ಸಾಮಗ್ರಿ : 1 ಕಪ್ ಸಣ್ಣ ರವೆ, 3 ಕಪ್ ಹಾಲು, ರುಚಿಗೆ ತಕ್ಕಷ್ಟು ಸಕ್ಕರೆ, ತುಪ್ಪ, ಅನಾನಸ್ ತುರಿ, ಡ್ರೈ ಫ್ರೂಟ್ಸ್, ಏಲಕ್ಕಿಪುಡಿ, ಪೈನಾಪಲ್ ಎಸೆನ್ಸ್, ಅಲಂಕರಿಸಲು ಗುಲಾಬಿ ದಳ, ಗೋಡಂಬಿ, ಬಾದಾಮಿ ಚೂರು.
ವಿಧಾನ : ಮೊದಲು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಗೋಡಂಬಿ, ದ್ರಾಕ್ಷಿ, ಪಿಸ್ತಾ, ಬಾದಾಮಿ ಚೂರುಗಳನ್ನು ಹುರಿದು ಪಕ್ಕಕ್ಕಿಡಿ. ಇದರಲ್ಲಿ ರವೆ ಹಾಕಿ ಹುರಿದು ಬೇರೆಯಾಗಿಡಿ. ನಂತರ ಅದೇ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಅನಾನಸ್ ತುರಿ ಹಾಕಿ ಬಾಡಿಸಿ. ಇದಕ್ಕೆ ಕಾದಾರಿದ ಹಾಲು ಬೆರೆಸಿ, ಚೆನ್ನಾಗಿ ಕುದಿಸುತ್ತಾ ಅನಾನಸ್ ಬೇಯಿಸಿ. ಇದಕ್ಕೆ ಏಲಕ್ಕಿ ಪುಡಿ, ಎಸೆನ್ಸ್, ಡ್ರೈ ಫ್ರೂಟ್ಸ್, ಸಕ್ಕರೆ ಹಾಕಿ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ. ನಂತರ ಮಂದ ಉರಿ ಮಾಡಿಕೊಂಡು, ಎಡಗೈಯಿಂದ ರವೆ ಸೇರಿಸುತ್ತಾ, ಬಲಗೈಯಿಂದ ಬೇಗ ಬೇಗ ಮಿಕ್ಸ್ ಮಾಡಿ. ನಡುನಡುವೆ ತುಪ್ಪ ಬೆರೆಸುತ್ತಾ, ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ. ಇದನ್ನು ಕೆಳಗಿಳಿಸಿ, ಚಿತ್ರದಲ್ಲಿರುವಂತೆ ಮತ್ತಷ್ಟು ಗೋಡಂಬಿ, ಪಿಸ್ತಾ ಚೂರು, ಗುಲಾಬಿ ದಳಗಳಿಂದ ಅಲಂಕರಿಸಿ, ಬಿಸಿ ಬಿಸಿಯಾಗಿ ಸವಿಯಲು ಕೊಡಿ.
ಸ್ವಾದಿಷ್ಟ ಮೋದಕ
ಹೂರಣದ ಸಾಮಗ್ರಿ : 1 ಕಪ್ ಬೆಲ್ಲದ ಪುಡಿ, 1 ದೊಡ್ಡ ಗಿಟುಕು ತೆಂಗಿನ ತುರಿ, ತುಸು ಏಲಕ್ಕಿ ಪುಡಿ, ತುಪ್ಪ, ಡ್ರೈ ಫ್ರೂಟ್ಸ್ ಚೂರು.
ಕಣಕದ ಸಾಮಗ್ರಿ : 1 ಕಪ್ ಅಕ್ಕಿ ಹಿಟ್ಟು ಅಗತ್ಯವಿದ್ದಷ್ಟು ತುಪ್ಪ, ನೀರು, ಉಪ್ಪು.
ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ. ಮಂದ ಉರಿ ಮಾಡಿಕೊಂಡು, ಇದಕ್ಕೆ ಬೆಲ್ಲದ ಪುಡಿ ಹಾಕಿ ಕೆದಕಬೇಕು. ನಂತರ ತುಸು ನೀರು ಬೆರೆಸಿ ಸಣ್ಣಗೆ ಕುದಿಸಿರಿ. ಕೆಳಗಿಳಿಸಿ ಆರಿಸಿ, ಇದರಿಂದ ಕಲ್ಮಶ ಬೇರ್ಪಡಿಸಿ. ಮತ್ತೆ ಅದೇ ಬಾಣಲೆಯಲ್ಲಿ ಇನ್ನಷ್ಟು ತುಪ್ಪ ಬಿಸಿ ಮಾಡಿ, ಈ ಪಾಕ ಹಾಕಿ ಕುದಿಸಬೇಕು. ನಂತರ ತೆಂಗಿನ ತುರಿ ಹಾಕಿ ಗಟ್ಟಿ ಆಗುವವರೆಗೂ ಕೆದಕಬೇಕು. ಆಮೇಲೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್, ಹಾಕಿ (ನಡುನಡುವೆ ತುಪ್ಪ ಬೆರೆಸುತ್ತಾ) ಎಲ್ಲವೂ ಬೆರೆತುಕೊಳ್ಳುವಂತೆ ಮಾಡಿ ಕೆಳಗಿಳಿಸಿ, ಆರಲು ಬಿಡಿ. ಈಗ ಕಣಕ ತಯಾರಿಸಲು, ಒಂದು ಸ್ಟೀಲ್ ಪಾತ್ರೆಯಲ್ಲಿ 1 ಕಪ್ ನೀರು ಬಿಸಿ ಮಾಡಿ. ಅದು ಕುದಿ ಬಂದಂತೆ, ಉಪ್ಪು, ತುಪ್ಪ ಸೇರಿಸಿ ನಂತರ ಅಕ್ಕಿ ಹಿಟ್ಚನ್ನು ಎಡಗೈಯಿಂದ ನಿಧಾನವಾಗಿ ಬೆರೆಸುತ್ತಾ, ಬಲಗೈಯಿಂದ ಬೇಗ ಬೇಗ ಕೆದಕಬೇಕು. ಗಂಟಾಗದಂತೆ ನಡುನಡುವೆ ತುಪ್ಪ ಬೆರೆಸುತ್ತಾ ಇರಿ. ಮುಚ್ಚಳ ಮುಚ್ಚಿರಿಸಿ 1-2 ನಿಮಿಷ ಹದನಾಗಿ ಬೇಯಿಸಿ. ಕೊನೆಯಲ್ಲಿ ತುಪ್ಪ ಬೆರೆಸಿ ಕೆದಕಿ ಕೆಳಗಿಳಿಸಿ. ಇದು ಸುಮಾರಾಗಿ ಆರಿದಾಗ, ಕೈಗೆ ಜಿಡ್ಡು ಸವರಿಕೊಂಡು, ಇದರಿಂದ ನಿಂಬೆ ಗಾತ್ರದ ಉಂಡೆ ಮಾಡಿಕೊಳ್ಳಿ. ಅದನ್ನು ಮೈದಾಹಿಟ್ಟಿನ ನೆರವಿನಿಂದ ಲಟ್ಟಿಸಿ. ನಂತರ ಅದರಲ್ಲಿ 2-3 ಚಮಚ ಬೆಲ್ಲದ ಹೂರಣ ತುಂಬಿಸಿ. ಚಿತ್ರದಲ್ಲಿರುವಂತೆ ನೀಟಾಗಿ ಇದಕ್ಕೆ ಮೋದಕದ ಆಕಾರ ಕೊಡಿ. ನಂತರ ಇಡ್ಲಿ ತಟ್ಟೆಗಳಿಗೆ ಜಿಡ್ಡು ಸವರಿ, ಅದರಲ್ಲಿ ಇವನ್ನು ಜೋಡಿಸಿಕೊಂಡು, 10-15 ನಿಮಿಷ ಆವಿಯಲ್ಲಿ ಬೇಯಿಸಿ. ಬಿಸಿ ಇರುವಾಗಲೇ ಇದನ್ನು ತಟ್ಟೆಗೆ ಹಾಕಿಕೊಟ್ಟು, ಮೇಲೆ ಇನ್ನಷ್ಟು ತುಪ್ಪ ಸೇರಿಸಿ.
ಕೊಬ್ಬರಿ ಬೆಲ್ಲದ ಬರ್ಫಿ
ಸಾಮಗ್ರಿ : 1 ದೊಡ್ಡ ತೆಂಗಿನಕಾಯಿಯ ತುರಿ, 1-1 ಕಪ್ ಬೆಲ್ಲದ ಪುಡಿ ಹಾಲು, ಅರ್ಧ ಕಪ್ ಖೋವಾ, ಹಾಲಲ್ಲಿ ನೆನೆಸಿದ ಒಂದಿಷ್ಟು ಕೇಸರಿ, ಏಲಕ್ಕಿಪುಡಿ, ಬಾದಾಮಿ ಚೂರು, ತುಪ್ಪ.
ವಿಧಾನ : ಮೊದಲು ತುಪ್ಪದಲ್ಲಿ ಬಾದಾಮಿ ಚೂರು ಹುರಿದು ಬೇರೆ ಇಡಿ, ಇದರಲ್ಲಿ ತೆಂಗಿನ ತುರಿ ಹಾಕಿ, ಮತ್ತಷ್ಟು ತುಪ್ಪ ಬೆರೆಸಿ, ಮಂದ ಉರಿಯಲ್ಲಿ ಹುರಿದು ಪಕ್ಕಕ್ಕಿಡಿ. ಅದೇ ಬಾಣಲೆಯಲ್ಲಿ ತುಸು ನೀರು ಬಿಸಿ ಮಾಡಿ, ಬೆಲ್ಲ ಹಾಕಿ ಅದು ಕರಗುವಂತೆ ಮಾಡಿ. ಬೆಲ್ಲ ಚೆನ್ನಾಗಿ ವಿಲೀನಗೊಂಡಾಗ ಇದಕ್ಕೆ ಹುರಿದ ತೆಂಗು ಸೇರಿಸಿ ಬಾಡಿಸಿ. ಆಮೇಲೆ ಮಸೆದ ಖೋವಾ ಹಾಕಿ ಕೆದಕಬೇಕು. ಕೇಸರಿ, ಏಲಕ್ಕಿ ಹಾಕಿ ಕೆದಕುತ್ತಾ ಹಾಲು ಬೆರೆಸಿಕೊಳ್ಳಿ. ನಂತರ ಇದಕ್ಕೆ ಬಾದಾಮಿ ಚೂರು ಸೇರಿಸಿ ಎಲ್ಲವೂ ಹದನಾಗಿ ಗಟ್ಟಿಯಾಗುವಂತೆ ಕೆದಕಿ ಕೆಳಗಿಳಿಸಿ. ನಂತರ ಬೇಕಾದ ಆಕಾರದ ಅಚ್ಚುಗಳಿಗೆ ತುಪ್ಪ ಸವರಿ, ಅದರಲ್ಲಿ ಈ ಮಿಶ್ರಣ ತುಂಬಿಸಿ, ಫ್ರಿಜ್ ನಲ್ಲಿರಿಸಿ 1-2 ಗಂಟೆ ಕಾಲ ಸೆಟ್ ಆಗಲು ಬಿಡಿ. ನಂತರ ಹೊರತೆಗೆದು, ಚಿಕ್ಕದಾಗಿ ಕತ್ತರಿಸಿ, ಚಿತ್ರದಲ್ಲಿರುವಂತೆ ಬಾದಾಮಿಯಿಂದ ಅಲಂಕರಿಸಿ ಸವಿಯಲು ಕೊಡಿ.
ರವೆ ಕೋಕೋನಟ್ ಬರ್ಫಿ
ಸಾಮಗ್ರಿ : 1 ಕಪ್ ಸಣ್ಣ ರವೆ, 1 ದೊಡ್ಡ ತೆಂಗಿನಕಾಯಿಯ ತುರಿ, 2 ಕಪ್ ಹಾಲು, 1-1 ಕಪ್ ಸಕ್ಕರೆ, ತುಪ್ಪ, ತುಸು ಏಲಕ್ಕಿಪುಡಿ, ರುಚಿಗೆ ತಕ್ಕಷ್ಟು ಡ್ರೈ ಫ್ರೂಟ್ಸ್ ಚೂರು.
ವಿಧಾನ : ಬಾಣಲೆಯಲ್ಲಿ ಮೊದಲು ತುಸು ತುಪ್ಪ ಬಿಸಿ ಮಾಡಿಕೊಂಡು ಡ್ರೈ ಫ್ರೂಟ್ಸ್ ಚೂರು ಹಾಕಿ ಕರಿದು ತೆಗೆಯಿರಿ. ಇದಕ್ಕೆ ಇನ್ನಷ್ಟು ತುಪ್ಪ, ರವೆ ಹಾಕಿ ಮಂದ ಉರಿಯಲ್ಲಿ ಹದನಾಗಿ ಹುರಿಯಿರಿ. ಆಮೇಲೆ ಇದಕ್ಕೆ ತೆಂಗಿನ ತುರಿ ಹಾಕಿ ಬಾಡಿಸಬೇಕು. 5-6 ನಿಮಿಷಗಳ ನಂತರ ಕೆಳಗಿಳಿಸಿ ಆರಲು ಬಿಡಿ. ಇನ್ನೊಂದು ಬಾಣಲೆಯಲ್ಲಿ ಹಾಲು ಕಾಯಿಸಿ. ಮಂದ ಉರಿ ಮಾಡಿ ಚೆನ್ನಾಗಿ ಕುದಿಯಲು ಬಿಡಿ. ಇದು ಚೆನ್ನಾಗಿ ಕುದ್ದು ಅರ್ಧದಷ್ಟಾದಾಗ, ರವೆ ಮಿಶ್ರಣವನ್ನು ಇದಕ್ಕೆ ಸೇರಿಸಿ ನಿಧಾನವಾಗಿ ಕೆದಕಬೇಕು. ತುಪ್ಪ ಹಾಕುತ್ತಾ, ತಳ ಹಿಡಿಯದಂತೆ ನೋಡಿಕೊಳ್ಳಿ. ಹಾಲು ಹಿಂಗಿದೆ ಎನಿಸಿದಾಗ, ಇದಕ್ಕೆ ಸಕ್ಕರೆ, ಏಲಕ್ಕಿ, ಇನ್ನಷ್ಟು ತುಪ್ಪ ಬೆರೆಸುತ್ತಾ ಚೆನ್ನಾಗಿ ಬೆರೆತುಕೊಳ್ಳುವಂತೆ ಕೈಯಾಡಿಸಿ, ಮೈಸೂರುಪಾಕಿನ ಹದಕ್ಕೆ ಬಂದಾಗ ಇಳಿಸಿಬಿಡಿ. ಒಂದು ಅಗಲ ಟ್ರೇನಲ್ಲಿ ತುಪ್ಪ ಸವರಿಕೊಂಡು, ಅದರಲ್ಲಿ ಈ ಮಿಶ್ರಣ ಹರಡಿ ಆರಲು ಬಿಡಿ. ನಂತರ 1 ಗಂಟೆ ಕಾಲ ಫ್ರಿಜ್ ನಲ್ಲಿಟ್ಟು ಸೆಟ್ ಆಗಲು ಬಿಡಿ. ಹೊರಗೆ ತೆಗೆದ ನಂತರ ಚೌಕಾಕಾರವಾಗಿ ಕತ್ತರಿಸಿ, ಚಿತ್ರದಲ್ಲಿರುವಂತೆ ಇನ್ನಷ್ಟು ಡ್ರೈ ಫ್ರೂಟ್ಸ್ ಉದುರಿಸಿ ಸವಿಯಲು ಕೊಡಿ.
ಗುಲಾಬ್ ಜಾಮೂನು
ಪಾಕಕ್ಕಾಗಿ ಸಾಮಗ್ರಿ : 1 ಕಪ್ ಸಕ್ಕರೆ, 1 ಕಪ್ ನೀರು, ತುಸು ಏಲಕ್ಕಿ ಪುಡಿ, ನಿಂಬೆರಸ, ಗುಲಾಬಿ ಜಲ.
ಜಾಮೂನಿಗಾಗಿ ಸಾಮಗ್ರಿ : ಅರ್ಧ ಕಪ್ ಜರಡಿಯಾಡಿದ ಮೈದಾ, 1 ಕಪ್ ಹಾಲಿನ ಪುಡಿ, 2-3 ಚಮಚ ರವೆ, 2 ಚಿಟಕಿ ಬೇಕಿಂಗ್ ಸೋಡ, ಅರ್ಧ ಸೌಟು ತುಪ್ಪ, 4 ಚಮಚ ಮೊಸರು, 5-6 ಚಮಚ ಹಾಲು.
ಇತರ ಸಾಮಗ್ರಿ : ಕರಿಯಲು ರೀಫೈಂಡ್ ಎಣ್ಣೆ, ಅಲಂಕರಿಸಲು ಒಂದಿಷ್ಟು ಡ್ರೈ ಫ್ರೂಟ್ಸ್ ಚೂರು.
ವಿಧಾನ : ಒಂದು ಸ್ಟೀಲ್ ಪಾತ್ರೆಯಲ್ಲಿ ನೀರು ಬಿಸಿ ಮಾಡಿ, ಇದಕ್ಕೆ ಸಕ್ಕರೆ ಹಾಕಿ ಕರಗುವಂತೆ ಮಾಡಿ. ನಂತರ ಏಲಕ್ಕಿ ಪುಡಿ ಹಾಕಿ, ಪಾಕ ಅಂಟಂಟು ಆಗದಂತೆ ಕೈ ಆಡಿಸುತ್ತಿರಿ. ನಂತರ ನಿಂಬೆರಸ ಬೆರೆಸಿ ಕದಡಿ ಕೆಳಗಿಳಿಸಿ ಬಿಡಿ. ಗುಲಾಬಿ ಜಲ ಸಹ ಬೆರೆಸಿರಿ. ಈಗ ಜಾಮೂನಿಗಾಗಿ ಒಂದು ಬೇಸನ್ನಿಗೆ ಅದರ ಎಲ್ಲಾ ಸಾಮಗ್ರಿ ಸೇರಿಸಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಲು, ಮೊಸರು ಬೆರೆಸಿ ಮೃದು ಪೂರಿ ಹಿಟ್ಟಿನಂತೆ ಕಲಸಿಕೊಳ್ಳಿ. ಆಮೇಲೆ ತುಪ್ಪ ಹಾಕಿ ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. ನಂತರ ಇದರಿಂದ ನಿಂಬೆಗಿಂತ ಸಣ್ಣ ಗಾತ್ರದ ಉಂಡೆ ಮಾಡಿಕೊಂಡು, ಕಾದ ಎಣ್ಣೆಯಲ್ಲಿ ಕರಿಯಿರಿ. ಆಮೇಲೆ ಇದನ್ನು ನೇರವಾಗಿ ಪಾಕಕ್ಕೆ ಹಾಕಿ, ಇಡೀ ರಾತ್ರಿ ನೆನೆಯಲು ಬಿಡಿ. ಮಾರನೇ ಬೆಳಗ್ಗೆ ಇದರ ಮೇಲೆ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಉದುರಿಸಿ ಸವಿಯಲು ಕೊಡಿ.
ಖೋವಾ ಲಡ್ಡು
ಸಾಮಗ್ರಿ : 1 ಕಪ್ ಮಸೆದ ಹಸಿ ಖೋವಾ, ಅರ್ಧರ್ಧ ಕಪ್ ಪುಡಿ ಸಕ್ಕರೆ, ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಚೂರು (ಒಟ್ಟಾರೆ), ಅರ್ಧ ಸೌಟು ತುಪ್ಪ, 1 ಗಿಟುಕು ತೆಂಗಿನ ತುರಿ, ಒಂದಿಷ್ಟು ಪಿಸ್ತಾ ಚೂರು.
ವಿಧಾನ : ಒಂದು ನಾನ್ ಸ್ಟಿಕ್ ಪ್ಯಾನಿನಲ್ಲಿ ತುಪ್ಪ ಬಿಸಿ ಮಾಡಿ. ಇದಕ್ಕೆ ಖೋವಾ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಸಕ್ಕರೆ ಬೆರೆಸಿ ಬೇಗ ಬೇಗ ಕೈಯಾಡಿಸಿ ತಕ್ಷಣ ಕೆಳಗಿಳಿಸಿ, ಚೆನ್ನಾಗಿ ಆರಲು ಬಿಡಿ. ನಂತರ ಇದರಿಂದ ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಜಿಡ್ಡು ಸವರಿದ ಅಂಗೈ ಮೇಲೆ ಇದನ್ನು ತುಸು ಅಳ್ಳಕವಾಗಿ ಒತ್ತಿಕೊಂಡು, ನಡುವೆ ತುಸು ಡ್ರೈ ಫ್ರೂಟ್ಸ್ ತುಂಬಿಸಿ, ಮತ್ತೆ ಒತ್ತಿ ಗುಂಡಗಾಗಿಸಿ. ನಂತರ ಇದನ್ನು ತೆಂಗಿನ ತುರಿಯಲ್ಲಿ ಹೊರಳಿಸಿ, ಇದರ ಮೇಲೆ ಪಿಸ್ತಾ ಉದುರಿಸಿ, 2 ಗಂಟೆ ಕಾಲ ಸೆಟ್ ಆಗಲು ಫ್ರಿಜ್ ನಲ್ಲಿರಿಸಿ, ನಂತರ ಸವಿಯಲು ಕೊಡಿ.
ಕ್ಯಾರಾಮೆಲ್ ಕಸ್ಟರ್ಡ್
ಸಾಮಗ್ರಿ : ಅರ್ಧ ಕಪ್ ಸಕ್ಕರೆ, 3 ಮೊಟ್ಟೆ, ಅರ್ಧ ಕಪ್ ನೀರು, ತುಸು ವೆನಿಲಾ ಎಸೆನ್ಸ್, ತೇದ ಜಾಯಿಕಾಯಿ ರಸ, ಪುದೀನಾ ಎಲೆ, 2 ಕಪ್ ಕಾದಾರಿದ ಹಾಲು.
ವಿಧಾನ : ಒಂದು ಓವನ್ ಪ್ರೂಫ್ ಡಿಶ್ಶಿಗೆ ಸಕ್ಕರೆ ಹಾಕಿ, ಬಿಸಿ ಓವನ್ನಿನಲ್ಲಿರಿಸಿ ಹೊಂಬಣ್ಣ ಬರುವಂತೆ ಕರಗಿಸಿ. ನಂತರ ಈ ಸಿರಪ್ ನ್ನು 4 ಮೋಲ್ಡ್ ಗೆ ಹಾಕಿ, ಓವನ್ನಿನಲ್ಲಿರಿಸಿ 10 ನಿಮಿಷ ಹಾರ್ಡ್ ಆಗಲು ಇರಿಸಿಬಿಡಿ. ಒಂದು ಬಟ್ಟಲಿಗೆ ಮೊಟ್ಟೆ ವೆನಿಲಾ, ಜಾಯಿಕಾಯಿ ರಸ ಹಾಕಿ ಚೆನ್ನಾಗಿ ಬ್ಲೆಂಡ್ ಮಾಡಿ. ಇದನ್ನು ಸೋಸಿಕೊಂಡು ರೆಡಿಯಾದ ಮೋಲ್ಡ್ ಗಳಿಗೆ ಮುಕ್ಕಾಲು ಭಾಗ ತುಂಬಿಸಿ, ನಂತರ ಓವನ್ನಿನಲ್ಲಿರಿಸಿ. ಮೋಲ್ಡ್ಸ್ ಇರಿಸುವಾಗ ಅದರ ಪ್ಯಾನಿನಲ್ಲಿ ಬಿಸಿ ನೀರು ತುಂಬಿರಬೇಕು. ಇದನ್ನು ಹದನಾಗಿ ಬೇಕ್ ಮಾಡಿ ಹೊರ ತೆಗೆದು ನೋಡಿ. ಪೋರ್ಕ್ ನಿಂದ ಚುಚ್ಚಿದಾಗ ಅದು ಸಲೀಸಾಗಿ ಒಳಗಿಳಿಯುವಂತಿರಬೇಕು. ನಂತರ ಸ್ಪಾಟುಲಾ ಸಹಾಯದಿಂದ ಈ ಕಸ್ಟರ್ಡ್ಸ್ ನ್ನು ಅಂಚಿನಿಂದ ಜೋಪಾನವಾಗಿ ಹೊರತೆಗೆಯಿರಿ. ಮೊಲ್ಡ್ಸ್ ಮೇಲೆ ಪ್ಲೇಟ್ ಇರಿಸಿ, ಅದರ ಮೇಲೆ ಡಿಶ್ ಬೋರಲು ಹಾಕಿ. ಈಗ ರೆಡಿ ಇರುವ ಕ್ಯಾರಾಮೇಲ್ ಸಿರಪ್ ನ್ನು ಚಿತ್ರದಲ್ಲಿರುವಂತೆ ಇದರ ಮೇಲೆ ಹರಡಿ, ಪುದೀನಾದಿಂದ ಅಲಂಕರಿಸಿ.