ಧರ್ಮದ ರಾಜಕೀಯ ನಡೆಯಲ್ಲಿ ಮಾನವರು ಕೇವಲ ಆಡಿಸಿದಂತೆ ಆಡುವ ತೊಗಲು ಗೊಂಬೆಗಳಾಗಿ ಉಳಿದುಬಿಡುತ್ತಾರೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿಯೋಣವೇ....?
ಧರ್ಮ ಅಥವಾ ರಾಜಕೀಯವೇ ಇರಲಿ, ಎರಡೂ ವಿಷಯಗಳು ಎಷ್ಟು ವಿಸ್ತೃತವಾಗಿವೆ ಎಂದರೆ ಒಬ್ಬ ಸಾಧಾರಣ ಪ್ರಜೆ, ತನ್ನ ಇಡೀ ಜೀವಿತಾವಧಿಯಲ್ಲಿ ಇವೆರಡರಲ್ಲಿ ಒಂದನ್ನು ದಾಟಿ ಮುಂದೆ ಹೋಗುವುದೇ ಬಲು ದುಸ್ತರ. ಆದರೆ ಅಸಹಾಯಕರಾದ ಸಾಧಾರಣ ಪ್ರಜೆಗಳು ಅತ್ತ ಧರ್ಮ ಬಿಟ್ಟು ಬಾಳಲೊಲ್ಲರು, ಇತ್ತ ರಾಜಕೀಯದಿಂದ ಪಾರಾಗಲಾರರು. ಎರಡರ ಜೊತೆಯಲ್ಲೂ ಪ್ರತಿ ಕ್ಷಣ ಹೋರಾಡುತ್ತಲೇ ಇರುತ್ತಾರೆ.
ಈಗ ಧರ್ಮದ ವಿಷಯವನ್ನೇ ತೆಗೆದುಕೊಳ್ಳಿ, ಇದು ಕೇವಲ ದೇವಿ ದೇವರುಗಳ ಆರಾಧನೆಯವರೆಗೆ ಮಾತ್ರ ಸೀಮಿತವಲ್ಲ. ಅದು ಈಗ ಧರ್ಮದ ಗುತ್ತಿಗೆದಾರರ ಅಡಿಯಾಳಾಗಿದೆ. ಧರ್ಮವನ್ನು ದಂಧೆಯಾಗಿಸಿ ಹಣ ವಸೂಲಾತಿ ಮಾಡುವುದೇ ಇವರ ಕೆಲಸ. ನಮ್ಮ ಸಮಾಜದಲ್ಲಿ ಎಲ್ಲೆಲ್ಲೂ ನಾಯಿಕೊಡೆಗಳಂತೆ ದಿನಕ್ಕೊಂದು ಜಾತಿ ಕುಲದ ಹೆಸರಲ್ಲಿ ಧರ್ಮ ಗುರುಗಳು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಇವರುಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದವರೆಗೂ ಹರಡಿಕೊಂಡು, ಈ ಬಾಬಾಗಳು ಮಾತ್ರವೇ ಧರ್ಮ ಎಂದರೇನು.... ಮುಂದೆ ಏನು ಮಾಡಬೇಕು ಎಂದು ನಿರ್ಧರಿಸುತ್ತಾರೆ.
ನೀವು ಸ್ವಲ್ಪ ಗಮನವಿಟ್ಟು ಯೋಚಿಸಿ ನೋಡಿ, ಯಾವುದೋ ಬಾಬಾ ಪ್ರವಚನ ಎಂದಾಕ್ಷಣ, ಎಲ್ಲೆಲ್ಲಿಂದಲೋ ಲಕ್ಷಾಂತರ ಮಂದಿ ಭಕ್ತಗಣ ಜಮೆಗೊಳ್ಳುತ್ತಾರೆ. ತಮ್ಮ ಪರಿಕ್ರಮದ ಅಮೂಲ್ಯ ಸಂಪಾದನೆಯನ್ನು ಇವರ ಪಾದಕ್ಕೆ ಸಮರ್ಪಿಸುತ್ತಾರೆ. ತಮ್ಮ ಅಮೂಲ್ಯ ಸಮಯ, ಬೆಲೆ ಕಟ್ಟಲಾಗದ ನಂಬಿಕೆ ವಿಶ್ವಾಸಗಳನ್ನು ಅವರಿಗೆ ಮೀಸಲಿಡುತ್ತಾರೆ. ಇಂಥವರ ಹೆಸರು ಹೇಳಿಕೊಂಡು ಸಾವಿರಾರು ಮಂದಿ ತಮ್ಮ ದಿನ ಆರಂಭಿಸುತ್ತಾರೆ. ಫ್ಲೈಟ್ ಹಿಡಿದು ಪ್ರಯಾಣ ಹೊರಡುತ್ತಾರೆ, ಆ ಬಾಬಾ ಇದ್ದಾರಲ್ಲ ಎಲ್ಲಾ ನೋಡಿಕೊಳ್ತಾರೆ ಎಂದು ಅವರ ಮೇಲೆ ಭಾರ ಹಾಕಿ ನಿಶ್ಚಿಂತರಾಗುತ್ತಾರೆ. ಆ ಬಾಬಾ ತನ್ನ ಹಾಗೂ ತನ್ನ ಪರಿವಾರದ ರಕ್ಷಣೆಯೂ ಮಾಡಲಾರ, ಹಾಗಿರುವಾಗ ಇವರು ತೋರಿಸಿದ ವಿಶ್ವಾಸಕ್ಕೆ ಏನು ಬೆಲೆ? ಇವರು ತಮಗೆ ತಾವೇ ಈ ಮಾತನ್ನು ಹೇಗೆ ತಿಳಿ ಹೇಳುತ್ತಾರೆ?
ಇಂಥ ಹಲವಾರು ಘಟನೆಗಳು ವಿಚಾರವಂತರ ಯೋಚನೆಗೆ ಕೊನೆ ಮೊದಲಿಲ್ಲದಂತೆ ಮಾಡುತ್ತವೆ. ಇಂಥ ಲಕ್ಷಾಂತರ ಮಂದಿ ಭಕ್ತರ ಶ್ರದ್ಧೆ ಕೇವಲ ಕುರುಡು ನಂಬಿಕೆಯೇ? ಅವರು ಕಣ್ತೆರೆದು ಏನನ್ನೂ ನೋಡಲು, ತಿಳಿಯಲು ಬಯಸುವುದಿಲ್ಲವೇ? ಇದರ ಹಿಂದಿನ ಭಕ್ತಿ ಕೇವಲ ಮೂಢನಂಬಿಕೆಯೇ? ಎಲ್ಲರೂ ಮೂಢನಂಬಿಕೆಯ ಮಂಕುಬೂದಿಗೆ ಶರಣಾಗಿದ್ದಾರಾ?
ಹಾಗೆಲ್ಲ ಏನೂ ಇಲ್ಲ ಎಂದೇ ಭಾವಿಸಿದರೆ, ಮತ್ತೆ ಯಾವ ಘನ ಉದ್ದೇಶಕ್ಕಾಗಿ, ಯಾವ ಯೋಚನೆಯಲ್ಲಿ, ಎಂಥ ಭಾವನೆ ಇರಿಸಿಕೊಂಡು ಈ ಜನ ಭಕ್ತಿಯ ಹೆಸರಿನಲ್ಲಿ ಇಂಥ ಕಡೆ ತಮ್ಮ ಬಿಝಿ ದಿನಚರ್ಯೆ ಮಧ್ಯೆ ಬಿಡುವು ಮಾಡಿಕೊಂಡು ಬಂದು, ತಮ್ಮ ಪರಿಶ್ರಮದ ಗಳಿಕೆಯನ್ನು ಕಿಂಚಿತ್ತೂ ವಿಚಾರ ಮಾಡದೆ ಇವರಿಗೆ ಸಮರ್ಪಿಸುತ್ತಾರೆ!
ಅಸಹಾಯಕರಾಗಿ ಸಿಲುಕಿರುವವರು
ಇಲ್ಲಿ ನಿಜವಾಗಿಯೂ ಭಕ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಬಹುತೇಕ ಮಂದಿ ಒಂದೇ ತರಹದ ಮಾನಸಿಕ ಸ್ಥಿತಿ ಹೊಂದಿದ್ದು ಇಲ್ಲಿಗೆ ಬರುತ್ತಾರೆ. ಇವರ ಯೋಚಿಸುವ, ವಿಚಾರಿಸಿ ತಿಳಿಯುವ ಮೂಲಭೂತ ತತ್ವಕ್ಕೆ ಕೊಡಲಿಪೆಟ್ಟು ಬಿದ್ದಿರುವಂತಿದೆ. ಇದೇ ಅವರ ಮೊದಲ ಧರ್ಮವಾಗಿದೆ. ಮುಂದೆ ಬಾಬಾಗಳ ಎದುರು ತಲೆಬಾಗಿ (ಕಲಿತರು, ಅನಕ್ಷರಸ್ಥರೂ ಸಹ) ಕೀಲುಗೊಂಬೆಗಳಾಗಿ ಹೋಗುತ್ತಾರೆ.





