ಸಾಮಗ್ರಿ : 4-5 ಬರ್ಗರ್‌ ಬನ್‌, ಬೇಯಿಸಿ ಮಸೆದ 3 ಆಲೂ, ಅರ್ಧ ಕಪ್‌ ಹುರಿದ ಕಡಲೆಬೀಜ, ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹುಳಿಸಿಹಿ ಚಟ್ನಿ, ಪುದೀನಾ ಚಟ್ನಿ, ಒಗ್ಗರಣೆಗೆ ಸಾಸುವೆ, ಜೀರಿಗೆ, ಸೋಂಪು, ಇಂಗು, ಅರಿಶಿನ, ಅಲಂಕರಿಸಲು ಒಂದಿಷ್ಟು ಕೊ.ಸೊಪ್ಪು, ಮಿಕ್ಸ್ ಚರ್‌, ಖಾರಾಬೂಂದಿ.

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ ಅದಕ್ಕೆ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ನಂತರ ಇದಕ್ಕೆ ಬೆಳ್ಳುಳ್ಳಿ-ಶುಂಠಿ ಪೇಸ್ಟ್ ಹಾಕಿ ಮಂದ ಉರಿಯಲ್ಲಿ ಕೆದಕಬೇಕು. ಆಮೇಲೆ ಉಪ್ಪು, ಖಾರ, ಉಳಿದ ಮಸಾಲೆ ಸೇರಿಸಬೇಕು. ಆಮೇಲೆ ಮಸೆದ ಆಲೂ ಸೇರಿಸಿ ಕೈಯಾಡಿಸಿ ಕೆಳಗಿಳಿಸಿ. ನಂತರ ಗುಂಡಗೆ ಬರ್ಗರ್‌ ಬನ್‌ ಕತ್ತರಿಸಿ, ಬೆಣ್ಣೆ ಸವರಿ ಲೈಟಾಗಿ ಬಿಸಿ ಮಾಡಿ, ಇದರ ಒಂದು ಬದಿಗೆ ಹುಳಿ ಸಿಹಿ ಚಟ್ನಿ ಹಾಕಿ ಮತ್ತೊಂದು ಬದಿಗೆ ಪುದೀನಾ ಚಟ್ನಿ ಸವರಿ, ಎರಡರ ಮಧ್ಯೆ ಆಲೂ ಮಿಶ್ರಣ, ಕಡಲೆಬೀಜ ಬರುವಂತೆ ಸ್ಯಾಂಡ್‌ ವಿಚ್‌ ಮಾಡಿ. ನಂತರ ಚಿತ್ರದಲ್ಲಿರುವಂತೆ ಅಲಂಕರಿಸಿ, ಬಿಸಿ ಬಿಸಿ ಟೀ, ಕಾಫಿ ಜೊತೆ ಸವಿಯಲು ಕೊಡಿ.

KHICHADI

ಸ್ಪೆಷಲ್ ಖಿಚಡಿ

ಸಾಮಗ್ರಿ : 1 ಕಪ್‌ ಅಕ್ಕಿ, ಅರ್ಧ ಕಪ್‌ ಹೆಸರುಬೇಳೆ, ಅರ್ಧ ಸೌಟು ತುಪ್ಪ, ತುಸು ಜೀರಿಗೆ, ಸೋಂಪು, ಕಾಳು ಮೆಣಸು, ಚಕ್ಕೆ, ಲವಂಗ, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಇಂಗು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಒಂದಿಷ್ಟು ಹೆಚ್ಚಿದ ಈರುಳ್ಳಿ, ಟೊಮೇಟೊ, ಕ್ಯಾಪ್ಸಿಕಂ, ಆಲೂ, ಕ್ಯಾರೆಟ್‌, ಹಸಿ ಬಟಾಣಿ, ಕೊ.ಸೊಪ್ಪು.

ವಿಧಾನ : ಮೊದಲು ಅಕ್ಕಿಯನ್ನು ಅರ್ಧ ಗಂಟೆ ನೆನೆಹಾಕಿ. ಕುಕ್ಕರಿನಲ್ಲಿ ತುಪ್ಪ ಬಿಸಿ ಮಾಡಿ, ಹೆಸರುಬೇಳೆ ಹಾಕಿ ಘಮ್ಮೆನ್ನುವಂತೆ ಹುರಿದು ತೆಗೆಯಿರಿ. ನಂತರ ಇನ್ನಷ್ಟು ತುಪ್ಪ ಹಾಕಿ ಒಗ್ಗರಣೆ ಕೊಡಿ. ಆನಂತರ ಹೆಚ್ಚಿದ ಈರುಳ್ಳಿ ಹಾಗೂ ಒಂದೊಂದಾಗಿ ಇತರ ಎಲ್ಲಾ ತರಕಾರಿ, ಟೊಮೇಟೊ ಹಾಕಿ ಬಾಡಿಸಬೇಕು. ಆಮೇಲೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ಉಳಿದ ಮಸಾಲೆ ಹಾಕಿ ಕೆದಕಿ, ಅಕ್ಕಿಬೇಳೆ ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಧಾರಾಳ ನೀರು ಬೆರೆಸಿ (ಮಿಶ್ರಣ ಉದುರುದುರು ಬೇಡ) ಮುಚ್ಚಳ ಮುಚ್ಚಿರಿಸಿ 3 ಸೀಟಿ ಕೂಗಿಸಿ. ಬಿಸಿ ಇರುವಾಗಲೇ ಇದನ್ನು ಈರುಳ್ಳಿ, ಟೊಮೇಟೊ ರಾಯ್ತಾ ಜೊತೆ ಸವಿಯಿರಿ.

kadhi

ಸ್ಪೆಷಲ್ ಮಜ್ಜಿಗೆಹುಳಿ

ಸಾಮಗ್ರಿ : 2 ಕಪ್‌ ಹುಳಿ ಮೊಸರು, 1 ಕಪ್‌ ಕಡಲೆಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು, ಖಾರ, ಒಗ್ಗರಣೆಗೆ ಜೀರಿಗೆ, ಸೋಂಪು, ಸಾಸುವೆ, ಕರಿಬೇವು, ತುಂಡರಿಸಿದ ಬಾಳಕ (ಮಜ್ಜಿಗೆ ಮೆಣಸಿನಕಾಯಿ), ಇಂಗು, ತುಸು ತುಪ್ಪ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಮೊದಲು ಕಡೆದ ಮೊಸರಿಗೆ ಎಡಗೈಯಿಂದ ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟು ಸೇರಿಸುತ್ತಾ, ಬಲಗೈಯಿಂದ ಚೆನ್ನಾಗಿ ಕದಡಿಕೊಳ್ಳಿ. ನಂತರ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಒಗ್ಗರಣೆ ಕೊಡಿ. ಇದಕ್ಕೆ ಬಾಳಕ, ಉಪ್ಪು, ಖಾರ, ಅರಿಶಿನ ಎಲ್ಲಾ ಸೇರಿಸಿ ಕೆದಕಬೇಕು. ನಂತರ ಮೊಸರಿನ ಮಿಶ್ರಣ ಬೆರೆಸಿ ಕೈಯಾಡಿಸುತ್ತಾ ಕುದಿಸಿ ಕೆಳಗಿಳಿಸಿ. ಬಿಸಿ ಬಿಸಿ ಅನ್ನಕ್ಕೆ ಈ ಮಜ್ಜಿಗೆ ಹುಳಿಯೊಂದಿಗೆ ಆಗ ತಾನೇ ಕರಿದ ಹಪ್ಪಳ ಸಂಡಿಗೆ ಜೊತೆ ಸವಿಯಲು ಕೊಡಿ.

BHAKRI

ಸ್ಪೆಷಲ್ ಭಾಕರೀ

ಸಾಮಗ್ರಿ : 2 ಕಪ್‌ ಜೋಳದ ಹಿಟ್ಟು, ತುಸು ಕಾದಾರಿದ ಹಾಲು, ಉಪ್ಪು, ತುಪ್ಪ.

ವಿಧಾನ : ಒಂದು ಬೇಸನ್ನಿಗೆ ಜೋಳದ ಹಿಟ್ಟು, ಉಪ್ಪು ಹಾಕಿ ಕಲಸಬೇಕು. ಇದಕ್ಕೆ ಸ್ವಲ್ಪ ಸ್ವಲ್ಪವಾಗಿ ಹಾಲು ಬೆರೆಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣ ಕಲಸಿಡಿ. ಇದಕ್ಕೆ ಧಾರಾಳ ತುಪ್ಪ ಬೆರೆಸಿ, ಚೆನ್ನಾಗಿ ನಾದಿಕೊಂಡು ನೆನೆಯಲು ಬಿಡಿ. 1 ತಾಸಿನ ನಂತರ ಮತ್ತೆ ತುಪ್ಪ ಹಾಕಿ ನಾದಿಕೊಂಡ ಮೇಲೆ, ಇದರಿಂದ ಸಣ್ಣ ಉಂಡೆಗಳಾಗಿಸಿ, ಲಟ್ಟಿಸುತ್ತಾ, ಇದರ ಮೇಲೆ ತುಪ್ಪ ಸವರಿ, ತುಸು ಹಿಟ್ಟು ಉದುರಿಸಿ ನೀಟಾಗಿ ಬರುವಂತೆ ಲಟ್ಟಿಸಿ. ಅಭ್ಯಾಸವಿದ್ದರೆ ಬಡಿದು ಬಡಿದೂ ತೆಳು ಚಪಾತಿ ಆಗಿಸಬಹುದು. ನಂತರ ಎಂದಿನಂತೆ ಚಪಾತಿಗೆ ಮಾಡುವ ಹಾಗೆ, ಎರಡೂ ಕಡೆ ತುಪ್ಪ ಹಾಕಿ ಬೇಯಿಸಬೇಕು. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು ಗಟ್ಟಿ ಮೊಸರು, ಸಲಾಡ್‌, ಆಲೂ ಪಲ್ಯ ಯಾ ಟೊಮೇಟೊ ಗೊಜ್ಜಿನೊಂದಿಗೆ ಸವಿಯಿರಿ.

PURI

ಸ್ಪೆಷಲ್ ಪೂರಿ

ಸಾಮಗ್ರಿ : 1-1 ಕಪ್‌ ಗೋಧಿಹಿಟ್ಟು ಮೈದಾಹಿಟ್ಟು, ಹಿಟ್ಟು ಕಲಸಲು ಹುಳಿ ಮೊಸರು, ಉಪ್ಪು, ಖಾರ, ಓಮ, ಕರಿಯಲು ಎಣ್ಣೆ, ತುಪ್ಪ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿ ಸೇರಿಸಿ ನೀಟಾಗಿ ಮೃದುವಾದ ಪೂರಿ ಹಿಟ್ಟಿನ ಮಿಶ್ರಣ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಳ್ಳಿ. 12 ಗಂಟೆ ಕಾಲ ನೆನೆಯಲು ಬಿಡಿ. ನಂತರ ಇದಕ್ಕೆ ಮತ್ತೆ ತುಪ್ಪ ಬೆರೆಸಿ ನಾದಿಕೊಳ್ಳಿ. ಇದರಿಂದ ಸಣ್ಣ ಉಂಡೆ ಮಾಡಿ, ನೀಟಾಗಿ ಪೂರಿ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಬಿಸಿ ಬಿಸಿಯಾದ ಇವನ್ನು ಮಿಶ್ರ ತರಕಾರಿ ಸಾಗು ಜೊತೆ ಸವಿಯಲು ಕೊಡಿ.

Bajri-ki-roti

ಮಲ್ಟಿಗ್ರೇನ್ಆಟಾ ರೊಟ್ಟಿ

ಸಾಮಗ್ರಿ : ಗೋಧಿಹಿಟ್ಟು, ಮೈದಾ, ರಾಗಿ ಹಿಟ್ಟು, ಜೋಳದ ಹಿಟ್ಟು, ಕಡಲೆಹಿಟ್ಟು, ಅಕ್ಕಿಹಿಟ್ಟು, ನವಣೆ ಹಿಟ್ಟು (ತಲಾ ಅರ್ಧರ್ಧ ಕಪ್), ರುಚಿಗೆ ತಕ್ಕಷ್ಟು ಉಪ್ಪು, ಖಾರ, ಓಮ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ತುಪ್ಪ, ರೀಫೈಂಡ್‌ ಎಣ್ಣೆ.

ವಿಧಾನ : ಮೇಲಿನ ಎಲ್ಲಾ ಸಾಮಗ್ರಿಗೆ ಅಗತ್ಯವಿದ್ದಷ್ಟು ನೀರು ಬೆರೆಸಿ ಮೃದು ಚಪಾತಿ ಹಿಟ್ಟಿನ ಮಿಶ್ರಣ ಕಲಸಿ, ತುಪ್ಪ ಬೆರೆಸಿ ನಾದಿಕೊಂಡು 1-2 ಗಂಟೆ ಕಾಲ ಹಾಗೇ ಬಿಡಿ. ನಂತರ ಮತ್ತೆ ತುಪ್ಪ ಬೆರೆಸಿ ನಾದಿಕೊಂಡು ಸಣ್ಣ ಉಂಡೆಗಳಾಗಿಸಿ ಚಪಾತಿ ತಯಾರಿಸಿ. ಚಿತ್ರದಲ್ಲಿರುವಂತೆ ಸಲಾಡ್‌, ಪಲ್ಯ, ಉಪ್ಪಿನಕಾಯಿ, ಗಟ್ಟಿ ಮೊಸರಿನ ಜೊತೆ ಬಿಸಿಯಾಗಿ ಸವಿಯಲು ಕೊಡಿ.

dal-makhani-logo

ಸ್ಪೆಷಲ್ ದಾಲ್ ಮಖನಿ

ಮೂಲ ಸಾಮಗ್ರಿ : ತೊಗರಿಬೇಳೆ, ಹೆಸರುಬೇಳೆ, ಕಡಲೆಬೇಳೆ, ಉದ್ದಿನಬೇಳೆ (ತಲಾ ಅರ್ಧರ್ಧ ಕಪ್‌), 1 ಇಡೀ ಬೆಳ್ಳುಳ್ಳಿ ಗಡ್ಡೆಯ ಪೇಸ್ಟ್, ಅರ್ಧ ಸೌಟು ಬೆಣ್ಣೆ, ತುಸು ನೀರು.

ಮೊದಲ ಟೆಂಪರಿಂಗ್ಗೆ ಸಾಮಗ್ರಿ : ತುಸು ತುಪ್ಪ ಬೆಣ್ಣೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರ, ತುಸು ನೀರು.

ಅಲಂಕರಿಸಲು ಸಾಮಗ್ರಿ : 2-3 ಬೆಣ್ಣೆ ಕ್ಯೂಬ್ಸ್, 1 ಚಮಚ ಫ್ರೆಶ್‌ ಕ್ರೀಂ.

ವಿಧಾನ : 3-4 ಗಂಟೆ ಕಾಲ ಎಲ್ಲಾ ಬೇಳೆಗಳನ್ನೂ ಒಟ್ಟಿಗೆ ನೆನೆಹಾಕಿಡಿ. ಬೆಳ್ಳುಳ್ಳಿ ಗಡ್ಡೆಯ ಪೇಸ್ಟ್ ಗೆ ನೀರು ಬೆರೆಸಿ ತೆಳ್ಳಗಾಗಿಸಿ. ಇದನ್ನು ಬೇಳೆ ಜೊತೆ ಬೆರೆಸಿ ಕುಕ್ಕರಿನಲ್ಲಿ 4 ಸೀಟಿ ಬರುವಂತೆ ಹದನಾಗಿ ಬೇಯಿಸಿ. ನಂತರ ಇದಕ್ಕೆ ಬೆಣ್ಣೆ ಬೆರೆಸಿಕೊಳ್ಳಿ.

ಮೊದಲ ಟೆಂಪರಿಂಗ್ವಿಧಾನ : ಒಂದು ಬಾಣಲೆಯಲ್ಲಿ ತುಸು ತುಪ್ಪ ಬಿಸಿ ಮಾಡಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ನಂತರ ಟೊಮೇಟೊ ಪೇಸ್ಟ್ ಬೆರೆಸಿ ಮಂದ ಉರಿಯಲ್ಲಿ ಕೆದಕಬೇಕು. ಇದಕ್ಕೆ ಉಪ್ಪು, ಖಾರ ಹಾಕಿ ಕೆದಕಿರಿ. ನಂತರ ಬೆಣ್ಣೆ ಬೆರೆಸಿ ಕದಡಿಕೊಳ್ಳಿ. ಆಮೇಲೆ ಇದಕ್ಕೆ ಬೇಳೆ ಮಿಶ್ರಣ ಬೆರೆಸಿ, ಎಲ್ಲ ಬೆರೆತುಕೊಳ್ಳುವಂತೆ 2 ಕುದಿ ಬರಿಸಿ, ಒಲೆ ಆರಿಸಿ.

ಎರಡನೇ ಟೆಂಪರಿಂಗ್ವಿಧಾನ : ಮತ್ತೊಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಇದಕ್ಕೆ ಕಸೂರಿಮೇಥಿ, ಉಪ್ಪು, ಖಾರ, ತುಸು ನೀರು ಬೆರೆಸಿ ಕುದಿಸಿ. ನಂತರ ಬೆಣ್ಣೆ ಬೆರೆಸಿ. 1-2 ಕುದಿ ಬಂದಾಗ, ಮೊದಲ ಬೇಳೆ ಬಾಣಲೆಗೆ ಇದನ್ನು ರವಾನಿಸಿ, ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಈ ರೀತಿ ರೆಡಿ ಇರುವುದನ್ನು ಸರ್ವಿಂಗ್‌ ಡಿಶ್ಶಿಗೆ ರವಾನಿಸಿ. ಇದರ ಮೇಲೆ ಬೆಣ್ಣೆ ಕ್ಯೂಬ್ಸ್ ತೇಲಿಬಿಟ್ಟು, ಫ್ರೆಶ್‌ ಕ್ರೀಂನಿಂದ ಚಿತ್ರದಲ್ಲಿರುವಂತೆ ಅಲಂಕರಿಸಿ  ರೊಟ್ಟಿ ಜೊತೆ ಸವಿಯಿರಿ.

Speshal-Makhana

ಸ್ಪೆಷಲ್ ಮಖಾನೆ

ಸಾಮಗ್ರಿ : 2 ಕಪ್‌ ಮಖಾನೆ (ತಾವರೆಬೀಜ, ರೆಡಿಮೇಡ್‌ ಲಭ್ಯ), ಅರ್ಧ ಸೌಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಅರಿಶಿನ, ಉಪ್ಪಿನಕಾಯಿ ಮಸಾಲೆ (ನಿಮ್ಮ ಆಯ್ಕೆಯ ಉಪ್ಪಿನಕಾಯಿ).

ವಿಧಾನ : ಒಂದು ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ, ಅದಕ್ಕೆ ತಾವರೆಬೀಜ ಹಾಕಿ ಮಂದ ಉರಿಯಲ್ಲಿ ಘಮ್ಮೆನ್ನುವಂತೆ, ಬಣ್ಣ ತಿರುಗುವವರೆಗೂ ಹುರಿಯಿರಿ, ಸೀಯಬಾರದು. ಅದೇ ಬಾಣಲೆಯಲ್ಲಿ ಉಳಿದ ಎಣ್ಣೆ ಬಿಸಿ ಮಾಡಿ, ಉಳಿದೆಲ್ಲ ಸಾಮಗ್ರಿ ಸೇರಿಸಿ ಮಂದ ಉರಿಯಲ್ಲಿ ಕೆದಕಬೇಕು. ನಂತರ ಇದಕ್ಕೆ ಹುರಿದ ಮಖಾನೆ ಬೆರೆಸಿ, ಮತ್ತಷ್ಟು ಹೊತ್ತು ಕೈಯಾಡಿಸಿ. ಮಸಾಲೆ ಚೆನ್ನಾಗಿ ಬೆರೆತ ನಂತರ ಇದನ್ನು ಕೆಳಗಿಳಿಸಿ, ಸಂಜೆಯ ಕಾಫಿಟೀ ಜೊತೆ ಸವಿಯಲು ಕೊಡಿ. ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ ಬೇಕೆನಿಸಿದಾಗ ಸವಿಯಿರಿ.

tasty-Mashala-mandakki-recipe

ಟೇಸ್ಟಿ ಮಸಾಲೆ ಮಂಡಕ್ಕಿ

ಸಾಮಗ್ರಿ : 2 ಕಪ್‌ ಗರಿಗರಿ ಮಂಡಕ್ಕಿ/ಕಡಲೆಪುರಿ, ಅರ್ಧ ಕಪ್‌ ಕಡಲೆಬೀಜ, ಹುರಿಗಡಲೆ (ಪುಟಾಣಿ), 4 ಚಮಚ ಎಣ್ಣೆ, ಒಗ್ಗರಣೆಗೆ ಸಾಸುವೆ, ಜೀರಿಗೆ, ಕರಿಬೇವು ತುಂಡರಿಸಿದ ಒಣ ಮೆಣಸಿನಕಾಯಿ, ಕರಿಬೇವು, ಇಂಗು, ಖಾರಾಬೂಂದಿ, ಮಿಕ್ಸ್ ಚರ್‌, ತುಂಡರಿಸಿದ ಕೊಬ್ಬರಿ, ಬೆಳ್ಳುಳ್ಳಿ, ಅರಿಶಿನ.

ವಿಧಾನ : ಒಂದು ದೊಡ್ಡ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಒಗ್ಗರಣೆಯ ಒಂದೊಂದೇ ಪದಾರ್ಥ ಹಾಕಿ ಮಂದ ಉರಿಯಲ್ಲಿ ಕೈಯಾಡಿಸಿ. ಕೊನೆಯಲ್ಲಿ ಕಡಲೆಪುರಿ, ಕಡಲೆಬೀಜ, ಹುರಿಗಡಲೆ ಹಾಕಿ ಹದವಾಗಿ ಬಾಡಿಸಿ. ಇದನ್ನು ಕೆಳಗಿಳಿಸಿ, ನ್ಯೂಸ್‌ ಪೇಪರ್ ಮೇಲೆ ಹರಡಿ ಆರಲು ಬಿಡಿ. ನಂತರ ಗಾಳಿಯಾಡದ ಡಬ್ಬಕ್ಕೆ ತುಂಬಿರಿಸಿ ಬೇಕಾದಾಗ ಸವಿಯಿರಿ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ