ಜಗನ್ನಾಥ ರಾಯರು ಮತ್ತು ವಿಮಲಮ್ಮನಿಗೆ ನಾಲ್ವರು ಹೆಣ್ಣುಮಕ್ಕಳು ಲೀಲಾ, ಶೀಲಾ, ವೇದಾ, ಮೇಧಾ. ಮಧ್ಯಮ ವರ್ಗದ ಈ ಕುಟುಂಬಕ್ಕೆ ಹೆಣ್ಣುಮಕ್ಕಳ ಮದುವೆ ನಿಜಕ್ಕೂ ಒಂದು ಸವಾಲಾಗಿತ್ತು. ಹಿರಿ ಮಗಳು ಲೀಲಾಳ ಮದುವೆ ದೂರದ ಊರಿನ ವರನೊಂದಿಗೆ ಗೊತ್ತಾಯಿತು. ಅದೇ ಮದುವೆಯಲ್ಲಿ ಮುಂಬೈ ಹುಡುಗ ದೀಪಕ್ ಎರಡನೇ ಮಗಳಾದ ಶೀಲಾಳನ್ನು ಮೆಚ್ಚಿ ಮದುವೆ ಆಗ ಬಯಸಿದ. ಅವರಿಬ್ಬರ ಮದುವೆಯೂ ಸುಸೂತ್ರವಾಗಿ ನಡೆಯಿತು. ಆಕಸ್ಮಿಕವಾಗಿ ವಿಮಲಮ್ಮ ತೀರಿಕೊಂಡಾಗ, ಅನಿವಾರ್ಯವಾಗಿ ಮೂರನೇ ಮಗಳು ವೇದಾಳನ್ನು ಶೀಲಾಳ ಬಾಣಂತಕ್ಕೆ ಮುಂಬೈಗೆ ಕಳುಹಿಸಬೇಕಾಗಿ ಬಂತು. ಮುಂದೆ ನಡೆದದ್ದೇನು……?
ಮುಂದೆ ಓದಿ…..
ಅತೀ ಚಂಚಲ ಸ್ವಭಾವದ ವೇದಾ, ಮೊದಲಿನಿಂದಲೂ ಮುಂಬೈನ ಗ್ಲಾಮರಸ್ ಜೀವನ ಬಯಸಿ, ಅಕ್ಕನ ಬಾಣಂತನಕ್ಕೆಂದು ಬಂದ ನೆಪದಲ್ಲಿ ಕಿರಿ ಭಾವ ದೀಪಕ್ ನನ್ನು ತನ್ನ ಕೈವಶ ಮಾಡಿಕೊಂಡಳು. ಈ ವಿಷಯ ಆಕಸ್ಮಿಕವಾಗಿ ಶೀಲಾಳಿಗೆ ತಿಳಿಯಿತು. ತನ್ನ ಸಂಸಾರ ಉಳಿಸಿಕೊಳ್ಳಲೆಂದು ಊರಿನಲ್ಲಿದ್ದ ತಂದೆಯನ್ನು ಮುಂಬೈಗೆ ಕರೆಸಿಕೊಂಡಳು. ನಂತರ ನಡೆದದ್ದು ಏನು…..?
“ಸರಿ ಹೋಗಿ ಸ್ನಾನ ಮಾಡಿ ಬಾ ವೇದಾ,” ಎಂದ ಶೀಲಾಳನ್ನೇ ನೋಡಿದಳು. ಎಂಟು ತಿಂಗಳ ಬಸುರಿ. ಧರಿಸಿದ ಕಾಟನ್ ಚೂಡಿಧಾರ್ ನಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಅವಳ ಕಟ್ ಮಾಡಿದ್ದ ಕೂದಲು, ಕತ್ತಿನಲ್ಲಿದ್ದ ಸಣ್ಣ ಮಂಗಳಸೂತ್ರ ಅವಳಿಗೆ ವಿಶೇಷ ಕಳೆ ಕೊಟ್ಟಿತ್ತು. ದೀಪಕ್ ನನ್ನು ತನ್ನೆಡೆಗೆ ಸೆಳೆಯುವುದು ಅಷ್ಟು ಸುಲಭವಲ್ಲ ಎನಿಸಿತು. ಸ್ನಾನ ಮಾಡಿ ಬಂದವಳು ಟ್ರಾಕ್ ಪ್ಯಾಂಟ್, ಸ್ಲೀವ್ ಲೆಸ್ ಶರ್ಟ್ ಧರಿಸಿ ಬಂದವಳನ್ನು ಒಮ್ಮೆ ನೋಡಿದ ಶೀಲಾ, `ಪರವಾಗಿಲ್ಲ ವೇದಾ ಬಹಳ ಬದಲಾಗಿದ್ದಾಳೆ. ಅಮ್ಮ ಇದ್ದಾಗಿನ ವೇದಾಳಿಗೂ ಇವಳಿಗೂ ಬಹಳ ವ್ಯತ್ಯಾಸವಿದೆ,’ ಎಂದುಕೊಂಡಳು.
ಅಕ್ಕನ ಅಭಿರುಚಿ ವೇದಾಗೆ ಬಹಳ ಇಷ್ಟವಾಗಿತ್ತು. ಮನೆಯನ್ನು ಬಹಳ ಚೆನ್ನಾಗಿ ಅಲಂಕರಿಸಿದ್ದಳು. ಅಡುಗೆ ಮನೆಯಂತೂ ಬಹಳವೇ ನೀಟಾಗಿತ್ತು. ಅಷ್ಟರಲ್ಲಿ ದೀಪಕ್ ಫ್ರೆಶ್ ಆಗಿ ಬಂದ. ತೊಟ್ಟಿದ್ದ ಬರ್ಮುಡಾ ಮೇಲೆ ಬನಿಯನ್ ಧರಿಸಿದ್ದು ಬಹಳ ಫ್ರೆಶ್ ಆಗಿ ಕಾಣುತ್ತಿದ್ದ.
ಡೈನಿಂಗ್ ಟೇಬಲ್ ಮೇಲೆ ಎಲ್ಲಾ ಪದಾರ್ಥಗಳನ್ನು ಪಿಂಗಾಣಿ ಪಾತ್ರೆಗಳಲ್ಲಿ ನೀಟಾಗಿ ಜೋಡಿಸಿ, ಮೂರು ಪ್ಲೇಟ್ ಗಳನ್ನು ಬೋರಲು ಹಾಕಿದ್ದಳು. ಭಾವ ಕುರ್ಚಿಯಲ್ಲಿ ಕುಳಿತು ಪ್ಲೇಟ್ ತಿರುಗಿಸಿಕೊಂಡಾಗ, ತಾನೂ ಹಾಗೆ ಮಾಡಿದಳು ವೇದಾ. ತಾನು ಕುರ್ಚಿಯಲ್ಲಿ ಕುಳಿತ ಶೀಲಾ, “ನಿನಗೇನು ಬೇಕೋ ಬಡಿಸಿಕೊ ವೇದಾ,” ಎನ್ನುತ್ತಾ ದೀಪಕ್ ತಟ್ಟೆಗೆ ಚಪಾತಿ, ಪಲ್ಯ ಬಡಿಸಿ ತನ್ನ ತಟ್ಟೆಗೆ ಎರಡು ಚಪಾತಿ, ಪಲ್ಯ, ದಾಲ್ ಬಡಿಸಿಕೊಂಡಳು ಶೀಲಾ. ವೇದಾ ತಾನೂ ತನ್ನ ತಟ್ಟೆಗೆ ಚಪಾತಿ, ಪಲ್ಯ ಬಡಿಸಿಕೊಂಡಳು.
“ಸಲಾಡ್ ತಗೋಳೇ….” ಎನ್ನುತ್ತಾ ಶೀಲಾ ನೀಟಾಗಿ ಹೆಚ್ಚಿದ್ದ ಸೌತೇಕಾಯಿ, ಕ್ಯಾರೆಟ್ ಬಡಿಸಿದಳು. ಶೀಲಾ ಹಾಗೂ ದೀಪಕ್ ಮಾತನಾಡುತ್ತಾ ಊಟ ಮಾಡುವಾಗ ವೇದಾ ಬರೇ ಪ್ರೇಕ್ಷಕಳಾಗಿದ್ದಳು.
ಊಟ ಮುಗಿಸಿ ಗಂಡ ಹೆಂಡತಿ ಸೇರಿಯೇ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದರು. ವೇದಾಳಿಗೆ ಏನು ಮಾಡಬೇಕು ಎಂದು ತಿಳಿಯದಾಗಿತ್ತು.
“ವೇದಾ, ನೀನು ಹೋಗಿ ಮಲಗು. ನಾವು ವಾಕಿಂಗ್ ಹೋಗಿ ಬರುತ್ತೇವೆ. ನಾವು ಲಾಕ್ ಮಾಡಿಕೊಂಡು ಹೋಗುತ್ತೇವೆ,” ಎಂದು ಅವಳ ಉತ್ತರಕ್ಕೂ ಕಾಯದೆ ಇಬ್ಬರೂ ಬಾಗಿಲು ಎಳೆದುಕೊಂಡು ಹೋದಾಗ, `ತನ್ನನ್ನೂ ಕರೆಯಬಹುದಿತ್ತಲ್ಲವೇ?’ ಎನಿಸಿ ವೇದಾಳಿಗೆ ಬೇಸರವಾಯಿತು. ಜೊತೆಗೆ ದೀಪಕ್ ಮೇಲೆ ಸಿಟ್ಟು ಬಂದಿತು. `ದೀಪಕ್ ಅಂತೂ ಶೀಲಾಳ ಮುಂದೆ ಬಾಯಿಯೇ ಕಳೆದುಕೊಂಡ ಹಾಗಿದ್ದಾರೆ. ಇರಲಿ ನನಗೂ ಒಂದು ಕಾಲ ಬರುತ್ತದೆ,’ ಎನ್ನುತ್ತಾ ಮನೆಯನ್ನು ಒಂದು ಸುತ್ತು ನೋಡಿದಳು.
ದೀಪಕ್ ಶೀಲಾರ ಬೆಡ್ ರೂಮ್ ಅಂತೂ ಬಹಳ ಸುಂದರವಾಗಿತ್ತು. ಬಾಲ್ಕನಿಯಲ್ಲಿನ ಪುಟ್ಟ ಸಿಟ್ಟಿಂಗ್, ದೊಡ್ಡ ದೊಡ್ಡ ವಾರ್ಡ್ ರೋಬ್ ಗಳು ತೆರೆಯಲು ಆಗಲಿಲ್ಲ. ನಿಲುವುಗನ್ನಡಿಯ ಮುಂದೆ ಇರಿಸಿದ್ದ ಬೆಲೆ ಬಾಳುವ ಕಾಸ್ಮೆಟಿಕ್ಸ್, ಸ್ಟೂಲ್ ಮೇಲಿರಿಸಿದ್ದ ರಾಧೆಯನ್ನು ತಬ್ಬಿಕೊಂಡು ನಿಂತಿರುವ ಕೃಷ್ಣ, ಗೋಡೆಯನ್ನು ಅಲಂಕರಿಸಿದ್ದ ಅವರಿಬ್ಬರ ಚೆಂದದ ಫೋಟೋಗಳು, ಹೂದಾನಿಯಲ್ಲಿ ಆಗತಾನೇ ಅರಳುತ್ತಿದ್ದ ಸುಗಂಧರಾಜ ಹೂವಿನ ಗೊಂಚಲು ಫ್ರೆಶ್ ಆಗಿ ಕಂಡಿತ್ತು. `ಅಕ್ಕಾ ಬಹಳ ರಸಿಕಳು, ಅದಕ್ಕೆ ಭಾವ ಅವಳನ್ನು ಓಲೈಸುವುದು. ಅದಕ್ಕೇ ಇರಬೇಕು ಅವಳು ಒಮ್ಮೆಯೂ ತವರಿಗೆ ಬರಲು ಇಷ್ಟ ಪಡುತ್ತಿರಲಿಲ್ಲ. ಭಾವನಿಗೆ ಒಳ್ಳೆಯ ಸಂಬಳ, ಪೊಸಿಷನ್ ಎಲ್ಲವೂ ಇದೆ. ಜೊತೆಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅವಳದ್ದೇ ರಾಜ್ಯ… ಇಂತಹ ಅದೃಷ್ಟವಿದ್ದಾಗ ಯಾರಿಗೆ ತಾನೇ ತವರಿನವರನ್ನು ನೋಡಬೇಕೆನ್ನುವ ಆಸೆ ಇರುತ್ತೆ,’ ಎನಿಸಿ ನಿಡಿದಾದ ನಿಟ್ಟುಸಿರು ಬಿಟ್ಟು ಪಕ್ಕದ ಕೋಣೆಗೆ ಬಂದಳು. ಇದು ಮಕ್ಕಳಿಗಾಗಿ ಇರಬೇಕು ಎಂದುಕೊಂಡಳು.
ನೇರ ತನ್ನ ಕೋಣೆಗೆ ಬಂದಳು ಮನದಲ್ಲಿಯೇ ಒಂದು ನಿರ್ಧಾರ ಮಾಡಿದಳು. `ಹೇಗಾದರೂ ಮಾಡಿ ಭಾವನನ್ನು ನನ್ನಂತೆ ಮಾಡಿಕೊಳ್ಳಬೇಕು. ಶೀಲಾಳಿಗಿಂತ ಸುಂದರ ದೇಹ ಹೊಂದಿರುವ ನನ್ನನ್ನು ಬಿಟ್ಟು ಬಿಳಿ ತೊಗಲಿನವಳಲ್ಲಿ ಏನೂ ಸುಖವಿಲ್ಲ ಎಂಬುದು ಅವರಿಗೆ ಅರಿವಾಗಬೇಕು. ನನಗೆಂದೂ ಗೊತ್ತಾಗಿರುವ ಸೋದರತ್ತೆ ಮಗ ಆ ವಿನೋದ್ ನರಪೇತಲ. ಗವರ್ನಮೆಂಟ್ ಜಾಬ್, ಅವನನ್ನು ಕಟ್ಟಿಕೊಂಡು ಅತ್ತೆಯ ಕೈಕೆಳಗೆ ಯಾರು ಸಾಯ್ತಾರೆ….? ದೀಪಕ್ ಭಾವ ಆದ್ರೆ ಎಂಜಿನಿಯರ್. ಒಳ್ಳೆ ಸಂಬಳ, ನೋಡೋಕ್ಕೆ ಸ್ಮಾರ್ಟ್ ಆಗಿದ್ದಾರೆ. ಈ ವಿಷಯದಲ್ಲಿ ಆತುರಪಡದೆ ನಿಧಾನವಾಗಿ ನನ್ನ ಕೆಲಸ ಸಾಧಿಸಿಕೊಳ್ಳಬೇಕು. ಶೀಲಕ್ಕನಿಗೆ ಸ್ವಲ್ಪ ಸಂಶಯ ಬರಬಾರದು, ಹಾಗೆ ಮಾಡಬೇಕು. ಮೊದಲು ಅಕ್ಕ ಹೇಳಿದಂತೆಯೇ ಕೇಳಿಕೊಂಡು ಇರಬೇಕು. ಬಾಣಂತಿ ಆದಮೇಲೆ ನನ್ನ ವರಸೆ ತೋರಿಸಬೇಕು,’ ಎಂದುಕೊಂಡಾಗ ಮನಸ್ಸಿಗೆ ಸಮಾಧಾನವಾಗಿತ್ತು.
ಮರುದಿನ ಅವಳು ಏಳುವ ಹೊತ್ತಿಗಾಗಲೇ ಗಂಡ ಹೆಂಡರಿಬ್ಬರೂ ಎದ್ದು ಚಹಾ ಕುಡಿಯುತ್ತಾ, ಮಾತನಾಡುತ್ತಾ ಕುಳಿತಿದ್ದರು. ತಾನೂ ಬ್ರಶ್ ಮಾಡಿ ಮುಖ ತೊಳೆದು ಅಲ್ಲಿಗೆ ಬಂದಳು, “ಅಕ್ಕಾ, ತಿಂಡಿಗೆ ಏನು ಮಾಡಲಿ….?” ಎಂದು ಕೇಳಿದಳು.
“ನಾನು ಮಾಡ್ತೀನಿ. ನೀನು ಬೇಡ ವೇದಾ, ಇವತ್ತು ನನ್ನ ಜೊತೆಗೆ ಇದ್ದು ನಾನು ಹೇಗೆ ಮಾಡ್ತೀನಿ ಅಂತ ನೋಡ್ಕೋ. ನಾಳೆ ನೀನೇ ಮಾಡ್ತಿಯಂತೆ. ಬಾ ಕುತ್ಕೋ ನಿನಗೂ ಟೀ ತರ್ತೀನಿ,” ಎಂದಳು ಶೀಲಾ.
ಶೀಲಾ ಹೋಗಿ ಬಿಸಿ ಚಹಾ ತಂದು ಕೊಟ್ಟಳು. ಚಹಾ ಬಹಳ ಚೆನ್ನಾಗಿತ್ತು, “ಅಕ್ಕಾ, ಟೀ ತುಂಬಾ ಚೆನ್ನಾಗಿದೆ,” ಎಂದಳು.
“ನಿನಗೆ ಕಾಫಿ ಬೇಕು ಅನಿಸುತ್ತೆ ಅಲ್ವಾ….? ದೀಪಕ್, ನಾಳೆ ಕಾಫಿ ಪೌಡರ್ ತರ್ತಾರೆ. ನಾಳೆ ನೀನೇ ಕಾಫಿ ಬೆರೆಸಿ ಕೊಡುವೆಯಂತೆ. ನೀನು ಸ್ನಾನ ಮಾಡಿ ಬಾ, ನಾನು ಬ್ರೇಕ್ ಫಾಸ್ಟ್ ರೆಡಿ ಮಾಡ್ತೀನಿ,” ಎಂದು ಒಳಗೆ ಹೋದಳು ಶೀಲಾ.
ಪೇಪರ್ ಓದುತ್ತಿದ್ದ ದೀಪಕ್, “ವೇದಾ ಚೆನ್ನಾಗಿ ನಿದ್ದೆ ಬಂತಾ….?” ಎಂದು ಕೇಳಿದ.
“ಹ್ಞೂಂ ಭಾವ…. ನನಗೆ ಎಲ್ಲಿದ್ರೂ ನಿದ್ದೆ ಬರುತ್ತೆ,” ಎಂದಳು.
“ಇವತ್ತು ಅಕ್ಕನ ಜೊತೆ ಹೋಗಿ ನಮ್ಮ ಬಿಲ್ಡಿಂಗ್ ಎಲ್ಲಾ ನೋಡ್ಕೊಂದು ಬಾ….”
“ಸರಿ ಭಾವ….” ಎನ್ನುತ್ತಾ ಎದ್ದು ಹೋದಳು.
ದೀಪಕ್ ಹೆಂಡತಿಗೆ ಏನು ಹೇಳಿದ್ದನೋ ಏನೋ ಶೀಲಾಳಲ್ಲಿ ಕೊಂಚ ಬದಲಾವಣೆ ಆಗಿತ್ತು. ಅಡುಗೆಮನೆಗೆ ಹೋಗಿ ಅವಳು ಬೇಡವೆಂದರೂ ಕೇಳದೆ ಅವಳಿಗೆ ತರಕಾರಿ ಹೆಚ್ಚಿ ಕೊಟ್ಟು, ಸಹಾಯ ಮಾಡಿ, ನಂತರ ಸ್ನಾನ ಮುಗಿಸಿಕೊಂಡು ಹೊರಗೆ ಬಾರದೆ ಒಳಗೇ ಇದ್ದಳು.
ದೀಪಕ್ ಆಫೀಸ್ ಗೆ ಹೋದ ಮೇಲೆ ಶೀಲಾ ಅವಳನ್ನು, “ವೇದಾ, ಏನ್ಮಾಡ್ತಿದ್ದೀಯಾ ಬಾ. ನಾವು ತಿಂಡಿ ತಿನ್ನೋಣ. ನಿಮ್ಮ ಭಾವ ಆಫೀಸ್ ಗೆ ಹೋಗಿ ಆಯ್ತು,” ಎಂದಾಗ ಹೊರಗೆ ಬಂದ ವೇದಾಳನ್ನು ನೋಡಿ ಶೀಲಾಗೆ ಸಮಾಧಾನವಾಗಿತ್ತು.
ವೇದಾ ಮುಂಬೈಗೆ ಬಂದು ಆಗಲೇ ಒಂದು ವಾರ ಕಳೆದಿತ್ತು. ಶೀಲಾ ಅವಳಿಗೆ ಹತ್ತಿರದಲ್ಲಿದ್ದ ದೇವಸ್ಥಾನಕ್ಕೆ ಕರೆದುಕೊಂಡು ಹೋದಳು. ಹಾಗೆಯೇ ಮಾರ್ಕೆಟ್ ಪ್ಲೇಸ್ ಎಲ್ಲವನ್ನೂ ತೋರಿಸಿಕೊಂಡು ಬಂದಳು. ದೀಪಕ್ ಭಾನುವಾರ ಇಬ್ಬರನ್ನೂ ಸಿದ್ಧಿ ವಿನಾಯಕ ದೇವಸ್ಥಾನ, ಮಹಾಲಕ್ಷ್ಮಿ ದೇವಸ್ಧಾನ, ಜುಹು ಬೀಚ್ ಎಲ್ಲವನ್ನೂ ತೋರಿಸಿಕೊಂಡು ಬಂದ. ವೇದಾ ಸಹ ಅವರಿಬ್ಬರ ನಡುವೆ ಹೆಚ್ಚಾಗಿ ಬೆರೆಯದೇ ಇರುತ್ತಿದ್ದುದು ಶೀಲಾಗೆ ಸಮಾಧಾನ ತಂದಿತ್ತು.
`ಲೀಲಕ್ಕಾ ಹೇಳಿದಂಥ ಸ್ವಭಾವ ವೇದಾಳಲ್ಲಿ ಇಲ್ಲ. ಪಾಪ ತನಗಾಗಿ ಓದುವುದನ್ನು ಬಿಟ್ಟು ಬಂದಿದ್ದಾಳೆ. ಜೊತೆಗೆ ಎಲ್ಲಾ ಕೆಲಸವನ್ನೂ ಚೆನ್ನಾಗಿ ಮಾಡುತ್ತಾಳೆ. ತನ್ನ ಬಗ್ಗೆ ವಿಪರೀತ ಕಾಳಜಿ ತೋರಿಸುತ್ತಾಳೆ. ಇದಕ್ಕಿಂತ ಇನ್ನೇನು ಬೇಕು? ನಾಲ್ಕು ತಿಂಗಳು ಕಳೆದರೆ ಊರಿಗೆ ಹೋಗಿಬಿಡುತ್ತಾಳೆ. ಅವಳು ಇಲ್ಲಿ ಇರುವವರೆಗೂ ಚೆನ್ನಾಗಿ ನೋಡಿಕೊಂಡು, ಅವಳು ಹೋಗುವಾಗ ಒಂದೆರಡು ಡ್ರೆಸ್, ಹಾಗೂ ತನ್ನದೇ ಒಂದೆರಡು ಪಾರ್ಟಿವೇರ್ ಸೀರೆಗಳನ್ನು ಕೊಟ್ಟರಾಯಿತು,’ ಎಂದುಕೊಂಡಳು.
ವೇದಾ ಬೆಳಗ್ಗೆ ಬೇಗ ಎದ್ದು ತಾನೇ ಚಹಾ ಮಾಡಿ ದಂಪತಿಗಳಿಗೆ ಕೊಡುತ್ತಿದ್ದಳು. ಬೆಳಗ್ಗೆ ತಿಂಡಿ, ಮಧ್ಯಾಹ್ನದ ಅಡುಗೆ, ಸಂಜೆ ತಿಂಡಿ ಎಲ್ಲವನ್ನೂ ತನಗೆ ತಿಳಿದ ಹಾಗೆ ಮಾಡಿಕೊಡುತ್ತಿದ್ದಳು. ತಾನೇ ಅಕ್ಕನೊಂದಿಗೆ ಹೊರಗೆ ಹೋಗಿ ಅವಳಿಗೆ ಇಷ್ಟವಾದ ಸೀರೆ ಕೊಡಿಸಿ ಕರೆತಂದು. ಸಿಹಿ ಅಡುಗೆ ಮಾಡಿ, ದಂಪತಿಗಳನ್ನು ಕೂರಿಸಿ ಊಟ ಬಡಿಸಿದಳು. ಇಬ್ಬರಿಗೂ ಬಹಳ ಸಂತೋಷವಾಯಿತು.
ಶೀಲಾಳಿಗೆ ದಿನ ತುಂಬಿ ಅವಳಿಗೆ ಹೆರಿಗೆ ನೋವು ಬಂದಾಗ ತಾನೇ ಜೀರಿಗೆ ಕಷಾಯ ಮಾಡಿಕೊಟ್ಟಳು. ನೋವು ಮತ್ತಷ್ಟು ಹೆಚ್ಚಾದಾಗ ಭಾವನಿಗೆ ಫೋನ್ ಮಾಡಿ, ಅವಳನ್ನು ಭಕ್ತಿ ವೇದಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅವಳನ್ನು ಪರೀಕ್ಷಿಸುತ್ತಿದ್ದ ಡಾ.ಯೋಗಿನಿಗೆ ಮೊದಲೇ ಫೋನ್ ಮಾಡಿದ್ದರಿಂದ ಅವರೂ ಬಂದಿದ್ದರು. ಅವಳನ್ನು ಕೂಡಲೇ ಆಪರೇಷ್ ಥಿಯೇಟರ್ ಗೆ ಕರೆದುಕೊಂಡು ಹೋದರು. ಅವಳಿಗೆ ಸಿಸೇರಿಯನ್ ಮಾಡಬೇಕಾಗಿ ಬಂದಿತು.
ಅಷ್ಟರಲ್ಲಿ ದೀಪಕ್ ಬಂದಿದ್ದ. ಅವನನ್ನು ನೋಡಿದವಳೇ, “ಭಾವ….” ಎಂದು ತಬ್ಬಿಕೊಂಡು ಅತ್ತೇಬಿಟ್ಟಳು. ಅವಳ ಬೆನ್ನು ಸವರುತ್ತಾ, “ಸಿಸೇರಿಯನ್ ಎಂದಾಕ್ಷಣ ಜೀವಕ್ಕೇನೂ ಭಯವಿಲ್ಲ. ನಾನು ಇಲ್ಲದಿದ್ದರೂ ಇಷ್ಟೆಲ್ಲಾ ನಿಭಾಯಿಸಿದ್ದಿ. ಇನ್ನೇಕೆ ಭಯ, ಹುಚ್ಚು ಹುಡುಗಿ,” ಎಂದು ಸಮಾಧಾನಪಡಿಸಿ ಅವಳ ಮುಗ್ಧತೆಯನ್ನು ಕಂಡು ಪ್ರೀತಿಯಿಂದ ತಬ್ಬಿಕೊಂಡಿದ್ದ. ವೇದಾಳಿಗೆ ಒಳಗೊಳಗೇ ನಗು ಬಂದಿತ್ತು. `ಇದೇ ಅವಕಾಶಕ್ಕೆ ನಾನು ಕಾಯುತ್ತಿದ್ದೆ ಭಾವ, ಇನ್ನು ಮೇಲೆ ನಿಮ್ಮ ಎಲ್ಲಾ ಅಟ್ರಾಕ್ಷನ್ ನನ್ನ ಕಡೆಗೆ,’ ಎಂದು ಮನದಲ್ಲಿಯೇ ಅಂದುಕೊಂಡಳು, ಅವನಿಂದ ದೂರವಾಗಿ, “ಸಾರಿ ಭಾ….” ಎಂದು ಪಕ್ಕದಲ್ಲಿ ನಿಂತಳು.
“ಬಾ, ನೀನೇನೂ ತಿಂದಿಲ್ಲ ಅನಿಸುತ್ತೆ ಚಹಾ ಆದ್ರೂ ಕುಡಿದು ಬರೋಣ,” ಎಂದು ಅವಳ ಕೈ ಹಿಡಿದೇ ಕರೆದುಕೊಂಡು ಹೋದ.
ಅವರು ವಾಪಸ್ ಬಂದಾಗ, ಎದುರಿಗೆ ಬಂದ ನರ್ಸ್, “ಡೆಲಿವರಿ ಆಯಿತು, ಗಂಡು ಮಗು. ಪೇಶಂಟ್ ಗೆ ಇನ್ನೂ ಜ್ಞಾನ ಬಂದಿಲ್ಲ,” ಎಂದು ಹೇಳಿದಳು.
“ವೇದಾ, ಇದೆಲ್ಲಾ ನಿನ್ನಿಂದಲೇ ಆಗಿದ್ದು. ನೀನು ನಮ್ಮ ಮನೆಗೆ ಕಾಲಿಟ್ಟ ಘಳಿಗೆ ಎಷ್ಟು ಚೆನ್ನಾಗಿದೆ ನೋಡು. ಥ್ಯಾಂಕ್ಸ್ ವೇದಾ,” ಎಂದು ದೀಪಕ್ ಅವಳ ಕೈ ಕುಲುಕಿದ್ದ.
“ಭಾವ…. ನನಗೆ ಪಾರ್ಟಿ ಕೊಡಿಸಬೇಕು,”
“ಶೂರ್…. ಖಂಡಿತಾ ಕೊಡಿಸ್ತೇನೆ. ತಾಳು ಮಾವನಿಗೆ ಫೋನ್ ಮಾಡಿ ಬರ್ತೇನೆ,” ಎಂದು ಹೇಳಿ ಮಾವನಿಗೆ ಫೋನ್ ಮಾಡಿದ.
ನರ್ಸ್ ಮಗುನ್ನು ತಂದು ತೋರಿಸಿದಳು. ಆ ಪುಟ್ಟ ಮಗುವನ್ನು ಎತ್ತಿಕೊಂಡ ವೇದಾ ಸಂತೋಷದಿಂದ, “ತಗೋಳಿ ಭಾವ, ನಿಮ್ಮ ಮಗ ಎಲ್ಲಾ ನಿಮ್ಮ ಹಾಗೆಯೇ ಇದ್ದಾನೆ,” ಎನ್ನುತ್ತಾ ಭಾವನ ಕೈಗೆ ಮಗವನ್ನು ಕೊಟ್ಟಳು.
ದೀಪಕ್ ಗಂತೂ ತಾಳಲಾರದ ಸಂತೋಷವಾಗಿತ್ತು. ಮುದ್ದಾದ ಕುಲದೀಪಕನನ್ನು ಹೆತ್ತು ಕೊಟ್ಟ ಹೆಂಡತಿಯನ್ನು ನೋಡುವಾಸೆಯಾಗಿತ್ತು. ತನ್ನೆಲ್ಲಾ ಗೆಳೆಯರಿಗೆ ಫೋನ್ ಮಾಡಿ ವಿಷಯ ತಿಳಿಸಿದ. ಅದಾಗಲೇ ಪರಿಚಯವಾಗಿದ್ದ ಅಕ್ಕನ ಗೆಳತಿಯರಿಗೆಲ್ಲಾ ವೇದಾಳೇ ವಿಷಯ ತಿಳಿಸಿದ್ದಳು. ಶೀಲಾಳನ್ನು ವಾರ್ಡ್ ಗೆ ಶಿಫ್ಟ್ ಮಾಡಿದಾಗ, ಹೆಂಡತಿಯ ಬಳಿ ಕುಳಿತು ಅವಳನ್ನು ಅಪ್ಪಿಕೊಂಡು ಅವಳ ಹಣೆಗೆ ಮುತ್ತಿಟ್ಟು, “ನೋಡು, ನಮ್ಮ ಮಗ ಎಷ್ಟು ಮುದ್ದಾಗಿದ್ದಾನೆ,” ಎಂದು ಖುಷಿಯಿಂದ ಹೇಳಿದ.
ಐದು ದಿನಗಳ ನಂತರ ಶೀಲಾ ಮಗುವಿನೊಂದಿಗೆ ಬಂದಾಗ ವೇದಾ ಆರತಿ ಬೆಳಗಿ ಸ್ವಾಗತಿಸಿದಳು. ಅವಳ ರೂಮ್ ನ್ನು ಚೆನ್ನಾಗಿ ಅಲಂಕರಿಸಿದ್ದಳು. ದೀಪಕ್ ಗಾಗಿ ಮತ್ತೊಂದು ರೂಮ್ ನಲ್ಲಿ ವ್ಯವಸ್ಥೆ ಮಾಡಿದ್ದಳು. ಶೀಲಾಳಿಗೆ ಅವಳು ಮಾಡಿದ್ದ ವ್ಯವಸ್ಥೆ ಕಂಡು ತೃಪ್ತಿಯಾಗಿತ್ತು, ಕೆಲಸದವಳ ಸಹಾಯದಿಂದ ಮಗು, ಬಾಣಂತಿಗೆ ಸ್ನಾನ ಮಾಡಿಸಿ ಊಟ ಕೊಟ್ಟು ಮಲಗಿಸಿದಳು. ವೇದಾ ಎಲ್ಲಾ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತಿದ್ದನ್ನು ನೋಡಿ ಶೀಲಾಗೆ ಬಹಳ ತೃಪ್ತಿಯಾಗಿತ್ತು.
ವೇದಾಳ ಗಮನ ದೀಪಕ್ ನತ್ತ ಹರಿದಿತ್ತು. ಅವನಿಗೆ ಊಟ, ತಿಂಡಿ ಬಡಿಸುವಾಗ ಬೇಕೆಂದೇ ಅವನ ತೀರಾ ಸನಿಹಕ್ಕೆ ಹೋಗುತ್ತಿದ್ದಳು. ಹೆಂಡತಿಯಿಂದ ದೂರವೇ ಇದ್ದವನಿಗೆ ಕಲ್ಲಿನಲ್ಲಿ ಕಡೆದಿಟ್ಟಂತಹ ಅವಳ ರೂಪ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಆಕರ್ಷಿಸತೊಡಗಿತ್ತು. ಅವನು ಅವಳಿಗಾಗಿ ಏನಾದರೊಂದು ಗಿಫ್ಟ್ ತರತೊಡಗಿದ. ಕ್ರಮೇಣ ವೇದಾ ಅವನನ್ನು ತನ್ನೆಡೆಗೆ ಸೆಳೆಯುವುದರಲ್ಲಿ ಯಶಸ್ವಿಯಾಗಿಬಿಟ್ಟಳು.
ಶೀಲಾಗೆ ಇದರ ಬಗ್ಗೆ ಕೊಂಚ ಸುಳಿವೂ ಸಿಗದಂತೆ ಇಬ್ಬರೂ ಎಚ್ಚರಿಕೆ ವಹಿಸಿದ್ದರು. ದೀಪಕ್ ಗೆ ಅವಳ ಸಾಂಗತ್ಯ ಹುಚ್ಚು ಹಿಡಿಸುತ್ತಿತ್ತು. ದಿನ ಕ್ರಮೇಣ ಅವನು ಅವಳನ್ನು ಬಿಟ್ಟಿರಲು ಆಗದಂತಾಗಿದ್ದ. ವೇದಾ, ಶೀಲಾಳ ಆರೈಕೆಯನ್ನು ಚೆನ್ನಾಗಿ ಮಾಡುತ್ತಾ, ಮಗುವಿನ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಳು. ದೀಪಕ್ ಸಹ ಹೆಂಡತಿಗೆ ತಮ್ಮಿಬ್ಬರ ವ್ಯವಹಾರದ ಬಗ್ಗೆ ಅರಿವಾಗದಂತೆ ನೋಡಿಕೊಳ್ಳುತ್ತಿದ್ದ. ಮಗುವಿಗೆ ಮೂರು ತಿಂಗಳು ತುಂಬಿತ್ತು. ಈಗ ಶೀಲಾ ಎದ್ದು ಓಡಾಡುತ್ತಾ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳತೊಡಗಿದಳು. ವೇದಾ ಬೇಡ ಎಂದು ಅಡ್ಡಿ ಮಾಡಿದಾಗ, “ಬೇಡ ವೇದಾ, ನೀನು ಎಷ್ಟು ಅಂತ ಮಾಡ್ತೀಯಾ….? ಮೂರು ತಿಂಗಳು ನನ್ನನ್ನು ಅಲುಗಾಡಲೂ ಬಿಡದಂತೆ ನೋಡಿಕೊಂಡಿದ್ದೀಯಾ…. ಇನ್ನು ನಾನು ನನ್ನ ಮಗುವಿನ ಕೆಲಸವನ್ನಾದರೂ ಮಾಡಿಕೊಳ್ಳಲು ಬಿಡು,” ಎಂದಾಗ ವೇದಾ ಸುಮ್ಮನಾದಳು.
ಶೀಲಾಗೆ ಈಗ ಗಂಡನ ಹತ್ತಿರವೇ ಮಲಗುವ ಆಸೆಯಾಗುತ್ತಿತ್ತು. ಅವಳು, “ದೀಪಕ್, ನೀವು ಏಕೆ ಇಲ್ಲಿಯೇ ಮಲಗಬಾರದು….?” ಎಂದಳು.
“ಬೇಡ ಚಿನ್ನಾ, ನಿನಗೆ ಸಿಸೇರಿಯನ್ ಆಗಿದೆ. ಇನ್ನೂ ಸ್ವಲ್ಪ ದಿನ ಕಳೆಯಲಿ. ನಾವಿಬ್ಬರು ಜೀವನ ಪೂರ್ತಿಯಾಗಿ ಜೊತೆಗೆ ಇರುವುದು, ಮಲಗೋದು ಇದ್ದೇ ಇದೆ. ಮಧ್ಯೆ ಮಗು ಎದ್ದು ಅತ್ತರೆ ನನಗೆ ಇರಿಸುಮುರಿಸಾಗುತ್ತೆ. ವೇದಾ ಹೋಗಲಿ, ಆಮೇಲೆ ನಮ್ಮ ಜೀವನ ಹೊಸದಾಗಿ ಶುರು ಮಾಡೋಣ,” ಎಂದಾಗ ಬೇರೆ ದಾರಿ ಕಾಣದೆ ಸುಮ್ಮನಾಗಿದ್ದಳು.
ಈಗ ಶೀಲಾಗೆ ವೇದಾಳ ಇರುವಿಕೆ ಇಷ್ಟವಾಗುತ್ತಿರಲಿಲ್ಲ. ಆದರೂ ಮಗುವಿನ ನಾಮಕರಣದ ನಂತರ ಕಳುಹಿಸಿ ಬಿಡೋಣ ಎಂದುಕೊಂಡಳು. ಲೀಲಾ ಆಗಾಗ ಫೋನ್ ಮಾಡಿ, “ಇನ್ನೆಷ್ಟು ದಿನ ಅಂತ ಅವಳನ್ನು ಅಲ್ಲಿಯೇ ಇಟ್ಟುಕೊಳ್ತೀಯಾ…. ಕಳುಹಿಸಿ ಬಿಡು. ಇಲ್ಲವಾದರೆ ನಿನಗೆ ಕಷ್ಟ ಆಗೋದು….” ಎಂದು ಎಚ್ಚರಿಸಿದಳು.
`ಅಕ್ಕ ಹೀಗೇಕೆ ಹೇಳುತ್ತಾಳೆ, ವೇದಾಳಿಂದ ಅವಳಿಗೇನಾದರೂ ತೊಂದರೆ ಆಗಿರಬಹುದೇ….?’ ಎಂದೆಲ್ಲಾ ಯೋಚಿಸಿದರೂ ವೇದಾಳ ನಡವಳಿಕೆಯಲ್ಲಿ ಯಾವ ವ್ಯತ್ಯಾಸ ಕಾಣಲಿಲ್ಲ. ದೀಪಕ್ ಬಂದಾಗ ಅವಳು ತನ್ನ ರೂಮಿನಲ್ಲಿಯೋ, ಇಲ್ಲವೇ ಮಗುನ್ನೆತ್ತಿಕೊಂಡು ಬಾಲ್ಕನಿಯಲ್ಲೋ ಇರುತ್ತಿದ್ದಳು. ಇತ್ತೀಚೆಗೆ ಶೀಲಾಳೇ ಗಂಡ ಆಫೀಸ್ ಗೆ ಹೋಗುವಾಗ ಬೆಳಗ್ಗೆ ಬ್ರೇಕ್ ಫಾಸ್ಟ್ ಕೊಟ್ಟು, ಮಧ್ಯಾಹ್ನ ಲಂಚ್ ಬಾಕ್ಸ್ ಕಟ್ಟಿ ಕೊಡುತ್ತಿದ್ದಳು. ಆಗ ದೀಪಕ್ ಆಗಲಿ, ವೇದಾಳಾಗಲಿ ಯಾವ ರಿಯಾಕ್ಷನ್ ತೋರುತ್ತಿರಲಿಲ್ಲ.
ದೀಪಕ್ ಹೆಂಡತಿಯೊಂದಿಗೆ ಮಾತಾಡುತ್ತಾ, ಮಗುವಿನ ಬಗ್ಗೆ ಪ್ರಶ್ನೆ ಕೇಳುತ್ತಾ ತಿಂಡಿ ತಿನ್ನುವಾಗ ಅವಳಿಗೆ ಅನುಮಾನವೇ ಬರುತ್ತಿರಲಿಲ್ಲ. ಇಬ್ಬರಿಗೂ ಶೀಲಾ ನಡುವೆ ಬರುವುದು ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ದೀಪಕ್ ಸಲಹೆಯಂತೆ, ಶೀಲಾಳಿಗೆ ಮಗು ಹುಟ್ಟಿದಾಗಿನಿಂದ ಪ್ರತಿ ರಾತ್ರಿ ಶೀಲಾಳಿಗೆ ಕುಡಿಯಲು ಬಿಸಿ ಹಾರ್ಲಿಕ್ಸ್ ಬೆರಿಸಿ ಕೊಡುವಾಗ ಅದರಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಡುತ್ತಿದ್ದಳು. ಅವಳು ಅದನ್ನು ಕುಡಿದು ಚೆನ್ನಾಗಿ ನಿದ್ದೆ ಮಾಡಿಬಿಡುತ್ತಿದ್ದಳು. ಇವರಿಬ್ಬರ ರಾಸಲೀಲೆ ಅಡ್ಡಿ ಆತಂಕವಿಲ್ಲದೆ ನಡೆಯತೊಡಗಿತು. ಹೀಗೆ ನಾಲ್ಕೈದು ತಿಂಗಳು ಕಳೆಯಿತು.
ಪ್ರತಿದಿನ ಇದೇ ಪದ್ಧತಿ ಬೆಳೆದು ದಿನದಿಂದ ದಿನಕ್ಕೆ ಶೀಲಾಳಿಗೆ ಬೇರೆ ಸಮಯದಲ್ಲಿ ನಿದ್ದೆ ಬಾರದಿದ್ದಾಗೆ ಹಾರ್ಲಿಕ್ಸ್ ಕೊಡು ಎಂದು ವೇದಾಳನ್ನು ಪೀಡಿಸುತ್ತಿದ್ದಳು. ಕ್ರಮೇಣ ಯಾವುದೋ ಲೋಕದಲ್ಲಿದ್ದಂತೆ ವರ್ತಿಸುತ್ತಿದ್ದಳು. ಇದು ದೀಪಕ್ ಗಮನಕ್ಕೂ ಬಂದಿತ್ತು. ಅವನು ಹೆಂಡತಿಯತ್ತ ತುಸು ಲಕ್ಷ್ಯ ವಹಿಸಿದರೂ ವೇದಾಳಿಗೆ ಕೋಪ ಬರುತ್ತಿತ್ತು. ಅವನಿಗೂ ವೇದಾಳ ಮೇಲಿನ ಆಸೆ ತೀರತೊಡಗಿತ್ತು. ಜೊತೆಗೆ ಅವಳು ತನ್ನ ಹೊಸ ವರಸೆ ತೆಗೆದಿದ್ದಳು.
“ಭಾವ, ನನ್ನನ್ನು ಮದುವೆಯಾಗಿ,” ಎಂದು ಪೀಡಿಸತೊಡಗಿದಾಗ, ದೀಪಕ್ ಗೆ ನಿಜಕ್ಕೂ ಅವಳ ಮೇಲೆ ಬೇಸರವಾಗುತ್ತಿತ್ತು. ಅಂದು ಬೆಳಗ್ಗೆಯೇ ತಂದೆಯಿಂದ ಫೋನ್ ಬಂದಿತು.
“ವೇದಾ ಬಂದುಬಿಡಮ್ಮ, ಇಷ್ಟು ದಿನ ಶೀಲಾಳನ್ನು ನೋಡ್ಕೊಂಡಿದ್ದು ಸಾಕು. ಹೇಗೂ ಐದು ತಿಂಗಳು ಮುಗಿಯಿತು. ಈ ಭಾನುವಾರ ಹೊರಟು ಬಂದ್ಬಿಡು. ನಾನಿಲ್ಲಿ ಒಬ್ಬರ ಹತ್ತಿರ ಮಾತಾಡಿದ್ದೀನಿ. ನೀನು ಡೈರೆಕ್ಟ್ ಆಗಿ ಪರೀಕ್ಷೆಗೆ ಕೂರಬಹುದು. ನನ್ನ ಗೆಳೆಯನ ಶ್ರೀಮತಿ ನಿನಗೆ ಪಾಠ ಹೇಳಲು ಒಪ್ಪಿದ್ದಾರೆ,” ಎಂದರು.
“ಅಪ್ಪಾ….. ಪಾಪೂನ ಬಿಟ್ಟು ಬರೋಕೆ ಮನಸ್ಸು ಒಪ್ಪುತ್ತಿಲ್ಲ. ನಾನು ಇಲ್ಲಿಯೇ ಇದ್ದು ಓದುತ್ತೇನೆ. ಭಾವ ಹೆಲ್ಪ್ ಮಾಡ್ತೀನಿ ಅಂತ ಹೇಳಿದ್ದಾರೆ,” ಎಂದಳು ವೇದಾ.
“ಹೌದೇ…. ನಾನೂ ಅವರ ಹತ್ರ ಮಾತಾಡ್ತೀನಿ. ಅಕ್ಕನ ಮನೆಯೇ ಆದರೂ ತುಂಬಾ ದಿನ ಅಲ್ಲಿ ಇರೋದು ಅಷ್ಟು ಚೆನ್ನಾಗಿರೋಲ್ಲ. ಸುಮ್ಮನೆ ಹೊರಟು ಬರೋದು ನೋಡು,” ಎಂದರು ಜಗನ್ನಾಥರಾಯರು.
ಇದರಿಂದ ವೇದಾಳಿಗೆ ತಂದೆಯ ಮೇಲೆ ಕೋಪ ಬಂದರೆ, ಶೀಲಾಗೆ ವೇದಾಳ ಮಾತು ಕೇಳಿ ಅಸಾಧ್ಯ ಕೋಪ ಬಂದಿತ್ತು.
“ವೇದಾ, ಏನು ಹೇಳ್ತೀದ್ದೀಯಾ ನೀನು….? ದೀಪಕ್ ನಿನ್ನನ್ನು ಇಲ್ಲಿಟ್ಟುಕೊಂಡು ಏಕೆ ಓದಿಸ್ತಾರೆ…..? ಹಾಗಂತ ಅವರು ನಿನಗೆ ಹೇಳಿದ್ದಾರೇನು…..?” ಎಂದು ಕೇಳಿದಳು.
“ಹೌದು…. ನಾನು ಅವರಿಗಾಗಿ ಅಷ್ಟೆಲ್ಲಾ ಮಾಡ್ತಿರಬೇಕಾದ್ರೆ ಅವರು ನನ್ನನ್ನು ಇಲ್ಲಿಯೇ ಇರಿಸಿಕೊಂಡು ಓದಿಸೋದ್ರಲ್ಲಿ ತಪ್ಪೇನು…..?” ಎಂದು ಅವಳು ಸ್ವಲ್ಪ ಜೋರಾಗಿಯೇ ಕೇಳಿದಳು.
“ನೀನು ಅವರಿಗೇನು ಮಾಡಿದ್ದೀಯಾ…..? ನಿನ್ನನ್ನು ಇಲ್ಲಿ ಇಟ್ಟೋಳೋಕೆ…?”
“ನೀನು ಬಾಣಂತಿ ಆಗಿದ್ದಾಗ ಅವರ ಆಸೆ ತೀರಿಸಿರೋದು ನಾನು. ಮದುವೆ ಆಗದೆ ನನ್ನನ್ನು ನಾನು ಅವರಿಗೆ ಒಪ್ಪಿಸಿಕೊಂಡಿದ್ದೇನೆ. ನನಗಾಗಿ ಅವರು ಅಷ್ಟೂ ಮಾಡಬಾರದೆ…..? ಅವರು ನನ್ನನ್ನು ಮದುವೆಯಾಗಿ ಬೇರೆ ಮನೆ ಮಾಡಿ ಇಡ್ತಾರಂತೆ….!” ಎಂದಳು ವೇದಾ ಕಟುವಾಗಿ.
“ಏನೂ….. ಏನಂದೆ…..? ದೀಪಕ್ ನಿನ್ನನ್ನು ಮದುವೆ ಆಗೋದಾ…? ಅವರ ತಲೆ ಕೆಟ್ಟಿದೆಯೇನು ನಿನ್ನನ್ನು ಮದುವೆ ಆಗೋಕೆ…..? ನಾನು ಇಲ್ಲದಿದ್ದ ಸಮಯದಲ್ಲಿ ನನ್ನ ಗಂಡನನ್ನು ಮರಳು ಮಾಡಿ ಬುಟ್ಟಿಗೆ ಹಾಕ್ಕೊಂಡಿದೀಯಾ….? ವೇದಾ, ನಾನು ನಿನ್ನನ್ನು ಇಲ್ಲಿಗೆ ಕರೆಸಿಕೊಂಡು ಮನೇಲಿ ಇಟ್ಕೊಂಡಿದಕ್ಕೆ ನೀನು ಸರಿಯಾಗಿಯೇ ಮಾಡಿದ್ದೀಯಾ…. ನೀನು ಈಗಲೇ ಇಲ್ಲಿಂದ ಹೊರಡು…..” ಎಂದು ಕಿರುಚಿದಳು.
“ಅಕ್ಕಾ, ಒಂದು ನಿಮಿಷ ತಾಳು. ನಾನು ಮರುಳು ಮಾಡೋಕೆ ಅವರೇನು ಬುದ್ಧಿಯಿಲ್ಲದ ಹುಡುಗನಾ…..? ಅವರಿಗೆ ನಾನು ಬೇಕಾಗಿತ್ತು. ನನ್ನನ್ನು ಬಳಸಿಕೊಂಡ್ರು. ಈಗ ಹೋಗು ಅಂದ್ರೆ ಹೋಗಿಬಿಡ್ತೀನಾ…..? ನಾನು ಇಲ್ಲಿಗೆ ಬಂದಾಗ ಇನ್ನೂ ಹುಡುಗಿ ಆಗಿದ್ದೆ. ಈಗ ನನ್ನ ಶೀಲ ಎಲ್ಲ ದೋಚಿ ಏನೂ ಇಲ್ಲಾ ಅಂದ್ರೆ ಬಿಡ್ತೀನಾ….? ನಾನು ಇಲ್ಲಿಂದ ಎಲ್ಲಿಗೂ ಹೋಗೋಲ್ಲ! ನೀನೇ ನಿಂತು ನಮ್ಮ ಮದುವೆ ಮಾಡಿಸು….” ಎಂದಳು ವೇದಾ.
ಶೀಲಾಗೆ ಅವಳ ಒಂದೊಂದು ಮಾತು ಕೇಳಿ ಇದೆಂಥ ಪ್ರಾರಬ್ಧ ನನಗೆ ವಕ್ಕರಿಸಿತು ಎಂದು ಅವಳಿಗೆ ತಡೆಯಲಾಗಲಿಲ್ಲ. ಅಸಾಧ್ಯ ಸಿಟ್ಟು ಬಂದಿತ್ತು, “ನೀನೇನು ಹೆಣ್ಣೋ, ಹೆಮ್ಮಾರಿನೋ…..? ನಾಚಿಕೆ ಆಗೋಲ್ವಾ……?” ಎಂದು ಹತ್ತಿರ ಹೋಗಿ ಅವಳ ಕಪಾಳಕ್ಕೆ ಜೋರಾಗಿ ಬಾರಿಸಿದಳು.
ವೇದಾ ಅವಳ ಕೈಹಿಡಿದು ತಳ್ಳುತ್ತಾ, “ನೀನೇನಾದ್ರೂ ಹೆಚ್ಚಿಗೆ ಮಾತಾಡಿದ್ರೆ ನಾನು ಅಕ್ಕಪಕ್ಕದವರನ್ನೆಲ್ಲಾ ಒಟ್ಟು ಸೇರಿಸಿ ನಿನ್ನ ಮಾನ ಮೂರು ಕಾಸಿಗೆ ಇಲ್ಲದಂತೆ ಹರಾಜು ಹಾಕ್ತೀನಿ ನೋಡ್ತೀಯಾ….? ನಿನ್ನ ಜೊತೆಗೆ ನಾನು ಇರ್ತೀನಿ ಬಿಡು. ಈಗ ಇಷ್ಟು ದಿನದಿಂದ ಇರಲಿಲ್ವಾ ಹಾಗೆ. ನಿನ್ನ ಗಂಡನಿಗೆ ನಿನ್ನ ಬಿಳಿ ತೊಗಲಲ್ಲ ಇಷ್ಟ ಆಗಿರೋದು ನನ್ನ ಈ ದೇಹ!” ಎಂದು ಯಾವುದೇ ಅಳುಕಿಲ್ಲದೆ ಹೇಳಿದಳು.
“ಥೂ ನಾಚಿಕೆ ಆಗಲ್ವೇನೆ ನಿನಗೆ ಹೀಗೆ ಮಾತಾಡೋಕೆ….? ನೋಡು ಒಳ್ಳೆ ಮಾತಲ್ಲಿ ಹೇಳ್ತಿದ್ದೀನಿ ಕೇಳಿಸ್ಕೋ…. ನೀನು ನಾಳೇನೇ ಹೋಗ್ಬೇಕು. ಹೋಗಲಿಲ್ಲ ಅಂದ್ರೆ ನಾನು ಏನು ಮಾಡ್ತೀನಿ ಅಂತ ನನಗೇ ಗೊತ್ತಿಲ್ಲ…..” ಎಂದು ಕೋಪದಿಂದ ಶೀಲಾ ಕೂಗಾಡಿದಳು.
“ಏನು ಮಾಡ್ತೀಯಾ ನೀನು…..? ಏನೂ ಮಾಡೋಕೆ ಆಗೋಲ್ಲ. ಪೊಲೀಸ್ ಕಂಪ್ಲೇಂಟ್ ಕೊಡ್ತೀಯಾ ಕೊಡು. ನನ್ನನ್ನು ಭಾವನ ಹತ್ರ ಕಳಿಸಿದ್ದು ನೀನೇ, ಈಗ ನಾನು ಪ್ರಗ್ನೆಂಟ್ ಅಂತ ಗೊತ್ತಾಗಿ ನನ್ನನ್ನು ಎಲ್ಲಿಗೋ ಕಳಿಸೋಕ್ಕೆ ನೋಡ್ತಿದ್ದಾರೆ ಅಂತ ಹೇಳ್ತೀನಿ. ಆಗ ಶಿಕ್ಷೆ ನನಗಲ್ಲ ನಿಮ್ಮಿಬ್ಬರಿಗೇ……” ಎಂದು ಹೇಳಿದಳು.
ಅವಳಾಡುತ್ತಿದ್ದ ಮಾತುಗಳನ್ನು ಕೇಳುತ್ತಾ ಶೀಲಾ ದಂಗಾಗಿ ಹೋಗಿದ್ದಳು. ಮುಂದೆ ಮಾತನಾಡಲಾಗದೆ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಗಂಡನಿಗೆ ಫೋನ್ ಮಾಡಿ, “ದೀಪಕ್ ನೀವು ಈಗಿಂದ್ ಈಗ್ಲೇ ಮನೆಗೆ ಬನ್ನಿ…. ನೀವು ಬರಲಿಲ್ಲ ಅಂದ್ರೆ ನಾನು ಮಗುವನ್ನು ಸಾಯಿಸಿ, ವಿಷ ತಗೊಂಡು ಪ್ರಾಣ ಬಿಡ್ತೀನಿ…..” ಎಂದು ಹೇಳಿ ಅವನ ಉತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿದಳು.
ನಂತರ ತಂದೆಗೂ ಫೋನ್ ಮಾಡಿ ಕೂಡಲೇ ಹೊರಟು ಬರುವಂತೆ ಹೇಳಿದಳೇ ಹೊರತು ವಿಷಯ ತಿಳಿಸಲಿಲ್ಲ. ಲೀಲಾಳಿಗೆ ಫೋನ್ ಮಾಡಿ ವಿಷಯ ತಿಳಿಸಿದಳು.
“ಅದಕ್ಕೆ ಶೀಲಾ, ನಾನು ಅವತ್ತೇ ಬಡ್ಕೊಂಡಿದ್ದು. ಇವಳು ನಮ್ಮ ಒಡಹುಟ್ಟಿದ ತಂಗಿಯಲ್ಲ ರಾಕ್ಷಸಿ. ನಾನು ಬಾಣಂತನಕ್ಕೆ ಬಂದಿದ್ದಾಗ, ನಿಮ್ಮ ಭಾವನನ್ನು ಮರುಳು ಮಾಡಿ ಬೇಕಾದಷ್ಟು ಚೆಲ್ಲಾಟ ಆಡಿದ್ದಾಳೆ. ನನ್ನ ಪುಣ್ಯ ಚೆನ್ನಾಗಿತ್ತು. ಇಲ್ಲಾಂದ್ರೆ ನಮ್ ಜೀವನ ಹಾಳಾಗಿ ಹೋಗಿರುತ್ತಿತ್ತು ಅಷ್ಟೇ. ಈ ವಿಷಯ ಅಮ್ಮನಿಗೂ ಗೊತ್ತಿತ್ತು ಕಣೇ…..” ಎಂದಳು ಲೀಲಾ.
“ಅಲ್ಲಕ್ಕಾ, ಈ ವಿಷಯನಾ ಈಗ ಹೇಳ್ತಿದ್ದೀಯಲ್ಲ. ಅವಳು ಇಲ್ಲಿಗೆ ಬರುವ ಮೊದಲೇ ಹೇಳಬೇಕಿತ್ತಲ್ಲವೇ….? ಇವರಿಬ್ಬರ ಸಂಬಂಧ ಮದುವೆ ಆಗುವವರೆಗೂ ಬಂದಿದೆ. ಈಗ ನಾನು ಏನು ಮಾಡಲಿ…..?” ಎಂದು ಅವಲತ್ತುಕೊಂಡಳು ಶೀಲಾ.
“ಅಮ್ಮ ಅಪ್ಪನ ಬಳಿ ಏಕೆ ಹೇಳಲಿಲ್ಲವೋ ಗೊತ್ತಿಲ್ಲ ಶೀಲಾ…. ಬಹುಶಃ ಗೊತ್ತಿದ್ದರೆ ಅವಳನ್ನು ಅಪ್ಪ ಅಲ್ಲಿಗೆ ಕಳಿಸುತ್ತಲೇ ಇರಲಿಲ್ಲ. ನಾನು ನಿನಗೆ ಫೋನ್ ಮಾಡಿದಾಗೆಲ್ಲಾ ಸೂಕ್ಷ್ಮವಾಗಿ ತಿಳಸುತ್ತಲೇ ಇದ್ದೆ. ನೀನು ಅದಕ್ಕೆ ಪ್ರತಿಕ್ರಿಯೆ ನೀಡದಿದ್ದನ್ನು ನೋಡಿ, ಒಂದುವೇಳೆ ಅವಳು ಬದಲಾಗಿದ್ದಾಳೆ. ಅಲ್ಲಿ ಆ ರೀತಿ ನಡೆದುಕೊಳ್ಳುತ್ತಿಲ್ಲವೇನೋ ಅಂದುಕೊಂಡೆ ಕಣೇ….
“ನೋಡು, ನೀನೀಗ ತಾಳ್ಮೆ ಕಳೆದುಕೊಳ್ಳಬೇಡ. ಹೇಗಾದರೂ ಮಾಡಿ ಅವಳನ್ನು ಅಲ್ಲಿಂದ ಓಡಿಸು. ಉಪಾಯದಿಂದ ಅವಳನ್ನು ಸಾಗಹಾಕುವ ಪ್ರಯತ್ನ ಮಾಡು. ದೀಪಕ್ ನಿನ್ನಿಂದ ದೂರ ಇದ್ದಿದ್ದರಿಂದ ಹೀಗೇ ಆಗಿರಬೇಕು. ಅವರನ್ನು ಕ್ಷಮಿಸಿ, ನಿನ್ನ ಸಂಸಾರ ಉಳಿಸಿಕೋ. ಇಲ್ಲಿ ನಾನು ಅಪ್ಪನಿಗೆ ಸೂಕ್ಷ್ಮವಾಗಿ ಹೇಳಿ ಅವರನ್ನು ಅಲ್ಲಿಗೆ ಕಳಿಸ್ತೀನಿ. ಆಗ ಅವಳೇನು ಮಾಡ್ತಾಳೆ ನೋಡೋಣ. ಮೇಧಾಗೆ ಇದ್ಯಾವ ವಿಷಯ ಗೊತ್ತಾಗೋದು ಬೇಡ. ಪಾಪ ಅವಳು ಓದು, ಮನೆ ಕೆಲಸ ಎಲ್ಲಾ ಒಬ್ಬಳೇ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ,” ಎಂದು ಹೇಳಿ ಫೋನ್ ಇಟ್ಟಳು.
`ಓಹ್….. ದೇವರೇ, ಇದರ ಬಗ್ಗೆ ಅಮ್ಮ ಏಕೆ ತಿಳಿಸಲಿಲ್ಲ….? ದೀಪಕ್ ಎಂಥ ನಯವಂಚಕರು. ನನ್ನ ಕಣ್ಣಿಗೇ ಮಣ್ಣೆರೆಚಿ ಇವಳೊಂದಿಗೆ ನಾನು ಇರುವಾಗಲೇ ಚಕ್ಕಂದ ಆಡಿದ್ದಾರೆ. ನಾನು ಏಕೆ ಗಮನಿಸಲಿಲ್ಲ. ದೇವರೇ, ಇಂತಹ ಮನುಷ್ಯನ ಜೊತೆಗೆ ನಾನು ಮತ್ತೆ ಬಾಳ್ವೆ ಮಾಡಬೇಕೆ….? ಛೇ…. ನನ್ನ ಬುದ್ಧಿಗೇಕೆ ಮಂಕು ಬಡಿದಿತ್ತು. ನನಗೇಕೆ ಇದೆಲ್ಲಾ ಗೊತ್ತಾಗಲಿಲ್ಲ…..?’ ಎಂದು ನೆನೆಸಿಕೊಂಡಾಗ ಅವಳಿಗೆ ಅಳು ಬಂದಿತ್ತು.
ಆದರೂ ಅಕ್ಕ ಹೇಳಿದ ಮಾತುಗಳು ಕಿವಿಯಲ್ಲಿ ಪ್ರತಿಧ್ವನಿಸಿದಂತಾಗಿ, `ಹೌದು ಅಕ್ಕನ ಮಾತು ನಿಜ. ನಾನು ಇವರಿಂದ ದೂರಾಗಿ ಹೋಗುವುದಾದರೂ ಎಲ್ಲಿಗೆ? ಈ ಎಳೆ ಬೊಮ್ಮಟೆಯನ್ನಿಟ್ಟುಕೊಂಡು ಎಲ್ಲಿಗೆ ಹೋಗಲಿ? ನಾನು ಹೋದರೆ ಇವಳು ಭದ್ರವಾಗಿ ಇಲ್ಲಿಯೇ ತಳ ಊರುತ್ತಾಳೆ. ಅವರನ್ನು ಬೆದರಿಸಿಯೋ, ಇಲ್ಲ ಅತ್ತು ಕರೆದೂ ನಾಟಕವಾಡಿಯಾದರೂ ಮದುವೆ ಆಗಬಹುದು. ಯಾರಿಗೆ ಗೊತ್ತು……? ಅವರೂ ಇವಳ ಮಾತಿಗೆ ಒಪ್ಪಲೂಬಹುದು. ಇವಳನ್ನು ಇಟ್ಟುಕೊಂಡಿದ್ದು ಹಾವಿಗೆ ಹಾಲೆರೆದಂತೆ ಆಗಿದೆ.
`ನನ್ನ ಮೂಗಿನ ಕೆಳಗೇ ಇಷ್ಟೆಲ್ಲಾ ನಡೆಸಿದವಳು ಇಲ್ಲಿಯೇ ಉಳಿದರೆ ನನ್ನನ್ನೇ ಆಚೆಗೆ ನೂಕಲೂ ಹೇಸುವುದಿಲ್ಲ. ನಾನು ಈಗ ಇವರನ್ನು ಸರಿಯಾಗಿ ವಿಚಾರಿಸಿಕೊಳ್ಳಬೇಕು. ಹೇಗಿದ್ದರೂ ಅಪ್ಪಾ ಇಂದು ಹೊರಟಿರುತ್ತಾರೆ, ನಾಳೆ ರಾತ್ರಿಯ ಹೊತ್ತಿಗೆ ಇಲ್ಲಿಗೆ ಬರುತ್ತಾರೆ,’ ಎಂದು ಯೋಚಿಸುತ್ತಾ ತನ್ನ ರೂಮಿನಲ್ಲಿಯೇ ಕುಳಿತುಕೊಂಡಳು.
ಅಷ್ಟರಲ್ಲಿ ತಂದೆಯಿಂದ ಫೋನ್ ಬಂದಿತು. ಅವಳು ಹಲೋ ಎನ್ನುವ ಮೊದಲೇ, “ಶೀಲಾ, ಇದೇನಮ್ಮಾ…. ಲೀಲಾ ಎಲ್ಲಾ ವಿಷಯ ಹೇಳಿದಳು. ಇಷ್ಟೆಲ್ಲಾ ನಡೆಯುತ್ತಿದ್ದರೂ ನಿನ್ನ ಗಮನಕ್ಕೆ ಬರಲೇ ಇಲ್ಲವೇ…..? ವೇದಾ ಇಂತಹ ಕೆಟ್ಟ ಹಾದಿ ಹಿಡಿದಿದ್ದಾಳೆಂದರೆ ನನಗೇ ನಂಬಲೂ ಆಗುತ್ತಿಲ್ಲ. ನಿನ್ನ ಅಮ್ಮ ಹೇಳಿದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು. ಅವಳು ಕೆಟ್ಟ ಮನಸ್ಸಿನವಳು. ಅವಳಿಗೆ ನಾನು ಬುದ್ಧಿ ಹೇಳಿ ಕರೆದುಕೊಂಡು ಹೋಗ್ತೀನಿ. ಇದರಲ್ಲಿ ಅಳಿಯಂದರದ್ದೂ ತಪ್ಪಿದೆ. ಅವರು ನಿನಗೆ ಮೋಸ ಮಾಡಿದ್ದಾರೆ. ಸದ್ಯಕ್ಕೆ ನೀನು ಅವಳಿಗೆ ಏನೂ ಹೇಳಬೇಡ. ನಿನಗೆ ಮತ್ತೇನಾದರೂ ಸಮಸ್ಯೆ ತಂದಿಟ್ಟಾಳು. ನಾನು ಬಸ್ಸಿನಲ್ಲಿ ಬರುತ್ತಿದ್ದೇನೆ. ನಾನು ಬಂದು ಎಲ್ಲವನ್ನೂ ಸರಿಪಡಿಸ್ತೀನಿ ನೀನು ಸಮಾಧಾನವಾಗಿರು,” ಎಂದು ಮಗಳಿಗೆ ಸಮಾಧಾನ ಹೇಳಿ ಫೋನಿಟ್ಟರು.
ಅಷ್ಟರಲ್ಲಿ ದೀಪಕ್ ಬಂದಿದ್ದ, “ಏನಾಯಿತು ಶೀಲಾ….? ಏಕೆ ಅಷ್ಟು ಅರ್ಜೆಂಟ್ ಆಗಿ ಬರಬೇಕು ಅಂತ ಕಾಲ್ ಮಾಡಿದೆ? ನನಗೆ ಇಂಪಾರ್ಟೆಂಟ್ ಮೀಟಿಂಗ್ ಇತ್ತು. ಅದನ್ನು ಪೋಸ್ಟ್ ಪೋನ್ ಮಾಡಿ ಬರಲು ಇಷ್ಟು ಹೊತ್ತಾಯಿತು….!” ಎಂದ ಆತಂಕದಿಂದ.
“ಇಲ್ಲಿ ಮನೆಗೆ ಬೆಂಕಿ ಬಿದ್ದಿದೆ. ನೀವು ಮೀಟಿಂಗ್ ಮಾಡಿ. ಎಷ್ಟು ದಿನದಿಂದ ನಡೆಸಿದ್ದೀರಿ ಈ ಕಳ್ಳಾಟ? ನಾಚಿಕೆ ಆಗಬೇಕು ನಿಮ್ಮ ಜನ್ಮಕ್ಕೆ! ನಿಮ್ಮನ್ನೇ ನಂಬಿಕೊಂಡು ಬಂದಿರೋ ನನಗೆ ಮೋಸ ಮಾಡಿದ್ರಲ್ಲ. ನಿಮಗೇನೂ ಅನ್ನಿಸಲೇ ಇಲ್ವಾ…..? ನನ್ನ ಗಂಡ ಶ್ರೀರಾಮಚಂದ್ರ ಅಂದ್ಕೊಂಡಿದ್ದೆ. ಆದರೆ……?” ಎಂದು ಬಿಕ್ಕಳಿಸಿದಳು.
“ಏ ಶೀಲಾ…. ನಾನು ಏನ್ಮಾಡ್ದೆ ಅಂತ ಹೀಗೆಲ್ಲಾ ಮಾತಾಡ್ತಿದ್ದೀಯಾ…? ನಾನೇನು ಮೋಸ ಮಾಡ್ದೆ ನಿನಗೆ….?”
“ಈಗ ನೀವು ನಾಟಕ ಆಡಿ ಏನೂ ಪ್ರಯೋಜನ ಇಲ್ಲ ದೀಪಕ್, ನನಗೆಲ್ಲಾ ಗೊತ್ತಾಯಿತು. ಮೊದಲು ಆ ನಿಮ್ಮ ಪ್ರೇಯಸಿಯನ್ನು ಕೇಳಿ. ಅವಳನ್ನೇ ಮದುವೆ ಮಾಡ್ಕೊಂಡು ಇರಿ. ನಾನು ಎಲ್ಲಾದ್ರೂ ಹಾಳಾಗಿ ಹೋಗ್ತೀನಿ. ಯಾವುದಾದರೂ ಕೆರೆಗೋ, ಬಾವಿಗೋ ಈ ಮಗುನಾ ಹಾಕಿ ನಾನೂ ಬೀಳ್ತೀನಿ…..” ಎಂದು ಕಿರುಚಾಡಿದಳು.
“ಛೇ…. ಬಿಡ್ತು ಅನ್ನು. ನಾನು ಇವಳನ್ಯಾಕೆ ಮದುವೆ ಆಗ್ಲಿ? ಮೈಮೇಲೆ ಬೀಳ್ತಿದ್ಲು. ಏನೋ ನಡೆಯಬಾರದ್ದು ನಡೆದು ಹೋಯ್ತು. ಶೀಲಾ ಪ್ಲೀಸ್, ನೀನು ನನ್ನನ್ನು ಕ್ಷಮಿಸು. ನಾನು ನಿನಗೆ ಮೋಸ ಮಾಡಬೇಕು ಅಂತ ಹೀಗೆಲ್ಲ ಮಾಡ್ಲಿಲ್ಲ. ಏನೋ ನಡೆದು ಹೋಯಿತು. ನೀನು ದೂರ ಇದ್ದೆ…..!” ಎಂದು ತಡವರಿಸಿದ.
“ಆಹಾ ಭಾವ….. ನಿನ್ನ ಮುಂದೆ ಶೀಲಾ ಏನೇನೂ ಅಲ್ಲ ಅಂದಿದ್ದು ನೀವೇ ಅಲ್ವಾ….? ಈಗ ಹೋಗು ಅಂದ್ರೆ ಹೋಗಿಬಿಡ್ತೀನಾ….? ಸುಮ್ಮನೆ ನನ್ನನ್ನು ಮದುವೆ ಮಾಡ್ಕೊಂಡು ಬೇರೆ ಮನೆ ಮಾಡಿಟ್ರೋ ಸರಿ. ಇಲ್ಲಾಂದ್ರೆ……?”
“ಇಲ್ಲಾಂದ್ರೆ ಏನು ಮಾಡ್ತೀಯಾ….? ನಾನು ನಿನ್ನನ್ನು ಮದುವೆ ಆಗೋದಾ….? ನೆವರ್! ನಿನ್ನಂಥವಳು ಮದುವೆ ಮಾಡ್ಕೊಳೋಕ್ಕೆ ಲಾಯಕ್ಕಿಲ್ಲ. ಸುಮ್ಮೆ ಬಾಯಿ ಮುಚ್ಕೊಂಡು ಬೆಂಗಳೂರಿಗೆ ಹೋಗು. ಇಲ್ಲಾಂದ್ರೆ ನಾನು ಏನು ಮಾಡ್ತಿನೋ ನೋಡು….!” ಎಂದು ಅವಳೊಂದಿಗೆ ವಾದ ವಿವಾದ ಮಾಡುತ್ತಿದ್ದರೆ ಶೀಲಾ ಆ ಮಾತುಗಳನ್ನು ಕೇಳಲಾರದೆ ಜ್ಞಾನ ತಪ್ಪಿ ಬಿದ್ದಳು.
“ಶೀಲಾ….ಶೀಲಾ….” ಎಂದು ದೀಪಕ್ ಗಾಬರಿಯಿಂದ ಕೂಗುತ್ತಾ ಹೆಂಡತಿಯ ಬಳಿ ಓಡಿ ಬಂದ. ನೀರು ಚಿಮುಕಿಸಿದರೂ ಅವಳು ಎಚ್ಚರಗೊಳ್ಳಲಿಲ್ಲ. ಶೀಲಾಳ ಬಳಿ ಬಂದ ವೇದಾಳನ್ನು ತಡೆಯುತ್ತಾ, “ದಯವಿಟ್ಟು ನೀನು ನಮ್ಮಿಂದ ದೂರವೇ ಇರು ವೇದಾ. ನನ್ನದೂ ತಪ್ಪಿದೆ. ನಾನು ನನ್ನ ಸ್ಥಾನವನ್ನು ಅರಿತುಕೊಂಡು ನಡೆದುಕೊಳ್ಳಬೇಕಿತ್ತು. ಕಟ್ಟಿಕೊಂಡ ಹೆಂಡತಿಗೆ ಮೋಸ ಮಾಡಿದವನು ನಾನು. ನನಗೆ ಕ್ಷಮೆಯೇ ಇಲ್ಲ. ನಿನಗೆ ಕೈ ಮುಗಿದು ಕೇಳಿಕೊಳ್ತೀನಿ, ಕಾಲಿಗೂ ಬೀಳ್ತೀನಿ. ನಾನು ನನ್ನ ಫ್ಯಾಮಿಲಿಯೊಂದಿಗೆ ಇರಲು ಅವಕಾಶ ಮಾಡಿಕೊಡು. ನಮ್ಮ ಜೀವನ ಹಾಳು ಮಾಡಬೇಡ. ಶೀಲಾ ತುಂಬಾ ಸೂಕ್ಷ್ಮ ಮನಸ್ಸಿನವಳು. ಅವಳಿಗೇನಾದರೂ ಆದರೆ ನನ್ನನ್ನು ನಾನು ಎಂದಿಗೂ ಕ್ಷಮಿಸಿಕೊಳ್ಳಲಾರೆ,” ಎಂದು ಭಾವುಕನಾಗಿ ಕೈ ಮುಗಿದು ಹೇಳಿದ.
ನಂತರ ಹೆಂಡತಿಯನ್ನು ಎತ್ತಿ ಹಾಸಿಗೆಯಲ್ಲಿ ಮಲಗಿಸಿ ತನ್ನ ರೂಮಿಗೆ ಹೋಗಿ ಬಾಗಿಲು ಮುಚ್ಚಿಕೊಂಡ. ಸ್ವಲ್ಪ ಹೊತ್ತಿನಲ್ಲಿ ಡಾಕ್ಟರ್ ಬಂದಾಗ, ಶೀಲಾಳಿಗೆ ಇನ್ನೂ ಜ್ಞಾನ ಬಂದಿಲ್ಲ, ಅದಕ್ಕಾಗಿಯೇ ಡಾಕ್ಟರ್ ಬಂದಿದ್ದಾರೆ ಎನಿಸಿತು ವೇದಾಳಿಗೆ. ಡಾಕ್ಟರ್ ಶೀಲಾಳನ್ನು ಪರೀಕ್ಷಿಸಿ, “ಏನಾಯಿತು, ಜ್ಞಾನ ತಪ್ಪಲು ಕಾರಣ….. ನಿಮ್ಮಲ್ಲಿ ಏನಾದರೂ ವಾಗ್ವಾದ ನಡೆಯಿತೇ….? ಬಹುಶಃ ಅವರು ಏನನ್ನೋ ಮನಸ್ಸಿಗೆ ಬಹಳ ಹಚ್ಚಿಕೊಂಡಿದ್ದಾರೆ ಅನಿಸುತ್ತೆ. ಇನ್ನೂ ಸ್ವಲ್ಪ ಹೊತ್ತು ನೋಡಿ, ಆಕೆಗೆ ಎಚ್ಚರವಾಗದಿದ್ದರೆ ಅವರನ್ನೂ ಅಡ್ಮಿಟ್ ಮಾಡಬೇಕಾಗುತ್ತೆ. ಆಕೆ ಸ್ವಲ್ಪ ವೀಕ್ ಆಗಿದ್ದಾರೆ,” ಎಂದರು.
ಇದನ್ನು ಕೇಳಿ ದೀಪಕ್ ಗೆ ಬಹಳ ನೋವಾಗಿತ್ತು. ಪಶ್ಚಾತ್ತಾಪದಿಂದ ಕುಸಿದು ಹೋಗಿದ್ದ, “ಇಲ್ಲಾ ಡಾಕ್ಟರ್, ಹಾಗೇನೂ ಇಲ್ಲ…. ಇದೇ ಮೊದಲ ಬಾರಿ ಹೀಗಾಗಿದ್ದು….” ಎಂದ.
“ನಾನು ಇಂಜೆಕ್ಷನ್ ಕೊಟ್ಟಿದ್ದೇನೆ. ಇನ್ನೂ ಸ್ವಲ್ಪ ಹೊತ್ತು ನೋಡಿ, ಯಾವುದಕ್ಕೂ ನನಗೆ ಫೋನ್ ಮಾಡಿ,” ಎಂದರು.
ಅಂದೆಲ್ಲಾ ಅವಳ ಬಳಿಯೇ ಕುಳಿತಿದ್ದ ದೀಪಕ್. ರಾತ್ರಿ ಹೊತ್ತಿಗೆ ಅವಳಿಗೆ ಜ್ಞಾನ ಬಂದಿತ್ತು. ಕಣ್ಣು ಬಿಟ್ಟವಳೇ, “ದೀಪಕ್, ನೀವಿಲ್ಲಿಂದ ಏಳಿ. ನನಗೇನೂ ಆಗಿಲ್ಲ. ದಯವಿಟ್ಟು ನನ್ನ ಮುಂದೆ ಇರಬೇಡಿ ಹೋಗಿ ಆಚೆ,” ಎಂದಳು.
ಮರು ಮಾತನಾಡದೆ ಅಲ್ಲಿಂದ ಎದ್ದು ಹೊರನಡೆದ. ಅವನಿಗೆ ಬಹಳವೇ ಪಶ್ಚಾತ್ತಾಪವಾಗಿತ್ತು. `ಸದ್ಯ ಅವಳಿಗೇನೂ ಆಗದಿದ್ದರೆ ಸಾಕು. ನನ್ನ ಚಂದದ ಸಂಸಾರಕ್ಕೆ ನಾನೇ ನನ್ನ ಕೈಯಾರೆ ಬೆಂಕಿ ಹಚ್ಚಿಕೊಳ್ಳಲು ಹೊರಟಿದ್ದೆನ್ಲಾ…. ಇದೇನು ಮಾಡುತ್ತಿದ್ದೇನೆ ನಾನು….? ನನ್ನ ಬುದ್ಧಿಗೇನಾಯ್ತು…..? ನಾನಾಗಿ ನನ್ನ ಚಿನ್ನದಂಥ ಹೆಂಡತಿ, ಸುಂದರವಾದ ಮುದ್ದಾದ ಮಗು ಇರುವ ನನ್ನ ಪುಟ್ಟ ಸಂಸಾರವನ್ನೂ ಕಳೆದುಕೊಳ್ಳುತ್ತಿದ್ದೆನಲ್ಲಾ….`ವೇದಾಳಿಗೇನೋ ಬುದ್ಧಿಯಿಲ್ಲ. ಆದರೆ ನನಗೆ….? ನಾನು ಕ್ಷಣಿಕ ಸುಖಕ್ಕಾಗಿ ನನ್ನ ಜೀವನವನ್ನೇ ಹಾಳು ಮಾಡಿಕೊಳ್ಳಲು ಹೊರಟಿರುವೆ. ಇದು ತಪ್ಪಲ್ಲವೇ….? ಶೀಲಾ ನನ್ನ ಜೀವನದಲ್ಲಿ ಬಂದು ನನ್ನ ಬದುಕನ್ನೇ ಬದಲಾಯಿಸಿದ್ದಳು. ನನ್ನಲ್ಲಿಯೇ ಜೀವ ಇರಿಸಿಕೊಂಡಿದ್ದ ಶೀಲಾಗೆ ಮೋಸ ಮಾಡಿಬಿಟ್ಟೆ,’ ಎಂದು ಮನದಲ್ಲಿಯೇ ಕೊರಗಿದ್ದ. ಡಾಕ್ಟರ್ ಗೆ ಫೋನ್ ಮಾಡಿ ಅವಳ ಬಗ್ಗೆ ತಿಳಿಸಿದ.
“ಈಗ ಬರೆದು ಕೊಟ್ಟಿರುವ ಔಷಧಿಗಳನ್ನು ತಂದುಕೊಡಿ. ಹಾಲು, ಹಣ್ಣುಗಳ ಜೊತೆಗೆ ಅತಿ ಮುಖ್ಯವಾಗಿ ಅವರನ್ನು ಸಂತೋಷವಾಗಿ ಇರಿಸಲು ಪ್ರಯತ್ನಿಸಿ.” ಎಂದರು ಡಾಕ್ಟರ್.
“ಆಗಲಿ ಡಾಕ್ಟರ್, ಅವಳನ್ನು ಜಾಗ್ರತೆಯಿಂದ ನೋಡಿಕೊಳ್ತೀನಿ,” ಎಂದ.
ಮರುದಿನ ಮಧ್ಯಾಹ್ನದ ಹೊತ್ತಿಗೆ ಜಗನ್ನಾಥ ರಾಯರು ಮುಂಬೈಗೆ ಬಂದರು. ಅವರನ್ನು ಮನೆಗೆ ಕರೆತರಲು ದೀಪಕ್ ಬಸ್ ಸ್ಟಾಂಡಿಗೆ ಹೋದ. ಅವರು ದೀಪಕ್ ನೊಂದಿಗೆ ಒಂದೇ ಒಂದು ಮಾತನಾಡದೆ ಮೌನವಾಗಿಯೇ ಅವನೊಂದಿಗೆ ಬಂದರು. ಇದನ್ನು ಮಾತ್ರ ಸಹಿಸಲು ಅವನಿಂದ ಆಗಲಿಲ್ಲ. ಬಹಳ ಗೌರವದಿಂದ ಅಳಿಯಂದಿರೇ, ಎಂದು ಪ್ರೀತಿಯಿಂದ ಮಾತನಾಡುತ್ತಿದ್ದ ಮಾವ ಹೀಗೆ ಮೌನ ವಹಿಸಿದ್ದು ಅವನಿಗೆ ಬಹಳ ಕಷ್ಟವಾಯಿತು.
ಅವನಿಗೂ ಅವರೊಂದಿಗೆ ಮಾತಾಡಲು ಮುಖವಿಲ್ಲದೆ ಸುಮ್ಮನಿದ್ದ. ಮನೆಗೆ ಬಂದ ಮೇಲೆ ಅವರು ಕೋಣೆಯಲ್ಲಿ ಮಲಗಿದ್ದ ಶೀಲಾಳನ್ನು ನೋಡಿ ಬಹಳ ಸಂಕಟಪಟ್ಟರು. ವೇದಾಳ ಬಳಿಗೆ ಬಂದವರೇ ಅವಳ ಕೆನ್ನೆಗೆ ಬಾರಿಸಿದರು, “ನಿನ್ನ ಅಮ್ಮ ಹೇಳಿದಾಗಲೇ ನಾನು ಎಚ್ಚೆತ್ತುಕೊಳ್ಳಬೇಕಿತ್ತು, ತಪ್ಪು ಮಾಡಿದೆ. ನಮ್ಮಂತಹ ಮರ್ಯಾದಸ್ತರ ಮನೆಯಲ್ಲಿ ನಿನ್ನಂತಹ ದುರ್ಬದ್ಧಿಯ ಹೆಣ್ಣು ಹೇಗೆ ಹುಟ್ಟಿದೆಯೋ ಕಾಣೆ…? ನಡಿ ನಿನ್ನ ಬಟ್ಟೆ ಜೋಡಿಸಿಕೋ ನಾಳೆಯೇ ಹೊರಡೋಣ,” ಎಂದವರೇ ಶೀಲಾ ಕೋಣೆಗೆ ಹೋದರು.
ಮಗುವನ್ನು ಎತ್ತಿಕೊಂಡು ಮುದ್ದಿಸುತ್ತಾ, ತಮಗೆ ತಿಳಿದಂತೆ ಮಗಳಿಗೆ, “ಶೀಲಾ, ನಿನ್ನ ಸಂಸಾರನ್ನು ಉಳಿಸಿಕೊಳ್ಳುವುದು ಬಿಡುವುದು ನಿನ್ನ ಕೈಯಲ್ಲಿದೆ. ಈ ಕಾಲದಲ್ಲಿ ಗಂಡಸಿನ ಆಶ್ರಯವಿಲ್ಲದೆ ಬದುಕುವುದು ಬಹಳ ಕಷ್ಟ ಕಣಮ್ಮ. ನಡೆಯುವ ಕಾಲು ಎಡವುವುದು ಸಹಜ, ಏನೋ ಬುದ್ಧಿಗೆಟ್ಟು ದುಡುಕಿ ಬಿಟ್ಟಿದ್ದಾರೆ. ಅವರಿಗೂ ಪಶ್ಚಾತ್ತಾಪವಿದೆ. ಇದೊಂದು ಬಾರಿ ಅವರನ್ನು ಕ್ಷಮಿಸಿಬಿಡು. ನಾನು ವೇದಾಳನ್ನ ಕರೆದುಕೊಂಡು ಹೋಗ್ತೀನಿ. ಅವಳಿಗೆ ಯಾರನ್ನಾದರೂ ನೋಡಿ ಮದುವೆ ಮಾಡಿ ಕೈ ತೊಳೆದುಕೊಂಡು ಬಿಡ್ತೀನಿ. ನೀನು ದುಡುಕಿನ ನಿರ್ಧಾರ ತಗೋಬೇಡಮ್ಮ. ನಿನ್ನ ಅಮ್ಮ ಇದ್ದಿದ್ದರೂ ಇದೇ ಮಾತನ್ನು ಹೇಳಿರುತ್ತಿದ್ದಳು ಅಲ್ಲವೇ,” ಎಂದು ಬುದ್ಧಿ ಹೇಳಿ ಅವಳನ್ನು ಸಮಾಧಾನ ಪಡಿಸಿದರು.
ದೀಪಕ್ ಗೂ ಚೆನ್ನಾಗಿ ಬೈದು ಬುದ್ಧಿ ಹೇಳಿದರು. ಅವನು ಸಹ ತುಂಬಾ ವಿನಯದಿಂದ ತನ್ನ ತಪ್ಪು ಒಪ್ಪಿಕೊಂಡು ಅವರ ಮುಂದೆ, ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಪ್ರಮಾಣ ಮಾಡಿದ ಮೇಲೆ ಅವರಿಗೆ ಕೊಂಚ ಸಮಾಧಾನವಾಯಿತು. ಅವರು ವೇದಾಳಿಗೆ ಹೊರಡುವಂತೆ ಹೇಳಲು ಬಂದಾಗ, ಅವಳು ತನ್ನ ದೊಡ್ಡ ಭಾವನೊಂದಿಗೆ ಫೋನ್ ನಲ್ಲಿ ಮಾತನಾಡುವುದು ಕೇಳಿ ಅವರೆದೆಗೆ ಚೂರಿ ಹಾಕಿದಷ್ಟು ನೋವಾಗಿತ್ತು. ಅವರು ಅಲ್ಲಿಂದ ಬಾಲ್ಕನಿಯಲ್ಲಿ ನಿಂತು, `ಇವಳಿನ್ನು ಸುಧಾರಿಸುವುದಿಲ್ಲ ಎನಿಸಿತು. ಇಂಥ ಕೆಟ್ಟ ಹುಳು ನಮ್ಮಂಥ ಸಂಸ್ಕಾರವಂತರ ಮನೆಯಲ್ಲಿ ಹುಟ್ಟಿದ್ದಾದರೂ ಹೇಗೆ? ಇನ್ನು ಊರಿಗೆ ಹೋದ ಮೇಲೆ ಯಾರ್ಯಾರ ಮನೆ ಹಾಳು ಮಾಡುತ್ತಾಳೋ,’ ಎಂದು ಯೋಚಿಸಿ ಅವರಿಗೆ ಬಹಳ ಆಘಾತವಾಗಿತ್ತು. ಅವರು ಮನದಲ್ಲಿಯೇ ಒಂದು ನಿರ್ಧಾರಕ್ಕೆ ಬಂದರು.
ಮರುದಿನ ಶೀಲಾ ತನ್ನ ಮನಸ್ಸಿಗೆ ನೋವಾಗಿದ್ದರೂ ತಂದೆಗೆ ಮಗಳಾಗಿ ತಾನೇ ಅಡುಗೆ ಮಾಡಿ ಬಡಿಸಿದಳು. ಕ್ಷಮೆ ಕೇಳಲು ಬಂದ ಗಂಡನಿಗೆ, “ದೀಪಕ್, ನನಗೆ ಕಾಲಾವಕಾಶಬೇಕು. ಪ್ಲೀಸ್….. ನನ್ನಿಂದ ದೂರವಿರಿ,” ಎಂದು ಕಟುವಾಗಿ ಹೇಳಿದಳು.
ದೀಪಕ್ ಮೌನ ವಹಿಸಿದ. ಮಾವ ಮತ್ತು ವೇದಾಳಿಗಾಗಿ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಿಸಿದ. ಹೊರಡುವ ವೇಳೆಯಲ್ಲಿ ವೇದಾ ಅಕ್ಕ ಭಾವನೊಂದಿಗೆ ಮಾತಾಡಲೇ ಇಲ್ಲ. ಅವಳಿಗೆ ಪಶ್ಚಾತ್ತಾಪ ಎಂಬುದು ಲವಲೇಶವೂ ಇಲ್ಲದಿದ್ದನ್ನು ನೋಡಿ ಶೀಲಾಳಿಗೆ ಬಹಳ ಬೇಸರವಾಯಿತು. ಸುಮ್ಮನೆ ತಂದೆಯನ್ನು ಹಿಂಬಾಲಿಸಿದಳು. ಜಗನ್ನಾಥ ರಾಯರು ಎಷ್ಟು ಬೇಡವೆಂದರೂ ಕೇಳದೆ ದೀಪಕ್ ಅವರನ್ನು ರೈಲ್ವೆ ಸ್ಟೇಷನ್ನಿಗೆ ಬಿಡಲು ಬಂದು ಹಣ್ಣುಗಳು, ನೀರಿನ ಬಾಟಲ್ ತೆಗೆದುಕೊಟ್ಟ. ರೈಲು ಹೊರಡುವ ಮುನ್ನ ಮಾವನ ಬಳಿ ಬಂದು ಕೈ ಮುಗಿದ.
ರಾಯರು ಅವನಿಗೆ, “ಅಳಿಯಂದಿರೇ, ನಮ್ಮ ಶೀಲಾ ತುಂಬಾ ಸಾದು ಸ್ವಭಾವದ ಮೃದು ಮನಸ್ಸಿನ ಹುಡುಗಿ. ಅವಳ ಮನಸ್ಸಿಗೆ ಇನ್ನೆಂದೂ ನೋವಾಗದಂತೆ ನಡೆದುಕೊಳ್ಳಬೇಡಿ….” ಎಂದು ಬುದ್ಧಿ ಹೇಳಿದರು.
“ಇಲ್ಲಾ ಮಾವಾ, ಇನ್ನೆಂದೂ ನನ್ನಿಂದ ಈ ತಪ್ಪು ಆಗದು ನನ್ನನ್ನು ನಂಬಿ,” ಎಂದು ಮತ್ತೊಮ್ಮೆ ಕೈ ಮುಗಿದ.
ರೈಲು ಹೊರಟಿತು. ರಾತ್ರಿ ಸುಮಾರು ಹೊತ್ತಾದರೂ ವೇದಾ ಮಲಗದೆ ಇನ್ನೂ ಮೊಬೈಲ್ ನೋಡುತ್ತಲೇ ಇದ್ದಳು. ಇದನ್ನು ಕಂಡು ಜಗನ್ನಾಥ ರಾಯರ ಮನಸ್ಸು ಕಳವಳದಿಂದ ಹತ್ತು ಹಲವು ರೀತಿಯಲ್ಲಿ ಹೊಯ್ದಾಡಿತು. ಅಷ್ಟು ಹೊತ್ತಿಗೆ ರೈಲು ಪುಣೆ ದಾಟಿತ್ತು. ನಿದ್ದೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ರೆಪ್ಪೆ ಕೂಡಿಸಲು ಅವರಿಂದ ಆಗಲಿಲ್ಲ.
ಮಧ್ಯ ರಾತ್ರಿಯ ಹೊತ್ತಿಗೆ ವೇದಾ ಎದ್ದು ವಾಷ್ ರೂಮ್ ಕಡೆಗೆ ಹೋಗುವುದನ್ನು ಕಂಡರು. ಅವಳಿಗೆ ಗೊತ್ತಾಗದಂತೆ ತಾವು ಹಿಂದೆ ಬಂದರು. ಪ್ರಯಾಣಿಕರೆಲ್ಲರೂ ಗಾಢ ನಿದ್ದೆಯಲ್ಲಿದ್ದರು. ಅವಳು ಬಾಗಿಲು ತೆರೆದು ಯಾವುದೇ ಅಳುಕಿಲ್ಲದೆ ಮೊಬೈಲ್ ನಲ್ಲಿ ಯಾರೊಂದಿಗೋ ನಗು ನಗುತ್ತಾ ಮಾತಾಡುತ್ತಿರುವುದನ್ನು ಕಂಡು ಅವರ ಮನಸ್ಸಿಗೆ ಹೇಸಿಗೆ ಎನಿಸಿತು.
ಬಹಳ ಮೆಲ್ಲಗೆ ಅವಳಿಗೆ ಅರಿವಾಗದಂತೆ ಬಳಿಗೆ ಬಂದವರೇ ತಮ್ಮ ಎರಡೂ ಕೈಗಳಿಂದ ಬಲವನ್ನೆಲ್ಲಾ ಬಿಟ್ಟು ಅವಳನ್ನು ಜೋರಾಗಿ ಬಾಗಿಲನಿಂದಾಚೆಗೆ ನೂಕಿ ಬಿಟ್ಟು ಬಾಗಲು ಭದ್ರಪಡಿಸಿ ಬಂದು ಸುಮ್ಮನೆ ತಮ್ಮ ಜಾಗದಲ್ಲಿ ಕುಳಿತುಬಿಟ್ಟಿರು.
ವೇದಾ ಇನ್ನಿಲ್ಲ ಎಂದು ಅವರ ಮನಸ್ಸಿಗೆ ನಿರಾಳವಾದರೂ, ಮನಸ್ಸಿನ ತುಮುಲ, ನೋವು, ಸಂಕಟ, ದುಃಖ ಅವರ ಪ್ರಾಣವನ್ನೇ ಕಸಿದುಕೊಂಡಿತ್ತು. ಜಗನ್ನಾಥ ರಾಯರಿಗೆ ಊರು ತಲುಪುವ ಮೊದಲೇ, ರೈಲಿನಲ್ಲಿ ಕುಳಿತಲ್ಲಿಯೇ ಹೃದಯಾಘಾತವಾಗಿತ್ತು.