ಸಾಮಗ್ರಿ : 1 ಕಪ್ ಜೋಳದ ಹಿಟ್ಟು, ಅರ್ಧ ಕಪ್ ಮೈದಾ, 1-2 ಬೇಯಿಸಿ ಮಸೆದ ಆಲೂ, 2-3 ಹೆಚ್ಚಿದ ಈರುಳ್ಳಿ, 1-2 ಟೊಮೇಟೊ. 3-4 ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಹುಳಿ ಮೊಸರು, ಪುದೀನಾ ಚಟ್ನಿ, ಶುಂಠಿ ಪುಡಿ, ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ.
ವಿಧಾನ : 2 ಬಗ್ಗೆ ಹಿಟ್ಟು, ಉಪ್ಪು ಸೇರಿಸಿ ಜರಡಿಯಾಡಿ ಇದಕ್ಕೆ ನೀರು ಬೆರೆಸಿ ಮೃದುವಾಗಿ ಕಲಸಿಡಿ. ಎಣ್ಣೆ ಬೆರೆಸಿ ಚೆನ್ನಾಗಿ ನಾದಿಕೊಂಡು 1-2 ಗಂಟೆ ಕಾಲ ನೆನೆಯಲು ಬಿಡಿ. ಇದನ್ನು ತೆಳುವಾಗಿ ಲಟ್ಟಿಸಿ, ತ್ರಿಕೋನಾಕಾರದಲ್ಲಿ ಕತ್ತರಿಸಿ ಕರಿಯಿರಿ. ಇದನ್ನು ಟ್ರೇನಲ್ಲಿ ಹರಡಿಕೊಂಡು ಇದರ ಮೇಲೆ ಹೆಚ್ಚಿದ ಎಲ್ಲಾ ಪದಾರ್ಥ ಹಾಗೂ ಉಳಿದೆಲ್ಲವನ್ನೂ ಬೆರೆಸಿಕೊಂಡು ಚಿತ್ರದಲ್ಲಿರುವಂತೆ ರೆಡಿ ಮಾಡಿ, ಊಟಕ್ಕೆ ಮೊದಲು ಸವಿಯಲು ಕೊಡಿ.
ಸಾಬೂದಾಣಿ ಫ್ರೂಟ್ ಬೌಲ್
ಸಾಮಗ್ರಿ : ಅರ್ಧರ್ಧ ಕಪ್ ಸಬ್ಬಕ್ಕಿ, ತೆಂಗಿನ ಹಾಲು, ಕಂಡೆನ್ಸ್ಡ್ ಮಿಲ್ಕ್, ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ, ಡ್ರೈ ಫ್ರೂಟ್ಸ್ ಚೂರು (ಒಟ್ಟಾರೆ ಅರ್ಧ ಕಪ್), ಒಂದಷ್ಟು ಮಿಶ್ರ ಹಣ್ಣುಗಳ ತುಂಡುಗಳು.
ವಿಧಾನ : ಸಬ್ಬಕ್ಕಿಯನ್ನು ಸ್ವಲ್ಪ ಹೊತ್ತು ನೀರಲ್ಲಿ ನೆನೆಸಿ, ನಂತರ ಹಾಲಲ್ಲಿ ಬೇಯಿಸಿ. ಇದನ್ನು ಬಟ್ಟಲಿಗೆ ಹಾಕಿಟ್ಟು, ಒಂದು ಬಾಣಲೆಯಲ್ಲಿ ಕಂಡೆನ್ಸ್ಡ್ ಮಿಲ್ಕ್, ತೆಂಗಿನ ಹಾಲು ಬೆರೆಸಿ ಮಂದ ಉರಿಯಲ್ಲಿ ಕುದಿಸಿರಿ. ನಂತರ ಇದಕ್ಕೆ ಬೆಂದ ಸಬ್ಬಕ್ಕಿ, ಪುಡಿ ಮಾಡಿದ ಕಲ್ಲುಸಕ್ಕರೆ ಹಾಕಿ 2-3 ನಿಮಿಷ ಚೆನ್ನಾಗಿ ಮರಳಿಸಿ ಕೆಳಗಿಳಿಸಿ, ತುಪ್ಪದಲ್ಲಿ ಹುರಿದ ಡ್ರೈಫ್ರೂಟ್ಸ್ ಹಾಗೂ ಹಣ್ಣಿನ ಹೋಳು ಬೆರೆಸಿ ತಕ್ಷಣ ಸವಿಯಲು ಕೊಡಿ.
ಅವಲಕ್ಕಿ ವೆಜ್ ಬಾಲ್ಸ್
ಸಾಮಗ್ರಿ : 1 ಕಪ್ ಪೇಪರ್ ಅವಲಕ್ಕಿ, ಅರ್ಧ ಕಪ್ ನಷ್ಟು 3 ಬಗೆ ಕ್ಯಾಪ್ಸಿಕಂ ಹೋಳು, 1-2 ತುರಿದ ಕ್ಯಾರೆಟ್, 4 ಚಮಚ ತೆಂಗಿನ ತುರಿ, 1-2 ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಹುಳಿ ಮೊಸರು, ಒಗ್ಗರಣೆ ಸಾಮಗ್ರಿ, ಎಣ್ಣೆ, ಕರಿಬೇವು.
ವಿಧಾನ : ಮೊದಲು ಅವಲಕ್ಕಿಯನ್ನು ತೊಳೆದು, ಸ್ಟೀಲ್ ಜರಡಿಯಲ್ಲಿ ಸೋಸಿಕೊಳ್ಳಿ. ಇದನ್ನು ಒಂದು ಬೇಸನ್ನಿಗೆ ಹರಡಿ. ಹೆಚ್ಚಿಕೊಂಡ ಮೇಲಿನ ಎಲ್ಲಾ ಪದಾರ್ಥ ಹಾಕಿ ಮಿಶ್ರಣ ಕಲಸಿ, ಸಣ್ಣ ನಿಂಬೆ ಗಾತ್ರದ ಉಂಡೆ ಮಾಡಿ. ಇವನ್ನು ಇಡ್ಲಿ ಪಾತ್ರೆಯಲ್ಲಿ 10-12 ನಿಮಿಷ ಹಬೆಯಲ್ಲಿ ಬೇಯಿಸಿ. ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಇಂಗು, ಕರಿಬೇವಿನ ಸಮೇತ ಒಗ್ಗರಣೆ ಕೊಡಿ. ಅದರಲ್ಲಿ ಈ ಬಾಲ್ಸ್ ಹಾಕಿ 7-8 ನಿಮಿಷ ಒಡೆಯದಂತೆ ಎಚ್ಚರಿಕೆಯಿಂದ ಕೆದಕಿ ಕೆಳಗಿಳಿಸಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿಯಾಗಿ ಸವಿಯಲು ಕೊಡಿ.
ಕಾಲಿಫ್ಲವರ್ ಕಟ್ ಲೆಟ್
ಸಾಮಗ್ರಿ : 1-1 ಕಪ್ ಅನ್ನ, ತುರಿದ ಹಸಿ ಹೂಕೋಸು, ಅರ್ಧ ಕಪ್ ಬಾದಾಮಿ ಪೇಸ್ಟ್, 1-2 ಈರುಳ್ಳಿ, ಹೆಚ್ಚಿದ ತುಸು ಶುಂಠಿ, ಹಸಿಮೆಣಸು, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ.
ವಿಧಾನ : ಮೊದಲು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಎಲ್ಲಾ ಪದಾರ್ಥ, ಹೂಕೋಸಿನ ತುರಿ ಹಾಕಿ ಬಾಡಿಸಿ. ಇದನ್ನು ಕೆಳಗಿಳಿಸಿಕೊಂಡು, ಉಪ್ಪು, ನಿಂಬೆರಸ ಬೆರೆಸಿ ಚೆನ್ನಾಗಿ ಕಿವುಚಿದ ಅನ್ನಕ್ಕೆ ಇದನ್ನೆಲ್ಲ ಬೆರೆಸಿಕೊಂಡು, ಉಂಡೆ ಮಾಡಿ. ಜಿಡ್ಡು ಸವರಿದ ಅಂಗೈಗೆ ಕಟ್ ಲೆಟ್ ಆಕಾರದಲ್ಲಿ ತಟ್ಟಿಕೊಂಡು, ಅಳ್ಳಕವಾದ ಬಾಣಲೆಗೆ ಹಾಕಿ, ಎಣ್ಣೆ ಬಿಡುತ್ತಾ ಶ್ಯಾಲೋ ಫ್ರೈ ಮಾಡಿ. ಚಿತ್ರದಲ್ಲಿರುವಂತೆ ಅಲಂಕರಿಸಿ, ಟೊಮೇಟೊ ಸಾಸ್ ಜೊತೆ ಸವಿಯಲು ಕೊಡಿ.
ಸ್ಪೆಷಲ್ ಬೋಂಡಾ ಸೂಪ್
ಸಾಮಗ್ರಿ : 1 ಕಪ್ ಅಕ್ಕಿ, 3-4 ಹಸಿ ಮೆಣಸು, 1 ಕಪ್ ತುರಿದ ಹೂಕೋಸು, 2 ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಅರಿಶಿನ, ಹಸಿ ಶುಂಠಿ, ಜೀರಿಗೆ, ಧನಿಯಾ ಪುಡಿ, ಗರಂಮಸಾಲ, ಹೆಚ್ಚಿದ ಕೊ.ಸೊಪ್ಪು, ಕರಿಯಲು ಎಣ್ಣೆ, ತುಸು ತುಪ್ಪ.
ವಿಧಾನ : ಮೊದಲು 1 ಗಂಟೆ ಕಾಲ ಅಕ್ಕಿ ನೆನೆಸಿ ನುಣ್ಣಗೆ ಪೇಸ್ಟ್ ಮಾಡಿ. ನಂತರ ಇದಕ್ಕೆ ಹೆಚ್ಚಿದ ಶುಂಠಿ, ಹಸಿ ಮೆಣಸು, ಹೂಕೋಸು, ಉಪ್ಪು, ಇಂಗು ಸೇರಿಸಿ ಚೆನ್ನಾಗಿ ಕಲಸಿಕೊಂಡು, ಕಾದ ಎಣ್ಣೆಯಲ್ಲಿ ಸ್ವಲ್ಪವೇ ಮಿಶ್ರಣ ಹಾಕುತ್ತಾ ಬೋಂಡ ತಯಾರಿಸಿ. ನಂತರ ಅದೇ ಬಾಣಲೆಯಲ್ಲಿ ತುಸು ಎಣ್ಣೆ ಉಳಿಸಿಕೊಂಡು, ಇದಕ್ಕೆ ತುಪ್ಪ ಹಾಕಿ ಇಂಗಿನ ಸಮೇತ ಎಲ್ಲಾ ಮಸಾಲೆ ಪದಾರ್ಥ ಹಾಕಿ ಕೈಯಾಡಿಸಿ. ನಂತರ ಇದಕ್ಕೆ ಟೊಮೇಟೊ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಅರ್ಧ ಕಪ್ ನೀರು ಬೆರೆಸಿ, ಗ್ರೇವಿ ಕುದಿಸಿರಿ. ಇದಕ್ಕೆ ಬೋಂಡ ತೇಲಿಬಿಟ್ಟು, 8-10 ನಿಮಿಷ ಕುದಿಸಿ ಕೆಳಗಿಳಿಸಿ. ಕೊ.ಸೊಪ್ಪು ಉದುರಿಸಿ, ಬಿಸಿಯಾಗಿ ಸವಿಯಿರಿ.
ಪಾಲಕ್ ಸೊಪ್ಪಿನ ಕಟ್ ಲೆಟ್
ಸಾಮಗ್ರಿ : 2 ಕಪ್ ಹೆಚ್ಚಿದ ಪಾಲಕ್ ಸೊಪ್ಪು, ತುಸು ಹೆಚ್ಚಿದ ಹಸಿ ಮೆಣಸು, ಹಸಿ ಶುಂಠಿ, ಕರಿಬೇವು, ಕೊ.ಸೊಪ್ಪು, ಪುದೀನಾ, 3-4 ಬ್ರೆಡ್ ಸ್ಲೈಸ್, ಅರ್ಧರ್ಧ ಕಪ್ ಮಸೆದ ಪನೀರ್, ಬೆಣ್ಣೆ, ರುಚಿಗೆ ಉಪ್ಪು, ಖಾರ, 1 ಕಪ್ ಕಡಲೆಹಿಟ್ಟು, ಅರ್ಧ ಸೌಟು ರೀಫೈಂಡ್ ಎಣ್ಣೆ.
ವಿಧಾನ : ಪಾಲಕ್ ಸೊಪ್ಪನ್ನು ಬ್ಲಾಂಚ್ ಮಾಡಿಕೊಳ್ಳಿ. ಇದಕ್ಕೆ ನೀರಲ್ಲಿ ಕಿವುಚಿದ ಬ್ರೆಡ್ ಜೊತೆ ಮೇಲಿನ ಎಲ್ಲಾ ಪದಾರ್ಥ ಹಾಕಿ ಮಿಶ್ರಣ ಕಲಸಿಡಿ. ಇದರಿಂದ ಉಂಡೆ ಕಟ್ಟಿ ಕಟ್ ಲೆಟ್ ಆಕಾರದಲ್ಲಿ ತಟ್ಟಿಕೊಂಡು ಅಳ್ಳಕವಾದ ತವಾ ಮೇಲೆ, ಎಣ್ಣೆ ಬಿಡುತ್ತಾ ಶ್ಯಾಲೋ ಫ್ರೈ ಮಾಡಿ. ಬಿಸಿಯಾಗಿ ಸಲಾಡ್, ಸಾಸ್ ಜೊತೆ ಸವಿಯಿರಿ.
ಬೇಸನ್ ಟಿಕ್ಕಿ
ಸಾಮಗ್ರಿ : 2 ಕಪ್ ಬೇಸನ್ (ಕಡಲೆಹಿಟ್ಟು), ಅರ್ಧ ಕಪ್ ಜೋಳದ ಹಿಟ್ಟು, ಅರ್ಧರ್ಧ ಕಪ್ ತುಪ್ಪ, ತುರಿದ ಪನೀರ್, ತುಸು ಹೆಚ್ಚಿದ ಹಸಿ ಮೆಣಸು, ಶುಂಠಿ, ಕೊ.ಸೊಪ್ಪು, ಕರಿಬೇವು, ಪುದೀನಾ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ನಿಂಬೆರಸ, ಕರಿಯಲು ಎಣ್ಣೆ.
ವಿಧಾನ : ಮೊದಲು ಎರಡೂ ಬಗೆಯ ಹಿಟ್ಟು ಬೆರೆಸಿ ಜರಡಿಯಾಡಿ. ಇದಕ್ಕೆ ಉಪ್ಪು, ತುಪ್ಪ ಹಾಕಿ ಚಪಾತಿ ಹಿಟ್ಟಿನಂತೆ ಮಿಶ್ರಣ ಕಲಸಿಡಿ. ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ಳಿ. ನಂತರ ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ, ಕುದಿವ ನೀರಿಗೆ ಹಾಕಿ, 8-10 ನಿಮಿಷ ಬೇಯಿಸಿ. ನಂತರ ನೀರಿನಿಂದ ಬೇರ್ಪಡಿಸಿ, ಚೆನ್ನಾಗಿ ಮಸೆದು, ಮತ್ತೆ ಉಂಡೆ ಕಟ್ಟಿ. ತುರಿದ ಪನೀರ್ ಗೆ ಉಳಿದ ಮಸಾಲೆ, ಉಪ್ಪು, ಖಾರ, ನಿಂಬೆರಸ ಬೆರೆಸಿ ಮಿಶ್ರಣ ಕಲಸಿಡಿ. ಪ್ರತಿ ಉಂಡೆಗೂ ಇದನ್ನು ತುಸು ತುಂಬಿಸಿ, ಚಿತ್ರದಲ್ಲಿರುವಂತೆ ತುಸು ಚಪ್ಪಟೆ ಮಾಡಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಟೊಮೇಟೊ ಸಾಸ್ ಜೊತೆ ಇದನ್ನು ಸವಿಯಲು ಕೊಡಿ.
ರೆವಿಯೋಲಿ ಸೂಪ್
ಸಾಮಗ್ರಿ : 1 ಈರುಳ್ಳಿ, 4-5 ಎಸಳು ಬೆಳ್ಳುಳ್ಳಿ, 3-4 ಹುಳಿ ಟೊಮೇಟೊ, 2-3 ಚಮಚ ಸ್ವೀಟ್ ಕಾರ್ನ್, 8-10 ಹೆಚ್ಚಿದ ಬೀನ್ಸ್, ಹೆಚ್ಚಿದ 3 ಬಗೆ ಕ್ಯಾಪ್ಸಿಕಂ (ತಲಾ 2-2), ಅರ್ಧರ್ಧ ಸೌಟು ಬೆಣ್ಣೆ, ಮೈದಾ, ತುರಿದ ಪನೀರ್, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು.
ವಿಧಾನ : ಮೊದಲು ಮೈದಾಗೆ ಉಪ್ಪು, ಮೆಣಸು ಸೇರಿಸಿ ಮೃದು ಪೂರಿ ಹಿಟ್ಟಿನಂತೆ ಕಲಸಿಡಿ. ಇದಕ್ಕೆ ಬೆಣ್ಣೆ ಸೇರಿಸಿ ನಾದಿಕೊಂಡು 1-2 ಗಂಟೆ ಬಿಡಿ. ನಂತರ ಉಂಡೆ ಮಾಡಿ, ಲಟ್ಟಿಸಿ, ಮಧ್ಯೆ ಪನೀರ್ ತುಂಬಿಸಿ, ಮತ್ತೆ ಲಟ್ಟಿಸಿ. ಹೀಗೆ ಚೌಕಾಕಾರದ ಪೂರಿಯನ್ನು ಕುದಿ ನೀರಿಗೆ ಹಾಕಿ ಬೇಯಿಸಿ. ಇದುವೇ ರಾವಿಯೋಲಿ! ಪಕ್ಕದ ಒಲೆಯಲ್ಲಿ ಸಣ್ಣ ಕುಕ್ಕರ್ ನಲ್ಲಿ ಬೆಣ್ಣೆ ಕಾಯಿಸಿ ಹೆಚ್ಚಿದ ಎಲ್ಲಾ ಪದಾರ್ಥ, ಕಾರ್ನ್, ಬೀನ್ಸ್ ಹಾಕಿ ಬಾಡಿಸಿ, 1 ಸೀಟಿ ಬರುವಂತೆ ಬೇಯಿಸಿ. ಆಮೇಲೆ ಸೋಸಿಕೊಂಡು ಈರುಳ್ಳಿ, ಬೆಳ್ಳುಳ್ಳಿ, ಟೊಮೇಟೊ ಮಾತ್ರ ಪೇಸ್ಟ್ ಮಾಡಿ. ಮತ್ತೆ ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ರುಬ್ಬಿದ ಮಿಶ್ರಣ, ಬೆಂದ ತರಕಾರಿ ಎಲ್ಲಾ ಹಾಕಿ ಮಂದ ಉರಿಯಲ್ಲಿ ಕುದಿಸಬೇಕು. ಇದಕ್ಕೆ ಉಪ್ಪು, ಮೆಣಸು, ತುಸು ನೀರು ಬೆರೆಸಿ 2-3 ನಿಮಿಷ ಕುದಿಸಿರಿ. ನಂತರ ಇದಕ್ಕೆ ರಾವಿಯೋಲಿ ಸೇರಿಸಿ ಮತ್ತೆ 2 ನಿಮಿಷ ಕುದಿಸಿ, ಕೆಳಗಿಳಿಸಿ. ಬಿಸಿ ಬಿಸಿ ಸೂಪ್ ಸವಿಯಲು ರೆಡಿ!
ಸಿಹಿಗೆಣಸಿನ ಸೂಪ್
ಸಾಮಗ್ರಿ : 2 ದೊಡ್ಡ ಗಾತ್ರದ ಸಿಹಿಗೆಣಸು, ತಲಾ 2-2 ಚಮಚ ಹೆಚ್ಚಿದ 3 ಬಗೆಯ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಕಾರ್ನ್ ಫ್ಲೋರ್, ದಾಲ್ಚಿನ್ನಿ ಪುಡಿ, 5-6 ಸಣ್ಣ ತುಂಡು ಪನೀರ್, ಅರ್ಧ ಸೌಟು ಬೆಣ್ಣೆ, ಸಕ್ಕರೆ.
ವಿಧಾನ : 1 ಸಿಹಿಗೆಣಸನ್ನು ಶುಚಿಗೊಳಿಸಿ ಸಣ್ಣ ಬಿಲ್ಲೆಗಳಾಗಿಸಿ. ಮತ್ತೊಂದನ್ನು ಇಡಿಯಾಗಿ ಬೇಯಿಸಿ, ಮಸೆದಿಡಿ. ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ. 3 ಬಗೆ ಕ್ಯಾಪ್ಸಿಕಂ, ಗೆಣಸಿನ ಬಿಲ್ಲೆ ಹಾಕಿ ಬಾಡಿಸಿ. ಇದಕ್ಕೆ ಉಪ್ಪು, ಮೆಣಸು, 1 ಕಪ್ ನೀರು ಬೆರೆಸಿ ಕುದಿಸಿರಿ. ಗೆಣಸು ಬೆಂದಾಗ ಇದಕ್ಕೆ ಪನೀರ್ ತುಂಡು, ಸಕ್ಕರೆ, ಮಸೆದ ಗೆಣಸು ಸೇರಿಸಿ. ಮೇಲೆ ದಾಲ್ಚಿನ್ನಿ ಪುಡಿ, ಬಿಸಿ ನೀರಲ್ಲಿ ಕದಡಿದ ಕಾರ್ನ್ ಪ್ಲೋರ್ ಹಾಕಿ ಸೂಪ್ ಕುದಿಸಿರಿ. ಕೆಳಗಿಳಿಸಿ ಕೊ.ಸೊಪ್ಪು ಉದುರಿಸಿ, ನಿಂಬೆಹಣ್ಣು ಹಿಂಡಿಕೊಂಡು ಸವಿಯಲು ಕೊಡಿ.