ಬಹು ನಿರೀಕ್ಷಿತ ಚಿತ್ರ “45” ಸಿನಿಮಾ ಡಿಸೆಂಬರ್ 25 ರಂದು ಬಹುಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಮೊದಲು ಆಗಸ್ಟ್ 15 ರಂದು ತೆರೆಗೆ ಬರಲು ನಿರ್ಧರಿಸಲಾಗಿತ್ತು. ಆದರೆ, ಪೋಸ್ಟ್-ಪ್ರೊಡಕ್ಷನ್, ದೃಶ್ಯ ಪರಿಣಾಮಗಳ ಕೆಲಸದಿಂದ ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿತ್ತು.
ಶಿವರಾಜ್ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಸೇರಿದಂತೆ ಬಹು ತಾರಾಗಣ ಹೊಂದಿರುವ ’45’ ಚಿತ್ರವು ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾ. ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ನಡಿ ರಮೇಶ್ ರೆಡ್ಡಿ ಚಿತ್ರವನ್ನು ನಿರ್ಮಿಸಿದ್ದಾರೆ.
ಚಿತ್ರ ಬಿಡುಗಡೆ ವಿಳಂಬಕ್ಕೆ ಅಪೂರ್ಣವಾದ ಸಿಜಿ ಕೆಲಸವೇ ಕಾರಣ. ಇದು ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಚಿತ್ರದ ಶೇ 40 ಕ್ಕಿಂತ ಹೆಚ್ಚು ಭಾಗವು VFX ಅವಲಂಬಿಸಿದೆ. ಇದನ್ನು ಹಾಲಿವುಡ್ ದರ್ಜೆಯ ದೃಶ್ಯ ಪರಿಣಾಮಗಳಿಗೆ ಹೆಸರುವಾಸಿಯಾದ ಕೆನಡಾದ MARZ ಸ್ಟುಡಿಯೋ (ಮಾನ್ಸ್ಟರ್ಸ್ ಏಲಿಯೆನ್ಸ್ ರೋಬೋಟ್ಸ್ ಜೋಂಬಿಸ್) ನಿರ್ವಹಿಸಿದೆ. ಇದು MARZ ನ ಮೊದಲ ಕನ್ನಡ ಯೋಜನೆಯಾಗಿದ್ದು, ಸ್ಟುಡಿಯೋ ಮತ್ತು ಪ್ರಾದೇಶಿಕ ಉದ್ಯಮ ಎರಡಕ್ಕೂ ಗಮನಾರ್ಹ ಮೈಲಿಗಲ್ಲಾಗಿದೆ.
‘ನಮ್ಮ ಚಿತ್ರದ VFX ಅನ್ನು ಕೆನಡಾದಲ್ಲಿ ಮಾಡಲಾಗುತ್ತಿದೆ. ಅನುಭವಿ ಹಾಲಿವುಡ್ ತಂತ್ರಜ್ಞರು ಇದರಲ್ಲಿ ಸೇರಿಕೊಂಡಿದ್ದಾರೆ. ವಿಶ್ವ ದರ್ಜೆಯ ಅನುಭವವನ್ನು ನೀಡಲು ಮುಂದಾಗಿದ್ದೇವೆ. ಕ್ರಿಸ್ಮಸ್ ವೇಳೆಗೆ ಚಿತ್ರ ಬಿಡುಗಡೆಯಾಗುವ ವಿಶ್ವಾಸವಿದೆ’ ಎಂದು ನಿರ್ದೇಶಕ ಅರ್ಜುನ್ ಜನ್ಯ ಹೇಳಿದ್ದಾರೆ.
‘ಈ ಪ್ರಯಾಣವು ಶಿವಣ್ಣ ಅವರ ಬೆಂಬಲದಿಂದ ಪ್ರಾರಂಭವಾಯಿತು. ಈ ದೃಷ್ಟಿಕೋನವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಕ್ಕಾಗಿ ಉಪೇಂದ್ರ, ರಾಜ್ ಬಿ ಶೆಟ್ಟಿ ಮತ್ತು ವಿಶೇಷವಾಗಿ ನಮ್ಮ ನಿರ್ಮಾಪಕ ರಮೇಶ್ ರೆಡ್ಡಿಗೆ ಕೃತಜ್ಞನಾಗಿದ್ದೇನೆ’ ಎಂದರು.
ನಿರ್ಮಾಪಕ ರಮೇಶ್ ಚಿತ್ರದ ಪ್ರಮಾಣ ಮತ್ತು ತಾಂತ್ರಿಕ ಸಾಧನೆಗಳ ಬಗ್ಗೆ ಮಾತನಾಡಿ, ‘ಯಾವುದೇ ಕನ್ನಡ ಚಿತ್ರವು ಈ ಮಟ್ಟದ ದೃಶ್ಯ ಪರಿಣಾಮಗಳನ್ನು ಅಳವಡಿಸಿಕೊಂಡಿಲ್ಲ. ಇದು ಕಥೆಯ ಅವಿಭಾಜ್ಯ ಅಂಗ. ಇದರಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುತ್ತಿಲ್ಲ’ ಎಂದು ತಿಳಿಸಿದರು.
ವಿಎಫ್ಎಕ್ಸ್ ಪ್ರಕ್ರಿಯೆಯನ್ನು ಸಂಯೋಜಿಸುತ್ತಿರುವ ಯಶ್ ಗೌಡ ಅವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ತೆಲುಗು ಚಿತ್ರರಂಗದ ಮೈತ್ರಿ ಮೂವಿ ಮೇಕರ್ಸ್ 45 ಚಿತ್ರ ವಿತರಿಸಲು ಆಸಕ್ತಿ ವ್ಯಕ್ತಪಡಿಸಿದೆ ಎಂದುಹೇಳಿದರು. ಸತ್ಯ ಹೆಗ್ಡೆ ಈ ಚಿತ್ರದ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.