ಮಾಧವಿ ಅತಿಯಾಗಿ ಬಯಸಿ ಪಡೆದ ಸ್ವಂತ ಸಂತಾನ, ಎಲ್ಲಾ ವಿಧದಲ್ಲೂ ತಿರುಗಿಬಿದ್ದಾಗ ಇವಳು ಮಮತೆಯಿಂದ ಸಾಕಿದ್ದ ಮಗಳು, ವೈದ್ಧಾಪ್ಯದಲ್ಲಿ ಕೈ ಹಿಡಿದಳೇ……?
ನಗರದ ಪ್ರತಿಷ್ಠಿತ ಚಿನ್ನ ಬೆಳ್ಳಿ ವ್ಯಾಪಾರಿ, ಕೇಶವ ಮೂರ್ತಿ ತನ್ನ ಸಂಬಂಧಿಕರ ಪೈಕಿ ಮಾಧವಿಯ ಕೈ ಹಿಡಿದು ಒಂದು ದಶಕ ಉರುಳಿದರೂ ಅವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗಿರಲಿಲ್ಲ. ಹಾಗಂತ ಅವರೇನೂ ಪರಸ್ಪರರನ್ನು ದೂಷಿಸುತ್ತಾ ಕಾಲ ಕಳೆಯಲಿಲ್ಲ. ಬದಲಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಪತಿ ಪತ್ನಿಯರು ಗಹನವಾಗಿ ಯೋಚಿಸಿದ ನಂತರ, ಮಾಧವಿ ನೀಡಿದ ಸಲಹೆಯಂತೆ ಅವರು ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದರು.
ಇವರು ಕೈಕೊಂಡ ನಿರ್ಧಾರಕ್ಕೆ ಹತ್ತಿರದ ಬಂಧು ಬಳಗದವರಿಂದ ಅಪಸ್ವರ ಕೇಳಿ ಬಂದಿತ್ತಾದರೂ ಅದಕ್ಕೆ ಸೊಪ್ಪು ಹಾಕದೇ ತಾವು ನಿಶ್ಚಯಿಸಿದಂತೆ ಮಾಧವಿಯ ಕಡೆಯ ದೂರದ ಸಂಬಂಧಿಗಳ ಪೈಕಿ ಅನಾಥೆಯಾದ ಪರಿಮಳಾಳನ್ನು ಕಾನೂನಿನನ್ವಯ ಎಲ್ಲ ವಿಧಿ ವಿಧಾನಗಳನ್ನು ಕ್ರಮವಾಗಿ ಅನುಸರಿಸಿ, ಒಂದು ಶುಭ ಮುಹೂರ್ತದಲ್ಲಿ ಅವಳನ್ನು ದತ್ತು ಪಡೆದು ಮನೆಗೆ ಕರೆದು ತಂದಿದ್ದರು. ಮೂರು ವರ್ಷದ ಪುಟ್ಟ ಪರಿಮಳಾ ನೋಡಲು ಎಷ್ಟು ಮುದ್ದಾಗಿದ್ದಳೋ ಅಷ್ಟೇ ಚೂಟಿ ಕೂಡ ಆಗಿದ್ದಳು.
ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಬಂದ ಬಾಲೆ, ಅತ್ಯಾಧುನಿಕ ಮಾಧವಿಯ ಮನೆಗೆ ಕಾಲಿಟ್ಟಾಗ ಎಲ್ಲವನ್ನೂ ಬೆರಗು ಕಣ್ಣುಗಳಿಂದ ನೋಡುತ್ತಾ ಆರಂಭದಲ್ಲಿ ಆತಂಕದಲ್ಲಿದ್ದಳು. ಬರಬರುತ್ತಾ ಮಾಧವಿ ತಾಯಿಯ ಪ್ರೀತಿ, ಮಮಕಾರ ಧಾರೆ ಎರೆಯಲು ಆರಂಭಿಸಿದ ಬಳಿಕ ಮುಂದಿನ ಆರೇಳು ತಿಂಗಳುಗಳಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಂಡು, ಮೂರು ಹೊತ್ತು ಮಾಧವಿಯ ಹಿಂದೆ, “ಅಮ್ಮಾ…. ಅಮ್ಮಾ…..” ಎಂದು ಓಡಾಡತೊಡಗಿದಾಗ ಮಾಧವಿ ಅವ್ಯಕ್ತ ಆನಂದ ಅನುಭವಿಸಲು ಆರಂಭಿಸಿದಳು. ಹಾಗೆಯೇ ಮಾಧವಿ ಹೇಳಿ ಕೊಟ್ಟಂತೆ ಆಕೆಯ ಪತಿಯನ್ನು `ಅಪ್ಪಾ…. ಅಪ್ಪಾ….’ ಎಂದು ಕರೆಯಲು ರೂಢಿಸಿಕೊಂಡಳು.
ಪರಿಮಳಾ, ಮಾಧವಿ ದಂಪತಿ ಮನೆಗೆ ಬಂದು ಒಂದು ವರ್ಷ ಕಳೆದಿತ್ತು ಅಷ್ಟೆ. ಆಗ ವಿಚಿತ್ರವೋ, ಪವಾಡವೋ ಅಥವಾ ವಿಧಿಯ ಆಟವೋ ಎಂಬಂತೆ ಮಾಧವಿ ಚೊಚ್ಚಲ ಮಗುವಿಗೆ ಗರ್ಭಿಣಿಯಾಗಿದ್ದಳು. ತಾನು ತಾಯಿ ಆಗುತ್ತಿರುವ ವಿಚಾರ ಅವಳಲ್ಲಿನ ಸಂಭ್ರಮ ಇನ್ನೂ ಹೆಚ್ಚಾಗಿಸಿತ್ತು. ಆಗಾಗ ಆಕೆ ಪರಿಮಳಾಳಿಗೆ, “ಪುಟ್ಟೀ…. ನಿನ್ನ ಜೊತೆ ಆಡೋಕೆ ಪುಟ್ಟ ಬರುತ್ತೆ,” ಎಂದು ಹೇಳುತ್ತಿದ್ದಳು. ಪುಟ್ಟ ಪರಿಮಳಾ ಅದನ್ನು ಕೇಳಿ ಖುಷಿಯಿಂದ, ಆಶ್ಚರ್ಯದಿಂದ ನಲಿದಾಡಿ ತನ್ನ ಸಂತೋಷ ವ್ಯಕ್ತಪಡಿಸುತ್ತಿದ್ದಳು.
ದಿನಗಳು ಉರುಳಿದ ಬಳಿಕ ಮಾಧವಿ ಒಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಅವಳ ಮನೆಯವರೆಲ್ಲರೂ ಸಂತಸದಲ್ಲಿ ಮಿಂದೆದ್ದಿದ್ದರು. ಪರಿಮಳಾಳಂತೂ ಶಾಲೆಯ ಅವಧಿ ಹೊರತುಪಡಿಸಿ ಉಳಿದೆಲ್ಲ ವೇಳೆಯನ್ನು ಪುಟ್ಟ ಪಾಪುವಿನೊಂದಿಗೆ ಆಟ ಆಡುತ್ತಾ ಕಾಲ ಕಳೆಯುತ್ತಿದ್ದಳು. ಆ ಮಗುವಿಗೆ ಒಂದು ಶುಭ ಮುಹೂರ್ತದಲ್ಲಿ ನಿಶಾಂತ್ ಎಂದು ನಾಮಕರಣ ಮಾಡಿದರು.
ಮಾಧವಿ ಮತ್ತು ಕೇಶವಮೂರ್ತಿಯವರ ಬದುಕಿನ ಹಡುಗು ಈ ರೀತಿ ನಿಶ್ಚಿಂತೆಯಿಂದ ಸಾಗುತ್ತಿದ್ದಾಗ, ಅನಿರೀಕ್ಷಿತವಾಗಿ ಬಿರುಗಾಳಿಗೆ ಸಿಲುಕಿ, ಒಂದು ದೊಡ್ಡ ಬಂಡೆಗೆ ಅಪ್ಪಳಿಸಿದಂತೆ ಒಂದು ದಿನ ಸಂಜೆ ಕೇಶವಮೂರ್ತಿ ಅಂಗಡಿಯಿಂದ ಮನೆಗೆ ಬಂದವನು ತೀವ್ರ ಎದೆನೋವು ಎಂದು ನರಳಲು ಆರಂಭಿಸಿದ. ತಡಮಾಡದೇ ಮಾಧವಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನುರಿತ ವೈದ್ಯರಿಂದ ಚಿಕಿತ್ಸೆ ಕೊಡಿಸಿದರೂ ಆತ ಬದುಕಿ ಉಳಿಯಲಿಲ್ಲ. ಪತಿಯನ್ನು ಕಳೆದುಕೊಂಡ ಮಾಧವಿಯ ಜಂಘಾಬಲವೇ ಉಡುಗಿ ಹೋದಂತಾಗಿತ್ತು.
ಕಾಲ ಎಲ್ಲವನ್ನೂ ಸರಿಪಡಿಸುತ್ತದೆ ಎನ್ನುವಂತೆ ತನ್ನ ಎರಡೂ ಕಂದಮ್ಮಗಳ ಲಾಲನೆ ಪಾಲನೆಯಲ್ಲಿ ತೊಡಗಿದರೂ ಆಗಾಗ ಪತಿಯ ಅಗಲಿಕೆಯ ದುಃಖ ನೆನಪಿಸಿಕೊಂಡು ಮೌನದಿಂದ ಕಣ್ಣೀರಿಡುತ್ತಿದ್ದಳು. ಕಾಲ ಸರಿದಂತೆ ಮಾಧವಿಯ ಮಕ್ಕಳಿಬ್ಬರೂ ಶಾಲೆಗೆ ಹೋಗಲು ಆರಂಭಿಸಿದರು. ಮಾಧವಿ ಐದನೇ ತರಗತಿಯಲ್ಲಿದ್ದರೆ, ನಿಶಾಂತ್ ಒಂದನೇ ತರಗತಿಯಲ್ಲಿ ಓದುತ್ತಿದ್ದ. ಓದಿನ ವಿಚಾರದಲ್ಲಿ ಪರಿಮಳಾ ಶಾಲೆಗೆ ಮೊದಲ ಸ್ಥಾನದಲ್ಲಿದ್ದರೆ, ನಿಶಾಂತ್ ಅಷ್ಟೊಂದು ಚುರುಕಾಗಿರಲಿಲ್ಲ. ಇದರಿಂದ ಸಹಜವಾಗಿ ಪರಿಮಳಾ ಎಲ್ಲರ ಹೊಗಳಿಕೆಗೆ ಪಾತ್ರಳಾಗಿದ್ದಳು.
ಈ ವಿಷಯ ಪುಟ್ಟ ನಿಶಾಂತ್ ನ ಮೇಲೆ ಪರಿಣಾಮ ಬೀರಲು ಆರಂಭಿಸಿತು. ಅವನು ಮನಸ್ಸಿನಲ್ಲಿ ಅಸಮಾಧಾನ ಪಡತೊಡಗಿದ. ನಿಶಾಂತನೂ ಓದಿನಲ್ಲಿ ಮುಂದೆ ಬರಲಿ ಎಂಬ ಇರಾದೆಯಿಂದ ಮಾಧವಿ ಅವನಿಗಾಗಿ ಖಾಸಗಿ ಶಿಕ್ಷಕರನ್ನು ನೇಮಿಸಿದಳು. ಅದೇಕೋ ಏನೋ ನಿಶಾಂತ್ ಗೆ ಓದಿನ ಕಡೆ ನಿರೀಕ್ಷಿತ ಗಮನ ನೀಡಲು ಆಗಲಿಲ್ಲ. ಇದರಿಂದ ಮಾಧವಿಗೆ ಒಂದು ಬಗೆಯ ಚಿಂತೆ ಕಾಡತೊಡಗಿತು. ಈ ಕುರಿತು ಮಗಳು ಪರಿಮಳಾಳ ಎದುರು, “ನೀನಾದರೂ ಅವನಿಗೆ ಬುದ್ಧಿ ಹೇಳಮ್ಮಾ,” ಎಂದು ತನ್ನ ಅಳಲು ತೋಡಿಕೊಂಡಳು.
ಪರಿಮಳಾ ತಾಯಿಯ ಮಾತಿಗೆ ಬೆಲೆ ಕೊಟ್ಟು ವಿದ್ಯೆಯ ಮಹತ್ವದ ಬಗ್ಗೆ ಅವನಿಗೆ ತಿಳಿವಳಿಕೆ ನೀಡಿದರೂ ಅದೇನೂ ಪ್ರಯೋಜನವಾಗಲಿಲ್ಲ. ನಿಶಾಂತ್ ಬೆಳೆಯುತ್ತಾ ಹೋದಂತೆ ಸಹವಾಸ ದೋಷದಿಂದಲೋ ಏನೋ ಮನೆಯವರೊಂದಿಗೆ ಒರಟಾಗಿ ವರ್ತಿಸಲು ಆರಂಭಿಸಿದ. ಜವಾಬ್ದಾರಿ ಹೆಗಲಿಗೆ ಏರಿದಾಗ ಸರಿ ಹೋದಾನು ಎಂದುಕೊಂಡ ಮಾಧವಿ, ಅವನಿಗೆ ಹೆಚ್ಚು ಬುದ್ಧಿವಾದ ಹೇಳುವುದನ್ನು ಕಡಿಮೆ ಮಾಡಿದಳು. ಅದೇ ಅವನಿಗೆ ಪ್ಲಸ್ ಪಾಯಿಂಟ್ ಆದಂತಾಯ್ತು.
ಓದಿನಲ್ಲಿ ಮುಂದಿದ್ದ ಪರಿಮಳಾ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಅದೇ ಊರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಲು ಆರಂಭಿಸಿದಳು. ಇತ್ತ ನಿಶಾಂತ್ ಕಾಲೇಜ್ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಯಾವುದಾದರೂ ವ್ಯಾಪಾರ ಮಾಡುತ್ತೇನೆ ಎಂದು ತಾಯಿಯಿಂದ ಹಣ ಕೀಳಲಾರಂಭಿಸಿದ. ಅವನ ಈ ಹವ್ಯಾಸ ಅಪಾಯಕಾರಿ ಹಂತ ಮುಟ್ಟುವುದು ಎಂದರಿತ ಮಾಧವಿ, ಅವನ ಒಳ್ಳೆಯದಕ್ಕಾಗಿ ಸ್ವಲ್ಪ ಕಟುವಾಗಿ ಖಂಡಿಸುತ್ತಿದ್ದಳು.
ಒಮ್ಮೆ ಮಾಧವಿ ಮಗನನ್ನು ಸ್ವಲ್ಪ ಕಟುವಾಗಿ ಮಾತನಾಡಿದ್ದಕ್ಕೆ, ಅಂದು ಅವನು ತಾಯಿ ಎಂದೂ ನೋಡದೇ ತುಂಬಾ ತುಚ್ಛವಾಗಿ ಮಾತನಾಡಿದ. ಅಷ್ಟೇ ಅಲ್ಲದೇ, ಮಾತು ಮಾತಿಗೆ ಪರಿಮಳಾಳ ವಿಷಯ ಎಳೆದು ತಂದು ರಾದ್ಧಾಂತ ಮಾಡಿದ.
ಈ ನಡುವೆ ಪರಿಮಳಾಳಿಗೆ ಬೇರೆ ಊರಿಗೆ ವರ್ಗವಾಗಿದ್ದು ಮಾಧವಿಗೆ ಬೇಸರದ ವಿಷಯವಾಗಿತ್ತು. ಇನ್ನು ತನಗೆ ಯಾರಿಂದಲೂ ಅಡ್ಡಿ ಇಲ್ಲವೆಂಬ ಧೋರಣೆ ನಿಶಾಂತ್ ನ ತಲೆಗೇರಿತ್ತು. ಮನಸ್ಸಿಗೆ ಬಂದಂತೆ ನಡೆಯುತ್ತಿದ್ದ.
ಪರಿಮಳಾ ಬೇರೆ ಊರಿಗೆ ಹೋಗಿ ಎರಡು ವರ್ಷ ಕಳೆದವು. ಅವಳಿಗೆ ಕಂಕಣ ಬಲ ಕೂಡಿ ಬಂದಿದ್ದರಿಂದ ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಶ್ರೀಪತಿಯೊಂದಿಗೆ ಮದುವೆ ಮಾಡಿ ಮಾಧವಿ ಒಂದು ಜವಾಬ್ದಾರಿಯಿಂದ ಮುಕ್ತಳಾಗಿದ್ದಳು. ಮದುವೆಯಾದ ಎರಡೇ ವರ್ಷದಲ್ಲಿ ಪರಿಮಳಾ ತಾನಿದ್ದ ಊರಿನಲ್ಲಿಯೇ ಹೊಸ ಮನೆ ಕಟ್ಟಿಸಿಕೊಂಡಾಗಲಂತೂ ಮಾಧವಿಗೆ ಹಿಡಿಸಲಾರದಷ್ಟು ಸಂತೋಷವಾಗಿತ್ತು.
ಇತ್ತ ನಿಶಾಂತ್ ದಿನೇ ದಿನೇ ದುಶ್ಚಟಗಳಿಗೆ ದಾಸನಾಗಿ ಕಣ್ಮುಂದೆ ಹಾಳಾಗಿ ಹೋಗುತ್ತಿರುವುದನ್ನು ಕಂಡು ಒಳಗೊಳಗೇ ಗಂಭೀರವಾಗಿ ಚಿಂತಿಸಲಾರಂಭಿಸಿದಳು. ಇದರಿಂದ ಆಕೆಯ ಆರೋಗ್ಯ ಮೊದಲಿಗಿಂತ ಕ್ಷೀಣಿಸಲಾರಂಭಿಸಿತು. ವಿಷಯ ಅರಿತ ನಂತರ ಪರಿಮಳಾ ತನ್ನ ತಾಯಿಯನ್ನು ತಾನಿದ್ದಲ್ಲಿಗೆ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಿದಳು. ಒಂದೆರಡು ತಿಂಗಳ ಬಳಿಕ ಮಾಧವಿಯ ಆರೋಗ್ಯ ಚೇತರಿಸಿದ ನಂತರ ತನ್ನ ಊರಿಗೆ ವಾಪಸ್ ಬಂದಳು. ಅಷ್ಟರೊಳಗೆ ಆಕೆಯ ಅನುಪಸ್ಥಿತಿಯಲ್ಲಿ ನಿಶಾಂತ್ ತೀರಾ ಕೆಟ್ಟುಹೋಗಿದ್ದ, ಮಾತ್ರವಲ್ಲ ಆರೋಗ್ಯವನ್ನೂ ಕೆಡಿಸಿಕೊಂಡಿದ್ದ. ಕೈಯಲ್ಲಿದ್ದ ಹಣ ಇಲ್ಲವೆಂದಾಗ ಹಣಕ್ಕಾಗಿ ತಾಯಿಯನ್ನು ಪೀಡಿಸತೊಡಗಿದ. ಕಂಡಕಂಡವರಲ್ಲಿ ಸಾಲ ಸೋಲ ಮಾಡಿ, ಕೊನೆಗೆ ತಾಯಿಯನ್ನು ಹೆದರಿಸಿ ಬೆದರಿಸಿ ಮನೆ ಹರಾಜು ಹಾಕುವ ಮಟ್ಟಕ್ಕೆ ತಂದಿಟ್ಟಿದ್ದ.
ನೀನು ಮಾಡುತ್ತಿರುವುದು ತಪ್ಪು ಎಂದು ಹೇಳಿದ್ದಕ್ಕೆ, “ಅದೆಲ್ಲಾ ನನ್ನಿಷ್ಟ! ಬೇಕಿದ್ರೆ ಇರು, ಇಲ್ಲಾಂದ್ರೆ ಎಲ್ಲಾದ್ರೂ ಹೊರಟುಹೋಗು,” ಎಂದು ಹುಚ್ಚಾಪಟ್ಟೆ ರೇಗಾಡಿದ್ದ.
ಈ ವಿಷಯ ಮಗಳಿಗೆ ಹೇಳಿದರೆ ಮಗ ಇನ್ನೇನು ರಾದ್ಧಾಂತ ಮಾಡುತ್ತಾನೋ ಎಂಬ ಅಳುಕಿನಿಂದ ತುಟಿ ಪಿಟಕ್ಕೆನ್ನದೇ ಮೌನವಾದ ಮಾಧವಿ, ಗತಿಸಿದ ಪತಿಯ ಫೋಟೋ ಎದುರು ನಿಂತು ದುಃಖಿಸುವುದೇ ಆಕೆಯ ದಿನಚರಿಯಾಗಿತ್ತು. ಮನೆಯ ಹರಾಜಿನ ವಿಷಯ ಆಕೆಗೆ ನುಂಗಲಾರದ ತುತ್ತಾಗಿತ್ತು. ಇದನ್ನು ಪರೋಷಕ್ಷವಾಗಿ ಮಗಳ ಗಮನಕ್ಕೆ ತಂದು ತಂದೆಯ ಮನೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವಂತೆ ಹೇಳಿದಳು.
ಮನೆಯ ಹರಾಜಿನ ದಿನವಂತೂ ಮಾಧವಿಗೆ ಏನೂ ತೋಚದೆ ತಲೆ ಸುತ್ತುವಂತಾಗಿತ್ತು. ಹರಾಜುದಾರರು ಬಂದು ಕೊನೆಯ ಬಿಡ್ಡು ಕೂಗುವ ವೇಳೆಗೆ ಸರಿಯಾಗಿ ಪತಿಯೊಂದಿಗಿ ಬಂದ ಪರಿಮಳಾ, ಕೊನೆಯ ಬಿಡ್ಡನ್ನು ತಾನು ಕೂಗಿ ಆ ಮನೆಯನ್ನು ತನ್ನದಾಗಿಸಿಕೊಂಡಳು.
ತಮ್ಮ ನಿಶಾಂತ್‌ಗೆ, “ಇನ್ನು ಮುಂದೆ ಅಮ್ಮ ನಿನ್ನೊಂದಿಗೆ ಇರಲ್ಲ. ನಾನು ಕರೆದುಕೊಂಡು ಹೋಗಿ ನನ್ನ ಜೊತೆ ಇಟ್ಟುಕೊಳ್ತೀನಿ. ನೀನು ಸರಿದಾರಿಗೆ ಬಂದಾಗ ಈ ಮನೆಯನ್ನು ನಿನ್ನ ಹೆಸರಿಗೆ ಮಾಡಿಕೊಡ್ತೀನಿ,” ಎಂದು ಕಠೋರವಾಗಿ ಹೇಳಿ ತಾಯಿಗೆ, “ಅಮ್ಮಾ…. ಬಾ,” ಎಂದು ಆಕೆಯ ಕೈ ಹಿಡಿದುಕೊಂದು ಕಾರಿನಲ್ಲಿ ಕೂರಿಸಿಕೊಂಡು ಹೊರಟಳು.
ಮಗಳ ಮಮಕಾರ ಕಂಡ ಮಾಧವಿಯ ಕಣ್ಣುಗಳು ತುಂಬಿ ಬಂದವು.