ಗೋಪಿ : ಅರೇ ಅಂಜಲಿ.... ದಿನಾ ಮೆಟ್ರೋನಲ್ಲಿ ಮೀಟ್ ಮಾಡ್ತಾ ಇರ್ತೀನಿ, ನಿನಗೆ ನನ್ನ ಗುರುತು ಸಿಗಲಿಲ್ಲವೇ?
ಅಂಜಲಿ : ಇಲ್ಲವಲ್ಲ....? ಯಾರು ನೀನು?
ಗೋಪಿ : ಅದೇ, ನಿನ್ನೆಯೂ ಎಂ.ಜಿ. ರೋಡ್ ಸ್ಟೇಷನ್ ನಲ್ಲಿ ಇಳಿಯುವಾಗ ನಿನ್ನನ್ನು ಇದೇ ಮಾತನ್ನು ಕೇಳಿದ್ದೆನಲ್ಲ, ಅವನೇ ನಾನು.....!
ಜಪಾನೀ ವ್ಯಕ್ತಿ : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನೂ ಸಹ ಖಂಡಿತಾ ಆ ಕೆಲಸ ಮಾಡಬಲ್ಲೆ! ಅಕಸ್ಮಾತ್ ಬೇರೆ ಯಾರಿಂದಲೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ಆಗಲೂ ನಾನು ಅದನ್ನು ಮಾಡಿ ತೋರಿಸಬಲ್ಲೆ!
ನಮ್ಮವರು : ಅವರು ಯಾರೋ ಈ ಕೆಲಸ ಮಾಡಬಹುದು ಅಂದ್ರೆ, ನಾನು ಯಾಕ್ರಿ ಆ ಕೆಲಸ ಮಾಡಲಿ? ಬೇರೆ ಯಾರಿಗೂ ಆ ಕೆಲಸ ಮಾಡಲು ಆಗುತ್ತಿಲ್ಲ ಅಂದ್ರೆ ನನ್ನಿಂದ ಸಾಧ್ಯ ಅಂತ ಹೇಗೆ ಅಂದುಕೊಂಡ್ರಿ?
ಮಗ : ಅಪ್ಪಾಜಿ, `ಚಿತ್ರಹಿಂಸೆ, ಪ್ರಾಣಹಿಂಸೆ' ಅಂತಿರ್ತಾರಲ್ಲ.... ಹಾಗಂದ್ರೇನು....?
ತಂದೆ ಹರಳೆಣ್ಣೆ ಮುಖ ಮಾಡಿಕೊಂಡು ಪತ್ನಿಯ ಕಡೆ ನೋಡಿದರು, ಏನೂ ಮಾತನಾಡಲಾಗದ ಅಸಹಾಯಕತೆ ಅಲ್ಲಿ ವ್ಯಕ್ತವಾಗುತ್ತಿತ್ತು.
ಮಗ : ಗೊತ್ತಾಯ್ತು ಬಿಡಿ ಅಪ್ಪಾಜಿ....!
ಅಜ್ಜಿ ತಾತಾ ಜೋಡಿಯೊಂದು ಆಧುನಿಕ ಹೋಟೆಲ್ ಗೆ ಬಂದು ಏನೇನೋ ಒಂದಿಷ್ಟು ಆರ್ಡರ್ ಮಾಡಿದರು.
ಬಂದದ್ದು ಮಾತ್ರ ಮೂರೇ ಐಟಂ. ತಾತಾ ನಿಧಾನವಾಗಿ ಎಲ್ಲಾ ಐಟಂನಲ್ಲೂ ಚೂರು ಚೂರೇ ತೆಗೆದುಕೊಂಡು ತಿನ್ನುತ್ತಿದ್ದರು. ಅಜ್ಜಿ ಮಾತ್ರ ಏನೂ ತಿನ್ನದೇ ತಾತನನ್ನೇ ನೋಡುತ್ತಾ ಕುಳಿತಿದ್ದರು. ಇದನ್ನು ಕರುಣೆಯಿಂದ ನೋಡುತ್ತಾ ಅಕ್ಕಪಕ್ಕದ ಟೇಬಲ್ ನವರು, ಪಾಪ ಇವರಿಗೆ ಗತಿ ಇಲ್ಲ, ಹಾಗಾಗಿ ಒಬ್ಬರು ತಿನ್ನುವುದನ್ನು ಇನ್ನೊಬ್ಬರು ನೋಡುತ್ತಾ ಕುಳಿತಿದ್ದಾರೆ ಎನಿಸಿ, ವೆಯ್ಟರ್ ತಾನೇ ಪ್ರಾಮಾಣಿಕವಾಗಿ ಮುಂದೆ ಬಂದು, ``ಅಜ್ಜಿ ಮೇಡಂ, ನಿಮಗೇನೂ ಬೇಸರವಿಲ್ಲ ಅಂದ್ರೆ, ನನ್ನ ಕಡೆಯಿಂದ ಇನ್ನೊಂದು ಸೆಟ್ ಊಟ ತಂದುಕೊಡ್ತೀನಿ. ನೀವು ಅದಕ್ಕೆ ಪೇ ಮಾಡಬೇಕಿಲ್ಲ,'' ಎಂದು ವಿನಂತಿಸಿಕೊಂಡ.
ಅಜ್ಜಿ ಬೇಡ ಎಂದು ನಿರಾಕರಿಸಿದರು. ತಾತಾ ಸಹ ಏನೂ ಹೇಳಲಿಲ್ಲ. ವೆಯ್ಟರ್ ನಂತರ ಇತರರೂ ಅದನ್ನೇ ಪುನರಾವರ್ತಿಸಿ ಸೋತು ಸುಮ್ಮನಾದರು. ಅಂತೂ ಎಲ್ಲದರಲ್ಲೂ 4-5 ಸಲ ಕೈಯಾಡಿಸಿದ ತಾತಾ, ಕೈ ತೊಳೆದು ಸುಮ್ಮನಾದರು. ಆಗ ಅಜ್ಜಿ ಮುಖ ಪ್ರಸನ್ನವಾಯಿತು.
ವೆಯ್ಟರ್ ಮತ್ತೆ ಬಂದು ಕೇಳದ, ``ಇದೇಕೆ ಅಜ್ಜಿ ಮೇಡಂ, ಯಾರು ಎಷ್ಟು ಬಲವಂತ ಮಾಡಿದ್ರೂ ಬೇಡ ಅಂತಿದ್ದೀರಾ?`` ಎಂದಾಗ, ``ಪ್ರಶ್ನೆ ಇನ್ನೊಂದು ಪ್ಲೇಟ್ ಊಟ ತರಿಸುವುದಲ್ಲ, ನಮ್ಮಿಬ್ಬರ ಬಳಿ ಇರೋದೇ ಒಂದೇ ಹಲ್ಲಿನ ಸೆಟ್!'' ಎಂದರು ಅಜ್ಜಿ. ಅಲ್ಲಿದ್ದವರೆಲ್ಲ ಮೂರ್ಛೆ ಹೋಗುವುದೊಂದೇ ಬಾಕಿ!
ಗುಂಡನಿಗೆ ಅತಿ ಕೀಟಲೆ ಸ್ವಭಾವ.
ಪುಟ್ನಂಜಿ : ಏನ್ರಿ ಇನ್ನೂ ಕಾರು ತೊಳೆಯುತ್ತಿದ್ದೀರಾ?
ಗುಂಡ : ಇಲ್ಲ ಕಣೇ! ಕಾರಿಗೆ ಒಸಿ ನೀರು ಹಾಕ್ತಾ ಇದ್ದೀನಿ, ಇನ್ನೂ ಕೆಲವು ದಿನಗಳಿಗೆ ಅದು ನೀರು ಕುಡಿದೂ ಕುಡಿದೂ ಬಸ್ಸಾಗಿಬಿಡುತ್ತೆ, ನೋಡ್ತಾ ಇರು!