ಸಾಮಗ್ರಿ :  3-4 ರಸಭರಿತ ಹೇರಳೆಕಾಯಿ, ರುಚಿಗೆ ತಕ್ಕಷ್ಟು ಕಲ್ಲುಪ್ಪು, ಖಾರ, ಉದ್ದಕ್ಕೆ ಸೀಳಿದ ಹಸಿ ಮೆಣಸು, ಒಗ್ಗರಣೆಗೆ ಬೇಕಾದಂತೆ ಸಾಸುವೆ, ಜೀರಿಗೆ, ಸೋಂಪು, ಮೆಂತ್ಯ, ಅರಿಶಿನ, ಅರ್ಧ ಸೌಟು ಎಳ್ಳೆಣ್ಣೆ.

ವಿಧಾನ : ಹೇರಳೆಕಾಯಿ ಒರೆಸಿಕೊಂಡು, ಕೈಗೆ ತುಸು ಎಣ್ಣೆ ಸವರಿಕೊಂಡು (ಲೇಶ ಮಾತ್ರ ಎಲ್ಲೂ ನೀರು ತಗುಲಬಾರದು) ಇದನ್ನು ಸಣ್ಣ ಹೋಳುಗಳಾಗಿ ಹೆಚ್ಚಿಕೊಳ್ಳಿ. ನೀಟಾಗಿ ಒರೆಸಿ, ಬಿಸಿಲಲ್ಲಿ ಕಾಯಿಸಿದ ಬಾಟಲಿಗೆ ಇದನ್ನು ತುಂಬಿಸಿ, ಮೇಲೆ ಅರ್ಧ ಹಿಡಿ ಉಪ್ಪು, ಹಸಿ ಮೆಣಸು ಹಾಕಿ 1 ವಾರ ಬಿಡಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ಉಳಿದೆಲ್ಲ ಮಸಾಲೆ ಸೇರಿಸಿ, ಕೆದಕಿ ಕೆಳಗಿಳಿಸಿ ಆರಿಸಿ. ನಂತರ ಬಾಟಲಿಯ ಕಾಯಿಯನ್ನು ಇದಕ್ಕೆ ಬೆರೆಸಿ ಕಲಸಿಕೊಳ್ಳಿ. ಮತ್ತೆ ಬಾಟಲಿಗೆ ತುಂಬಿಸಿ, 1 ವಾರ ಬಿಟ್ಟು ನಂತರ ಬಳಸಲು ಆರಂಭಿಸಿ. ಇದು 1 ವರ್ಷವಾದರೂ ಕೆಡುವುದಿಲ್ಲ. ಪ್ರತಿ ಸಲ ತೆಗೆಯುವಾಗಲೂ, ತೇವಾಂಶ ಇಲ್ಲದ ಮರದ ಸೌಟಿನಿಂದ ಹೋಳನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಳಸಿಕೊಳ್ಳಿ.

Cookry-2

ಪಾಲಕ್ಪಕೋಡ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 1 ಕಂತೆ ಪಾಲಕ್‌ ಸೊಪ್ಪು, 2 ಈರುಳ್ಳಿ, ಜಜ್ಜಿದ 8-10 ಎಸಳು ಬೆಳ್ಳುಳ್ಳಿ, 4-5 ಹಸಿ ಮೆಣಸು, 1 ತುಂಡು ಹಸಿಶುಂಠಿ, ಕರಿಬೇವು, ಪುದೀನಾ, ಕೊ.ಸೊಪ್ಪು, ಉಪ್ಪು, ಖಾರ, ಓಮ, ಕರಿಯಲು ಎಣ್ಣೆ.

ವಿಧಾನ : ಒಂದು ಬೇಸನ್ನಿಗೆ ಮೇಲಿನ ಎಲ್ಲಾ ಸಾಮಗ್ರಿ ಬೆರೆಸಿಕೊಂಡು, ಅಗತ್ಯವಿದ್ದಷ್ಟು ನೀರು ಸೇರಿಸಿ, ಪಕೋಡ ಮಿಶ್ರಣದ ಹದಕ್ಕೆ ಕಲಸಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಇದನ್ನು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಹಾಕುತ್ತಾ, ಹೊಂಬಣ್ಣ ಬರುವಂತೆ ಗರಿಗರಿಯಾಗಿ ಪಕೋಡ ಕರಿದು, ಟೊಮೇಟೊ ಸಾಸ್‌, ಬಿಸಿ ಬಿಸಿ ಕಾಫಿ/ಟೀ ಜೊತೆ ಸವಿಯಿರಿ.

Cookry-3

ಟೇಸ್ಟಿ ಭುರ್ಜಿ

ಸಾಮಗ್ರಿ : 1 ಕಪ್‌ ಕಡಲೆಹಿಟ್ಟು, ಸಣ್ಣಗೆ ಹೆಚ್ಚಿದ 2-3 ಈರುಳ್ಳಿ, 5-6 ಎಸಳು ಬೆಳ್ಳುಳ್ಳಿ, 2 ಹುಳಿ ಟೊಮೇಟೊ, ತಲಾ 2-2 ಚಮಚ 3 ಬಗೆಯ ಕ್ಯಾಪ್ಸಿಕಂ, ಅರ್ಧ ಕಪ್‌ ಹಸಿ ಬಟಾಣಿ, 1 ತುಂಡು ಶುಂಠಿ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಅರಿಶಿನ, ಛೋಲೆ ಮಸಾಲೆ, ಗರಂಮಸಾಲೆ, ಧನಿಯಾಪುಡಿ, ಒಂದಿಷ್ಟು ಕೊ.ಸೊಪ್ಪು.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಒಗ್ಗರಣೆ ಕೊಡಿ. ನಂತರ ಹೆಚ್ಚಿದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಹಾಕಿ ಬಾಡಿಸಿ. ಆಮೇಲೆ 3 ಬಗೆಯ ಕ್ಯಾಪ್ಸಿಕಂ, ಬಟಾಣಿ, ಟೊಮೇಟೋ ಹಾಕಿ ಬಾಡಿಸಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೈಯಾಡಿಸಿ. ಕಡಲೆಹಿಟ್ಟಿಗೆ ತುಸು ನೀರು ಬೆರೆಸಿ, ಬೋಂಡ ಮಿಶ್ರಣದಂತೆ ಗಟ್ಟಿ ಕಲಸಿಕೊಳ್ಳಿ. ಇದನ್ನು ನೇರವಾಗಿ ಬಾಣಲೆಗೆ ಹಾಕಿ, ಮಂದ ಉರಿಯಲ್ಲಿ ಬೇಗ ಬೇಗ ಕೈಯಾಡಿಸಿ. 3-4 ನಿಮಿಷ ಬಿಟ್ಟು ಕೆಳಗಿಳಿಸಿ, ಕೊ.ಸೊಪ್ಪು ಉದುರಿಸಿ, ನಿಂಬೆ ಹಣ್ಣು ಹಿಂಡಿಕೊಂಡು ಸವಿಯಲು ಕೊಡಿ. ಇದನ್ನು ಸ್ಟಾರ್ಟರ್‌ ಆಗಿಯೂ ಬಳಸಿಕೊಳ್ಳಬಹುದು.

Cookry-4

ಮಲ್ಟಿಗ್ರೇನ್ಪಾಲಕ್ಟಾರ್ಟ್

ಸಾಮಗ್ರಿ : ಗೋಧಿಹಿಟ್ಟು, ಮೈದಾ, ಜೋಳದ ಹಿಟ್ಟು, ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ, ಬೇಯಿಸಿ ಮಸೆದ ಪಾಲಕ್‌ ಸೊಪ್ಪು, ಟೊಮೇಟೊ ಪೇಸ್ಟ್, ತುರಿದ ಪನೀರ್‌, ಚೀಸ್‌ (ತಲಾ ಅರ್ಧರ್ಧ ಕಪ್‌), ರುಚಿಗೆ ತಕ್ಕಷ್ಟು ಉಪ್ಪು ಖಾರ, ಹಸಿ ಮೆಣಸಿನ ಪೇಸ್ಟ್, ತುಪ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು, ಪುದೀನಾ.

ವಿಧಾನ : ಎಲ್ಲಾ ಹಿಟ್ಟು ಬೆರೆಸಿ ನೀಟಾಗಿ ಜರಡಿಯಾಡಿ ಇದಕ್ಕೆ ತುಸು ನೀರು, ಉಪ್ಪು ಬೆರೆಸಿ ಮೃದು ಪೂರಿ ಮಿಶ್ರಣದಂತೆ ಕಲಸಿ, ಬೆಣ್ಣೆ ಹಾಕಿ ನಾದಿ, ನೆನೆಯಲು ಬಿಡಿ. ಒಂದು ಬಾಣಲೆಯಲ್ಲಿ ಉಳಿದ ಬೆಣ್ಣೆ ಬಿಸಿ ಮಾಡಿ, ಅದಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಬಾಡಿಸಿ. ನಂತರ ಹಸಿ ಮೆಣಸು, ಟೊಮೇಟೋ ಪೇಸ್ಟ್ ಹಾಕಿ ಕೆದಕಬೇಕು. ನಂತರ ಪಾಲಕ್‌ ಪೇಸ್ಟ್ ಹಾಕಿ ಕೆದಕಿರಿ. ನಂತರ ಪಕ್ಕದ ಒಲೆಯಲ್ಲಿ ಅರ್ಧ ಸೌಟು ತುಪ್ಪದಲ್ಲಿ ಕರಿದ ಪನೀರ್‌ ತುಂಡುಗಳನ್ನು ಇದಕ್ಕೆ ಹಾಕಿ ಕೈಯಾಡಿಸಿ. ಇದನ್ನು ಕೆಳಗಿಳಿಸಿ ನಿಂಬೆ ರಸ, ಹೆಚ್ಚಿದ ಸೊಪ್ಪು ಬೆರೆಸಿ. ಕಲಸಿದ ಮಿಶ್ರಣದಿಂದ ದಪ್ಪ ಚಪಾತಿ ಲಟ್ಟಿಸಿ ಟಾರ್ಟ್‌ ಅಚ್ಚಿನಲ್ಲಿರಿಸಿ ಚಿತ್ರದಲ್ಲಿರುವಂತೆ ಆಕಾರ ಕೊಡಿ. ಇದನ್ನು ಚೆನ್ನಾಗಿ ಬೆಣ್ಣೆ ತುಪ್ಪದಿಂದ ಎಲ್ಲಾ ಕಡೆ ಸವರಿ, 1800 ಶಾಖದಲ್ಲಿ 10 ನಿಮಿಷ ಬೇಕ್ ಮಾಡಿ. ನಂತರ ಪಾಲಕ್‌ ಮಿಶ್ರಣ ತುಂಬಿಸಿ, ತುರಿದ ಚೀಸ್‌ ಹಾಕಿ ಮತ್ತೆ 6-7 ನಿಮಿಷ ಬೇಕ್‌ ಮಾಡಿ, ಬಿಸಿ ಬಿಸಿಯಾಗಿ ಸವಿಯಿರಿ.

Cookry-5

ರವೆ ಪರೋಟ

ಸಾಮಗ್ರಿ :  1-1 ಕಪ್‌ ರವೆ, ಮಲ್ಟಿಗ್ರೇನ್‌ ಆಟಾ, ಹೆಚ್ಚಿದ ಮೆಂತೆಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹಸಿ ಮೆಣಸಿನ ಪೇಸ್ಟ್, ಮೊಸರು, ಎಣ್ಣೆ, ಬೆಣ್ಣೆ.

ವಿಧಾನ : ರವೆ, ಮಲ್ಟಿಗ್ರೇನ್‌ ಆಟಾ, ಹೆಚ್ಚಿದ ಸೊಪ್ಪು, ಉಳಿದೆಲ್ಲ ಸಾಮಗ್ರಿ ಬೆರೆಸಿ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಇದಕ್ಕೆ ಬೆಣ್ಣೆ ಹಾಕಿ ನಾದಿಕೊಂಡು, 1-2 ಗಂಟೆ ನೆನೆಯಲು ಬಿಡಿ. ನಂತರ ಸಣ್ಣ ಉಂಡೆಗಳಾಗಿಸಿ, ತವಾ ಮೇಲೆ ಹಾಕಿ ಎಣ್ಣೆ ಬಿಡುತ್ತಾ ಎರಡೂ ಬಿದಿ ಬೇಯಿಸಿ. ಬಿಸಿ ಬಿಸಿಯಾಗಿ ಟೊಮೇಟೊ ಗೊಜ್ಜು, ಸಲಾಡ್‌ ಜೊತೆ ಸವಿಯಲು ಕೊಡಿ.

Cookry-6

ಚಿಲೀ ಬೇಸನ್ವೆಜ್

ಸಾಮಗ್ರಿ : 1-1 ಕಪ್‌ ಕಡಲೆಹಿಟ್ಟು (ಬೇಸನ್‌), ಹೆಚ್ಚಿದ ಪಾಲಕ್‌ ಸೊಪ್ಪು, 4-5 ಚಮಚ ಟೊಮೇಟೊ ಪೇಸ್ಟ್, 1-2 ಹಸಿ ಮೆಣಸು, 3 ಬಗೆಯ ಕ್ಯಾಪ್ಸಿಕಂ (ತಲಾ 4-5 ಚಮಚ), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಪನೀರ್‌ ಮಸಾಲ, ಅರಿಶಿನ, ಧನಿಯಾಪುಡಿ, ಗರಂಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಎಣ್ಣೆ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಬೇಸನ್‌ ಗೆ ತುಸು ಉಪ್ಪು, ಖಾರ ಹಾಕಿ ನೀರು ಚಿಮುಕಿಸಿ ಚಪಾತಿ ಮಿಶ್ರಣದಂತೆ ಕಲಸಿಡಿ. ಎಣ್ಣೆ ಬೆರೆಸಿ ನಾದಿ, ನೆನೆದ ನಂತರ ಸಣ್ಣ ತುಂಡುಗಳಾಗಿಸಿ ಬಿಸಿ ನೀರಲ್ಲಿ ಬೇಯಿಸಿ. ಬೆಂದಾದ ಮೇಲೆ ಇದನ್ನು ಒಂದು ಟ್ರೇಗೆ ಹರಡಿ ಆರಲು ಬಿಡಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕ್ಯಾಪ್ಸಿಕಂ ಬಾಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಪೇಸ್ಟ್, ಹಸಿ ಮೆಣಸಿನ ಪೇಸ್ಟ್ ಹಾಕಿ ಕೆದಕಬೇಕು. ನಂತರ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಿ ಮಂದ ಉರಿಯಲ್ಲಿ ಎಲ್ಲಾ ಬೆರೆತುಕೊಳ್ಳುವಂತೆ ಮಾಡಿ ಕೊನೆಯಲ್ಲಿ ಬೆಂದ ಬೇಸನ್‌ ತುಂಡು, ಕೊ.ಸೊಪ್ಪು ಉದುರಿಸಿ ಕೆದಕಿ ಕೆಳಗಿಳಿಸಿ ಇದನ್ನು ಬಿಸಿ ಚಪಾತಿ ಜೊತೆ ಸವಿಯಲು ಕೊಡಿ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ