ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಭೋದಿಸಿದರು. ಈ ಸಂದರ್ಭ ನಿರ್ಗಮಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಜರಿದ್ದರು.
ಜಗದೀಪ್ ಧನಕರ್ ರಾಜೀನಾಮೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9 ರಂದು ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಎದುರಾಳಿ ಮಾಜಿ ನ್ಯಾಯಮೂರ್ತಿ ಬಿ ಸುದರ್ಶನ್ ರೆಡ್ಡಿ ವಿರುದ್ದ ಸಿಪಿ ರಾಧಾಕೃಷ್ಣನ್ ಗೆಲುವು ಸಾಧಿಸಿದ್ದರು. ಬಿ ಸುದರ್ಶನ್ ಅವರು 300 ಮತಗಳನ್ನು ಪಡೆದರೆ, ಸಿಪಿ ರಾಧಾಕೃಷ್ಣನ್ 452 ಮತಗಳು ಪಡೆದು ಗೆಲುವು ಸಾಧಿಸಿದ್ದರು.ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಒಡಿಸ್ಸಾ ಸಿಎಂ ಮೋಹನ್ ಚರಣ್ ಮಾಂಝಿ, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದು ಶುಭ ಹಾರೈಸಿದರು.
ಸಿ.ಪಿ ರಾಧಾಕೃಷ್ಣನ್ ಅವರ ಪೂರ್ಣ ಹೆಸರು, ಚಂದ್ರಾಪುರಂ ಪೊನ್ನುಸಾಮಿ ರಾಧಾಕೃಷ್ಣನ್. ತಮಿಳುನಾಡು ಮೂಲದ ಇವರು ತಿರುಪುರದಲ್ಲಿ ಅಕ್ಟೋಬರ್ 20, 1957ರಲ್ಲಿ ಜನಿಸಿದರು. 16ನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ಜನಸಂಘದೊಂದಿಗೆ ಗುರುತಿಸಿಕೊಂಡು ರಾಜಕೀಯ ಜೀವನ ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ರಾಧಾಕೃಷ್ಣನ್ ಬಿಜೆಪಿ ಸೇರಿದರು.
1996 ರಲ್ಲಿ ತಮಿಳುನಾಡಿನ ಬಿಜೆಪಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. 1998 ಮತ್ತು 1999 ರಲ್ಲಿ ಕೊಯಮತ್ತೂರು ಲೋಕಸಭಾ ಸದಸ್ಯರಾಗಿ (MP) ಆಯ್ಕೆಯಾದರು. 2003 ರಿಂದ 2006 ರವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಫೆಬ್ರವರಿ 18, 2023 ರಿಂದ ಜುಲೈ 30, 2024 ರವರೆಗೆ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಈ ಅವಧಿಯಲ್ಲಿ (ಮಾರ್ಚ್ 2024 ರಿಂದ ಜುಲೈ/ಆಗಸ್ಟ್ 2024 ರವರೆಗೆ) ತೆಲಂಗಾಣ ಮತ್ತು ಪುದುಚೇರಿಗೆ ಹೆಚ್ಚುವರಿ ಉಸ್ತುವಾರಿ ಹೊಂದಿದ್ದರು.