ಇಂದಿನ ಉಳಿತಾಯ ಇಲ್ಲದೆ, ನಾಳಿನ ಸುಭದ್ರ ಭವಿಷ್ಯ ಸಾಧ್ಯವಿಲ್ಲ. ಹೀಗಾಗಿ ದೀಪಾವಳಿಯ ಶುಭ ಸಂದರ್ಭದಲ್ಲಿಹೆಣ್ಣುಮಕ್ಕಳಿಗಾಗಿಯೇ ಇವರು ವಿಶೇಷ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಬಾರದೇಕೆ……..?

ಇಂದಿನ ದಿನಗಳ ಸುಖಕ್ಕಾಗಿ ಎಲ್ಲರೂ ಕಷ್ಟಪಟ್ಟು ದುಡಿದು ಸಂಪಾದಿಸುವುದು ಎಷ್ಟು ಮುಖ್ಯವೋ. ಗಳಿಸಿದ ಸಂಪಾದನೆಯಲ್ಲಿ ಸ್ವಲ್ಪಾಂಶವನ್ನು ಮಹಿಳೆಯರು ಈಗಿನಿಂದಲೇ ಉಳಿತಾಯ ಮಾಡುತ್ತಾ ಬರುವುದೂ ಮುಂಬರುವ ದಿನಗಳ ಸುಭದ್ರತೆಗಾಗಿ ಅಷ್ಟೇ ಅತ್ಯಗತ್ಯ. ಬ್ಯಾಂಕು ಮತ್ತು ಅಂಚೆ ಕಛೇರಿಗಳ ಠೇವಣಿಗಳು, ಚಿನ್ನ, ಷೇರು, ಮ್ಯೂಚುವಲ್ ‌ಫಂಡ್ಸ್….. ಹೀಗೆ ಹಲವಾರು ಯೋಜನೆಗಳಲ್ಲಿ ಹಣವನ್ನು ತೊಡಗಿಸುವುದರಿಂದ ನಮ್ಮ ಹೂಡಿಕೆಯ ಮೊತ್ತ ಬೆಳೆಯುತ್ತಲೇ ಇರುವಂತೆ ನೋಡಿಕೊಳ್ಳಬಹುದು. ಇದರಿಂದ ನಾವೆಲ್ಲರೂ ಮುಂದಿನ ಬದುಕಲ್ಲಿ ಸದಾ ನೆಮ್ಮದಿಯಿಂದಿರಲು ಖಂಡಿತವಾಗಿ ಸಾಧ್ಯವಿದೆ. ಈ ಕೆಳಗಿನ ಎರಡು ಉಳಿತಾಯ ಯೋಜನೆಗಳು ಮಹಿಳೆಯರಿಗಾಗಿಯೇ ವಿಶೇಷವಾಗಿ ಲಭ್ಯವಿವೆ.

ಮಹಿಳಾ ಸಮ್ಮಾನ ಉಳಿತಾಯ ಯೋಜನೆ 2023

ಮಹಿಳೆಯರ ಮತ್ತು ಹೆಣ್ಣುಮಕ್ಕಳ ಸಬಲೀಕರಣಕ್ಕೆಂದೇ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ 2023-24ರ ಕೇಂದ್ರ ಮುಂಗಡ ಪತ್ರದಲ್ಲಿ ಮಹಿಳಾ ಸಮ್ಮಾನ ಉಳಿತಾಯ ಸರ್ಟಿಫಿಕೇಟ್‌ 2023 ಎಂಬ ನೂತನ ಉಳಿತಾಯ ಯೋಜನೆಯ ಚಾಲನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಎಲ್ಲ ಅಂಚೆ ಕಛೇರಿಗಳಲ್ಲಿ ಲಭ್ಯವಿರುವ ಈ ಹೊಸ ಯೋಜನೆಯ ಬಗ್ಗೆ ಸಾಕಷ್ಟು ಜನರಿಗೆ ಅರಿವಿಲ್ಲದೆ ಇರುವುದರಿಂದ ಅದರ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ.

ಹಣ ಹೂಡಲು ಅರ್ಹತೆ ಏನು?

ಹೆಸರಲ್ಲಿ ಸೂಚಿಸುವಂತೆ ಹೆಣ್ಣುಮಕ್ಕಳ ಅಥವಾ ಮಹಿಳೆಯರ ಹೆಸರಲ್ಲಿ ಮಾತ್ರ ಈ ಉಳಿತಾಯ ಪತ್ರದಲ್ಲಿ ಉಳಿತಾಯ ಮಾಡಬಹುದಾಗಿದೆ. ಬಾಲಕಿ ಅಪ್ರಾಪ್ತೆಯಾಗಿದ್ದರೆ ಹೆತ್ತವರು ಅಥವಾ ಪೋಷಕರು ಅವಳ ಹೆಸರಲ್ಲಿ ಹಣ ತೊಡಗಿಸಬಹುದು. ಮಹಿಳೆಯರು ಹಿರಿಯ ನಾಗರಿಕರಾಗಿದ್ದರೆ, ಅವರೂ ಸಹ ಇದರಲ್ಲಿ ಹಣ ಹೂಡಬಹುದಾಗಿದೆ.

ಖಾತೆ ಎಲ್ಲೆಲ್ಲಿ/ಹೇಗೆ ತೆರೆಯಬಹುದು?

ಅಂಚೆ ಕಛೇರಿ ಶಾಖೆಗಳಲ್ಲಿ, ಭಾರತೀಯ ಸ್ಟೇಟ್‌ ಬ್ಯಾಂಕ್‌, ಕೆನರಾ ಬ್ಯಾಂಕ್‌, ಬ್ಯಾಂಕ್‌ ಆಫ್‌ ಬರೋಡಾ ಮುಂತಾದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಶಾಖೆಗಳಲ್ಲಿ, ಎಚ್‌.ಡಿ.ಎಫ್‌.ಸಿ ಬ್ಯಾಂಕ್‌, ಐ.ಸಿ.ಐ.ಸಿ.ಐ ಮುಂತಾದ ನವ ಪೀಳಿಗೆಯ ಖಾಸಗಿ ಬ್ಯಾಂಕ್‌ ಶಾಖೆಗಳಲ್ಲೂ ಈ ಖಾತೆಯನ್ನು ತೆರೆಯಬಹುದು. ಅಂತಹ ಶಾಖೆಗಳಿಗೆ ಹೋಗಿ ಖಾತೆ ತೆರೆಯಲಿರುವ ಅರ್ಜಿಯನ್ನು ಪಡೆದು ವಿವರಗಳನ್ನು ಭರ್ತಿ ಮಾಡಿ, ಹೊಸ ಖಾತೆಯನ್ನು ತೆರೆಯಲು ಅಗತ್ಯವಿರುವ ಗುರುತಿನ ಚೀಟಿಯಾದ ಆಧಾರ್‌ ಕಾರ್ಡ್‌ ಅಥವಾ ಮತದಾರರ ಕಾರ್ಡ್‌, ಚಾಲನಾ ಪರವಾನಗಿ ಅಥವಾ ಆದಾಯ ಇಲಾಖೆಯ ಪ್ಯಾನ್‌ ಕಾರ್ಡ್‌ ನ್ನು ಸಲ್ಲಿಸಿ, ಚಲನ್‌ ಭರ್ತಿ ಮಾಡಿ. ಹೂಡುವ ಮೊತ್ತವನ್ನು ಭರಿಸಬೇಕು. ಖಾತೆ ತೆರೆದಾದ ಬಳಿಕ ಒಂದು ಉಳಿತಾಯ ಪತ್ರ (ಸರ್ಟಿಫಿಕೇಟ್‌) ದೊರಕುವುದು.

IB147727_147727131844810_DY446376

ಎಷ್ಟು ಮೊತ್ತವನ್ನು ತೊಡಗಿಸಬಹುದು?

ಕನಿಷ್ಠ ಮೊತ್ತ ರೂ. 1000 ಮತ್ತು ನೂರರ ಗುಣಾಕಾರದಲ್ಲಿ ತೊಡಗಿಸಬಹುದು. ಅಂದರೆ ರೂ. 21,400 ಅಥವಾ ರೂ. 52,900 ಹೀಗೆ ರೂ. 21,450 ಅಥವಾ ರೂ. 52,930 ಮೊದಲಾದ ಮೊತ್ತಗಳಲ್ಲಿ ಸಾಧ್ಯವಿಲ್ಲ. ಗರಿಷ್ಠ ರೂ. 2 ಲಕ್ಷ ಹೂಡಬಹುದಾಗಿದೆ. ಒಮ್ಮೆ ಖಾತೆ ತೆರೆದು ಕನಿಷ್ಠ ಮೂರು ತಿಂಗಳ ಬಳಿಕವಷ್ಟೆ ಇನ್ನೊಂದು ಖಾತೆ ತೆರೆಯಬಹುದು. ಆದರೆ ಎಲ್ಲ ಖಾತೆಗಳ ಒಟ್ಟಾರೆ ಮೊತ್ತ ಗರಿಷ್ಠ ಮಿತಿಯಾದ ರೂ. 2 ಲಕ್ಷವನ್ನು ದಾಟುವಂತಿಲ್ಲ.

ಹೂಡಿಕೆಯು ಎಂದು ಪರಿಪಕ್ವಗೊಳ್ಳುವುದು? : ಈ ಯೋಜನೆಯಲ್ಲಿ ಹೂಡಿದ ಹಣವನ್ನು ಬಡ್ಡಿ ಸಮೇತ ಎರಡು ವರ್ಷಗಳ ಬಳಿಕ ಹಿಂಪಡೆಯಬಹುದು.

ಎರಡು ವರ್ಷಗಳ ಮೊದಲೇ ಹಣ ಹಿಂಪಡೆಯಬಹುದೇ? : ಖಾತೆ ತೆರೆದು ಒಂದು ವರ್ಷದ ಬಳಿಕ ಅಗತ್ಯವಿದ್ದರೆ, ಖಾತಿಯಲ್ಲಿರುವ ಒಟ್ಟಾರೆ ಶಿಲ್ಕಿನ ಶೇಕಡ 40ರಷ್ಟನ್ನು ಹಿಂದಕ್ಕೆ ಪಡೆಯಬಹುದು.

ಆದಾಯ ತೆರಿಗೆ ವಿನಾಯಿತಿಗಳು

ಇದರಲ್ಲಿ ಬರುವ ವಾರ್ಷಿಕ ಬಡ್ಡಿಯು ಮೂಲದಲ್ಲಿ ತೆರಿಗೆ ಕಡಿತದ ಮಿತಿ (ಟಿಡಿಎಸ್‌)ಯಾದ ರೂ. 40,000 (ಹಿರಿಯ ನಾಗರಿಕರಿಗೆ ರೂ. 50,000)ದ ಒಳಗೇ ಇರುವ ಕಾರಣ ಮೂಲದಲ್ಲಿ ಯಾವುದೇ ತೆರಿಗೆ ಕಡಿತ ಆಗುವುದಿಲ್ಲ. ಆದರೆ ಹೂಡಿಕೆದಾರರಿಗೆ ಬೇರೆ ಆದಾಯಗಳಿದ್ದು ಆದಾಯ ತೆರಿಗೆಯ ಲಾಗೂ ಆಗುವುದಿದ್ದರೆ ಈ ಯೋಜನೆಯ ಬಡ್ಡಿಯನ್ನೂ ಆದಾಯವೆಂದು ನಮೂದಿಸಿ ಸೂಕ್ತ ತೆರಿಗೆಯನ್ನು ತೆರಿಗೆದಾರರೇ ಕಟ್ಟಬೇಕಾಗುವುದು.

ಬಡ್ಡಿ ದರ

ಮಹಿಳೆಯರ ಸಬಲೀಕರಣಕ್ಕೆಂದೇ ಈ ಯೋಜನೆಯನ್ನು ಪ್ರಾರಂಭಿಸಿರುವುದರಿಂದ ಇದರಲ್ಲಿ ಬೇರೆಲ್ಲ ಯೋಜನೆಗಳಿಗಿಂತ ತುಸು ಹೆಚ್ಚೇ ಎನ್ನಬಹುದಾದ ವಾರ್ಷಿಕ ಬಡ್ಡಿ ದರವಾದ ಶೇ.7.5ರ ಬಡ್ಡಿ ದರವಿದೆ. ಪ್ರತೀ ಮೂರು ತಿಂಗಳಿಗೊಮ್ಮೆ ಖಾತೆಗೆ ಬಡ್ಡಿ ಜಮಾ ಆಗಿ ಖಾತೆಯಲ್ಲಿಯೇ ಅದು ಉಳಿದು ಎರಡು ವರ್ಷದ ಬಳಿಕ ಅಸಲು ಮತ್ತು ಈ ಎಲ್ಲ ಬಡ್ಡಿಯನ್ನು ಸೇರಿಸಿ ಒಟ್ಟಾರೆ ಮೊತ್ತವನ್ನು ಹಿಂಪಡೆಯಬಹುದು.

ಅವಧಿಗಿಂತ ಮೊದಲೇ ಖಾತೆಯನ್ನು ಮುಚ್ಚಬಹುದೇ? : ಹಣದ ಅಗತ್ಯ ಬಿದ್ದರೆ, ಯಾವುದೇ ಕಾರಣ ನೀಡದೆ, ಆರು ತಿಂಗಳುಗಳ ಬಳಿಕ ಖಾತೆಯನ್ನು ಮುಚ್ಚಿ, ಹೂಡಿದ ಅಸಲು ಮತ್ತು ಬಡ್ಡಿಯನ್ನು ಹಿಂಪಡೆಯಬಹುದಾಗಿದೆ. ಅಂತಹ ಸಂದರ್ಭಗಳಲ್ಲಿ ವಾರ್ಷಿಕ ಶೇ.7.5ರ ಬದಲು 5.5 ರಷ್ಟೇ ಬಡ್ಡಿ ದೊರಕುವುದು. ಒಂದು ವೇಳೆ ಖಾತೆದಾರಳು ಮರಣ ಹೊಂದಿದರೆ ಅಥವಾ ಗಂಭೀರ ಕಾಯಿಲೆಯಿಂದ ನರಳುತ್ತಿದ್ದರೆ ಅವರಿಗಿಂತ ಮೊದಲೇ ಖಾತೆಯನ್ನು ಮುಚ್ಚಿ ಹಣವನ್ನು ಹಿಂಪಡೆಯಬಹುದು. ಹಾಗೆಯೇ ಅಪ್ರಾಪ್ತ ವಯಸ್ಕಳಾದ ಖಾತೆದಾರಳ ಹೆತ್ತವರು ಅಥವಾ ಪೋಷಕರು ತೀರಿಕೊಂಡರೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಖಾತೆಯನ್ನು ಮುಚ್ಚಿ ಹಣವನ್ನು ಹಿಂಪಡೆಯಬಹುದು. ಅಸಲಿನ ಮೇಲೆ ಬಡ್ಡಿಯೂ ದೊರಕುವುದು.

ಸುಕನ್ಯಾ ಸಮೃದ್ಧಿ ಯೋಜನೆ

ಹೆಸರೇ ಸೂಚಿಸುವಂತೆ ಈ ಯೋಜನೆಯು ಹೆಣ್ಣುಮಕ್ಕಳಿಗೆ ಮಾತ್ರ ಇರುವಂತಹ ಉಳಿತಾಯ ಯೋಜನೆ.

ಖಾತೆ ತೆರೆಯುವುದು ಹೇಗೆ?

10 ವರ್ಷ ಪ್ರಾಯದ ಒಳಗಿನ ಹೆಣ್ಣುಮಕ್ಕಳ ಹೆಸರಲ್ಲಿ ಆಕೆಯ ಪೋಷಕರು ಅಂಚೆ ಕಛೇರಿಗಳಲ್ಲಿ ಹಾಗೂ ಬ್ಯಾಂಕುಗಳಲ್ಲಿ ತೆರೆಯಬಹುದು.

ಖಾತೆ ತೆರೆಯುವ ಅರ್ಜಿಯ ಜೊತೆಗೆ ಹುಡುಗಿಯ ಜನನ ಪ್ರಮಾಣ ಪತ್ರ, ಖಾತೆ ತೆರೆಯುವ ಪೋಷಕನ/ಳ ಗುರುತು ಹಾಗೂ ವಿಳಾಸ ಸಂಬಂಧಿತ ದಾಖಲೆಗಳೂ ಅಗತ್ಯವಿವೆ.

ಓರ್ವಳ ಹೆಸರಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು.

ಒಂದು ಕುಟುಂಬದಲ್ಲಿ ಗರಿಷ್ಠ ಇಬ್ಬರು ಹುಡುಗಿಯರ ಹೆಸರಲ್ಲಿ ಮಾತ್ರ ಖಾತೆ ತೆರೆಯಬಹುದಷ್ಟೆ.

ಆರ್ಥಿಕ ವರ್ಷ (ಏಪ್ರಿಲ್ ‌ರಿಂದ ಮಾರ್ಚ್‌ 31ರವರೆಗೆ) ದಲ್ಲಿ ಕನಿಷ್ಠ ರೂ.250 ಹಾಗೂ ಗರಿಷ್ಠ ರೂ. 1.5 ಲಕ್ಷ ದಷ್ಟನ್ನು ಈ ಯೋಜನೆಯಲ್ಲಿ ತೊಡಗಿಸಬಹುದು. ಅಚಾತುರ್ಯದಿಂದ ಗರಿಷ್ಠ ಮಿತಿಯಾದ 1.5 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಖಾತೆಗೆ ಜಮಾ ಮಾಡಿದರೆ, 1.5 ಲಕ್ಷನ್ನು ಮೀರಿದ ಮೊತ್ತವನ್ನು ಯಾವುದೇ ಬಡ್ಡಿ ನೀಡದೆ ಕೂಡಲೇ ಹಿಂತಿರುಗಿಸಲಾಗುದು.

ಹುಡುಗಿಗೆ 18 ವರ್ಷವಾಗುವವರೆಗೆ ಪೋಷಕರೇ ಖಾತೆಯಲ್ಲಿ ವ್ಯವಹಾರ ನಡೆಸುತ್ತಾ 18 ವರ್ಷ ಪೂರ್ಣಗೊಂಡ ಬಳಿಕ ವಯಸ್ಸಿನ ಪ್ರಮಾಣ ಪತ್ರ ನೀಡಿ ಖಾತೆದಾರಳೇ ವ್ಯವಹಾರ ನಡೆಸಬಹುದು.

ಖಾತೆಗಳನ್ನು ಒಂದು ಅಂಚೆ ಕಛೇರಿ/ಬ್ಯಾಂಕ್‌ ಶಾಖೆಯಿಂದ ಇನ್ನೊಂದೆಡೆಗೆ ವರ್ಗವಾಯಿಸಬಹುದು.

ಖಾತೆಯನ್ನು ತೆರೆದಂದಿನಿಂದ 15 ವರ್ಷಗಳ ಕಾಲ ಖಾತೆಗೆ ಹಣವನ್ನು ಜಮಾ ಮಾಡಬಹುದಾಗಿದೆ.

ಬಡ್ಡಿ ದರ

ಈ ಖಾತೆಗಳಿಗೆ ದೊರಕುವ ಬಡ್ಡಿ ದರಗಳನ್ನು ಸರ್ಕಾರ ಪ್ರತೀ ತ್ರೈಮಾಸಿಕದ ಆರಂಭದಲ್ಲಿ ಪ್ರಕಟಿಸುವುದು. ಸದ್ಯ ಉತ್ತಮ ಎನ್ನಬಹುದಾದ ವಾರ್ಷಿಕ ಶೇ.8ರ ಬಡ್ಡಿ ದರ ಲಭ್ಯವಿದೆ.

ತಿಂಗಳಿನ 5ನೇ ತಾರೀಖಿನಿಂದ ತಿಂಗಳ ಕೊನೆಯ ದಿನಾಂಕದವರೆಗಿನ ಖಾತೆಯಲ್ಲಿರುವ ಶಿಲ್ಕಿನಲ್ಲಿ ಕನಿಷ್ಠ ಮೊಬಲಗಿಗೆ ಬಡ್ಡಿಯನ್ನು ಲೆಕ್ಕಾಚಾರ ಮಾಡಲಾಗುವುದು.

ಆರ್ಥಿಕ ವರ್ಷದ ಕೊನೆಯ ದಿನ ಖಾತೆಗೆ ಬಡ್ಡಿಯನ್ನು ಜಮಾ ಮಾಡಲಾಗುವುದು.

ತೆರಿಗೆ ವಿನಾಯಿತಿ

ಆದಾಯ ತೆರಿಗೆಯ 80 ಸಿ ಕಲಮಿನ ಅಡಿಯಲ್ಲಿ ಜೀವ ವಿಮೆ, ಭವಿಷ್ಯ ನಿಧಿ, ಸಾರ್ವಜನಿಕ ಭವಿಷ್ಯ ನಿಧಿ, ರಾಷ್ಟ್ರೀಯ ಉಳಿತಾಯ ಪತ್ರ…. ಮುಂತಾದ ಯೋಜನೆಗಳಿಗೆ ರೂ.1.5 ಲಕ್ಷದ ವಿನಾಯಿತಿ ದೊರಕುವಂತೆ ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆಗೂ ಸಿಗುತ್ತದೆ.

ಈ ಯೋಜನೆಯ ಖಾತೆಗಳಿಗೆ ಬರುವ ಬಡ್ಡಿಗೆ ಆದಾಯ ತೆರಿಗೆಯ ಸಂಪೂರ್ಣ ವಿನಾಯಿತಿ ಲಭ್ಯವಿರುವುದರಿಂದ ಇದು ಇನ್ನಷ್ಟು ಆಕರ್ಷಣೀಯ ಎಂದೇ ಹೇಳಬಹುದು.

ಖಾತೆಯಿಂದ ಹಣ ಹಿಂಪಡೆಯುವುದು

ಖಾತೆಯನ್ನು ತೆರೆದು 21 ವರ್ಷಗಳಾದ ಮೇಲೆ ಖಾತೆಯು ಪರಿಪಕ್ವವಾಗುವುದು ಅಂದರೆ ಖಾತೆಯಲ್ಲಿರುವ ಅಸಲು, ಬಡ್ಡಿ ಎಲ್ಲವನ್ನೂ ಹಿಂದಕ್ಕೆ ಪಡೆಯಬಹುದು.

ಖಾತೆಯನ್ನು ತೆರೆದ ಬಳಿಕ ಕಾರಣಾಂತರಗಳಿಂದ ಮುಂದಿನ ವರ್ಷಗಳಲ್ಲಿ ಖಾತಿಗೆ ಹಣವನ್ನು ಜಮಾ ಮಾಡಲು ಅಸಾಧ್ಯವಾದರೆ, ಮುಂದೆ ಸಾಧ್ಯವಾದಾಗ ನಿಗದಿತ ಶುಲ್ಕವನ್ನು ನೀಡಿ ಖಾತೆಯನ್ನು ಮುಂದುರಿಸಬಹುದು.

ಖಾತೆದಾರಳು ಆಕಸ್ಮಿಕವಾಗಿ ಮರಣ ಹೊಂದಿದರೆ, ಮರಣ ಪತ್ರವನ್ನು ಸಲ್ಲಿಸಿ, ಖಾತೆಯಲ್ಲಿರುವ ಅಸಲು ಮತ್ತು ಬಡ್ಡಿಯನ್ನು ಪೋಷಕರು ಹಿಂದಕ್ಕೆ ಪಡೆಯಬಹುದಾಗಿದೆ.

ಖಾತೆ ತೆರೆದ 5 ವರ್ಷಗಳ ಬಳಿಕ, ಮಾರಣಾಂತಿಕ ಕಾಯಿಲೆ ಅಥವಾ ಪೋಷಕರ ಮರಣ ಅಥವಾ ಖಾತೆದಾರಳಿಗೆ ಖಾತೆಯನ್ನು ಮುಂದುವರಿಸಲು ಅತೀ ತೊಂದರೆಯ ಸಂದರ್ಭಗಳಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಖಾತೆಯನ್ನು ಮುಚ್ಚುಬಹುದಾಗಿದೆ.

ಖಾತೆದಾರಳು 18 ವರ್ಷ ವಯಸ್ಸಾದ ಕೂಡಲೇ ಅಥವಾ ಹತ್ತನೆಯ ತರಗತಿ ತೇರ್ಗಡೆಯಾದ ಕೂಡಲೇ (ಯಾವುದು ಮೊದಲೋ ಅದು) ಶಿಕ್ಷಣದ ವೆಚ್ಚಕ್ಕಾಗಿ, ಖಾತೆಯಲ್ಲಿ ಹಿಂದಿನ ವರ್ಷವಿದ್ದ ಶಿಲ್ಕಿನ ಶೇ.50 ರಷ್ಟನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಅದಕ್ಕೆ ವಿದ್ಯಾ ಸಂಸ್ಥೆಯಿಂದ ಶಿಕ್ಷಣ ವೆಚ್ಚಕ್ಕೆ ಸಂಬಂಧಿಸಿದ ದಾಖಲೆಗಳು ಬೇಕಾಗುವುದು. ಗರಿಷ್ಠ 5 ವರ್ಷದವರೆಗೆ ಖಾತೆಯಿಂದ ಈ ರೀತಿ ಹಣ ಹಿಂಪಡೆಯಬಹುದಾಗಿದೆ.

ಖಾತೆದಾರಳಿಗೆ 18 ವರ್ಷವಾದ ಬಳಿಕ ಮದುವೆಯಾದರೆ, ಸ್ಟ್ಯಾಂಪ್‌ ಪೇಪರ್‌ ನಲ್ಲಿ ಸಂಬಂಧಿಸಿದ ಘೋಷಣೆಯನ್ನು ನೀಡಿ, ಅಗತ್ಯವಿದ್ದರೆ ಖಾತೆಯನ್ನು ಮುಚ್ಚುವ ಸೌಲಭ್ಯವಿದೆ.

ಮೇಲಿನ ಎರಡೂ ಯೋಜನೆಗಳಲ್ಲಿ ಸರ್ಕಾರ ಸಂಪೂರ್ಣ ಅಸಲು ಮತ್ತು ಬಡ್ಡಿಯನ್ನು ಹಿಂತಿರುಗಿಸುವುದಾಗಿ ಖಾತ್ರಿ ನೀಡಿರುವುದರಿಂದ ಇವುಗಳಲ್ಲಿ ಹೂಡಿದ ಹಣ ಸುಭದ್ರವಾಗಿದೆ. ಎಲ್ಲ ಮಹಿಳೆಯರು, ಹೆಣ್ಣುಮಕ್ಕಳೂ ಯಾವುದೇ ಆಂತಕವಿಲ್ಲದೆ, ಧೈರ್ಯದಿಂದ ಈ ಯೋಜನೆಗಳಲ್ಲಿ ಹಣವನ್ನು ತೊಡಗಿಸಿ ಆಕರ್ಷಕ ಬಡ್ಡಿಯನ್ನು ಪಡೆಯುತ್ತಾ ನೆಮ್ಮದಿಯಿಂದ ಇರಬಹುದಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ