ಐತಿಹಾಸಿಕ ಸಿನಿಮಾ “ಬಾಹುಬಲಿ” ಸರಣಿಯ ಮೂರನೇ ಭಾಗ ‘ಬಾಹುಬಲಿ 3’ ತೆರೆಗೆ ಬರುವುದು ಗ್ಯಾರಂಟಿ ಎಂದಿದ್ದಾರೆ ನಿರ್ಮಾಪಕ ಶೋಭು ಯಾರ್ಲಗಡ್ಡ.

ಪ್ರಭಾಸ್ ಮತ್ತು ಎಸ್.ಎಸ್. ರಾಜಮೌಳಿ ಅಭಿಮಾನಿಗಳಲ್ಲಿ ಇದು ಭಾರೀ ಕುತೂಹಲ ಹುಟ್ಟುಹಾಕಿದೆ. ‘ಬಾಹುಬಲಿ ದಿ ಎಪಿಕ್’ ಹೆಸರಿನಲ್ಲಿ ಮರುಬಿಡುಗಡೆಯಾಗುತ್ತಿರುವ ಚಿತ್ರದ ಬಗ್ಗೆ ಶೋಭು ಯಾರ್ಲಗಡ್ಡ ಈ ಮಾಹಿತಿ ನೀಡಿದ್ದಾರೆ. ‘ಬಾಹುಬಲಿ: ದಿ ಬಿಗಿನಿಂಗ್’ (2015) ಮತ್ತು ‘ಬಾಹುಬಲಿ: ದಿ ಕನ್‌ಕ್ಲೂಷನ್’ (2017) ಚಿತ್ರಗಳು ಒಟ್ಟು 5 ಗಂಟೆಗಳ ಅವಧಿಯನ್ನು ಒಳಗೊಂಡಿದ್ದವು. ಈ ಎರಡೂ ಚಿತ್ರಗಳನ್ನು ಒಂದುಗೂಡಿಸಿ, 3 ಗಂಟೆ 40 ನಿಮಿಷಗಳ ಸಂಕ್ಷಿಪ್ತ ಆವೃತ್ತಿಯಾಗಿ ‘ಬಾಹುಬಲಿ: ದಿ ಎಪಿಕ್’ ಎಂಬ ಹೆಸರಿನಲ್ಲಿ 2025ರ ಅಕ್ಟೋಬರ್ 31ರಂದು ಮರುಬಿಡುಗಡೆ ಮಾಡಲಾಗುತ್ತಿದೆ.

‘ಬಾಹುಬಲಿ’ಚಿತ್ರದ 10 ವರ್ಷಗಳ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗಿದೆ. ಇದು ಪ್ರೇಕ್ಷಕರಿಗೆ ಹಲವು ವಿಶೇಷ ಅನುಭವ ನೀಡಲಿದ್ದು, ಅದರಲ್ಲಿ ‘ಬಾಹುಬಲಿ 3’ಕ್ಕೆ ಸಂಬಂಧಿಸಿದ ಸುಳಿವು ಕೂಡ ಒಂದಾಗಿದೆ ಎಂದು ಶೋಭು ಯಾರ್ಲಗಡ್ಡ ತಿಳಿಸಿದ್ದಾರೆ.

‘ಬಾಹುಬಲಿ’ಸರಣಿಯು ಭಾರತೀಯ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲಾಗಿದೆ. ಎಸ್.ಎಸ್. ರಾಜಮೌಳಿಯವರ ನಿರ್ದೇಶನದಲ್ಲಿ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮತ್ತು ತಮನ್ನಾ ಭಾಟಿಯಾ ಅವರಂತಹ ತಾರೆಯರ ನಟನೆಯಿಂದ ಈ ಚಿತ್ರಗಳು ವಿಶ್ವಾದ್ಯಂತ ಜನಪ್ರಿಯದವು. ‘ಬಾಹುಬಲಿ: ದಿ ಬಿಗಿನಿಂಗ್’ ಭಾರತೀಯ ಚಿತ್ರರಂಗದಲ್ಲಿ ದಾಖಲೆಯ ಬಾಕ್ಸ್ ಆಫೀಸ್ ಗಳಿಕೆ ಮಾಡಿತ್ತು, ಆದರೆ ‘ಬಾಹುಬಲಿ: ದಿ ಕನ್‌ಕ್ಲೂಷನ್’ ಕತೆಯ ಪರಾಕಾಷ್ಠೆಯಾಗಿ, ‘ಕಟಪ್ಪ ಯಾಕೆ ಬಾಹುಬಲಿಯನ್ನು ಕೊಂದ?’ ಎಂಬ ಪ್ರಶ್ನೆಗೆ ಉತ್ತರವನ್ನು ನೀಡಿತ್ತು. ‘ಬಾಹುಬಲಿ: ದಿ ಎಪಿಕ್’ ಮರುಬಿಡುಗಡೆಯು ಕೇವಲ ಎರಡು ಚಿತ್ರಗಳ ಸಂಕ್ಷಿಪ್ತ ಆವೃತ್ತಿಯಾಗಿರದೆ, ಹೊಸ ಅನುಭವ ಒದಗಿಸುವ ಗುರಿ ಹೊಂದಿದೆ.  “ಈ ಮರುಬಿಡುಗಡೆಯ ಚಿತ್ರವನ್ನು ನೋಡುವ ಪ್ರೇಕ್ಷಕರಿಗೆ ‘ಬಾಹುಬಲಿ 3’ನ ಗುಟ್ಟು ಒಂದು ವಿಶೇಷ ಆಕರ್ಷಣೆಯಾಗಲಿದೆ. ಇದು ಕೇವಲ ಸಿನಿಮಾದ ಆಚರಣೆಯಷ್ಟೇ ಅಲ್ಲ, ಮುಂದಿನ ಭಾಗದ ಕುರಿತಾದ ಕುತೂಹಲವನ್ನೂ ಹೆಚ್ಚಿಸಲಿದೆ,” ಎಂದು ಹೇಳಿದ್ದಾರೆ.

‘ಬಾಹುಬಲಿ: ದಿ ಎಪಿಕ್’ನ ವಿಶೇಷ ವಿಷುಯಲ್ ಎಫೆಕ್ಟ್‌ಗಳು, ಸಂಕ್ಷಿಪ್ತಗೊಳಿಸಿದ ಕಥಾಹಂದರದೊಂದಿಗೆ ತೆರೆಗೆ ಬರಲಿದೆ. ಇದರ ಜೊತೆಗೆ, ‘ಬಾಹುಬಲಿ 3’ಕ್ಕೆ ಸಂಬಂಧಿಸಿದ ಸುಳಿವುಗಳ ಬಗ್ಗೆ ಭಾರೀ ಕುತೂಹಲವನ್ನು ಹುಟ್ಟಿಸಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ