ಮನೆ ಎಂದರೆ ನಾವು ನಮ್ಮವರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುತ್ತಾ ಬೆಚ್ಚಗಿರುವ ತಾಣ. ದೀಪಾವಳಿಯಂಥ ದೊಡ್ಡ ಹಬ್ಬಗಳು ಬಂದಾಗ ಇಂಥ ನಮ್ಮ ಮನೆಯನ್ನು ಎಷ್ಟು ಅಲಂಕರಿಸಿದರೂ ಸಾಲದು ಎಂದೇ ಅನಿಸುತ್ತದೆ……!
ಮನೆ ನಿಮ್ಮ ಸ್ವಂತದ್ದಿರಲಿ ಅಥವಾ ಬಾಡಿಗೆಯದ್ದಾಗಿರಲಿ, ನೀವು ಒಬ್ಬಿಬ್ಬರೇ ಇರಲಿ ಅಥವಾ ಕೂಡು ಕುಟುಂಬವಾಗಿ ಜನರಿಂದ ತುಂಬಿರಲಿ, ಮನೆ ಆಕರ್ಷಕ ಹಾಗೂ ಸೌಲಭ್ಯಗಳಿಂದ ಕೂಡಿದ್ದಾಗಿರಬೇಕು. ಹಾಗಾದಾಗ ಮಾತ್ರ ಮನಸ್ಸಿಗೆ ನೆಮ್ಮದಿ, ಖುಷಿ ಮೂಡಲು ಸಾಧ್ಯ. ಹೀಗಾಗಿ ನಿಮ್ಮ ಮನೆಯ ಸಂರಕ್ಷಣೆ ಹಾಗೂ ಅಲಂಕಾರ ನಿಮ್ಮದೇ ಹೊಣೆ. ಸಮಯಾವಕಾಶ ಆದಂತೆ ಮನೆಯ ಇಂಟೀರಿಯರ್ಸ್ ಆಗಾಗ ಬದಲಾಯಿಸುತ್ತಿರಿ. ವಿಶೇಷವಾಗಿ ಇಂಥ ಹಬ್ಬಗಳ ಸಂದರ್ಭದಲ್ಲಿ ಮನೆಯನ್ನು ಎಷ್ಟು ಅತ್ಯಾಕರ್ಷಕ ಗೊಳಿಸಿದರೂ ಕಡಿಮೆ ಎಂದೇ ಅನಿಸುತ್ತದೆ. ಹಬ್ಬಗಳಲ್ಲಿ ಗೃಹಾಲಂಕಾರ ಹೇಗೆ ಮಾಡಿದರೆ ಚೆನ್ನ ಎಂದು ತಿಳಿಯೋಣವೇ?
ಹೊಸದಾಗಿ ಪೇಂಟ್ ಮಾಡಿಸಿ
ಅತಿ ಶ್ರಮದಾಯಕವಾದ ಈ ಕೆಲಸವನ್ನು ನೀಟಾಗಿ ನೀವು ಮುಗಿಸಿದರೆ ಅದಕ್ಕಿಂತ ಮಿಗಿಲಾದುದಿಲ್ಲ. ನಿಮ್ಮ ಮನೆಯ ಹೊಸ ಪೇಂಟ್ ನಿಮ್ಮ ಕಲಾಭಿರುಚಿಯ ಪ್ರತೀಕ ಆಗಿರುತ್ತದೆ. ಹೆಚ್ಚಿನ ಆಕರ್ಷಣೆಗಾಗಿ ಹೊಳೆ ಹೊಳೆಯುವ ಬಂಗಾರದ ಬಣ್ಣ, ಹಳದಿ, ನೀಲಿ, ದಟ್ಟ ಹಸಿರು ಮುಂತಾದವನ್ನು ಆರಿಸಿ. ಸೋಬರ್ ಲುಕ್ ಬಯಸಿದರೆ ಗ್ರೇ ಯಾ ಸ್ಕೈ ಬ್ಲೂ ಆರಿಸಿ.
ಬೇರೆ ಬೇರೆ ಕೋಣೆಗಳಿಗೆ ಬೇರೆ ಬೇರೆ ಬಣ್ಣ ಇಂದಿನ ಆಧುನಿಕ ಪದ್ಧತಿಯಾಗಿದೆ. ಇಡೀ ಮನೆಗೆ ಒಂದೇ ಬಣ್ಣ ತುಸು ಹಳೆಯ ವಿಚಾರವಾಯಿತು. ಬೇರೆ ಬೇರೆ ಬಣ್ಣಗಳು ಇಡೀ ಮನೆಗೆ ಒಂದು ಹೊಚ್ಚ ಹೊಸ ಕಳೆ ತಂದುಕೊಡುತ್ತದೆ.
ಪ್ರತಿ ಕೋಣೆಗೂ ಹೀಗೆ ಮಾಡಲು ಬಯಸದಿದ್ದರೆ, ನಿಮ್ಮ ಮೆಯ್ನ್ ಡ್ರಾಯಿಂಗ್ ರೂಂ ಮಾತ್ರ ವಿಭಿನ್ನ ಬಣ್ಣವಾಗಿದ್ದು, ಬೇರೆಲ್ಲ ಕೋಣೆಗಳೂ ಒಂದೇ ರೀತಿ ಇರಲಿ. ಮುಖ್ಯವಾಗಿ ಡ್ರಾಯಿಂಗ್ ರೂಮಿನಲ್ಲಿ ಧಾರಾಳ ಗಾಳಿ ಬೆಳಕಿನ ವ್ಯವಸ್ಥೆ ಚೆನ್ನಾಗಿರುವಂತೆ ಗಮನಿಸಿಕೊಳ್ಳಿ.
ಡ್ರಾಯಿಂಗ್ ರೂಮಿಗೆಂದೇ ವಿಶೇಷ ಡಿಸೈನ್ ಮಾಡಿಸಬಹುದು. ಇದು ಹೆಚ್ಚಿನ ಕ್ರಿಯೇಟಿವ್ ಲುಕ್ಸ್ ಕೊಡುತ್ತದೆ. ಬದಲಿಗೆ ಅತ್ಯಾಕರ್ಷಕ ವಾಲ್ ಪೇಪರ್ ಸಹ ಬಳಸಿಕೊಳ್ಳಬಹುದು. ವಾಲ್ ಪೇಪರ್ ನಿಮ್ಮ ಮನೆಯ ಹೊಸ ಇಂಟೀರಿಯರ್ಸ್ ಗೆ ತನ್ನದೇ ಆದ ವಿಭಿನ್ನ ವಿಶಿಷ್ಟ ಟಚ್ ನೀಡುತ್ತದೆ. ಇದು ಹೆಚ್ಚು ದುಬಾರಿಯೂ ಅಲ್ಲ. ಗೋಡೆಗಳಿಗೆ ಒಂದು ಬೆಟರ್ ಲುಕ್ ಸಿಗುತ್ತದೆ. ಮಾರುಕಟ್ಟೆಯಲ್ಲಿ ಇದರ ಎಲ್ಲಾ ಬಗೆಯ ಡಿಸೈನುಗಳೂ ಲಭ್ಯ.

ಮಿರರ್ ನಿಂದ ಮಿಂಚುವ ಅಂದ
ನಿಮ್ಮ ಮನೆಗೆ ಎಲಿಗೆಂಟ್ ಮಾಡರ್ನ್ ಲುಕ್ ನೀಡಲು ಹೆಚ್ಚು ಕನ್ನಡಿಗಳನ್ನು ಬಳಸಿಕೊಳ್ಳಿ. ಮನೆಯ ಗೋಡೆಗಳನ್ನು ಕನ್ನಡಿಗಳಿಂದ ಹೆಚ್ಚಾಗಿ ಅಲಂಕರಿಸಿ. ಇದರಿಂದ ಮನೆಯಲ್ಲಿ ಹೆಚ್ಚು ಬೆಳಕು ತುಂಬಿಕೊಂಡಂತೆ ಅನಿಸುತ್ತದೆ, ಕೋಣೆಯೂ ತುಸು ದೊಡ್ಡದಾಗಿರುವಂತೆ ಅನಿಸುತ್ತದೆ. ಎಲ್ಲಕ್ಕೂ ಮುಖ್ಯ ಒಂದು ಸ್ಟೈಲಿಶ್ ಮಿರರ್ ಆರಿಸಿಕೊಂಡು, ಅದನ್ನು ಸೂಕ್ತ ಸ್ಥಳದಲ್ಲಿ ಅಳವಡಿಸುವುದು. ನೀವು ಬೇರೆ ಬೇರೆ ಸ್ಟೈಲ್ ಪ್ಯಾಟರ್ನಿನ ಫ್ರೇಂಗಳ ಕಲೆಕ್ಷನ್ ಮಾಡಿ, ಅದನ್ನು ಡ್ರಾಯಿಂಗ್ ರೂಮಿನಲ್ಲಿ ಆರ್ಟ್ ವರ್ಕ್ ತರಹ ಅಳವಡಿಸಬಹುದು.





