ಪ್ರತಿ ಹಬ್ಬದ ಸಂದರ್ಭದಲ್ಲೂ ಏನಾದರೂ ಹೊಸ ಬಗೆಯ ಗಿಫ್ಟ್ ಕೊಡಬೇಕು ಅಂದುಕೊಳ್ಳುತ್ತೇವೆ, ಆದರೆ ಹಬ್ಬದ ಗಡಿಬಿಡಿ ಮಧ್ಯೆ ಮರೆಯುತ್ತೇವೆ. ದೀಪಾವಳಿ ಹಬ್ಬ ಬಂದಾಗ ಸಾಮಾನ್ಯವಾಗಿ ನಾವು ನಮ್ಮ ಆಪ್ತ ಬಂಧು ಮಿತ್ರರಿಗೆ ಡ್ರೆಸ್‌, ಮಿಠಾಯಿ, ಕ್ಯಾಶ್ ರಿವಾರ್ಡ್‌ ಇತ್ಯಾದಿ ನೀಡಿ ಸುಮ್ಮನಾಗುತ್ತೇವೆ. ಮಕ್ಕಳ ವಿಷಯ ಬಂದಾಗ ಬಿಡಿ, ನಾವು ಅದಕ್ಕೆ ಮಹತ್ವ ಕೊಡುವುದೇ ಇಲ್ಲ. ಅದನ್ನು ನಿರ್ಲಕ್ಷಿಸುವುದೇ ನಮ್ಮ ಅಭ್ಯಾಸವಾಗಿದೆ. ಅದರ ಬದಲು ದೀಪಾವಳಿಯಂಥ ದೊಡ್ಡ ಹಬ್ಬಗಳಲ್ಲಿ ಅವರಿಗೆ ಸಣ್ಣ ಗಿಫ್ಟ್ ನೀಡಿದರೂ, ಎಷ್ಟೋ ಸಂಭ್ರಮಿಸುತ್ತಾರೆ!

ಹೀಗಾಗಿ ಈ ಸಲ ನೀತಾ ಈ ವಿಷಯನ್ನು ನಿರ್ಲಕ್ಷಿಸಲಿಲ್ಲ. ಆಕೆ ಸಿಂಗಲ್ ಪೇರೆಂಟ್‌, ಒಂದು ಖಾಸಗಿ ಕಂಪನಿಯಲ್ಲಿ ಉತ್ತಮ ನೌಕರಿಯಲ್ಲಿದ್ದಾಳೆ. ಈ ಸಲದ ದೀಪಾವಳಿ ಹಬ್ಬಕ್ಕೆ ಮುಂಚೆಯೇ ಆಕೆ ಮನೆ ಹತ್ತಿರದ ಭರತನಾಟ್ಯದ ಡ್ಯಾನ್ಸ್ ಕ್ಲಾಸಿಗೆ ಮಗಳನ್ನು ಸೇರಿಸಿದಳು. ಇವಳ ಮಗಳು ಪ್ರಿಯಾಳಿಗೆ ಮೊದಲಿನಿಂದಲೂ ಕ್ಲಾಸಿಕ್‌ ಡ್ಯಾನ್ಸ್ ಕಲಿಯುವುದರಲ್ಲಿ ಅಪಾರ ಆಸಕ್ತಿ ಇತ್ತು.

ಮೊದಲಿನಿಂದಲೂ ಪ್ರಿಯಾ ಟಿವಿಯಲ್ಲಿ ಬರುವ ಡ್ಯಾನ್ಸ್ ಕಾರ್ಯಕ್ರಮ ಮೆಚ್ಚಿಕೊಂಡು, ತನಗೆ ತಿಳಿದಂತೆ ಹೆಜ್ಜೆ ಹಾಕುತ್ತಿದ್ದಳು. ಮಗಳ ಈ ಹವ್ಯಾಸ ಗಮನಿಸಿದ ನೀತಾ, ಅವಳ ಅಭಿರುಚಿ ಪ್ರಕಾರವೇ ನಾಟ್ಯ ಶಾಲೆಗೆ ಸೇರಿಸಿದಳು. ಇದು ಮಗಳ ಮುಂದಿನ ಭವಿಷ್ಯಕ್ಕೆ ಪೂರಕ ಎಂದು ತಾಯಿ ಗಮನಿಸಿಕೊಂಡಳು.

ಇದರಿಂದ ಪ್ರಿಯಾಳಿಗೆ ಬಹಳ ಸಂತೋಷವಾಯಿತು. ದೀಪಾವಳಿಯಂಥ ದೊಡ್ಡ ಹಬ್ಬಕ್ಕೆ ಅಮ್ಮ ತನಗೆ ಅತ್ಯುತ್ತಮ ಗಿಫ್ಟ್ ನೀಡಿದಳೆಂದು ಪ್ರಿಯಾ ಹಿರಿಹಿರಿ ಹಿಗ್ಗಿದಳು. 7-8 ವರ್ಷದ ಆ ಮುಗ್ಧ ಹುಡುಗಿಯ ಸಂತಸಕ್ಕೆ ಪಾರವೇ ಇರಲಿಲ್ಲ.

ಮನಮೆಚ್ಚಿದ ಉಡುಗೊರೆ

ರೋಹಿಣಿ ರಾಜೇಶರಿಗೆ ಇಬ್ಬರು ಮಕ್ಕಳು. ಹೈಸ್ಕೂಲು ಮುಗಿಸುವ ಹೊತ್ತಿಗೆ ಇವರಿಬ್ಬರೂ ತಂದೆಯ ಹೆಗಲೆತ್ತರ ಬೆಳೆದುಬಿಟ್ಟಿದ್ದರು. 17 ವರ್ಷದ ಕಿರಿ ಮಗ ದೀಪಕ್‌ ಅಡುಗೆ ತಯಾರಿಯಲ್ಲಿ ಆಸಕ್ತಿ ವಹಿಸಿದ್ದ. ಅವನಲ್ಲಿ ಈ ಪ್ರತಿಭೆ ಅಪಾರವಾಗಿತ್ತು. ಬಿಡುವಿನ ದಿನಗಳಲ್ಲಿ ಅವನು ತಾನೇ ಎಲ್ಲರ ಅಚ್ಚುಮೆಚ್ಚಿನ ಡಿಶ್‌ ತಯಾರಿಸಲು ಮುಂದಾಗುತ್ತಿದ್ದ. ಅವನು ತನ್ನ ಯೂಟ್ಯೂಬ್‌, ಇನ್ ಸ್ಟಾಗ್ರಾಂ ಚ್ಯಾನೆಲ್ ಗಳಲ್ಲಿ ಇದರ ವಿಡಿಯೋ ಪ್ರದರ್ಶಿಸುತ್ತಿದ್ದ.

ಮಗನ ಈ ಹವ್ಯಾಸ ಗಮನಿಸಿದ ರೋಹಿಣಿ ದಂಪತಿ, ಅವನನ್ನು ಖ್ಯಾತ ಕುಕರಿ ಕ್ಲಾಸ್‌ ಗೆ ಸೇರಿಸಿದರು. ತಾಯಿ ತಂದೆಯರ ಈ ಹಬ್ಬದ ಉಡುಗೊರೆಯಿಂದ ಮಗ ಖುಷಿಗೊಂಡ! ಅವನ ಈ ಹವ್ಯಾಸ ಮುಂದೆ ಅವನ ವೃತ್ತಿಯಾಗಬಹುದೆಂದು ಹೆತ್ತವರಿಗೂ ಸಂತೋಷವಾಯಿತು.

ಅದೇ ತರಹ ದಿನೇಶ್‌ ದಿವ್ಯಾರ ಮಗಳು ಪ್ರೀತಿ ಈ ಸಲ ರಾಜ್ಯ ಮಟ್ಟದ 10ನೇ ಪಬ್ಲಿಕ್‌ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೇ ಮೊದಲ ರಾಂಕ್‌ ಗಳಿಸಿದ ನಾಲ್ವರಲ್ಲಿ ಒಬ್ಬಳೆನಿಸಿದಳು! ಹೀಗಾಗಿ ಅವಳ ಈ ಅದ್ಭುತ ಪ್ರತಿಭೆಗೆ ತಾಯಿ ತಂದೆ, ದೀಪಾವಳಿ ಸಂದರ್ಭದಲ್ಲಿ ಮಗಳಿಗೆ ಈ ಕುರಿತಾಗಿ ಸೂಕ್ತ ಉಡುಗೊರೆ ನೀಡಲು ಬಯಸಿದರು.

ಒಂದೇ ಕಲ್ಲಿಗೆ 2 ಹಕ್ಕಿ

ಹೀಗಾಗಿ ದಿನೇಶ್‌ ದಂಪತಿ ತಮ್ಮ ಮಗಳಿಗೆ ಫೋಟೋಗ್ರಫಿಯಲ್ಲಿ ಇದ್ದ ಆಸಕ್ತಿ ಗಮನಿಸಿಕೊಂಡು, ಅವಳ ಹವ್ಯಾಸಕ್ಕೆ ನೆರವಾಗುವಂತೆ ಫೋಟೋಗ್ರಫಿ ಇನ್‌ ಸ್ಟಿಟ್ಯೂಟ್‌ ಗೆ ದಾಖಲಾತಿ ಕೊಡಿಸಿ, ಅದಕ್ಕಾಗಿ ವಿಶೇಷ ಕ್ಯಾಮೆರಾ ಸೌಲಭ್ಯಗಳುಳ್ಳ 1 ಲಕ್ಷದ ದುಬಾರಿ ಮೊಬೈಲ್ ‌ನ್ನು ಮಗಳಿಗೆ ಗಿಫ್ಟ್ ನೀಡಿದರು!

ಈ ನಿಟ್ಟಿನಲ್ಲಿ ಈ ದಂಪತಿ ಮಾಡಿದ್ದೇ ಸರಿ. ಇದರಿಂದ ಒಂದೇ ಕಲ್ಲಿಗೆ 2 ಹಕ್ಕಿ ಎಂಬಂತೆ, ಮಗಳ ಹವ್ಯಾಸಕ್ಕೂ ನೆರವು ನೀಡಿದಂತಾಯಿತು, ಅವಳಿಗೆ ಹಬ್ಬಕ್ಕೆ ಉತ್ತಮ ಉಡುಗೊರೆ ಕೊಟ್ಟಂತೆಯೂ ಆಗಿತ್ತು. ಹೀಗಾಗಿ ಮಗಳ ಆಸೆ ನೆರವೇರಿಸಿದ ತೃಪ್ತಿ ಇವರಿಗಿತ್ತು.

ಈ ರೀತಿ ಪ್ರತಿ ದಂಪತಿ, ತಮ್ಮ ಮಕ್ಕಳ ಹಿತಾಸಕ್ತಿ ಗಮನಿಸಿಕೊಂಡು, ತಮ್ಮ ಬಜೆಟ್‌ ಗೆ ಹೊಂದುವಂತೆ ಹಬ್ಬದ ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ಉಡುಗೊರೆ ಕೊಡಿಸುವುದೇ ಸರಿ. ಆದ್ದರಿಂದ ಮಕ್ಕಳ ಆಸಕ್ತಿ, ಅಭಿರುಚಿ ಅರಿತುಕೊಂಡು ಅವರಿಗೆ ಬೇಕಾದಂಥ ಉಡುಗೊರೆ ನೀಡುವುದೇ ಸರಿ.

ಉಡುಗೊರೆಯ ಹಿಂದಿನ ಪ್ರೀತಿ ವಾತ್ಸಲ್ಯ

ಮಕ್ಕಳು ಹೀಗೆ ಪ್ರತಿಭಾಶಾಲಿಗಳಾಗಿದ್ದರೆ ಮಾತ್ರ ಅವರಿಗೆ ಉಡುಗೊರೆ ಕೊಡಬೇಕು ಎಂದು ಇದರ ಅರ್ಥವಲ್ಲ. ಹಬ್ಬ ಬಂದ ಮೇಲೆ ಮಕ್ಕಳಿಗೆ ಗಿಫ್ಟ್ ಇಲ್ಲ ಅಂತಾಗಬಾರದು. ಒಟ್ಟಾರೆ ಅವರಿಗೆ ಇಷ್ಟವಾಗುವಂಥ, ಅದರಿಂದ ಅವರಿಗೆ ಹೆಚ್ಚಿನ ಲಾಭ ಆಗುವಂಥ ಉಡುಗೊರೆ ಕೊಡಬೇಕು. ಮಕ್ಕಳಿಗೆ ಇಷ್ಟವಾಗುವ ಆಟಿಕೆ, ಸೈಕ್‌, ಸ್ಕೇಟಿಂಗ್ಸ್, ಪುಸ್ತಕ, ಫೋನ್‌ ಇತ್ಯಾದಿ ಏನೇ ಇರಲಿ, ಖಂಡಿತಾ ಕೊಡಿಸಿ. ಇದರಿಂದ ತಾಯಿ ತಂದೆ ತಮ್ಮ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂದು ಅವರಿಗೂ ತಿಳಿಯುತ್ತದೆ. ಅದು ಅವರಿಗೆ ಬಲವಂತದ ಗಿಫ್ಟ್ ಆಗಿರಬಾರದು ಎಂದು ನೆನಪಿಡಿ. ಅದನ್ನು ಕಂಡೊಡನೆ ಅವರ ಮುಖ ಅರಳಬೇಕೇ ಹೊರತು, `ಇದನ್ನಿಟ್ಟುಕೊಂಡು ನಾನೇನು ಮಾಡಲಿ?’ ಎಂಬಂತೆ ಸಿಟ್ಟಾಗಬಾರದು.

ಹಬ್ಬಗಳಿರುವುದೇ ಸಂತೋಷ ಹೆಚ್ಚಿಸಲು. ಹಬ್ಬದ ನೆಪದಲ್ಲಿ ಸಿಗುವ ಇಂಥ ಉಡುಗೊರೆ ಅವರ ಉತ್ಸಾಹ, ಉಲ್ಲಾಸವನ್ನು ಮತ್ತಷ್ಟು ಹೆಚ್ಚಿಸುತ್ತವೆ!

ಎಸ್‌. ಸುಶೀಲಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ