ಗೋಪಿ : ಅರೇ ಅಂಜಲಿ…. ದಿನಾ ಮೆಟ್ರೋನಲ್ಲಿ ಮೀಟ್ ಮಾಡ್ತಾ ಇರ್ತೀನಿ, ನಿನಗೆ ನನ್ನ ಗುರುತು ಸಿಗಲಿಲ್ಲವೇ?
ಅಂಜಲಿ : ಇಲ್ಲವಲ್ಲ….? ಯಾರು ನೀನು?
ಗೋಪಿ : ಅದೇ, ನಿನ್ನೆಯೂ ಎಂ.ಜಿ. ರೋಡ್ ಸ್ಟೇಷನ್ ನಲ್ಲಿ ಇಳಿಯುವಾಗ ನಿನ್ನನ್ನು ಇದೇ ಮಾತನ್ನು ಕೇಳಿದ್ದೆನಲ್ಲ, ಅವನೇ ನಾನು…..!
ಜಪಾನೀ ವ್ಯಕ್ತಿ : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನೂ ಸಹ ಖಂಡಿತಾ ಆ ಕೆಲಸ ಮಾಡಬಲ್ಲೆ! ಅಕಸ್ಮಾತ್ ಬೇರೆ ಯಾರಿಂದಲೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ಆಗಲೂ ನಾನು ಅದನ್ನು ಮಾಡಿ ತೋರಿಸಬಲ್ಲೆ!
ನಮ್ಮವರು : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನು ಯಾಕ್ರಿ ಆ ಕೆಲಸ ಮಾಡಲಿ? ಬೇರೆ ಯಾರಿಗೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ನನ್ನಿಂದ ಸಾಧ್ಯ ಅಂತ ಹೇಗೆ ಅಂದುಕೊಂಡ್ರಿ?
ಮಗ : ಅಪ್ಪಾಜಿ, `ಚಿತ್ರಹಿಂಸೆ, ಪ್ರಾಣಹಿಂಸೆ’ ಅಂತಿರ್ತಾರಲ್ಲ…. ಹಾಗಂದ್ರೇನು….?
ತಂದೆ ಹರಳೆಣ್ಣೆ ಮುಖ ಮಾಡಿಕೊಂಡು ಪತ್ನಿಯ ಕಡೆ ನೋಡಿದರು, ಏನೂ ಮಾತನಾಡಲಾಗದ ಅಸಹಾಯಕತೆ ಅಲ್ಲಿ ವ್ಯಕ್ತವಾಗುತ್ತಿತ್ತು.
ಮಗ : ಗೊತ್ತಾಯ್ತು ಬಿಡಿ ಅಪ್ಪಾಜಿ….!
ಅಜ್ಜಿ ತಾತಾ ಜೋಡಿಯೊಂದು ಆಧುನಿಕ ಹೋಟೆಲ್ ಗೆ ಬಂದು ಏನೇನೋ ಒಂದಿಷ್ಟು ಆರ್ಡರ್ ಮಾಡಿದರು.
ಬಂದದ್ದು ಮಾತ್ರ ಮೂರೇ ಐಟಂ. ತಾತಾ ನಿಧಾನವಾಗಿ ಎಲ್ಲಾ ಐಟಂನಲ್ಲೂ ಚೂರು ಚೂರೇ ತೆಗೆದುಕೊಂಡು ತಿನ್ನುತ್ತಿದ್ದರು. ಅಜ್ಜಿ ಮಾತ್ರ ಏನೂ ತಿನ್ನದೇ ತಾತನನ್ನೇ ನೋಡುತ್ತಾ ಕುಳಿತಿದ್ದರು. ಇದನ್ನು ಕರುಣೆಯಿಂದ ನೋಡುತ್ತಾ ಅಕ್ಕಪಕ್ಕದ ಟೇಬಲ್ ನವರು, ಪಾಪ ಇವರಿಗೆ ಗತಿ ಇಲ್ಲ, ಹಾಗಾಗಿ ಒಬ್ಬರು ತಿನ್ನುವುದನ್ನು ಇನ್ನೊಬ್ಬರು ನೋಡುತ್ತಾ ಕುಳಿತಿದ್ದಾರೆ ಎನಿಸಿ, ವೆಯ್ಟರ್ ತಾನೇ ಪ್ರಾಮಾಣಿಕವಾಗಿ ಮುಂದೆ ಬಂದು, “ಅಜ್ಜಿ ಮೇಡಂ, ನಿಮಗೇನೂ ಬೇಸರವಿಲ್ಲ ಅಂದ್ರೆ, ನನ್ನ ಕಡೆಯಿಂದ ಇನ್ನೊಂದು ಸೆಟ್ ಊಟ ತಂದುಕೊಡ್ತೀನಿ. ನೀವು ಅದಕ್ಕೆ ಪೇ ಮಾಡಬೇಕಿಲ್ಲ,” ಎಂದು ವಿನಂತಿಸಿಕೊಂಡ.
ಅಜ್ಜಿ ಬೇಡ ಎಂದು ನಿರಾಕರಿಸಿದರು. ತಾತಾ ಸಹ ಏನೂ ಹೇಳಲಿಲ್ಲ. ವೆಯ್ಟರ್ ನಂತರ ಇತರರೂ ಅದನ್ನೇ ಪುನರಾವರ್ತಿಸಿ ಸೋತು ಸುಮ್ಮನಾದರು. ಅಂತೂ ಎಲ್ಲದರಲ್ಲೂ 4-5 ಸಲ ಕೈಯಾಡಿಸಿದ ತಾತಾ, ಕೈ ತೊಳೆದು ಸುಮ್ಮನಾದರು. ಆಗ ಅಜ್ಜಿ ಮುಖ ಪ್ರಸನ್ನವಾಯಿತು.
ವೆಯ್ಟರ್ ಮತ್ತೆ ಬಂದು ಕೇಳದ, “ಇದೇಕೆ ಅಜ್ಜಿ ಮೇಡಂ, ಯಾರು ಎಷ್ಟು ಬಲವಂತ ಮಾಡಿದ್ರೂ ಬೇಡ ಅಂತಿದ್ದೀರಾ?“ ಎಂದಾಗ, “ಪ್ರಶ್ನೆ ಇನ್ನೊಂದು ಪ್ಲೇಟ್ ಊಟ ತರಿಸುವುದಲ್ಲ, ನಮ್ಮಿಬ್ಬರ ಬಳಿ ಇರೋದೇ ಒಂದೇ ಹಲ್ಲಿನ ಸೆಟ್!” ಎಂದರು ಅಜ್ಜಿ. ಅಲ್ಲಿದ್ದವರೆಲ್ಲ ಮೂರ್ಛೆ ಹೋಗುವುದೊಂದೇ ಬಾಕಿ!
ಗುಂಡನಿಗೆ ಅತಿ ಕೀಟಲೆ ಸ್ವಭಾವ.
ಪುಟ್ನಂಜಿ : ಏನ್ರಿ ಇನ್ನೂ ಕಾರು ತೊಳೆಯುತ್ತಿದ್ದೀರಾ?
ಗುಂಡ : ಇಲ್ಲ ಕಣೇ! ಕಾರಿಗೆ ಒಸಿ ನೀರು ಹಾಕ್ತಾ ಇದ್ದೀನಿ, ಇನ್ನೂ ಕೆಲವು ದಿನಗಳಿಗೆ ಅದು ನೀರು ಕುಡಿದೂ ಕುಡಿದೂ ಬಸ್ಸಾಗಿಬಿಡುತ್ತೆ, ನೋಡ್ತಾ ಇರು!
ಕಿಟ್ಟಿ : ಲವ್ ಮ್ಯಾರೇಜ್ ಗೂ ಅರೇಂಜ್ಡ್ ಮ್ಯಾರೇಜ್ ಗೂ ಏನು ವ್ಯತ್ಯಾಸ?
ನಾಣಿ : ಅದೇ… ಆತ್ಯಹತ್ಯೆಗೂ ಕೊಲೆಗೂ ಇರುವಷ್ಟು ವ್ಯತ್ಯಾಸ!
ಒಮ್ಮೆ ಪುಟ್ನಂಜಿ ಅಡುಗೆಮನೆಯಲ್ಲಿ ಬಿಝಿ ಆಗಿರುವಾಗ, ಗುಂಡ ಏನೊಂದೂ ಸಹಾಯ ಮಾಡದೆ ಹಾಯಾಗಿ ಸೋಫಾದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದ. ಇವರ ಮಗ ಅಲ್ಲೇ ಕುಳಿತು ಕಾರ್ಟೂನ್ ನೋಡ್ತಿದ್ದ. ಯಾವುದೋ ಮೂಡ್ ನಲ್ಲಿ ಗುಂಡ ಹೆಂಡತಿಗೆ “ನೋಡೇ, ನನ್ನ DP ಚೇಂಜ್ ಮಾಡಬೇಕು. ಬಹಳ ದಿನಗಳಿಂದ ಒಂದೇ ಆಗಿಹೋಗಿ ಬಹಳ ಬೇಸರವಾಗಿದೆ!” ಎಂದ.
ಮೊಬೈಲ್ ತಂಟೆಗೆ ಹೆಚ್ಚು ಹೋಗದ ಅವಳು ಮುಗ್ಧಳಾಗಿ, “ DPನಾ…. ಹಾಗಂದ್ರೇನು?” ಎಂದಳು.
ಆಗ ಮಗರಾಯ, “ಅದೇ ಕಣಮ್ಮ…. DP ಅಂದ್ರೆ `ಧರ್ಮಪತ್ನಿ’ ಅಂತ! ಅಂದ್ರೆ ನೀನೇ ಕಣಮ್ಮ…..!”
ಚೇಂಜ್ ಶಬ್ದ ಒಂದೇ ಅರ್ಥ ಮಾಡಿಕೊಂಡಿದ್ದ ಅವಳಿಗೆ, ಮಗರಾಯನ ವಿವರಣೆ ಕೆಂಡಾಮಂಡಲ ಸಿಟ್ಟು ತರಿಸಿ, ಕೈಯಲ್ಲಿದ್ದ ಹಸಿಟ್ಟನ್ನು ತಂದು ಗಂಡನ ತಲೆ ಮೇಲೆ ಸುರಿಯುವುದೇ….?
ಮಹೇಶ : ಕಾಲ ಯಾವತ್ತೂ ಒಂದೇ ತರಹ ಇರಲ್ಲ ಗೊತ್ತಾ…?
ಗಿರೀಶ : ಅದು ಹೇಗೆ ಹೇಳ್ತೀಯಾ….?
ಮಹೇಶ : ಹಿಂದೆಲ್ಲ ಬ್ರಿಟಿಷರು ಠಾಕುಠೀಕಾಗಿ ವೈಟ್ ಡ್ರೆಸ್ ಯೂನಿಫಾರ್ಮ್ ಧರಿಸಿ ನಮ್ಮ ಮೇಲೆ ಜಬರ್ದಸ್ತು ಮಾಡುತ್ತಿದ್ದರು. ಈಗ ನೋಡು, ನಮಗೆ ಸೆಲ್ಯೂಟ್ ಹೊಡೆಯೋ ಕಾರ್ ಡ್ರೈವರ್, ಮದುವೆ ಮೆರವಣಿಗೆ ಬ್ಯಾಂಡ್ ಸೆಟ್ ನವರು ಅಂಥದ್ದೇ ಡ್ರೆಸ್ ಹಾಕಿಕೊಳ್ಳುವಂತಾಗಿದೆ!
ಪತಿ : ನೀನೇಕೆ ಸದಾ ಹೀಗೆ ಜಗಳ ಆಡ್ತೀಯಾ? ಯಾವಾಗಲೂ ನನ್ನ ಮಾತುಗಳಲ್ಲಿ ಏನಾದರೊಂದು ಕೊಂಕು ಕೊರತೆ ಹುಡುಕುತ್ತಾ ಖಂಡಿಸುತ್ತೀಯಲ್ಲ…. ಹೀಗೇಕೆ….?
ಪತ್ನಿ : ಅಸಲಿಗೆ ನಮ್ಮಿಬ್ಬರ ಮೊದಲ ಭೇಟಿ ಆಗಿದ್ದೇ ಕಾಲೇಜಿನ ವಾದ ವಿವಾದದ ಪೈಪೋಟಿಯಲ್ಲಲ್ಲವೇ? ಅದಕ್ಕೇ ಅದು ಅಭ್ಯಾಸವಾಗಿದೆ!
ಸತೀಶ : ಯಾರನ್ನಾದರೂ ವಾದದಲ್ಲಿ ಜಯಿಸಬಹುದೇ ಹೊರತು ಕಟ್ಟಿಕೊಂಡ ಹೆಂಡತಿಯನ್ನು ಖಂಡಿತಾ ಅಲ್ಲ!
ಸುರೇಶ : ಅದ್ಯಾಕೆ ಹಾಗಂತೀಯಾ? ಆ ಸಂದರ್ಭದಲ್ಲಿ ಮತ್ತೇನು ಮಾಡಬೇಕು ಅಂತೀಯಾ?
ಸತೀಶ : ಹೆಚ್ಚು ವಾದ ಮಾಡದೆ ತೆಪ್ಪಗೆ ಹಲ್ಲು ಕಿಸಿದು ಸುಮ್ಮನಾಗುವುದೇ ಲಾಭಕರ.
ಅವನ ಮಾತನ್ನು ನಂಬಿಕೊಂಡು ಸುರೇಶ ಹೆಂಡತಿ ವಾದಕ್ಕಿಳಿದಾಗ, ಏನೂ ಮಾತನಾಡದೆ ಪೆಕರು ಪೆಕರಾಗಿ ಹಲ್ಲು ಕಿಸಿದು ಸುಮ್ಮನಾಗಿದ್ದ.
ಇದನ್ನು ಕಂಡು ಆ ಮಹಾತಾಯಿಗೆ ಪಿತ್ತ ನೆತ್ತಿಗೇರಿತು. “ಓಹೋ…. ನನ್ನ ಮಾತು ಅಂದ್ರೆ ನಿಮಗೆ ಅಷ್ಟು ತಾತ್ಸಾರಾನಾ? ಹಲ್ಲು ಕಿಸಿಯೋ ಮಟ್ಟಕ್ಕೆ ಬಂದಿರಾ…..?” ಎಂದು ಕೈಯಲ್ಲಿದ್ದ ಲಟ್ಟಣಿಗೆಯನ್ನು ಅವನತ್ತ ಬೀಸಿದಳು. ಸುರೇಶನ ತಲೆ ಮೇಲೆ ಬೋರೆ ಮೂಡಿ 3 ದಿನ ಆಫೀಸಿಗೇ ಬರಲಿಲ್ಲ.
ಸತೀಶನ ಗ್ರಹಚಾರ ಬಿಡಿಸಲು ಅವನ ಸೆಕ್ಷನ್ ಹುಡುಕಿಕೊಂಡು ಹೋದರೆ…. ವಿಷಯ ತಿಳಿದು ಅವನು ವರ್ಗ ಮಾಡಿಸಿಕೊಂಡು ಬಿಡುವುದೇ?
ಅಷಾಢಕ್ಕೆ ಹೋಗಿದ್ದ ಪತ್ನಿಯನ್ನು ಕರೆತರಲು ಗುಂಡ ಮೊದಲ ಸಲ ಮಾವನ ಮನೆಗೆ ಬಂದಿದ್ದ. ಅನಿವಾರ್ಯವಾಗಿ ಬೇರೆ ಕೋಣೆಯಲ್ಲಿ ಮಾವನ ಜೊತೆ ಮಲಗಬೇಕಾಯಿತು. ರಾತ್ರಿ ಒಂದು ಹೊತ್ತಿನಲ್ಲಿ ಅವನಿಗೆ ಬಳೆಗಳ ಘಲ್ ಘಲ್ ಶಬ್ದ ಕೇಳಿಸಿತು. ಧಡಕ್ ಎಂದು ಎದ್ದು ಕುಳಿತು ಅವನು ಒಳಗಿನ ಕೋಣೆಯತ್ತ ಪತ್ನಿ ಈಗಲೋ ಆಗಲೋ ಕರೆಯಬಹುದು ಎಂದು ಕಾದೇ ಕಾದ.
ಅಂಥ ಸೂಚನೆ ಏನೂ ಬರದಿರಲು ಅವನು ನಿರಾಳವಾಗಿ ಮಲಗಿದ. 15 ನಿಮಿಷ ಬಿಟ್ಟು ಮತ್ತೆ ಅಂಥದ್ದೇ ಸದ್ದಾದಾಗ, ಗುಂಡ ಮತ್ತೆ ಎದ್ದು ಕುಳಿತ.
ಆಗ ಅಳಿಯನ ಅವಸ್ಥೆ ನೋಡಲಾರದೆ ಮಾವ, “ಅದು ಹಸುವಿನ ಕೊರಳಿಗೆ ಕಟ್ಟಿದ ಗಂಟೆ ಕಣಯ್ಯ ಸುಮ್ನೆ ಬಿದ್ಕೊ!” ಎನ್ನುವುದೇ?
ಪತಿ ಬಹಳ ಪ್ರೀತಿಯಿಂದ ತನ್ನ ಪತಿಯನ್ನು ರಮಿಸುತ್ತಾ ಹೇಳಿದಳು, “ಡಿಯರ್, ನಾವಿಬ್ಬರೂ ಪ್ರತಿ ಜನ್ಮದಲ್ಲೂ ಹೀಗೇ ಪರಸ್ಪರ ಭೇಟಿಯಾಗುತ್ತಾ ಒಂದಾಗಿರೋಣ. ಹೀಗೆ ಪ್ರೀತಿ ಮಾಡುತ್ತಿರೋಣ…..”
ಪತಿ ದೀರ್ಘ ನಿಟ್ಟುಸಿರು ಬಿಡುತ್ತಾ, “ಅದೆಲ್ಲ ಸರಿ ಬಿಡು. ನೀನು ಈ ಜನ್ಮದಲ್ಲಿ ನನ್ನನ್ನು ಬಿಟ್ಟರೆ ತಾನೇ ನಾವು ಮುಂದಿನ ಜನ್ಮದಲ್ಲಿ ಮತ್ತೆ ಭೇಟಿ ಆಗಲು ಸಾಧ್ಯ…..?”