ನಾಲ್ವರು ಅಕ್ಕತಂಗಿಯರಿದ್ದ ಸಂಪ್ರದಾಯಸ್ಥ ಕುಟುಂಬದಲ್ಲಿ ವೇದಾ ಅತೀ ಚಂಚಲ ಸ್ವಭಾವದವಳು. ಎರಡನೇ ಅಕ್ಕಾ ಶೀಲಾಳ ಬಾಣಂತನಕ್ಕೆಂದು ಅನಿವಾರ್ಯವಾಗಿ ಅವಳು ಬೆಂಗಳೂರಿನಿಂದ ಮುಂಬೈಗೆ ಹೊರಟಳು. ಮುಂದೆ ನಡೆದದ್ದೇನು…..?

“ಸುದೇ ಸುತವ್‌ದೇವ್‌ಕಂಸ ಚಾಣುರ ಮರ್ಧನಂ ದೇಕಿ ಪರಮಾನಂದವ್‌ಕೃಷ್ಣಂ ಂದೇ ಜಗದ್ಗುರುವ್‌”

ಜಗನ್ನಾಥ ರಾಯರ ಕಂಠದಿಂದ ಶ್ಲೋಕ ಉಚ್ಚಾರಣೆ ನಡೆದೇ ಇತ್ತು. ತಿಂಡಿ ಮಾಡಿ ಪೂರೈಸಿದ ವಿಮಲಮ್ಮ ದೇವರ ಕೋಣೆಯ ಮುಂದೆ ಬಂದು ನಿಂತರು. ಲೀಲಾ, ಶೀಲಾ, ವೇದಾ, ಮೇಧಾ ನಾಲ್ಕೂ ಮಂದಿ ಬಂದು ನಿಂತರು. ಅವರ ಪೂಜೆ ಮುಗಿಯುವ ಹೊತ್ತಿಗೆ ಎಲ್ಲರೂ ಹಾಜರ್‌ ಆಗಿಬಿಡಬೇಕು. ಇಲ್ಲದಿದ್ದರೆ ಜಗನ್ನಾಥ ರಾಯರು ಬೆಟ್ಟದಂತಹ ಕೋಪ ತಾಳಿ ದೂರ್ವಾಸರೇ ದಂಗಾಗಿ ಬಿಡುವಂತೆ ರೌದ್ರಾವತಾರ ತಾಳುತ್ತಿದ್ದರು.

ಹಾಗಾಗಿ ಅವರು ಮನೆಯಲ್ಲಿ ಇರುವವರೆಗೂ ಯಾರೂ ಉಸಿರೆತ್ತುತ್ತಿರಲಿಲ್ಲ. ಜಗನ್ನಾಥರಾಯರ ಕುಟುಂಬ ಹೇಳಿಕೊಳ್ಳುವಂತಹ ಅನುಕೂಲಸ್ಥರಲ್ಲದಿದ್ದರೂ ಉಣ್ಣುವುದಕ್ಕೆ, ಉಡುವುದಕ್ಕೆ ಕೊರತೆ ಇರಲಿಲ್ಲ. ಡಿ.ಸಿ ಆಫೀಸ್‌ ನಲ್ಲಿ ಗುಮಾಸ್ತರಾಗಿ ಕೆಲಸ ಮಾಡುವ ಅವರಿಗೆ ಸಂಬಳದೊಂದಿಗೆ ಗಿಂಬಳ ಸಿಗುತ್ತಿತ್ತಾದ್ದರಿಂದ ಜೀವನ ಸುಲಭವಾಗಿ ನಡೆದುಕೊಂಡು ಹೋಗುತ್ತಿತ್ತು.

ಜಗನ್ನಾಥ ರಾಯರು ಕೋಪಿಷ್ಟರಾದರೂ ಸ್ವಭಾತಃ ಒಳ್ಳೆಯವರೇ, ಕೆಟ್ಟದ್ದನ್ನು ತಿರಸ್ಕರಿಸುತ್ತಿದ್ದರು. ಆದರೆ ಆಫೀಸಿನಲ್ಲಿ ಅವರದ್ದೇನು ನಡೆಯುತ್ತಿರಲಿಲ್ಲ. ಕೆಳಗಿನಿಂದ ಮೇಲಿನವರೆಗೂ ಬರೀಗೈಲಿ ಯಾರೂ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ.

ಮೊದ ಮೊದಲು ಲಂಚಕ್ಕೆ ಕೈ ಒಡ್ಡುವುದು ಅವರಿಂದಾಗದೆ ಎಲ್ಲರ ಕೋಪಕ್ಕೆ ತುತ್ತಾಗಿದ್ದರು. ನಂತರ ಅವರ ಖಾಸಾ ಗೆಳೆಯ ಮಹಾಬಲಭಟ್ಟರು, “ನೋಡಯ್ಯ ಜಗನ್ನಾಥಾ…. ನಮ್ಮಿಂದಾಗಿ ಬೇರೆಯವರಿಗೆ ತೊಂದರೆ ಆಗೋದು ಬೇಡ. ಯಾರೂ ಮಾಡದೇ ಇರುವಂತಹ ಪಾಪದ ಕೆಲಸ ನಾವೇನೂ ಮಾಡುತ್ತಿಲ್ಲ. ಇಲ್ಲಿ ನೀನೊಬ್ಬನೇ ಅಲ್ಲ ಎಲ್ಲರೂ ತಗೋಳೋರೆ, ಹಾಗಿದ್ದ ಮೇಲೆ ಜನ ನಿನ್ನನ್ನೇನು ಸತ್ಯವಾದಿ ಶಾಮಣ್ಣ ಅಂತಾರೇನು….? ಏನೂ ಇಲ್ಲ. ನಾವು ನಿಷ್ಠೆಯಿಂದ ನಮ್ಮ ಕೆಲಸ ಮಾಡ್ಕೊಂಡು ಹೋಗೋಣ ಆಯ್ತಲ್ಲ. ನಿತ್ಯ ಪೂಜೆ ಮಾಡಿ ಕೃಷ್ಣಾರ್ಪಣ ಅಂದುಬಿಡು…..!” ಎಂದು ಉಪದೇಶ ಮಾಡಿದ ಮೇಲೇ ಬೇರೆ ದಾರಿ ಕಾಣದೆ ಲಂಚಕ್ಕೆ ಕೈ ಒಡ್ಡ ತೊಡಗಿದರು. ಕ್ರಮೇಣ ತೀರಾ ಮುಳುಗಿದವನಿಗೆ ಚಳಿಯೇನು, ಮಳೆಯೇನು ಎಂಬಂತಾಗಿತ್ತು.

ಜೊತೆಗೆ ನಾಲ್ಕು ಹೆಣ್ಣು ಮಕ್ಕಳ ತಂದೆಯಾದ ಅವರ ಭುಜದ ಮೇಲೆ ಆ ಹೆಣ್ಣುಮಕ್ಕಳನ್ನು ದಡ ಸೇರಿಸುವ ಭಾರ ಇತ್ತಲ್ಲ. ಹಾಗಾಗಿ ತಾನು ಮಾಡುವ ಕೆಲಸ ಪಾಪದ್ದಲ್ಲ, ಜೀವನ ನಿರ್ವಹಣೆಗಾಗಿ ಮಾಡುತ್ತಿರುವುದು ಎಂದು ಮನದಲ್ಲಿಯೇ ನಿರ್ಧಾರ ಮಾಡಿಕೊಂಡಿದ್ದರು. ಹಾಗಾಗಿ ಮೊದಲು ಪೂಜೆ ಎಂದರೆ ಅದೊಂದು ದೊಡ್ಡ ತಲೆನೋವು ಎಂದುಕೊಂಡಿದ್ದವರು ಕ್ರಮೇಣ ಪಕ್ಕಾ ಆಸ್ತಿಕರಾಗಿದ್ದರು. ಎರಡು ಹೊತ್ತು ಸಂಧ್ಯಾವಂದನೆ, ನಿತ್ಯ ಪೂಜೆ ಮಾಡದೇ ಹೊರಗೇ ಹೊರಡುತ್ತಲೇ ಇರಲಿಲ್ಲ. ಅವರು ಪೂಜೆ ಮುಗಿಸಿ ಮಂಗಳಾರತಿಯ ಸಮಯಕ್ಕೆ ಎಲ್ಲರೂ ಹಾಜರಿರಲೇಬೇಕು ಎನ್ನುವುದು ಅವರ ಕಟ್ಟಪ್ಪಣೆಯಾಗಿತ್ತು. ಹುಡುಗಿಯರ ಮೂರು ದಿನಗಳು ಬಿಟ್ಟು ಮಿಕ್ಕೆಲ್ಲಾ ದಿನಗಳಲ್ಲಿ ಅವರು ತಮ್ಮ ಎಲ್ಲಾ ಕೆಲಸ ಮುಗಿಸಿ ದೇವರ ಕೋಣೆಯ ಮುಂದೆ ನಿಲ್ಲಲೇಬೇಕಿತ್ತು. ಹಾಗಾಗಿ ಹುಡುಗಿಯರಿಗೆ ತಂದೆಯ ಈ ಕಟ್ಟಾಜ್ಞೆಯ ಬಗ್ಗೆ ಅತೀಯಾದ ವಿರೋಧವಿತ್ತು.

ಅದರಲ್ಲೂ ವೇದಾಳಿಗೆ ತಂದೆಯ ಸ್ವಭಾವ ಕೊಂಚವೂ ಹಿಡಿಸುತ್ತಿರಲಿಲ್ಲ. ಕಿರಿಯವಳಾದ ಮೇಧಾ ಮಾತ್ರ ತಂದೆಯ ಪ್ರೀತಿಪಾತ್ರಳು. ಹಿರಿಯಳಾದ ಲೀಲಾಳಿಗೆ ರಾಯರ ಅಕ್ಕನ ಮಗ ಸುಮಂತನೊಂದಿಗೆ ಮದುವೆ ಗೊತ್ತಾಗಿತ್ತು. ಲೀಲಾ ಎಸ್‌.ಎಸ್.ಎಲ್.ಸಿಗೆ ಓದು ನಿಲ್ಲಿಸಿದ್ದಳು. ಶೀಲಾ ಡಿಗ್ರಿ ಕೊನೆ ವರ್ಷದಲ್ಲಿದ್ದಳು. ವೇದಾ ಮೇಧಾ ಅವಳಿ ಮಕ್ಕಳು. ಇಬ್ಬರೂ ಮೌಂಟ್ ಕಾರ್ಮೆಲ್ ‌ಕಾಲೇಜ್‌ ನಲ್ಲಿ ಓದುತ್ತಿದ್ದರು.

ಶೀಲಾ ತಾಯಿಗೆ ಮಾತ್ರ ಆಪ್ತಳಾಗಿದ್ದರೆ, ವೇದಾ ಮೇಧಾ ತಮ್ಮ ಗುಂಗಿನಲ್ಲಿಯೇ ಇರುತ್ತಿದ್ದರು. ಲೀಲಾ ತನ್ನ ಲೋಕದಲ್ಲಿ ತಾನಿರುತ್ತಿದ್ದಳು. ಎಲ್ಲರಿಗಿಂತ ಸುಂದರವಾಗಿದ್ದದ್ದು ಶೀಲಾ. ವೇದಾ ನೋಡಲು ಚೆನ್ನಾಗಿದ್ದರೂ ತಂದೆಯಂತೆ ಕಪ್ಪುಗಿದ್ದು ಮಾಟವಾದ ಶರೀರದಿಂದ ಕಪ್ಪು ಕಲ್ಲಿನಲ್ಲಿ ಕಡೆದ ಶಿಲಾಬಾಲಿಕೆಯನ್ನು ಮೀರಿಸುವಂತಿದ್ದಳು. ಮೇಧಾ ಸರಳ ಸ್ವಭಾವದ ಸಹಜ ಸುಂದರಿ.

ಲೀಲಾ ಮದುವೆ ಹತ್ತಿರವಾಗಿತ್ತು. ಮನೆಯಲ್ಲಿ ಮದುವೆ ತಯಾರಿ ನಡೆದಿತ್ತು. ಅವಳ ಅತ್ತೆಯ ಮನೆ ಹೊಳೆನರಸೀಪುರ. ಮಾವ ಜಮೀನ್ದಾರರು, ಸ್ಥಿತಿವಂತರಾಗಿದ್ದು ಮನೆ ತುಂಬಾ ಆಳು ಕಾಳು, ಓಡಾಡಲು ವಾಹನಗಳು ಎಲ್ಲವೂ ಇದ್ದುದರಿಂದ ವರ ಪಿಯುಸಿ ಮಾಡಿ ಟೀಚರ್‌ ಟ್ರೈನಿಂಗ್‌ ಮುಗಿಸಿ ಅಲ್ಲಿದ್ದ ಸರ್ಕಾರಿ ಶಾಲೆಯಲ್ಲಿ ಉಪಾಧ್ಯಾಯನಾಗಿ ಕೆಲಸ ಮಾಡುತ್ತಿದ್ದ. ನೋಡಲು ಅಷ್ಟೇನೂ ಚೆನ್ನಾಗಿ ಕಾಣದ ಸುಮಂತನನ್ನು ಮದುವೆಯಾಗಲೂ ಲೀಲಾ ಒಪ್ಪಿದ್ದಳು.

ಜಗನ್ನಾಥ ರಾಯರ ನಾಲ್ಕು ಹೆಣ್ಣುಮಕ್ಕಳಲ್ಲಿ ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿಯದ್ದಾಗಿತ್ತು. ಆದರೆ ವೇದಾ ಮಾತ್ರ ತೋರಿಕೆಗೆ ಎಲ್ಲರೊಂದಿಗೆ ಪ್ರೀತಿಯಿಂದ ಇದ್ದಂತೆ ನಟಿಸಿದ್ದರೂ ಒಳಗೊಳಗೆ ಅವಳಿಗೆ ಯಾರೂ ಇಷ್ಟವಾಗುತ್ತಿರಲಿಲ್ಲ. ಮೂಗೆತ್ತಿನಂತೆ ಸದಾ ಏನಾದರೊಂದು ಕೆಲಸ ಮಾಡಿಕೊಂಡು ಗಂಡನ ತಾಳಕ್ಕೆ ಸರಿಯಾಗಿ ಕುಣಿಯುತ್ತಿದ್ದ ತಾಯಿ, ಆಕೆ ತನ್ನ ಮಕ್ಕಳಿಗೆ ಮಾಡುತ್ತಿದ್ದ ಉಪದೇಶ ಯಾವುದೂ ವೇದಾಳಿಗೆ ಇಷ್ಟವಾಗುತ್ತಿರಲಿಲ್ಲ. ಎಲ್ಲರಿಗಿಂತ ನೋಡಲು ಸುಂದರಳಾಗಿ ಕಾಣುತ್ತಿದ್ದ ಶೀಲಕ್ಕಾ ಎಂದರೆ ಅವಳಿಗೆ ಆಗುತ್ತಿರಲಿಲ್ಲ. ಮೇಧಾಳನ್ನು ಕೆಲಸದವಳಂತೆ ಕಾಣುತ್ತಿದ್ದಳು.

ತಾನು ಸಿರಿವಂತ ಕುಟುಂಬದಲ್ಲಿ ಹುಟ್ಟಬೇಕಿತ್ತು. ತನ್ನ ಸ್ಟೈಲ್‌, ತನ್ನ ನಡೆ, ನುಡಿಯ ಬಗ್ಗೆ ಇಲ್ಲಿ ಯಾರಿಗೂ ಗೌರವವಿಲ್ಲ ಎಂದು ಅವಳಿಗೆ ಒಳಗೊಳಗೇ ಅಸಹನೆ ಇತ್ತು. ಕಾಲೇಜ್‌ ನಲ್ಲಿಯೂ ಅಷ್ಟೇ, ಮೇಧಾ ಸೈನ್ಸ್ ತೆಗೆದುಕೊಂಡು ಓದುತ್ತಿದ್ದರೆ ವೇದಾ ಕಾಮರ್ಸ್‌ ತೆಗೆದುಕೊಂಡಿದ್ದಳು. ಹಾಗಾಗಿ ಇಬ್ಬರ ಸಮಯದಲ್ಲಿಯೂ ಸ್ವಲ್ಪ ವ್ಯತ್ಯಾಸ ಇದ್ದೇ ಇರುತ್ತಿತ್ತು.

ವೇದಾ ಆಗಾಗ ತಾಯಿಯನ್ನು ಕಾಡಿ, ಪೀಡಿಸಿ ಹಣ ಪಡೆಯುತ್ತಿದ್ದಳು. ಅವಳ ಗೆಳತಿಯರು ಸಹ ಅವಳಂತೆಯೇ. ಹಾಗಾಗಿ ಮನೆಯಿಂದ ಚೂಡಿದಾರ್‌ ಧರಿಸಿ ಹೊರಟರೂ, ಗೆಳತಿಯ ಮನೆಯಲ್ಲಿ ಹೋಗಿ ಡ್ರೆಸ್‌ ಬದಲಾಯಿಸಿಕೊಂಡು ಹೋಗುತ್ತಿದ್ದಳು. ಅವಳ ಅಲಂಕಾರ ಹೇಗಿರುತ್ತಿತ್ತೆಂದರೆ, ಸ್ವತಃ ಮೇಧಾಳಿಗೆ ವೇದಾಳನ್ನು ಗುರುತಿಸಲು ಆಗುತ್ತಿರಲಿಲ್ಲ. ಅದಕ್ಕೇ ಸರಿಯಾಗಿ ಅವಳ ಜೊತೆಗೆ ಗೆಳತಿಯರು ಗುಂಪು. ಮುಂದೆ ಹೇಗೆ ಏನು ಎಂಬ ಯಾವ ಯೋಚನೆಯೂ ಇಲ್ಲದೆ ತನ್ನದೇ ಗುರಿಯಲ್ಲಿ ಸಾಗುತ್ತಿದ್ದವಳಿಗೆ ಮುಂದೇನೂ ಎಂಬ ಭಯವೇ ಇದ್ದಂತಿರಲಿಲ್ಲ.

ಲೀಲಾ ಮದುವೆ ಬಹಳ ಅನ್ನುವಷ್ಟು ಅಲ್ಲದಿದ್ದರೂ ಅದ್ಧೂರಿಯಾಗಿಯೇ ನಡೆದಿತ್ತು. ಮದುವೆ ಮನೆಯಲ್ಲಿ ಬಹಳ ಚಟುವಟಿಕೆಯಿಂದ ಓಡಾಡುತ್ತಿದ್ದ ಶೀಲಾಳನ್ನು ನೋಡಿ ಗಂಡಿನ ಕಡೆಯವರ ಸಂಬಧಿಕರಲ್ಲಿ ದೀಪಕ್‌ ಎಂಬ ಹುಡುಗ ಅವಳನ್ನು ಬಹಳ ಮೆಚ್ಚಿಕೊಂಡಿದ್ದ. ಅವನು ತಕ್ಕ ಮಟ್ಟಿಗೆ ಅನುಕೂಲಸ್ಥನಾಗಿದ್ದು, ಅವನಿಗೆ ಯಾರೂ ಇರಲಿಲ್ಲ. ಅವನ ತಾಯಿಯೂ ವರ್ಷದ ಕೆಳಗೇ ತೀರಿಕೊಂಡಿದ್ದರು. ಅವನಿಗೆ ಮುಂಬೈನಲ್ಲಿ ಕೆಲಸ. ಸಿಂಪಲ್ ಆಗಿ ಮದುವೆ ಮಾಡಿಕೊಟ್ಟರೆ ಸಾಕು ಎಂದು ನೇರವಾಗಿ ಜಗನ್ನಾಥರನ್ನೇ ಕೇಳಿದ. ಅವರಿಗೂ ಬೇಡವೆನ್ನಲು ಆಗಲಿಲ್ಲ.

“ಈಗಷ್ಟೇ ಹಿರಿಯ ಮಗಳ ಮದುವೆ ಮಾಡಿದ್ದೇನೆ. ಒಂದೆರಡು ತಿಂಗಳ ಕಾಲಾವಕಾಶವಾದರೂ ಬೇಕು. ಅಷ್ಟರಲ್ಲಿ ಹುಡುಗಿಯ ಪರೀಕ್ಷೆಯೂ ಮುಗಿಯುತ್ತದೆ,” ಎಂದರು ಜಗನ್ನಾಥರಾಯರು.

ಅದಕ್ಕೆ ದೀಪಕ್‌ ಸಹ ಒಪ್ಪಿಕೊಂಡ. ಶೀಲಾ ಸಹ ಖುಷಿಯಾಗಿ ಒಪ್ಪಿಕೊಂಡಿದ್ದಳು. ವಿಮಲಮ್ಮನವರಿಗೆ ಮಗಳು ದೂರ ಹೋಗುತ್ತಾಳೆ ಎನ್ನುವುದಕ್ಕಿಂತ ತನ್ನ ಆತ್ಮೀಯ ಗೆಳತಿಯಂತಿದ್ದ ಮಗಳು ತಮ್ಮಿಂದ ದೂರವಾಗುತ್ತಾಳೆ ಎಂಬ ನೋವೇ ಹೆಚ್ಚಾಗಿತ್ತು. ಹಾಗೆಂದು ಮಗಳನ್ನು ಮನೆಯಲ್ಲಿ ಇರಿಸಿಕೊಳ್ಳಲಾಗುವುದೇ? ಅದೂ ಕಷ್ಟವಿಲ್ಲದೆ ಒಳ್ಳೆಯ ಹುಡುಗ ದೊರಕಿರುವಾಗ ಯಾರಾದರೂ ಬಿಡುವುದುಂಟೇ? ಎಂದು ಅವರೂ ಒಪ್ಪಿಕೊಂಡಿದ್ದರು. ಲೀಲಾ ಮದುವೆಯಾಗಿ ಗಂಡನ ಮನೆ ಸೇರಿದ್ದಳು.

ಜಗನ್ನಾಥ ರಾಯರು ಇನ್ನೂ ವೇದಾ, ಮೇಧಾ ಮದುವೆಗೆ ಸಾಕಷ್ಟು ಸಮಯ ದೊರಕುತ್ತದೆ ಎನಿಸಿ ತಮ್ಮ ಪ್ರಾವಿಡೆಂಟ್‌ ಫಂಡ್ ತೆಗೆದು ಶೀಲಾಳ ಮದುವೆ ಮಾಡಿ ಮುಗಿಸುವುದು ಎಂದುಕೊಂಡರು. ಶೀಲಾ ಗಂಡನಾಗುವವನ ಪ್ರೇಮಲೋಕದಲ್ಲಿ ಅದಾಗಲೇ ಮುಂಬೈ ತಲುಪಿದ್ದಳು. ಅಷ್ಟರಲ್ಲಿ ಅವಳ ಪರೀಕ್ಷೆಯೂ ಮುಗಿದಿತ್ತು. ತಿರುಮಲಗಿರಿ ಶ್ರೀನಿವಾಸನ ದೇವಸ್ಥಾನದಲ್ಲಿ ಸರಳವಾಗಿ ಮದುವೆ ನಡೆಸುವುದು ಎಂದು ನಿಶ್ಚಯಿಸಲಾಯಿತು.

ಮದುವೆಗೆ ಎಂಟು ದಿನ ಮುಂಚಿತವಾಗಿ ದೀಪಕ್‌ ತನ್ನ ಸೋದರಮಾವನ ಬಳಗದೊಂದಿಗೆ ಬರುವುದಾಗಿ ತಿಳಿಸಿದ್ದ. ಲೀಲಾ ತಾನೂ ತಂಗಿ ಶೀಲಾಳ ಮದುವೆಗೆ ಹದಿನೈದು ದಿನ ಮೊದಲೇ ಬರುತ್ತೇನೆ ಎಂದಿದ್ದಳು. ಜಗನ್ನಾಥರಾಯರು ಮಗಳಿಗೆ ಕೊಡಲು ಬೆಳ್ಳಿ ಪಾತ್ರೆ, ಹುಡುಗನ ವರೋಪಚಾರದ ಹಣ ಎಲ್ಲವನ್ನೂ ತೆಗೆದಿದ್ದು ಮದುವೆಯ ಸಿದ್ಧತೆ ಭರದಿಂದ ನಡೆದಿತ್ತು.

ವಿಮಲಮ್ಮ ಕೆಲಸದ ಆಯಾಸದಲ್ಲಿ ಬಹಳ ಬೇಗ ಸುಸ್ತಾಗಿ ಹೋಗುತ್ತಿದ್ದರೂ, ತೋರಿಸಿಕೊಳ್ಳದೆ ಕೆಲಸದಲ್ಲಿ ವ್ಯಸ್ತರಾಗುತ್ತಿದ್ದರು. ಮೇಧಾ ತಾಯಿಗೆ ಸಹಾಯ ಮಾಡಿದರೂ ವೇದಾ ಮಾತ್ರ ತನ್ನ ಪಾಡಿಗೆ ಹಾಯಾಗಿ ಇರುತ್ತಿದ್ದಳು. ಅವಳಿಗಾಗಲೇ ಒಬ್ಬ ಶ್ರೀಮಂತ ಹುಡುಗನ ಪರಿಚಯವಾಗಿತ್ತು. ಹಾಗಾಗಿ ಕಾಲೇಜ್‌ ಇಲ್ಲದಿದ್ದರೂ ಸ್ಪೆಷಲ್ ಕ್ಲಾಸ್‌ ಎಂದು ಹೇಳಿ ಹೊರಗಡೆ ಹೋಗುತ್ತಿದ್ದಳು.

ಅಕ್ಕನ ಮದುವೆಗಾಗಿ ಅವಳು ತೆಗೆದುಕೊಂಡಿದ್ದ ಬೆಲೆ ಬಾಳು ಬಟ್ಟೆಗಳನ್ನು ನೋಡಿ, “ಇದೆಲ್ಲಾ ಹೇಗೆ ತೆಗೆದುಕೊಂಡೆ? ಇದಕ್ಕೆಲ್ಲ ಹಣ ಎಲ್ಲಿತ್ತು…..?” ಎಂದು ತಾಯಿ ಕೇಳಿದರು.

“ನೀವು ಕೊಟ್ಟ ಹಣದಲ್ಲಿಯೇ ತೆಗೆದುಕೊಂಡೆ,” ಎಂದು ತಾಯಿಯ ಬಾಯಿ ಮುಚ್ಚಿಸಿದ್ದಳು.

ಆದರೂ ವಿಮಲಮ್ಮನಿಗೆ ಅವಳ ಮೇಲೇ ಏನೋ ಅನುಮಾನ. ಅದನ್ನು ಗಂಡನೊಂದಿಗೆ, “ವೇದಾ ಮೇಲೆ ಒಂದು ಕಣ್ಣಿಡಬೇಕು. ಅವಳ ಬಗ್ಗೆ ನನಗೇಗೋ ಅನುಮಾನ. ನಾನು ಏನೇ ಕೇಳಿದರೂ, ಏನೋ ಒಂದು ಹೇಳಿ ನನ್ನ ಬಾಯಿ ಮುಚ್ಚಿಸಿಬಿಡುತ್ತಾಳೆ. ನೀವಾದರೂ ಅವಳನ್ನು ಒಮ್ಮೆ ಕೇಳಬಾರದೇ….,” ಎಂದು ಹೇಳಿದರು.

“ನೀನೆಂಥ ತಾಯಿಯೇ ವಿಮಲು…. ನಿನ್ನ ಮಕ್ಕಳ ಮೇಲೇ ನಿನಗೇ ನಂಬಿಕೆ ಇಲ್ಲವೇ….? ಅವಳು ಮೊದಲಿನಿಂದ ಇರುವುದೇ ಹಾಗೆ ಅಲ್ಲವೇ…. ಹಾಗೇನೂ ಆಗೋಲ್ಲ ಸುಮ್ಮನಿರು. ನೀನು ಮದುವೆಯ ಕೆಲಸದ ಕಡೆ ಗಮನ ಹರಿಸು,” ಎಂದು ಹೆಂಡತಿಗೆ ಬುದ್ಧಿ ಹೇಳಿದರು.

ಗಂಡಿನವರಿಂದ ಯಾವೊಂದೂ ತೊಂದರೆಯಿಲ್ಲದೆ, ಯಾವ ಕಷ್ಟ ಇಲ್ಲದೇ ಶೀಲಾ ಮದುವೆ ಸುಗಮವಾಗಿ ನಡೆದಿತ್ತು. ಶೀಲಾ ಮದುವೆಯಾದ ವಾರದಲ್ಲಿಯೇ ತನ್ನ ಗಂಡನೊಂದಿಗೆ ಮುಂಬೈಗೆ ಹೊರಟು ಹೋದಳು. ಅವಳು ಆಗಾಗ ಫೋನ್‌ ಮಾಡಿ ತಾಯಿ ಮತ್ತು ತಂಗಿಯರೊಂದಿಗೆ ಮಾತಾಡುತ್ತಾ, ಅಲ್ಲಿನ ಜನ ಜೀವನದ ಬಗ್ಗೆ ಎಲ್ಲವನ್ನೂ ಬಣ್ಣಿಸಿ ಹೇಳುವಾಗ ಎಲ್ಲರಿಗೂ ಬಹಳ ಖುಷಿಯಾಗುತ್ತಿತ್ತು. ಜಗನ್ನಾಥರಾಯರು ಮಗಳು ಸುಖವಾಗಿರುವುದನ್ನು ಕೇಳಿ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ವೇದಾ, ಮೇಧಾ ಇಬ್ಬರೂ ಪಿಯುಸಿಯಲ್ಲಿ ಪಾಸಾಗಿದ್ದರು. ಮೇಧಾ ನೀಟ್‌ ಪರೀಕ್ಷೆಗೆ ಬರೆದಿದ್ದರೆ, ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ ವೇದಾ ಕಾಟಾಚಾರಕ್ಕೆ ಓದು ಮುಂದುವರಿಸಿದ್ದಳು.

ಲೀಲಾ ಗರ್ಭಿಣಿಯಾಗಿರುವ ವಿಷಯ ತಿಳಿದು ಎಲ್ಲರಿಗೂ ಸಂತೋಷವಾಗಿತ್ತು. ಅವಳು ಗಂಡನ ಮನೆಯಲ್ಲಿ ಸೀಮಂತ ಮುಗಿಸಿಕೊಂಡು ತವರಿಗೆ ಬಂದಿದ್ದಳು. ಎಲ್ಲರಿಗೂ ಅವಳನ್ನು ಓಲೈಸುವುದೇ ದೊಡ್ಡ ಕೆಲಸವಾಗಿತ್ತು. ಜೊತೆಗೆ ಮೂರು ಮೂರು ದಿನಕ್ಕೂ ಬಂದು ಕೂರುವ ಅಳಿಯನ ಉಪಚಾರ ಮಾಡುವುದರಲ್ಲಿ ವಿಮಲಮ್ಮ ಸೋತು ಸುಣ್ಣವಾಗಿದ್ದರು.

ಒಂಬತ್ತು ತಿಂಗಳು ತುಂಬಿ ಲೀಲಾ ಸುಂದರವಾದ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಎಲ್ಲರೂ ಅವಳ ಅದೃಷ್ಟವನ್ನು ಹೊಗಳುವವರೇ. ಮಗಳ ಬಾಣಂತನ ಮುಗಿಸಿ ಮಗುವಿನ ನಾಮಕರಣ ಮಾಡಿ ಅವಳನ್ನು ತಿರುಗಿ ಗಂಡನ ಮನೆಗೆ ಕಳುಹಿಸುವ ಹೊತ್ತಿಗೆ ವಿಮಲಮ್ಮ ಅರ್ಧವಾಗಿದ್ದರು. ಜಗನ್ನಾಥರಾಯರಿಗ ಸಾಕು ಸಾಕಾಗಿತ್ತು.

ಈ ಮಧ್ಯೆ ಬಾಣಂತಿಯಾದ ಹೆಂಡತಿ, ಮಗುವನ್ನು ನೋಡಲೆಂದು ವಾರಕ್ಕೊಮ್ಮೆ ಹಾಜರಾಗುತ್ತಿದ್ದ ಅಳಿಯನನ್ನು ಕಂಡರೆ ಆಗುತ್ತಿರಲಿಲ್ಲ ಆದರೂ ಅವನು ಹೊತ್ತು ತರುತ್ತಿದ್ದ ಪದಾರ್ಥಗಳನ್ನು ಕಂಡು ಏನು ಹೇಳದೆ ಸುಮ್ಮನಾಗುತ್ತಿದ್ದರು. ಮಗುವಿಗೆ ಬಟ್ಟೆ, ಒಡವೆ ತರಲು ಎಲ್ಲದಕ್ಕೂ ಅವನು ವೇದಾಳನ್ನೇ ಕರೆದುಕೊಂಡು ಹೋಗುವುದು ವಿಮಲಮ್ಮನಿಗೆ ಸರಿ ಬರುತ್ತಿರಲಿಲ್ಲ. ಆದರೆ ಅವಳನ್ನು ಬೇಡವೆಂದು ತಡೆಯಲೂ ಆಗುತ್ತಿರಲಿಲ್ಲ.

“ವೇದಾಳೆ ಮಗುವಿನ ಬಟ್ಟೆ ಆರಿಸಲಿ. ಅವಳಿಗೆ ಇತ್ತೀಚಿನ ಫ್ಯಾಷನ್‌ ಎಲ್ಲಾ ಗೊತ್ತು,” ಎಂದು ಲೀಲಾಳೇ ಹೇಳುವಾಗ ಅವರಿಗೆ ಏನೂ ಮಾಡಲಾಗುತ್ತಿರಲಿಲ್ಲ. ಭಾವನೊಂದಿಗೆ ಹೊರಗೆ ಹೋಗಿ ಬರುವಾಗ ಅವಳ ಮುಖದಲ್ಲಿನ ಖುಷಿ ನೋಡಿಯೇ ವಿಮಲಮ್ಮನಿಗೆ ಅನುಮಾನವಾಗುತ್ತಿತ್ತು.

“ವೇದಾ ಎಲ್ಲಿಗೆ ಹೋಗಿದ್ದಿರಿ ಬಟ್ಟೆ ತರಲು….. ಇಷ್ಟು ಹೊತ್ತು ಬೇಕೇ….?” ಎಂದು ತಾಯಿ ಜೋರಾಗಿ ಕೇಳಿದರು.

“ಅಮ್ಮಾ….. ನೀನು ಮಾರ್ಕೆಟ್‌ ಗೆ ಹೋಗಿ ಸುತ್ತು, ಆಗ ನಿನಗೆ ಗೊತ್ತಾಗುತ್ತೇ,” ಎಂದು ತಾಯಿಯನ್ನು ದಬಾಯಿಸಿದ್ದಳು.

ಅವಳಿಗೆ ಹೇಳುವುದಕ್ಕಿಂತ ಸುಮ್ಮನಿರುವುದೇ ವಾಸಿ ಎನಿಸಿತು ವಿಮಲಮ್ಮನಿಗೆ ಯಾವಾಗ ಮಗು ಬಾಣಂತಿಯನ್ನು ಅವರ ಮನೆಗೆ ಕಳುಹಿಸುತ್ತೇನೋ ಎನಿಸಿಬಿಟ್ಟಿತು ವಿಮಲಮ್ಮನಿಗೆ. ದಿನದಿಂದ ದಿನಕ್ಕೆ ನಿತ್ರಾಣದಿಂದ ಬಳಲುತ್ತಿದ್ದ ವಿಮಲಮ್ಮ ಒಂದು ದಿನ ಮಲಗಿದವರು ಏಳಲೇ ಇಲ್ಲ.

lukachhupi-story1

ಹೆಂಡತಿಯ ಸಾವಿನಿಂದ ಜಗನ್ನಾಥರಾಯರು ತೀರಾ ಕುಸಿದು ಹೋದರು. ಹೆಂಡತಿ ಇರುವಾಗ ಆಕೆಯನ್ನು ತೀರಾ ಉದಾಸೀನವಾಗಿ ಕಂಡಿದ್ದು ನೆನಪಾಗಿ ಮನಸ್ಸಿಗೆ ದುಃಖವಾಗುತ್ತಿತ್ತು.

ಲೀಲಾ ಬಂದು ನೋಡಿಕೊಂಡು, ಮಗುವಿನ ನೆಪ ಹೇಳಿ ಹೊರಟು ಹೋದಳು. ಶೀಲಾಳ ಗಂಡ ದೀಪಕ್‌ ಮಾತ್ರ ಬಂದಿದ್ದು ಜಗನ್ನಾಥ ರಾಯರಿಗೆ ಎಷ್ಟೋ ಅನುಕೂಲವಾಗಿತ್ತು. ಶೀಲಾಗೆ ಎಂಟು ತಿಂಗಳಾಗಿದ್ದು ಅವಳು ಸ್ವಲ್ಪ ವೀಕ್‌ ಆಗಿರುವುದರಿಂದ ಟ್ರಾವೆಲ್ ‌ಮಾಡೋದು ಬೇಡವೆಂದು ಡಾಕ್ಟರ್‌ ಹೇಳಿದ್ದರಿಂದ ಅವಳನ್ನು ಕರೆದುಕೊಂಡು ಬರಲಿಲ್ಲ ಎಂದಾಗ, ಅಳಿಯನಿಗೆ ಏನೂ ಹೇಳಲು ಆಗಲಿಲ್ಲ ರಾಯರಿಗೆ. ಯಾರು ಬರಲಿ ಬಿಡಲಿ ಆಗಬೇಕಾದ ಕಾರ್ಯ ಆಗಲೇಬೇಕಿತ್ತು.

ಹಾಗಾಗಿ ವಿಮಲಮ್ಮನವರ ಅಂತಿಮ ಯಾತ್ರೆ ಮನೆಯಿಂದ ಹೊರಟಿತ್ತು. ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ಮೇಧಾ ತಾಯಿಯನ್ನು ನೆನೆಸಿಕೊಂಡು ಅಳುತ್ತಿದ್ದರೆ, ವೇದಾ ಮಾತ್ರ ಅದೇ ಉತ್ಸಾಹದಿಂದ ಇರುತ್ತಿರುವುದನ್ನು ನೋಡಿ ಜಗನ್ನಾಥ ರಾಯರಿಗೆ, `ಇವಳಿಗೆ ತಾಯಿ ಹೋದ ದುಃಖ ಕೊಂಚ ಇಲ್ಲವೇ?’ ಎನಿಸಿದರೂ `ತಾಯಿ ಸತ್ತ ನೋವನ್ನು ಮರೆಯಲು ಹೀಗೆ ದುಃಖವನ್ನು ನುಂಗಿ ಮೇಲೆ ಖುಷಿಯಿಂದಿರಬಹುದೇ….’ ಎನಿಸಿ ಮಗಳ ಬಗ್ಗೆ ಪ್ರೀತಿ ಮೂಡಿತು.

ಅತ್ತೆಯ ಕರ್ಮಾಂತರಗಳು ಮುಗಿದ ಮೇಲೆ ದೀಪಕ್‌, “ಮಾವ, ಶೀಲಾಳನ್ನು ಈ ಸಮಯದಲ್ಲಿ ನೋಡಿಕೊಳ್ಳಲು ಅವಳ ಜೊತೆ ಯಾರಾದರೂ ಇರಲೇಬೇಕು. ಆದ್ದರಿಂದ ವೇದಾ ಮೇಧಾ ಇಬ್ಬರಲ್ಲಿ ಯಾರನ್ನಾದರೂ ಒಂದಾರು ತಿಂಗಳ ಮಟ್ಟಿಗಾದರೂ ಕಳುಹಿಸಿಕೊಡಿ,” ಎಂದು ಕೇಳಿದ.

ಜಗನ್ನಾಥ ರಾಯರಿಗೂ ಹೌದೆನ್ನೆಸಿತು. ಆದರೆ ಯಾರನ್ನು ಕಳುಹಿಸುವುದು? ಮೇಧಾ ಹೋಗಲು ಆಗುತ್ತಿರಲಿಲ್ಲ, ಅವಳಿಗೆ ಎಂಜಿನಿಯರಿಂಗ್‌ ಸೀಟ್‌ ಸಿಕ್ಕಿತ್ತು, ಅವಳು ಕಾಲೇಜಿಗೆ ಸೇರಲೇಬೇಕಿತ್ತು. ವೇದಾ ಪಿಯುಸಿ ಮುಗಿಸಿದ್ದಳು.

“ನಾನು ಮುಂದಿನ ವರ್ಷ ಕಾಲೇಜಿಗೆ ಸೇರಿಕೊಳ್ಳುತ್ತೇನೆ. ಆರು ತಿಂಗಳು ಮುಂಬೈನಲ್ಲಿದ್ದು ಬರುತ್ತೇನೆ. ಈ ಸಮಯದಲ್ಲಿ ಅಕ್ಕನ ಜೊತೆ ಇದ್ದು ಅವಳಿಗೆ ಸಹಾಯ ಮಾಡದಿದ್ದರೆ ಹೇಗೆ…..? ಅಮ್ಮ ಇದ್ದಿದ್ದರೆ ಅವರೇ ಹೋಗಿರುತ್ತಿದ್ದರು ಅಲ್ಲವೇ….?” ಎಂದಳು.

ಜಗನ್ನಾಥರಾಯರಿಗೆ, ಮಗಳು ಎಷ್ಟು ಒಳ್ಳೆಯಳು. ಅದೆಷ್ಟು ಚೆನ್ನಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಕಲಿತಿದ್ದಾಳೆ. ತನ್ನ ವಿದ್ಯೆಯನ್ನು ಬದಿಗಿಟ್ಟು ತನ್ನಕ್ಕನಿಗೆ ಸಹಾಯ ಮಾಡಲು ಹೊರಟು ನಿಂತ ಮಗಳ ಬಗ್ಗೆ ಅವರಿಗೆ ಅಭಿಮಾನ ಎನಿಸಿತು. ಹಾಗಾಗಿ  ಬೇರೆ ಪರ್ಯಾಯವೇ ಇಲ್ಲದೆ ವೇದಾಳನ್ನು ಕಳುಹಿಸಲು ಒಪ್ಪಿದರು.

“ಅಪ್ಪಾ, ನೀವು ಯೋಚಿಸಬೇಡಿ. ಬೇಕಿದ್ದರೆ ನಾನು ಪ್ರೈವೇಟ್‌ ನಲ್ಲಿ ಡಿಗ್ರಿ ಮುಗಿಸಿಕೊಳ್ಳುತ್ತೇನೆ. ಅಕ್ಕನನ್ನು ನೋಡಿಕೊಳ್ಳಲು ಯಾರಾದರೂ ಬೇಕಲ್ಲವೇ….? ಇಲ್ಲಿ ಮೇಧಾ ನಿಮ್ಮನ್ನು ನೋಡಿಕೊಳ್ಳುತ್ತಾಳೆ. ಅವಳ ಕಾಲೇಜ್‌ ಈಗಷ್ಟೇ ಶುರುವಾಗಿದೆ,” ಎಂದಳು ವೇದಾ.

ಮಗಳ ಬಗ್ಗೆ ಮತ್ತೊಮ್ಮೆ ರಾಯರಿಗೆ ಅಭಿಮಾನ ಎನಿಸಿತು. `ತನ್ನ ಮಗಳು ಅದೆಷ್ಟು ಬುದ್ಧಿವಂತಳು. ಇಂತಹ ಒಳ್ಳೆಯ ಹುಡುಗಿಯ ಬಗ್ಗೆ ವಿಮಲೂ ಅಷ್ಟೇಕೆ ಅನುಮಾನ ಪಡುತ್ತಿದ್ದಳೋ,’ ಎಂದು ಹೆಂಡತಿಯ ಬಗ್ಗೆ ಬೇಸರ ಆಯಿತು.

ದೀಪಕ್‌ ಸಹ ತನ್ನ ಹೆಂಡತಿಯ ಸಹಾಯಕ್ಕೆ ಅವಳ ತಂಗಿಯೇ ಸಿಕ್ಕಳಲ್ಲ ಎನಿಸಿ ಖುಷಿಯಾಗಿ ನೆಮ್ಮದಿಯ ನಿಟ್ಟಿಸಿರು ಬಿಟ್ಟ.

ಉತ್ಸಾಹದಿಂದ ಮುಂಬೈಗೆ ಹೊರಡುವ ತಯಾರಿ ನಡೆಸುತ್ತಿದ್ದ ವೇದಾಳ ಬಳಿ ಬಂದ ಮೇಧಾ, “ವೇದು, ನಿನ್ನ ವಿದ್ಯೆಗೆ ಸಂಚಕಾರ ಬಂತಲ್ಲೇ, ಅಲ್ಲಿ ಶೀಲಕ್ಕನ ಬಾಣಂತನ ನಿನ್ನಿಂದ ಮಾಡಲು ಆಗುವುದೇ? ಅದರ ಬದಲು ಅಕ್ಕನನ್ನೇ ಇಲ್ಲಿಗೆ ಕರೆತಂದಿದ್ದರೆ ಒಳ್ಳೆಯದಿತ್ತು. ಇಲ್ಲಾದರೆ ಅಬ್ಬಕ್ಕ ಆಂಟಿ ಇದ್ದಾರೆ, ನಾವು ಅವರ ಸಹಾಯ ಪಡೆಯಬಹುದಿತ್ತು,” ಎಂದಳು.

“ಆದ್ರೆ ಅಕ್ಕನಿಗೆ ಟ್ರಾವೆಲ್‌ ಮಾಡೋಕ್ಕೆ ಆಗೋಲ್ಲ ಅಂತ ತಾನೇ ಭಾವ ನಮ್ಮ ಸಹಾಯ ಕೇಳ್ತಿರೋದು. ಅಮ್ಮ ಇದ್ದಿದ್ರೆ ಹೋಗ್ತಿದ್ರು. ಈಗ ಇದು ನಮ್ಮ ಜವಾಬ್ದಾರಿನೇ ಅಲ್ವಾ….? ಪಾಪ ಭಾವನಿಗೆ ಪ್ರಮೋಷನ್‌ ಆಗಿದೆಯಂತೆ. ಹಾಗಾಗಿ ಅವರಿಗೆ ಕೆಲಸದ ಒತ್ತಡ ಇರುತ್ತೆ. ನಾನು ಹೇಗಾದ್ರೂ ಡಿಗ್ರಿ ಮುಗಿಸಿಕೊಳ್ತೀನಿ, ಚಿಂತೆ ಮಾಡಬೇಡ. ನೀನು ನಿನ್ನ ವಿದ್ಯಾಭ್ಯಾಸದ ಕಡೆ ಗಮನ ಕೊಡು, ಅಪ್ಪನ್ನ ಚೆನ್ನಾಗಿ ನೋಡಿಕೋ,” ಎಂದು ಬುದ್ಧಿ ಹೇಳಿದಳು.

ಅವಳ ಮಾತನ್ನು ಕೇಳಿ ಮೇಧಾ ಪ್ರೀತಿಯಿಂದ ಅವಳನ್ನು ಆಲಂಗಿಸಿಕೊಂಡಳು. ಒಳಗಿನಿಂದಲೇ ಇಬ್ಬರ ಮಾತುಗಳನ್ನು ಕೇಳಿದ ಜಗನ್ನಾಥರಾಯರಿಗೆ, `ಅಬ್ಬಾ…. ನನ್ನ ಮಕ್ಕಳು ಅದೆಷ್ಟು ಬೇಗ ಬೆಳೆದುಬಿಟ್ಟರು,’ ಎನಿಸಿತು.

ದೀಪಕ್‌ ಟಿಕೆಟ್‌ ಬುಕ್‌ ಮಾಡಿಸಿಕೊಂಡು ಬಂದು, `ನಾಳೆ ರಾತ್ರಿ ಎಂಟು ಘಂಟೆಗೆ ಟ್ರೈನ್‌ ಹೊರಡುತ್ತೆ. ನಾವು ಏಳು ಗಂಟೆಗೇ ಮನೆ ಬಿಡಬೇಕು,” ಎಂದು ಹೇಳಿದ.

ಮೇಧಾ ತನಗೆ ತಿಳಿದಂತೆ ಅಡುಗೆ ಮಾಡಿ ಬಡಿಸಿದಳು. ದೀಪಕ್‌ ಊಟ ಮಾಡುತ್ತಾ, “ಮಾವ, ನೀವು ಈ ಸಮಯದಲ್ಲಿ ವೇದಾಳನ್ನು ನನ್ನ ಜೊತೆಗೆ ಕಳುಹಿಸುತ್ತಿರುವುದಕ್ಕೆ ನಾನು ಹೇಗೆ ಧನ್ಯವಾದ ಹೇಳಲಿ ಅಂತ ಗೊತ್ತಾಗ್ತಿಲ್ಲ. ಪಾಪ ವೇದಾ, ತನ್ನ ಓದು ನಿಲ್ಲಿಸಿ ಅಕ್ಕನಿಗೆ ಸಹಾಯ ಮಾಡಲು ಬರುತ್ತಿರೋದು ಶೀಲಾಗೆ ತುಂಬಾ ಖುಷಿಯಾಗಿದೆ. ಅವಳ ಡೆಲಿವರಿ ಆದ ಒಂದು ತಿಂಗಳಿಗೆ ಬೇರೆ ಏನಾದರೂ ವ್ಯವಸ್ಥೆ ಮಾಡಿಕೊಂಡು, ವೇದಾಳನ್ನು ಆದಷ್ಟು ಬೇಗ ಕಳುಹಿಸಿ ಕೊಡುತ್ತೇನೆ. ನೀವೇನು ಯೋಚನೆ ಮಾಡಬೇಡಿ,” ಎಂದ.

“ಇರಲಿ ಅಳಿಯಂದ್ರೆ, ಈ ಸಮಯದಲ್ಲಿ ನಮ್ಮವರು ಅಂತ ಇರಬೇಕು. ಆಗಲಿ, ಅವಳು ಒಂದು ಮೂರು ತಿಂಗಳು ಅಕ್ಕನೊಂದಿಗೆ ಇದ್ದು ಬರಲಿ…” ಎಂದರು.

“ವೇದಾ, ನೀನು ಅಲ್ಲಿಗೆ ಹೋದ ಮೇಲೆ ನಿನ್ನಕ್ಕನಿಗೆ ಇಷ್ಟವಾದ ಸೀರೆ ಕೊಡಿಸು,” ಎಂದು ಮಗಳ ತಲೆ ಸವರಿ, ಅವಳಿಗೆ ಇಪ್ಪತ್ತು ಸಾವಿರ ಕ್ಯಾಶ್‌ ಕೊಟ್ಟರು ಜಗನ್ನಾಥರಾಯರು.

ತಂದೆ ಆ ಕಡೆ ಹೋಗಿದ್ದೇ, “ಹುರ್ರೆ…..” ಎಂದು ಕೂಗಿದಳು ಕೈಯಲ್ಲಿದ್ದ ಹಣಕ್ಕೆ ಮುತ್ತಿಟ್ಟು, ತನ್ನ ಮೊಬೈಲ್ ‌ನಲ್ಲಿದ್ದ ದೀಪಕ್ ಫೋಟೋಗೆ ಮುತ್ತಿಡುತ್ತಾ, “ಭಾವ, ಇನ್ನು ಸ್ವಲ್ಪ ದಿನದಲ್ಲಿ ನಾನು ನಿಮ್ಮನ್ನು ಹೇಗೆ ಆಟ ಆಡಿಸ್ತೇನೆ ನೋಡಿ, ನೀನಿಲ್ಲದೆ ನಾನಿರಲಾರೆ ಎನ್ನಬೇಕು ನೀವು. ಆ ನಿಮ್ಮ ಶೀಲಾ ಯಾವ ಮಹಾ ಸುಂದರಿ…..? ಒಂದಿಷ್ಟು ಬೆಳ್ಳಗೆ ಇದ್ದ ಮಾತ್ರಕ್ಕೆ ಯಾರೂ ಸುಂದರಿ ಅನಿಸಿಕೊಳ್ಳೋದಿಲ್ಲ. ನನ್ನಂತಹ ಪ್ರಮಾಣಬದ್ಧ ಶರೀರದ ಸುಂದರಿಯನ್ನೇ ಶಿಲಾಬಾಲಿಕೆಗೆ ಹೋಲಿಸುವುದು,’  ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ಕನ್ನಡಿಯಲ್ಲಿನ ತನ್ನ ಬಿಂಬಕ್ಕೆ ತಾನೇ ಮುತ್ತಿಟ್ಟಳು.

ಮರುದಿನ ಅಕ್ಕನಿಗಾಗಿ ಸ್ವಲ್ಪ ಹಣ್ಣು, ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಟವಳು ಸೀದಾ ಹೋಗಿದ್ದು ಬ್ಯೂಟಿ ಪಾರ್ಲರ್ ಗೆ. ಮಹಾನಗರಿ ಮುಂಬೈಗೆ ಹೊರಟಿರುವ ತನಗೆ ಅಂದ ಚಂದ ಮುಖ್ಯವಲ್ಲವೇ ಎಂದುಕೊಂಡು ಹೇರ್‌ ಸ್ಟೈಲ್‌, ಮುಖದ ಫೇಶಿಯಲ್, ಸ್ಪಾ ಎಲ್ಲವನ್ನೂ ಮಾಡಿಸಿಕೊಂಡು, ತನಗಾಗಿ ಶಾರ್ಟ್ಸ್, ಟೀ ಶರ್ಟ್‌, ಟಾಪ್ಸ್ ಎಲ್ಲವನ್ನೂ ಕೊಂಡುಕೊಂಡು ಬಂದಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ಅವಳ ಭಾವ ದೀಪಕ್‌ ರೂಮಿನಲ್ಲಿದ್ದ. ಶಾರ್ಟ್ಸ್ ಹಾಗೂ ತೋಳಿಲ್ಲದ ಟಾಪ್‌ ಧರಿಸಿ ಬಂದವಳೇ, “ಭಾವ ಊಟ ಮಾಡೋಣ್ವಾ….?” ಎಂದು ಕೇಳಿದಳು.

ಮೊಬೈಲ್ ‌ನೋಡುತ್ತಿದ್ದ ದೀಪಕ್‌, ಎದುರಿಗೆ ನಿಂತಿದ್ದವಳನ್ನು ತಲೆ ಎತ್ತಿ ನೋಡಿ, ಅವಳ ಅಂದ ಚೆಂದಕ್ಕೆ ಬೆರಗಾಗಿ, `ಅಬ್ಬಾ, ಇವಳು ಎಷ್ಟು ಚೆನ್ನಾಗಿದ್ದಾಳೆ. ಶೀಲಾ ಬೆಳ್ಳಗೆ ಇದ್ದರೂ ಇವಳ ಬಾಡಿ ಶೇಪ್‌ ಅವಳಿಗಿಲ್ಲ,’ ಎಂದು ಅಂದುಕೊಂಡು ಊಟಕ್ಕೆ ಬಂದ.

ವೇದಾ ಬಡಿಸುವಾಗ ಅವಳನ್ನೇ ಕಡೆಗಣ್ಣಿನಿಂದ ನೋಡುತ್ತಾ, ಅವಳಿಂದ ಕಣ್ಣು ಕೀಳದಾಗಿದ್ದ. ನಿಧಾನಕ್ಕೆ ಊಟ ಮುಗಿಸಿ ಏಳುತ್ತಾ, “ವೇದಾ, ನಾಳೆ ಟ್ರೈನ್‌ ನಲ್ಲಿ ಈ ಡ್ರೆಸ್‌ ಬೇಡ. ಚೆನ್ನಾಗಿರಲ್ಲ…. ಚೂಡಿದಾರ್‌ ಹಾಕ್ಕೊಂಡು ಬಾ, ಬೇಕಿದ್ರೆ ಮುಂಬೈನಲ್ಲಿ ಹಾಕ್ಕೊಳ್ಳುವಿಯಂತೆ,” ಎಂದ.

“ಸರಿ ಭಾವ, ನಿಮಗೆ ಇಷ್ಟವಿಲ್ಲದಿದ್ರೆ ನಾನು ಹಾಕಿಕೊಳ್ಳೊಲ್ಲಾ. ಯಾಕೆ ನಿಮಗೆ ಇಷ್ಟ ಆಗಲಿಲ್ವಾ….?” ಎಂದು ಕೇಳಿದಳು.

“ನನಗೆ ಇದೆಲ್ಲಾ ಇಷ್ಟವೇ. ಆದರೆ ಪ್ರಯಾಣದಲ್ಲಿ ಬೇಡ ಅಂತ ಅಷ್ಟೇ…” ಎಂದು ಹೇಳಿದವನತ್ತ ನೋಡಿ, `ಮಿಕ ಬಲೆಗೆ ಬಿತ್ತು,’ ಎಂದುಕೊಂಡಳು.

ಮರುದಿನ ಬೆಳಗ್ಗೆ ಬೇಗ ಎದ್ದು ತನ್ನ ಎಲ್ಲಾ ಕೆಲಸ ಮುಗಿಸಿ, ತಂದೆಯ ಬಳಿ ಹೋಗಿ ಅವರಿಗೆ ತಿಂಡಿ ಕೊಡುತ್ತಾ, “ಅಪ್ಪಾ, ನೀವು ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ನಾನು ಶೀಲಕ್ಕನನ್ನು ಚೆನ್ನಾಗಿ ನೋಡಿಕೊಳ್ತೀನಿ ನೀವೇನೂ ಯೋಚನೆ ಮಾಡಬೇಡಿ,” ಎಂದೆಲ್ಲಾ ಹೇಳಿದಾಗ ಅವರಿಗೂ ಕಣ್ಣು ತುಂಬಿ ಬಂದಿತ್ತು.

“ಸರಿ ಕಣಮ್ಮಾ, ನೀನು ನಿನ್ನ ಆರೋಗ್ಯ ನೋಡಿಕೋ,” ಎಂದರು ತಂದೆ.

“ಇತ್ತು ನಾನು ಕಾಲೇಜಿಗೆ ಹೋಗೋಲ್ಲ. ನಿನ್ನ ಜೊತೆಗೆ ಇರ್ತೀನಿ,” ಎಂದ ಮೇಧಾಳಿಗೆ ಬೇಡ ಎನ್ನಲಾರದೆ ಸುಮ್ಮನಾದಳು.

ಮಧ್ಯಾಹ್ನದ ಹೊತ್ತಿಗೆ ಮಗುವಿನೊಂದಿಗೆ ಲೀಲಾಳ ಆಗಮನವಾಯಿತು. ಅವಳು ತಂಗಿಗೆ, “ವೇದಾ, ನಿನ್ನ ಇತಿಮಿತಿಯನ್ನು ಅರಿತುಕೊಂಡಿರು. ಗಂಡ ಹೆಂಡತಿಯರ ನಡುವೆ ಹೋಗಬೇಡ,” ಎಂದು ಬುದ್ಧಿ ಹೇಳಿದಳಾದರೂ, ವೇದಾಳನ್ನು ಅಲ್ಲಿಗೆ ಕಳುಹಿಸುವುದು ಲೀಲಾಗೆ ಕೊಂಚವೂ ಇಷ್ಟವಿರಲಿಲ್ಲ.

ಈಗಾಗಲೇ ಲೀಲಾಳಿಗೆ ತನ್ನ ಗಂಡ ಮತ್ತು ತಂಗಿಯ ಪ್ರೇಮ ಪ್ರಕರಣ ಸೂಕ್ಷ್ಮವಾಗಿ ಗೊತ್ತಾಗಿತ್ತು. ಆದರೆ ವೇದಾಳನ್ನು ಕೇಳಲು ಭಯ, ಮೊದಲೇ ಅವಳು ಜೋರು ಗಂಟಲಿನ, ಜಗಳಗಂಟಿ ಸ್ವಭಾವದವಳು. ಎಲ್ಲರೆದುರು ನಿನ್ನ ಗಂಡ ಅಂಥವನು, ಇಂಥವನು ಎಂದು ತನ್ನ ಮತ್ತು ಗಂಡನ ಮಾನವನ್ನೇ ಕಳೆಯಬಹುದು ಎಂದು ನೆನೆಸಿ, ಬಾಯಿಯವರೆಗೆ ಬಂದಿದ್ದ ಮಾತುಗಳನ್ನು ನುಂಗಿಕೊಂಡಿದ್ದಳು.

ತಂಗಿ ಶೀಲಾಳಿಗೆ ಸೂಕ್ಷ್ಮವಾಗಿ ವೇದಾಳ ಬಗ್ಗೆ ಸ್ವಲ್ಪ ಎಚ್ಚರಿಕೆಯಾಗಿರು ಎಂದು ಹೇಳಬೇಕು ಎಂದುಕೊಂಡರೂ, ಅವಳೆಲ್ಲಿ ತನ್ನನ್ನು ತಪ್ಪು ತಿಳಿಯುತ್ತಾಳೋ ಎನಿಸಿ ಸುಮ್ಮನಾದಳು.

“ಮೇಧಾ, ನೀನು ಹೋಗಿದ್ದರೆ ಚೆನ್ನಾಗಿರುತ್ತಿತ್ತು. ನೀನಾದರೆ ಚೆನ್ನಾಗಿ ಅಡುಗೆ ಎಲ್ಲಾ ಮಾಡುತ್ತಿ,” ಎಂದಳು ತಡೆಯಲಾರದೆ.

“ಅಕ್ಕಾ, ಅವಳು ಈಗಷ್ಟೇ ಎಂಜಿನಿಯರಿಂಗ್‌ ಕಾಲೇಜಿಗೆ ಸೇರಿದ್ದಾಳೆ. ಅವಳಿಗೆಲ್ಲಿ ಆಗುತ್ತೆ ಅಂತಾನೇ ನಾನು ಹೊರಟಿರೋದು. ಈಗೇನು ಅಡುಗೆ ಮಾಡೋದು ದೊಡ್ಡ ಬ್ರಹ್ಮ ವಿದ್ಯೆನಾ….? ಮೊಬೈಲ್ ‌ಒತ್ತಿದ್ರೆ ಎಲ್ಲಾ ವಿಷಯ ತಿಳಿಯುತ್ತೆ, ಯೂಟ್ಯೂಬ್‌ ನಲ್ಲಿ ಬಾಣಂತಿ ಪಥ್ಯ, ಆಹಾರ, ಔಷಧಿ ಎಲ್ಲಾ ಸಿಗುತ್ತೆ ಬಿಡಕ್ಕಾ…. ನೀನು ಇಲ್ಲಿಗೆ ಆಗಾಗ ಬಂದು ನೋಡ್ಕೊಂಡು ಹೋಗು. ನಾನೂ ಫೋನ್‌ ಮಾಡ್ತಿರ್ತೀನಿ,” ಎಂದು ಹಿರಿಯಕ್ಕ ಲೀಲಾಳ ಬಾಯಿ ಮುಚ್ಚಿಸಿದಳು.

ತಂದೆಯೊಂದಿಗೆ ಹೆಚ್ಚು ಮಾತಾಡಿ ಅಭ್ಯಾಸವಿಲ್ಲದ ಲೀಲಾ, ಅವರಿಗೆ ವಿವರಿಸಿ ಹೇಳಲು ಆಗದಿದ್ದರೂ ಅವರ ಬಳಿ ಹೋಗಿ, “ಅಪ್ಪಾ. ಅವರು ಅಲ್ಲಿಯೇ ಏನಾದರೂ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ವೇದಾಳ ಓದು ನಿಲ್ಲಿಸಿ ಅಲ್ಲಿಗೆ ಕಳಿಸೋದು ನನಗಂತೂ ಸರಿಕಾಣೋಲ್ಲ….” ಎಂದಳು.

ಅದಕ್ಕೆ ಜಗನ್ನಾಥರಾಯರು, “ನೋಡಮ್ಮಾ, ಶೀಲಾದು ಇದು ಚೊಚ್ಚಲ ಹೆರಿಗೆ. ನಿಮ್ಮಮ್ಮ ನಿನ್ನ ಬಾಣಂತನವನ್ನು ಎಷ್ಟು ಚೆನ್ನಾಗಿ ಮಾಡಿದ್ಲು. ಸೀಮಂತ ಕೂಡ ಚೆನ್ನಾಗಿ ಆಗಿತ್ತು. ಪಾಪ ಶೀಲಾಗೆ ಅದ್ಯಾವ ಸಂತೋಷವನ್ನೂ ಕೊಡಲು ಆಗಲಿಲ್ಲ. ಕಡೇ ಪಕ್ಷ ಅವಳ ತವರಿನವರು ಯಾರಾದರು ಸ್ವಲ್ಪ ದಿನವಾದರೂ ಅವಳೊಂದಿಗೆ ಇದ್ದರೆ ಅವಳಿಗೂ ಸಂತೋಷವಾಗುತ್ತೆ. ನಿನಗಾದ್ರೆ ಕೈಗೊಬ್ಬ, ಕಾಲಿಗೊಬ್ಬ ಆಳುಗಳಿದ್ದಾರೆ. ಅಲ್ಲಿ ಕೆಲಸದವರು ಸಿಗುವುದು ದುಬಾರಿಯಂತೆ. ಅಷ್ಟು ಹೇಳ್ತೀಯಲ್ಲಾ…. ನೀನೇ ಸ್ವಲ್ಪ ದಿನಗಳ ಮಟ್ಟಿಗೆ ಹೋಗಿ ಅಲ್ಲಿರು ನೋಡೋಣ,” ಎಂದು ವ್ಯಂಗ್ಯವಾಗಿ ಹೇಳಿದರು.

“ನಾನು ಹೋಗೋ ಹಾಗಿದ್ದಿದ್ದರೆ ಖಂಡಿತಾ ಹೋಗಿರ್ತಿದ್ದೆ ಅಪ್ಪಾ….” ಎಂದಳು.

ಎಲ್ಲ ತಯಾರಿ ಆಗಿ ಏಳು ಗಂಟೆಗೆ ಆಟೋದಲ್ಲಿ ಹೊರಟಿದ್ದರು. ತೆಳುವಾಗಿ ಮೇಕಪ್‌ ಮಾಡಿಕೊಂಡು ಚೂಡಿದಾರ್‌ ಧರಿಸಿ ತನ್ನ ಸ್ಲಿಂಗ್‌ ಬ್ಯಾಂಗ್‌ ಹೆಗಲಿಗೇರಿಸಿಕೊಂಡು ಖುಷಿಯಾಗಿ ಹೊರಟು ನಿಂತ ತಂಗಿಯನ್ನು ನೋಡಿದ ಲೀಲಾಗೆ, ಮತ್ತೆ ಮತ್ತೆ ಅವಳನ್ನು ಕಳಿಸಬಾರದಿತ್ತು ಎಂದೆನಿಸಿದರೂ ಏನೂ ಹೇಳಲಾಗದೆ ಸುಮ್ಮನಾದಳು. ದೀಪಕ್‌, ವೇದಾ ಎಲ್ಲರಿಗೂ ಹೇಳಿ ಆಟೋ ಹತ್ತಿದರು.

“ನೀನು ಟ್ರೇನ್‌ ನಲ್ಲಿ ದೂರ ಹೋಗಿದ್ದೀಯಾ ವೇದಾ?” ಎಂದು ಕೇಳಿದ ದೀಪಕ್‌.

“ಇಲ್ಲಾ ಭಾವ, ಮೈಸೂರಿಗೆ ಮಾತ್ರ ಹೋಗಿರೋದು….” ಎಂದಳು ವೇದಾ.

“ನಾವೀಗ ಇಪ್ಪತ್ನಾಲ್ಕು ಘಂಟೆ ಒಟ್ಟಿಗೆ ಪ್ರಯಾಣಿಸಬೇಕು. ನಿನಗೆ ಬೋರ್‌ ಆಗೋಲ್ಲ ತಾನೇ….?”

“ಜೊತೆಗೆ ನೀವಿರ್ತೀರಲ್ಲ ಭಾವ, ಬೋರ್‌ ಯಾಕೆ ಆಗುತ್ತೆ….?”

“ನನ್ನೊಂದಿಗೆ ಇರೋಕೆ ಇಷ್ಟನಾ….?”

“ಅದಕ್ಕೆ ಅಲ್ವೇ ನಾನು ಬರ್ತಿರೋದು…. ಅಂದ್ರೆ ಅಕ್ಕನಿಗೆ ಸಹಾಯವಾಗಲಿ ಅಂತ…..”

ದೀಪಕ್‌ ಗೆ ಅವಳ ಜಾಣತನ ಇಷ್ಟವಾಗಿತ್ತು. ವೇದಾ ಏಸಿಯಲ್ಲಿ ಮೊದಲ ಬಾರಿಗೆ ಪ್ರಯಾಣಿಸುತ್ತಿದ್ದಳು. ಅದು ನಾಲ್ಕು ಮಂದಿ ಮಾತ್ರವೇ ಇರುವ ಕಂಪಾರ್ಟ್‌ ಮೆಂಟ್‌ ಆಗಿತ್ತು. ಅವರು ಕುಳಿತ ನಂತರ ಮದುವೆಯಾದ ಹೊಸ ಜೋಡಿಯೊಂದು ಬಂದಿತ್ತು. ಉತ್ತರದ ಕಡೆಯವರು ಎನಿಸಿತು. ಕೈ ತುಂಬಾ ಹಚ್ಚಿಕೊಂಡಿದ್ದ ಮೆಹೆಂದಿ, ಬಳೆಗಳು, ಆಕೆಯ ಹಣೆಯಲ್ಲಿನ ಸಿಂಧೂರ, ಅವರು ಧರಿಸಿದ್ದ ಜೀನ್ಸ್ ಪ್ಯಾಂಟ್‌, ಕುರ್ತಾ ಬಹಳ ಬೆಲೆಬಾಳುವಂಥದ್ದೇ ಆಗಿತ್ತು. ಅವಳು ಒಳಗೇ ಬರುತ್ತಿದ್ದಂತೆ ಅವಳು ಹಚ್ಚಿಕೊಂಡಿದ್ದ ಸೆಂಟ್‌ ಪರಿಮಳ ಇಡೀ ಕಂಪಾರ್ಟ್‌ ಮೆಂಟ್‌ ವ್ಯಾಪಿಸಿತ್ತು. ಅದರ ಘಮಲು ವೇದಾಳನ್ನು ಬೇರೊಂದು ಕನಸಿನ ಲೋಕಕ್ಕೆ ಕೊಂಡೊಯ್ಯಿತು.

ದೀಪಕ್‌ ಗೆ ಆಫೀಸ್‌ ನಿಂದ ಇಂಪಾರ್ಟೆನ್ಟ್ ಕಾಲ್ ‌ಬರತೊಡಗಿತ್ತು. ಆದ್ದರಿಂದ ಅವನು ಹೊರಗಡೆ ಹೋಗಿ ಮಾತಾಡುತ್ತಾ ನಿಂತಿದ್ದ. ನವ ದಂಪತಿಗಳು ತಾವು ತಂದಿದ್ದ ಊಟ ಮಾಡಿ, ತಮ್ಮ ತಮ್ಮ ಜಾಗದಲ್ಲಿ ಮಲಗಿಬಿಟ್ಟರು. ದೀಪಕ್‌ ಮಾತು ಮುಗಿಸಿ ಬಂದ ನಂತರ ವೇದಾ ಅವನಿಗೂ ಚಪಾತಿ ಚಟ್ನಿ ಬಡಿಸಿಕೊಟ್ಟು ತಾನೂ ತಿಂದಳು.

“ನೀನು ಕೆಳಗೆ ಮಲಗು ನಾನು ಮೇಲೆ ಮಲಗುತ್ತೇನೆ,” ಎಂದು ಹೇಳಿ ಬರ್ತ್‌ ಮೇಲೆ ಹತ್ತಿ ಮಲಗಿದ.

ವೇದಾ ಸ್ವಲ್ಪ ಹೊತ್ತು ಮೊಬೈಲ್ ‌ನೋಡುತ್ತಾ ಕುಳಿತಳು ತಾನೂ ನಿದ್ದೆಗೆ ಜಾರಿದಳು. ಅವಳ ಮನದಲ್ಲಿ ತಾನು ಅಕ್ಕನ ಮುಂದೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತನ್ನದೇ ಆದ ಒಂದು ರೂಪುರೇಷೆ ತಯಾರಿಸಿಕೊಳ್ಳ ತೊಡಗಿದ್ದಳು. ಹಿರಿಯಕ್ಕ ಲೀಲಾಳಿಗೆ ತನ್ನ ಮೇಲೆ ಸಂಶಯ ಬಂದಿರಬೇಕು ಎನಿಸಿತು.

ಕುಡಿದ ಅಮಲಿನಲ್ಲಿ ದೊಡ್ಡ ಭಾವ ಬಾಯಿ ಬಿಟ್ಟಿರಬೇಕು. ಏಕೆಂದರೆ ಮನೆಯಲ್ಲಿ ಯಾರಿಗೂ ಕೊಂಚ ಸಂಶಯ ಬಂದಿರಲಿಲ್ಲ. ತಾನು ಮುಂಬೈಗೆ ಹೊರಟು ಬಂದಿರುವುದು ಬಹುಶಃ ಭಾವನಿಗೆ ಇಷ್ಟವಾಗಿರಲಿಲ್ಲ ಅನಿಸುತ್ತೆ, ಫೋನ್‌ ಮಾಡಿ, `ನೀನು ಏಕೆ ಹೋಗಬೇಕು….? ಮೇಧಾಳನ್ನ ಕಳಿಸಬಹುದಿತ್ತು, ಇಲ್ಲ ಅಂದ್ರೆ ಅವರೇ ಏನಾದ್ರೂ ವ್ಯವಸ್ಥೆ ಮಾಡಿಕೋತಾರೆ. ನಾನು ನಿನ್ನನ್ನು ಮಡಿಕೇರಿಗೆ ಕರೆದುಕೊಂಡು ಹೋಗಬೇಕು ಅಂತಿದ್ದೆ. ನೀನು ನೋಡಿದ್ರೆ ಹೀಗೆ ಹೊರಟಿದ್ದೀಯಾ…..?’ ಎಂದೆಲ್ಲ ಪೂಸಿ ಹೊಡೆದಿದ್ದರೂ ವೇದಾಳ ನಿರ್ಧಾರ ಗಟ್ಟಿಯಾಗಿತ್ತು.

ಶೀಲಾಳ ಮದುವೆ ಆದಾಗಿನಿಂದಲೂ ದೀಪಕ್‌ ಅವಳಿಗೆ ತುಂಬಾ ಇಷ್ಟವಾಗಿದ್ದ. ಅದಲ್ಲದೆ, ಅವಳಿಗೆ ದೂರದ ಮುಂಬೈಯನ್ನು ಕಣ್ಣು ತುಂಬಾ ಸುತ್ತಿ ನೋಡುವಾಸೆ ಇತ್ತು. ಮದುವೆ ಸಮಯದಲ್ಲಿ ಅಕ್ಕನೊಂದಿಗೆ ಹೋಗಲು ತಯಾರಾದವಳನ್ನು ತಾಯಿ ವಿಮಲಾ ತಡೆದಿದ್ದರು. ಅಲ್ಲಿದ್ದಾಗ ಹೇಗಾದರೂ ಮಾಡಿ ದೀಪಕ್‌ ನನ್ನು ತನ್ನಂತೆ ಮಾಡಿಕೊಳ್ಳಬೇಕು. ಜೊತೆಗೆ ಅವನೊಂದಿಗೆ ಮುಂಬೈ ಶಹರನ್ನು ಸುತ್ತಿ ನೋಡಬೇಕು ಎಂಬಾಸೆ ಅವಳಿಗೆ ಇತ್ತು. ಅವನ ಶೋಕಿ, ಸ್ಮೈಲ್ ‌ಎಲ್ಲವೂ ಅವಳ ಮನಸ್ಸನ್ನು ಸೆಳೆದಿತ್ತು.

ದೀಪಕ್‌ ನಂಥ ಹೀರೋಗೆ ನಾನು ಮಾತ್ರವೇ ಸರಿಯಾದ ಜೋಡಿ ಎನಿಸುತ್ತಿತ್ತು ಅವಳಿಗೆ. ಮುಂಬೈಗೆ ಹೋಗಬೇಕು ಎಂದಕೊಂಡರೂ ಹೋಗಲು ಆಗಿರಲಿಲ್ಲ. ಈಗ ಸಿಕ್ಕಿರುವ ಛಾನ್ಸ್ ಕಳೆದುಕೊಳ್ಳುವ ಆಸೆ ಅವಳಿಗೆ ಇರಲಿಲ್ಲ. ಅದಕ್ಕೆಂದೇ ಓದನ್ನು ಬದಿಗಿಟ್ಟು ಹೊರಟು ಬಂದಿದ್ದಳು.

ಮರುದಿನ ಬಹಳ ಹೊತ್ತಿನವರೆಗೂ ಅವಳಿಗೆ ಎಚ್ಚರವಾಗಿರಲಿಲ್ಲ. ನವ ದಂಪತಿಗಳೊಂದಿಗೆ ಮಾತನಾಡುತ್ತಾ ಕುಳಿತ ಭಾವನ ಮಾತುಗಳಿಂದ ಎಚ್ಚೆತ್ತಳು, `ಓಹೋ…. ಎಷ್ಟೊಂದು ಬೆಳಕಾಗಿ ಬಿಟ್ಟಿದೆ. ತಾನು ತುಂಬಾ ಹೊತ್ತು ಮಲಗಿದೆ….’ ಎಂದುಕೊಂಡು ತನ್ನ ಕಾಲಿಗೆ ಒರಗಿಕೊಂಡೆ ಕುಳಿತಿದ್ದವನಿಗೆ, “ಸಾರಿ ಭಾವ…. ನಾನು ತುಂಬಾ ಹೊತ್ತು ಮಲಗಿಬಿಟ್ಟೆ,” ಎನ್ನುತ್ತಾ ಎದ್ದು, ಬಾತ್ ರೂಮಿಗೆ ಹೋಗಿ ಬ್ರಶ್‌ ಮಾಡಿ, ಮುಖ ತೊಳೆದು ಬಂದಳು ಕಿಟಕಿಯಲ್ಲಿ ನೋಡುತ್ತಾ ಕುಳಿತಳು.

`ನನ್ನ ನಾದಿನಿ. ನನ್ನ ಹೆಂಡತಿಯ ಡೆಲಿವರಿ ಟೈಮ್ ನಲ್ಲಿ ಜೊತೆಗಿರಲು ಬಂದಿದ್ದಾಳೆ….” ಎಂದು ಇಂಗ್ಲಿಷ್‌ ನಲ್ಲಿ ದಂಪತಿಗಳಿಗೆ ದೀಪಕ್‌ ಹೇಳುತ್ತಿದ್ದುದು ಕೇಳಿಸಿದರೂ ಸುಮ್ಮನೆ ಕಿಟಕಿಯಲ್ಲಿ ನೋಡುವುದರಲ್ಲಿ ಮಗ್ನಳಾಗಿದ್ದಳು. ಸ್ವಲ್ಪ ಹೊತ್ತಿನ ನಂತರ ಬಂದ ಚಹಾದವನಿಂದ ಅವಳಿಗೂ ತನಗೂ ಚಹಾ ಕೊಂಡು ಅವಳಿಗೂ ಕೊಟ್ಟು ತಾನು ಕುಡಿದ.

“ವೇದಾ, ನೀನು ಹಿಂದಿ ಕಲಿತುಕೊಂಡರೆ ಅಲ್ಲಿ ಎಲ್ಲರೊಂದಿಗೆ ಬೆರೆಯಲು ಅನುಕೂಲವಾಗುತ್ತೆ….!” ಎಂದ ದೀಪಕ್‌.

“ಪರವಾಗಿಲ್ಲ ಭಾವ. ನನಗೂ ಸ್ವಲ್ಪ ಸ್ವಲ್ಪ ಬರುತ್ತೆ ಮ್ಯಾನೇಜ್‌ ಮಾಡಬಹುದು. ಮುಂಬೈನಲ್ಲಿ ನಿಮ್ಮ ಏರಿಯಾ ಯಾವುದು….?”

“ನಾವು ಇರುವುದು ಸಿಟಿಗಿಂತ ಸ್ವಲ್ಪ ದೂರ ಇರುವ ಮೀರಾ ರೋಡ್‌ ನಲ್ಲಿ. ನಿನಗೆ ಅಲ್ಲಿನ ಲೋಕ್‌ ಟ್ರೇನ್‌ ನಲ್ಲಿ ಓಡಾಡುವುದು ಕಷ್ಟ. ನಿನಗೆ ಹತ್ತಲೂ ಆಗದು ಅಷ್ಟು ರಶ್‌ ಇರುತ್ತೆ. ನಾನು ಎಂದಾದರೂ ನಿನ್ನನ್ನೂ ದಾದರ್‌ ಗೆ ಕರೆದುಕೊಂಡು ಹೋಗ್ತೀನಿ. ಶೀಲಾ ತೋರಿಸುತ್ತೀರೋ ನರ್ಸಿಂಗ್‌ ಹೋಮ್ ಹತ್ತಿರಾನೇ ಇದೆ. ನನ್ನ ಫ್ಲಾಟ್‌ ಇರೋದು ನಾಲ್ಕನೇ ಫ್ಲೋರ್‌ ನಲ್ಲಿ ಲಿಫ್ಟ್ ಇದೆ. ಓಡಾಡೋಕ್ಕೆ ರಿಕ್ಷಾ ಸಿಗುತ್ತೆ ಕಾರ್‌ ಕೂಡ ಇದೆ.” ಎಂದೆಲ್ಲಾ ಅಲ್ಲಿನ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ.

ಸೋಲಾಪುರ್‌ ಸ್ಟೇಷನ್‌ ನಲ್ಲಿ ಪೂರಿ ಭಾಜಿ ತಂದು ಕೊಟ್ಟಿದ್ದ. ಎಲ್ಲವನ್ನೂ ನೋಡುತ್ತಾ ಮೊದಲ ಬಾರಿಗೆ ಸುದೀರ್ಘ ಪ್ರಯಾಣದ ಸುಖ ಅನುಭವಿಸಿದ್ದಳು. ಟ್ರೇನ್‌ 7.50ಕ್ಕೆ ದಾದರ್‌ ಸ್ಟೇಷನ್‌ ತಲುಪಿತ್ತು. ಹೆಂಡತಿಗೆ ಫೋನ್‌ ಮಾಡಿ ತಲುಪಿರುವುದಾಗಿ ತಿಳಿಸಿದ. ಟ್ಯಾಕ್ಸಿ ಹಿಡಿದು ಮೀರಾ ರೋಡ್‌ ತಲುಪಿ ಮಧುನ್‌ ಬಿಲ್ಡಿಂಗ್‌ ಮುಂದೆ ಟ್ಯಾಕ್ಸಿ ನಿಂತಾಗ ವೇದಾ ಎಲ್ಲವನ್ನೂ ಬೆರಗಾಗಿ ನೋಡುತ್ತಿದ್ದಳು.

“ವೇದಾ ಇಳಿ……” ಎಂದು ದೀಪಕ್‌ ಕರೆದಾಗಲೇ ಅವಳು ವಾಸ್ತವಕ್ಕೆ ಬಂದಿದ್ದು. ಕೆಳಗಿಳಿದು ಸುತ್ತಮುತ್ತ ನೋಡಿದಳು. ಬಹಳ ಸುಂದರವಾದ ಪರಿಸರ ಅದಾಗಿತ್ತು. ಲಗೇಜ್‌ ಇಳಿಸಿಕೊಂಡು ಟ್ಯಾಕ್ಸಿಯವನಿಗೆ ಹಣ ನೀಡಿ ಅವಳ ಭುಜ ಅಲುಗಿಸಿ, “ವೇದಾ ನಡಿ, ಇನ್ಮೇಲೇ ಇಲ್ಲಿಯೇ ಇರುತ್ತೀಯಲ್ಲ ಎಲ್ಲವನ್ನೂ ನಿಧಾನಕ್ಕೆ ನೋಡುವಿಯಂತೆ….” ಎಂದಾಗಲೇ ಅವಳು ಎಚ್ಚೆತ್ತು ತನ್ನ ಸೂಟ್‌ ಕೇಸ್‌ ಜೊತೆ ಅವನ ಹಿಂದೆ ನಡೆದಳು.

“ಸಾಂ ಸಾಬ್‌….” ಎಂದ ವಾಚ್‌ ಮನ್‌ ಗೆ ಕೈ ಆಡಿಸುತ್ತಾ, “ರಾಮ್ ಸಿಂಗ್‌ ಹೇಗಿದ್ದೀಯಾ?” ಎಂದು ದೀಪಕ್‌ ಹಿಂದಿಯಲ್ಲಿ ಕೇಳಿದ.

“ಚೆನ್ನಾಗಿದ್ದೀನಿ. ನಿಮ್ಮ ಲಗೇಜ್‌ ಈ ಕಡೆ ಕೊಡಿ,” ಎಂದು ವಾಚ್‌ ಮನ್‌ ಹಿಂದಿಯಲ್ಲಿ ಉತ್ತರಿಸುತ್ತಾ, ದೀಪಕ್‌, ವೇದಾಳ ಕೈಯಿಂದ ಸೂಟ್‌ ಕೇಸ್‌ ತೆಗೆದುಕೊಂಡು ಮುಂದೆ ನಡೆದ.

ಸ್ವಲ್ಪ ದೂರ ನಡೆದು ಲಿಫ್ಟ್ ಬಳಿ ಬಂದು ಲಗೇಜ್‌ ಇರಿಸಿಹೋದ. ಲಿಫ್ಟ್ ಮೂಲಕ ಮೇಲೆ ಬಂದು ಅಲ್ಲಿದ್ದ ನಾಲ್ಕು ಮನೆಗಳಲ್ಲಿ `ದೀಪಕ್‌ ಭಾರದ್ವಾಜ್‌’ ಎಂದು ನಾಮಫಲಕವಿದ್ದ ಮನೆಯ ಕಾಲಿಂಗ್‌ ಬೆಲ್  ‌ಒತ್ತಿದ.ಬಾಗಿಲು ತೆರೆದ ಶೀಲಾ, “ದೀಪಕ್‌, ಐ ಮಿಸ್‌ ಯೂ ಲಾಟ್‌,” ಎಂದವನನ್ನು ತಬ್ಬಿಕೊಂಡಳು. ಅವಳನ್ನು ತಾನೂ ತಬ್ಬಿಕೊಂಡು ಸೋಫಾದ ಮೇಲೆ ಕೂರಿಸುತ್ತಾ, “ಹೇಗಿದ್ದಾನೆ ನಮ್ಮ ರಾಜಕುಮಾರ….?” ಎಂದು ಹೆಂಡತಿಯ ಹೊಟ್ಟೆಯ ಮೇಲೆ ಕೈ ಆಡಿಸಿದ.

ಕೆಲವು ಕ್ಷಣ ಇಬ್ಬರೂ ಅಲ್ಲಿದ್ದ ವೇದಾಳನ್ನೇ ಮರೆತಂತಿತ್ತು. ಇದರಿಂದ ಸಹಜವಾಗಿ ವೇದಾಳಿಗೆ ಕೋಪ ಬಂದಿದ್ದರೂ ತೋರಿಸಿಕೊಳ್ಳದೆ, “ಅಕ್ಕಾ, ನಾನು ಇದೀನಿ,” ಎಂದಳು.

“ಓಹ್‌…. ವೇದಾ ಸಾರಿ ಕಣೇ. ಹೇಗಿದ್ದೀಯಾ….?” ಎಂದು ಅವಳನ್ನು ಅಡಿಯಿಂದ ಮುಡಿಯವರೆಗೂ ನೋಡಿ, “ವಾವ್‌…. ಈಗ ತುಂಬಾ ಚೆನ್ನಾಗಿ ಕಾಣ್ತೀದ್ದೀಯಾ. ಅಪ್ಪ ಹೇಗಿದ್ದಾರೆ? ಮೇಧಾ ಹೇಗಿದ್ದಾಳೆ…..?” ಎಂದು ವಿಚಾರಿಸಿದಳು.

“ಬಾ, ಇಲ್ಲಿ ನಿನ್ನ ರೂಮ್ ತೋರಿಸ್ತೀನಿ….” ಎಂದು ಪಕ್ಕದ ಚಿಕ್ಕ ರೂಮಿಗೆ ಕರೆದುಕೊಂಡು ಹೋದಳು.

“ಅಕ್ಕಾ, ನೀನು ಹೇಗಿದ್ದೀಯಾ….?” ಎಂದು ಕೇಳಿದಳು.

“ನಾನು ಚೆನ್ನಾಗಿದ್ದೀನಿ ಕಣೆ….. ಬಾ ಚಹಾ ಕುಡಿದು, ಸ್ನಾನ ಮಾಡುವಿಯಂತೆ,” ಎನ್ನುತ್ತಾ ಅಡುಗೆ ಮನೆಗೆ ಹೋದಳು.

ತನಗೆ ಕೊಟ್ಟ ರೂಮ್ ಪುಟ್ಟದಾಗಿದ್ದರೂ ಅದಕ್ಕೇ ಸೇರಿದಂತೆ ಒಂದು ವಾಷ್‌ ರೂಮ್ ಇತ್ತು. ಕಿಟಕಿಯಲ್ಲಿ ನೋಡಿದರೆ ಸುತ್ತಲೂ ಸುಂದರವಾದ ಬಿಲ್ಡಿಂಗ್‌ ಗಳ ನಡುವೆ ಉದ್ಯಾನನವಿತ್ತು. ಬಾತ್‌ ರೂಮ್ ಸಹ ಚಿಕ್ಕದೇ ಆದರೂ ಸುಸಜ್ಜಿತವಾಗಿತ್ತು. ಅದೊಂದು ಮೂರು ರೂಮಿನ ಸುಸಜ್ಜಿತ ಫ್ಲಾಟ್‌ ಆಗಿತ್ತು. ಶೀಲಾ ಚಹಾ ಕಪ್‌ ನ್ನು ವೇದಾಳಿಗೆ ಕೊಡುತ್ತಾ, “ಪ್ರಯಾಣ ಸುಖಕರವಾಗಿತ್ತಾ? ನೀನು ಓದು ಬಿಟ್ಟು ಬರಬಾರದಿತ್ತು. ಇಲ್ಲಿ ಹೇಗೋ ನಡೆಯುತ್ತಿತ್ತು,” ಎಂದಳು.

ಶೀಲಾಗೆ ತಾನು ಇಲ್ಲಿಗೆ ಬಂದದ್ದು ಇಷ್ಟವಾಗಲಿಲ್ಲ ಎನಿಸಿತು ವೇದಾಳಿಗೆ.

“ಹ್ಞಾಂ…. ನನಗೂ ಬರುವ ಮನಸ್ಸಿರಲಿಲ್ಲ. ಆದರೆ ಭಾವ ಕೇಳಿದ್ದರಿಂದ ಬರಬೇಕಾಯಿತು.” ಎಂದಳು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ