟ್ಟು ಹೋಗಿದ್ದ.
ಅತ್ತ ಅರುಂಧತಿ ಮನೋಹರನೇ ತನ್ನ ಪತಿ ಎಂದು ನಂಬಿ ಎಂದಾದರೂ ಅವನಿಗೆ ತನ್ನ ನೆನಪಾಗುವುದೇ ಎಂದು ಕಾದಿದ್ದೇ ಬಂತು. ನಶೆಯಲ್ಲಿದ್ದವನಿಗೆ ಅರುಂಧತಿ ಯಾರೆಂದೇ ತಿಳಿದಿರಲಿಲ್ಲ. ಅವನು ಅಮೆರಿಕಾಗೆ ಹೋದ ಮೇಲೆ ಮಗಳು ಶೃತಿ ಮತ್ತು ಅರುಂಧತಿಯನ್ನು ಬೇರೆ ಊರಿಗೆ ಕರೆತರಲಾಗಿತ್ತು. ಜೊತೆಗೆ ಅವಳನ್ನು ಬಹಳ ಚೆನ್ನಾಗಿ ನೋಡಿಕೊಂಡರು. ಶೃತಿ ಸಹ ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ನವ ಮಾಸ ಕಳೆದು ಮಗು ಬಹಳ ಬೆಳೆದಿದ್ದರಿಂದ ಹೆರಿಗೆ ಬಹಳ ಕಷ್ಟವಾಗಿ ಎರಡು ದಿನ ನೋವು ಸಹಿಸಿ ಸಾಯುವಂತಾಗಿತ್ತು. ಅಂತೂ ಮದುವೆಯಾಗದೆಯೇ ಸುಂದರವಾದ ಗಂಡು ಮಗುವಿನ ತಾಯಿಯಾಗಿದ್ದಳು ಅರುಂಧತಿ.
ಮೂರು ತಿಂಗಳು ಅವಳ ಬಳಿ ಹಾಲು ಕುಡಿಯಲು ಮಾತ್ರ ಬರುತ್ತಿದ್ದ ಕಂದ ಅವಳಿಂದ ಶಾಶ್ವತವಾಗಿ ದೂರಾಗುವ ದಿನ ಬಂದೇಬಿಟ್ಟಿತ್ತು. ದೊಡ್ಡಮ್ಮ ಅವಳಿಗೆ ಕೈ ತುಂಬಾ ಹಣ ಕೊಟ್ಟು, ತಮ್ಮ ಪರಿಚಯದವರ ಮೂಲಕ ದೆಹಲಿಯ ಚಾಂದನಿ ಚೌಕ್ ನ ಹಳೆಯ ಬಿಲ್ಡಿಂಗ್ ನಲ್ಲಿ ಒಂದು ಪುಟ್ಟ ರೂಮ್ ಬಾಡಿಗೆಗೆ ವ್ಯವಸ್ಥೆ ಮಾಡಿ, ಎಂದಿಗೂ ಈ ಕಡೆ ತಲೆ ಇಟ್ಟೂ ಸಹ ಮಲಗಬಾರದು ಎಂಬ ಕಂಡೀಷನ್ ಹಾಕಿ ಕಳಿಸಿದ್ದರು. ಅರುಂಧತಿಗೆ ತಾನು ಬಾಡಿಗೆ ತಾಯಿಯೋ ಅಥವಾ ನಿಜವಾದ ತಾಯಿಯೋ…. ತಾನು ಹೆತ್ತ ಕಂದನಿಗೆ ತಾನೇನೂ ಅಲ್ಲವೇ? ಎನಿಸಿ ಮಗುವನ್ನು ನೋಡಲೂ ಆಗದೆ ಭಾರವಾದ ಹೃದಯದಿಂದ ಹೊರಟಿದ್ದಳು.
ತನ್ನೆಲ್ಲಾ ಸಾಮಾನಿನೊಂದಿಗೆ ಮಗುವನ್ನೂ ನೋಡಲಾಗದ ಅರುಂಧತಿ ಎಂದೂ ನೋಡದಿದ್ದ, ಭಾಷೆ ಗೊತ್ತಿಲ್ಲದ ದೆಹಲಿಗೆ ಬಂದು ಇಳಿದಿದ್ದಳು. ದೆಹಲಿಯಲ್ಲಿ ಅರುಂಧತಿಯ ಹೊಸ ಬಾಳು ಶುರುವಾಗಿತ್ತು. ಗಂಡ ಆರ್ಮಿಯಲ್ಲಿದ್ದಾನೆ ಎಂದು ಹೇಳಿಕೊಂಡಿದ್ದಳು. ಎದೆ ತುಂಬಿ ಜ್ವರ ಬಂದು ತಾಳಲಾರದೆ ನೋವು ಅನುಭವಿಸಿ ಕಂದನಿಗಾಗಿ ಚಡಪಡಿಸಿದ್ದಳು. ಸ್ವಲ್ಪ ದಿನಗಳಲ್ಲಿಯೇ ದೆಹಲಿಯ ಪ್ರಸಿದ್ಧ ಕೇಶವ್ ಲಾಲ್ ಝೀರಿಯವರ ದೊಡ್ಡ ಆಭರಣಗಳ ಮಳಿಗೆಯಲ್ಲಿ ಅವಳಿಗೇ ಕೆಲಸ ಸಿಕ್ಕಿತ್ತು. ಜೀವನ ಯಾವ ಅಡೆತಡೆಯಿಲ್ಲದೆ ಸಾಗಿತ್ತು. ಯಾರ ಅಪ್ಪಣೆಗೂ ಕಾಯದೆ ದಿನಗಳು ವಾರಗಳಾಗಿ, ವಾರಗಳು ತಿಂಗಳುಗಳಾಗಿ, ತಿಂಗಳು ವರ್ಷಗಳಾಗಿ ಉರುಳತೊಡಗಿತ್ತು.
ಅದೊಂದು ದಿನ ತಮ್ಮ ಶೋರೂಮ್ ಗೆ ಬಂದಿದ್ದ ಆ ದಂಪತಿಗಳನ್ನು ಕೂಡಲೇ ಅರುಂಧತಿ ಗುರುತಿಸಿದ್ದಳು. ಅವರೊಂದಿಗಿದ್ದ ತನ್ನ ಕಂದ, ತಾನು ಹೆತ್ತ ಮಗುವನ್ನು ಕಂಡು ಸಂತೋಷದಿಂದ ಅವಳ ಹೃದಯ ತುಂಬಿ ಬಂದಿತ್ತು. ಇಷ್ಟು ಮುದ್ದಾಗಿದ್ದಾನೆಯೇ ತಾನು ಹೆತ್ತ ಕಂದ, ಏನೆಂದು ಹೆಸರಿಟಿದ್ದಾರೋ? ಎಂದುಕೊಳ್ಳುತ್ತಲೇ ಅವರ ಕಣ್ಣಿಗೆ ಬೀಳಬಾರದೆಂದು ಗೆಳತಿ ಮಿಥಿಲಾಗೆ ಹೇಳಿ ತಾನು ಒಳಗಡೆ ಹೋದಳು. ಅವಳಿಗೇ ಶೃತಿ ತನ್ನನ್ನು ಗುರುತಿಸುವುದು ಬೇಡವಾಗಿತ್ತು. ದಂಪತಿಗಳು ಮಗುವಿಗಾಗಿ ಬ್ರೇಸ್ಲೆಟ್ ಖರೀದಿಸಲು ಬಂದಿದ್ದು ಒಂದನ್ನು ಆರಿಸಿಕೊಂಡರು. ಮೊದಲೇ ಬಹಳ ತೆಳ್ಳಗಿದ್ದ ಶೃತಿ ಈಗ ಬಹಳವೇ ಎನ್ನುವಷ್ಟು ಕೃಷಳಾಗಿದ್ದಳು. ಕಣ್ಣಿನಲ್ಲಿನ ಹೊಳಪು ಮಾಸಿತ್ತು. ಮುಖ ನಿಸ್ತೇಜವಾಗಿತ್ತು. ದಂಪತಿಗಳು ವ್ಯಾಪಾರ ಮುಗಿಸಿ ಹೊರಟರು, ಅಲಂಕೃತ ಗೊಂಬೆಯನ್ನು ನೋಡುತ್ತಾ ನಿಂತಿದ್ದ ಮಗುವನ್ನು, “ಚಂದನ್ ಕಮ್ ಹಿಯರ್,” ಎಂದು ಮನೋಹರ್ ಕರೆದಿದ್ದು ಕೇಳಿ, ಅರುಂಧತಿಯ ಕಿವಿಗಾನಂದವಾಯಿತು. ಮುದ್ದಾದ ಮಗುವಿಗೆ ಮುದ್ದಾದ ಹೆಸರು ಎಂದುಕೊಂಡು ತಂದೆ ಮಗುವನ್ನು ನೋಡುತ್ತಾ ನಿಂತವಳ ಕಣ್ಣಿಂದ ಕಂಬನಿಯ ಧಾರೆ ಅಡೆತಡೆಯಿಲ್ಲದೇ ಹರಿದಿತ್ತು.
ಅರುಂಧತಿಯ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಗೆಳತಿ ಮಿಥಿಲಾ, ಒಳಗೆ ಬಂದು ಅವಳನ್ನು ಭುಜಕ್ಕೆ ಒರಗಿಸಿಕೊಂಡು, “ಇಷ್ಟೇ ಅರು, ಮಗುವಿಗೂ ನಿನಗೂ ಇದ್ದ ಋಣಾನುಬಂಧ ಎಂದುಕೋ. ನಿನ್ನ ಮಗ ಬಹಳ ಮುದ್ದಾಗಿದ್ದಾನೆ. ಸ್ಥಿತಿವಂತ ಕುಟುಂಬದಲ್ಲಿ ಬೆಳೆಯುತ್ತಿದ್ದಾನೆ, ಚೆನ್ನಾಗಿದ್ದಾನೆ. ಅದಕ್ಕಿಂತ ಬೇರೆ ಇನ್ನೇನು ಬೇಕು? ದೂರದಿಂದಲೇ ಮಗುವನ್ನು ನೋಡಿ ಸಂತೋಷಪಡುವ ಭಾಗ್ಯವನ್ನಾದರೂ ಆ ಭಗವಂತ ಇಂದು ಕರುಣಿಸಿದನಲ್ಲ ಅಷ್ಟಕ್ಕೆ ಸಂತೋಷಪಡು,” ಎಂದು ಸಮಾಧಾನಪಡಿಸಿದಳು.
ಅವಳನ್ನು ತಬ್ಬಿಕೊಂಡು ಬೋರೆಂದು ಅಳುತ್ತಿದ್ದ ಅರುಂಧತಿಗೆ ಇಂದೇಕೋ ಕೆಲಸ ಮುಂದುವರಿಸಲಾಗದೆ ಭಾರವಾದ ಮನಸ್ಸಿನಿಂದ ಅರ್ಧ ದಿನ ರಜೆ ಹಾಕಿ ಮನೆಗೆ ಬಂದಳು. ಅರುಂಧತಿಗೆ ಎಂದೂ ಇಲ್ಲದೆ ಮಗುವಿನ ನೆನಪು ಬಹಳವಾಗಿ ಕಾಡತೊಡಗಿತ್ತು. ಅವನ ಮುದ್ದು ಮುಖ ನೆನಪಾಗಿ, `ಕಂದಾ ನನ್ನ ಚಂದನ್, ನಾನು ಬಾಡಿಗೆ ತಾಯಿಯಲ್ಲ ಪಾಪು. ನಾನು ನಿನ್ನ ನಿಜವಾದ ತಾಯಿ. ಆದರೆ ಅದನ್ನು ಕೇಳುವವರ್ಯಾರು…..? ನಾನು ತುಂಬಾ ದೊಡ್ಡ ತಪ್ಪು ಮಾಡಿಬಿಟ್ಟೆ. ನಿನ್ನನ್ನು ಎತ್ತಿಕೊಂಡು ಓಡಿಬಂದು ಬಿಡಬೇಕಿತ್ತು. ನಾನು ಪಾಪಿ ನೀನು ಎದೆ ಹಾಲಿಗಾಗಿ ಅದೆಷ್ಟು ಹಂಬಲಿಸಿ, ರಚ್ಚೆ ಹಿಡಿದು ಅತ್ತೆಯೋ…. ನಾನು ತುಂಬಾ ಕೆಟ್ಟವಳು. ಅದೊಂದು ಕ್ಷಣ ನಾನು ಸ್ವಾರ್ಥಿಯಾಗಿಬಿಟ್ಟೆ ಮಗು. ಎಲ್ಲಿದ್ದರೂ ನೀನು ಚೆನ್ನಾಗಿರಬೇಕು. ನನ್ನನ್ನು ಕ್ಷಮಿಸಿಬಿಡು ಕಂದ….’ ಎಂದು ಹೊರಳಾಡಿ ಅತ್ತಿದ್ದಳು.
ಬಾಗಿಲು ತಟ್ಟಿದ ಶಬ್ದವಾದಾಗ, ತನ್ನನ್ನು ಸಮಾಧಾನಪಡಿಸಲು ಮಿಥಿಲಾ ಬಂದಿರಬೇಕು ಎಂದುಕೊಂಡು ಬಾಗಿಲು ತೆರೆದಳು. ಎದುರಿಗೆ ನಿಂತಿದ್ದವಳು ಮಿಥಿಲಾಳೆ ಆಗಿದ್ದರೂ ಅವಳ ಹಿಂದೆ ನಿಂತಿದ್ದ ಶೃತಿ ಹಾಗು ಮನೋಹರ್ ರನ್ನು ನೋಡಿ ಸ್ವಲ್ಪ ಭಯವೇ ಆಗಿತ್ತು. ಆದರೂ ಸಾವರಿಸಿಕೊಂಡು, “ಬನ್ನಿ, ಶೃತಿ ಅಕ್ಕಾ ಬನ್ನಿ…..” ಎಂದು ಒಳಗೆ ಕರೆದಿದ್ದಳು.
ಒಳಗೆ ಬಂದ ಶೃತಿ ಮನೆಯನ್ನೆಲ್ಲ ಒಮ್ಮೆ ನೋಡಿದವಳೇ ಅಲ್ಲಿದ್ದ ಕುರ್ಚಿಯಲ್ಲಿ ಗಂಡನಿಗೆ ಕೂರಲು ಹೇಳಿದಳು. ಮಿಥಿಲಾಳತ್ತ ನೋಡಿದಾಗ, ಅದನ್ನು ಅರಿತವಳಂತೆ ಮಿಥಿಲಾ, “ಚಂದು, ನಿನಗೇ ಎಂಥಾ ಟಾಯ್ಸ್ ಬೇಕು….? ಚಾಕ್ಲೆಟ್ ಸಹ ಕೊಡಿಸ್ತೀನಿ ಬಾ,” ಎಂದು ಕರೆದಳು.
“ನನಗೆ ಚಾಕ್ಲೆಟ್ ಬೇಡ…. ಕಾರು ಕೊಡಿಸ್ತೀರಾ ಆಂಟಿ….?” ಎಂದು ತಾನಾಗಿಯೇ ಕೇಳಿದಾಗ, ಮಿಥಿಲಾಳಿಗೆ ಮಗುವಿನ ಮೇಲೆ ಪ್ರೀತಿ ಉಕ್ಕಿ ಬಂದಿತ್ತು.
“ಆಯ್ತು ಬಾ ಕಂದ, ನಿನಗೇನೂ ಬೇಕೋ ಎಲ್ಲಾ ಕೊಡಿಸ್ತೀನಿ…..” ಎಂದು ಅವನನ್ನು ಕರೆದುಕೊಂಡು ಹೋದಳು ಮಿಥಿಲಾ.
ಅವಳು ಹೋದ ಮೇಲೆ ಅರುಂಧತಿಯ ಬಳಿ ಬಂದ ಶೃತಿ, “ಅರು, ನೀನು ನನ್ನನ್ನು ಕ್ಷಮಿಸಬೇಕು. ನಾನು ಮಾಡಿದ ತಪ್ಪಿಗೆ ದೇವರು ನನಗೆ ಸರಿಯಾದ ಶಿಕ್ಷೆಯನ್ನು ಕೊಟ್ಟಿದ್ದಾನೆ. ಡ್ಯಾಡಿ ಆ್ಯಕ್ಸಿಡೆಂಟ್ ನಲ್ಲಿ ಹೋಗಿಬಿಟ್ಟರು. ಮಮ್ಮಿ ಈಗ ಜೀವಂತ ಶವವಾಗಿ ಬಿದ್ದಿದ್ದಾರೆ. ಅವರಿಗೆ ಲಕ್ವಾ ಹೊಡೆದಿದೆ….” ಎಂದಳು.
ಅರುಂಧತಿ ಮನೋಹರ್ ನತ್ತ ನೋಡಿದಳು. “ಅವರನ್ನು ನೋಡಬೇಡ, ಅವರಿಗೆ ಎಲ್ಲವೂ ಗೊತ್ತಿದೆ…. ನನ್ನ ಬಳಿ ಹೆಚ್ಚು ಸಮಯವಿಲ್ಲ. ಯಾವಾಗ ಬೇಕಾದರೂ ನಾನು ಸಾಯಬಹುದು. ಇಲ್ಲಿ ನೋಡು….” ಎನ್ನುತ್ತಾ ತನ್ನ ತಲೆಯ ಮೇಲಿದ್ದ ವಿಗ್ ತೆಗೆದಳು. ಅವಳ ಗುಳಿ ಬಿದ್ದ ಕಣ್ಣುಗಳು, ಬೋಳು ತಲೆ ಎಲ್ಲವನ್ನೂ ಹೇಳಿತ್ತು.
“ಅರು, ದಿಲ್ಲಿಯಲ್ಲಿ ನಿನಗಾಗಿ ಹುಡುಕದ ಜಾಗವಿಲ್ಲ. ಕೊನೆಗೆ ನಿನ್ನನ್ನು ಈ ಜ್ಯೂವೆಲರಿ ಶಾಪ್ ನಲ್ಲಿ ನೋಡಿದೆ. ನೀನು ನನಗೆ ಕಾಣಿಸಿಕೊಳ್ಳದೆ ನನ್ನ ಕಣ್ಣು ತಪ್ಪಿಸಿ ಒಳಗೆ ಹೋಗಿ ಮಾತು ಉಳಿಸಿಕೊಂಡೆ. ಆದರೆ ನಾನು ನಿನ್ನನ್ನು ಗುರುತಿಸಿದ್ದೆ. ಈಗಲೂ ನಮಗೆ ನಿನ್ನ ಸಹಾಯ ಬೇಕೇಬೇಕು. ಆಗೋಲ್ಲ ಅಂತ ಮಾತ್ರ ಹೇಳಬೇಡ….” ಎಂದಳು.
“ಅಕ್ಕಾ… ನಿಮಗೇನೂ ಆಗೋಲ್ಲ. ನಾನು ನಿಮ್ಮನ್ನು ನೋಡಿಕೊಳ್ತೀನಿ….!” ಎಂದವಳ ಎರಡೂ ಕೈಗಳನ್ನು ಹಿಡಿದುಕೊಂಡ ಶೃತಿ, “ಅದು ನನಗೆ ಗೊತ್ತಿದೆ. ನೀನು ಖಂಡಿತಾ ಮಾಡುತ್ತಿ ಎಂದು ಗೊತ್ತಿದೆ. ಆದರೆ ನೀನೀಗ ಮಾಡಬೇಕಾದ ಕೆಲಸ ಬೇರೆಯೇ ಇದೆ. ನೀನು ನನ್ನ ಜಾಗ ತುಂಬಿಕೊಡಬೇಕು. ನನ್ನ ಮನುವಿನ ಹೆಂಡತಿಯಾಗಿ, ನನ್ನ ಮಗು ಚಂದುವಿನ ತಾಯಿಯ ಸ್ಥಾನನ್ನು ತುಂಬಬೇಕು,” ಎನ್ನುತ್ತಾ ,“ಮನು ಇಲ್ಲಿ ಬನ್ನಿ, ಮದುವೆಯಾಗದೆಯೇ ನಿಮಗೆ ತನ್ನನ್ನು ಸಮರ್ಪಿಸಿಕೊಂಡು ನಿಮ್ಮ ಮಗುವಿಗೆ ತಾಯಿಯಾದ ಇವಳಿಗೆ ನೀವೇ ನ್ಯಾಯ ಒದಗಿಸಿಕೊಡಬೇಕು,” ಎಂದಳು.
ಅವನು ಬೇರೆ ಮಾತಾಡದೆ ಶೃತಿ ಕೊಟ್ಟ ಮಂಗಳಸೂತ್ರವನ್ನು ಅರುಂಧತಿಯ ಕೊರಳಿಗೆ ಕಟ್ಟಿದ. ಅರುಂಧತಿ ಬೇರೇನೂ ಹೇಳಲಾಗದೆ ಶೃತಿಯನ್ನು ಅಪ್ಪಿಕೊಂಡು ಮನುವಿನ ಕಾಲಿನ ಬಳಿ ಕುಸಿದಳು. `ಓ ದೇವರೇ….. ನೀನು ಕರುಣಾಮಯಿ! ಕೊನೆಗೂ ನನ್ನನ್ನು ಬಾಡಿಗೆ ತಾಯಿ ಆಗಿಸಲಿಲ್ಲ,’ ಎಂದು ಮನದಲ್ಲಿಯೇ ಕೈ ಮುಗಿದವಳ ಮನಸ್ಸು ಆನಂದದಿಂದ ನಲಿದಿತ್ತು.